ADVERTISEMENT

ಆಳ–ಅಗಲ: ಶ್ರೀಲಂಕಾ: ‘ಭವಿಷ್ಯ’ದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 23:07 IST
Last Updated 19 ಸೆಪ್ಟೆಂಬರ್ 2024, 23:07 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   
ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ (ಸೆ.21) ಹೊಸ ಅಧ್ಯಕ್ಷರ ಆಯ್ಕೆಗೆ ಮತದಾನ ನಡೆಯಲಿದೆ. 2022ರ ಜನತಾ ದಂಗೆಯ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದು. ನೆಲಕಚ್ಚಿರುವ ಆರ್ಥಿಕತೆಯೂ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳಿಂದ ನಲುಗಿಹೋಗಿರುವ ದ್ವೀಪರಾಷ್ಟ್ರದ ಜನ ಬದಲಾವಣೆ ಬಯಸುತ್ತಿದ್ದಾರೆಯೇ? ಈ ನಿರ್ಣಾಯಕ ಚುನಾವಣೆಯಲ್ಲಿ ಯಾರು ಆಯ್ಕೆಯಾಗಲಿದ್ದಾರೆ ಎನ್ನುವುದು ಲಂಕಾದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಲಿದೆ

ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟು ಈಗ ಚೇತರಿಸಿಕೊಳ್ಳುತ್ತಿರುವ ಶ್ರೀಲಂಕಾದ ಜನರು ಹೊಸ ಅಧ್ಯಕ್ಷರ ಆಯ್ಕೆಗೆ ಶನಿವಾರ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಎರಡು ವರ್ಷಗಳ ಹಿಂದೆ ನಡೆದಿದ್ದ ಜನತಾ ದಂಗೆಯಿಂದ ಗೊಟಬಯ ರಾಜಪಕ್ಸ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಆ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಜಗತ್ತಿನ ಗಮನ ಈಗ ಪುಟ್ಟ ದ್ವೀಪರಾಷ್ಟ್ರದತ್ತ ನೆಟ್ಟಿದೆ.      

1948ರಲ್ಲಿ ಸ್ವಾತಂತ್ರ್ಯ ಗಳಿಸಿದ ನಂತರ ಎಂದೂ ಕಾಣದಂತಹ ಜನತಾ ದಂಗೆಯನ್ನು ದ್ವೀಪ ರಾಷ್ಟ್ರವು 2022ರಲ್ಲಿ ಕಂಡಿತ್ತು. ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ನಲುಗಿಹೋಗಿದ್ದ ಜನರು ಅಧ್ಯಕ್ಷರಾಗಿದ್ದ ಗೊಟಬಯ ರಾಜಪಕ್ಸ ಅವರನ್ನು ಪದಚ್ಯುತಿಗೊಳಿಸಿದ್ದಷ್ಟೇ ಅಲ್ಲ, ಇಡೀ ವ್ಯವಸ್ಥೆಯೇ ಬದಲಾಗಬೇಕು ಎಂದು ಆಶಿಸಿದ್ದರು. ಗೊಟಬಯ ಅವರು ದೇಶ ಬಿಟ್ಟು ಪಲಾಯನ ಮಾಡಿದ ನಂತರ ರನಿಲ್ ವಿಕ್ರಮಸಿಂಘೆ ಅಧ್ಯಕ್ಷರಾದರು. ಅದಕ್ಕಾಗಿ ಅವರು ರಾಜಪಕ್ಸ ಅವರ ಪಕ್ಷದ ಬೆಂಬಲ ಪಡೆದಿದ್ದರು.

ADVERTISEMENT

ಶ್ರೀಲಂಕಾದ ಮಟ್ಟಿಗೆ ಈ ಚುನಾವಣೆ ನಿರ್ಣಾಯಕ. ಅದಕ್ಕೆ ಕಾರಣ ಹಲವು; ದ್ವೀಪರಾಷ್ಟ್ರವು ಈ ಹಿಂದೆ ಅನುಭವಿಸಿದ ಆರ್ಥಿಕ ಬಿಕ್ಕಟ್ಟು ಅಂತಿಂಥದ್ದಲ್ಲ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿತ್ತು. ಇಂಧನ ಆಮದು ಮಾಡಿಕೊಳ್ಳಲೂ ಸರ್ಕಾರದ ಬಳಿ ಹಣ ಇರಲಿಲ್ಲ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಔಷಧಿಗಳಿಗೆ ಅಭಾವ ಸೃಷ್ಟಿಯಾಗಿ, ಅವುಗಳಿಗಾಗಿ ಜನ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ದಿನದಲ್ಲಿ ಬಹುತೇಕ ಅವಧಿ ವಿದ್ಯುತ್ ಕಡಿತ ಮಾಡಲಾಗುತ್ತಿತ್ತು. ಹಣದುಬ್ಬರ ಶೇ 70ಕ್ಕೆ ಏರಿತ್ತು.

ದೇಶದಲ್ಲಿ ಎಲ್‌ಟಿಟಿಇ ಉಗ್ರರನ್ನು ನಿಗ್ರಹಿಸಿದ್ದೇ ತನ್ನ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದ ಮಹಿಂದಾ ರಾಜಪಕ್ಸ ಮತ್ತು ಅವರ ಸಹೋದರ ಗೊಟಬಯ ರಾಜಪಕ್ಸ ಅವರ ದುರಾಡಳಿತವೇ ಇಂಥ ಪರಿಸ್ಥಿತಿಗೆ ಕಾರಣ ಎಂದು ಜನ ರೊಚ್ಚಿಗೆದ್ದಿದ್ದರು. ನ್ಯಾಯಾಲಯವೂ ರಾಜಪಕ್ಸ ಸೋದರರ ಆರ್ಥಿಕ ನೀತಿಗಳ ತಪ್ಪನ್ನು ಎತ್ತಿ ತೋರಿಸಿತ್ತು. ಜನರು ದಂಗೆಯೆದ್ದು ಅಧ್ಯಕ್ಷರ ನಿವಾಸಕ್ಕೆ ದಾಳಿ ಮಾಡುವ ಕೆಲವೇ ಗಂಟೆಗಳ ಮುಂಚೆ ಗೊಟಬಯ ದೇಶ ತೊರೆದು ಪರಾರಿಯಾಗಿದ್ದರು.            

ಅಲ್ಲಿಗೆ ರಾಜಪಕ್ಸ ಕುಟುಂಬದ ರಾಜಕೀಯ ಜೀವನ ಅಂತ್ಯವಾಯಿತು ಎಂದೇ ಜನ ಭಾವಿಸಿದ್ದರು. ಆದರೆ, ಹಾಗೆ ಪರಾರಿಯಾದ 50 ದಿನಗಳ ನಂತರ ಗೊಟಬಯ ದೇಶಕ್ಕೆ ಮರಳಿ ಬಂದಿದ್ದರು. ವಿಕ್ರಮಸಿಂಘೆ ಸರ್ಕಾರವು ಅವರಿಗೆ ರಕ್ಷಣೆ ನೀಡಿದ್ದಲ್ಲದೇ, ವಾಸಕ್ಕೆ ಭವ್ಯ ಬಂಗಲೆ, ಪೊಲೀಸರ ರಕ್ಷಣೆ ಸೇರಿದಂತೆ ಮಾಜಿ ಅಧ್ಯಕ್ಷರಿಗೆ ನೀಡುವ ಎಲ್ಲ ಸವಲತ್ತುಗಳನ್ನೂ ಒದಗಿಸಿತು.     

ದೇಶದ ರಾಜಕೀಯದಲ್ಲಿ ಎರಡು ದಶಕ ಪ್ರಾಬಲ್ಯ ಸಾಧಿಸಿದ್ದ ರಾಜಪಕ್ಸ ಅವರ ಕುಟುಂಬ ಈ ಬಾರಿಯ ಚುನಾವಣೆಯಲ್ಲಿ ಲೆಕ್ಕಕ್ಕಿಲ್ಲದಂತಾಗಿದೆ. ಆದರೆ, ಅವರು ಚುಣಾವಣೆಯ ಕಣದಿಂದ ದೂರವೇನೂ ಉಳಿದಿಲ್ಲ. ಮಹಿಂದಾ ರಾಜಪಕ್ಸ ಅವರ ಮಗ ನಮಲ್ ರಾಜಪಕ್ಸ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಆದರೆ, ರಾಜಪಕ್ಸ ಕುಟುಂಬದ ಬಗ್ಗೆ ಜನರಿಗೆ ಇನ್ನೂ ಸಿಟ್ಟಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರನಿಲ್ ಅವರು ರಾಜಪಕ್ಸ ಕುಟುಂಬದ ಪರವಾಗಿದ್ದಾರೆ ಮತ್ತು ಶಿಕ್ಷೆಯಾಗುವುದರಿಂದ ಅವರ ಕುಟುಂಬವನ್ನು ರಕ್ಷಿಸುತ್ತಿದ್ದಾರೆ ಎನ್ನುವ ಅಸಮಾಧಾನ ಜನರಲ್ಲಿದೆ. 

ಶ್ರೀಲಂಕಾದ ಪರಿಸ್ಥಿತಿ ಈಗಲೂ ಭೀಕರವಾಗಿದೆ. ಒಂದು ಸಮೀಕ್ಷೆಯ ಪ್ರಕಾರ, 2023ರಲ್ಲಿ ದೇಶದಲ್ಲಿ 40 ಲಕ್ಷ ಮಂದಿ ಬಡತನದ ರೇಖೆಗಿಂತ ಕೆಳಗಿದ್ದರು; ಈಗ ಅವರ ಸಂಖ್ಯೆ 70 ಲಕ್ಷ ದಾಟಿದೆ. ಬಡತನದ ಬವಣೆಗೆ ಸಿಲುಕಿರುವ ಅನೇಕರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸುತ್ತಿದ್ದಾರೆ. ಅಧ್ಯಕ್ಷೀಯ ಚುನಾವಣೆಗೆ ಮುಂಚೆ ನಡೆಯಬೇಕಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ಆರ್ಥಿಕ ಮುಗ್ಗಟ್ಟಿನಿಂದ ಮುಂದೂಡಲಾಗಿದೆ. ಇಂಥ ದೇಶದ ಮುಂದಿನ ಅಧ್ಯಕ್ಷ ಯಾರಾಗಲಿದ್ದಾರೆ ಮತ್ತು ಅವರು ದೇಶವನ್ನು ಬಡತನದ ದವಡೆಯಿಂದ ಪಾರು ಮಾಡುವರೇ ಎನ್ನುವುದು ಸಹಜವಾಗಿಯೇ ಜಾಗತಿಕ ಮಟ್ಟದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. 

ಆಯ್ಕೆ ಹೇಗೆ?

  • ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಾಶಸ್ತ್ಯ ಮತಗಳ ವ್ಯವಸ್ಥೆಯನ್ನು ಅನುಸರಿಸಲಾಗುತ್ತದೆ.  ಮತದಾರರೊಬ್ಬರು ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು (ಅಂದರೆ ಮೂರು ಪ್ರಾಶಸ್ತ್ಯ ಮತಗಳನ್ನು ಚಲಾಯಿಸಬಹುದು)

  • ಯಾವುದೇ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗಬೇಕಾದರೆ, ಸಿಂಧು ಎಂದು ಅಂಗೀಕರಿಸಲಾದ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಶೇ 50ಕ್ಕಿಂತ (ಕನಿಷ್ಠ 51%) ಹೆಚ್ಚು ಮತಗಳನ್ನು ಪಡೆದಿರಬೇಕು

  • ಒಂದು ವೇಳೆ, ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಯಾವುದೇ ಅಭ್ಯರ್ಥಿಗೆ ಬಹುಮತ ಬಾರದೇ ಇದ್ದರೆ, ಎರಡನೇ ಪ್ರಾಶಸ್ತ್ಯದ ಮತಗಳನ್ನು ಎಣಿಸಲಾಗುತ್ತದೆ. ಮೊದಲ ಸುತ್ತಿನಲ್ಲಿ ಹೆಚ್ಚು ಪ್ರಾಶಸ್ತ್ಯದ ಮತಗಳನ್ನು ಪಡೆದ ಇಬ್ಬರು ಅಭ್ಯರ್ಥಿಗಳನ್ನು ಮಾತ್ರ ಇಲ್ಲಿ ಪರಿಗಣಿಸಲಾಗುತ್ತದೆ. ಇದರಲ್ಲಿ ಹೆಚ್ಚು ಮತ ಪಡೆದವರನ್ನು ವಿಜೇತರು ಎಂದು ಘೋಷಿಸಲಾಗುತ್ತದೆ

  • ಈ ಹಿಂದಿನ ಎಲ್ಲ ಚುನಾವಣೆಗಳಲ್ಲಿ ಮೊದಲ ಪ್ರಾಶಸ್ತ್ಯದ ಮತದ ಸುತ್ತಿನಲ್ಲೇ ಅಭ್ಯರ್ಥಿಗಳು ಸರಳ ಬಹುಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎರಡನೇ ಮತ್ತು ಮೂರನೇ ಪ್ರಾಶಸ್ತ್ಯದ ಮತಗಳನ್ನು ಎಣಿಸುವ ಪ್ರಮೇಯವೇ ಬಂದಿರಲಿಲ್ಲ

ತ್ರಿಕೋನ ಸ್ಪರ್ಧೆ? 

ಈ ಬಾರಿ ದ್ವೀಪರಾಷ್ಟ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಯುನೈಟೆಡ್‌ ನ್ಯಾಷನಲ್‌ ಪಾರ್ಟಿಯಿಂದ  (ಯುಎನ್‌ಪಿ) ಆಯ್ಕೆಯಾಗಿ ಸಂಸತ್‌ ಪ್ರವೇಶಿಸಿದ್ದ ವಿಕ್ರಮಸಿಂಘೆ ಅವರನ್ನು ರಾಜಪಕ್ಸ ಕುಟುಂಬ ನೇತೃತ್ವದ ಶ್ರೀಲಂಕಾ ಪೊಡುಜನ ಪೆರಮುನ (ಎಸ್‌ಎಲ್‌ಪಿಪಿ ಅಥವಾ ಪೀಪಲ್ಸ್‌ ಫ್ರಂಟ್‌) ಪಕ್ಷವು ಬೆಂಬಲಿಸಿದೆ. 

ಶ್ರೀಲಂಕಾದ ವಿರೋಧ ಪಕ್ಷದ ನಾಯಕ ಸಜಿತ್‌ ಪ್ರೇಮದಾಸ ಅವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮತ್ತೊಬ್ಬ ಪ್ರಮುಖ ಅಭ್ಯರ್ಥಿ. ಮಾಜಿ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಅವರ ಮಗನಾಗಿರುವ ಸಜಿತ್‌, ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನ ಗಳಿಸಿದ್ದರು. ಸಮಗಿ ಜನ ಬಲವೇಗಯ (ಎಸ್‌ಜೆಬಿ) ಪಕ್ಷದ (ಯುಎನ್‌ಪಿಯಿಂದ ಬೇರ್ಪಟ್ಟು ಉದಯಿಸಿದ ಹೊಸ ಪಕ್ಷ ಇದು) ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದಿದ್ದಾರೆ. 

ನ್ಯಾಷನಲ್‌ ಪೀಪಲ್ಸ್‌ ಪವರ್‌ (ಎನ್‌ಪಿಪಿ) ಪಕ್ಷವು, ಮಾರ್ಕ್ಸಿಸ್ಟ್‌–ಲೆನಿನಿಸ್ಟ್‌ ಸಿದ್ಧಾಂತದ ಅಡಿಯಲ್ಲಿ ಸ್ಥಾಪನೆಗೊಂಡಿರುವ ಜನತಾ ವಿಮುಕ್ತಿ ಪೆರಮುನದ (ಪೀ‍ಪಲ್ಸ್‌ ಲಿಬರೇಷನ್‌ ಫ್ರಂಟ್‌) ನಾಯಕರಾಗಿರುವ ಅನುರಾ ಕುಮಾರ ದಿಸ್ಸನಾಯಕೆ ಅವರನ್ನು ಚುನಾವಣಾ ಅಖಾಡಕ್ಕೆ ಇಳಿಸಿದೆ. ಇವರ ಪಕ್ಷವು ಹಿಂದೆ, ಸಶಸ್ತ್ರ ಹೋರಾಟದಲ್ಲಿ ತೊಡಗಿದ್ದ ಇತಿಹಾಸವನ್ನು ಹೊಂದಿದೆ.  

ಈ ಮೂವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇವರ ಜೊತೆಗೆ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸ‌ ಅವರ ಕಿರಿಯ ಮಗ ನಮಲ್‌ ರಾಜಪಕ್ಸ ಕೂಡ ಎಸ್‌ಎಲ್‌ಪಿಪಿಯಿಂದ ಸ್ಪರ್ಧಿಸಿದ್ದಾರೆ. ಪಕ್ಷವು ಕೊನೆ ಕ್ಷಣದಲ್ಲಿ ಇವರ ಹೆಸರನ್ನು ಘೋಷಿಸಿತ್ತು. ಪಕ್ಷದ ಹಲವು ನಾಯಕರು ವಿಕ್ರಮಸಿಂಘೆಯವರನ್ನು ಬೆಂಬಲಿಸಿದ್ದರಿಂದ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ನಿರ್ಣಾಯಕ ಯಾರು?

ಒಟ್ಟು ಜನಸಂಖ್ಯೆಯಲ್ಲಿ ಶೇ 75 ರಷ್ಟು ಮಂದಿ ಸಿಂಹಳೀಯರೇ ಇದ್ದಾರೆ. ದೇಶದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಜನಾಂಗೀಯ ಅಲ್ಪಸಂಖ್ಯಾತರಾದ ತಮಿಳರು, ಮಲಯಾ ತಮಿಳರು ಮತ್ತು ಮುಸ್ಲಿಮರು ಇದ್ದಾರೆ. ಇವರು ಕೂಡ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ.

ಭಾರತದ ಮೇಲೆ ಪರಿಣಾಮ?

ಹೊಸ ಅಧ್ಯಕ್ಷರ ಆಯ್ಕೆಯ ನಂತರ ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ. ಎರಡೂ ರಾಷ್ಟ್ರಗಳ ಸಂಬಂಧ ಉತ್ತಮವಾಗಿಯೇ ಇದೆ. ಕೆಲವು ವರ್ಷಗಳಿಂದ ಲಂಕಾದ ಮೇಲೆ ಚೀನಾದ ಪ್ರಭಾವ ಹೆಚ್ಚುತ್ತಿದೆ. ಅಲ್ಲಿನ ಸರ್ಕಾರ ಕೂಡ ಚೀನಾ ಬಗ್ಗೆ ಒಲವು ತೋರುತ್ತಿದೆ. ಮಾಲ್ದೀವ್ಸ್‌ನೊಂದಿಗೆ ಭಾರತದ ಸಂಬಂಧ ಹಳಸಿದೆ. ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಪ್ರಾದೇಶಿಕ ಸಮತೋಲನ ಕಾಪಾಡಿಕೊಳ್ಳಲು ಶ್ರೀಲಂಕಾದೊಂದಿಗೆ ಉತ್ತಮ ಸಂಬಂಧ ಹೊಂದುವ ಅಗತ್ಯವಿದೆ. ಹಾಗಾಗಿ, ಭಾರತ ಕೂಡ ಶ್ರೀಲಂಕಾದ ಚುನಾವಣೆ ಹಾಗೂ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಅಧ್ಯಕ್ಷರ ಮುಂದಿರುವ ಸವಾಲುಗಳು

  • ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಪಡೆದ ಸಾಲದ ಮರುಪಾವತಿ

  • ದೇಶದ ಅರ್ಥ ವ್ಯವಸ್ಥೆಯ ಸುಧಾರಣೆ

  • ಜೀವನ ವೆಚ್ಚ ಹೆಚ್ಚಾಗಿರುವುದು, ಕುಸಿದಿರುವ ಜೀವನ ಮಟ್ಟ 

  • ಕುಂಠಿತಗೊಂಡಿರುವ ಜನರ ಆದಾಯ ಹೆಚ್ಚಿಸುವುದು

  • ನಿರುದ್ಯೋಗ ಸಮಸ್ಯೆ 

  • ಆಹಾರದ ಕೊರತೆ, ಅಪೌಷ್ಟಿಕತೆ

ಆಧಾರ: ಇಂಟರ್‌ನ್ಯಾಷನಲ್ ಫೌಂಡೇಷನ್ ಫಾರ್ ಎಲೆಕ್ಟೋರಲ್ ಸಿಸ್ಟಮ್, ಬಿಬಿಸಿ, ಎಎಫ್‌ಪಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.