ರಾಜ್ಯದಲ್ಲಿರುವ ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿ ಮೂರು ಬೃಹತ್ ಜಲಾಶಯಗಳು ಮತ್ತು 19 ಕಿರು ಜಲಾಶಯಗಳು ಇವೆ. ಈ ಜಲಾಶಯಗಳಿಗೆ ಹೊಂದಿಕೊಂಡಂತೆ ಹಲವಾರು ಕೆರೆಗಳು ಮತ್ತು ಅವುಗಳಿಗೆ ಸಂಪರ್ಕ ಕಲ್ಪಿಸುವ ಕಾಲುವೆ ವ್ಯವಸ್ಥೆಯೂ ಇದೆ. ಜತೆಗೆ ಈ ವ್ಯಾಪ್ತಿಯಲ್ಲಿ ಏಳು ಏತ ನೀರಾವರಿ ಯೋಜನೆಗಳೂ ಜಾರಿಯಲ್ಲಿವೆ. ಆದರೆ, ಈ ಎಲ್ಲವೂ ದಾಖಲೆಯಲ್ಲಷ್ಟೇ ಇವೆ. ಇವುಗಳಲ್ಲಿ ಕೆಲವು ಜಲಾಶಯಗಳು, ಕಾಲುವೆಗಳು ಮತ್ತು ತೊರೆಗಳು ಹೂಳಿನಿಂದ ಮುಚ್ಚಿಹೋಗಿವೆ. ಕೆಲವೆಡೆ ತೊರೆಗಳೇ ಬತ್ತಿಹೋಗಿರುವ ಕಾರಣ ಜಲಾಶಯಗಳಿಗೆ ನೀರು ಬರುತ್ತಿಲ್ಲ. ಕೆಲವೆಡೆ ತೊರೆ–ನದಿ ಪಾತ್ರಗಳು ಒತ್ತುವರಿಯಾಗಿರುವ ಕಾರಣ ಜಲಾಶಯಗಳಿಗೆ ಹರಿದುಬರಲು ನೀರಿಗೆ ಜಾಗವೇ ಇಲ್ಲದಂತಾಗಿದೆ
ಕಾವೇರಿ ನದಿಯ ಪ್ರಮುಖ ಉಪನದಿಗಳಲ್ಲಿ ಅರ್ಕಾವತಿಯೂ ಒಂದು. ನಂದಿಬೆಟ್ಟದಲ್ಲಿ ಹುಟ್ಟಿ, ಸಂಗಮದ ಬಳಿ ಕಾವೇರಿ ಸೇರುವ ಈ ನದಿಗೆ, ಅದರ ಹರಿವಿನ ಉದ್ದಕ್ಕೂ ಹಲವು ಜಲಾಶಯಗಳನ್ನು ನಿರ್ಮಿಸಲಾಗಿದೆ. ತಿಪ್ಪಗೊಂಡನಹಳ್ಳಿ, ಮಂಚನಬೆಲೆ, ಅರ್ಕಾವತಿ, ಬೈರಮಂಗಲ ವೃಷಭಾವತಿ ಜಲಾಶಯ ಸೇರಿ ಈ ನದಿಗೆ ಒಟ್ಟು ನಾಲ್ಕು ಕಿರು ಜಲಾಶಯಗಳನ್ನು ನಿರ್ಮಿಸಲಾಗಿದೆ. ತಿಪ್ಪಗೊಂಡನಹಳ್ಳಿ ಹೊರತುಪಡಿಸಿ ಉಳಿದೆಲ್ಲಾ ಜಲಾಶಯಗಳು ಭರ್ತಿಯಾದರೆ ಅವುಗಳಿಂದ 14,000 ಹೆಕ್ಟೇರ್‌ಗಳಷ್ಟು ಜಮೀನಿಗೆ ನೀರಾವರಿ ಒದಗಿಸಲು ಸಾಧ್ಯವಾಗುತ್ತದೆ.
ಇವೆಲ್ಲವೂ ಹಳೆಯ ಜಲಾಶಯಗಳಾದ ಕಾರಣ ಅವುಗಳಲ್ಲಿ ಹೂಳು ತುಂಬಿಕೊಂಡಿದೆ. ಆದರೆ, ಅವುಗಳಲ್ಲಿ ಇರುವ ಹೂಳಿನ ಪ್ರಮಾಣ ಎಷ್ಟು ಎಂಬುದರ ಮಾಹಿತಿ ಮಾತ್ರ ಇಲ್ಲ. ಏಕೆಂದರೆ, ಇವುಗಳಲ್ಲಿ ಎಷ್ಟು ಹೂಳುತುಂಬಿಕೊಂಡಿರಬಹುದು ಎಂಬುದನ್ನು ಲೆಕ್ಕಹಾಕಲು ಕಾವೇರಿ ನೀರಾವರಿ ನಿಗಮ ಮುಂದಾಗಿಲ್ಲ. ಸರ್ಕಾರವೂ ಈ ಬಗ್ಗೆ ಆಸಕ್ತಿ ತೋರಿಲ್ಲ. ಈ ವ್ಯಾಪ್ತಿಯ ವೃಷಭಾವತಿ ಜಲಾಶಯವಂತೂ ಸಂಪೂರ್ಣವಾಗಿ ಕೊಳಚೆ ಗುಂಡಿಯಂತಾಗಿದೆ. ಸ್ಥಳೀಯರಾದಿಯಾಗಿ ಯಾರೂ ಅದನ್ನು ಒಂದು ಕಿರು ಜಲಾಶಯ ಎಂದು ಪರಿಗಣಿಸುವುದೇ ಇಲ್ಲ. ಈ ಜಲಾಶಯವು ಸುಸ್ಥಿತಿಯಲ್ಲಿದ್ದು, ಭರ್ತಿಯಾಗಿದ್ದರೆ 1,600 ಹೆಕ್ಟೇರ್‌ಗಳಷ್ಟು ಜಮೀನಿಗೆ ನೀರು ಒದಗಿಸುವ ಸಾಮರ್ಥ್ಯ ಹೊಂದಿತ್ತು.
ಇದು ಅರ್ಕಾವತಿ ವ್ಯಾಪ್ತಿಯ ಜಲಾಶಯಗಳ ಸ್ಥಿತಿ ಮಾತ್ರವಲ್ಲ. ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳು, ಕಿರು ಜಲಾಶಯಗಳ ಸ್ಥಿತಿ ಇದೇ ರೀತಿ ಇದೆ. ಈ ಎಲ್ಲಾ ಜಲಾಶಯಗಳಲ್ಲಿ ಎಷ್ಟು ಹೂಳು ತುಂಬಿದೆ ಎಂಬುದನ್ನು ಲೆಕ್ಕಹಾಕಿಯೇ ಇಲ್ಲ. //ಕೆಲವು ಜಲಾಶಯಗಳಲ್ಲಿ ತುಂಬಿರುವ ಹೂಳನ್ನು ಲೆಕ್ಕಹಾಕಲಾಗಿದೆಯೇ ಹೊರತು, ಲೆಕ್ಕಾಚಾರವೂ ಏಕಪ್ರಕಾರವಾಗಿಲ್ಲ//. ಕೆಲವು ಜಲಾಶಯಗಳಲ್ಲಿ ಇಂತಿಷ್ಟು ಟಿಎಂಸಿ ಅಡಿಗಳಷ್ಟು ಹೂಳು ತುಂಬಿದೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ಕೊಟ್ಟರೆ, ಇನ್ನೂ ಕೆಲವು ಜಲಾಶಯಗಳಲ್ಲಿ ಹೂಳು ತುಂಬಿರುವ ಪ್ರಮಾಣವನ್ನು ಶೇಕಡಾವಾರು ಪ್ರಮಾಣದಲ್ಲಿ ನೀಡಿದ್ದಾರೆ.
ಒಟ್ಟಾರೆ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ತುಂಬಿರುವ ಹೂಳೆಷ್ಟು ಎಂಬ ಮಾಹಿತಿ ಲಭ್ಯವಿಲ್ಲ. ಇದರಿಂದಾಗಿ ಆ ಜಲಾಶಯಗಳ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿರುವ ಬಗ್ಗೆಯೂ ನಿಖರ ಮಾಹಿತಿ ಇಲ್ಲ. ಹೂಳು ಇರುವ ಕಾರಣ, ಅಧಿಕ ಮಳೆಯ ವರ್ಷದಲ್ಲಿಯೂ ಹೆಚ್ಚು ನೀರು ಸಂಗ್ರಹವಾಗುವುದಿಲ್ಲ. ಜಲಾಶಯಗಳು ಭರ್ತಿಯಾದಂತೆ ತೋರಿದರೂ, ಅವುಗಳ ಪೂರ್ಣ ಸಾಮರ್ಥ್ಯದಷ್ಟು ನೀರು ಇರುವುದಿಲ್ಲ. ನೀರು ಭರ್ತಿಯಾಗಿದೆ ಎಂದುಕೊಂಡೇ ಬಳಸುವುದರಿಂದ ನೀರು, ಮಳೆ ಕೊರತೆಯ ವರ್ಷಗಳಲ್ಲಿ ಜಲಾಶಯಗಳು ಬರಿದಾಗುತ್ತವೆ.
ಈ ಎಲ್ಲಾ ಜಲಾಶಯಗಳಿಂದ ಸಮೀಪದ ಕೆರೆಗಳಿಗೆ ನೀರು ತುಂಬಿಸುವ ಯಾವ ಕಾಲುವೆಯೂ ಸುಸ್ಥಿತಿಯಲ್ಲಿ ಇಲ್ಲ. ಇದರಿಂದಾಗಿ, ಅಧಿಕ ಮಳೆಯ ವರ್ಷಗಳಲ್ಲಿ ಈ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಮಳೆ ಕೊರತೆಯ ವರ್ಷದಲ್ಲಿ, ನೀರಿನ ಕೊರತೆಯಾಗಲು ಇದೂ ಒಂದು ಕಾರಣವಾಗಿದೆ.
ಜಲಾಶಯಗಳ ಸ್ಥಿತಿಗತಿ
* ಮೈಸೂರಿನ ಬದನವಾಳು ಬಳಿಯಲ್ಲಿ ಬದನವಾಳು ಮಧ್ಯಮ ನೀರಾವರಿ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದು ದಾಖಲೆಗಳು ಹೇಳುತ್ತವೆ. ಆದರೆ, ಇದರ ಬಗ್ಗೆ ಮಾಹಿತಿ ಲಭ್ಯವಿಲ್ಲ
* ಚಾಮರಾಜನಗರದಲ್ಲಿ ಗುಂಡ್ಲು ಹೊಳೆಗೆ //ನಲ್ಲೂರು ಅಮಾನಿಕೆರೆಗ// ನಿರ್ಮಿಸಲಾಗಿದ್ದ ಅಣೆಕಟ್ಟೆ ಮತ್ತು ಜಲಾಶಯವು ಹೂಳಿನಿಂದ ಭರ್ತಿಯಾಗಿದೆ. 1,600 ಹೆಕ್ಟೇರ್‌ಗಳಷ್ಟು ಜಮೀನಿಗೆ ನೀರಾವರಿ ಒದಗಿಸುವ ಸಾಮರ್ಥ್ಯವಿದ್ದ ಈ ಕಿರುಜಲಾಶಕ್ಕೆ 2022ರಲ್ಲಿ ಸಾಕಷ್ಟು ನೀರು ಹರಿದುಬಂದಿತ್ತು. ಆಗ ಸಂಪೂರ್ಣ ಭರ್ತಿಯಾದಂತೆ ತೋರುತ್ತಿದ್ದ ಈ ಜಲಾಶಯ, ಈಗ ಪಊರ್ಣ ಬರಿದಾಗಿದೆ
ಜಲಾಶಯ; ಸಾಮರ್ಥ್ಯ; ಸದ್ಯದ ಸಂಗ್ರಹ; ಹೂಳು (ಟಿಎಂಸಿಗಳಲ್ಲಿ)
ಕಬಿನಿ;19.52;13.44;00
ತಾರಕ;3.94;2.21;00
ಹೆಬ್ಬಳ್ಳ;0.423;0.226;00
ನುಗು;5.44;3.22;00
ಸುವರ್ಣಾವತಿ;1.265;0.935;-00
ಚಿಕ್ಕಹೊಳೆ;0.375;0.215;-00
ಉಡುತೊರೆ;0.569;0.529;10%
ಗುಂಡಾಲ್;0.970;0.483;10.6%
ಹೇಮಾವತಿ;37.103;18.500;3
ವಾಟೇಹೊಳೆ;1.5; 0.834;0.235
ಯಗಚಿ;3.6; 2.6;0
ಹಾರಂಗಿ;8.5;7;1
ಚಿಕ್ಲಿಹೊಳೆ;0.18;0.16;00
ಮಂಚನಬೆಲೆ ಜಲಾಶಯ;1.22;0.979;ಲೆಕ್ಕ ಹಾಕಿಲ್ಲ
ಕಣ್ವ ಜಲಾಶಯ;0.8;0.58;ಲೆಕ್ಕ ಹಾಕಿಲ್ಲ
ಇಗ್ಗಲೂರು ಬ್ಯಾರೇಜ್;0.18;0.18;ಲೆಕ್ಕ ಹಾಕಿಲ್ಲ
ಹಾರೋಬೆಲೆ ಜಲಾಶಯ;1.57;1.49;ಲೆಕ್ಕ ಹಾಕಿಲ್ಲ
ಮಾರ್ಕೋನಹಳ್ಳಿ;2.4 ಟಿಎಂಸಿ;2.10 ಟಿಎಂಸಿ;ಶೇ 15
ಮಂಗಳಾ;0.54 ಟಿಎಂಸಿ;0.45 ಟಿಎಂಸಿ;ಹೂಳು ಶೇ10
ಆಧಾರ: ಕಾವೇರಿ ನೀವಾವರಿ ನಿಗಮ, ಕಾವೇರಿ ಐತೀರ್ಪು, ಕೇಂದ್ರ ಜಲಸಂಪನ್ಮೂಲ ಸಚಿವಾಲಯ, ‘ಪ್ರಜಾವಾಣಿ’ ಬ್ಯೂರೊ ಮಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.