ಚಾಮರಾಜನಗರ: ಕಪ್ಪು ಶಿಲೆಗೆ (ಗ್ರ್ಯಾನೈಟ್) ಖ್ಯಾತಿ ಗಳಿಸಿರುವ ಚಾಮರಾಜನಗರ ಜಿಲ್ಲೆಯಲ್ಲೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಗಣಿ ಇಲಾಖೆ ಅಂಕಿ ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ 66 ಕರಿಕಲ್ಲು, 38 ಬಿಳಿ ಕಲ್ಲಿನ ಕ್ವಾರಿಗಳು ಹಾಗೂ 25 ಕ್ರಷರ್‌ಗಳಿವೆ. 42 ಗಣಿಗಳು ಈಗ ನಿಷ್ಕ್ರಿಯವಾಗಿವೆ.
ಸ್ಥಳೀಯ ರಾಜಕಾರಣಿಗಳಲ್ಲದೇ ಹೊರ ಜಿಲ್ಲೆಗಳ ರಾಜಕಾರಣಿಗಳು, ಅವರ ಸಂಬಂಧಿಕರು ಗಣಿ ಹೊಂದಿದ್ದಾರೆ. ಬೇನಾಮಿ ಹೆಸರಲ್ಲಿ, ಕಂಪನಿಗಳ ಮೂಲಕ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪಗಳೂ ಇವೆ.
ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಪುತ್ರನ ಹೆಸರಿನಲ್ಲಿ ಯಳಂದೂರು ತಾಲ್ಲೂಕಿನ ಗುಂಬಳ್ಳಿಯಲ್ಲಿ ಗಣಿ ಇದೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ. ಮರಿಸ್ವಾಮಿ, ಬಿಜೆಪಿಯ ಜಿಲ್ಲಾ ಘಟಕದ ಉಪಾಧ್ಯಕ್ಷ ವೃಷಭೇಂದ್ರಪ್ಪ, ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ.ರಾಮಚಂದ್ರ ಗಣಿ ಉದ್ಯಮಿಗಳು. ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಅವರ ಕುಟುಂಬದವರು ಗುಂಡ್ಲುಪೇಟೆಯ ಹಿರಿಕಾಟಿಯಲ್ಲಿ ಬಿಳಿ ಕಲ್ಲು ಕ್ವಾರಿ ಹೊಂದಿದ್ದಾರೆ.ಕಾಂಗ್ರೆಸ್‌ನ ಮುಖಂಡ ಬಾಲರಾಜ್ ಕ್ವಾರಿ ಹೊಂದಿದ್ದಾರೆ. ಸಂಸದ ಡಿ.ಕೆ. ಸುರೇಶ್ ಸಂಬಂಧಿಕರು, ಗುಂಡ್ಲುಪೇಟೆ ಶಾಸಕ ಸಿ.ಎಸ್. ನಿರಂಜನಕುಮಾರ್ ಅವರ ಬೆಂಬಲಿಗರೂ ಗಣಿ ನಡೆಸುತ್ತಿದ್ದಾರೆ. ಮರಿಸ್ವಾಮಿ ಅವರ ಗಣಿ ವಿರುದ್ಧ ನಿಯಮ ಉಲ್ಲಂಘನೆ ಪ್ರಕರಣವೂ ದಾಖಲಾಗಿದೆ.
ಅಕ್ರಮ: ‘ರಾಜಕಾರಣಿಗಳ ಮಾಲೀಕತ್ವದವೂ ಸೇರಿದಂತೆ ಬಹುತೇಕ ಗಣಿಗಳು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿವೆ. ದಾಖಲೆಗಳಲ್ಲಿ ‘ನಿಷ್ಕ್ರಿಯವಾಗಿವೆ’ ಎಂದು ತೋರಿಸಿದ ಗಣಿಗಳು ಕೂಡ ಸಕ್ರಿಯವಾಗಿವೆ’ ಎಂಬುದು ಪರಿಸರವಾದಿಗಳ ಆರೋಪ.
ಚಾಮರಾಜನಗರ ತಾಲ್ಲೂಕಿನ ಕಗ್ಗಲೀಪುರ, ಜ್ಯೋತಿಗೌಡನಪುರ, ಬೊಕ್ಕೇಪುರ ಸೇರಿದಂತೆ ಹಲವು ಕಡೆಗಳಲ್ಲಿ ಸರ್ಕಾರಿ ಗೋಮಾಳದಲ್ಲಿ ಕ್ವಾರಿಗಳು ನಡೆಯುತ್ತಿವೆ. ನಿಗದಿತ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ಗುತ್ತಿಗೆ ಪಡೆದುಕೊಂಡು, ಸುತ್ತಮುತ್ತಲಿನ ಜಮೀನುಗಳನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಲಾಗುತ್ತಿದೆ. ಪಟ್ಟಾ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಪಡೆದು, ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡವರೂ ಇದ್ದಾರೆ.
‘ಗೋಮಾಳ, ಪರಿಸರ ಸೂಕ್ಷ್ಮ ವಲಯದಲ್ಲಿ ಗಣಿಗಾರಿಕೆಗೆ ಗಣಿ ಇಲಾಖೆ ಅನುಮತಿ ಕೊಟ್ಟಿದೆ. ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕಿನಲ್ಲಿ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳೆಲ್ಲ ಬಿಆರ್‌ಟಿ ಅರಣ್ಯದ ಅಂಚಿನಲ್ಲಿದ್ದು, ಪರಿಸರ ಸೂಕ್ಷ್ಮ ವಲಯದಲ್ಲಿ ಬರುತ್ತವೆ’ ಎಂದು ಹೇಳುತ್ತಾರೆ ಪರಿಸರವಾದಿ ಪುಣಜನೂರು ದೊರೆಸ್ವಾಮಿ.
ದಂಡ ಮನ್ನಾ
ಚಾಮರಾಜನಗರ ತಾಲ್ಲೂಕಿನಲ್ಲಿ ಯಾಲಕ್ಕೂರಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಉದ್ಯಮಿಯೊಬ್ಬರಿಗೆ ಕಳೆದ ವರ್ಷ ₹7.44 ಕೋಟಿ ದಂಡ ವಿಧಿಸಲಾಗಿತ್ತು. ದಂಡದ ಮೊತ್ತವನ್ನು ಕಡಿಮೆ ಮಾಡುವಂತೆ ಇಲಾಖೆಗೆ ಅವರು ಮನವಿ ಮಾಡಿದ್ದರು. ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳನ್ನೂ ನಡೆಸಿದ್ದರು. ಸರ್ಕಾರ ದಂಡದ ಮೊತ್ತವನ್ನು ಮನ್ನಾ ಮಾಡಿದೆ ಎಂದು ಗಣಿ ಇಲಾಖೆಯ ಮೂಲಗಳು ತಿಳಿಸಿವೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.