ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಆದರೆ, ಪಾಂಡವಪುರ ತಾಲ್ಲೂಕಿನಲ್ಲಿ ಸರ್ಕಾರಕ್ಕೆ ಪಾವತಿಸಬೇಕಿದ್ದ ರಾಜಧನವನ್ನೇ ಮನ್ನಾ ಮಾಡಿದ ಬೆಳವಣಿಗೆ ಆಶ್ಚರ್ಯ ಮೂಡಿಸುತ್ತದೆ.
ಚಿನಕುರುಳಿ ಹಾಗೂ ಹೊನಗಾನಹಳ್ಳಿ ಗ್ರಾಮ ಪಂಚಾಯಿತಿ ಆಡಳಿತಮಂಡಳಿ ಹಾಗೂ ಅಧಿಕಾರವರ್ಗ ₹30 ಕೋಟಿ ರಾಜಧನ ಮನ್ನಾ ಮಾಡುವ ನಿರ್ಧಾರ ಕೈಗೊಂಡಿದೆ. ಈ ಕುರಿತ ಪ್ರಸ್ತಾವವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸರ್ಕಾರಕ್ಕೆ ಕಳುಹಿಸಿದ್ದಾರೆ. ಅಲ್ಲಿ ಅದು ಬಾಕಿ ಉಳಿದಿದೆ. 2008ರಿಂದ ಇಲ್ಲಿಯವರೆಗೆ ಇಡೀ ಜಿಲ್ಲೆಯಲ್ಲಿ ₹600 ಕೋಟಿಗೂ ಹೆಚ್ಚಿನ ರಾಜಧನ ಬಾಕಿ ಉಳಿದಿದೆ ಎಂದು ಅಂದಾಜು ಮಾಡಲಾಗಿದೆ.
ರಾಜಧನ ಪಾವತಿಸದ 116 ಗಣಿ ಕಂಪನಿಗಳಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ 2018ರಲ್ಲಿ ₹320 ಕೋಟಿ ದಂಡ ವಿಧಿಸಿತ್ತು. ಇದರಲ್ಲಿ ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್. ಪುಟ್ಟರಾಜು ಅವರ ಕುಟುಂಬ ಸದಸ್ಯರು ನಡೆಸುವ ಎಸ್.ಟಿ.ಜಿ ಗಣಿ ಕಂಪನಿಯೂ ಸೇರಿತ್ತು. ದಂಡದ ಹಣ ಇನ್ನೂ ವಸೂಲಾಗಿಲ್ಲ.
‘ರಾಜಧನ ಮನ್ನಾ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒಗಳು, ಅಧ್ಯಕ್ಷರು, ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಸರ್ಕಾರ ನಿರ್ದೇಶನ ಮಾಡಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್. ರವೀಂದ್ರ ಆರೋಪಿಸುತ್ತಾರೆ.
ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿ ಚಟುವಟಿಕೆಯಿಂದಾಗಿ ಸಮೀಪದಲ್ಲೇ ಇರುವ ಕೆಆರ್‌ಎಸ್ ಜಲಾಶಯಕ್ಕೆ ಧಕ್ಕೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿ ನೀಡಿದೆ. ವರದಿ ಆಧರಿಸಿ ಬೇಬಿಬೆಟ್ಟದಲ್ಲಿ ಹಲವು ಬಾರಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದರೆ, ರಾತ್ರಿಯ ವೇಳೆ ಗಣಿ ಚಟುವಟಿಕೆ ನಿರಾತಂಕವಾಗಿ ನಡೆಯುತ್ತದೆ. ಶಿವಮೊಗ್ಗ ಜಿಲ್ಲೆಯ ಹುಣಸೋಡು ಘಟನೆ ನಂತರ ಅಧಿಕಾರಿಗಳು ಮತ್ತೆ ಸೆಕ್ಷನ್ 144 ಜಾರಿಗೊಳಿಸಿದ್ದಾರೆ.
‘ಗಣಿ ಅಕ್ರಮ ಪತ್ತೆಗಾಗಿ ಡ್ರೋಣ್ ಕ್ಯಾಮೆರಾ ಬಳಸಿ ಸರ್ವೆ ನಡೆಸಲು ಸರ್ಕಾರ ಅನುಮತಿ ನೀಡಿದೆ. ಫೆಬ್ರುವರಿಯಲ್ಲಿ ಈ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಟಿ.ವಿ. ಪುಷ್ಪಾ ತಿಳಿಸಿದರು.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.