ದೇಶದ ನಗರಗಳಲ್ಲಿ ಯಾವುದು ಹೆಚ್ಚು ಸ್ವಚ್ಛ ಎಂಬುದನ್ನು ನಿರ್ಧರಿಸುವ 2023ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆಯ ಪ್ರಶಸ್ತಿಗಳು ಗುರುವಾರ ಪ್ರಕಟವಾಗಿವೆ. ಸತತ ಏಳನೇ ವರ್ಷ ಇಂದೋರ್ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಹರಿಮೆಗೆ ಪಾತ್ರವಾಗಿದೆ. ಈ ಸಾಲಿನಲ್ಲಿ ಗುಜರಾತ್‌ನ ಸೂರತ್ ಸಹ ಆ ಸ್ಥಾನವನ್ನು ಇಂದೋರ್‌ನೊಟ್ಟಿಗೆ ಹಂಚಿಕೊಂಡಿದೆ. ಈ ಸಾಲಿನ ಹೆಚ್ಚಿನ ಪ್ರಶಸ್ತಿಗಳಿಗೆ ಪಾತ್ರವಾಗಿರುವುದು ಮಧ್ಯ ಭಾರತದ ರಾಜ್ಯಗಳು. ದಕ್ಷಿಣದ ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ರಾಷ್ಟ್ರಮಟ್ಟದ ಕೆಲವು ಕಿರು ಪ್ರಶಸ್ತಿಗಳು ಬಂದಿವೆ. ದಕ್ಷಿಣದ ಉಳಿದ ಯಾವ ರಾಜ್ಯಕ್ಕೂ ರಾಷ್ಟ್ರಮಟ್ಟದ ಪ್ರಶಸ್ತಿ ಬಂದಿಲ್ಲ!
ನಗರಗಳ ಮೌಲ್ಯಮಾಪನ ಮಾನದಂಡಗಳು..
–––––––––
ಕಸ ಸಂಗ್ರಹ ಹಾಗೂ ವಿಂಗಡಣೆ
1. ಮನೆ ಮನೆ ಕಸ ಸಂಗ್ರಹ: ನಗರದ ಪ್ರತಿ ಮನೆ, ವಾಣಿಜ್ಯ ಅಂಗಡಿಗಳಿಂದ ಪ್ರತಿದಿನವೂ ಕಸ ಸಂಗ್ರಹಿಸುವ ವ್ಯವಸ್ಥೆ ಇರಬೇಕು. ಹೀಗೆ ಸಂಗ್ರಹಿಸುವಾಗಲೇ ಕಸಗಳನ್ನು ಹಸಿ, ಒಣ, ಗಾಜು, ಔಷಧ ತ್ಯಾಜ್ಯ ಸೇರಿದಂತೆ ಇತರೆ ಗೃಹತ್ಯಾಜ್ಯಗಳನ್ನು ವಿಂಗಡಿಸಿಕೊಳ್ಳಬೇಕು.
2. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ: ನಗರದ ಎಲ್ಲ ವಾಣಿಜ್ಯ ಪ್ರದೇಶಗಳು, ಬಸ್, ರೈಲು ನಿಲ್ದಾಣಗಳನ್ನು ದಿನದಲ್ಲಿ ಎರಡು ಬಾರಿ ಸ್ವಚ್ಛಗೊಳಿಸಬೇಕು. ಹಬ್ಬದ ಅಥವಾ ರಜಾ ದಿನಗಳಲ್ಲೂ ಸ್ವಚ್ಛತಾ ಕಾರ್ಯ ನಿಲ್ಲಬಾರದು. ಈ ಎಲ್ಲಾ ಪ್ರದೇಶಗಳನ್ನು ರಾತ್ರಿ ವೇಳೆಯಲ್ಲಿಯೂ ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು. ಜನವಸತಿ ಪ್ರದೇಶಗಳಲ್ಲೂ ಪ್ರತಿನಿತ್ಯ ಸ್ವಚ್ಛತೆ ಕೈಗೊಳ್ಳಬೇಕು. ಜೊತೆಗೆ, ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಉಗುಳುವ ‘ಸ್ಥಳ’ ಇರಬಾರದು.
3. ಮಳೆ ನೀರು ಚರಂಡಿ, ನಾಲೆಗಳು ಹಾಗೂ ನೀರಿನ ಮೂಲಗಳ ಸ್ವಚ್ಛತೆ: ನಗರದಾದ್ಯಂತ ಮಳೆ ನೀರು ಚರಂಡಿ ಇರಬೇಕು. ಜೊತೆಗೆ, ಸೂಕ್ತ ಅಂತರದಲ್ಲಿ ಮಳೆ ನೀರು ಒಳಗೆ ಇಳಿಯುವ ಕಿಂಡಿಗಳನ್ನು ಅಳವಡಿಸಿರಬೇಕು. ಚರಂಡಿ, ನಾಲೆಗಳು ಅಥವಾ ಯಾವುದೇ ನೀರಿನ ಮೂಲದಲ್ಲಿ ಒಂದೂ ಘನತ್ಯಾಜ್ಯ ತೇಲುತ್ತಿರಬಾರದು. ನೀರಿನ ಮೂಲಗಳ ಬಳಿ ಎಲ್ಲಿಯೂ ಕಸ ಸುರಿಯುವ ಪ್ರದೇಶ ಇರಬಾರದು.
4. ಆರ್‌ಆರ್‌ಆರ್ ಘಟಕಗಳ ಕುರಿತ ಪ್ರಚಾರ: ತ್ಯಾಜ್ಯದ ಮರುಬಳಕೆ ಮಾಡುವುದರ ಮೂಲಕ ತ್ಯಾಜ್ಯದ ಪ್ರಮಾಣವನ್ನೇ ಕಡಿಮೆ ಮಾಡುವಂಥ ವ್ಯವಸ್ಥೆಯುಳ್ಳ ಘಟಕಗಳ (ಆರ್‌ಆರ್‌ಆರ್: Reduce Reuse Recycle) ಕುರಿತು ಜನರಲ್ಲಿ ಜಾಗೃತಿ ಇರಬೇಕು. ಜೊತೆಗೆ, ನಗರವೊಂದರಲ್ಲಿ ಇಂಥ ಒಂದು ಘಟಕವಾದರೂ ಇರಬೇಕು. ‘ಕಸದಿಂದ ರಸ’ ಪರಿಕಲ್ಪನೆಯಲ್ಲಿ ನಗರದ ಉದ್ಯಾನವೊಂದರಲ್ಲಿ ಇನ್‌ಸ್ಟಾಲೇಷನ್ ಕಲೆ ಬಳಸಿ ನಿರ್ಮಿಸಿದ ವಿನ್ಯಾಸ ಇರಬೇಕು.
5. ಸ್ವಚ್ಛತಾ ಕರ್ಮಚಾರಿಗಳಿಗೆ ನೀಡುತ್ತಿರುವ ಅನುಕೂಲಗಳು: ಸ್ವಚ್ಛತೆ ಕಾರ್ಯಗಳಲ್ಲಿ ಬಳಸಲು ಕಾಲಕಾಲಕ್ಕೆ ಹೊಸ ಕಿಟ್‌ಗಳನ್ನು ಒದಗಿಸುವುದು. ವರ್ಷಕ್ಕೆ ಒಂದು ಬಾರಿ ಆರೋಗ್ಯ ತಪಾಸಣೆ ಮಾಡಿಸಬೇಕು. ಆರೋಗ್ಯ, ವಿಮೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದೆ ಸರ್ಕಾರಿ ಯೋಜನೆಯ ಫಲಾನುಭವಿಗಳನ್ನಾಗಿ ಮಾಡುವುದು. ಉತ್ತಮ ಕೆಲಸ ಮಾಡಿದವರನ್ನು ಪ್ರತಿ ವಾರ್ಡ್‌ನಲ್ಲಿಯೂ ಗುರುತಿಸುವುದು. ಮಹಿಳಾ ಕರ್ಮಚಾರಿಗಳು ಅವರಿಗಾಗಿಯೇ ಇರುವ ಯೋಜನೆಗಳ ಫಲಾನುಭವಿಗಳಾಗುವಂತೆ ಕ್ರಮ ಕೈಗೊಳ್ಳುವುದು. ಲೈಂಗಿಕ ಅಲ್ಪಸಂಖ್ಯಾತ ಕರ್ಮಚಾರಿಗೆ ಪ್ರತ್ಯೇಕ ಯೋಜನೆ ಸಿದ್ಧಪಡಿಸುವುದು. (ಉದಾ: ಒಡಿಶಾ ಸರ್ಕಾರದ ಸ್ವೀಕೃತಿ ಯೋಜನೆ, ಗುಜರಾತ್‌ನ ಗರಿಮಾ ಗೃಹ ಯೋಜನೆ)
ಸಂಸ್ಕರಣೆ ಮತ್ತು ವಿಲೇವಾರಿ
1. ಸಂಸ್ಕರಣೆಗೆ ಒಳಗಾಗುತ್ತಿರುವ ಹಸಿ ಮತ್ತು ಒಣ ಕಸದ ಪ್ರಮಾಣ: ಹಸಿ ಮತ್ತು ಒಣ ಕಸಗಳನ್ನು ಯಾವ ಪ್ರಮಾಣದಲ್ಲಿ ಸಂಸ್ಕರಿಸಲಾಗುತ್ತಿದೆ ಮತ್ತು ಈ ಕಸಗಳನ್ನು ಸಂಸ್ಕರಿಸಿ ಯಾವ ಪ್ರಮಾಣದ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ ಎನ್ನುವುದನ್ನು ಪರಿಗಣಿಸಲಾಗುತ್ತದೆ.
2. ಕಸ ಸುರಿಯುವ ಪ್ರದೇಶದಲ್ಲಿ ಕಸ ವಿಲೇವಾರಿ ಪ್ರಮಾಣ: ನಗರಗಳಿಂದ ಪಡೆದುಕೊಂಡ ಕಸಗಳನ್ನು ಸಂಸ್ಕರಣೆ ಮಾಡಲೇಬೇಕು. ಮರುಬಳಕೆಗೆ ಸಾಧ್ಯವೇ ಇಲ್ಲ ಎನ್ನುವಂತಹ ಕಸಗಳನ್ನು ಮಾತ್ರವೇ ಕಸ ಸುರಿಯುವ ಪ್ರದೇಶಕ್ಕೆ ಹಾಕಬೇಕು. ಇನ್ನು ಕಸಗಳನ್ನು ಸಂಸ್ಕರಿಸಿದ ಪ್ರಕ್ರಿಯೆಯಲ್ಲಿ ಉಳಿದ ಕಸವನ್ನು ಈ ಪ್ರದೇಶಕ್ಕೆ ಸುರಿಯಬೇಕು. ಹೀಗೆ ಉಳಿದ ಕಸಗಳನ್ನು ಎಷ್ಟು ಪ್ರಮಾಣದಲ್ಲಿ ಸುರಿಯಲಾಗುತ್ತಿದೆ ಎನ್ನುವುದನ್ನು ಗಮನಿಸಲಾಗುತ್ತದೆ.
3. ಕಸ ಸುರಿಯುವ ಪ್ರದೇಶದ ಪುನಶ್ಚೇತನ: ಹಲವು ವರ್ಷಗಳಿಂದ ಕಸವನ್ನು ಒಂದು ಪ್ರದೇಶದಲ್ಲಿ ಸುರಿದಿರಲಾಗುತ್ತದೆ. ಆ ಕಸದ ಮರುಬಳಕೆ ಸಾಧ್ಯವಿರುವುದಿಲ್ಲ. ಇಂಥ ಕಸಗಳ ರಾಶಿಯ ಮೇಲೆ ಹುಲ್ಲುಹಾಸುಗಳನ್ನು ಬೆಳೆಸಬೇಕಾಗುತ್ತದೆ. ಇಂಥ ಪುನಶ್ಚೇತನ ಕಾರ್ಯವನ್ನು ಎಷ್ಟು ಪ್ರಮಾಣದಲ್ಲಿ ಮಾಡಲಾಗಿದೆ ಎನ್ನುವುದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇಂಥ ಪ್ರದೇಶವು ನಗರದಲ್ಲಿ ಕಡಿಮೆ ವಿಸ್ತಾರದಲ್ಲಿ ಇರಬೇಕು.
ಸಫಾಯಿಮಿತ್ರ ಸುರಕ್ಷಾ
1. ಪ್ರತಿ ಮನೆ, ವಾಣಿಜ್ಯ ಸಂಕೀರ್ಣ, ಕಟ್ಟಡಗಳು, ಸಾರ್ವಜನಿಕ ಸ್ಥಳಗಳಲ್ಲಿ ಇರುವ ಶೌಚಾಲಯಗಳ ಒಳಚರಂಡಿ ವ್ಯವಸ್ಥೆ ಹೇಗಿದೆ ಎನ್ನುವುದುನ್ನು ಗಮನಿಸಲಾಗುತ್ತದೆ. ಸಾರ್ವಜನಿಕ ಶೌಚಾಲಯಗಳು ಜನಸ್ನೇಹಿ ಆಗಿವೆಯೇ, ಸ್ವಚ್ಛವಾಗಿವೆಯೇ, ಮಹಿಳೆ ಹಾಗೂ ಪುರುಷರಿಗೆ ಪತ್ಯೇಕ ವ್ಯವಸ್ಥೆ ಇದೆಯೇ, ಇಲ್ಲೆಲ್ಲಾ ಕಸದ ಬುಟ್ಟಿಗಳಿವೆ ಎಂಬುದನ್ನು ನೋಡಲಾಗುತ್ತದೆ. ಇಲ್ಲಿ ಹೌದು ಅಥವಾ ಇಲ್ಲ ಎನ್ನುವ ಉತ್ತರಗಳನ್ನು ಮಾತ್ರ ಕೇಳಲಾಗುತ್ತದೆ. ಹೌದು ಎಂದರೆ ಪೂರ್ತಿ ಅಂಕ, ಇಲ್ಲ ಎಂದರೆ ಯಾವುದೇ ಅಂಕ ಇಲ್ಲ. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಸಹಾಯವಾಣಿ ಇದೆಯೇ, ದೂರು ನೀಡಬಹುದೇ ಎಂಬೆಲ್ಲಾ ಅಂಶಗಳನ್ನು ಗಮನಿಸಲಾಗುತ್ತದೆ. ಜೊತೆಗೆ, ಸ್ವಚ್ಛತೆಯ ಕುರಿತು ಜನ ಜಾಗೃತಿಯ ಯಾವೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬುದು ಮುಖ್ಯವಾಗುತ್ತದೆ.
23ನೇ ಸ್ಥಾನದಲ್ಲಿ ಮೈಸೂರು!
2023ನೇ ಸಾಲಿನ ಸ್ವಚ್ಛತಾ ಸರ್ವೇಕ್ಷಣೆಯಲ್ಲಿ ದೇಶದ ಅತ್ಯಂತ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು 23ನೇ ಸಾಲಿನಲ್ಲಿದೆ. 2016ನೇ ಸಾಲಿನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದ ಮೈಸೂರನ್ನು ನಂತರದ ವರ್ಷಗಳಲ್ಲಿ ಬೇರೆ ರಾಜ್ಯಗಳ ನಗರಗಳು ಸ್ವಚ್ಛತೆಯಲ್ಲಿ ಹಿಂದಿಕ್ಕಿವೆ. ಕಸ ಸಂಗ್ರಹ, ಕಸ ವಿಂಗಡಣೆ, ಕಸ ಸಂಸ್ಕರಣೆ, ಕಸಬಳಕೆ ಮತ್ತು ಕಸ ಮರುಬಳಕೆ ಶೇ 100ರಷ್ಟು ಅನುಷ್ಠಾನ ಸಾಧ್ಯವಾಗದೇ ಇರುವುದೇ ಸ್ವಚ್ಛತೆಯಲ್ಲಿ ಮೈಸೂರು ಹಿಂದುಳಿಯಲು ಕಾರಣ ಎನ್ನುತ್ತದೆ 2023ರ ಸ್ವಚ್ಛತಾ ಸರ್ವೇಕ್ಷೇಣೆ ವರದಿಯ ದತ್ತಾಂಶಗಳು. ಮೈಸೂರಿಗೆ ಸಂಬಂಧಿಸಿದ ವಿವರಗಳು ಇಂತಿವೆ.
l ಮೈಸೂರು ಸಂಪೂರ್ಣವಾಗಿ ಕಸಮುಕ್ತ ನಗರವಾಗಿಲ್ಲ. ಕಸಮುಕ್ತ ನಗರಗಳಿಗೆ ನೀಡಲಾಗುವ 5+ ರ‍್ಯಾಂಕಿಂಗ್‌ನಲ್ಲಿ ಮೈಸೂರು 3+ ರ‍್ಯಾಂಕಿಂಗ್ ಅಷ್ಟೇ ಪಡೆದಿದೆ. ನಗರದ ವ್ಯಾಪ್ತಿಯ ರಸ್ತೆ, ಚರಂಡಿ, ನಾಲೆ, ಕೆರೆಕಟ್ಟೆಗಳಲ್ಲಿ ಕಸವು ಬಿದ್ದಿದ್ದರೆ ಈ ವಿಭಾಗದಲ್ಲಿ ಅಂಕಗಳು ಕಡಿಮೆಯಾಗುತ್ತವೆ
l ಹಸಿ, ಒಣ ಮತ್ತು ಅಪಾಯಕಾರಿ ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಣೆ ಮಾಡುವ ಕಾರ್ಯವನ್ನು ಮೈಸೂರು ಶೇ 100ರಷ್ಟು ಅನುಷ್ಠಾನಕ್ಕೆ ತಂದಿಲ್ಲ. ನಗರದಲ್ಲಿ ಸಂಗ್ರಹವಾಗುವ ಕಸದಲ್ಲಿ ಶೇ 70ರಷ್ಟನ್ನು ಮಾತ್ರ ಮೂಲದಲ್ಲೇ ವಿಂಗಡಿಸಲಾಗುತ್ತಿದೆ
l ಮೈಸೂರು ನಗರದಲ್ಲಿ ಮನೆ–ಮನೆಯಿಂದ ಕಸ ಸಂಗ್ರಹಿಸುವ ಕಾರ್ಯವೂ ಶೇ 100ರ ಪ್ರಮಾಣದಲ್ಲಿ ಇಲ್ಲ. ಮೈಸೂರಿನಲ್ಲಿ ಈ ಗುರಿಯ ಅನುಷ್ಠಾನದ ಪ್ರಮಾಣ ಶೇ 97.25ರಷ್ಟು
l ನಗರದಲ್ಲಿ ಸಂಗ್ರಹಿಸಿದ ಕಸದಲ್ಲಿ ಸಂಸ್ಕರಣೆ, ಬಳಕೆ ಮತ್ತು ಮರುಬಳಕೆ ಪ್ರಮಾಣವು ಶೇ 94.05ರಷ್ಟಿದೆ. ಮೈಸೂರಿಗಿಂತಲೂ ಉತ್ತಮ ರ‍್ಯಾಂಕ್ ಪಡೆದ ನಗರಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು
* ಕರ್ನಾಟಕದಲ್ಲಿನ ಸ್ವಚ್ಛ ನಗರಗಳಲ್ಲಿ ಮೈಸೂರಿಗೆ (1 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆ) ಮತ್ತು ಹೊಸದುರ್ಗಕ್ಕೆ (1 ಲಕ್ಷಕ್ಕಿಂತಲೂ ಕಡಿಮೆ ಜನಸಂಖ್ಯೆ) ಪ್ರಶಸ್ತಿ ಸಂದಿವೆ
ಆಧಾರ: ಸ್ವಚ್ಛ ಸರ್ವೇಕ್ಷಣೆ–2023ರ ಟೂಲ್‌ಕಿಟ್, ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿಗಳು
***********
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.