ಕೇಂದ್ರದ ಬಿಜೆಪಿ ಸರ್ಕಾರವು ‘ದೂರಸಂಪರ್ಕ ಮಸೂದೆ–2023’ ಅನ್ನು ಲೋಕಸಭೆಯಲ್ಲಿ ಸೋಮವಾರವಷ್ಟೇ ಮಂಡನೆ ಮಾಡಿದೆ. ದೂರಸಂಪರ್ಕ ಕಂಪನಿಗಳು ಮತ್ತು ಅವುಗಳ ಕಾರ್ಯಾಚರಣೆ ಮೇಲೆ ಸರ್ಕಾರಕ್ಕೆ ಹೆಚ್ಚಿನ ನಿಯಂತ್ರಣವನ್ನು ಸಾಧಿಸಲು ಈ ಮಸೂದೆ ಅನುವು ಮಾಡಿಕೊಡುತ್ತದೆ. ಆದರೆ ಅದಕ್ಕಿಂತಲೂ ಮುಖ್ಯವಾಗಿ ದೇಶದಲ್ಲಿ ರವಾನೆಯಾಗುವ ಪ್ರತಿ ಸಂದೇಶ, ಕರೆ, ಅವುಗಳಿಗೆ ಸಂಬಂಧಿಸಿದ ಎಲ್ಲಾ ದತ್ತಾಂಶಗಳನ್ನು ಪರಿಶೀಲಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಈ ಮಸೂದೆ ನೀಡುತ್ತದೆ. ಸಾಮಾನ್ಯ ಬಳಕೆದಾರನೊಬ್ಬ ಕಳುಹಿಸುವ ಸಂದೇಶವನ್ನು ತಡೆಹಿಡಿಯುವಷ್ಟರ ಮಟ್ಟಿಗೆ ಕಣ್ಗಾವಲು ನಡೆಸುವ ಅಧಿಕಾರ ಸರ್ಕಾರಕ್ಕೆ ದೊರೆಯುತ್ತದೆ
*****
‘ದೂರಸಂಪರ್ಕ ಮಸೂದೆ–2023’ ಅನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಅದರ ಮೇಲಿನ ಚರ್ಚೆ ನಡೆಯುವಾಗ ವಿರೋಧ ಪಕ್ಷಗಳ ಸಂಸದರು, ‘ಈ ಮಸೂದೆಯು ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ಹೀಗಾಗಿ ಇದನ್ನು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಕಳುಹಿಸಬೇಕು’ ಎಂದು ಆಗ್ರಹಿಸಿದರು. ಆದರೆ ಅವರ ಆಗ್ರಹ ಮತ್ತು ಕಳವಳವನ್ನು ಬದಿಗೊತ್ತಿದ ದೂರಸಂಪರ್ಕ ಸಚಿವರು, ಮಸೂದೆಯನ್ನು ಪರಿಗಣಿಸುವಂತೆ ಗೊತ್ತುವಳಿ ಮಂಡಿಸಿದರು. ಸಾಮಾನ್ಯ ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆ ತರುವಂತಹ ಹಲವು ಅಧಿಕಾರಗಳನ್ನು ಈ ಮಸೂದೆಯು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಕೆಲವು ಸಂದರ್ಭಗಳಲ್ಲಿ ರಾಜ್ಯ ಸರ್ಕಾರಗಳಿಗೂ ಇಂತಹ ಅಧಿಕಾರವನ್ನು ಮಸೂದೆ ನೀಡುತ್ತದೆ.
ದೂರಸಂಪರ್ಕ ಸಚಿವಾಲಯ ಅಥವಾ ಅದರ ಅಧೀನ ಸಂಸ್ಥೆ ಅಥವಾ ಸಚಿವಾಲಯವು ನೇಮಕ ಮಾಡಿದ ಪ್ರಾಧಿಕಾರ ಅಥವಾ ಅಧಿಕಾರಿಯು ಈ ಮಸೂದೆ ನೀಡುವ ಅಧಿಕಾರಗಳನ್ನು ಚಲಾಯಿಸುವ ಹೊಣೆಗಾರಿಕೆ ಹೊಂದಿರುತ್ತದೆ/ಹೊಂದಿರುತ್ತಾರೆ. ‘ದೇಶದ ಭದ್ರತೆಗೆ ಧಕ್ಕೆಯಾಗಿದೆ’ ಎಂದು ಈ ಸಂಸ್ಥೆಗಳು ಅಥವಾ ಅಧಿಕಾರಿಗೆ ಭಾಸವಾದರೆ ಸಾಕು, ಅವರು ದೇಶದಾದ್ಯಂತ ರವಾನೆಯಾದ ಮತ್ತು ಆಗುತ್ತಿರುವ ಎಲ್ಲಾ ಸಂದೇಶಗಳು/ಕರೆಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ಪರಿಶೀಲಿಸಬಹುದು.
ದೂರಸಂಪರ್ಕ ಕಂಪನಿಗಳ ಸಂಪೂರ್ಣ ದತ್ತಾಂಶವನ್ನು ಪರಿಶೀಲಿಸುವ, ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸುವ ಅಧಿಕಾರವು ಕೇಂದ್ರ ಸರ್ಕಾರಕ್ಕೆ ಒದಗುತ್ತದೆ. ಸಂದೇಶಗಳು ಮತ್ತು ಕಂಪನಿಗಳಿಗೆ ಸಂಬಂಧಿಸಿದ ದತ್ತಾಂಶಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ಇದನ್ನು ಕಡೆಗಣಿಸುವುಂತಿಲ್ಲ. ಏಕೆಂದರೆ ಸಂದೇಶ ಎಂಬುದು ಕೇವಲ ಎಸ್‌ಎಂಎಸ್ ಅಲ್ಲ. ಬದಲಿಗೆ ಜನರು ಕಳುಹಿಸುವ ಇ–ಮೇಲ್, ಇಂಟರ್‌ನೆಟ್ ಸಂದೇಶಗಳನ್ನೂ ಇದು ಒಳಗೊಳ್ಳುತ್ತದೆ. ಅದೇ ರೀತಿ ದೂರಸಂಪರ್ಕ ಕಂಪನಿಗಳ ದತ್ತಾಂಶಗಳು ಎಂಬುದು ಕರೆ ವಿವರಗಳು, ಕರೆ ದಾಖಲೆಗಳು, ಇಂಟರ್‌ನೆಂಟ್ ಪ್ರೋಟೊಕಾಲ್ (ಐ.ಪಿ) ದತ್ತಾಂಶ ವಿವರಗಳು, ಬಳಕೆದಾರರ ವಿವರಗಳು, ಬಳಕೆದಾರರ ಚಂದಾದಾರಿಕೆಯ ವಿವರಗಳನ್ನು ಒಳಗೊಳ್ಳುತ್ತದೆ. ಹೀಗಾಗಿ ಜನಸಾಮಾನ್ಯರ ಫೋನ್ ಬಳಕೆಯ ಮೇಲೆ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ನಿಗಾ ಇಡಲು ಸಾಧ್ಯವಾಗುತ್ತದೆ.
ವ್ಯಕ್ತಿಗಳ ಖಾಸಗಿತನದ ಹಕ್ಕನ್ನು ಮೊಟಕು ಮಾಡಿ, ಸರ್ಕಾರವು ನಡೆಸುವ ಕಣ್ಗಾವಲನ್ನು ಕಾನೂನುಬದ್ಧಗೊಳಿಸುವ ಮಸೂದೆ ಇದು ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿನ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ದೂರಸಂಪರ್ಕ ಕಂಪನಿಗಳನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಅಧಿಕಾರಗಳನ್ನೂ ಈ ಮಸೂದೆಯು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ತುರ್ತು ಸಂದರ್ಭದಲ್ಲಿ, ಪ್ರಾಕೃತಿಕ ವಿಕೋಪಗಳ ವೇಳೆ ದೇಶದಲ್ಲಿನ ದೂರಸಂಪರ್ಕ ಕಂಪನಿಗಳನ್ನು ಹಾಗೂ ಅವುಗಳ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರವು ತನ್ನ ಸುಪರ್ದಿಗೆ ತೆಗೆದುಕೊಳ್ಳಬಹುದು ಎಂದು ಈ ಮಸೂದೆಯ 20(ಎ) ಸೆಕ್ಷನ್ ಹೇಳುತ್ತದೆ.
ದೇಶದ ಭದ್ರತೆಗೆ ಧಕ್ಕೆಯಾಗಿದೆ ಅಥವಾ ಭಾರತವು ಬೇರೊಂದು ದೇಶದೊಂದಿಗೆ ಹೊಂದಿರುವ ಸ್ನೇಹ ಸಂಬಂಧಕ್ಕೆ ಧಕ್ಕೆಯಾಗುತ್ತಿದೆ ಎಂದು ಸರ್ಕಾರಕ್ಕೆ ಅನಿಸಿದರೂ ಅದು ದೂರಸಂಪರ್ಕ ಕಂಪನಿಯೊಂದನ್ನು ಅಥವಾ ಎಲ್ಲಾ ಕಂಪನಿಗಳನ್ನು ಅನಿರ್ದಿಷ್ಟಾವಧಿಯವರೆಗೆ ತನ್ನ ಸುಪರ್ದಿಗೆ ತೆಗೆದುಕೊಳ್ಳಬಹುದು. ಅವುಗಳ ಸೇವೆಗಳನ್ನು ನಿಯಂತ್ರಿಸಬಹುದು. ಕರೆ/ಸಂದೇಶ ಸೇವೆಗಳನ್ನು ನಿರ್ಬಂಧಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ತನಗೆ ಅಗತ್ಯವಿರುವ ಸಂದೇಶವನ್ನು ದೇಶದ ಎಲ್ಲಾ ಜನರಿಗೆ ಕಳುಹಿಸಲು ಆ ಕಂಪನಿಗಳನ್ನು ಬಳಸಿಕೊಳ್ಳಬಹುದು. ಸಂದೇಶಗಳ ರವಾನೆಯನ್ನು ನಿರ್ಬಂಧಿಸುವ ಆದೇಶ ಜಾರಿಯಲ್ಲಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾನ್ಯತೆ ಪಡೆದ ಪತ್ರಕರ್ತರು ಅಂತಹ ಸಂದೇಶಗಳನ್ನು (ಎಸ್‌ಎಂಎಸ್/ವಿಡಿಯೊ/ಚಿತ್ರ/ಇ–ಮೇಲ್ ಇತ್ಯಾದಿ) ರವಾನೆ ಮಾಡಲು ಈ ನಿರ್ಬಂಧ ಅನ್ವಯವಾಗುವುದಿಲ್ಲ.
ಇದರಿಂದ ಸರ್ಕಾರಕ್ಕೆ ಬೇಕಾದಂತಹ ವಿವರಗಳಷ್ಟೇ ಜನಸಾಮಾನ್ಯರಿಗೆ ಲಭ್ಯವಾಗುತ್ತವೆ. ಸರ್ಕಾರಕ್ಕೆ ವಿರುದ್ಧವಾದ ಮಾಹಿತಿಗಳು ಯಾವ ರೀತಿಯಲ್ಲೂ ಒಬ್ಬರಿಂದ ಇನ್ನೊಬ್ಬರಿಗೆ ತಲುಪುವುದೇ ಇಲ್ಲ. ಉದಾಹರಣೆಗೆ: ಮಣಿಪುರದಲ್ಲಿ ನಡೆದಿದ್ದಂತಹ ಗಲಭೆ ಬೇರೊಂದು ರಾಜ್ಯದಲ್ಲಿ ನಡೆಯಿತು ಎಂದಿಟ್ಟುಕೊಳ್ಳಿ. ಸಂದೇಶಗಳ ರವಾನೆ ಮೇಲೆ ಸರ್ಕಾರ ನಿರ್ಬಂಧ ಹೇರುತ್ತದೆ. ದೂರಸಂಪರ್ಕ ಕಂಪನಿಗಳ ಮಟ್ಟದಲ್ಲೇ ಸಂದೇಶಗಳನ್ನು ತಡೆಹಿಡಿಯುವುದರಿಂದ, ಒಂದು ಸಂದೇಶವೂ ರವಾನೆಯಾಗುವುದಿಲ್ಲ. ಆಗ ಸರ್ಕಾರ ನೀಡುವ ಮಾಹಿತಿಯನ್ನು ಮಾನ್ಯತೆ ಪಡೆದ ಕೆಲವೇ ಪತ್ರಕರ್ತರು ರವಾನಿಸಬೇಕಾಗುತ್ತದೆ. ಸರ್ಕಾರಕ್ಕೆ ಅನುಕೂಲಕರವಾಗಿರುವ ಮಾಹಿತಿಯಷ್ಟೇ ಜನರಿಗೆ ತಲುಪುತ್ತದೆ ಮತ್ತು ಸರ್ಕಾರದ ವೈಫಲ್ಯವನ್ನು ತೋರುವ ಮಾಹಿತಿಗಳು ಯಾರಿಗೂ ತಲುಪುವುದೇ ಇಲ್ಲ. ಕೆಲವೇ ಪತ್ರಕರ್ತರನ್ನು ಹೀಗೆ ಬಳಸಿಕೊಳ್ಳುವಂತಹ ಅಧಿಕಾರವನ್ನು ಈ ಮಸೂದೆಯ 20(3)ನೇ ಸೆಕ್ಷನ್ ಸರ್ಕಾರಕ್ಕೆ ನೀಡುತ್ತದೆ.
ಹೀಗೆ ಈ ಎಲ್ಲಾ ಸೆಕ್ಷನ್‌ಗಳು ದೇಶದಲ್ಲಿನ ದೂರಸಂಪರ್ಕ ಕಂಪನಿಗಳು ಮತ್ತು ಎಲ್ಲಾ ಬಳಕೆದಾರರ ಮೇಲೆ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ನಿಯಂತ್ರಣವನ್ನು ತಂದುಕೊಡುತ್ತವೆ. ಈ ಮಸೂದೆಯ ಅಡಿಯಲ್ಲಿ ಸರ್ಕಾರವು ತೆಗೆದುಕೊಂಡ ಯಾವ ಕ್ರಮವನ್ನೂ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ‘ಈ ಮಸೂದೆಯ ಸೆಕ್ಷನ್‌ಗಳ ಅಡಿಯಲ್ಲಿ ಸರ್ಕಾರವು ತೆಗೆದುಕೊಂಡ ಕ್ರಮಗಳು ಸದುದ್ದೇಶದಿಂದ ಕೂಡಿದ್ದರೆ, ಅವುಗಳನ್ನು ಪ್ರಶ್ನಿಸುವಂತಿಲ್ಲ’ ಎಂದು ಮಸೂದೆಯ 51ನೇ ಸೆಕ್ಷನ್ ಹೇಳುತ್ತದೆ. ಹೀಗಾಗಿ ಈ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರವಾಗಿ, ರಾಷ್ಟ್ರಪತಿಯ ಅಂಕಿತ ಪಡೆದು ಕಾಯ್ದೆಯಾಗಿ ಜಾರಿಯಾದರೆ ಜನಸಾಮಾನ್ಯ ಇರಲಿ ಅಥವಾ ಯಾವುದೇ ವ್ಯಕ್ತಿ ಇರಲಿ ತನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ ಅಥವಾ ಸರ್ಕಾರ ನನ್ನ ಮೇಲೆ ಕಣ್ಗಾವಲು ನಡೆಸುತ್ತಿದೆ ಎಂದು ನ್ಯಾಯಾಲಯದ ಮೊರೆ ಹೋಗಲೂ ಅವಕಾಶವಿರುವುದಿಲ್ಲ.
ಜನಸಾಮಾನ್ಯರು ಯಾರಿಗೆ ಯಾವ ಸಂದೇಶ ಕಳುಹಿಸುತ್ತಾರೆ ಎನ್ನುವುದರ ಮೇಲೆಯೂ ಇನ್ನು ಮುಂದೆ ಕೇಂದ್ರ ಸರ್ಕಾರವು ಕಣ್ಣಿಡಲಿದೆ. ಜನಸಾಮಾನ್ಯರು ಮೊಬೈಲ್‌ಗಳ ಮೂಲಕ ಕಳುಹಿಸುವ ಸಂದೇಶಗಳನ್ನು ರಾಷ್ಟ್ರೀಯ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆಯ ಹೆಸರಿನಲ್ಲಿ ಕೇಂದ್ರ ಸರ್ಕಾರವು ತಡೆಹಿಡಿಯುವ ಅಧಿಕಾರವನ್ನು ಈ ಮಸೂದೆ ನೀಡುತ್ತದೆ. ಈ ಬಗ್ಗೆ ಈ ಮಸೂದೆಯ ನಾಲ್ಕನೇ ಭಾಗದಲ್ಲಿ ವಿವರಿಸಲಾಗಿದೆ. ಜೊತೆಗೆ, ಇಂಥ ವಿಷಯಗಳಿಗೆ ಸಂಬಂಧಿಸಿದಂತೆ ವಿಸ್ತೃತವಾದ ಮಾಹಿತಿಯುಳ್ಳ ಆದೇಶವನ್ನು ಟ್ರಾಯ್ (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ಮೂಲಕ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದೂ ಮಸೂದೆಯಲ್ಲಿ ಹೇಳಲಾಗಿದೆ.
ಕೇಂದ್ರ ಸರ್ಕಾರವು ಮಸೂದೆಯಲ್ಲಿ ‘ಸಂದೇಶ’ ಎಂದರೇನು ಎನ್ನುವುದನ್ನು ವಿವರಿಸಿದೆ. ‘ದೂರಸಂಪರ್ಕದ ಮೂಲಕ ಕಳುಹಿಸಲಾಗುವ ಸಂಜ್ಞೆ, ಸಂಕೇತ, ಪಠ್ಯ, ಚಿತ್ರ, ಶಬ್ದ, ವಿಡಿಯೊ, ಡಿಜಿಟಲ್ ದತ್ತಾಂಶ, ಗೂಢ ಸಂದೇಶ ಅಥವಾ ಇತರ ಮಾಹಿತಿ’ಗಳನ್ನು ಸಂದೇಶ ಎಂದೇ ಮಸೂದೆಯಲ್ಲಿ ವ್ಯಾಖ್ಯಾನಿಸಲಾಗಿದೆ.
ಹಾಗಾದರೆ, ಯಾವ ಯಾವ ಸಂದರ್ಭದಲ್ಲಿ ಜನಸಾಮಾನ್ಯರ ಸಂದೇಶವನ್ನು ಸರ್ಕಾರ ತಡೆಹಿಡಿಯಬಹುದು?: ಸಾರ್ವಜನಿಕ ತುರ್ತಿನ ವೇಳೆ, ಸಾರ್ವಜನಿಕರ ಭದ್ರತೆ ದೃಷ್ಟಿಯಲ್ಲಿ, ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ಬಂದಾಗ, ರಕ್ಷಣೆ ಅಥವಾ ದೇಶದ ಭದ್ರತೆ ವಿಷಯಗಳಲ್ಲಿ ಮತ್ತು ಸ್ನೇಹ ಬಾಂಧವ್ಯ ಹೊಂದಿದ ಇತರ ದೇಶದ ಕುರಿತಂತೆ ನಿರ್ದಿಷ್ಟ ಸ್ವರೂಪದ ಸಂದೇಶ ರವಾನಿಸಿದ್ದಲ್ಲಿ, ಸರ್ಕಾರವು ಇಂಥ ಸಂದೇಶಗಳನ್ನು ತಡೆಹಿಡಿಯಬಹುದು. ಈ ಕೆಲಸವನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರ ಅಥವಾ ಈ ಸರ್ಕಾರಗಳು ನೇಮಿಸುವ ಅಧಿಕಾರಿಯು ಮಾಡಬಹುದಾಗಿದೆ.
ಜನಸಾಮಾನ್ಯರು ಎಂದರೆ ಕೇವಲ ವ್ಯಕ್ತಿಗಳಲ್ಲ. ಸಂಘಟನೆ ಇರಬಹುದು, ಯಾವುದಾದರೂ ಪಕ್ಷವೇ ಆಗಿರಬಹುದು, ಯಾವುದೋ ಒಂದು ನಿರ್ದಿಷ್ಟ ಗುಂಪಿನ ಜನರು ಇರಬಹುದು. ಹೀಗೆ ಯಾರೇ ನಿರ್ದಿಷ್ಟ ಸ್ವರೂಪದ ಸಂದೇಶಗಳನ್ನು ಕಳುಹಿಸಿದರೂ ಅದು ಸರ್ಕಾರದ ಕಣ್ಗಾವಲಿನ ವ್ಯಾಪ್ತಿಗೆ ಬರಲಿದೆ. ಜೊತೆಗೆ, ಸಂದೇಶ ರವಾನಿಸುವ ಅಥವಾ ಸ್ವೀಕರಿಸುವ ಮೊಬೈಲ್‌ಗಳು, ಕಂಪ್ಯೂಟರ್‌ಗಳು ಅಥವಾ ಯಾವುದೇ ದೂರಸಂಪರ್ಕ ಸಾಧನವನ್ನೂ ಸರ್ಕಾರ ವಶಕ್ಕೆ ಪಡೆಯಬಹುದಾಗಿದೆ ಎಂದು ಮಸೂದೆ ವಿವರಿಸಿದೆ. ಜೊತೆಗೆ, ರಾಷ್ಟ್ರೀಯ ಭದ್ರತೆ ಅಥವಾ ಸರ್ಕಾರ ವಿವರಿಸಿರುವ ಸಂದರ್ಭಗಳಲ್ಲಿ ಇಂಥ ನಿರ್ದಿಷ್ಟ ಸ್ವರೂಪದ ಸಂದೇಶಗಳನ್ನು ಸರ್ಕಾರವೇ ನೇಮಿಸುವ ಅಧಿಕಾರಿಯು ಪರಿಶೀಲಿಸಬಹುದಾಗಿದೆ.
ಜೊತೆಗೆ, ಇಂಥ ನಿರ್ದಿಷ್ಟ ಸ್ವರೂಪದ ಸಂದೇಶಗಳನ್ನು ಯಾವ ದೂರಸಂಪರ್ಕ ಸೇವೆಯಿಂದ ಅಥವಾ ದೂರಸಂಪರ್ಕ ಜಾಲದಿಂದ ಸ್ವೀಕರಿಸಲಾಗಿದೆ ಅಥವಾ ಕಳುಹಿಸಲಾಗಿದೆಯೋ ಅಂಥ ಸೇವೆ ಅಥವಾ ಜಾಲವನ್ನು ಸರ್ಕಾರವು ಸ್ಥಗಿತ ಮಾಡಬಹುದಾಗಿದೆ.
* ಇನ್ನು ಮುಂದೆ ದೂರಸಂಪರ್ಕ ಕಂಪನಿಗಳು ಸಾಲ ಪಡೆಯಬೇಕಿದ್ದರೆ ಅವುಗಳೇ ಖಾತರಿಯನ್ನೂ ಒದಗಿಸಬೇಕು ಎಂದಿಲ್ಲ. ಕೇಂದ್ರ ಸರ್ಕಾರವು ತಾನೇ ಅಂತಹ ಖಾತರಿಯನ್ನು ಒದಗಿಸುತ್ತದೆ ಎಂಬುದನ್ನು ಮಸೂದೆಯ 45ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ.
* ಉಪಗ್ರಹ ಆಧಾರಿತ ಸೇವೆಗಳನ್ನು ಒದಗಿಸುವ ಕಂಪೆನಿಗೆಳಿಗೆ ತರಂಗಾಂತರಗಳನ್ನು ಸರ್ಕಾರವೇ ನೇರವಾಗಿ ನಿಯೋಜಿಸಲು ಈ ಮಸೂದೆ ಅನುವು ಮಾಡಿಕೊಡುತ್ತದೆ. ಹರಾಜಿನ ಮೂಲಕವೇ ತರಂಗಾಂತರಗಳನ್ನು ಹಂಚಿಕೆ ಮಾಡಬೇಕಿದ್ದ ಅನಿವಾರ್ಯವನ್ನು ಈ ಮಸೂದೆ ತೊಡೆದು ಹಾಕಿದೆ.
ಆಧಾರ: ದೂರಸಂಪರ್ಕ ಮಸೂದೆ–2023, ಪಿಟಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.