ಬಿಹಾರದಲ್ಲಿ 2020ರಲ್ಲಿ ನಡೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಘಟಕವು ಫೇಸ್‌ಬುಕ್‌ನಲ್ಲಿ ಒಂದು ವಿಡಿಯೊ ಜಾಹೀರಾತು ನೀಡಿತ್ತು. ಬಿಜೆಪಿಯೇತರ ಪಕ್ಷವಾಗಿರುವ ಆರ್‌ಜೆಡಿಯ ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ತೇಜಸ್ವಿ ಯಾದವ್ ವಿರುದ್ಧ ನೀಡಲಾಗಿದ್ದ ಜಾಹೀರಾತು ಅದಾಗಿತ್ತು. ಚುನಾವಣಾ ಪ್ರಚಾರದ ಕಣದಲ್ಲಿ ತೇಜಸ್ವಿ ಪರವಾದ ಅಲೆ ತೀವ್ರವಾಗಿದ್ದ ಸಂದರ್ಭದಲ್ಲಿ ಈ ಜಾಹೀರಾತು ಪ್ರಕಟವಾಗಿತ್ತು.
‘ತೇಜಸ್ವಿ ಯಾದವ್ ತಮ್ಮದೇ ಪಕ್ಷದ ಕಾರ್ಯಕರ್ತ ಶಕ್ತಿ ಮಲಿಕ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ‘ನಾನು ಲಾಲು ಪ್ರಸಾದ್ ಅವರ ಮಗ. ನಾನು ಉಪಮುಖ್ಯಮಂತ್ರಿ. ನೀನು ದನಿ ಜೋರು ಮಾಡಿದರೆ, ನಿನ್ನನ್ನು ಕೊಲ್ಲುತ್ತೇನೆ’ ಎಂದು ಬೆದರಿಕೆ ಹಾಕಿದ್ದರು. ಆ ಬೆದರಿಕೆ ನಿಜವಾಗಿದೆ. ಶಕ್ತಿ ಮಲಿಕ್ ಈಗ ಕೊಲೆಯಾಗಿದ್ದಾರೆ’ ಎಂದು ಬಿಜೆಪಿ ನೀಡಿದ್ದ ಜಾಹೀರಾತಿನಲ್ಲಿ ಆರೋಪಿಸಲಾಗಿತ್ತು. ಈ ಜಾಹೀರಾತು ಪ್ರಕಟವಾದ ನಂತರದ 24 ಗಂಟೆಗಳಲ್ಲಿ ಅದನ್ನು 1.75 ಲಕ್ಷ ಜನರು ವೀಕ್ಷಿಸಿದ್ದರು. ಈ ಜಾಹೀರಾತಿಗೆ ಬಿಜೆಪಿ ಪಾವತಿಸಿದ್ದು ₹4,250 ಮಾತ್ರ. ಅಂದರೆ ಪ್ರತಿ ವೀಕ್ಷಣೆಗೆ (ವ್ಯೂಗೆ) ಬಿಜೆಪಿ 3 ಪೈಸೆಯನ್ನಷ್ಟೇ ಪಾವತಿಸಿದಂತಾಯಿತು. ಇಷ್ಟು ಕಡಿಮೆ ವೆಚ್ಚದಲ್ಲಿ ಬಿಜೆಪಿ ನೀಡಿದ್ದ ಒಂದು ಜಾಹೀರಾತು ಭಾರಿ ವೈರಲ್ ಆಗಿತ್ತು.
‘ಶಕ್ತಿ ಮಲಿಕ್ ಅವರನ್ನು ವ್ಯಾವಹಾರಿಕ ದ್ವೇಷದ ಕಾರಣದಿಂದ ಕೊಲ್ಲಲಾಗಿದೆ’ ಎಂದುಈ ಜಾಹೀರಾತು ವೈರಲ್ ಆದ ಮರುದಿನ ಬಿಹಾರ ಪೊಲೀಸರು ಮಾಹಿತಿ ನೀಡಿದ್ದರು. ಆದರೆ ಈ ಸ್ಪಷ್ಟನೆ ದೊರೆಯುವ ವೇಳೆಗೆ, ಜಾಹೀರಾತು ಪರಿಣಾಮ ಬೀರಿತ್ತು. ‘ಈ ಕೊಲೆಯ ಬಗ್ಗೆ ಉತ್ತರ ನೀಡಿ ತೇಜಸ್ವಿ’ ಎಂದು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದರು. ಈ ರೀತಿ ಪರಿಣಾಮ ಬೀರಿದ್ದು ಇದೊಂದೇ ಜಾಹೀರಾತಲ್ಲ. 2019ರ ಫೆಬ್ರುವರಿಯಿಂದ 2020ರ ನವೆಂಬರ್‌ವರೆಗೆ ನಡೆದ 10 ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿ ಇಂತಹ ಸಾವಿರಾರು ಜಾಹೀರಾತುಗಳನ್ನು ನೀಡಿದೆ. ಬಿಜೆಪಿ ಪರವಾಗಿ ಅನಧಿಕೃತವಾಗಿ ನೀಡಿದ ಜಾಹೀರಾತುಗಳು ಮತ್ತು ಸುದ್ದಿರೂಪದ ಜಾಹೀರಾತುಗಳ ಸಂಖ್ಯೆಯು ಹತ್ತಾರು ಸಾವಿರವನ್ನು ಮುಟ್ಟುತ್ತದೆ.
ಕಡಿಮೆ ವೆಚ್ಚದಲ್ಲಿ ಬಿಜೆಪಿ ಮತ್ತು ಆ ಪಕ್ಷದ ಪರವಾಗಿ ಅನಧಿಕೃತವಾಗಿ ಜಾಹೀರಾತು ನೀಡಲು ಸಾಧ್ಯವಾಗಿದ್ದು, ಫೇಸ್‌ಬುಕ್ ರೂಪಿಸಿದ್ದ ಜಾಹೀರಾತು ನೀತಿಯಿಂದ. ಅತಿಹೆಚ್ಚು ಜನರು ನೋಡುವ ಕಂಟೆಂಟ್ ಇರುವ ಜಾಹೀರಾತುಗಳನ್ನು ಫೇಸ್‌ಬುಕ್ ಉತ್ತೇಜಿಸುತ್ತದೆ. ಮತ್ತು ಅದು ಇನ್ನಷ್ಟು ಜನರ ನ್ಯೂಸ್‌ಫೀಡ್‌ನಲ್ಲಿ ಬಿತ್ತರವಾಗುವಂತೆ ಮಾಡುತ್ತದೆ. ಹೀಗೆ ಹೆಚ್ಚು ವೀಕ್ಷಣೆಗೆ, ಲೈಕ್‌ಗೆ, ಕಾಮೆಂಟ್‌ಗೆ ಒಳಗಾಗುವ ಜಾಹೀರಾತುಗಳಿಗೆ ಫೇಸ್‌ಬುಕ್ ಕಡಿಮೆ ಶುಲ್ಕ ವಿಧಿಸುತ್ತದೆ. ಇದು ಪ್ರತಿ ಜಾಹೀರಾತನ್ನು ಆಯ್ದು, ಆಯ್ದು ಶುಲ್ಕ ವಿಧಿಸುವ ವ್ಯವಸ್ಥೆ ಅಲ್ಲ. ಬದಲಿಗೆ ಫೇಸ್‌ಬುಕ್‌ನ ಅಲ್ಗಾರಿದಂ ವ್ಯವಸ್ಥೆ, ಶುಲ್ಕವನ್ನು ನಿಗದಿ ಮಾಡುತ್ತವೆ.
ಬಿಜೆಪಿ ಮತ್ತು ಆ ಪಕ್ಷದ ಪರವಾಗಿ ಅನಧಿಕೃತವಾಗಿ ನೀಡಿದ ಪ್ರಚೋದನಕಾರಿ ಮತ್ತು ಧ್ರುವೀಕರಣದ ವಿಷಯ ಇರುವ ಜಾಹೀರಾತುಗಳು ಮತ್ತು ಸುದ್ದಿರೂಪದ ಜಾಹೀರಾತುಗಳು ಅತಿಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿವೆ. ಆದರೆ ಬಿಜೆಪಿಯೇತರ ಪಕ್ಷಗಳಾದ ಕಾಂಗ್ರೆಸ್, ಆರ್‌ಜೆಡಿ ಮತ್ತು ಎಎಪಿ ನೀಡಿದ ಜಾಹೀರಾತುಗಳಿಗೆ
ಆ ಮಟ್ಟದ ವೀಕ್ಷಣೆ ದೊರೆತಿಲ್ಲ.
ಪ್ರಚೋದನಕಾರಿ ಮತ್ತು ಧ್ರುವೀಕರಣದ ವಿಷಯ ಇರುವ ಜಾಹೀರಾತುಗಳನ್ನೇ ನೀಡಿದ್ದರಿಂದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹೆಚ್ಚು ಜನರನ್ನು ತಲುಪಲು ಸಾಧ್ಯವಾಯಿತು. ಹೆಚ್ಚು ಜನರನ್ನು ತಲುಪಲು ಸಾಧ್ಯವಿದ್ದ ಕಾರಣ, ಬಿಜೆಪಿ ಇಂತಹದ್ದೇ ಜಾಹೀರಾತುಗಳನ್ನು ನೀಡಿತು. ಜತೆಗೆ ಬಿಜೆಪಿ ಪರವಾಗಿ ಅನಧಿಕೃತವಾಗಿ ಜಾಹೀರಾತು ಮತ್ತು ಸುದ್ದಿರೂಪದ ಜಾಹೀರಾತು ನೀಡಿದ 23 ಸಂಸ್ಥೆಗಳೂ ಸಹ, ಇದೇ ಹಾದಿಯನ್ನು ಅನುಸರಿಸಿದವು. ಇದರಿಂದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತಲುಪಿದ ಜನರ ಪ್ರಮಾಣ ಎರಡರಷ್ಟಾಯಿತು. ಇಂತಹ ವಿಷಯ ಇದ್ದ ಜಾಹೀರಾತುಗಳನ್ನು ನೀಡದೇ ಇದ್ದ ಕಾರಣ ವಿರೋಧ ಪಕ್ಷಗಳು ನೀಡಿದ ಜಾಹೀರಾತುಗಳು ಹೆಚ್ಚು ಜನರನ್ನು ತಲುಪಲಿಲ್ಲ.
ಹೆಚ್ಚು ವೀಕ್ಷಣೆಗೆ ಒಳಗಾಗುವ ವಿಷಯಗಳನ್ನೇ ಮತ್ತಷ್ಟು ಉತ್ತೇಜಿಸುವ ಫೇಸ್‌ಬುಕ್‌ನ ಈ ಆಲ್ಗಾರಿದಂ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಫೇಸ್‌ಬುಕ್, ಬಿಜೆಪಿ ಕಾರ್ಯಕರ್ತರಿಗೆ ತರಬೇತಿ ನೀಡಿತ್ತು ಎಂದು ‘ದಿ ವಾಲ್‌ಸ್ಟ್ರೀಟ್ ಜರ್ನಲ್’ ವರದಿ ಮಾಡಿತ್ತು. ‘ನಾವು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಹಚ್ಚಿದೆವಷ್ಟೆ. ಉಳಿದದ್ದೆಲ್ಲವೂ ಇತಿಹಾಸ’ ಎಂದು ಬಿಜೆಪಿ ನಾಯಕರೊಬ್ಬರು ತಮ್ಮ ಪಕ್ಷದ ಗೆಲುವಿನ ಸಂದರ್ಭದಲ್ಲಿ ಹೇಳಿದ್ದರು ಎಂದು ದಿ ವಾಲ್‌ಸ್ಟ್ರೀಟ್ ಜರ್ನಲ್ ಈ ವರದಿಯಲ್ಲಿ ಉಲ್ಲೇಖಿಸಿತ್ತು.
ಅಲ್ಗಾರಿದಂ ‘ಆಟ’ ಬಲ್ಲವರಿಗೆ ‘ಲಾಭ’
ತನ್ನ ವೇದಿಕೆಯಲ್ಲಿ ಪ್ರಕಟವಾಗುವ ಒಂದು ‘ಕಂಟೆಂಟ್’ ಯಾವ ವರ್ಗದ ಜನರನ್ನು ತಲುಪುತ್ತದೆ ಹಾಗೂ ಅದಕ್ಕೆ ಆ ವರ್ಗದ ಎಷ್ಟು ಜನರು ಸ್ಪಂದಿಸುತ್ತಾರೆ ಎಂಬುದರ ಮೇಲೆ ಆ ಕಂಟೆಂಟ್‌ನ ಪ್ರಸ್ತುತತೆಯನ್ನು ಫೇಸ್‌ಬುಕ್ ಅಲ್ಗಾರಿದಂ ನಿರ್ಧರಿಸುತ್ತದೆ.
ಬಹಳಷ್ಟು ಸಾಮಾಜಿಕ ಜಾಲತಾಣಗಳು ಜಾಹೀರಾತುದಾರರು ನೀಡಿದ ‘ನಿರ್ದಿಷ್ಟ’ ಜಾಹೀರಾತುಗಳು ಹೆಚ್ಚು ಜನರನ್ನು ತಲುಪುವಂತೆ ನೋಡಿಕೊಳ್ಳುತ್ತವೆ. ಜಾಹೀರಾತುದಾರರಿಗೆ ಇದರಿಂದ ಅನುಕೂಲವಾಗುತ್ತದೆ. ಫೇಸ್‌ಬುಕ್ ಸಹ ಹೀಗೆಯೇ ಮಾಡುತ್ತದೆ. ಹೆಚ್ಚು ಗಮನ ಸೆಳೆಯುವ ಜಾಹೀರಾತುಗಳು ಬಳಕೆದಾರರು ಟೈಮ್‌ಲೈನ್‌ನಲ್ಲಿ ಹೆಚ್ಚು ಹೊತ್ತು ಉಳಿಯುವಂತೆ ಮಾಡುವುದರಿಂದ ಫೇಸ್‌ಬುಕ್‌ಗೆ ಹೆಚ್ಚು ನೆರವಾಗುತ್ತದೆ. ಈ ಪ್ರಕ್ರಿಯೆಯು ಇಬ್ಬರಿಗೂ ಅನುಕೂಲಕರವಾಗಿ ಪರಿಣಮಿಸುತ್ತದೆ.
ಈ ರೀತಿ ದೊಡ್ಡ ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ವ್ಯವಸ್ಥಿತವಾಗಿ ಜಾಹೀರಾತುಗಳನ್ನು ನೀಡುತ್ತಿರುವುದು ಫೇಸ್‌ಬುಕ್ ಮಾತ್ರವಲ್ಲ. ಹಲವು ನಿರ್ಮಾಣ ಸಂಸ್ಥೆಗಳು ಹಿಂದಿನಿಂದಲೂ ಇದನ್ನು ಮಾಡಿಕೊಂಡು ಬರುತ್ತಿವೆ. ಆದರೆ ಫೇಸ್‌ಬುಕ್‌ನ ಶುಲ್ಕ ನಿಗದಿ ನೀತಿಯು ಪ್ರಜಾಪ್ರಭುತ್ವ ಇರುವ ಎಲ್ಲ ದೇಶಗಳಲ್ಲಿ ಪ್ರಶ್ನಾರ್ಹ ಆಗಿರುವುದಕ್ಕೆ ಕಾರಣಗಳಿವೆ. ಕೇವಲ ಜಾಹೀರಾತು ಸರಕು ಮತ್ತು ಸೇವೆಗಳನ್ನು ಮಾರಾಟ ಮಾಡುವುದಕ್ಕೆ ಈ ವ್ಯವಹಾರ ಮಾದರಿಯು ಸೀಮಿತವಾಗಿಲ್ಲ. ಬದಲಾಗಿ, ಚುನಾವಣಾ ಕಣಕ್ಕಿಳಿಯುವ ರಾಜಕೀಯ ಪಕ್ಷಗಳಿಗೆ ಅನ್ಯಾಯದ ಮತ್ತು ಅಸಮಾನ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ.
ರಾಜಕೀಯ ತಜ್ಞ ಶಿವರಾಮ್ ಶಂಕರ್ ಸಿಂಗ್ ಅವರು ಫೇಸ್‌ಬುಕ್ ಅಲ್ಗಾರಿದಂ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಒಂದು ರಾಜಕೀಯ ಪಕ್ಷವು ಫೇಸ್‌ಬುಕ್‌ನ ಅಲ್ಗಾರಿದಂನ ಆಟವನ್ನು ಅರ್ಥಮಾಡಿಕೊಂಡರೆ, ಬಳಕೆದಾರರನ್ನು ಹೆಚ್ಚು ತಲುಪಬಲ್ಲ ಯಾವ ರೀತಿಯ ಕಂಟೆಂಟ್ ಅನ್ನು ಸಿದ್ಧಪಡಿಸಬೇಕು ಎಂಬುದು ಅರ್ಥವಾಗಿಬಿಡುತ್ತದೆ. ತನ್ಮೂಲಕ ಆ ಪಕ್ಷವು ರಾಜಕೀಯ ಲಾಭ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳುತ್ತಾರೆ.
‘ಅಲ್ಗಾರಿದಂನ ಈ ಆಟವು ಮಾಹಿತಿಯುಕ್ತ ಕಂಟೆಂಟ್‌ನಿಂದ ಆರಂಭವಾಗುತ್ತದೆ. ಅದು ಕೊನೆಗೆ ಭಾವನೆಗಳನ್ನು ಉತ್ತೇಜಿಸುವ ಕಂಟೆಂಟ್‌ಗೆ ಒತ್ತು ನೀಡುತ್ತದೆ. ಇದನ್ನು ಅಲ್ಗಾರಿದಂ ಮಾಡುತ್ತದೆ. ಮತಗಳನ್ನು ಧ್ರುವೀಕರಿಸುವ ಉದ್ದೇಶ ಹೊಂದಿರುವ ರಾಜಕೀಯ ಪಕ್ಷಗಳಿಗೆ ಇದು ಅಂತಿಮವಾಗಿ ಬಹುದೊಡ್ಡ ಲಾಭವನ್ನು ತಂದುಕೊಡುತ್ತದೆ’ ಎಂದು ಅವರು ವಿಶ್ಲೇಷಿಸಿದ್ದಾರೆ.
ಫೇಸ್‌ಬುಕ್‌ಗೂ ಲಾಭ
ಜಾಹೀರಾತುದಾರರು ನೀಡುವ ಜಾಹೀರಾತುಗಳು ಹೆಚ್ಚು ಜನರನ್ನು ತಲುಪಿದಷ್ಟೂ ಫೇಸ್‌ಬುಕ್‌ಗೆ ಲಾಭವಾಗುತ್ತದೆ. ಹೆಚ್ಚು ಹೆಚ್ಚು ವೀಕ್ಷಕರು ಲಭ್ಯವಾದರೆ, ಫೇಸ್‌ಬುಕ್‌ಗೆ ಹೆಚ್ಚು ಜಾಹೀರಾತು ದೊರೆಯುತ್ತವೆ. ಅಂತಹ ಜಾಹೀರಾತುಗಳಿಗ ಕಡಿಮೆ ಶುಲ್ಕ ವಿಧಿಸಿದರೂ, ಜಾಹೀರಾತುಗಳ ಸಂಖ್ಯೆ ಹೆಚ್ಚುವುದರಿಂದ ಅಂತಿಮವಾಗಿ ಫೇಸ್‌ಬುಕ್‌ಗೆ ಲಾಭವಾಗುತ್ತದೆ.
ಹಿಂದುತ್ವ, ತೀವ್ರ ಹಿಂದುತ್ವ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುರಿತ ಜಾಹೀರಾತುಗಳು ಮತ್ತು ಸುದ್ದಿರೂಪದ ಜಾಹೀರಾತುಗಳು ಹೆಚ್ಚು ಜನರನ್ನು ತಲುಪುತ್ತವೆ. ಫೇಸ್‌ಬುಕ್ ತನ್ನ ಪ್ರತಿ ಬಳಕೆದಾರರ ವರ್ತನೆ, ರಾಜಕೀಯ ಸಿದ್ಧಾಂತ ಮತ್ತು ಆಸಕ್ತಿಗಳ ಪ್ರೊಫೈಲ್ ಅನ್ನು ರೂಪಿಸಿರುತ್ತದೆ. ಹಿಂದುತ್ವ ಮತ್ತು ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಜೆಪಿ ಮತ್ತು ಬಿಜೆಪಿ ಪರವಾಗಿ ಅನಧಿಕೃತ ಸಂಸ್ಥೆಗಳು ನೀಡುವ ಜಾಹೀರಾತುಗಳು, ಹಿಂದುತ್ವದ ಬಗ್ಗೆ ಒಲವು ಇರುವ ಬಳಕೆದಾರರ ನ್ಯೂಸ್‌ಫೀಡ್‌ನಲ್ಲಿ ಬಿತ್ತರವಾಗುವಂತೆ ಫೇಸ್‌ಬುಕ್ ಮಾಡುತ್ತದೆ. ಆಗ ಅಂತಹ ಜಾಹೀರಾತುಗಳನ್ನು ವೀಕ್ಷಿಸುವ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತದೆ. ಚುನಾವಣಾ ಕಣದಲ್ಲಿ ಇರುವ ಬಿಜೆಪಿಗೆ ಇದರಿಂದ ನೆರವಾಗುತ್ತದೆ. ಜತೆಗೆ, ಹೆಚ್ಚು ಜಾಹೀರಾತು ದೊರೆಯುವುದರಿಂದ ಫೇಸ್‌ಬುಕ್‌ನ ಆದಾಯವೂ ಹೆಚ್ಚುತ್ತದೆ.
ಆಧಾರ: ದಿ ರಿಪೋರ್ಟರ್ಸ್ ಕಲೆಕ್ಟಿವ್ ವರದಿ. ಈ ವರದಿಯ ಇಂಗ್ಲಿಷ್ ಆವೃತ್ತಿ ಆಲ್‌ಜಜೀರಾ ಸುದ್ದಿತಾಣದಲ್ಲಿ ಪ್ರಕಟವಾಗಿದೆ
* ಈ ವರದಿಗಳ ಸರಣಿ ಮುಗಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.