ಬ್ರ್ಯಾಂಡೆಡ್ ಸಿದ್ಧ ಉಡುಪುಗಳು ಆಗಿರಲಿ, ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸಿದ್ಧ ಉಡುಪುಗಳಾಗಿರಲಿ, ಈ ಉದ್ಯಮದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿರುವ ರಾಜ್ಯ. ರಾಜಧಾನಿ ಬೆಂಗಳೂರಿಗೆ ‘ಗಾರ್ಮೆಂಟ್ ಹಬ್’ ಎಂಬ ಖ್ಯಾತಿಯೂ ಇದೆ. ಆದರೆ, ಕೊರೊನಾ ಸೋಂಕು ಮತ್ತು ಅದರ ತಡೆಗೆ ಮಾರ್ಚ್‌ನಲ್ಲಿ ಹೇರಲಾದ ಲಾಕ್‌ಡೌನ್‌ನಿಂದಾಗಿ ಇತರ ಹಲವು ಉದ್ಯಮಗಳ ಹಾಗೆಯೇ ಗಾರ್ಮೆಂಟ್ ಉದ್ಯಮವೂ ಸಂಕಷ್ಟಕ್ಕೆ ಈಡಾಗಿದೆ.ಸಿದ್ಧ ಉಡುಪು ಘಟಕಗಳನ್ನು ಮೇ 4ರಿಂದಲೇ ತೆರೆಯಬಹುದು ಎಂದು ಸರ್ಕಾರ ಅನುಮತಿ ನೀಡಿದೆ. ಆದರೆ, ಬಹುತೇಕ ಘಟಕಗಳು ಬಾಗಿಲು ತೆರೆದಿಲ್ಲ.
ಲಕ್ಷಾಂತರ ಮಂದಿ ಈ ಉದ್ಯಮವನ್ನು ಅವಲಂಬಿಸಿದ್ದರು. ಅವರಲ್ಲಿ ಹೆಚ್ಚಿನವರು ಮಹಿಳೆಯರು ಎಂಬುದು ವಿಶೇಷವಾಗಿತ್ತು. ಆದರೆ, ಅನ್ನ ನೀಡುತ್ತಿದ್ದ ಗಾರ್ಮೆಂಟ್ ಘಟಕಗಳು ಒಂದೊಂದಾಗಿ ಬಾಗಿಲು ಮುಚ್ಚುತ್ತಿದ್ದಂತೆಯೇ ಇಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಲ್ಲಿ ಅನೇಕರು ಕೆಲಸ ಕಳೆದುಕೊಂಡರು. ನಿಶ್ಚಿತ ವೇತನ, ವಾರದ ರಜೆ, ಪಿಎಫ್ ಸೌಲಭ್ಯಗಳ ಜತೆಗೆ ನಿಯಮಿತವಾದ ದಿನಚರಿಯ ಬದುಕಿಗೆ ಹೊಂದಿಕೊಂಡು ಜೀವನ ನಡೆಸುತ್ತಿದ್ದ ಈ ಮಹಿಳೆಯರ ಜೀವನ ಈಗ ಚದುರಿ ಹೋಗಿದೆ. ಬಟ್ಟೆಗಳಿಗೆ ಪ್ಯಾಚ್ ವರ್ಕ್ ಮಾಡುತ್ತಿದ್ದವರ ಬದುಕಿಗೆ ಈಗ ಅಲ್ಲಲ್ಲಿ ತೇಪೆ ಹಚ್ಚಿಕೊಳ್ಳುವಂತಾಗಿದೆ.
ಗಾರ್ಮೆಂಟ್ ಘಟಕಗಳ ಸಂಬಳದ ಮೇಲೆ ಅವಲಂಬಿತರಾಗಿದ್ದ ಹಲವು ಮಂದಿ ಮಹಿಳೆಯರು ಈಗ ಜೀವನ ನಿರ್ವಹಣೆಗಾಗಿ ಅಡುಗೆ ಕೆಲಸ, ಮನೆಕೆಲಸ, ಕೂಲಿ, ತರಕಾರಿ ವ್ಯಾಪಾರ ಹೀಗೆ ಅನೇಕ ವೃತ್ತಿಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮಹಿಳೆಯರು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ ಕಣ್ಣೀರಾಗುತ್ತಾರೆ.
ಗೌಡನಪಾಳ್ಯದ ಸುಮಾ 13 ವರ್ಷ ಗಾರ್ಮೆಂಟ್ ಘಟಕದಲ್ಲಿ ನೌಕರಿ ಮಾಡಿದವರು. ಕೊರೊನಾದಿಂದಾಗಿ ಫ್ಯಾಕ್ಟರಿ ಮುಚ್ಚಿತು. ಸಿಕ್ಕ ಅಲ್ಪ ಪಿಎಫ್ ಹಣದಲ್ಲಿ ನಾಲ್ಕೈದು ತಿಂಗಳು ಸಂಸಾರ ಸರಿದೂಗಿಸಿದ ಅವರೀಗ ನಿತ್ಯ ಎರಡು ಮನೆಗಳಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಾರೆ. ಮುಂಚೆ ಇಎಸ್‌ಐ ಸೌಲಭ್ಯವಿತ್ತು. ಆರೋಗ್ಯ ಸಮಸ್ಯೆಯಾದರೆ ನಿಭಾಯಿಸುತ್ತಿದ್ದೆ. ಆದರೆ, ಈಗ ಆ ಸೌಲಭ್ಯ ಇಲ್ಲದ್ದರಿಂದ ಸಣ್ಣಪುಟ್ಟ ಕಾಯಿಲೆಗೂ ₹1 ಸಾವಿರ ಖರ್ಚಾಗುತ್ತದೆ ಎನ್ನುವ ಆತಂಕ ಅವರದ್ದು.
‘ಗಾರ್ಮೆಂಟ್ ಫ್ಯಾಕ್ಟರಿಯಂತೆ ಇಲ್ಲಿ ನನಗೆ ನಿಗದಿತ ವೇತನ, ಪಿಎಫ್, ಇಎಸ್ಐ, ವಾರದ ರಜೆ ಅಂತೇನೂ ಸಿಗಲ್ಲ. ತಿಂಗಳಿಗೆ ಎರಡು ರಜೆ ಮಾತ್ರ. ಬೆಳಿಗ್ಗೆ 5.30ಕ್ಕೆ ಮನೆ ಬಿಟ್ಟರೆ ಮತ್ತೆ ಹಿಂತಿರುಗುವುದು ಮಧ್ಯಾಹ್ನ 2ಕ್ಕೆ. ಎರಡು ಮನೆಯವರು ಹೇಳಿದ ವಿವಿಧ ರೀತಿಯ ಅಡುಗೆ ಮಾಡುವೆ. ಗಂಟೆಗಟ್ಟಲೇ ನಿಂತು ಮಾಡಲಾಗದು. ಇದು ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ. ಬೆಳಿಗ್ಗೆ ಬೇಗ ಎದ್ದು ಮನೆಯಲ್ಲಿ ಅಡುಗೆ ಮಾಡಿಟ್ಟು ಇಲ್ಲಿಯೂ ಅಡುಗೆ ಮಾಡುವಷ್ಟರಲ್ಲಿ ಸಾಕುಸಾಕಾಗುತ್ತದೆ. ಕೋವಿಡ್ ಕಾರಣಕ್ಕಾಗಿ ಆಟೋದಲ್ಲಿ ಬನ್ನಿ ಬಸ್‌ನಲ್ಲಿ ಬರಬೇಡಿ ಅಂತಾರೆ. ಬರುವ ಸಂಬಳದಲ್ಲಿ ಆಟೋಕ್ಕೆ ಅರ್ಧ ಹಣ ಹೋದರೆ ಏನ್ ಮಾಡೋದು? ಸ್ಯಾನಿಟೈಸರ್, ಮಾಸ್ಕ್ ಹಾಕಿಕೊಂಡು ಕೆಲಸ ಮಾಡ್ತೀನಿ’ ಎಂದು ಸುಮಾ ತಮ್ಮ ಸ್ಥಿತಿಯನ್ನು ವಿವರಿಸುತ್ತಾರೆ.
ಮಕ್ಕಳು ಸರ್ಕಾರಿ ಶಾಲೆಗೆ, ಅಮ್ಮ ಕೂಲಿಗೆ
‘ನಾವಂತೂ ಓದಲಿಲ್ಲ. ಮಕ್ಕಳು ಚೆನ್ನಾಗಿ ಓದಲಿ ಎಂದು ಖಾಸಗಿ ಶಾಲೆಗೆ ಹಾಕಿದ್ದೆ. ಆದರೆ, ಗಾರ್ಮೆಂಟ್ ಕೆಲಸ ಹೋದ ಮೇಲೆ ಖಾಸಗಿ ಶಾಲೆಯ ಫೀಜು ಕಟ್ಟಲಾರದೇ ಮಕ್ಕಳನ್ನು ಹಳ್ಳಿಯ ಸರ್ಕಾರಿ ಶಾಲೆಗೆ ಹಾಕಿದ್ದೇನೆ. ಬೆಂಗಳೂರಿನಲ್ಲಿ ಮನೆ ಬಾಡಿಗೆ ಮತ್ತು ಇತರ ಖರ್ಚು ನಿಭಾಯಿಸಲು ಆಗಲಿಲ್ಲ. ವಾಪಸ್ ಹಳ್ಳಿಗೆ ಬಂದೆ. ಇಲ್ಲೇ ಕೂಲಿ ಕೆಲಸ ಮಾಡುತ್ತಿದ್ದೇನೆ. ಕೆಲಸವಿದ್ದರೆ ಮಾತ್ರ ದಿನಕ್ಕೆ ₹180 ಕೂಲಿ. ಇಲ್ಲಿ ಹೆಣ್ಣಾಳುಗಳಿಗೆ ಕಡಿಮೆ ಕೂಲಿ’ ಎಂದು ಬೇಸರಿಸಿದರು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ.
‘ಸಣ್ಣ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದರೆ ಹಣ ಹೆಚ್ಚು ಸಿಗುತ್ತೆ ಅಂತ ಪೀಸ್ ವರ್ಕ್ ಮಾಡುತ್ತಿದ್ದೆ. ಲಾಕ್‌ಡೌನ್‌ನಲ್ಲಿ ಮುಚ್ಚಿದ ಫ್ಯಾಕ್ಟರಿ ಮತ್ತೆ ತೆರೆಯಲಿಲ್ಲ. ಈ ಸಲದ ದಸರಾ ಹಬ್ಬಕ್ಕೆ ಮಕ್ಕಳಿಗೆ ಸಿಹಿಯೂಟ ಮಾಡಲಾರದೇ ಮ್ಯಾಗಿ ಪ್ಯಾಕೆಟ್ ಕೊಟ್ಟು ಮಲಗಿಸಿದೆ’ ಎಂದು ಕಣ್ಣೀರಾದರು ಸುಶೀಲಮ್ಮ.
ಮನೆ ಬಾಡಿಗೆ, ರೇಷನ್, ತರಕಾರಿ...
ಇಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಮಹಿಳೆಯರು ಕೆಲಸವೂ ಇಲ್ಲದೇ ಬರಬೇಕಾದ ಬಾಕಿ ಹಣವೂ ಬಾರದೇ ಒದ್ದಾಡುವಂತಾಗಿದೆ. ಮನೆ ಬಾಡಿಗೆ ಕಟ್ಟಲು ಹಣವಿಲ್ಲದೇ ಬಹುತೇಕರು ಮನೆ ಖಾಲಿ ಮಾಡಿಕೊಂಡು ಹಳ್ಳಿಗಳತ್ತ ಮುಖ ಮಾಡಿದ್ದಾರೆ. ತಿಂಗಳ ರೇಷನ್‌ಗಾಗಿ ಪಡಿತರ ಅಂಗಡಿಗಳ ಮೊರೆ ಹೊಕ್ಕಿದ್ದಾರೆ. ಹಿಂದೆ ತರಕಾರಿಗಳನ್ನು ಯಥೇಚ್ಛವಾಗಿ ಖರೀದಿಸುತ್ತಿದ್ದವರು ಕೈಬಿಗಿ ಮಾಡತೊಡಗಿದ್ದಾರೆ. ಖರ್ಚು ಕಡಿಮೆ ಮಾಡುವ ನಾನಾ ವಿಧಾನಗಳಿಗೆ ಮೊರೆ ಹೊಕ್ಕಿದ್ದಾರೆ.
ಸಂಕಷ್ಟದಲ್ಲಿ ಸಣ್ಣ ಘಟಕಗಳು
‘ರಾಜ್ಯದಲ್ಲಿ ದೊಡ್ಡ ಫ್ಯಾಕ್ಟರಿಗಳಿಗಿಂತ ಸಣ್ಣ ಫ್ಯಾಕ್ಟರಿಗಳೇ ಹೆಚ್ಚು. ಇಲ್ಲಿ ಪೀಸ್ ಲೆಕ್ಕದಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದರು. ದೊಡ್ಡ ಫ್ಯಾಕ್ಟರಿಗಳು ಪಿಎಫ್ ಮುರಿದು ಸಂಬಳ ಕೊಡುತ್ತವೆ ಅನ್ನುವ ಕಾರಣಕ್ಕಾಗಿ ಅನೇಕ ಮಹಿಳೆಯರು ಒಂದೆರಡು ಸಾವಿರ ರೂಪಾಯಿ ಹೆಚ್ಚಿನ ಹಣದ ಆಸೆಯಿಂದ ಪೀಸ್ ವರ್ಕ್ ಮಾಡುತ್ತಿದ್ದರು. ಈಗ ಇವರೆಲ್ಲ ಕೆಲಸ ಕಳೆದುಕೊಂಡಿದ್ದಾರೆ. ಕೆಲ ಒಂಟಿ ತಾಯಂದಿರಿಗೆ ರೇಷನ್ ಇರಲಿ, ತಮ್ಮ ಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಕೊಡಿಸಲೂ ಸಾಧ್ಯವಾಗದಷ್ಟು ಕಷ್ಟವಿದೆ. ಕೆಲವು ಕುಟುಂಬಗಳಿಗೆ ಮೂರು–ನಾಲ್ಕು ತಿಂಗಳ ಕಾಲ ಆಹಾರದ ಕಿಟ್ ಒದಗಿಸಿದೆವು. ಆದರೆ, ಎಲ್ಲರಿಗೂ ಸಹಾಯ ಮಾಡಲು ಆಗಲಿಲ್ಲ. ಸಣ್ಣ ಫ್ಯಾಕ್ಟರಿಗಳು ಚೇತರಿಸಿಕೊಳ್ಳಲಾರದ ಸ್ಥಿತಿ ತಲುಪಿವೆ. ಮಳಿಗೆ ಬಾಡಿಗೆ ಕಟ್ಟಲಾರದೇ ಅನೇಕರು ಫ್ಯಾಕ್ಟರಿ ಬಂದ್ ಮಾಡಿದ್ದಾರೆ’ ಎಂದು ವಿಶ್ಲೇಷಿಸುತ್ತಾರೆ ಮುನ್ನಡೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಯಶೋದಾ ಪಿ.ಎಚ್.
‘ಬ್ಯಾಂಕಿನಲ್ಲಿ ಸಾಲ ಮಾಡಿ ತುಮಕೂರಿನಲ್ಲಿ ಸಣ್ಣ ಗಾರ್ಮೆಂಟ್ ಫ್ಯಾಕ್ಟರಿ ಮಾಡಿದ್ದೇನೆ. ಶಾಲಾ–ಕಾಲೇಜು ಮಕ್ಕಳ ಸಮವಸ್ತ್ರ ಹೊಲಿಯುವ ಕೆಲಸವನ್ನು 50 ಮಹಿಳೆಯರು ಮಾಡುತ್ತಿದ್ದರು. ಆರಂಭದಲ್ಲೇ ನೋಟು ಅಮಾನ್ಯೀಕರಣದಿಂದ ನಷ್ಟವಾಗಿತ್ತು. ಹೇಗೋ ಸುಧಾರಿಸಿಕೊಳ್ಳುವಷ್ಟರಲ್ಲಿ ಕೋವಿಡ್ ಭಾರಿ ಹೊಡೆತ ನೀಡಿತು. ಶಾಲೆಗಳು ಆರಂಭವಾಗದ ಹೊರತು ನಮಗೆ ಕೆಲಸವಿಲ್ಲ. ಸಾಲ ತೀರಿಸಲು ಆಗುತ್ತಿಲ್ಲ, ಬಡ್ಡಿ ಬೆಳೆಯುತ್ತಿದೆ. ಉದ್ಯಮ ಆರಂಭಿಸಿದಾಗ ನೀನು ಹೆಣ್ಣು ಯಶಸ್ವಿಯಾಗಲ್ಲ ಅಂತ ಆಡಿಕೊಂಡಿದ್ದವರ ಬಾಯಿಗೆ ಸಿಲುಕುವಂತಾಗಿದೆ’ ಎಂದು ನಿಟ್ಟುಸಿರುಬಿಟ್ಟರು ಮಹಿಳಾ ಉದ್ಯಮಿಯೊಬ್ಬರು.
‘ಕೆಲಸ ಮತ್ತೆ ಆರಂಭಿಸಿದ್ದೇವೆ. ಆದರೆ, ಮೊದಲಿನಷ್ಟು ಬೇಡಿಕೆ ಇಲ್ಲ. ದರವೂ ಕಮ್ಮಿಯಾಗಿದೆ. ನಮ್ಮಲ್ಲಿ 25 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಂಬಳ ತಪ್ಪಿಸಿಲ್ಲ. ಕಟ್ಟಡದ ಬಾಡಿಗೆ ಪಾವತಿಸಿಲ್ಲ. ಇನ್ನೂ ಮೂರು–ನಾಲ್ಕು ತಿಂಗಳು ಕಳೆದರೆ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ’ ಅನ್ನುತ್ತಾರೆ ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಸಣ್ಣ ಗಾರ್ಮೆಂಟ್ ಫ್ಯಾಕ್ಟರಿಯ ಮಾಲೀಕರೊಬ್ಬರು.
ಕನಿಷ್ಠ ಆದಾಯದ ಬೆಂಬಲ ನೀಡಿ: ತಜ್ಞರ ಶಿಫಾರಸು
ವಲಸೆ ಕಾರ್ಮಿಕರ ಸಂಕಟವನ್ನು ಹೋಗಲಾಡಿಸಲು ಸರ್ಕಾರ ಹಾಕಿಕೊಳ್ಳಬೇಕಾದ 15 ಅಂಶಗಳ ಕಾರ್ಯಕ್ರಮದ ಪಟ್ಟಿಯನ್ನು ಇತಿಹಾಸಕಾರ ರಾಮಚಂದ್ರ ಗುಹಾ, ಶಿಕ್ಷಣ ತಜ್ಞರಾದ ಪ್ರೊ. ವಿನೋದ್ ಗೌರ್, ಪ್ರೊ. ರಾಮೇಶ್ವರಿ ವರ್ಮ, ಪ್ರೊ. ಅಮಿತ್ ಭಸೋಲೆ,
ಪ್ರೊ. ದೀಪಕ್ ಮಲಘಾಣ, ಪ್ರೊ.ಟಿ.ವಿ. ರಾಮಚಂದ್ರ ಮತ್ತಿತರರು ಸಿದ್ಧಪಡಿಸಿದ್ದರು.
‘ಸಿದ್ಧ ಉಡುಪುಗಳ ತಯಾರಿಕಾ ವಲಯದಲ್ಲಿ 4.5 ಲಕ್ಷ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ರಫ್ತು ಬೇಡಿಕೆಗಳು ಕಡಿಮೆಯಾದರೆ ಈ ಬಲುದೊಡ್ಡ ಕಾರ್ಮಿಕ ವರ್ಗದ ಜೀವ-ಜೀವನೋಪಾಯಗಳಿಗೆ ತೀವ್ರ ಹಿನ್ನಡೆಯಾಗುತ್ತದೆ. ಆದ್ದರಿಂದ ಗಾರ್ಮೆಂಟ್ ಉದ್ಯಮಕ್ಕೆ ವಿಶೇಷ ಯೋಜನೆಯನ್ನು ರೂಪಿಸಿ ಈ ವರ್ಗಕ್ಕೆ ಕನಿಷ್ಠ ಆದಾಯದ ಬೆಂಬಲವನ್ನು ನೀಡಬೇಕು’ ಎಂದು ತಜ್ಞರು ಶಿಫಾರಸು ಮಾಡಿದ್ದರು.
ಸಾರಿಗೆ ತಂದಿಟ್ಟ ನಿರುದ್ಯೋಗ
‘ಬೆಂಗಳೂರಿನ ಸಿದ್ಧ ಉಡುಪು ಘಟಕಗಳಿಗೆ ನಾನಾ ಕಡೆಗಳಿಂದ ಕೆಲಸಕ್ಕೆ ಬರುತ್ತಿದ್ದ ಮಹಿಳೆಯರಿಗೆ ಕೆಲ ಕಂಪನಿಗಳು ಸ್ವಂತ ಖರ್ಚಿನಲ್ಲೇ ಬಸ್‌ಗಳ ವ್ಯವಸ್ಥೆ ಕಲ್ಪಿಸಿದ್ದವು. ಕೋವಿಡ್ ಅಂತರ ಪಾಲಿಸುವಿಕೆ ಮಾರ್ಗಸೂಚಿ ಪಾಲನೆಗಾಗಿ ಹಲವು ಕಂಪನಿಗಳು ಸಾರಿಗೆ ವ್ಯವಸ್ಥೆಯನ್ನೇ ಕೈಬಿಟ್ಟವು. ಈಗಿನ ಸನ್ನಿವೇಶದಲ್ಲಿ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸುವುದು ಕೂಡ ಅಪಾಯವೇ. ಹಾಗಾಗಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಹಲವು ಮಹಿಳೆಯರು ಕೆಲಸಕ್ಕೆ ಹೋಗುವುದು ಸಾಧ್ಯವಾಗುತ್ತಿಲ್ಲ. ಸೋಂಕಿನ ಭೀತಿಯ ನಡುವೆಯೇ ರಿಸ್ಕ್ ತೆಗೆದುಕೊಂಡು ಸ್ವಂತ ವಾಹನ, ಲಗೇಜ್ ಆಟೋರಿಕ್ಷಾ, ಟೆಂಪೊಗಳಲ್ಲಿ ಪ್ರಯಾಣಿಸಿ ಕೆಲವರು ನೌಕರಿ ಉಳಿಸಿಕೊಳ್ಳಲು ಯತ್ನಿಸಿದರು. ಕೆಲಸ ಕಳೆದುಕೊಂಡವರ ಜಾಗಕ್ಕೆ ಕಂಪನಿಗಳು ಕಡಿಮೆ ವೇತನದಲ್ಲಿ ಹೊಸಬರನ್ನು ನೇಮಿಸಿಕೊಂಡಿವೆ’ ಎನ್ನುತ್ತಾರೆ ಗಾರ್ಮೆಂಟ್ ಅಂಡ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್‌ನ ಅಧ್ಯಕ್ಷೆ ಪ್ರತಿಭಾ ಆರ್.
ಆರ್ಥಿಕ ಸ್ವಾವಲಂಬನೆಗೆ ಹೊಡೆತ
‘ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಒಂದು ಹಂತಕ್ಕೆ ಆರ್ಥಿಕ ಸ್ವಾವಲಂಬನೆ ಹೊಂದಿದ್ದರು. ಕೋವಿಡ್‌ನಿಂದಾಗಿ ಕೆಲಸ ಕಳೆದುಕೊಂಡಿರುವ ಈ ಮಹಿಳೆಯರು ಈಗ ಸಣ್ಣಪುಟ್ಟ ಖರ್ಚಿಗೂ ಗಂಡ, ಮಕ್ಕಳ ಮುಂದೆ ಕೈಚಾಚುವಂತಾಗಿದೆ. ಕೆಲವರು ತಮ್ಮ ಅಲ್ಪಸಂಬಳದಲ್ಲೇ ಸಾಲ ಮಾಡಿ ಮನೆಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಖರೀದಿಸಿದ್ದರು. ಈಗ ಅವರಿಗೆ ಬಾಕಿ ತೀರಿಸಲಾಗುತ್ತಿಲ್ಲ. ಆದಾಯ ತರುತ್ತಾಳೆಂಬ ಕಾರಣಕ್ಕೆ ಮನೆಯಲ್ಲಿ ಇವರಿಗೆ ಗೌರವ ಸಿಗುತ್ತಿತ್ತು. ಈಗ ಆದಾಯವಿಲ್ಲದೆ ಕೌಟುಂಬಿಕ ದೌರ್ಜನ್ಯದ ಪ್ರಕರಣಗಳೂ ವರದಿಯಾಗುತ್ತಿವೆ’ ಎನ್ನುತ್ತಾರೆ ಈ ಮಹಿಳೆಯರ ಕುರಿತು, ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ಸಂಘಟನೆ ಮುನ್ನಡೆ ಜೊತೆ ಸೇರಿ ಸಮೀಕ್ಷೆ ನಡೆಸಿರುವ ಆಲ್ಟರ್‌ನೇಟಿವ್ ಲಾ ಫೋರಂನ ಕಾರ್ಯಕರ್ತೆ ಸ್ವಾತಿ ಶಿವಾನಂದ್.
‘ಬೊಮ್ಮನಹಳ್ಳಿ, ಪೀಣ್ಯ ಮತ್ತು ಮೈಸೂರು ರಸ್ತೆಯ ಸುತ್ತಮುತ್ತಲಿನ 26 ಫ್ಯಾಕ್ಟರಿಗಳಲ್ಲಿ 12 ಫ್ಯಾಕ್ಟರಿಗಳು ಮುಚ್ಚಿಹೋಗಿವೆ. ಕೆಲ ಫ್ಯಾಕ್ಟರಿಗಳು ನೌಕರರಿಂದ ಬಲವಂತವಾಗಿ ರಾಜೀನಾಮೆ ಪಡೆದು, ಕಡಿಮೆ ವೇತನಕ್ಕೆ ಪುನಃ ಅವರನ್ನೇ ನೇಮಿಸಿಕೊಂಡಿವೆ. ಸಾಮಾನ್ಯವಾಗಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳೆಯರ ಗಂಡಂದಿರು ಆಟೋ ಓಡಿಸುವುದು, ಗಾರೆ ಕೆಲಸ, ಕೂಲಿ ಕೆಲಸ ಇತ್ಯಾದಿ ಕೆಲಸ ಮಾಡುತ್ತಾರೆ. ಕೆಲ ಕುಟುಂಬಗಳಲ್ಲಿ ಗಂಡಸರಿಗೂ ಕೆಲಸವಿಲ್ಲ. ಏಕಾಏಕಿ ಕುಟುಂಬದ ಆದಾಯ ಕಡಿಮೆಯಾಗಿದ್ದರಿಂದ ಅವರಲ್ಲಿ ನಿತ್ಯದ ಅಗತ್ಯ ವಸ್ತು ಖರೀದಿಸುವ ಸಾಮರ್ಥ್ಯವೂ ಕುಸಿದಿದೆ’ ಎಂದು ವಿಶ್ಲೇಷಿಸುತ್ತಾರೆ ಅವರು.
ಚೇತರಿಸಿಕೊಳ್ಳುವ ನಿರೀಕ್ಷೆ
‘ರಾಜ್ಯದಲ್ಲಿ ಗಾರ್ಮೆಂಟ್ಸ್ ಮತ್ತು ಜವಳಿ ಉದ್ಯಮದಲ್ಲಿ ಸುಮಾರು 8ರಿಂದ 10 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು. ಅವರ ಪೈಕಿ ಶೇ 35ರಿಂದ 40ರಷ್ಟು ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ.ಸರ್ಕಾರಿ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ 800 ಘಟಕಗಳಿವೆ. ಒಂದು ಅಂದಾಜಿನ ಪ್ರಕಾರ ಬೆಂಗಳೂರಿನಲ್ಲೇ 40ಕ್ಕೂ ಹೆಚ್ಚು ಫ್ಯಾಕ್ಟರಿಗಳು ಮುಚ್ಚಿಹೋಗಿವೆ. ದೊಡ್ಡ ಫ್ಯಾಕ್ಟರಿಗಳು ತಯಾರಿಸಿಟ್ಟಿದ್ದ ಸರಕುಗಳನ್ನು ರಫ್ತು ಮಾಡಲಾರದೇ ಎರಡು ತಿಂಗಳು ಸಂಕಷ್ಟಕ್ಕೀಡಾದವು. ಲಾಕ್‌ಡೌನ್ ಘೋಷಣೆ ಒಂದು ವಾರ ತಡವಾಗಿ ಆಗಿದ್ದರೆ ಇಷ್ಟು ನಷ್ಟವಾಗುತ್ತಿಲಿಲ್ಲ. ಕೆಲವರ ಕೆಲಸವಾದರೂ ಉಳಿಯುತ್ತಿತ್ತು’ ಎನ್ನುತ್ತಾರೆ ಗಾರ್ಮೆಂಟ್ಸ್ ಮತ್ತು ಟೆಕ್ಸ್‌ಟೈಲ್ಸ್ ಕಾರ್ಮಿಕರ ಸಂಘಟನೆಯ ಮುಖಂಡ ಜಯರಾಂ ಕೆ.ಆರ್.
‘ಕೆಲವು ಫ್ಯಾಕ್ಟರಿಗಳು ಪುನರಾರಂಭಗೊಂಡಿವೆ. ಕೆಲ ದೊಡ್ಡ ಫ್ಯಾಕ್ಟರಿಗಳು ತಮ್ಮ ನೌಕರರಿಗೆ ಲಾಕ್‌ಡೌನ್ ಅವಧಿಯಲ್ಲೂ ಸಂಬಳ ನೀಡಿವೆ. ಮೈಸೂರು ರಸ್ತೆಯ ಗಾರ್ಮೆಂಟ್‌ವೊಂದರಲ್ಲಿ ಸುಮಾರು 1,400 ಮಂದಿಗೆ 104 ಗಂಟೆಗಳ ಓಟಿ ಹಣವನ್ನು ಕೊಡಿಸಿದೆವು. ಶ್ರೀರಂಗಪಟ್ಟಣದಲ್ಲಿ ದೊಡ್ಡ ಫ್ಯಾಕ್ಟರಿಯೊಂದರಲ್ಲಿ 1,300 ನೌಕರರ ಪೈಕಿ 538 ಮಂದಿ ಸೆಟ್ಲ್‌ಮೆಂಟ್ ಮಾಡಿಕೊಂಡರು. ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ₹5 ಸಾವಿರ ಪ್ಯಾಕೇಜ್ ನೀಡಿತು. ಆದರೆ, ಈ ಮಹಿಳೆಯರಿಗೆ ಯಾವ ಪ್ಯಾಕೇಜೂ ಘೋಷಣೆಯಾಗಲಿಲ್ಲ. ಮುಂಬರುವ ಜನವರಿಯಿಂದ ಮಾರ್ಚ್‌ನ ತನಕ ಹೊಸ ಸೀಸನ್ ಆರಂಭವಾಗುವ ಸಾಧ್ಯತೆ ಇದೆ. ಗಾರ್ಮೆಂಟ್ ಉದ್ಯಮ ಜನವರಿ ನಂತರ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.