ADVERTISEMENT

ಆಳ-ಅಗಲ | ಹುಲಿ ಸಂಖ್ಯೆ ಏರಿಕೆ–ಇಳಿಕೆಯ ಸುತ್ತ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2023, 0:30 IST
Last Updated 2 ಆಗಸ್ಟ್ 2023, 0:30 IST
   

ದೇಶದಲ್ಲಿನ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂಬುದನ್ನು 2022ನೇ ಸಾಲಿನ ಹುಲಿ ಸ್ಥಿತಿಗತಿ ವರದಿ ಹೇಳುತ್ತದೆ. ದೇಶದ ಕೆಲವೇ ರಾಜ್ಯಗಳಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದ್ದರೆ, ಹಲವು ರಾಜ್ಯಗಳಲ್ಲಿ ಹುಲಿಗಳ ಸಂಖ್ಯೆ ಇಳಿಕೆಯಾಗಿದೆ. ಮಧ್ಯಪ್ರದೇಶ ಮತ್ತು ಉತ್ತರಾಖಂಡದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದ್ದರೆ, ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಸ್ವಲ್ಪ ಏರಿಕೆಯಾಗಿದೆ. ಒಡಿಶಾ, ತೆಲಂಗಾಣ, ಜಾರ್ಖಂಡ್‌, ಛತ್ತೀಸಗಢದಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗಿದೆ. ಹೀಗೆ ಪ್ರತಿ ರಾಜ್ಯದಲ್ಲೂ ಹುಲಿಗಳ ಸ್ಥಿತಿಗತಿ ಸಂಪೂರ್ಣ ಭಿನ್ನವಾಗಿದೆ.

ಕೇಂದ್ರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ವಿಶ್ವ ಹುಲಿ ದಿನದಂದು (ಜುಲೈ 28) ಬಿಡುಗಡೆ ಮಾಡಿದ ಹುಲಿ ಸ್ಥಿತಿಗತಿ ವರದಿಯಲ್ಲಿ ಈ ಮಾಹಿತಿ ಇದೆ. ದೇಶದಲ್ಲಿನ ಹುಲಿಗಳ ಅಂದಾಜು ಸಂಖ್ಯೆ 2,967ರಿಂದ (2018) 2022ರ ವೇಳೆಗೆ 3,682ಕ್ಕೆ ಏರಿಕೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹೀಗಿದ್ದೂ ಕೆಲವೆಡೆ ಹುಲಿಗಳ ಸಂಖ್ಯೆ ಏರಿಕೆಯಾಗಿದ್ದು ಏಕೆ ಮತ್ತು ಕೆಲವೆಡೆ ಹುಲಿಗಳ ಸಂಖ್ಯೆ ಕಡಿಮೆಯಾಗಿದ್ದು ಏಕೆ ಎಂಬುದನ್ನು ವಿವರಿಸಲು ವರದಿಯಲ್ಲಿ ಯತ್ನಿಸಲಾಗಿದೆ.

ಮಧ್ಯಪ್ರದೇಶ

ADVERTISEMENT

308; 2014ರಲ್ಲಿ ಹುಲಿಗಳ ಸಂಖ್ಯೆ

526; 2018ರಲ್ಲಿ ಹುಲಿಗಳ ಸಂಖ್ಯೆ

785; 2022ರಲ್ಲಿ ಹುಲಿಗಳ ಸಂಖ್ಯೆ

ಮಧ್ಯಪ್ರದೇಶವು ಈಗ ದೇಶದಲ್ಲೇ ಅತಿಹೆಚ್ಚು ಹುಲಿಗಳಿರುವ ರಾಜ್ಯ ಎನಿಸಿದೆ. 2014ಕ್ಕೆ ಹೋಲಿಸಿದರೆ 2022ರ ವೇಳೆಗೆ ರಾಜ್ಯದಲ್ಲಿನ ಹುಲಿಗಳ ಸಂಖ್ಯೆ ದುಪ್ಪಟ್ಟಿಗಿಂತಲೂ ಹೆಚ್ಚು ಏರಿಕೆಯಾಗಿದೆ. ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ಹುಲಿಗಳ ಸಂಖ್ಯೆಯಲ್ಲಿ 200ಕ್ಕಿಂತಲೂ ಹೆಚ್ಚು ಏರಿಕೆ ಕಂಡುಬಂದಿದೆ. ಈ ಏರಿಕೆ ಪ್ರಮಾಣದಲ್ಲಿ ಮಧ್ಯಪ್ರದೇಶವು ಸ್ಥಿರತೆ ಕಾಯ್ದುಕೊಂಡಿದೆ. 

* ರಾಜ್ಯದಲ್ಲಿ ಹುಲಿ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ ಮತ್ತು ಹುಲಿ ಸಂರಕ್ಷಣಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ಕಾರಣದಿಂದಲೇ ಹುಲಿಗಳ ಸಂಖ್ಯೆ ಏರಿಕೆಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ

* ರಾಜ್ಯದಲ್ಲಿ ಹುಲಿ ಆವಾಸಸ್ಥಾನಗಳು, ಹುಲಿ ಸಂರಕ್ಷಿತ ಪ್ರದೇಶಗಳ ಮಧ್ಯೆ ವನ್ಯಜೀವಿ ಕಾರಿಡಾರ್‌ಗಳನ್ನು ಕಾಯ್ದುಕೊಳ್ಳಲಾಗಿದೆ. ಇದರಿಂದ ಹುಲಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚರಿಸಲು ಮತ್ತು ವಲಸೆ ಹೋಗುವಲ್ಲಿ ಯಾವುದೇ ತೊಡಕುಗಳಿಲ್ಲ. ಹೀಗಾಗಿ ಹುಲಿಗಳು ರಾಜ್ಯದ ಹಲವು ಪ್ರದೇಶಗಳಿಗೆ ತಮ್ಮ ಆವಾಸಸ್ಥಾನವನ್ನು ವಿಸ್ತರಿಸಿಕೊಳ್ಳುತ್ತಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ

* ರಾಜ್ಯದ ಹುಲಿ ಸಂರಕ್ಷಿತ ಪ್ರದೇಶ, ಅವುಗಳ ಹೊರವಲಯದಲ್ಲಿ ಇರುವ ಜನವಸತಿ ಪ್ರದೇಶಗಳನ್ನು ತೆರವು ಮಾಡಲಾಗುತ್ತಿದೆ. ಆ ಜನರಿಗೆ ಪುನರ್ವಸತಿ ಕಲ್ಪಿಸಲಾಗುತ್ತಿದೆ. ಇದರಿಂದ ಹುಲಿ–ಮಾನವ ಸಂಘರ್ಷವನ್ನು ತಡೆಹಿಡಿಯಲು ಸಾಧ್ಯವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಉತ್ತರಾಖಂಡ

340; 2014ರಲ್ಲಿ ಹುಲಿಗಳ ಸಂಖ್ಯೆ

442; 2018ರಲ್ಲಿ ಹುಲಿಗಳ ಸಂಖ್ಯೆ

560; 2022ರಲ್ಲಿ ಹುಲಿಗಳ ಸಂಖ್ಯೆ

2018ರಿಂದ 2022ರ ಮಧ್ಯೆ ಹುಲಿ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆ ಖಂಡ ರಾಜ್ಯಗಳಲ್ಲಿ ಉತ್ತರಾಖಂಡವೂ ಒಂದು. ಈ ಅವಧಿಯಲ್ಲಿ ರಾಜ್ಯದಲ್ಲಿನ ಹುಲಿಗಳ ಸಂಖ್ಯೆಯು 118ರಷ್ಟು ಏರಿಕೆ ಕಂಡಿವೆ. ಈಗ ಅಂದಾಜು 560 ಹುಲಿಗಳಿರುವ ಉತ್ತರಾಖಂಡವು, ಅತಿಹೆಚ್ಚು ಹುಲಿಗಳಿರುವ ರಾಜ್ಯಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಅತಿಹೆಚ್ಚು ಹುಲಿಗಳಿರುವ ಕರ್ನಾಟಕಕ್ಕಿಂತ ಉತ್ತರಾಖಂಡದಲ್ಲಿ 3 ಹುಲಿಗಳಷ್ಟೇ ಕಡಿಮೆ ಇವೆ ಎಂದು ಅಂದಾಜಿಸಲಾಗಿದೆ.

* ರಾಜ್ಯದಲ್ಲಿ ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ಹುಲಿ ಆವಾಸಸ್ಥಾನಗಳ ನಡುವಣ ವನ್ಯಜೀವಿ ಕಾರಿಡಾರ್‌ಗಳನ್ನು ಉತ್ಕೃಷ್ಟಮಟ್ಟದಲ್ಲಿ ಸಂರಕ್ಷಿಸಲಾಗಿದೆ. ಇದರಿಂದ ಹುಲಿಗಳ ಸಂಚಾರ ಮತ್ತು ವಲಸೆಗೆ ಅಡೆತಡೆಗಳು ಇಲ್ಲ. ಇದೂ ಹುಲಿಗಳ ಸಂಖ್ಯೆ ಏರಿಕೆಯಾಗಲು ಕಾರಣವಾಗಿದೆ

* ಹುಲಿ ಆವಾಸಸ್ಥಾನದಲ್ಲಿ ಮಾನವ ಚಟುವಟಿಕೆಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ. ಇದರಿಂದ ಈ ಪ್ರದೇಶಗಳಲ್ಲಿ ಬಲಿ ಪ್ರಾಣಿಗಳ ಸಾಂದ್ರತೆ ಹೆಚ್ಚಾಗಿದೆ. ಪರಿಣಾಮವಾಗಿ ಹುಲಿಗಳ ಸಂಖ್ಯೆಯೂ ಹೆಚ್ಚಾಗಿದೆ

* ಉತ್ತರಾಖಂಡದ ಕೆಲವು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪ್ರತಿ 100 ಚದರ ಕಿ.ಮೀ.ಗಳಲ್ಲಿ ಇರುವ ಹುಲಿ ಸಾಂದ್ರತೆ 15ರಷ್ಟಿದೆ. ಇದು ದೇಶದಲ್ಲಿಯೇ ಹೆಚ್ಚು

* ಯೋಜಿತವಲ್ಲದ ನಗರಾಭಿವೃದ್ಧಿಯನ್ನು ತಡೆಗಟ್ಟಿದರೆ ರಾಜ್ಯದಲ್ಲಿನ ಹುಲಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.

ಮಹಾರಾಷ್ಟ್ರ

190;2014

312;2018

444;2022

ಈ ನಾಲ್ಕು ವರ್ಷಗಳ ಅವಧಿಯಲ್ಲಿ ಹುಲಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಒಂದು. 2018ರಿಂದ 2022ರ ಮಧ್ಯೆ ಮಹಾರಾಷ್ಟ್ರದಲ್ಲಿ ಹುಲಿಗಳ ಸಂಖ್ಯೆಯಲ್ಲಿ 134ರಷ್ಟು ಏರಿಕೆಯಾಗಿದೆ. ಹುಲಿಗಳ ಸಂಖ್ಯೆಯಲ್ಲಿನ ಏರಿಕೆಯಲ್ಲಿ ಮಹಾರಾಷ್ಟ್ರ ಸ್ಥಿರತೆ ಕಾಯ್ದುಕೊಂಡಿದೆ. ಯೋಜಿತವಲ್ಲದ ಅಭಿವೃದ್ಧಿ ಚಟುವಟಿಕೆಗಳು,  ಅರಣ್ಯ ಪ್ರದೇಶದಲ್ಲಿ ಹೆದ್ದಾರಿ, ವಿದ್ಯುತ್‌ಲೇನ್‌,  ಗಣಿಗಾರಿಕೆಯನ್ನು ನಿಯಂತ್ರಿಸಿದರೆ ಮತ್ತು ಅರಣ್ಯ ಪ್ರದೇಶಗಳಲ್ಲಿನ ಜನವಸತಿಗಳ ತೆರವು ಮಾಡಿದರೆ ಹುಲಿಗಳಸಂಖ್ಯೆ ಇನ್ನಷ್ಟು ಏರಿಕೆಯಾಗಲಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಕರ್ನಾಟಕ

300;2010

406;2014

524;2018

563;2022

ಅತಿಹೆಚ್ಚು ಹುಲಿಗಳಿರುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕವು, ಹುಲಿಗಳ ಸಂಖ್ಯೆಯಲ್ಲಿನ ಏರಿಕೆಯಲ್ಲಿ ತೀರಾ ದೊಡ್ಡಮಟ್ಟದ ಪ್ರಗತಿಯನ್ನು ಸಾಧಿಸಿಲ್ಲ. ಹುಲಿಗಳ ಸಂಖ್ಯೆ ಏರಿಕೆಯಲ್ಲಿ ಕರ್ನಾಟಕವು ಸ್ಥಿರತೆ ಕಾಯ್ದುಕೊಂಡಿಲ್ಲ ಎಂಬುದರತ್ತ ಹುಲಿಗಣತಿ ವರದಿಗಳ ದತ್ತಾಂಶಗಳು ಬೊಟ್ಟು ಮಾಡುತ್ತವೆ

* ರಾಜ್ಯದಲ್ಲಿ 2014ರಲ್ಲಿ 406 ಹುಲಿಗಳಿದ್ದವು ಎಂದು ಅಂದಾಜಿಸಲಾಗಿತ್ತು. 2018ರ ವೇಳೆಗೆ, ನಾಲ್ಕು ವರ್ಷಗಳಲ್ಲಿ ಹುಲಿಗಳ ಸಂಖ್ಯೆಯಲ್ಲಿ 118ರಷ್ಟು ಏರಿಕೆ ಕಂಡುಬಂದಿತ್ತು. 2010ಕ್ಕೆ ಹೋಲಿಸಿದರೆ 2014ರಲ್ಲಿ ಹುಲಿಗಳ ಸಂಖ್ಯೆಯಲ್ಲಿ 106ರಷ್ಟು ಏರಿಕೆಯಾಗಿತ್ತು

* 2010–2018ರ ಮಧ್ಯೆ ಹುಲಿಗಳ ಸಂಖ್ಯೆಯ ಏರಿಕೆಯಲ್ಲಿ ಸಾಧ್ಯವಾಗಿದ್ದ ಪ್ರಗತಿಯನ್ನು, 2018–2022ರ ಅವಧಿಯಲ್ಲಿ ಕಾಯ್ದುಕೊಳ್ಳುವಲ್ಲಿ ಕರ್ನಾಟಕ ವಿಫಲವಾಗಿದೆ. ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದರೂ, ನಾಲ್ಕು ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು 39 ಮಾತ್ರ

* ಹುಲಿ ಸಂರಕ್ಷಿತ ಪ್ರದೇಶಗಳ ನಡುವಣ ವನ್ಯಜೀವಿ ಕಾರಿಡಾರ್‌ಗಳನ್ನು ಕಾಯ್ದುಕೊಳ್ಳದೇ ಇರುವುದು, ಹುಲಿ ಸಂರಕ್ಷಿತ ಪ್ರದೇಶಗಳನ್ನು ಹಾದುಹೋಗುವ ಹೆದ್ದಾರಿಗಳ ವಿಸ್ತರಣೆ, ಹುಲಿ ಸಂರಕ್ಷಿತ ಪ್ರದೇಶಗಳ ಸುತ್ತಲಿನ ಪ್ರದೇಶಗಳಲ್ಲಿ ಅನಿಯಂತ್ರಿತ ಅಭಿವೃದ್ಧಿ ಚಟುವಟಿಕೆಗಳು ಹುಲಿಗಳ ಸಂಖ್ಯೆ ಏರಿಕೆಗೆ ತಡೆಯಾಗಿದೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ತೆಲಂಗಾಣ

26;2018

21;2022

* ಅಭಿವೃದ್ಧಿ ಚಟುವಟಿಕೆಗಳ ಕಾರಣದಿಂದ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪಕ್ಕದ ಮಹಾರಾಷ್ಟ್ರದತ್ತ ಹುಲಿಗಳು ವಲಸೆ ಹೋಗಿರುವ ಸಾಧ್ಯತೆ ಇದೆ

ಛತ್ತೀಸಗಡ

19;2018

17;2022

* ಅಭಿವೃದ್ಧಿ ಚಟುವಟಿಕೆಗಳ ಕಾರಣದಿಂದ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪಕ್ಕದ ಮಹಾರಾಷ್ಟ್ರ, ಮಧ್ಯಪ್ರದೇಶದತ್ತ ಹುಲಿಗಳು ವಲಸೆ ಹೋಗಿರುವ ಸಾಧ್ಯತೆ ಇದೆ

ಜಾರ್ಖಂಡ್‌

5;2018

1;2022

* ಜಾರ್ಖಂಡ್‌ನಲ್ಲಿ ಹುಲಿ ಆವಾಸಸ್ಥಾನ ವಿಸ್ತೃತವಾಗಿದ್ದರೂ, ಅತಿಯಾದ ಅಭಿವೃದ್ಧಿ ಚಟುವಟಿಕೆಗಳ ಕಾರಣದಿಂದ ಹುಲಿಗಳ ಸಂಖ್ಯೆ ಅಪಾಯಕಾರಿ ಮಟ್ಟಕ್ಕೆ ಇಳಿಕೆಯಾಗಿದೆ. ಅಗತ್ಯ ಕ್ರಮ ತೆಗೆದುಕೊಳ್ಳದೇ ಇದ್ದರೆ, ರಾಜ್ಯದಲ್ಲಿ ಹುಲಿಗಳೇ ಇಲ್ಲದಂತಾಗುತ್ತದೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ

ಒಡಿಶಾ

28;2018

21;2022

* ಅಭಿವೃದ್ಧಿ ಚಟುವಟಿಕೆಗಳ ಕಾರಣದಿಂದ ಹುಲಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಪಕ್ಕದ ಮಧ್ಯಪ್ರದೇಶದತ್ತ ಹುಲಿಗಳು ವಲಸೆ ಹೋಗಿರುವ ಸಾಧ್ಯತೆ ಇದೆ.

* ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ಅಸ್ಸಾಂ, ಕೇರಳ, ಗೋವಾದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಹುಲಿ ಸಂಖ್ಯೆ ಏರಿಕೆಯಲ್ಲಿ ಈ ರಾಜ್ಯಗಳು ಸ್ಥಿರತೆ ಕಾಯ್ದುಕೊಂಡಿವೆ.

ಆಧಾರ: ಹುಲಿಗಳ ಸ್ಥಿತಿಗತಿ ವರದಿ–2022

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.