ADVERTISEMENT

ಆಳ–ಅಗಲ | ಕೇರಳ: ತ್ರಿಕೋನ ಸ್ಪರ್ಧೆ ಮತ್ತು ಬಹು ಆಯಾಮದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 19:00 IST
Last Updated 24 ಏಪ್ರಿಲ್ 2024, 19:00 IST
   
‘ಕೇರಳದಲ್ಲಿ ಈ ಬಾರಿ ಬಿಜೆಪಿಯ ಮತಪ್ರಮಾಣವು ಭಾರಿ ಏರಿಕೆಯಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಹೊರಗಿನಿಂದ ನೋಡಿದಾಗ ಇದೊಂದು ಚುನಾವಣಾ ಪ್ರಚಾರದ ಮಾತು ಎಂದಷ್ಟೇ ಎನಿಸುತ್ತದೆ. ಆದರೆ ಕೇರಳ ರಾಜಕಾರಣದ ಆಗು–ಹೋಗುಗಳನ್ನು ಒಳಹೊಕ್ಕು ನೋಡಿದಾಗ, ಚುನಾವಣೆಯಿಂದ ಚುನಾವನೆಗೆ ಬಿಜೆಪಿಯ ನೆಲೆ ಗಟ್ಟಿಯಾಗುತ್ತಲೇ ಇರುವುದು ಕಾಣುತ್ತದೆ. ಆದರೆ ಬಿಜೆಪಿ ಗಟ್ಟಿಯಾಗುತ್ತಿರುವಲ್ಲಿ ನಷ್ಟವಾಗುತ್ತಿರುವುದು ಕಾಂಗ್ರೆಸ್‌ಗಲ್ಲ, ಬದಲಿಗೆ ಎಡಪಕ್ಷಗಳಿಗೆ. ಹಿಂದಿನ ಮೂರೂ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ ಪ್ರಮಾಣ ಏರಿಕೆಯಾಗಿದ್ದರೆ, ಎಡಪಕ್ಷಗಳ ಮತ ಪ್ರಮಾಣ ಇಳಿಕೆಯಾಗುತ್ತಲೇ ಇದೆ. ಈ ಚುನಾವಣೆಯಲ್ಲೂ ಈ ಪ‍್ರವೃತ್ತಿ ಮುಂದುವರಿಯಬಹುದೇ?

ಕೇರಳದ 20 ಲೋಕಸಭಾ ಕ್ಷೇತ್ರಗಳಿಗೆ ಇದೇ 26ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ವಾರದ ಹಿಂದಷ್ಟೇ ಕೆಲವು ಸುದ್ದಿ ಮಾಧ್ಯಮಗಳು ಸಮೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದವು. ಅವುಗಳಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ಗೆ 10 ಸ್ಥಾನಗಳು, ಸಿಪಿಎಂ ನೇತೃತ್ವದ ಎಲ್‌ಡಿಎಫ್‌ಗೆ 7 ಸ್ಥಾನಗಳು ಮತ್ತು ಬಿಜೆಪಿಗೆ 3 ಸ್ಥಾನಗಳು ಬರುತ್ತವೆ ಎಂದು ಅಂದಾಜಿಸಿದ್ದವು. ಬಿಜೆಪಿ ಮತ ಪ್ರಮಾಣವು  ಶೇ 20ರವರೆಗೂ ಹೋಗಬಹುದು ಎಂದು ಆ ಚುನಾವಣಾ ಸಮೀಕ್ಷೆಗಳು ಹೇಳಿದ್ದವು.

ಆದರೆ ಕೇರಳದ ಚುನಾವಣಾ ಕಣವು ಮೇಲೆ ಹೇಳಿದಷ್ಟು ಸರಳವಾಗಿಲ್ಲ. ಸಿಪಿಎಂ ಮತ್ತು ಸಿಪಿಐ ದೇಶದ ಎಲ್ಲೆಡೆ ಕಾಂಗ್ರೆಸ್‌ನೊಟ್ಟಿಗೆ ‘ಇಂಡಿಯಾ’ ಮೈತ್ರಿಕೂಟದಲ್ಲಿ ಇವೆ. ಆದರೆ ಕೇರಳದಲ್ಲಿ ಮಾತ್ರ ಕಾಂಗ್ರೆಸ್‌ ವಿರುದ್ಧ ಸೆಣೆಸುತ್ತಿದೆ. ಏಕೆಂದರೆ ಕೇರಳದಲ್ಲಿ ಕಾಂಗ್ರೆಸ್‌ನ ಯುಡಿಎಫ್‌ ಮತ್ತು ಎಡಪಕ್ಷಗಳ ಎಲ್‌ಡಿಎಫ್‌ಗೆ ಪ್ರತ್ಯೇಕ ನೆಲೆ ಇವೆ ಮತ್ತು ಅವು ಪ್ರಬಲವಾಗಿವೆ. ಹೀಗಾಗಿಯೇ ಈ ‍ಪಕ್ಷಗಳು ಕೇರಳದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಪರಸ್ಪರ ಸ್ಪರ್ಧೆಗೆ ಇಳಿದಿವೆ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಹ ಕೆಲವು ಕ್ಷೇತ್ರಗಳಲ್ಲಿ ಪ್ರಬಲ ಪೈ‍ಪೋಟಿ ನೀಡುವ ಮತ್ತು ಗೆಲ್ಲುವ ಸಣ್ಣ ಸಾಧ್ಯತೆ ಇರುವ ಪಕ್ಷವಾಗಿಯೂ ರೂಪುಗೊಂಡಿದೆ. ಹೀಗಾಗಿ ಕೇರಳದ ಕೆಲವು ಕ್ಷೇತ್ರಗಳಲ್ಲಿ ಈ ಬಾರಿಯದ್ದು ತ್ರಿಕೋನ ಸ್ಪರ್ಧೆ.

ಕೇರಳದ ಒಟ್ಟು ಜನಸಂಖ್ಯೆಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತರದ್ದು ಅಂದರೆ, ಮುಸ್ಲಿಮರು ಮತ್ತು ಕ್ರೈಸ್ತ ಧರ್ಮೀಯರ ಪ್ರಮಾಣ ಶೇ 45ಕ್ಕೂ ಹೆಚ್ಚು. 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಈ ಸಮುದಾಯಗಳ ಮತಗಳೇ ನಿರ್ಣಾಯಕ. ಈ ಸಮುದಾಯಗಳು ಕಾಂಗ್ರೆಸ್‌, ಆರ್‌ಎಸ್‌ಪಿಯನ್ನು ಒಳಗೊಂಡ ಯುಡಿಎಫ್‌ ಅನ್ನೇ ಬೆಂಬಲಿಸುತ್ತಾ ಬಂದಿವೆ. ಹೀಗಾಗಿ ಯುಡಿಎಫ್‌ ಹೆಚ್ಚು ಸ್ಥಾನಗಳನ್ನು ಗೆದ್ದರೂ ಅಥವಾ ಗೆಲ್ಲದೇ ಇದ್ದರೂ ಅದರ ಮತಪ್ರಮಾಣದಲ್ಲಿ ಗಣನೀಯ ಬದಲಾವಣೆ ಆಗುವುದಿಲ್ಲ. ಎಲ್‌ಡಿಎಫ್‌ನ ಮತಗಳು ಅತ್ತಿತ್ತ ಆದಾಗಲಷ್ಟೇ ಕಾಂಗ್ರೆಸ್‌ನ ಗೆಲುವಿನ ಗ್ರಾಫ್‌ ಬದಲಾಗುತ್ತಿರುತ್ತದೆ.

ADVERTISEMENT

ದೇಶದ ಬೇರೆಡೆ ನೆಲೆ ಕಳೆದುಕೊಂಡಿದ್ದರೂ ಕೇರಳದಲ್ಲಿ ಎಡಪಕ್ಷಗಳ ನೆಲೆ ಇನ್ನೂ ಗಟ್ಟಿಯಾಗಿಯೇ ಇದೆ. ಕೇರಳದಲ್ಲಿ ಎಲ್‌ಡಿಎಫ್‌ ನೆಚ್ಚಿಕೊಂಡಿರುವುದು ಹಿಂದೂಗಳ ಮತಗಳನ್ನು. ನಾಯರ್‌ ಮತ್ತು ಈಳವ (ಈಡಿಗರು) ಸಮುದಾಯದ ಮತದಾರರು ಎಡಪಕ್ಷಗಳನ್ನೇ ಬೆಂಬಲಿಸುತ್ತಾ ಬಂದಿದ್ದಾರೆ. ಈಗಲೂ ಈ ಸಮುದಾಯಗಳ ಮತಗಳ ಹೆಚ್ಚಿನ ಪಾಲು ಎಲ್‌ಡಿಎಫ್‌ಗೇ ಬೀಳುತ್ತದೆ. ಆದರೆ, ಹಿಂದಿನ ಮೂರು ಚುನಾವಣೆಗಳಲ್ಲಿ ಎಲ್‌ಡಿಎಫ್‌ನ ಮತಪ್ರಮಾಣ ಕಡಿಮೆಯಾಗುತ್ತಲೇ ಬಂದಿದೆ. 2009ರಲ್ಲಿ ಎಲ್‌ಡಿಎಫ್‌ನ ಮತ ಪ್ರಮಾಣ ಸುಮಾರು ಶೇ 40ರಷ್ಟು ಇತ್ತು. 2019ರ ವೇಳೆಗೆ ಅದು ಶೇ 36ರಷ್ಟಕ್ಕೆ ಕುಸಿದಿದೆ. ಆದರೆ ಇದೇ ಅವಧಿಯಲ್ಲಿ ಬಿಜೆಪಿಯ ಮತಪ್ರಮಾಣವು ಶೇ 6.3ರಷ್ಟರಿಂದ ಶೇ 12.99ಕ್ಕೆ ಏರಿಕೆಯಾಗಿತ್ತು. ಅಂದರೆ ಕೇರಳದಲ್ಲಿ ಬಿಜೆಪಿಯು ಎಲ್‌ಡಿಎಫ್‌ನ ಮತಗಳನ್ನು ಕಸಿಯುತ್ತಿದೆ ಎಂಬುದನ್ನೇ ಈ ಲೆಕ್ಕಾಚಾರಗಳು ಹೇಳುತ್ತವೆ.

ಎಲ್‌ಡಿಎಫ್‌ ನೆಚ್ಚಿಕೊಂಡಿರುವ ಹಿಂದೂ ಮತದಾರರನ್ನೇ ತನ್ನೆಡೆಗೆ ಸೆಳೆಯಲು  ಬಿಜೆಪಿ ಯತ್ನಿಸುತ್ತಿದೆ. ಕ್ರೈಸ್ತ ಧರ್ಮೀಯರನ್ನು ಸೆಳೆಯುವ ಕಾರ್ಯಕ್ರಮಗಳನ್ನು ಕೇರಳ ಬಿಜೆಪಿ ಘಟಕ ಮಾಡಿತ್ತು. ಆದರೆ ಅದು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಬಿಜೆಪಿ ಈಗ ಹಿಂದುತ್ವದ ಮಂತ್ರವನ್ನೇ ಜಪಿಸುತ್ತಿದೆ. ಹೀಗಾಗಿ ಬಿಜೆಪಿಗೆ ಬೀಳುವ ಪ್ರತಿ ಹೆಚ್ಚುವರಿ ಮತವೂ ಎಲ್‌ಡಿಎಫ್‌ನ ಮತಬುಟ್ಟಿಯಿಂದ ಖೋತಾ ಆಗುತ್ತಿದೆ ಎಂಬುದನ್ನೇ ಈ ದತ್ತಾಂಶಗಳು ಹೇಳುತ್ತವೆ. ಕೇರಳದಲ್ಲಿ ಎಡಪಕ್ಷಗಳು ಕಾಂಗ್ರೆಸ್‌ನೊಟ್ಟಿಗೆ ‘ಇಂಡಿಯಾ’ ಮೈತ್ರಿಕೂಟದ ಒಟ್ಟಿಗೆ ಇವೆ ಎಂದೇ ಬಿಜೆಪಿ ಪ್ರಚಾರ ಮಾಡುತ್ತಿದೆ. ಇದು ಎಲ್‌ಡಿಎಫ್‌ನ ಮತಗಳನ್ನು ಮತ್ತಷ್ಟು ಛಿದ್ರ ಮಾಡುತ್ತದೆ. ಬಿಜೆಪಿಯ ಈ ತಂತ್ರದಿಂದ ಸಂದಿಗ್ಧ ಸ್ಥಿತಿಗೆ ಸಿಲುಕಿರುವ ಎಲ್‌ಡಿಎಫ್, ಕೇರಳದಲ್ಲಿ ತಾನು ಕಾಂಗ್ರೆಸ್‌ನೊಟ್ಟಿಗೆ ಇಲ್ಲ ಎಂಬುದನ್ನು ಜನಕ್ಕೆ ಮನವರಿಕೆ ಮಾಡಿಕೊಡಬೇಕಾದ ಅನಿವಾರ್ಯಕ್ಕೆ ಸಿಲುಕಿದೆ. ಈ ಕಾರಣದಿಂದಲೇ ವಯನಾಡ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ರಾಹುಲ್‌ ಗಾಂಧಿ ವಿರುದ್ಧ ಎಲ್‌ಡಿಎಫ್‌ ನಾಯಕರು ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪದೇ–ಪದೇ ವಾಗ್ದಾಳಿ ನಡೆಸುತ್ತಿದ್ದಾರೆ.

ಕ್ರೈಸ್ತ ಧರ್ಮೀಯರನ್ನು ಸೆಳೆಯುವ ಬಿಜೆಪಿಯ ತಂತ್ರ ಸ್ವಲ್ಪ ಮಟ್ಟಿಗೆ ಫಲ ನೀಡಿದರೂ, ಅದು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ನ ಮತಗಳನ್ನು ನಷ್ಟ ಮಾಡುತ್ತದೆ. ಈ ಚುನಾವಣೆಯಲ್ಲಿ ಬಿಜೆಪಿ ಮತಪ್ರಮಾಣ ಹೆಚ್ಚಾಗುತ್ತದೆ ಎಂದು ಹೇಳುವಲ್ಲಿ, ಈ ಎಲ್ಲಾ ಅಂಶಗಳೂ ಕೆಲಸ ಮಾಡುತ್ತಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಯುಡಿಎಫ್‌ 19 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಕೆಲವು ಸ್ಥಾನಗಳನ್ನು ಕಳೆದುಕೊಳ್ಳಬಹುದು, ಆ ಕ್ಷೇತ್ರಗಳು ಬಿಜೆಪಿಗೆ ಹೋಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಹಾಗಾಗುವ ಸಾಧ್ಯತೆ ತೀರಾ ಕಡಿಮೆ ಎಂದೂ ಹೇಳಲಾಗುತ್ತಿದೆ. ಆದರೆ ಯುಡಿಎಫ್‌ನ ಸ್ಥಾನಗಳು ಕಡಿಮೆಯಾದರೆ, ಎಲ್‌ಡಿಎಫ್‌ ಮತ್ತು ಬಿಜೆಪಿಗಳ ತಮ್ಮ ಸ್ಥಾನಗಳನ್ನು ಉತ್ತಮಪಡಿಸಿಕೊಳ್ಳಲಿವೆ ಎಂದು ವಿಶ್ಲೇಷಿಸಲಾಗಿದೆ.

‘ಬಿಜೆಪಿಗೆ ಪ್ರತಿಕೂಲ ಪರಿಸ್ಥಿತಿ’: ಕೇರಳದಲ್ಲಿ ಬಿಜೆಪಿ ತನ್ನ ಮತ ಪ್ರಮಾಣವನ್ನು ಉತ್ತಮಪಡಿಸಿಕೊಳ್ಳುತ್ತಿದೆ ಎಂದು ಒಂದು ವರ್ಗದ ರಾಜಕೀಯ ಪಂಡಿತರು ಹೇಳುತ್ತಿದ್ದರೂ, ಕೇಂದ್ರ ಸರ್ಕಾರದ ನೀತಿಗಳ ಕಾರಣದಿಂದ ಬಿಜೆಪಿಯ ನೆಲೆ ಈ ಹಿಂದಿಗಿಂತ ಸಡಿಲವಾಗಲಿದೆ ಎಂದು ಇನ್ನೊಂದು ವರ್ಗದ ರಾಜಕೀಯ ತಜ್ಞರು ಹೇಳುತ್ತಿದ್ದಾರೆ. 

ಕೇಂದ್ರ ಸರ್ಕಾರದ ಒಟ್ಟು ತೆರಿಗೆ ಆದಾಯದಲ್ಲಿ ಕೇರಳ ಸರ್ಕಾರದ ಪಾಲನ್ನು ತೀರಾ ಕಡಿತ ಮಾಡಲಾಗಿದೆ. ಅತಿಹೆಚ್ಚು ತೆರಿಗೆ ಪಾಲು ಕಡಿತ ಆಗಿದ್ದು ಕರ್ನಾಟಕ ಮತ್ತು ಕೇರಳಕ್ಕೆ ಮಾತ್ರ. ಕೇಂದ್ರ ಸರ್ಕಾರದ ಈ ತೆರಿಗೆ ಅನ್ಯಾಯದ ವಿರುದ್ಧ ಕರ್ನಾಟಕವು ದನಿ ಎತ್ತಿದಾಗ, ಅಷ್ಟೇ ಗಟ್ಟಿಯಾಗಿ ಮಾತನಾಡಿದ್ದು ಕೇರಳ ಸರ್ಕಾರ. 2018ರ ಪ್ರವಾಹದ ಸಂದರ್ಭದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ನೀಡದೇ ಇದ್ದದ್ದು, ವಿದೇಶಿ ನೆರವನ್ನು ತಡೆಹಿಡಿದಿದ್ದದನ್ನು ಬಿಜೆಪಿ ವಿರುದ್ಧ ಪ್ರಚಾರಕ್ಕೆ ಎಲ್‌ಡಿಎಫ್‌ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಸಹ ಹೀಗೆಯೇ ಪ್ರಚಾರ ಮಾಡುತ್ತಿದೆ. ಇವೆಲ್ಲವೂ ಬಿಜೆಪಿಗೆ ಪ್ರತಿಕೂಲವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

ಬಿಜೆಪಿ ಹಿಂದುತ್ವ ಕಾರ್ಯಸೂಚಿಯೊಂದಿಗೆ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಪ್ರಚಾರ ನಡೆಸುತ್ತಿದೆ. ಇದು ಬಿಜೆಪಿಗೆ ಎಷ್ಟರಮಟ್ಟಿಗೆ ನೆರವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

‘ಬಿಜೆಪಿಗೆ ಪ್ರತಿಕೂಲ ಪರಿಸ್ಥಿತಿ’

ಕೇರಳದಲ್ಲಿ ಬಿಜೆಪಿ ತನ್ನ ಮತ ಪ್ರಮಾಣವನ್ನು ಉತ್ತಮಪಡಿಸಿಕೊಳ್ಳುತ್ತಿದೆ ಎಂದು ಒಂದು ವರ್ಗದ ರಾಜಕೀಯ ಪಂಡಿತರು ಹೇಳುತ್ತಿದ್ದರೂ, ಕೇಂದ್ರ ಸರ್ಕಾರದ ನೀತಿಗಳ ಕಾರಣದಿಂದ ಬಿಜೆಪಿಯ ನೆಲೆ ಈ ಹಿಂದಿಗಿಂತ ಸಡಿಲವಾಗಲಿದೆ ಎಂದು ಇನ್ನೊಂದು ವರ್ಗದ ರಾಜಕೀಯ ತಜ್ಞರು ಹೇಳುತ್ತಿದ್ದಾರೆ. 

ಕೇಂದ್ರ ಸರ್ಕಾರದ ಒಟ್ಟು ತೆರಿಗೆ ಆದಾಯದಲ್ಲಿ ಕೇರಳ ಸರ್ಕಾರದ ಪಾಲನ್ನು ತೀರಾ ಕಡಿತ ಮಾಡಲಾಗಿದೆ. ಅತಿಹೆಚ್ಚು ತೆರಿಗೆ ಪಾಲು ಕಡಿತ ಆಗಿದ್ದು ಕರ್ನಾಟಕ ಮತ್ತು ಕೇರಳಕ್ಕೆ ಮಾತ್ರ. ಕೇಂದ್ರ ಸರ್ಕಾರದ ಈ ತೆರಿಗೆ ಅನ್ಯಾಯದ ವಿರುದ್ಧ ಕರ್ನಾಟಕವು ದನಿ ಎತ್ತಿದಾಗ, ಅಷ್ಟೇ ಗಟ್ಟಿಯಾಗಿ ಮಾತನಾಡಿದ್ದು ಕೇರಳ ಸರ್ಕಾರ. 2018ರ ಪ್ರವಾಹದ ಸಂದರ್ಭದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ನೀಡದೇ ಇದ್ದದ್ದು, ವಿದೇಶಿ ನೆರವನ್ನು ತಡೆಹಿಡಿದಿದ್ದದನ್ನು ಬಿಜೆಪಿ ವಿರುದ್ಧ ಪ್ರಚಾರಕ್ಕೆ ಎಲ್‌ಡಿಎಫ್‌ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಸಹ ಹೀಗೆಯೇ ಪ್ರಚಾರ ಮಾಡುತ್ತಿದೆ. ಇವೆಲ್ಲವೂ ಬಿಜೆಪಿಗೆ ಪ್ರತಿಕೂಲವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

ಬಿಜೆಪಿ ಹಿಂದುತ್ವ ಕಾರ್ಯಸೂಚಿಯೊಂದಿಗೆ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಪ್ರಚಾರ ನಡೆಸುತ್ತಿದೆ. ಇದು ಬಿಜೆಪಿಗೆ ಎಷ್ಟರಮಟ್ಟಿಗೆ ನೆರವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇವಿಎಂ ಅಪನಂಬಿಕೆ
ಕೇರಳದ ಕಾಸರಗೋಡಿನಲ್ಲಿ ಈಚೆಗೆ ಅಣಕು ಮತದಾನ ನಡೆಸಿದಾಗ, ಬೇರೆ ಪಕ್ಷಗಳಿಗೆ ಹಾಕಿದ ಮತಗಳೂ ಬಿಜೆಪಿಗೇ ಹೋಗಿವೆ. ಜತೆಗೆ ಯಾರಿಗೂ ಮತಹಾಕದೇ ಇದ್ದಾಗಲೂ ಬಿಜೆಪಿಗೆ ಮತಬಿದ್ದಿದೆ. ಈ ಬಗ್ಗೆ ಚುನಾವಣಾ ಅಧಿಕಾರಿಗಳು ಜಿಲ್ಲಾಧಿಕಾರಿಗೆ ದೂರನ್ನೂ ನೀಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲೂ ಈ ವಿಷಯ ಪ್ರಸ್ತಾಪವಾಗಿದೆ. ಇದು ತಾಂತ್ರಿಕ ದೋಷಗಳಿಂದ ಆದ ಸಮಸ್ಯೆ ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ, ಈ ಪ್ರಸಂಗವು ಇವಿಎಂ ಮೇಲೆ ಒಂದು ಮಟ್ಟದ ಅಪನಂಬಿಕೆ ಸೃಷ್ಟಿಸಿದೆ. ಕೇರಳದ ಮಾಧ್ಯಮಗಳೂ ಈ ಬಗ್ಗೆ ಸರಣಿ ವರದಿಗಳನ್ನು ಪ್ರಕಟಿಸಿವೆ. ಈ ಮೂಲಕ ಜನರು ಈ ಬಗ್ಗೆ ಪ್ರಶ್ನೆ ಮಾಡುತ್ತಲೇ ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ, ‘ಇವಿಎಂಗಳಲ್ಲಿ ತಾಂತ್ರಿಕ ದೋಷ ತಲೆದೋರಿದಾಗಲೆಲ್ಲಾ ಬಿಜೆಪಿಗೇ ಏಕೆ ಹೆಚ್ಚುವರಿ ಮತಗಳು ಹೋಗುತ್ತವೆ’ ಎಂದು ಪ್ರಶ್ನಿಸುತ್ತಿದ್ದಾರೆ.

ತರೂರ್–ಚಂದ್ರಶೇಖರ್‌

ರಾಹುಲ್‌ ಗಾಂಧಿ ಸ್ಪರ್ಧೆಯ ಕಾರಣಕ್ಕೆ ವಯನಾಡ್‌ ಕ್ಷೇತ್ರವು ರಾಷ್ಟ್ರಮಟ್ಟದಲ್ಲಿ ಹೆಚ್ಚು ಗಮನ ಸೆಳೆದಿದ್ದರೆ, ತಾರಾ ವರ್ಚಸ್ಸಿನ ನಾಯಕರ ಪೈ‍ಪೋಟಿಯ ಕಾರಣಕ್ಕೆ ತಿರುವನಂತಪುರ ಕ್ಷೇತ್ರವೂ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದೆ.

ತಿರುವನಂತಪುರದಲ್ಲಿ ಕಾಂಗ್ರೆಸ್‌ನ ಹಾಲಿ ಸಂಸದ ಶಶಿ ತರೂರ್‌ ಮರು ಆಯ್ಕೆ ಬಯಸಿದ್ದಾರೆ. ಬಿಜೆಪಿಯು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಕಣಕ್ಕೆ ಇಳಿಸಿದೆ. ಶಶಿ ತರೂರ್‌ ಗೆಲ್ಲುವ ನೆಚ್ಚಿನ ಅಭ್ಯರ್ಥಿ ಎಂದೇ ಹೇಳುತ್ತಿದ್ದರೂ, ರಾಜೀವ್ ಅವರು ಪ್ರಬಲ ಪೈಪೋಟಿ ನೀಡುತ್ತಾರೆ ಎಂಬುದನ್ನು ಯಾರೂ ಅಲ್ಲಗೆಳೆಯುವುದಿಲ್ಲ. ಇಬ್ಬರು ನಾಯಕರೂ ದೊಡ್ಡಮಟ್ಟದ ಪ್ರಚಾರದಲ್ಲಿ ತೊಡಗಿದ್ದಾರೆ.

ಅಪ್ಪ–ಮಗನ ಭಾವನಾತ್ಮಕ ಸಮರ

ಪತ್ತನಂತಿಟ್ಟ ಲೋಕಸಭಾ ಕ್ಷೇತ್ರದಲ್ಲಿ ರಾಜಕಾರಣ ಒಂದೆಡೆಯಾದರೆ, ಭಾವನಾತ್ಮಕ ಸಂಗತಿಗಳೇ ಚರ್ಚಾ ವಿಷಯವಾಗಿದೆ. ಕೇರಳ ಕಾಂಗ್ರೆಸ್‌ನ ಪ್ರಮುಖ ನಾಯಕ ಎ.ಕೆ. ಆ್ಯಂಟನಿ ಅವರ ಮಗ ಅನಿಲ್‌ ಆ್ಯಂಟನಿ ಬಿಜೆಪಿ ಸೇರಿದ್ದಾರೆ ಮತ್ತು ಇದೇ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. 

‘ನಾನು ಎಷ್ಟು ದಿನ ಬದುಕುತ್ತೇನೊ ಗೊತ್ತಿಲ್ಲ. ಆದರೆ, ಹೆಚ್ಚು ದಿನ ಬದುಕುವ ಆಸೆಯೇನೂ ನನಗಿಲ್ಲ. ಬದುಕಿರುವವರೆಗೂ ನಾನು ನೆಹರೂ ಕುಟುಂಬಕ್ಕೆ ಹಾಗೂ ಕಾಂಗ್ರೆಸ್‌ಗೆ ನಿಷ್ಠ’ ಎಂದು ಎ.ಕೆ. ಆ್ಯಂಟನಿ ಅವರು, ಮಗ ಅನಿಲ್‌ ಬಿಜೆಪಿ ಸೇರಿದ ಸಂದರ್ಭದಲ್ಲಿ ಭಾವನಾತ್ಮಕವಾಗಿಯೇ ಹೇಳಿದ್ದರು. ‘ಅಪ್ಪನಿಗೆ ದ್ರೋಹ ಬಗೆದ ಮಗ’ ಎನ್ನುವುದು ಸ್ವತಃ ಬಿಜೆಪಿ ಬೆಂಬಲಿಗರ ಅಭಿಪ್ರಾಯ. ಆ್ಯಂಟಿನಿ ಅವರು ಕಾಂಗ್ರೆಸ್‌ ಪರವೇ ಪ್ರಚಾರ ನಡೆಸುವುದಾಗಿಯೂ ಹೇಳಿದ್ದರು.

ಇದು ಕಾಂಗ್ರೆಸ್‌ನ ಭದ್ರಕೋಟೆ ಮತ್ತು ದಶಕಕ್ಕೂ ಹೆಚ್ಚಿನ ಅವಧಿಯಿಂದ ಇಲ್ಲಿ ಕಾಂಗ್ರೆಸ್‌ ಪಕ್ಷವೇ ಜಯಗಳಿಸಿದೆ. ಇಲ್ಲಿ ಈ ಬಾರಿ ಯುಡಿಎಫ್‌, ಎಲ್‌ಡಿಎಫ್‌ ಹಾಗೂ ಎನ್‌ಡಿಎ ಮೂರು ಮೈತ್ರಿಕೂಟಗಳು ಕ್ರೈಸ್ತ ಸಮುದಾಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.