ಉತ್ತರಾಖಂಡದ ಉತ್ತರಕಾಶಿ ಪಟ್ಟಣಕ್ಕೆ ಸಮೀಪದಲ್ಲಿರುವ ಗಂಗೋತ್ರಿ–ಯಮುನೋತ್ರಿ ಹೆದ್ದಾರಿಯಲ್ಲಿ ನಿರ್ಮಿಸಲಾಗುತ್ತಿರುವ ಸರ್ವಋತು ಸುರಂಗದ ಕೆಲಭಾಗ ಭಾನುವಾರ ನಸುಕಿನ ವೇಳೆಯಲ್ಲಿ ಕುಸಿದಿದೆ. ಗಂಗೋತ್ರಿ, ಯಮುನೋತ್ರಿ, ಬದರೀನಾಥ ಮತ್ತು ಕೇದಾರನಾಥಕ್ಕೆ ವರ್ಷದ ಎಲ್ಲಾ ದಿನಗಳಲ್ಲೂ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ ‘ಚಾರ್‌ಧಾಮ್ ಕಾರಿಡಾರ್’ ಯೋಜನೆಯ ಭಾಗವಿದು. ಈ ಯೋಜನೆ ಆರಂಭಿಸಿದಾಗಲೇ, ಹಿಮಾಲಯದ ಭೌಗೋಳಿಕ ಸ್ಥಿತಿ ಮತ್ತು ಅಸ್ಥಿರ ನೆಲವನ್ನು ಪರಿಗಣಿಸದೆ ಯೋಜನೆ ರೂಪಿಸಲಾಗಿದೆ ಎಂದು ಆಕ್ಷೇಪ ವ್ಯಕ್ತವಾಗಿತ್ತು. ಅದರ ವಿರುದ್ಧ ಕಾನೂನು ಹೋರಾಟವನ್ನೂ ನಡೆಸಲಾಗಿತ್ತು. ಇಂತಹ ಪ್ರದೇಶದಲ್ಲಿ ಸುರಂಗ ಕೊರೆಯುವುದು ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಲಾಗಿತ್ತು. ಇದನ್ನು ಪುಷ್ಟೀಕರಿಸುವಂತೆ ಸುರಂಗಗಳನ್ನು ಒಳಗೊಂಡ ಜಲವಿದ್ಯುತ್ ಯೋಜನೆಗಳು ಮತ್ತು ಹೆದ್ದಾರಿ ಯೋಜನೆಗಳಲ್ಲಿ ಸಾಲು–ಸಾಲು ಅವಘಡಗಳು ಸಂಭವಿಸಿವೆ.
–––––
ಉತ್ತರಕಾಶಿ ಬಳಿ ನಿರ್ಮಿಸಲಾಗುತ್ತಿದ್ದ 4.5 ಕಿ.ಮೀ. ಉದ್ದದ ಸುರಂಗ ಮಾರ್ಗದ ಕೆಲಭಾಗ ಕುಸಿದಿದೆ. ಕೆಲಭಾಗ ಅಂದರೆ, 150 ಮೀಟರ್‌ಗಳಷ್ಟು ಸುರಂಗಮಾರ್ಗ ಸಂಪೂರ್ಣ ಕುಸಿದಿದೆ. ಅಲ್ಲಿ ಸಿಲುಕಿರುವ 40 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತರಲು 200 ಮೀಟರ್‌ನಷ್ಟು ಸುರಂಗವನ್ನು ಒಡೆದುಹಾಕಬೇಕಿದೆ. ಸದ್ಯಕ್ಕೆ ಕಾರ್ಮಿಕರನ್ನು ಹೊರಗೆ ತರುವುದೇ ಆದ್ಯತೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ. ಸುರಂಗ ಏಕೆ ಕುಸಿಯಿತು ಎಂಬುದನ್ನು ಪತ್ತೆ ಮಾಡುವ ತನಿಖಾ ಪ್ರಕ್ರಿಯೆ, ತೆರವು ಕಾರ್ಯಾಚರಣೆಯ ನಂತರವಷ್ಟೇ ಆರಂಭವಾಗಲಿದೆ. ಆದರೆ, ಈ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಸುರಂಗಗಳು ಸುರಕ್ಷಿತವಲ್ಲ, ಅವು ಯಾವಾಗ ಬೇಕಾದರೂ ಕುಸಿಯಬಹುದು ಎಂದು ವಿಜ್ಞಾನಿಗಳು ವರ್ಷಗಳ ಹಿಂದೆಯೇ ಅಂದಾಜಿಸಿದ್ದರು. ಈ ಪ್ರದೇಶದಲ್ಲಿ ಅಂತಹ ಕಾಮಗಾರಿ ನಡೆಸುವುದು ತರವಲ್ಲ ಎಂದು ಸಲಹೆ ನೀಡಿದ್ದರು.
ಇಲ್ಲಿನ ಅವಘಡಗಳಿಗೆ ಕಳಪೆ ಕಾಮಗಾರಿ ಕಾರಣವಲ್ಲ. ಬದಲಿಗೆ ಇಂತಹ ಪ್ರದೇಶದಲ್ಲಿ ಇಂತಹ ಕಾಮಗಾರಿ ನಡೆಸಲು ನಿರ್ಧರಿಸಿದ್ದೇ ಅವಘಡಕ್ಕೆ ಕಾರಣ ಎಂದು ವಿಜ್ಞಾನಿಗಳು ಹೇಳಿಬಿಡುತ್ತಾರೆ. ಇದಕ್ಕೆ ಕಾರಣ ಇಡೀ ಹಿಮಾಲಯ ಪ್ರದೇಶವೇ ಇನ್ನೂ ಬೆಳೆಯುತ್ತಿರುವ ಪ್ರದೇಶವಾಗಿದೆ ಎಂಬುದು. ಹಿಮಾಲಯ ಪ್ರದೇಶದ ಮೇಲ್ಮೈ, ತಳಹದಿ ಮತ್ತು ಅಂತರಾಳ ಯಾವುದೇ ಸಂಪೂರ್ಣ ಸ್ಥಿರವಾದ ಪ್ರದೇಶವಲ್ಲ. ಏಕೆಂದರೆ ಇದು ಎರಡು ಭೂಫಲಕಗಳು ಪರಸ್ಪರ ಕೂಡುವ ಪ್ರದೇಶ.
ಟಿಬೆಟಿಯನ್ ಭೂಫಲಕ ಭಾರತ ಉಪಖಂಡದ ಫಲಕ ಒತ್ತುತ್ತಿರುವ ಪ್ರದೇಶದಲ್ಲಿ ಹಿಮಾಲಯವಿದೆ. ಈ ಒತ್ತುವ ಕ್ರಿಯೆಯ ಫಲವಾಗಿಯೇ ಹಿಮಾಲಯ ಸೃಷ್ಟಿಯಾಗಿದೆ. ಟಿಬೆಟಿಯನ್ ಭೂಫಲಕದ ದಕ್ಷಿಣ ಭಾಗವನ್ನು ಕೆಳಗೆ ಭಾರತ ಉಪಖಂಡದ ಫಲಕವು ಸಿಲುಕಿದೆ. ಭಾರತ ಉಪಖಂಡದ ಫಲಕವು ಉತ್ತರ ದಿಕ್ಕಿಗೆ ಒತ್ತಿದಂತೆಲ್ಲಾ, ಟಿಬೆಟಿಯನ್ ಭೂಫಲಕವು ಸ್ವಲ್ಪ ಮೇಲಕ್ಕೆ ಏಳುತ್ತದೆ. ಪ್ರತಿದಿನವೂ ಇಂತಹ ಕ್ರಿಯೆ ಜರುಗುತ್ತಿರುವ ಕಾರಣದಿಂದ ಹಿಮಾಲಯ ಪ್ರದೇಶದ ಎತ್ತರ ಬದಲಾಗುತ್ತಲೇ ಇರುತ್ತದೆ. ಈ ಕಾರಣದಿಂದಲೇ ಹಿಮಾಲಯದ ಪ್ರಮುಖ ಪರ್ವತ–ಶಿಖರಗಳ ಎತ್ತರವನ್ನು ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ಲೆಕ್ಕಹಾಕಲಾಗುತ್ತದೆ. ಈ ಪ್ರದೇಶದಲ್ಲಿ ಅತ್ಯಂತ ಕಡಿಮೆ ತೀವ್ರತೆಯ (ರಿಕ್ಟರ್ ಮಾಪಕದಲ್ಲಿ 4ರಷ್ಟು ತೀವ್ರತೆಗಿಂತ ಕಡಿಮೆ ಇರುವ) ಹತ್ತಾರು ಭೂಕಂಪಗಳು ಸಂಭವಿಸುತ್ತವೆ. ಹೀಗಾಗಿ ನೆಲದ ಮೇಲ್ಮೈನಲ್ಲಿ ಗೋಚರಿಸದೇ ಇದ್ದರೂ ನೆಲದಡಿಯಲ್ಲಿ ಮಣ್ಣಿನ ರಚನೆ ಬದಲಾಗುತ್ತಲೇ ಇರುತ್ತದೆ. ಅಷ್ಟು ಅಸ್ಥಿರವಾದಂತಹ ಪ್ರದೇಶವಿದು.
ಇಂತಹ ಅಸ್ಥಿರವಾದ ನೆಲವು ಯಾವುದೇ ಬೃಹತ್ ನಿರ್ಮಾಣಕ್ಕೆ ಯೋಗ್ಯವಲ್ಲ ಎಂದು ಅಮೆರಿಕದ ಟೊಲೆಡೊ ವಿಶ್ವವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿಜ್ಞಾನಿಗಳು ಸಿದ್ದಪಡಿಸಿದ್ದ ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ. ನೇಪಾಳ, ಭೂತಾನ್ ಮತ್ತು ಭಾರತದ ವಿಜ್ಞಾನಿಗಳ ತಂಡದೊಂದಿಗೆ ಈ ವಿಜ್ಞಾನಿಗಳ ತಂಡವು ಅಧ್ಯಯನ ನಡೆಸಿತ್ತು. ಜೋಶಿಮಠದ ಈಶಾನ್ಯ ದಿಕ್ಕಿನಲ್ಲಿ ನಿರ್ಮಿಸುತ್ತಿರುವ ತಪೋವನ ಜಲವಿದ್ಯುತ್ ಯೋಜನೆಯು ಅಪಾಯಕಾರಿ ಎಂದು ಆ ಅಧ್ಯಯನ ವರದಿಯಲ್ಲೇ ಎಚ್ಚರಿಕೆ ನೀಡಲಾಗಿತ್ತು. ವರದಿ ಪ್ರಕಟವಾದ ಕೆಲವೇ ತಿಂಗಳಲ್ಲಿ ತಪೋವನ ಅಣೆಕಟ್ಟೆ ಪ್ರದೇಶದಲ್ಲಿ ಅವಘಡ ಸಂಭವಿಸಿತ್ತು.
ಭಾರತದ ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ರಾಜ್ಯಗಳು ಮತ್ತು ನೇಪಾಳ, ಭೂತಾನ್ ಹಿಮಾಲಯದ ಅತ್ಯಂತ ಅಸ್ಥಿರ ಪ್ರದೇಶದಲ್ಲಿವೆ. ಇಲ್ಲಿ ಬೃಹತ್ ಅಣೆಕಟ್ಟೆಗಳು ಮತ್ತು ಸುರಂಗ ಮಾರ್ಗಗಳ ನಿರ್ಮಾಣ ಅಪಾಯಕಾರಿ ಎಂದು ವರದಿಯಲ್ಲಿ ಹೇಳಲಾಗಿತ್ತು. ತಪೋವನ–ವಿಷ್ಣುಗಡ ಜಲವಿದ್ಯುತ್ ಯೋಜನೆಯ ಸುರಂಗ ಮಾರ್ಗದಲ್ಲಿ ನೀರು ಹರಿಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಇಂತಹ ಹತ್ತಾರು ಯೋಜನೆಗಳು ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ನಿರ್ಮಾಣದ ಹಂತದಲ್ಲಿವೆ. ಅಲ್ಲೆಲ್ಲಾ ಭೂಕುಸಿತ ಮತ್ತು ಸುರಂಗ ಕುಸಿತದ ಅವಘಡಗಳು ಈಗಾಗಲೇ ಸಂಭವಿಸಿವೆ.
ಚಾರ್‌ಧಾಮ್ ಕಾರಿಡಾರ್‌ನಲ್ಲಿ 99.6 ಕಿ.ಮೀ.ನಷ್ಟು ಉದ್ದದ 14 ಸುರಂಗ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳ ಬಗ್ಗೆಯೂ ಸ್ಥಳೀಯರು, ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದರು. ಇದರ ವಿರುದ್ಧ ಹಸಿರು ನ್ಯಾಯಮಂಡಳಿಗೆ ಸಲ್ಲಿಸಲಾಗಿದ್ದ ಅರ್ಜಿಯಲ್ಲೂ ವೈಜ್ಞಾನಿಕ ಅಧ್ಯಯನದ ವರದಿಯ ಅಂಶಗಳನ್ನು ಉಲ್ಲೇಖಿಸಲಾಗಿತ್ತು. ಇದರ ಅಧ್ಯಯನಕ್ಕಾಗಿ ಸುಪ್ರೀಂ ಕೋರ್ಟ್ ರಚಿಸಿದ್ದ ಉನ್ನತಮಟ್ಟದ ಸಮಿತಿಯ ಕೆಲ ಸದಸ್ಯರೂ ಇಲ್ಲಿನ ಅಸ್ಥಿರ ನೆಲದ ಬಗ್ಗೆ ತಮ್ಮ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಆದರೆ, ಹೆಚ್ಚು ಅಗಲವಾದ ರಸ್ತೆ ಬೇಕು ಎಂಬ ಸರ್ಕಾರದ ಪ್ರತಿಪಾದನೆಯನ್ನು ಒಪ್ಪಿದ್ದ ಸುಪ್ರೀಂ ಕೋರ್ಟ್ ಕಾಮಗಾರಿಗೆ ಹಸಿರು ನಿಶಾನೆ ತೋರಿತ್ತು. ಹೀಗಾಗಿ ಸುರಂಗ ಮಾರ್ಗಗಳನ್ನು ಒಳಗೊಂಡ, ಎರಡು ಪಥಗಳ ಸರ್ವ ಋತು ಹೆದ್ದಾರಿ ನಿರ್ಮಾಣ ಪ್ರಗತಿಯಲ್ಲಿದೆ. ಇದರ ಮಧ್ಯೆಯೇ ಆರು ತಿಂಗಳ ಅವಧಿಯಲ್ಲಿ ಎರಡು ಕಡೆ ಸುರಂಗಗಳು ಕುಸಿದು ಅವಘಡಗಳು ಸಂಭವಿಸಿವೆ.
ಹಿಮಾಲಯ ಪ್ರದೇಶ ಅಸ್ಥಿರವೇಕೆ?
ದುರ್ಬಲ ಕಲ್ಲು: ಹಿಮಾಲಯದ ನೆಲ, ಪರ್ವತ ಮತ್ತು ಶಿಖರಗಳಲ್ಲಿ ಇರುವ ಕಲ್ಲುಗಳನ್ನು ಅತ್ಯಂತ ದುರ್ಬಲವಾದುದು ಎಂದು ಪರಿಗಣಿಸಲಾಗಿದೆ. ಒಂದು ಘನ ಮೀಟರ್‌ನಷ್ಟು ಕಲ್ಲನ್ನು ತೆಗೆದುಕೊಂಡರೆ, ಅದರಲ್ಲಿ ಹತ್ತಾರು ಬಿರುಕುಗಳು ಮತ್ತು ಜೋಡಣೆಗಳು ಇರುತ್ತವೆ. ಈ ಕಲ್ಲುಗಳ ಧಾರಣಾ ಸಾಮರ್ಥ್ಯ ಕಡಿಮೆ. ಹೀಗಾಗಿ ಈ ಕಲ್ಲುಗಳು ಸುಲಭವಾಗಿ ಮುರಿದು ಬೀಳುವ ಮತ್ತು ಒಡೆದುಹೋಗುವ ಅಪಾಯವಿರುತ್ತದೆ. ಈ ಕಾರಣದಿಂದಲೇ ಹೆಚ್ಚು ಭೂಕುಸಿತ ಸಂಭವಿಸುತ್ತದೆ
ಸಡಿಲ ಮಣ್ಣು: ಇಲ್ಲಿನ ಮಣ್ಣಿನಲ್ಲಿ ಒಡೆದ ಕಲ್ಲುಗಳ ಸಣ್ಣ ಹರಳುಗಳ ಪ್ರಮಾಣ ಹೆಚ್ಚು. ಮಣ್ಣಿನ ಕಣಗಳನ್ನು ಪರಸ್ಪರ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವಂತಹ ರಚನೆ ಇಲ್ಲದ ಕಾರಣಕ್ಕೆ ಈ ಮಣ್ಣು ಬಹಳ ಸಡಿಲವಾಗಿರುತ್ತದೆ. ಈ ಕಾರಣದಿಂದಲೇ ಹೆಚ್ಚು ಭೂಕುಸಿತ ಸಂಭವಿಸುತ್ತದೆ
ನೆಲದಡಿಯ ನೀರುಗಾಲುವೆಗಳು: ಇಲ್ಲಿನ ಮಣ್ಣು ಬಹಳ ಸಡಿಲವಾಗಿರುವ ಕಾರಣದಿಂದ, ನೆಲದಡಿಯಲ್ಲೂ ನೀರು ಕಾಲುವೆಗಳಂತೆ ಹರಿಯುತ್ತವೆ. ನೀರಿನ ಅಪಾರ ಹರಿವಿನ ಕಾರಣದಿಂದ ಸವಕಳಿ ಉಂಟಾಗಿ, ನೆಲದ ಮೇಲ್ಮೈ ನೆಲದಾಳಕ್ಕೆ ಕುಸಿಯುತ್ತದೆ.
ಸುರಂಗ ಅಪಾಯಕಾರಿ?
* ಸದಾ ಭೂಮಿ ಕಂಪಿಸುವ ಕಾರಣದಿಂದ ಸುರಂಗದ ನೆಲದಡಿ ಸಡಿಲವಾಗುತ್ತದೆ. ಸುರಂಗದ ಆರ್‌ಸಿಸಿ ಸ್ಲ್ಯಾಬ್‌ಗಳು ಅತ್ತಿತ ಸರಿಯುವ ಕಾರಣ, ಅವು ದುರ್ಬಲವಾಗುವ ಸಾಧ್ಯತೆ ಇರುತ್ತದೆ. ಈ ಸ್ಲ್ಯಾಬ್‌ಗಳ ಮೇಲೆ ಮತ್ತು ಅಕ್ಕ–ಪಕ್ಕ ಬೀಳುವ ಒತ್ತಡ ಬದಲಾಗುವ ಕಾರಣ, ಅವು ಒಡೆಯುವ ಅಪಾಯವಿರುತ್ತದೆ
* ಈ ಪ್ರದೇಶದಲ್ಲಿ ಕೈಗೊಳ್ಳುತ್ತಿರುವ ಸುರಂಗ ನಿರ್ಮಾಣ ಯೋಜನೆಗಳಲ್ಲಿ, ಕೆಲವು ಸುರಂಗಗಳು ಪರ್ವತಗಳ ಮೇಲ್ಮೈನಿಂದ 1,000 ಮೀಟರ್‌ನಷ್ಟು ಆಳದಲ್ಲಿ ಸಾಗುತ್ತವೆ. ಪರ್ವತಗಳೇ ಅದುರುವ ಕಾರಣದಿಂದ, ಈ ಸುರಂಗದ ಮೇಲೆ ಬೀಳುವ ಭಾರದಲ್ಲೂ ಏರಿಳಿತವಾಗುತ್ತಿರುತ್ತದೆ. ಭೂಕುಸಿತದ ಕಾರಣದಿಂದ ಸುರಂಗದ ಮೇಲ್ಮೈನಲ್ಲಿನ ಭಾರ ಹೆಚ್ಚಾದರೆ, ಸುರಂಗಗಳು ಕುಸಿಯುವ ಅಪಾಯವಿರುತ್ತದೆ.
ಕೆಲವು ಅವಘಡಗಳು
ಜೋಶಿಮಠ ಕುಸಿತ: 2023ರ ಜನವರಿಯಲ್ಲಿ ಉತ್ತರಾಖಂಡದ ಜೋಶಿಮಠ ಪಟ್ಟಣವು ಭಾರಿ ಸುದ್ದಿಯಲ್ಲಿತ್ತು. ಕೆಲವೇ ವಾರಗಳಲ್ಲಿ ಜೋಶಿಮಠದ ಬಹುಭಾಗವು ಕೆಲವು ಇಂಚುಗಳಷ್ಟು ಕುಸಿದಿತ್ತು. ಪರ್ವತದ ಇಳಿಜಾರಿನಲ್ಲಿರುವ ಜೋಶಿಮಠವು, ಅಲಕನಂದಾ ನದಿ ಕಣಿವೆಯತ್ತ ಕುಸಿದಿತ್ತು.
ತಪೋವನ–ವಿಷ್ಣುಗಡ ಜಲವಿದ್ಯುತ್ ಯೋಜನೆಯ ಭಾಗವಾಗಿ ನಿರ್ಮಿಸಲಾಗುತ್ತಿರುವ 12 ಕಿ.ಮೀ. ಉದ್ದದ ಜಲ ಸುರಂಗವು ಜೋಶಿಮಠದ ಕೆಳಗೇ ಸಾಗುತ್ತದೆ. ಜೋಶಿಮಠ ಈಗ ಕುಸಿಯಲು ಈ ಸುರಂಗವೇ ಕಾರಣ ಎಂದು ಕೆಲವು ಅಧ್ಯಯನ ವರದಿಗಳು ಹೇಳುತ್ತವೆ
ಚುಂಗ್ರಿ–ಬಡೇತಿ ಸುರಂಗ ದುರಂತ: ಚಾರ್‌ಧಾಮ್ ಯೋಜನೆಯ ಭಾಗವಾಗಿ ಉತ್ತರಕಾಶಿಯ ಬಳಿ ನಿರ್ಮಿಸಲಾಗುತ್ತಿರುವ ಚುಂಗ್ರಿ–ಬಡೇತಿ ಸುರಂಗ ಮಾರ್ಗದಲ್ಲಿ ಭೂಕುಸಿತ ಸಂಭವಿಸಿತ್ತು. ಸುರಂಗ ಮಾರ್ಗವು ಸಾಗುವ ಪರ್ವತದ ಭಾಗವು ಇದೇ ಜುಲೈನಲ್ಲಿ ಕುಸಿದಿತ್ತು. ಸುರಂಗದಿಂದ ಕೆಲವೇ ಮೀಟರ್‌ಗಳಷ್ಟು ದೂರದಲ್ಲಿ ಈ ಕುಸಿತ ಸಂಭವಿಸಿತ್ತು. ಈ ಸುರಂಗ ಮಾರ್ಗವೂ ಸುರಕ್ಷಿತವಲ್ಲ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದರು. ಸುರಂಗ ಮಾರ್ಗದ ಸಮೀಪದ ಪರ್ವತದ ಇಳಿಜಾರಿನಲ್ಲಿ ಕಾಂಕ್ರೀಟ್ ತುಂಬಿಸಿ, ಅದನ್ನು ಬಲಪಡಿಸುವ ಕಾಮಗಾರಿ ನಡೆಸಲಾಗಿತ್ತು
ಆಧಾರ
ಪಿಟಿಐ, ಸುಪ್ರೀಂ ಕೋರ್ಟ್ ತೀರ್ಪು, ಚಾರ್‌ಧಾಮ್ ಕಾರಿಡಾರ್ ವಿಸ್ತೃತ ಯೋಜನಾ ವರದಿ, ಟೊಲೆಡೊ ವಿಶ್ವವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿಜ್ಞಾನಿಗಳ ಅಧ್ಯಯನ ವರದಿ, ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ‘ಹಿಮಾಲಯದ ಸುರಂಗ ಹೆದ್ದಾರಿಗಳಲ್ಲಿ ಭೂಕಂಪನ ವಲಯಗಳು’ ವರದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.