ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘಿಸುವವರನ್ನು ಶಿಕ್ಷೆಗೊಳಪಡಿಸಲು ದೇಶದಲ್ಲಿ ಭಾರತೀಯ ನ್ಯಾಯ ಸಂಹಿತೆಯೂ ಸೇರಿದಂತೆ ಯುಎಪಿಎ, ಪಿಎಂಎಲ್‌ಎ ಮುಂತಾದ ಕಠಿಣ ಕಾಯ್ದೆಗಳು ಈಗಾಗಲೇ ಇವೆ. ಇವು ಸಾಲದು ಎನ್ನುವಂತೆ ಇದೀಗ ಮಹಾರಾಷ್ಟ್ರ ಸರ್ಕಾರವು ವಿಶೇಷ ಸಾರ್ವಜನಿಕ ಭದ್ರತಾ ಕಾಯ್ದೆ ತರಲು ಹೊರಟಿದೆ. ನಗರ ನಕ್ಸಲರನ್ನು ನಿಗ್ರಹ ಮಾಡಲು ಈ ಕಾನೂನು ತರುತ್ತಿದ್ದೇವೆ ಎಂದು ಅಲ್ಲಿನ ಸರ್ಕಾರ ಘೋಷಿಸಿದೆ. ಆದರೆ, ದೇಶದ ರಾಜಕಾರಣ ಮತ್ತು ಹೋರಾಟಗಳ ಸಂದರ್ಭದಲ್ಲಿ ‘ನಗರ ನಕ್ಸಲರು’ ಎನ್ನುವ ಪದಗುಚ್ಛ ಬಳಕೆಯಾದ ರೀತಿಯನ್ನು ಗಮನಿಸಿದವರು, ಮಹಾರಾಷ್ಟ್ರದ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ
‘ನಕ್ಸಲರು ಕೇವಲ ಗಡ್‌ಚಿರೋಲಿಯಲ್ಲಿ ಇಲ್ಲ. ನಗರ ನಕ್ಸಲರು ಕೆಲವು ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್‌ಜಿಒ) ಸೇರಿದ್ದಾರೆ. ಅವರು ಸರ್ಕಾರದ ವಿರುದ್ದ ವ್ಯವಸ್ಥಿತವಾಗಿ ಸುಳ್ಳು ನಿರೂಪಣೆಗಳನ್ನು ಹರಡುತ್ತಿದ್ದಾರೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಜೂನ್‌ನಲ್ಲಿ ಹೇಳಿದ್ದರು. ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಬಗ್ಗೆ ಮಾತನಾಡುವ ವೇಳೆ ನಗರ ನಕ್ಸಲರ ಪ್ರಸ್ತಾಪ ಮಾಡಿದ್ದ ಅವರು, ಅಂಥವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಕರೆ ನೀಡಿದ್ದರು. ಅದಾದ ಒಂದು ತಿಂಗಳ ಬಳಿಕ ಅವರ ಸರ್ಕಾರವು ನಗರ ನಕ್ಸಲರನ್ನು ನಿಗ್ರಹಿಸಲು ಕಾಯ್ದೆಯೊಂದನ್ನು ತರಲು ಸಿದ್ಧತೆ ನಡೆಸಿದೆ.
ಮಹಾಯುತಿ ಸರ್ಕಾರ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಭದ್ರತಾ ಮಸೂದೆ- 2024 ಮಂಡಿಸಿದೆ. ಗೃಹ, ಕಾನೂನು ಖಾತೆ ಸಚಿವ ದೇವೇಂದ್ರ ಫಡಣವೀಸ್ ಮಸೂದೆ ಮಂಡಿಸಿದ್ದಾರೆ. ನಕ್ಸಲಿಸಂ ಪಿಡುಗು ಮತ್ತು ನಗರ ಪ್ರದೇಶಗಳಲ್ಲಿ ನೆಲೆಸಿರುವ ನಕ್ಸಲ್ ಪರ ಸಹಾನುಭೂತಿ ಉಳ್ಳವರನ್ನು ನಿಗ್ರಹಿಸುವುದು ಮಸೂದೆಯ ಉದ್ದೇಶ ಎಂದು ಸರ್ಕಾರ ಪ್ರತಿಪಾದಿಸಿದೆ. ಇಂತಹದ್ದೇ ಕಾಯ್ದೆ ಛತ್ತೀಸಗಢ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ರಾಜ್ಯಗಳಲ್ಲಿ ಜಾರಿಯಲ್ಲಿದೆ.
ಮಹಾರಾಷ್ಟ್ರದ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದರೆ, ಅದು ಮತ್ತೊಂದು ದಮನಕಾರಿ ಕಾನೂನಾಗಲಿದೆ; ಮಸೂದೆಯಲ್ಲಿ ದುರುಪಯೋಗಕ್ಕೆ ಹೆಚ್ಚು ಅವಕಾಶ ಇದ್ದು, ಇದು ‘ಕಾನೂನುಬಾಹಿರ ಚಟುವಟಿಕೆ’ ತಡೆಗೆ ಪೊಲೀಸರಿಗೆ ಹೆಚ್ಚು ಅಧಿಕಾರ ನೀಡುತ್ತದೆ ಎನ್ನುವ ವಿಶ್ಲೇಷಣೆ ಕೇಳಿಬರುತ್ತಿದೆ.
ಈಗ ಚಾಲ್ತಿಯಲ್ಲಿರುವ ಉಗ್ರರನ್ನು ನಿಗ್ರಹಿಸುವ ಕಾಯ್ದೆಗಳು ನಗರ ನಕ್ಸಲರನ್ನು ಸದೆಬಡಿಯಲು ಹೆಚ್ಚು ಪರಿಣಾಮಕಾರಿಯಾಗಿಲ್ಲ. ಹಾಗಾಗಿ ಹೊಸ ಕಾಯ್ದೆ ತರುತ್ತಿದ್ದೇವೆ ಎನ್ನುವುದು ಮಹಾರಾಷ್ಟ್ರ ಸರ್ಕಾರದ ವಾದ. ಇದು ವ್ಯಕ್ತಿಗಳು ಮತ್ತು ಸಂಸ್ಥೆ/ಸಂಘಟನೆಗಳ ಚಟುವಟಿಕೆಗಳನ್ನು ಕ್ರಿಮಿನಲ್ ಚಟುವಟಿಕೆಗಳ ಪರಿಧಿಗೆ ತರುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವುದಲ್ಲದೇ, ಅದಕ್ಕಾಗಿ ಕಠಿಣ ಶಿಕ್ಷೆಯನ್ನು ವಿಧಿಸುವ ಅಂಶಗಳನ್ನು ಮಸೂದೆ ಒಳಗೊಂಡಿದೆ.
ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ, ಅಂಥವನ್ನು ಬೆಂಬಲಿಸುವ, ಸಹಾಯ ಮಾಡುವ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರೋತ್ಸಾಹಿಸುವ ವ್ಯಕ್ತಿ ಅಥವಾ ಸಂಸ್ಥೆ/ಸಂಘಟನೆಯನ್ನು ಕಾನೂನುಬಾಹಿರ ಎಂದು ಮಸೂದೆಯಲ್ಲಿ ವಿವರಿಸಲಾಗಿದೆ. ಇಂಥ ಸಂಸ್ಥೆ/ಸಂಘಟನೆಯ ಜತೆ ಗುರುತಿಸಿಕೊಂಡವರಿಗೆ ಮೂರರಿಂದ ಏಳು ವರ್ಷ ಜೈಲು ಶಿಕ್ಷೆ ಮತ್ತು ₹3 ಲಕ್ಷದಿಂದ ₹5 ಲಕ್ಷದವರೆಗೆ ದಂಡ ವಿಧಿಸಬಹುದು.
ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ಈಗಾಗಲೇ ಜಾರಿಯಲ್ಲಿದ್ದು, ಅದನ್ನೂ ಬಹುತೇಕ ಇಂಥದ್ದೇ ಉದ್ದೇಶಗಳಿಗಾಗಿ ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯನ್ನೂ (ಯುಎಪಿಎ) ಭಯೋತ್ಪಾದನೆ ನಿಗ್ರಹಕ್ಕೆ ಬಳಸಲಾಗುತ್ತಿದೆ.
ಮಸೂದೆ ವಿರೋಧಿಸುವವರ ವಾದವೇನು?
ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಭದ್ರತಾ ಮಸೂದೆ- 2024ಕ್ಕೆ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ಮುಖಂಡರು, ಕಾನೂನು ತಜ್ಞರು, ಮಾನವ ಹಕ್ಕು ರಕ್ಷಣೆಗೆ ಹೋರಾಡುತ್ತಿರುವ ಕೆಲವು ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ. ಕಾಂಗ್ರೆಸ್ ಮುಖಂಡ ಪೃಥ್ವಿರಾಜ್ ಚೌಹಾಣ್, ಇದು ಪ್ರತಿಭಟನೆಗಳನ್ನು ಹತ್ತಿಕ್ಕುವ ಒಂದು ತಂತ್ರ ಎಂದಿದ್ದಾರೆ. ಮಸೂದೆಯನ್ನು ವಾಪಸ್ ಪಡೆಯಬೇಕು ಎಂದು ಸಿಪಿಎಂ ಆಗ್ರಹಿಸಿದೆ.
ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಭದ್ರತಾ ಮಸೂದೆ- 2024ರಲ್ಲಿ ‘ಕಾನೂನುಬಾಹಿರ’ ಎನ್ನುವುದರ ವಿವರಣೆ ಸೇರಿದಂತೆ ಹಲವು ಸೆಕ್ಷನ್‌ಗಳು ಅಸ್ಪಷ್ಟವಾಗಿವೆ. ಹಾಗಾಗಿ, ದುರುಪಯೋಗಕ್ಕೆ ಅವಕಾಶ ಇದೆ ಎನ್ನುವುದು ವಿರೋಧಿಗಳ ವಾದ. ಈ ಮಸೂದೆಯ ಪ್ರಕಾರ, ವಿಚಾರಣೆಗೂ ಮುನ್ನವೇ ಆರೋಪಿಯನ್ನು ಪೊಲೀಸರು ಅವರ ಮನೆಯಿಂದ ವಶಕ್ಕೆ ಪಡೆಯಬಹುದಾಗಿದೆ {ಸೆಕ್ಷನ್ 9 (1)} ಮತ್ತು ಅವರ ಚರಾಸ್ತಿ ವಶಕ್ಕೆ ಪಡೆದು, ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬಹುದಾಗಿದೆ {ಸೆಕ್ಷನ್ 10 (1)}. ಶಂಕಿತ ಸಂಸ್ಥೆಯ ಸದಸ್ಯರಷ್ಟೇ ಅಲ್ಲದೇ ಅದರೊಂದಿಗೆ ಗುರುತಿಸಿಕೊಂಡವರು ಕೂಡ ಸಮಾನ ರೀತಿಯಲ್ಲಿ ವಿಚಾರಣೆಗೆ, ಶಿಕ್ಷೆಗೆ ಅರ್ಹರಾಗಿರುತ್ತಾರೆ {(ಸೆಕ್ಷನ್ 8 (2)}. ಈ ಮಸೂದೆಯ ಅಡಿ, ಯಾವುದೇ ಪ್ರಕಾರದ ಅಪರಾಧವನ್ನು ಜಾಮೀನುರಹಿತ ಎಂದು ಪರಿಗಣಿಸಲಾಗುತ್ತದೆ.
ಈ ಕಾಯ್ದೆಯ ಅಡಿ ಬಂಧನಕ್ಕೊಳಗಾದವರು ಜಾಮೀನು ಮತ್ತಿತರ ವಿಚಾರಗಳಿಗಾಗಿ ಜಿಲ್ಲಾ ಮಟ್ಟದ ನ್ಯಾಯಾಲಯಗಳನ್ನು ಸಂಪರ್ಕಿಸುವಂತಿಲ್ಲ. ಅವರು ಹೈಕೋರ್ಟ್ ಇಲ್ಲವೇ ಸುಪ್ರೀಂ ಕೋರ್ಟ್‌ನಲ್ಲಿ ಮಾತ್ರ ಬಂಧನವನ್ನು ಪ್ರಶ್ನಿಸಬಹುದಾಗಿದೆ. ಜತೆಗೆ ಈ ಮಸೂದೆಯ 14 ಮತ್ತು 15ನೇ ಸೆಕ್ಷನ್‌ಗಳು ಪೊಲೀಸರಿಗೆ ಮತ್ತು ಅಧಿಕಾರಿಗಳಿಗೆ ಅಧಿಕಾರ ದುರುಪಯೋಗದ ಆರೋಪಗಳಿಂದ ರಕ್ಷಣೆ ಒದಗಿಸುತ್ತವೆ.
ಮಸೂದೆಯ ಸೆಕ್ಷನ್ 5 (1) ಮತ್ತು (2) ರ ಪ್ರಕಾರ, ರಾಜ್ಯ ಸರ್ಕಾರವು ಒಂದು ಸಲಹಾ ಮಂಡಳಿಯನ್ನು ರಚಿಸುತ್ತದೆ. ಅದು ಮೂವರು ಸದಸ್ಯರನ್ನು ಒಳಗೊಳ್ಳಲಿದ್ದು, ನಿವೃತ್ತ ಅಥವಾ ಹಾಲಿ ಹೈಕೋರ್ಟ್ ನ್ಯಾಯಾಧೀಶರು ಅಥವಾ ಅವರಿಗೆ ಸಮನಾದ ಹುದ್ದೆಯಲ್ಲಿದ್ದವರನ್ನು ಸರ್ಕಾರ ನೇಮಿಸಬಹುದಾಗಿದೆ. ಅವರ ಪೈಕಿ ಒಬ್ಬರನ್ನು ಸರ್ಕಾರವೇ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸುತ್ತದೆ. ಯಾವುದೇ ಸಂಸ್ಥೆ/ಸಂಘಟನೆಯನ್ನು ಕಾನೂನುಬಾಹಿರ ಎಂದು ತೀರ್ಮಾನಿಸಲು ಅಗತ್ಯ ಕಾರಣಗಳಿವೆಯೇ ಎನ್ನುವುದನ್ನು ಸಲಹಾ ಮಂಡಳಿಯು ನಿರ್ಧರಿಸಲಿದೆ. ಅದು ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ. ಸಲಹಾ ಮಂಡಳಿ ರಚನೆಯಲ್ಲೂ ಸರ್ಕಾರದ ಪಾತ್ರವೇ ಪ್ರಮುಖವಾಗಿರುವುದರಿಂದ, ಪಕ್ಷಪಾತಕ್ಕೆ ಅವಕಾಶವಿದೆ ಎನ್ನುವ ದೂರು ಕೇಳಿಬಂದಿದೆ.
‘ನಗರ ನಕ್ಸಲರ ನಿಗ್ರಹ’ಕ್ಕೆ ಒಂದು ಹೊಸ ಕಾಯ್ದೆಯ ಅಗತ್ಯವೇ ಇರಲಿಲ್ಲ ಎನ್ನುವ ವಾದವಿದೆ. ಜನರ ಹಕ್ಕುಗಳನ್ನು ದಮನ ಮಾಡಲು, ಜನರಿಗೆ ಕಿರುಕುಳ ನೀಡಲು ಮತ್ತು ಪ್ರತಿಭಟನೆಗಳನ್ನು, ಭಿನ್ನಮತವನ್ನು, ವಿರೋಧಿಗಳನ್ನು ಹತ್ತಿಕ್ಕಲು ಈ ಕಾಯ್ದೆಯು ಸರ್ಕಾರಕ್ಕೆ ಮತ್ತೊಂದು ಅಸ್ತ್ರವಾಗಲಿದೆ ಎಂದು ‘ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್’ ಸೇರಿದಂತೆ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಹಲವು ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.
‘ನಗರ ನಕ್ಸಲರು’ ಪದ ಬಳಕೆ ಇಲ್ಲ ಎಂದಿದ್ದ ಗೃಹ ಸಚಿವಾಲಯ
‘ನಗರ ನಕ್ಸಲರು’ (ಅರ್ಬನ್ ನಕ್ಸಲ್) ಎನ್ನುವುದನ್ನು ಬಲಪಂಥೀಯರು ಹಾಗೂ ಬಿಜೆಪಿ ಮುಖಂಡರು ಹೆಚ್ಚಾಗಿ ಬಳಸುತ್ತಾರೆ. ಎಡಪಂಥೀಯರನ್ನು ಮತ್ತು ಬಿಜೆಪಿ ಸರ್ಕಾರವನ್ನು ಟೀಕಿಸುವವರನ್ನು ‘ನಗರ ನಕ್ಸಲರು’ ಎಂದು ಬಣ್ಣಿಸಿದ ಸಂದರ್ಭಗಳೂ ಇವೆ.
ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಹಾಗೂ ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಗೃಹ ಸಚಿವ ಅಮಿತ್ ಶಾ, ‘ನಗರ ನಕ್ಸಲರಿಗೆ ಮತ ನೀಡುವಂತಹ ತಪ್ಪು ಮಾಡಬೇಡಿ’ ಎಂದು ಜನರಿಗೆ ಕರೆ ನೀಡಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಸಂಸದ ತೇಜಸ್ವಿ ಸೂರ್ಯವರೆಗೆ ಬಿಜೆಪಿಯ ಹಲವು ಮುಖಂಡರು ಹಲವು ಸಂದರ್ಭಗಳಲ್ಲಿ ‘ನಗರ ನಕ್ಸಲ್’ ಎಂದು ಕರೆದಿದ್ದಾರೆ.
ರಾಜಕೀಯ ವಿರೋಧಿಗಳನ್ನಷ್ಟೇ ಅಲ್ಲ, ಸರ್ಕಾರದ ನೀತಿಗಳನ್ನು ವಿರೋಧಿಸಿ ವಿದ್ಯಾರ್ಥಿಗಳು, ರೈತರು ಪ್ರತಿಭಟನೆಗಳನ್ನು ನಡೆಸಿದಾಗ, ಅವರನ್ನು ಟೀಕಿಸುವ ಸಂದರ್ಭದಲ್ಲಿ ಬಿಜೆಪಿ ಮುಖಂಡರು ನಗರ ನಕ್ಸಲರು ಎನ್ನುವ ಪದಗುಚ್ಛ ಬಳಸಿದ್ದರು. ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ನಗರ ನಕ್ಸಲ್ ಎಂದು ಕರೆದಿದ್ದರು.
2020ರ ಮಾರ್ಚ್‌ನಲ್ಲಿ ಟಿಎಂಸಿ ರಾಜ್ಯಸಭಾ ಸದಸ್ಯೆ ಶಾಂತಾ ಛೇತ್ರಿ ಅವರ ಪ್ರಶ್ನೆಯೊಂದಕ್ಕೆ ರಾಜ್ಯಸಭೆಯಲ್ಲಿ ಉತ್ತರಿಸುವ ವೇಳೆ, ‘ನಗರ ನಕ್ಸಲರು ಎನ್ನುವ ಪದಗುಚ್ಛವನ್ನು ಭಾರತ ಸರ್ಕಾರದ ಗೃಹ ಸಚಿವಾಲಯ ಬಳಸುತ್ತಿಲ್ಲ’ ಎಂದು ಗೃಹ ಖಾತೆಯ ರಾಜ್ಯ ಸಚಿವರಾಗಿದ್ದ ಜಿ.ಕಿಶನ್ ರೆಡ್ಡಿ ಹೇಳಿದ್ದರು.
ನಗರ ನಕ್ಸಲರು ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ನಗರ ಪ್ರದೇಶಗಳಲ್ಲಿಯೂ ಅವರ ಸಂಖ್ಯೆ ಹೆಚ್ಚುತ್ತಿದೆ ಎಂದು ಮಸೂದೆ ಮಂಡನೆಯ ವೇಳೆ ದೇವೇಂದ್ರ ಫಡಣವೀಸ್ ಹೇಳಿದ್ದಾರೆ. ಆದರೆ, ಕೇಂದ್ರ ಸರ್ಕಾರವು, ಭಾರತದಲ್ಲಿ ನಕ್ಸಲ್ ಚಟುವಟಿಕೆಗಳು ಕ್ಷೀಣಿಸುತ್ತಿದ್ದು, ಈಗ ಅವರು ಅಪಾಯಕಾರಿಯಾಗಿ ಉಳಿದಿಲ್ಲ ಎಂದು ಪ್ರತಿಪಾದಿಸುತ್ತಿದೆ. ನಕ್ಸಲ್ ಸಮಸ್ಯೆ ಇನ್ನೂ ಇದೆ ಎನ್ನುವುದಾದರೂ ಕಾಡಿನಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಇರುವ ನಕ್ಸಲರಿಗೆ ಅನ್ವಯಿಸುತ್ತಿರುವ ಕಾನೂನನ್ನೇ ನಗರ ನಕ್ಸಲರಿಗೂ ಅನ್ವಯಿಸಬಹುದು ಎನ್ನುವ ವಿಶ್ಲೇಷಣೆಯೂ ನಡೆಯುತ್ತಿದೆ.
ಆಧಾರ: ಪಿಟಿಐ, ಸಿಟಿಜನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್ ವೆಬ್ ಪೋರ್ಟಲ್, ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಭದ್ರತಾ ಮಸೂದೆ–2024 ಕರಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.