ಬಿಜೆಪಿಯ ಮಂದಿರ – ಮಸೀದಿ ಜಪ
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಈ ಬಾರಿಯೂ ಹಿಂದುತ್ವದ ನೆಲೆಯಲ್ಲಿಯೇ ಎದುರಿಸಲು ಭೂಮಿಕೆಯನ್ನು ಸಿದ್ಧಪಡಿಸಿಕೊಂಡಿದೆ. 2017ರ ವಿಧಾನಸಭಾ ಚುನಾವಣೆಯನ್ನು ಎದುರಿಸುವಾಗ ಬಿಜೆಪಿಯು ಭ್ರಷ್ಟಾಚಾರ ನಿರ್ಮೂಲನೆ, ಅಭಿವೃದ್ಧಿ, ಎಲ್ಲರ ವಿಕಾಸ, ಹಿಂದುತ್ವ ಮತ್ತು ರಾಮ ಮಂದಿರ ವಿಚಾರವನ್ನು ಇಟ್ಟುಕೊಂಡಿತ್ತು. ಆದರೆ ಈ ಬಾರಿ ಹಿಂದುತ್ವದ ಪ್ರತಿಪಾದನೆಯನ್ನೇ ಬಿಜೆಪಿ ಆತುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಇಲ್ಲಿ ಭಾಗಿಯಾಗಿದ್ದ ರ‍್ಯಾಲಿಯೊಂದರಲ್ಲಿ ಇದನ್ನು ಸ್ಪಷ್ಟವಾಗಿ ಹೇಳಿದ್ದರು. ‘ರಾಮಮಂದಿರ ನಿರ್ಮಾಣಕ್ಕೆ ನೆರವು ನೀಡಲು ಬಂದಿದ್ದ ಕರಸೇವಕರಿಗೆ ಸಮಾಜವಾದಿ ಪಕ್ಷದ ಸರ್ಕಾರ ಗುಂಡು ಹಾರಿಸಲು ಆದೇಶ ನೀಡಿತ್ತು. ಅವರಿಗೆ ನೀವು ಮತ ನೀಡುತ್ತೀರಾ? ನಾವು ರಾಮಮಂದಿರ ನಿರ್ಮಿಸಿದ್ದೇವೆ’ ಎಂದು ಹೇಳಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ರ‍್ಯಾಲಿಯೊಂದರಲ್ಲಿ ಇದೇ ಮಾತುಗಳನ್ನು ಹೇಳಿದ್ದರು.
ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್‌ನ ಅನುಮತಿ ದೊರೆತ ನಂತರ, ‘ರಾಮಮಂದಿರ ನಮ್ಮದಾಯಿತು, ಕಾಶಿ–ಮಥುರಾ ಇನ್ನೂ ಬಾಕಿಯಿದೆ’ ಎಂದು ರಾಜ್ಯ ಬಿಜೆಪಿ ನಾಯಕರು ಘೋಷಿಸಿದ್ದರು. ಆ ಘೋಷಣೆಯ ಪ್ರಕಾರವೇ ಬಿಜೆಪಿ ಚುನಾವಣೆಗೆ ತಯಾರಿ ನಡೆಸಿದೆ.
ಪ್ರಧಾನಿ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿರುವ ಧಾರ್ಮಿಕ ಕ್ಷೇತ್ರವಾದ ಕಾಶಿಯನ್ನು ರಾಜ್ಯ ಸರ್ಕಾರವು ₹1,000 ಕೋಟಿ ವೆಚ್ಚದಲ್ಲಿ ಪುನರಭಿವೃದ್ಧಿ ಪಡಿಸಿದೆ. ಅಭಿವೃದ್ಧಿ ಕಾರ್ಯಗಳು ಪೂರ್ಣವಾಗಲು ಇನ್ನೂ ನಾಲ್ಕೈದು ತಿಂಗಳ ಕಾಮಗಾರಿ ನಡೆಯಬೇಕಿದೆ. ಆದರೆ ಚುನಾವಣೆ ಘೋಷಣೆಯಾಗುವ ಮುನ್ನವೇ ಕಾಶಿ ಕಾರಿಡಾರ್ ಅನ್ನು ಪ್ರಧಾನಿ ಉದ್ಘಾಟಿಸಿದ್ದಾರೆ.
ರಾಮ ಮಂದಿರ ವಿಚಾರದಲ್ಲಿ ಜಯ ದೊರೆತಾಗ ಘೋಷಿಸಿದ್ದಂತೆ, ಮಥುರಾದಲ್ಲಿ ಮಸೀದಿ ಕೆಡವುವ ವಿಚಾರವೂ ಭಾರಿ ದೊಡ್ಡ ಸದ್ದು ಮಾಡುತ್ತಿದೆ. ಈ ಸಂಬಂಧ ನ್ಯಾಯಾಲಯಗಳಲ್ಲಿ ಹತ್ತಾರು ಅರ್ಜಿಗಳು ಸಲ್ಲಿಕೆಯಾಗಿವೆ. ಇದನ್ನು ಸಿವಿಲ್ ವ್ಯಾಜ್ಯವೆಂದು ಪರಿಗಣಿಸಬೇಕು ಎಂದು ಆಗ್ರಹಿಸಲಾಗುತ್ತಿದೆ.
‘ಉತ್ತರ ಪ್ರದೇಶದ ಪೂರ್ವಾಂಚಲದಿಂದ ಹಲವು ದಶಕಗಳಲ್ಲಿ ಲಕ್ಷಾಂತರ ಹಿಂದೂಗಳು ವಲಸೆ ಹೋಗಿದ್ದಾರೆ. ಅವರನ್ನು ವಾಪಸ್ ಕರೆಸಲಾಗುತ್ತದೆ. ದಬ್ಬಾಳಿಕೆ ನಡೆಸಿದವರನ್ನು ಓಡಿಸುತ್ತೇವೆ’ ಎಂದು ಅಮಿತ್ ಶಾ ಘೋಷಿಸಿದ್ದರು. ಆದರೆ ಈ ವಿಚಾರಗಳು ಹೆಚ್ಚು ಫಲ ನೀಡುವುದಿಲ್ಲ. ಜನರಿಗೆ ಇಲ್ಲಿ ಹಿಂಸಾಚಾರ ನಡೆಯುವುದು ಬೇಕಿಲ್ಲ. ಬದಲಿಗೆ ‘ಮಂದಿರ–ಮಸೀದಿ’ ಎಂಬ ಪದಗಳು ಸಾಕು ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಬಿಜೆಪಿ ಮತಕೋಟೆ ಲೂಟಿಗೆ ಎಸ್‌ಪಿ ತಂತ್ರ
ಸಮಾಜವಾದಿ ಪಕ್ಷಕ್ಕೆ ಯಾದವರು ಮತ್ತು ಮುಸ್ಲಿಮರ ಮತವಿದ್ದರೆ ಸಾಕು ಎಂದು ಹೇಳುವ ಕಾಲವಿತ್ತು. ಅದೇ ಮಂತ್ರವನ್ನು ಪಠಿಸಿ, ಪಕ್ಷವು ಹಲವು ಚುನಾವಣೆಗಳನ್ನು ಗೆದ್ದಿತ್ತು. ಆದರೆ ಈಗ ಕಾಲ ಬದಲಾಗಿದೆ. ಈ ಎರಡು ಸಮುದಾಯಗಳನ್ನಷ್ಟೇ ನೆಚ್ಚಿಕೊಂಡು ಪಕ್ಷವು ಕೈಸುಟ್ಟುಕೊಂಡಿದೆ. ‘ಕೆಲಸವೇ ಮಾತನಾಡುತ್ತದೆ’ ಎಂದು ಕಳೆದ ಬಾರಿ ಚುನಾವಣಾ ಕಣಕ್ಕೆ ಜಿಗಿದಿದ್ದ ಅಖಿಲೇಶ್ ಯಾದವ್–ಕಾಂಗ್ರೆಸ್‌ನ ರಾಹುಲ್ ಗಾಂಧಿ ಜೋಡಿಯ ಜಂಟಿ ಸವಾರಿ ಪಲ್ಟಿ ಹೊಡೆದಿತ್ತು. ಹೀಗಾಗಿ ಈ ಎಲ್ಲಾ ತಂತ್ರಗಾರಿಕೆಗಳನ್ನು ಬದಿಗಿಟ್ಟು, ಅಖಿಲೇಶ್ ನೇತೃತ್ವದಲ್ಲಿ ಸಮಾಜವಾದಿ ಪಕ್ಷವು ಚುನಾವಣಾ ಕಣಕ್ಕೆ ಇಳಿದಿದೆ.
2014ಕ್ಕೂ ಮೊದಲು ಇತರೆ ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಟ ಜಾತಿಗಳ ಮತಗಳು ಸಮಾಜವಾದಿ ಪಕ್ಷ ಮತ್ತು ಮಾಯಾವತಿ ಅವರ ಬಹುಜನ ಸಮಾಜ ಪಕ್ಷಕ್ಕೆ ನಿರಾಯಾಸವಾಗಿ ಬಂದು ಬೀಳುತ್ತಿದ್ದವು. 2014ರದ ಎಲ್ಲಾ ಚುನಾವಣೆಯಲ್ಲೂ ಈ ಜಾತಿಯ ಜನರ ಮತಗಳು ಅಖಿಲೇಶ್ ಅವರ ಕೈಹಿಡಿಯಲಿಲ್ಲ. ಆದರೆ ಕೋವಿಡ್ ಕಾಲ ಮತ್ತು ಆಗ ಸರ್ಕಾರವು ಈ ಸಮುದಾಯಗಳನ್ನು ನಡೆಸಿಕೊಂಡ ರೀತಿಯು ಈಗ ಸಮಾಜವಾದಿ ಪಕ್ಷದ ಅನುಕೂಲಕ್ಕೆ ಒದಗಿಬಂದಿದೆ.
ಅಖಿಲೇಶ್ ಯಾದವ್ ಸಹ ಈ ಅನುಕೂಲವನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ನಂತಹ ದೊಡ್ಡ ಪಕ್ಷಗಳು ಮೇಲ್ಜಾತಿಯವರನ್ನಷ್ಟೇ ಓಲೈಸುತ್ತಿವೆ. ಸಮಾಜವಾದಿ ಪಕ್ಷವು ಅಧಿಕಾರಕ್ಕೆ ಬಂದರೆ, ಜಾತಿ ಆಧಾರದಲ್ಲಿ ಗಣತಿ ನಡೆಸಲಿದೆ. ಆ ಮೂಲಕ ಎಲ್ಲಾ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಲಿದೆ ಎಂದು ಅಖಿಲೇಶ್ ಘೋಷಿಸುತ್ತಿದ್ದಾರೆ. ರಾಜ್ಯದ ಎಲ್ಲೆಡೆ, ಅಲ್ಲಲ್ಲಿ ಪ್ರಧಾನವಾಗಿರುವ ಮತ್ತು ಪ್ರಾಬಲ್ಯ ಹೊಂದಿರುವ ಸಣ್ಣ ಜಾತಿಗಳ ಪಕ್ಷಗಳ ಜತೆ ಸಮಾಜವಾದಿ ಪಕ್ಷವು ಮೈತ್ರಿ ಮಾಡಿಕೊಂಡಿದೆ.
ಜಾಟವಾ ಸಮುದಾಯದ ಮತಬೆಂಬಲ ಹೊಂದಿರುವ ರಾಷ್ಟ್ರೀಯ ಲೋಕದಳ, ಇತರೆ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿಗಳ ಮತಬೆಂಬಲ ಹೊಂದಿರುವ ಅಪ್ನಾದಳ, ಡಿಎಸ್‌ಪಿ, ಪಿಜೆಪಿ, ಲೇಬರ್ ಪಾರ್ಟಿ, ಅಖಿಲ ಭಾರತೀಯ ಕಿಸಾನ್ ಸೇನಾ ಜತೆಗೆ ಅಖಿಲೇಶ್ ಮೈತ್ರಿ ಮಾಡಿಕೊಂಡಿದ್ದಾರೆ. ಆ ಪಕ್ಷಗಳ ನಾಯಕರನ್ನೇ ಕಣಕ್ಕೆ ಇಳಿಸುವ ಮೂಲಕ, ಮತಗಳು ಹಂಚಿಹೋಗುವುದನ್ನು ತಡೆಯಲು ತಂತ್ರ ರೂಪಿಸಿದ್ದಾರೆ.
ಹೀಗೆ ಹಿಂದೂ ಸಮುದಾಯದ ಸಣ್ಣ–ಸಣ್ಣ ಪಕ್ಷಗಳ ಜತೆಗೆ ಅಖಿಲೇಶ್ ಕೈಜೋಡಿಸಿದ್ದಾರೆ.ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಮತ ನೀಡಿದ್ದ ಈ ಸಮುದಾಯಗಳನ್ನು ತಮ್ಮೊಟ್ಟಿಗೆ ಸೇರಿಸಿಕೊಂಡು, ಬಿಜೆಪಿಯ ಮತಕೋಟೆಯನ್ನು ಲೂಟಿಹೊಡೆಯಲು ಅಖಿಲೇಶ್ ತಂತ್ರ ರೂಪಿಸಿದ್ದಾರೆ.
ಬಿಎಸ್‌ಪಿ ಅಳಿವು ಉಳಿವಿನ ಪ್ರಶ್ನೆ
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಘೋಷಣೆಗೂ ಮುನ್ನ ಬಹುತೇಕ ರಾಜಕೀಯ ಪಕ್ಷಗಳು ಸಕ್ರಿಯವಾಗಿದ್ದರೆ, ಮಾಯಾವತಿ ನೇತೃತ್ವದ ಬಿಎಸ್‌ಪಿ ಮಾತ್ರ ತೆರೆಮರೆಯಲ್ಲೇ ಇತ್ತು. ಚುನಾವಣಾ ಆಯೋಗವು ದಿನಾಂಕವನ್ನು ಪ್ರಕಟಿಸಿದ ಮರುದಿನ ಪಕ್ಷ ಜಾಗೃತವಾಗಿದೆ. ಈವರೆಗೆ ಯಾವುದೇ ಸಮಾವೇಶಗಳನ್ನು ನಡೆಸದ ಮಾಯಾವತಿ ಅವರನ್ನು ರಾಜಕೀಯ ಪಕ್ಷಗಳು ಲೇವಡಿ ಮಾಡಿದ್ದವು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ್ದ ಮಾಯಾವತಿ, ಪಕ್ಷದ ಹಣಕಾಸಿನ ಸ್ಥಿತಿ ಸರಿಯಿಲ್ಲ ಎಂದಿದ್ದರು.
2007ರಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸಿದ್ದ ಮಾಯಾವತಿ ಅವರು ಆ ಬಳಿಕ ನಡೆದ ಚುನಾವಣೆಯಗಳಲ್ಲಿ ಛಾಪು ಮೂಡಿಸುವಲ್ಲಿ ವಿಫಲವಾಗಿದ್ದಾರೆ. ಆಗ 403ರ ಪೈಕಿ 206 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಎಸ್‌ಪಿ, ಶೇ 30.43ರಷ್ಟು ಮತಗಳನ್ನು ಗಳಿಸಿತ್ತು. 2017ರ ಚುನಾವಣೆಯಲ್ಲಿ ಪಕ್ಷದ ಸ್ಥಿತಿ ಇನ್ನಿಲ್ಲದಂತೆ ಕುಸಿಯಿತು. ಕೇವಲ 19 ಶಾಸಕರು ಆರಿಸಿಬಂದರು. ವಿಶ್ಲೇಷಕರ ಪ್ರಕಾರ, 2022ರ ಚುನಾವಣೆಯು ಮಾಯಾವತಿ ಅವರ ಅಳಿವು–ಉಳಿವಿನ ಪ್ರಶ್ನೆ. ಇಷ್ಟಲ್ಲದೇ, ಮುಖ್ಯವಾಹಿನಿಯ ದಲಿತ ಪಕ್ಷದ ಭವಿಷ್ಯದ ಪ್ರಶ್ನೆಯೂ ಈ ಚುನಾವಣೆಯಲ್ಲಿ ಅಡಗಿದೆ ಎನ್ನಲಾಗಿದೆ.
ಪಕ್ಷದ ಪರಮೋಚ್ಚ ನಾಯಕಿಮಾಯಾವತಿ ಅವರನ್ನು ಬಿಟ್ಟರೆ, ಎರಡನೇ ನಾಯಕ ಅಥವಾ ನಾಯಕಿ ಇಲ್ಲ. ಸ್ವಾಮಿ ಪ್ರಸಾದ್ ಮೌರ್ಯ, ಬ್ರಿಜೇಶ್ ಪಾಠಕ್, ರಾಮ್ ಅಚಲ್ ರಾಜ್‌ಭರ್, ನಸೀಮುದ್ದೀನ್ ಸಿದ್ದಿಕ್ ಅವರಂತಹ ಘಟಾನುಘಟಿಗಳು ವಲಸೆ ಹೋಗುವುದನ್ನು ತಡೆಹಿಡಿಯುವಲ್ಲಿ ಪಕ್ಷ ವಿಫಲವಾಯಿತು.ಚಂದ್ರಶೇಖರ ಆಜಾದ್ ರೀತಿಯ ಹೊಸ ತಲೆಮಾರಿನ ದಲಿತ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ.
ಪಕ್ಷವು ಜರ್ಜರಿತವಾಗಿದ್ದರೂ, ಈ ಬಾರಿಯ ಚುನಾವಣೆಗೆ ತಳಮಟ್ಟದಲ್ಲಿ ತೊಡಗಿಸಿಕೊಂಡಿದೆ ಎಂದು ಬಿಎಸ್‌ಪಿ ಮೂಲಗಳು ಹೇಳುತ್ತವೆ.ಉತ್ತರ ಪ್ರದೇಶದಲ್ಲಿ 84 ಮೀಸಲು ಕ್ಷೇತ್ರಗಳಿವೆ. ಈ ಪೈಕಿ 2007ರ ಚುನಾವಣೆಯಲ್ಲಿ 62 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಎಸ್‌ಪಿಯು ಈ ಬಾರಿ ಅದೇ ಫಲಿತಾಂಶವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದೆ.
ಕಾಂಗ್ರೆಸ್‌ಗೆ ವರವಾಗುತ್ತಾರಾ ಪ್ರಿಯಾಂಕಾ?
ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಈ ಬಾರಿ ಮೋಡಿ ಮಾಡುವ ಉಮೇದು ಕಾಂಗ್ರೆಸ್‌ಗೆ ಇದೆ. ಎರಡು ಲೋಕಸಭಾ ಚುನಾವಣೆಗಳ ಸೋಲಿನಿಂದ ಮೇಲೆದ್ದು, ರಾಜ್ಯದಲ್ಲಿ ಚುಕ್ಕಾಣಿ ಹಿಡಿಯುವ ತುಡಿತವಿದೆ. ‘ಹಿಂದೂ ಮತ್ತು ಹಿಂದುತ್ವವಾದಿ’ ಹಾಗೂ ಮಹಿಳಾ ಕೇಂದ್ರಿತ ವಿಚಾರಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷವು ಚುನಾವಣಾ ಕಣಕ್ಕೆ ಧುಮುಕಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜ್ಯದಲ್ಲಿ ಪಕ್ಷದ ವರ್ಚಸ್ವಿ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಇದೇ ಮೊದಲ ಬಾರಿಗೆ ಪ್ರಿಯಾಂಕಾ ಅವರನ್ನು ಮುಂಚೂಣಿಯಲ್ಲಿ ಇಟ್ಟುಕೊಂಡು ರಾಜ್ಯದಲ್ಲಿಕಾಂಗ್ರೆಸ್ ಪಕ್ಷವು ಪುನಶ್ಚೇತನದ ಪ್ರಯತ್ನಕ್ಕೆ ಇಳಿದಿದೆ. ರಾಜ್ಯದ ಜಿಲ್ಲೆ ಜಿಲ್ಲೆಗಳಲ್ಲಿ ಓಡಾಡುತ್ತಿರುವ ಅವರು ಮಹಿಳಾ ಸಂಘಟನೆಯಲ್ಲಿ ತೊಡಗಿದ್ದಾರೆ. ಕಳೆದ ತಿಂಗಳು ಆರಂಭಿಸಿದ್ದ ‘ನಾನು ಹುಡುಗಿ, ಹೋರಾಡಬಲ್ಲೆ’ ಎಂಬ ಅಭಿಯಾನವು ಸಾಕಷ್ಟು ಛಾಪು ಮೂಡಿಸಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಹಾಥರಸ್ ಅತ್ಯಾಚಾರ ಪ್ರಕರಣದಲ್ಲಿ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸಂತ್ರಸ್ತರನ್ನು ಭೇಟಿ ಮಾಡಲು ಹೋಗಿದ್ದಾಗ ಪೊಲೀಸರಿಂದ ಅಡ್ಡಿ ಎದುರಾಗಿತ್ತು.ಕಾಂಗ್ರೆಸ್ ನಿಯೋಗವು ಸಂತ್ರಸ್ತ ಕುಟುಂಬವನ್ನು ಭೇಟಿಯಾಗುವಲ್ಲಿ ಯಶಸ್ವಿಯಾಗಿತ್ತು.ಕಾಂಗ್ರೆಸ್ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಹೆಣ್ಣುಮಕ್ಕಳು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಲಖಿಂಪುರ–ಖೇರಿಯಲ್ಲಿ ರೈತರ ಮೇಲೆ ಎಸ್‌ಯುವಿ ಹರಿಸಿದ್ದ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವು ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದೆ. ಇವೆಲ್ಲವೂ ಪಕ್ಷಕ್ಕೆ ಮತಗಳನ್ನು ತಂದುಕೊಡುವ ಲೆಕ್ಕಾಚಾರವಿದೆ.
‘ರಾಜ್ಯದಲ್ಲಿ ನಮ್ಮ ಪಕ್ಷ ದುರ್ಬಲವಾಗಿತ್ತು. ಆದರೆ ಈಗ ನಮ್ಮಲ್ಲಿ 7,000 ಗ್ರಾಮ ಸಭೆ ಘಟಕಗಳು, 8,134 ನ್ಯಾಯ ಪಂಚಾಯಿತಿ ಘಟಕಗಳಿವೆ. ಹೋರಾಟ, ಸಂಘಟನೆ ಮತ್ತು ಸಂವಾದ ಆಧಾರದ ಮೇಲೆ ನಾವು ಈ ಬಾರಿ ಗೆಲ್ಲುತ್ತೇವೆ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ವಿಶ್ವಾಸದಿಂದ ಹೇಳುತ್ತಾರೆ.
ಜಾತಿ ಸಮೀಕರಣ
ಉತ್ತರ ಪ್ರದೇಶ ರಾಜಕಾರಣವು ಜಾತಿಯ ಸುತ್ತಲೇ ಸುತ್ತುತ್ತದೆ. ಬ್ರಾಹ್ಣಣ, ಕ್ಷತ್ರಿಯ ಮತ್ತು ವೈಶ್ಯ ಸಮುದಾಯಗಳು ಬಿಜೆಪಿ ಬೆಂಬಲಕ್ಕಿವೆ. ಇತರೆ ಹಿಂದುಳಿದ ವರ್ಗಗಳಲ್ಲಿ (ಒಬಿಸಿ) ಬರುವ ಯಾದವ ಸಮುದಾಯವು ಸಮಾಜವಾದಿ ಪಕ್ಷದ ಮತಬುಟ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.
ಯಾದವೇತರ ಒಬಿಸಿ ಜಾತಿಗಳು, ಜಾಟವಾ ಮತ್ತು ಜಾಟವಾ ಅಲ್ಲದ ಪರಿಶಿಷ್ಟ ಜಾತಿಗಳ ಮತಗಳು ಮೊದಲು ಸಮಾಜವಾದಿ ಪಕ್ಷ, ಬಿಎಸ್‌ಪಿ ಮತ್ತು ಕಾಂಗ್ರೆಸ್ ಮಧ್ಯೆ ಹಂಚಿಹೋಗುತ್ತಿದ್ದವು. ಈ ಸಮುದಾಯಗಳ ಮತಗಳು ಯಾವ ಪಕ್ಷಕ್ಕೆ ಹೆಚ್ಚು ಬೀಳುತ್ತವೋ ಅವು ಅಧಿಕಾರಕ್ಕೆ ಬರುತ್ತವೆ ಎಂಬುದು ಈ ಹಿಂದಿನ ಚುನಾವಣೆಗಳಲ್ಲಿ ಸಾಬೀತಾಗಿದೆ.
ಆಧಾರ: ಪಿಟಿಐ, ರಾಯಿಟರ್ಸ್
ಬರಹ: ಜಯಸಿಂಹ ಆರ್., ಅಮೃತ್ ಕಿರಣ್ ಬಿ.ಎಂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.