ADVERTISEMENT

ಚರ್ಚೆ | ಸ್ವಾಮೀಜಿಗಳು ಹೆಚ್ಚಿದರೆ ಸಂಸ್ಕಾರ ಹೆಚ್ಚಳ: ವಚನಾನಂದ ಸ್ವಾಮೀಜಿ

ಸಮಾಜಕ್ಕೆ ಇಷ್ಟೊಂದು ಜಗದ್ಗುರುಗಳ ಅಗತ್ಯ ಇದೆಯೇ?

ವಚನಾನಂದ ಸ್ವಾಮೀಜಿ
Published 12 ಫೆಬ್ರುವರಿ 2022, 1:22 IST
Last Updated 12 ಫೆಬ್ರುವರಿ 2022, 1:22 IST
ವಚನಾನಂದ ಸ್ವಾಮೀಜಿ
ವಚನಾನಂದ ಸ್ವಾಮೀಜಿ   

ಸ್ವಾಮೀಜಿಗಳು ಹೆಚ್ಚಾದಂತೆ ಸಂಸ್ಕಾರ ಹೆಚ್ಚಾಗುತ್ತ ಹೋಗುತ್ತದೆ. ಸ್ವಾಮೀಜಿಗಳು ಎಂದರೆ ಭವರೋಗ ವೈದ್ಯರು. ಶಾರೀರಿಕವಾದ ರೋಗಗಳಿಗೆ ಔಷಧ ಕೊಡುವ ವೈದ್ಯರು ಇದ್ದಾರೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಬೇಕಾದಷ್ಟು ವೈದ್ಯರು ಇಲ್ಲ. ಆಸ್ಪತ್ರೆಗಳು ಇಲ್ಲ ಎಂಬುದು ಕೊರೊನಾ ಕಾಲದಲ್ಲಿ ಸಾಬೀತಾಗಿತ್ತು. ಅದೇ ರೀತಿ ಜನಸಂಖ್ಯೆಗೆ ಅನುಗುಣವಾಗಿ ಭವರೋಗ ವೈದ್ಯರಾದ ಸ್ವಾಮೀಜಿಗಳು ಕೂಡ ಇಲ್ಲ. ಅವರ ಸಂಖ್ಯೆ ಕೂಡ ಕಡಿಮೆ ಇದೆ. ಅದರಲ್ಲಿಯೂ ಪಂಚಮಸಾಲಿ ಸಮುದಾಯ ದೇಶದಲ್ಲಿ ಒಂದೂವರೆ ಕೋಟಿಗಿಂತಲೂ ಅಧಿಕ ಇದೆ. ಈ ಭಕ್ತರಿಗೆ ಒಬ್ಬ ಸ್ವಾಮೀಜಿ ಸಂಸ್ಕಾರ ಕೊಡಲು ಆಗುವುದಿಲ್ಲ. ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಮಠಗಳಾದರೆ ಆ ಭಾಗದ ಭಕ್ತರಿಗೆ ಸಂಸ್ಕಾರ, ಧಾರ್ಮಿಕ ಕಾರ್ಯ ಮಾಡಲು ಅನುಕೂಲ ಆಗುತ್ತದೆ. ಮಠಗಳು ಹೆಚ್ಚಾದರೆ ಸಮಾಜಕ್ಕೆ ಒಳ್ಳೆಯದು.

ಸ್ವಾಮೀಜಿಗಳು ಏನು ಪಡೆದುಕೊಂಡರೂ ಅದನ್ನು ಸಮಾಜಕ್ಕೇ ನೀಡಿ ಹೋಗುತ್ತಾರೆ. ಇಲ್ಲಿ ಯಾರೋ ಕೊಡುತ್ತಾರೆ ಅದನ್ನು ತೆಗೆದುಕೊಂಡು ಇನ್ಯಾರಿಗೋ ಕೊಡುತ್ತಾರೆ. ಸಮಾಜ ಕಟ್ಟುವ ನಿಟ್ಟಿನಲ್ಲಿ ಬಡವ ಮತ್ತು ಶ್ರೀಮಂತರ ನಡುವೆ ಗೋಡೆಗಳನ್ನು ತೆಗೆಯುವ ಕೆಲಸ ಮಾಡುತ್ತಾರೆ. ಇರುವವರು ಮತ್ತು ಇಲ್ಲದವರ ನಡುವೆ ಸ್ವಾಮೀಜಿಗಳು ಸೇತುವೆಯಂತೆ ಕೆಲಸ ಮಾಡುತ್ತಾರೆ. ಹೇಗೆ ದೇಹ ಮತ್ತು ಮನಸ್ಸಿನ ನಡುವೆ ಉಸಿರು ಕಾರ್ಯ ನಿರ್ವಹಿಸುತ್ತದೆಯೋ ಹಾಗೆ ಸ್ವಾಮೀಜಿಗಳು ಇರುತ್ತಾರೆ. ಉಸಿರು ನಿಂತರೆ ದೇಹಕ್ಕೂ ಅಸ್ತಿತ್ವ ಇಲ್ಲ. ಮನಸ್ಸಿಗೂ ಅಸ್ತಿತ್ವವಿಲ್ಲ.

ಕರ್ನಾಟಕದಲ್ಲಿ ಸುಮಾರು 900 ವರ್ಷಗಳಿಂದ ಪ್ರತಿ ಹಳ್ಳಿ-ತಾಲ್ಲೂಕಿನಲ್ಲಿ ಮಠಗಳಿವೆ. ಅವುಗಳ ಮೂಲ ಉದ್ದೇಶ ಧರ್ಮ ಬೋಧನೆ ಮಾಡುವುದು, ಸಂಸ್ಕಾರವನ್ನು ಕೊಡುವುದು, ಅನ್ನ ಕೊಡುವುದು, ಅಕ್ಷರ ಕೊಡುವುದು, ಆಶ್ರಯ ಕೊಡುವುದು. ಕರ್ನಾಟಕದದಲ್ಲಿ ಲಿಂಗಾಯತ ಮಠಗಳು ಇಲ್ಲದೇ ಹೋಗಿದ್ದರೆ ಶಿಕ್ಷಣದಲ್ಲಿ ರಾಜ್ಯ ಇಷ್ಟೊಂದು ಅಭಿವೃದ್ಧಿ ಹೊಂದುತ್ತಿರಲಿಲ್ಲ. ಕಾರಣ ಅನ್ನದಾಸೋಹ, ಉಚಿತ ಪ್ರಸಾದ ನಿಲಯಗಳನ್ನು ತೆರೆಯುವ ಮೂಲಕ ಲಕ್ಷಾಂತರ ಮಕ್ಕಳಿಗೆ ಜೀವನವನ್ನು ನೀಡಿದವರು ಸ್ವಾಮೀಜಿಗಳು, ಮಠಗಳು.

ADVERTISEMENT

ಒಬ್ಬ ವ್ಯಕ್ತಿ ಸ್ವಾಮೀಜಿಯಾಗಿ ತ್ಯಾಗ ಮಾಡಿದರೆ ಲಕ್ಷಾಂತರ ಮಂದಿಯ ಉದ್ಧಾರಕ್ಕೆ ಕಾರಣವಾಗುತ್ತದೆ. ವಿಜಯಪುರದ ಸಿದ್ದೇಶ ಸ್ವಾಮಿಗಳು, ಸಿದ್ದಲಿಂಗ ಸ್ವಾಮೀಜಿ, ಚಿತ್ರದುರ್ಗದ ಜಯದೇವ ಜಗದ್ಗುರುಗಳು, ಸುತ್ತೂರು ಶಿವರಾತ್ರೀಶ್ವರರು ಇವರ ತ್ಯಾಗದಿಂದ ವಿದ್ಯಾರ್ಥಿ ನಿಲಯಗಳು, ವಿದ್ಯಾ ಸಂಸ್ಥೆಗಳು ಸ್ಥಾಪನೆಗೊಂಡವು. ಜನರ ಸೇವೆಯನ್ನು ಮಾಡಿದವು.

ಶಂಕರಾಚಾರ್ಯರು ಆರಂಭದಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು. ಈಗ ಸಾಕಷ್ಟು ಉಪಪೀಠಗಳೂ ಆದವು. ಸಾಕಷ್ಟು ಜಗದ್ಗುರು ಪೀಠಗಳೂ ಆಗಿವೆ. ಎಲ್ಲರ ಕೆಲಸಗಳು ಒಂದೇ ಆಗಿವೆ. ಹಾಗೆಯೇ ನಮ್ಮಲ್ಲೂ ಬೃಹನ್ಮಠ ಮತ್ತು ಅದಕ್ಕೆ ಶಾಖಾಮಠಗಳು ಎಂಬ ಪರಂಪರೆ ಹಿಂದಿನಿಂದ ಬಂದಿದೆ. ಅದರ ಜತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವತಂತ್ರ ಪೀಠಗಳೂ ಇವೆ. ಹಾಗಾಗಿ ಶಾಖಾ ಮಠವೋ ಸ್ವತಂತ್ರ ಮಠವೋ ಎಂದು ಜಾಸ್ತಿ ತಲೆಕೆಡಿಸಿಕೊಳ್ಳಬಾರದು. ಶಾಖಾ ಮಠಗಳಾಗಲಿ, ಸ್ವತಂತ್ರ ಪೀಠಗಳಾಗಲಿ ಅವುಗಳ ಉದ್ದೇಶ ಸಮಾಜಕ್ಕೆ ಒಳ್ಳೆಯದು ಮಾಡುವುದೇ ಆಗಿದೆ.

ಸ್ವಾಮಿಗಳು ಎಲ್ಲವೂ ನಮ್ಮ ಅಡಿಯಲ್ಲೇ ಇರಬೇಕು ಎಂದು ಬಯಸಬಾರದು. ಸಂಕುಚಿತ ಭಾವ ಇರಬಾರದು. ವಿಶಾಲ ಭಾವ ಇರಬೇಕು. ಕಾಡಿನಲ್ಲಿ ಹೂವು ಅರಳುತ್ತದೆ. ಅದರ ಸುಗಂಧ ಗಾಳಿಯಲ್ಲಿ ಹರಡುತ್ತಾ ಹೋಗುತ್ತದೆ. ಅದನ್ನು ಆಘ್ರಾಣಿಸುವ ದುಂಬಿಗಳು ಬಂದು ಮಕರಂದ ಹೀರಿಕೊಳ್ಳುತ್ತವೆ. ಆ ದುಂಬಿಗಳು ಕೂಡ ಸುಮ್ಮನಿರುವುದಿಲ್ಲ. ಜೇನು ತುಪ್ಪ ಮಾಡುತ್ತವೆ; ಅದೂ ತಮಗಾಗಿ ಅಲ್ಲ. ಅದೂ ಬೇರೆಯವರಿಗೆ ಆಗುತ್ತದೆ. ಭಕ್ತರು ಎನ್ನುವ ದುಂಬಿಗಳು ಸ್ವಾಮೀಜಿಗಳು ಎಂಬ ಹೂವಿನ ಹತ್ತಿರ ಬರುತ್ತಾರೆ. ಹಾಗಾಗಿ ಸ್ವಾಮೀಜಿಗಳು ಹೂವಿನಂತೆ ಅರಳಬೇಕು. ಪ್ಲಾಸ್ಟಿಕ್‌ ಹೂವುಗಳಾಗಬಾರದು. ಭಕ್ತರ ಉದ್ಧಾರ ಆಗ ಸಾಧ್ಯ.

ಪಂಚಮಸಾಲಿ ಸಮುದಾಯ ಸಂಘಟನಾತ್ಮಕವಾಗಿರಬೇಕು. ಸಮುದಾಯಕ್ಕೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಸಂಘ ಹುಟ್ಟಿಕೊಂಡಿತು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಔದ್ಯೋಗಿಕವಾಗಿ ಸಮಾಜವನ್ನು ಬೆಳಗಬೇಕು ಎಂದು ಸಂಘಟಿತರಾದರು. ಬಳಿಕ ಹರಿಹರ ಪೀಠವಾಯಿತು.

ಇನ್ನು ಎಷ್ಟೇ ಪೀಠಗಳಾದರೂ ಅನುಕೂಲ ಆಗುತ್ತದೆ. 900 ವರ್ಷಗಳಿಂದ ಇರುವ ಮಠಗಳೇ ಪೂರ್ತಿಯಾಗಿ ಜನರನ್ನು ತಲುಪಲು ಆಗಿಲ್ಲ. ಇನ್ನು ನಾವು 15–20 ವರ್ಷಗಳಿಂದ ಈಚೆಗೆ ಆರಂಭಗೊಂಡಿರುವ ಮಠಗಳು ತಲುಪಿದ್ದೇವೆ ಎನ್ನಲು ಸಾಧ್ಯವೇ? ಅದಕ್ಕಾಗಿ ಇನ್ನಷ್ಟು ಮಠಗಳು ಆರಂಭವಾಗುತ್ತವೆ ಎಂದರೆ ಅದನ್ನು ಕಂಡು ಖುಷಿ ಪಡಬೇಕು. ಸಾಧ್ಯವಾದಷ್ಟು ಬೆಂಬಲ ನೀಡಬೇಕು. ಅವರನ್ನು ಬೆಳೆಸಬೇಕು. ಆ ಭಾಗದ ಭಕ್ತರನ್ನು ಉದ್ಧಾರ ಮಾಡಲು ಹಾರೈಸಬೇಕು. ವಿರೋಧಿಸಬಾರದು.

ಒಂದು ಮಠವು ಇನ್ನೊಂದು ಮಠವನ್ನು ಸ್ಪರ್ಧೆ ಎಂದು ತಿಳಿದುಕೊಳ್ಳಲೇಬಾರದು. ಸಂನ್ಯಾಸಿಗಳಿಗೆ ಯಾವ ಸ್ಪರ್ಧೆ ಇರುತ್ತದೆ? ಎಲ್ಲದರಿಂದ, ಎಲ್ಲ ಸ್ಪರ್ಧೆಗಳಿಂದ ಹೊರಬಂದ ಮೇಲೆ ಸನ್ಯಾಸಿ ಆಗುವುದು ತಾನೆ. ಯಾರನ್ನೂ ಯಾರೂ ತುಳಿಯಲು ಸಾಧ್ಯವಿಲ್ಲ. ಸ್ವಾಮೀಜಿಗಳು ಆಂತರಿಕವಾಗಿ ಬಲಿಷ್ಠರಾಗಿರಬೇಕು. ಯಾರಲ್ಲಿ ಒಳಗೆ ಅಂತರಂಗದಲ್ಲಿ ಅಷ್ಟು ಶಕ್ತಿ ಇರುವುದಿಲ್ಲವೋ ಅವರಿಗೆ ಹಾಗೆ ಅನ್ನಿಸಲು ಶುರುವಾಗುತ್ತದೆ. ದ್ವೇಷ, ಅಸೂಯೆ ಬಿಡಬೇಕು ಎಂದು ಭಕ್ತರಿಗೆ ಉಪದೇಶ ನೀಡುವ ನಾವು ಮೊದಲು ಆ ತತ್ವಗಳನ್ನು ಅಳವಡಿಸಿಕೊಂಡಿರಬೇಕು.

‘ಭವರೋಗ ವೈದ್ಯನೆಂದು ಆನು ನಿಮ್ಮ ಮೊರೆ ಹೊಕ್ಕೆನಯ್ಯ, ಭಕ್ತಿದಾಯಕ ನೀ ಕರುಣಿಸು ಲಿಂಗ ತಂದೆ, ಹರಹರ ಮಹಾದೇವ...’ ಎಂದು ಬಸವಣ್ಣ ಹೇಳಿದ್ದರು. ಭಕ್ತರನ್ನು ನಾವು ಸಂಪರ್ಕಿಸಬೇಕಿದೆ. ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕಿದೆ. ಅನ್ನ ಇಲ್ಲದವರಿಗೆ ಅನ್ನ ನೀಡಬೇಕು. ಅಕ್ಷರ ಇಲ್ಲದವರಿಗೆ ಅಕ್ಷರ ನೀಡಬೇಕು. ಆಶ್ರಯ ಇಲ್ಲದವರಿಗೆ ಆಶ್ರಯ ನೀಡಬೇಕು. ಇವೆಲ್ಲ ಇದ್ದರೂ ಆರೋಗ್ಯ ಕೆಲವರಿಗೆ ಇರುವುದಿಲ್ಲ. ಆರೋಗ್ಯ ನೀಡುವ ಕೆಲಸಗಳಾಗಬೇಕು. ಆರೋಗ್ಯ ಇದ್ದರೂ ನೆಮ್ಮದಿ ಇರುವುದಿಲ್ಲ. ಅಧ್ಯಾತ್ಮದ ಮೂಲಕ ನೆಮ್ಮದಿ ಕಂಡುಕೊಳ್ಳಬೇಕು. ಈ ಕೆಲಸಗಳನ್ನು ಮಾಡಿದರೆ ಮಾತ್ರ ಭಕ್ತರನ್ನು ಉದ್ಧಾರ ಮಾಡಲು ಮಠಗಳಿಂದ ಸಾಧ್ಯ. ಹರಿಹರದ ಪಂಚಮಸಾಲಿ ಪೀಠವು ಈ ಐದು ದಾಸೋಹಗಳನ್ನು ಮಾಡುತ್ತಾ ಬಂದಿದೆ. ಎಲ್ಲ ಕಡೆ ಮಠಗಳು ಈ ಕಾರ್ಯಗಳನ್ನು ಮಾಡಬೇಕು.

ಪಂಚಮಸಾಲಿ ಸಮಾಜಕ್ಕಷ್ಟೇ ಸೀಮಿತವಾಗಿ ನಾನು ಹೇಳುತ್ತಿಲ್ಲ. ಎಲ್ಲ ಲಿಂಗಾಯತ ಮಠಗಳು ಪ್ರತಿ ಜಿಲ್ಲೆ, ತಾಲ್ಲೂಕುಗಳಲ್ಲಿ ಆಗಬೇಕು. ಅಷ್ಟೇ ಅಲ್ಲ, ಲಿಂಗಾಯತ ಅಲ್ಲದ ಆದರೆ ಸಂಸ್ಕಾರ ನೀಡಿ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸುವ ಯಾವುದೇ ಸಮುದಾಯದ ಮಠಗಳು ಹೆಚ್ಚಾದರೆ ಒಳ್ಳೆಯದೇ ಆಗುತ್ತದೆ. ಸಮಾಜವು ಮಠಗಳನ್ನು ಬಲಿಷ್ಠಗೊಳಿಸಬೇಕು. ಮಠಗಳು ಸಮಾಜವನ್ನು ಬಲಿಷ್ಠಗೊಳಿಸಬೇಕು. ಈ ತತ್ವದ ಅಡಿಯಲ್ಲಿ ಮಠ ಮತ್ತು ಭಕ್ತರ ನಡುವೆ ಬಾಂಧವ್ಯ ಬೆಳೆಯಬೇಕು. ಈ ಬೆಸುಗೆಯಲ್ಲಿ ಎಲ್ಲರ ಮನ ಬೆಳಗಬೇಕು.

ನಾನೊಬ್ಬನೇ ಅಂದರೆ ಒಬ್ಬಂಟಿಯಾಗುತ್ತೇನೆ. ಒಬ್ಬನೇ ಇರಬೇಕಾಗುತ್ತದೆ. ನಾವೆಲ್ಲ ಅಂದರೆ ಜಗತ್ತೆಲ್ಲ ನಮ್ಮದಾಗುತ್ತದೆ. ನಾನು ಅನ್ನುವುದು ಹೋಗಿ ನಾವು ಅನ್ನುವುದು ಬರಬೇಕು. ನಾನು ಅಂದರೆ ಜಗತ್ತು ಸಣ್ಣದಾಗುತ್ತದೆ. ನಾನು ಬೇರೆಯವರಿಂದ ಭಿನ್ನ ಅಲ್ಲ. ಎಲ್ಲರಲ್ಲಿ ಒಬ್ಬ ಆಗುತ್ತೇನೆ. ಹಾಗಾಗಿ ಇನ್ನಷ್ಟು ಮಠಗಳಾದರೂ ಅವು ಬೇರೆಯಲ್ಲ. ನಮ್ಮವೇ ಎಂದು ಭಾವಿಸಿಕೊಂಡು ಬೆಂಬಲ ನೀಡೋಣ, ಪ್ರೋತ್ಸಾಹಿಸೋಣ. ಆ ಮೂಲಕ ಭಕ್ತರಿಗೆ ಸಹಕಾರಿಯಾಗೋಣ.

-ವಚನಾನಂದ ಸ್ವಾಮೀಜಿ

ಲೇಖಕ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ

ನಿರೂಪಣೆ: ಬಾಲಕೃಷ್ಣ ಪಿ.ಎಚ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.