ಚಿತ್ರದುರ್ಗ: ಮನೆಯ ಗೋಡೆಯ ಮೊಳೆಯಲ್ಲಿ ನೇತಾಡುತ್ತಿದ್ದ ಪುತ್ರನ ಫೋಟೊ ದಿಟ್ಟಿಸುತ್ತ ಕುಳಿತಿದ್ದ ವಿಮಲಮ್ಮನ ಕಣ್ಣಾಲಿಗಳು ಬತ್ತಿಹೋಗಿದ್ದವು. ಅಳು ಆಗಾಗ ಉಮ್ಮಳಿಸಿ ಬರುತ್ತಿದ್ದರೂ ಕಣ್ಣಿನಲ್ಲಿ ಪಸೆ ಕಾಣುತ್ತಿರಲಿಲ್ಲ. ದುಃಖದ ಮಡುವಿನಲ್ಲಿ ಮುಳುಗಿದ್ದ ವೃದ್ಧೆಯ ಕಂಠದಿಂದ ಕೀರಲು ಧ್ವನಿ ಹೊರಡುತ್ತಿತ್ತು. ಸಾವರಿಸಿಕೊಂಡು ಗುಟುಕು ನೀರು ಕುಡಿದಾಗ ಧ್ವನಿಗೆ ಮಾತಿನ ರೂಪ ಸಿಕ್ಕಿತ್ತು.
‘ಕೈಹಿಡಿದ ಗಂಡ ಹಾಸಿಗೆಯಲ್ಲೇ ಪ್ರಾಣಬಿಟ್ಟ. ಎರಡು ದಿನ ಇಲ್ಲೇ ಉಳಿದಿದ್ದ ಮಗ, ಇದೇ ನೀರು ಕುಡಿದಿದ್ದ. ಮರುದಿನ ಕೆಲಸಕ್ಕೆಂದು ಬೆಂಗಳೂರಿಗೆ ಹೋದ ಮಗ ಅಲ್ಲೇ ಶವವಾದ. ಪ್ರಪಂಚ ನೋಡಬೇಕಿದ್ದ ಮಗಳ ಮಗು ಹೊಟ್ಟೆಯಲ್ಲಿಯೇ ಕಣ್ಣು ಮುಚ್ಚಿತು. ಇದು ಜೀವ ಜಲವಲ್ಲ ವಿಷ’ ಎಂದಾಗ ಮುಖದಲ್ಲಿ ಆಕ್ರೋಶ ಇಣುಕುತ್ತಿತ್ತು.
ಸ್ವಲ್ಪ ಹೊತ್ತು ಇಡೀ ಮನೆಯಲ್ಲಿ ನಿಶ್ಯಬ್ಧ. ವಿಮಲಮ್ಮನಿಗೆ ಸಾಂತ್ವನ ಹೇಳಲು ಬಂದಿದ್ದ ಸಂಬಂಧಿಕರು ಮಾತು ಆಡದ ಸ್ಥಿತಿಯಲ್ಲಿದ್ದರು. ವಯಸ್ಸಿಗೆ ಬಂದಿದ್ದ 24 ವರ್ಷದ ಮಗ ರಘುವಿನ ಸಾವು ವಿಮಲಮ್ಮ ಅವರಿಗೆ ಆಘಾತ ಉಂಟುಮಾಡಿತ್ತು. ಹೆರಿಗೆಗೆ ತವರು ಮನೆಗೆ ಬಂದಿದ್ದ ಮಗಳು ಉಷಾ ಗರ್ಭಪಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು ಇನ್ನಷ್ಟು ಘಾಸಿಗೊಳಿಸಿತ್ತು.
‘ಆ.11ಕ್ಕೆ ಮಗಳಿಗೆ ಹೆರಿಗೆ ಆಗಬಹುದು ಎಂದು ವೈದ್ಯರು ತಿಳಿಸಿದ್ದರು. ಒಂದು ದಿನ ಮುಂಚಿತವಾಗಿ ಬೆಂಗಳೂರಿನಿಂದ ಬಂದರೆ ಸಾಕು ಎಂದು ಮಗನಿಗೆ ಹೇಳಿದ್ದೆ. ಮನೆಯಲ್ಲಿ ಕಾಳು, ಹಿಟ್ಟು ಎಲ್ಲವೂ ಖಾಲಿ ಆಗಿದ್ದವು. ಸೊಸೈಟಿಯಿಂದ ಪಡಿತರ ತಂದುಕೊಡುವ ಸಲುವಾಗಿ ಆತ ಜುಲೈ 30ರಂದು ಮನೆಗೆ ಬಂದಿದ್ದ. ಮರುದಿನ ಬ್ಯಾಂಕ್ ಕೆಲಸ ಮುಗಿಸಿಕೊಂಡು ಬೆಂಗಳೂರಿಗೆ ತೆರಳಿದ. ಅಂದು ರಾತ್ರಿಯೇ ಕಾಣಿಸಿಕೊಂಡ ವಾಂತಿ–ಭೇದಿ ಮಗನ ಪ್ರಾಣವನ್ನೇ ಕಿತ್ತುಕೊಂಡಿತು..’ ಎಂದು ಗದ್ಗದಿತರಾದರು.
7ನೇ ತರಗತಿಯವರೆಗೆ ಓದಿದ್ದ ರಘು ಹಮಾಲಿ ಕೆಲಸ ಮಾಡಿಕೊಂಡಿದ್ದ. ವಿಧಾನಸಭಾ ಚುನಾವಣೆಯ ಬಳಿಕ ರಘು ಕೆಲಸ ಅರಸಿ ಬೆಂಗಳೂರಿಗೆ ತೆರಳಿದ್ದ. ಎಲೆಕ್ಟ್ರಾನಿಕ್ ಉಪಕರಣಗಳನ್ನು ಮನೆಗೆ ತಲುಪಿಸುತ್ತಿದ್ದ ಸ್ನೇಹಿತ ಅಂಜಿನಪ್ಪ ಹಾಗೂ ಮುತ್ತು ಜೊತೆಗೆ ಕೆಲಸಕ್ಕೆ ಸೇರಿದ್ದ. ಮಾಸಿಕ ₹14,000 ಸಂಬಳ ನಿಗದಿಯಾಗಿತ್ತು. ಬ್ಯಾಂಕ್ ಖಾತೆಗೆ ಜಮೆಯಾಗಿದ್ದ ಸಂಬಳದ ಹಣವನ್ನು ಬಿಡಿಸಿಕೊಂಡು ಅದನ್ನು ತಾಯಿಯ ಕೈಗಿಟ್ಟು ಕೆಲಸಕ್ಕೆ ಮರಳಿದ್ದ.
ಕಲುಷಿತ ನೀರಿಗೆ ಬಲಿಯಾದ ಕವಾಡಿಗರಹಟ್ಟಿಯ ಮಂಜುಳಾ ಅವರಿಗೆ ಒಂದೂವರೆ ವರ್ಷದ ಚಿಕ್ಕ ಮಗು ಇದೆ. ಘಟನೆಯಲ್ಲಿ ಪ್ರಾಣ ಕಳೆದುಕೊಂಡಿರುವ ರುದ್ರಪ್ಪ ಅವರ ಅಗಲಿಕೆಯಿಂದ ಆಘಾತಗೊಂಡಿರುವ ಪತ್ನಿ ಇನ್ನೂ ಆಸ್ಪತ್ರೆಯಲ್ಲೇ ಇದ್ದಾರೆ. ವಾಂತಿ–ಭೇದಿಗೆ ಜೀವ ಕಳೆದುಕೊಂಡ ಪಾರ್ವತಮ್ಮ ಅವರ ಅಂತ್ಯಕ್ರಿಯೆಗೆ ನಾಲ್ವರು ಮಕ್ಕಳು ಅಸ್ವಸ್ಥತೆಯನ್ನು ಮರೆತು ಆಸ್ಪತ್ರೆಯಿಂದ ಬರಬೇಕಾಯಿತು. ಅಜ್ಜನ ಅಂತ್ಯಕ್ರಿಯೆಗೆ ಬಂದಿದ್ದ ವಡ್ಡರಸಿದ್ದವ್ವನಹಳ್ಳಿಯ ಪ್ರವೀಣನ ಜೀವನಪಯಣ ಕೂಡ ಅಂತ್ಯಗೊಂಡಿದೆ. ಕಲುಷಿತ ನೀರಿನಿಂದ ಅಸ್ವಸ್ಥಗೊಂಡಿದ್ದವರಲ್ಲಿ ಚೇತರಿಕೆ ನಿಧಾನಗತಿಯಲ್ಲಿದೆ.
ಚಿತ್ರದುರ್ಗದ 17ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಕವಾಡಿಗರಹಟ್ಟಿ 735 ಕುಟುಂಬಗಳಿರುವ ಬಡಾವಣೆ. ಗ್ರಾಮ ಪಂಚಾಯಿತಿ ಆಗಿದ್ದ ಊರು ಎರಡು ದಶಕಗಳ ಹಿಂದಷ್ಟೇ ನಗರಸಭೆ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ಇಲ್ಲಿ ಮಾದಿಗ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕುರುಬ, ಲಿಂಗಾಯತ, ವಾಲ್ಮೀಕಿ ಸೇರಿ ಇತರ ಸಮುದಾಯಗಳ ಜನರೂ ಇಲ್ಲಿ ನೆಲೆಸಿದ್ದಾರೆ. ಕಿರಿದಾದ ಬೀದಿ, ಚಿಕ್ಕಚಿಕ್ಕ ಮನೆಗಳು, ಅಲ್ಲಲ್ಲಿ ಬಿದ್ದಿರುವ ಕಸ, ರಸ್ತೆಯ ಮೇಲೆ ಹರಿಯುವ ಚರಂಡಿ ನೀರು ಈ ಜನರ ಜೀವನ ಗುಣಮಟ್ಟದ ಸೂಚಕದಂತೆ ಕಾಣುತ್ತವೆ. ಅರ್ಧ ಊರು ಗ್ರಾಮ ಠಾಣಾ ವ್ಯಾಪ್ತಿಯಲ್ಲಿದ್ದರೆ, ಇನ್ನರ್ಧ ಊರು ಪಟ್ಟಾ ಭೂಮಿ ಒಳಗೊಂಡಿದೆ. ಎಷ್ಟೋ ಮನೆಗಳ ಒಳಗೆ ಬಚ್ಚಲು ಕೂಡ ಇಲ್ಲ. ರಸ್ತೆ ಮೇಲೆಯೇ ನೀರು ಕಾಯಿಸಿಕೊಂಡು ಬಯಲಲ್ಲೇ ಸ್ನಾನ ಮಾಡುತ್ತಾರೆ. ಹಂಚಿಕಡ್ಡಿ, ಸೀರೆಯಿಂದ ಮಾಡಿಕೊಂಡ ಮರೆಯಲ್ಲಿ ಮಹಿಳೆಯರು ಸ್ನಾನ ಮುಗಿಸುತ್ತಾರೆ. ಶೌಚಾಲಯಕ್ಕೆ ಜನರು ಇಂದಿಗೂ ಬಯಲನ್ನೇ ಆಶ್ರಯಿಸಿದ್ದಾರೆ.
‘ಶೌಚಾಲಯ ನಿರ್ಮಿಸಿಕೊಳ್ಳಲು ಸ್ಥಳಾವಕಾಶದ ಕೊರತೆ ಇದೆ. ಮನೆ ಕಿರಿದಾಗಿರುವುದರಿಂದ ಶೌಚಾಲಯಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಾಗಿಲ್ಲ ಎಂಬುದು ಪರಿಶೀಲನೆಯ ವೇಳೆ ಗೊತ್ತಾಗಿದೆ. ಸಾರ್ವಜನಿಕ ಶೌಚಾಲಯ ನಿರ್ಮಿಸಲು ಆಲೋಚಿಸುತ್ತಿದ್ದೇವೆ’ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ. ಹೇಳುತ್ತಾರೆ.
ಗ್ರಾಮೀಣ ಪ್ರದೇಶದಂತೆ ಕಾಣುವ ಕವಾಡಿಗರಹಟ್ಟಿಯಲ್ಲಿ ವಾಸಿಸುತ್ತಿರುವ ಸ್ಥಿತಿವಂತರು, ಹಿಂದೆ ಕೃಷಿಯನ್ನೇ ನೆಚ್ಚಿಕೊಂಡು ಜೀವನ ಸಾಗಿಸಿದವರು. ನಗರದ ವ್ಯಾಪ್ತಿ ದೊಡ್ಡದಾದಂತೆ ಭೂ ಮಾಲೀಕತ್ವದ ಹಿಡಿತ ಕಳೆದುಹೋಯಿತು. ಅವರ ಜಮೀನುಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ದಲಿತ ಕಾಲೊನಿಯ ಪುರುಷರು ಈಗ ಹಮಾಲಿ ಕೆಲಸ ನಂಬಿಕೊಂಡಿದ್ದಾರೆ. ಈ ಹಿಂದೆ ಇವರೆಲ್ಲ ಕೃಷಿಯನ್ನೇ ನೆಚ್ಚಿಕೊಂಡಿದ್ದಕ್ಕೆ ಸಾಕ್ಷಿ ಎಂಬಂತೆ ಈಗಲೂ ಇಲ್ಲಿಯ ಮಹಿಳೆಯರು ಕೃಷಿ ಕೂಲಿಗೆ ತೆರಳುತ್ತಾರೆ. ಕುಡಿಯುವ ನೀರಿಗೆ 25 ವರ್ಷದಷ್ಟು ಹಳೆಯದಾದ ಓವರ್ ಹೆಡ್ ಟ್ಯಾಂಕ್ ಇದೆ. 50,000 ಲೀಟರ್ ನೀರಿನ ಸಂಗ್ರಹ ಸಾಮರ್ಥ್ಯದ ಟ್ಯಾಂಕ್‌ಗೆ ದೂರದ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ (ಶಾಂತಿಸಾಗರ)ಯ ನೀರು ಸರಬರಾಜು ಆಗುತ್ತದೆ. ನಿತ್ಯ ಬೆಳಿಗ್ಗೆ 6ರಿಂದ 8 ಗಂಟೆ ಸಮಯದಲ್ಲಿ ನಲ್ಲಿ ಮೂಲಕ ನೀರು ಪೂರೈಸಲಾಗುತ್ತದೆ. ಡ್ರಮ್, ಪಾತ್ರೆ, ಬಿಂದಿಯಲ್ಲಿ ಜನರು ನೀರು ಸಂಗ್ರಹಿಸಿಟ್ಟುಕೊಳ್ಳುತ್ತಾರೆ.
‘ಶಾಂತಿಸಾಗರದ ನೀರು ಕುಡಿದು ಅಭ್ಯಾಸ ಆಗಿರುವುದರಿಂದ ಶುದ್ಧ ಕುಡಿಯುವ ನೀರಿನ ಘಟಕದ (ಆರ್‌ಒ) ನೀರು ರುಚಿಸುವುದಿಲ್ಲ. ದುಡ್ಡು ಕೊಟ್ಟು ನೀರು ತರುವಷ್ಟು ಸ್ಥಿತಿವಂತರೂ ನಾವಲ್ಲ. ನಲ್ಲಿಯಲ್ಲಿ ಹಿಡಿದ ನೀರನ್ನು ಜಾಲರಿ, ಬಟ್ಟೆಯಲ್ಲಿ ಸೋಸಿಕೊಂಡು ಕುಡಿದಿದ್ದೇವೆ. ಇಷ್ಟು ದಿನ ಯಾವ ತೊಂದರೆಯೂ ಆಗಿರಲಿಲ್ಲ. ಈಗ ಏಕೆ ಶುದ್ಧೀಕರಣ ಘಟಕದ ನೀರು ಕುಡಿಯಬೇಕು’ ಎಂದು ಪ್ರಶ್ನಿಸುತ್ತಾರೆ ಕವಾಡಿಗರಹಟ್ಟಿಯ ಲಕ್ಷ್ಮಿ.
ಹಟ್ಟಿಯಲ್ಲಿ ಶುದ್ಧ ಕುಡಿಯುವ ನೀರನ ಘಟಕ ಇದ್ದರೂ ಬಳಕೆ ಮಾಡುತ್ತಿದ್ದ ಕುಟುಂಬಗಳು ಬೆರಳೆಣಿಕೆಯಷ್ಟು ಮಾತ್ರ. ನಗರಸಭೆ ಪೂರೈಸುವ ನೀರನ್ನೇ ಕುಡಿಯಲು, ಅಡುಗೆ ಮಾಡಲು ಹಾಗೂ ಸ್ನಾನಕ್ಕೆ ಬಳಸುತ್ತಾರೆ. ಕುಡಿಯಲು ಮತ್ತು ಅಡುಗೆಗೆ ಬಳಕೆ ಮಾಡಿದ ಬಹುತೇಕ ಕುಟುಂಬಗಳ ಸದಸ್ಯರಲ್ಲಿ ವಾಂತಿ–ಭೇದಿ ಕಾಣಿಸಿಕೊಂಡಿದೆ. ಶುದ್ಧೀಕರಣ ಘಟಕದಿಂದ ತಂದ ನೀರು ಕುಡಿದವರು ಅಪಾಯದಿಂದ ಪಾರಾಗಿದ್ದಾರೆ.
ಒಟ್ಟಿನಲ್ಲಿ ಆಗಸ್ಟ್ 1ರ ಬೆಳಗು ಕವಾಡಿಗರಹಟ್ಟಿಯ ಎಸ್.ಸಿ. ಕಾಲೊನಿಯ ಜನರಿಗೆ ಎಂದಿನಂತೆ ಇರಲಿಲ್ಲ. ಜೀವಜಲ ಕೆಲವರ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿತು. ಇನ್ನು ಕೆಲವರು ಸಾವಿನ ಮನೆಯ ಕದತಟ್ಟಿ ಬಂದರು. ನೀರು ಕುಡಿದು ಬಳಲಿದ ಅದೆಷ್ಟೋ ಜೀವಗಳಿಗೆ ಯಾವ್ಯಾವ ಅಡ್ಡ ಪರಿಣಾಮಗಳಾಗಲಿವೆಯೋ ಕಾಲವೇ ಉತ್ತರಿಸಲಿದೆ.
ಚಿಕ್ಕಪ್ಪನ ಕೈಲಾಸ ಸಮಾರಾಧನೆ ಜುಲೈ 28ರಂದು ನಡೆಯಿತು. ಕುಟುಂಬ ಸಮೇತ ಬಂದಿದ್ದೆವು. ಪುತ್ರ ಪ್ರವೀಣ್ ಇಲ್ಲಿಯೇ ಉಳಿದು ಕೆಲಸ ಮಾಡಿದ್ದ. ಏಕೈಕ ಮಗನನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದೆ.ರಾಜಪ್ಪ, ವಡ್ಡರಸಿದ್ಧವ್ವನಹಳ್ಳಿ
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ (ಶಾಂತಿಸಾಗರ), ಇವು ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಎರಡು ಜಲಮೂಲಗಳು. ನಿತ್ಯ 22 ಎಂಎಲ್‌ಡಿಯಷ್ಟು ನೀರಿನ ಅಗತ್ಯವಿದೆ. ಆದರೆ, ಪೂರೈಕೆ ಆಗುತ್ತಿರುವುದು ಮಾತ್ರ 18.5 ಎಂಎಲ್‌ಡಿ ನೀರು. ‘ಕೆಲ ಬಡಾವಣೆಗಳಿಗೆ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಕೇಳಿಬಂದಿದ್ದವು. ಈಗ ದಿನಕ್ಕೊಮ್ಮೆ ನೀರು ಹರಿಸುವಂತೆ ಸೂಚನೆ ನೀಡಿದ್ದೇನೆ’ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ. ಹೇಳಿದ್ದಾರೆ.
ಶಾಂತಿಸಾಗರದ ನೀರಿನ ಕೊರತೆ ಉಂಟಾದಾಗ ಕವಾಡಿಗರಹಟ್ಟಿಯ ಜನರ ದಾಹ ತಣಿಸಲು 5 ಕೊಳವೆಬಾವಿಗಳಿವೆ. ಇದರಲ್ಲಿ ಒಂದು ಕೊಳವೆಬಾವಿ ಮುರುಘಾ ಮಠದ ಮುಂಭಾಗದ ಅರಸನಕೆರೆಯ ದಡದಲ್ಲಿದೆ. ಈ ಕೊಳವೆಬಾವಿಯ ನೀರು ಟ್ಯಾಂಕ್‌ಗೂ ಪೂರೈಕೆಯಾಗುತ್ತಿದೆ. ಅರಸನಕೆರೆಯ ನೀರು ಕಲುಷಿತ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯೇ ಘೋಷಿಸಿದೆ.
‘ರಾಷ್ಟ್ರೀಯ ಜಲ ಗುಣಮಟ್ಟ ಕಣ್ಗಾವಲು ಕಾರ್ಯಕ್ರಮದಲ್ಲಿ (ಎನ್‌ಡಬ್ಲ್ಯುಎಂಪಿ) ಚಿತ್ರದುರ್ಗದ ಮೂರು ಜಲಮೂಲಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರದುರ್ಗ ನಗರ ವ್ಯಾಪ್ತಿಯ ಅರಸನಕೆರೆ, ಮಲ್ಲಾಪುರ ಕೆರೆ ಹಾಗೂ ಕುಡಿಯುವ ನೀರು ಪೂರೈಕೆ ಮಾಡುವ ವಾಣಿವಿಲಾಸ ಸಾಗರ ಜಲಾಶಯದ ನೀರನ್ನು ಪ್ರತಿ ತಿಂಗಳು ಪರೀಕ್ಷಿಸಲಾಗುತ್ತಿದೆ. ಅರಸನಕೆರೆ ಮತ್ತು ಮಲ್ಲಾಪುರ ಕೆರೆಗೆ ಚರಂಡಿ ಸಂಪರ್ಕ ಕಲ್ಪಿಸಲಾಗಿದ್ದು, ನೀರು ಸಂಪೂರ್ಣ ಕಲುಷಿತಗೊಂಡಿದೆ. ಕೆರೆ ನೀರು ಕಲುಷಿತಗೊಂಡಿರುವ ಬಗ್ಗೆ ನಗರಸಭೆಯ ಗಮನಕ್ಕೆ ತರಲಾಗಿದೆ’ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಪ್ರಕಾಶ್.
ಚಿತ್ರದುರ್ಗದಲ್ಲಿ ಹತ್ತಿ ಮಿಲ್‌ಗಳು ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಸಾವಿರಾರು ಜನರು ಕೆಲಸ ಮಾಡುತ್ತಿದ್ದರು. ಗಾರೆಹಟ್ಟಿಯ ಜಯಲಕ್ಷ್ಮಿ ಮಿಲ್ ಕವಾಡಿಗರಹಟ್ಟಿಯ ಜನರಿಗೆ ಆಶ್ರಯ ಕಲ್ಪಿಸಿತ್ತು. ಹಟ್ಟಿಯ ಸನಿಹದ ಈ ಮಿಲ್‌ನಲ್ಲಿ ಕವಾಡಿಗರಹಟ್ಟಿಯ ಬಹುತೇಕ ಜನ ಕೆಲಸ ಮಾಡುತ್ತಿದ್ದರು. ನಷ್ಟದ ಸುಳಿಗೆ ಸಿಲುಕಿ ಹತ್ತಿ ಮಿಲ್‌ಗಳು ಬಾಗಿಲು ಮುಚ್ಚಿದ್ದರಿಂದ ಬಹುತೇಕರು ಬೀದಿಗೆ ಬಿದ್ದರು. ‘ನಿತ್ಯ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಹತ್ತಿ ಮಿಲ್‌ಗಳಲ್ಲಿ ಜನರು ಕೆಲಸ ಮಾಡುತ್ತಿದ್ದರು. ಆಗ ಊರಿನ ಜನರಲ್ಲಿ ಖುಷಿ ಕಾಣುತ್ತಿದ್ದೆವು. ಮಿಲ್ ಮುಚ್ಚಿದ್ದರಿಂದ ದಿನಗೂಲಿ ಮಾಡುವುದು ಅನಿವಾರ್ಯವಾಯಿತು. ಅಂದಿನಿಂದಲೂ ಜನರ ಜೀವನ ಮಟ್ಟದಲ್ಲಿ ಸುಧಾರಣೆ ಕಂಡಿಲ್ಲ’ ಎನ್ನುತ್ತಾರೆ ಕವಾಡಿಗರಹಟ್ಟಿಯ ಮಲ್ಲಣ್ಣ.
‘ಇಷ್ಟೊಂದು ಜೀವಗಳಿಗೆ ಹಾನಿ ಆಗಿರುವುದನ್ನು ನೋಡಿದರೆ ಕುಡಿಯುವ ನೀರಿನಲ್ಲಿ ವಿಷ ಬೆರೆಸಿರುವುದು ಸ್ಪಷ್ಟ’ ಎಂದು ಕವಾಡಿಗರಹಟ್ಟಿಯ ಜನ ಆರೋಪಿಸಿದ್ದರು. ಅದಕ್ಕೆ ಅವರು ಈಗಲೂ ಬದ್ಧರಾಗಿದ್ದಾರೆ. ನೀರು ಕುಡಿಯಲು ಯೋಗ್ಯವಾಗಿಲ್ಲ ಹಾಗೂ ಕಾಲರಾ ಹರಡಬಹುದಾದ ವಿಬ್ರಿಯೊ ಬ್ಯಾಕ್ಟೀರಿಯಾ ಇರುವುದನ್ನು ಖಚಿತಪಡಿಸಿದ ವರದಿಯನ್ನು ಜನರು ಅನುಮಾನದಿಂದ ನೋಡುತ್ತಿದ್ದಾರೆ. ಮೃತರ ದೇಹದ ಮಾದರಿಯಲ್ಲಿ ವಿಷದ ಅಂಶ ಪತ್ತೆಯಾಗಿಲ್ಲ ಎಂಬ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ವಿಷದ ಸುತ್ತ ಬಲವಾದ ಅನುಮಾನ ವ್ಯಕ್ತಪಡಿಸಲು ಕಾರಣವಾಗಿದ್ದು ಈ ಹಿಂದೆ ಇದೇ ಪ್ರದೇಶ ವ್ಯಾಪ್ತಿಯಲ್ಲಿ ಭಿನ್ನ ಜಾತಿಯ ಯುವಕ ಮತ್ತು ಬಾಲಕಿ ನಡುವೆ ಚಿಗುರೊಡೆದಿದ್ದ ಪ್ರೇಮ.
ಕವಾಡಿಗರಹಟ್ಟಿಯ ಎಸ್‌ಸಿ ಕಾಲೊನಿಯ ಯುವಕ ಹಾಗೂ ಲಿಂಗಾಯತ ಸಮುದಾಯದ ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರು. ಬಾಲಕಿ ಮನೆಯಲ್ಲಿ ಪ್ರೀತಿಗೆ ವಿರೋಧ ವ್ಯಕ್ತವಾಗಿದ್ದರಿಂದ ಇಬ್ಬರು ಊರು ಬಿಟ್ಟಿದ್ದರು. ಈ ಸಂಬಂಧ 2022ರಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಯುವಕನನ್ನು ಬಂಧಿಸಿದ ಪೊಲೀಸರು ಜೈಲಿಗೆ ತಳ್ಳಿದ್ದರು. ಮನೆಗೆ ಮರಳಲು ನಿರಾಕರಿಸಿದ ಬಾಲಕಿಗೆ ಬಾಲಮಂದಿರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈಚೆಗಷ್ಟೇ ಆಕೆಗೆ 18 ವರ್ಷ ತುಂಬಿದ್ದರಿಂದ ಇತ್ತೀಚೆಗೆ ಬಾಲಮಂದಿರದ ಸಿಬ್ಬಂದಿ ಆಕೆಯನ್ನು ಪಾಲಕರಿಗೆ ಒಪ್ಪಿಸಿದ್ದರು. ಯುವತಿ ಈಗ ತಾನು ಪ್ರೀತಿಸಿದ ಯುವಕನನ್ನು ಮದುವೆಯಾಗಲು ಮುಂದಾಗಿದ್ದಳು. ಜೈಲಿನಲ್ಲಿರುವ ಪ್ರಿಯಕರನ ಬಿಡುಗಡೆಗೆ ಪ್ರಯತ್ನಿಸಿದ್ದಲ್ಲದೆ, ಪೊಲೀಸರೆದುರು ಮನದ ಇಂಗಿತ ವ್ಯಕ್ತಪಡಿಸಿದ್ದಳು.
ಇದು ಯುವತಿಯ ಕುಟುಂಬದ ಮುನಿಸಿಗೆ ಕಾರಣವಾಗಿತ್ತು. ಬಾಲಮಂದಿರದಿಂದ ಯುವತಿ ಮನೆಗೆ ಮರಳಿದ ಕೆಲವು ದಿನಗಳ ಬಳಿಕ ಈ ಘಟನೆ ನಡೆದಿದೆ. ಅನೇಕ ಜೀವಗಳನ್ನು ಬಲಿ ಪಡೆದ ಕುಡಿಯುವ ನೀರು ಕಲುಷಿತಗೊಂಡ ದಿನ ಅದೇ ಟ್ಯಾಂಕ್‌ನಿಂದ ಪಕ್ಕದ ಇತರ ಬೀದಿಗಳಿಗೂ ನೀರು ಹರಿದಿದೆಯಾದರೂ, ‘ಪರಿಶಿಷ್ಟ ಜಾತಿ ಕಾಲೊನಿ ಜನರಿಗೆ ಮಾತ್ರ ಆ ಜೀವಜಲ ‘ವಿಷ’ವಾಗಿ ಪರಿಣಮಿಸಿದ್ದು ಹೇಗೆ ಎಂಬುದು ಇಂದಿಗೂ ಒಗಟಾಗಿಯೇ ಉಳಿದಿದೆ. ನೀರು ಕಲುಷಿತಗೊಳ್ಳಲು ಏನು ಕಾರಣ ಎಂಬುದು ಪತ್ತೆಯಾದರೆ ಮಾತ್ರ ಈ ಅನುಮಾನ ನಿವಾರಣೆಯಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.