ADVERTISEMENT

ಆಳ– ಅಗಲ | ನ್ಯಾಯಾಂಗದಲ್ಲಿದ್ದವರು ಅಧಿಕಾರ ಸ್ಥಾನಕ್ಕೇರಿದಾಗ...

​ಪ್ರಜಾವಾಣಿ ವಾರ್ತೆ
Published 21 ಮೇ 2024, 23:30 IST
Last Updated 21 ಮೇ 2024, 23:30 IST
   

‘ನಾನು ಅಂದು–ಇಂದು ಎಂದಿಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸದಸ್ಯನೇ ಆಗಿದ್ದೇನೆ. ಈಗ ಮತ್ತೊಮ್ಮೆ ಸಂಘದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಿದ್ಧನಿದ್ದೇನೆ’ ಎಂದು ನಿವೃತ್ತ ಮುಖ್ಯ ನ್ಯಾಯಮೂರ್ತಿ ಚಿತ್ತರಂಜನ್‌ ದಾಸ್‌ ಹೇಳಿದ್ದಾರೆ. ಕಲ್ಕತ್ತಾ ಹೈಕೋರ್ಟ್‌ನಿಂದ ಇತ್ತೀಚೆಗೆ ದಾಸ್‌ ಅವರು ನಿವೃತ್ತರಾಗಿದ್ದರು ಮತ್ತು ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಹೀಗೆ ಹೇಳಿದ್ದಾರೆ.

ಇದೇ ನ್ಯಾಯಾಲಯದ ನ್ಯಾಯಮೂರ್ತಿ ಅಭಿಜಿತ್‌ ಗಂಗೋಪಾಧ್ಯಾಯ ಅವರು ತಮ್ಮ ನಿವೃತ್ತಿಗೆ ಕೆಲವೇ ತಿಂಗಳ ಮೊದಲು ಕೆಲಸಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಗೊಂಡಿದ್ದರು. ರಾಜೀನಾಮೆ ನೀಡುವ ಮೊದಲೇ, ತಾವು ಬಿಜೆಪಿ ಸೇರುವುದಾಗಿ ಸಾರ್ವಜನಿಕವಾಗಿಯೇ ಹೇಳಿದ್ದರು. ಈಗ ಅವರು ಬಿಜೆಪಿಯ ಟಿಕೆಟ್‌ನೊಂದಿಗೆ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ.

ಕಳೆದ 10 ವರ್ಷಗಳಲ್ಲಿ ಇಂಥ ಹಲವು ಉದಾಹರಣೆಗಳನ್ನು ಪಟ್ಟಿ ಮಾಡಬಹುದು. ಹಾಗಾದರೆ, 10 ವರ್ಷಗಳ ಹಿಂದೆ ಈ ರೀತಿ ನಡೆದಿಲ್ಲವೇ ಎಂದು ಕೇಳಿದರೆ, ಆಗ ನಡೆದ ಇಂಥ ಹಲವು ಘಟನೆಗಳನ್ನು ಉದಾಹರಿಸಬಹುದು. ನ್ಯಾಯಮೂರ್ತಿಗಳು ಹಲವು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಸಚಿವರೂ ಆಗಿದ್ದಾರೆ. ರಾಜ್ಯಪಾಲರಾಗಿದ್ದಾರೆ.

ADVERTISEMENT

ನ್ಯಾಯ ನೀಡುವ ಸ್ಥಾನದಲ್ಲಿರುವವರು ಯಾವುದೇ ಒಂದು ಪಕ್ಷಕ್ಕೆ, ಸಿದ್ಧಾಂತಕ್ಕೆ ವಾಲುವುದು ಇಡೀ ನ್ಯಾಯಾಂಗ ವ್ಯವಸ್ಥೆ ಮೇಲೆಯೇ ಅನುಮಾನ ಮೂಡುವಂತೆ ಮಾಡುವುದಿಲ್ಲವೇ ಎನ್ನುವ ಚರ್ಚೆ ಕೂಡ ಹಲವು ದಶಕಗಳಿಂದ ಇದ್ದೇ ಇದೆ. ಆದರೆ, ಸಂವಿಧಾನದ ಪ್ರಕಾರ ಯಾವ ವ್ಯಕ್ತಿಯನ್ನೂ ಚುನಾವಣೆಗೆ ಸ್ಪರ್ಧಿಸುವುದರಿಂದ, ರಾಜಕೀಯ ಪಕ್ಷಗಳಿಗೆ ಸೇರುವುದರಿಂದ ತಡೆಯಲು ಸಾಧ್ಯವಿಲ್ಲ. ನ್ಯಾಯಮೂರ್ತಿಗಳೂ ಇದಕ್ಕೆ ಹೊರತಲ್ಲ. ಆದರೆ, ನಿವೃತ್ತಿಯಾದ ಬಳಿಕ ಅಥವಾ ನಿವೃತ್ತಿಗೆ ಕೆಲವು ತಿಂಗಳಿದೆ ಎನ್ನುವಾಗ ಕೆಲಸಕ್ಕೆ ರಾಜೀನಾಮೆ ನೀಡಿ ತಕ್ಷಣವೇ ರಾಜಕೀಯ ಪಕ್ಷಗಳಿಗೆ ಸೇರಿಕೊಳ್ಳುವುದು, ನೈತಿಕವೇ ಎಂಬ ದೃಷ್ಟಿಯಿಂದಲೂ ನ್ಯಾಯಮೂರ್ತಿಗಳು ಯೋಚಿಸಬೇಕು ಎನ್ನುವ ವಾದವೂ ಇದೆ. ಹೀಗಾಗಿಯೇ ವಿರಾಮ ಕಾಲ (ಕೂಲಿಂಗ್‌ ಆಫ್‌ ಪೀರಿಯಡ್‌) ಎನ್ನುವ ವಿಚಾರವು ಪ್ರಾಮುಖ್ಯ ಪಡೆದುಕೊಂಡಿದೆ.

‘ನಿವೃತ್ತಿಯ ಬಳಿಕ ರಾಜಕೀಯ ಪಕ್ಷಗಳಿಗೆ ಸೇರಿಕೊಳ್ಳಬೇಕು ಅಥವಾ ಆಡಳಿತಾತ್ಮಕ ಹುದ್ದೆಗಳನ್ನು ಪಡೆಯಬೇಕು ಎಂದು ಬಯಸುವ ನ್ಯಾಯಮೂರ್ತಿಗಳು ಕನಿಷ್ಠ ಎರಡು ವರ್ಷ ವಿರಾಮ ಕಾಲದಲ್ಲಿ (ಕೂಲಿಂಗ್‌ ಆಫ್‌ ಪೀರಿಯಡ್‌) ಇರಬೇಕು’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಆರ್‌.ಎಂ. ಲೋಧಾ ಅವರು ಒಮ್ಮೆ ಅಭಿಪ್ರಾಯಪಟ್ಟಿದ್ದರು. ಐಎಎಸ್‌, ಐಪಿಎಸ್‌ ಅಧಿಕಾರಿಗಳು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತಕ್ಷಣವೇ ರಾಜಕೀಯ ಪಕ್ಷಗಳಿಗೆ ಸೇರಿಕೊಳ್ಳುವ ಪ್ರಕರಣಗಳು ಅಧಿಕವಾಗ ತೊಡಗಿವೆ. ವೃತ್ತಿಯೇತರ ಅಭಿಪ್ರಾಯ, ಹಿತಾಸಕ್ತಿಗಳು ಅವರ ಕೆಲಸದಲ್ಲಿಯೂ ಪ್ರಭಾವ ಬೀರುತ್ತವೆ ಎಂಬೆಲ್ಲಾ ಕಾರಣಗಳನ್ನು ನೀಡಿ ಅಧಿಕಾರಿಗಳು ರಾಜೀನಾಮೆ ಕೊಟ್ಟ ತಕ್ಷಣದಲ್ಲಿಯೇ ಪಕ್ಷಗಳಿಗೆ ಸೇರಿಕೊಳ್ಳುವುದನ್ನು ತಡೆಯಬೇಕು ಎಂದು ಚುನಾವಣಾ ಆಯೋಗ 2012ರಲ್ಲಿ ಕೋರಿತ್ತು.

ಆಯೋಗದ ಕೋರಿಕೆಯನ್ನು ಅಂದಿನ ಕೇಂದ್ರ ಸರ್ಕಾರವು ತಳ್ಳಿ ಹಾಕಿತ್ತು. ಅಂದಿನ ಅಟಾರ್ನಿ ಜನರಲ್‌ ಜಿ.ಇ. ವಹನ್ವತಿ ಅವರ ಅಭಿಪ್ರಾಯವನ್ನು ಪಡೆದುಕೊಂಡೇ ಕೋರಿಕೆಯನ್ನು ತಳ್ಳಿ ಹಾಕುತ್ತಿರುವುದಾಗಿ ಕೇಂದ್ರ ಹೇಳಿತ್ತು. ‘ಯಾವುದೇ ವ್ಯಕ್ತಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಯುವುದು, ರಾಜಕೀಯ ಪಕ್ಷಗಳಿಗೆ ಸೇರುವುದನ್ನು ತಡೆಯುವುದು ಸಂವಿಧಾನದ 14ನೇ ವಿಧಿಗೆ ವಿರುದ್ಧವಾದುದು’ ಎಂದು ವಹನ್ವತಿ ಅವರು ಅಭಿಪ್ರಾಯಪಟ್ಟಿದ್ದರು.

ಈ ಎರಡೂ ವಿಚಾರಗಳನ್ನು ಪರಿಗಣಿಸುವಂತೆ ಮತ್ತು ಇವುಗಳನ್ನು ಜಾರಿಗೆ ತರಲು ನಿರ್ದೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ದಾಖಲಾಗಿದ್ದವು. ಆದರೆ, ಎಲ್ಲ ಅರ್ಜಿಗಳನ್ನೂ ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. ‘ನಿವೃತ್ತಿಯ ನಂತರ ಬೇರೆ ಹುದ್ದೆಗಳನ್ನು ಪಡೆದುಕೊಂಡರೆ,  ನ್ಯಾಯಮೂರ್ತಿಯಾಗಿದ್ದಾಗ  ಯಾವುದೋ ಸ್ಥಾನವನ್ನು ದೃಷ್ಟಿಯಲ್ಲಿ ಇರಿಸಿಕೊಂಡೇ ನ್ಯಾಯದಾನ ಮಾಡಿದ್ದಾರೆ ಎನ್ನುವಂಥ ತಪ್ಪುಕಲ್ಪನೆಯು ಜನರಲ್ಲಿ ರೂಪುಗೊಳ್ಳುತ್ತದೆ. ಅದಕ್ಕಾಗಿಯೇ ನಿವೃತ್ತಿಯ ಬಳಿಕವೇ ರಾಜಕೀಯ ಪಕ್ಷವೊಂದಕ್ಕೆ ನ್ಯಾಯಮೂರ್ತಿಗಳು ಸೇರಿಕೊಳ್ಳುವುದನ್ನು ತಡೆಯಬೇಕು’ ಎಂದು ಬಾಂಬೆ ವಕೀಲರ ಸಂಘವು ಸುಪ್ರೀಂ ಕೋರ್ಟ್‌ ಅನ್ನು ಕೋರಿತ್ತು. ಈ ಅರ್ಜಿ ವಜಾ ಮಾಡಿದ ನ್ಯಾಯಾಲಯವು, ‘ನಿವೃತ್ತಿಯ ನಂತರ ಯಾವುದೇ ಸ್ಥಾನವನ್ನು ಪಡೆಯಬೇಕೋ ಬೇಡವೊ ಎನ್ನುವುದು ಆಯಾ ನ್ಯಾಯಮೂರ್ತಿಯ ವಿವೇಚನೆಗೆ ಬಿಟ್ಟ ವಿಚಾರ. ಈ ಕುರಿತು ಕಾನೂನೊಂದನ್ನು ರೂಪಿಸಬೇಕೇ ಬೇಡವೇ ಎನ್ನುವುದು ಕೂಡ ನ್ಯಾಯಾಲಯದ ವ್ಯಾಪ್ತಿಗೆ ಬರದ ವಿಚಾರ’ ಎಂದಿತ್ತು.

ಸಂವಿಧಾನ ಕರಡು ರಚನಾ ಸಭೆಯಲ್ಲಿಯೂ ಚರ್ಚೆ
ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರದ ಆಡಳಿತಾತ್ಮಕ ಹುದ್ದೆಗೆ ನೇಮಕವಾಗುವುದನ್ನು ತಡೆಯುವ ನಿಯಮ ರೂಪಿಸಬೇಕು ಎಂಬ ಪ್ರಸ್ತಾವವನ್ನು ಕೆ.ಟಿ. ಶಾ ಅವರು ಸಂವಿಧಾನ ಕರಡು ರಚನಾ ಸಮಿತಿ ಸಭೆಯ ಮುಂದಿಡುತ್ತಾರೆ. ಇದರಿಂದ ನ್ಯಾಯಾಂಗ ಸ್ವಾಯಂತ್ರ್ಯವನ್ನು ಕಾಪಾಡಬಹುದು ಎಂದೂ ಪ್ರತಿಪಾದಿಸುತ್ತಾರೆ. ಈ ಪ್ರಸ್ತಾವವನ್ನು ಕೆ.ವಿ. ಕಾಮತ್‌ ಹಗೂ ಶಿಬನ್‌ ಲಾಲ್‌ ಸಕ್ಸೇನಾ ಅವರೂ ಬೆಂಬಲಿಸುತ್ತಾರೆ. ‘ಕೇಂದ್ರ ಹಾಗೂ ರಾಜ್ಯಗಳು ಮತ್ತು ರಾಜ್ಯ–ರಾಜ್ಯಗಳ ನಡುವಣ ವ್ಯಾಜ್ಯಗಳು ಮತ್ತು ಸಾಂವಿಧಾನಿಕ ವ್ಯಾಜ್ಯಗಳ ಕುರಿತು ಸಂಧಾನ ಮತ್ತು ನ್ಯಾಯತೀರ್ಮಾನಗಳನ್ನು ಸುಪ್ರೀಂ ಕೋರ್ಟ್ ಮಾಡಬೇಕಾಗುತ್ತದೆ. ಇಂತಹ ಹಲವು ಪ್ರಕರಣಗಳಲ್ಲಿ ಕೇಂದ್ರ ಸರ್ಕಾರವು ಹಿತಾಸಕ್ತ ಆಗಿರಬಹುದು. ಸುಪ್ರೀಂ ಕೋರ್ಟ್ ಮುಂದೆ ಇರುವ ಹಲವು ಪ್ರಕರಣಗಳು ರಾಷ್ಟ್ರಪತಿ ಅಥವಾ ಕೇಂದ್ರ ಸರ್ಕಾರಕ್ಕೆ ಮಹತ್ವದ್ದು ಹಾಗೂ ಹಿತಾಸಕ್ತಿ ಇರುವುದೂ ಆಗುವುದು ಸಾಮಾನ್ಯ. ಇಂತಹ ವಿಚಾರಗಳಲ್ಲಿ ನಿರ್ದಿಷ್ಟವಾದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಬೇಕು ಎಂದು ಅವರು ಬಯಸಬಹುದು’ ಎಂದು ಪ್ರತಿಪಾದಿಸುತ್ತಾರೆ ಕೆ.ವಿ. ಕಾಮತ್‌. ನ್ಯಾಯಮೂರ್ತಿಗಳು ರಾಜಕಾರಣಕ್ಕೆ ಬರುವುದಕ್ಕೆ ನಿರ್ಬಂಧ ಇರಬೇಕು ಎಂಬುದಕ್ಕೆ ಕಾಮತ್‌ ಅವರ ಸಮರ್ಥನೆ ಇದು. ಆದರೆ, ಬಿ.ಆರ್‌. ಅಂಬೇ‌ಡ್ಕರ್‌ ಅವರು ಈ ವಾದವನ್ನು ಒಪ್ಪುವುದಿಲ್ಲ. ‘...ನ್ಯಾಯಾಂಗವು ಸರ್ಕಾರದ ವಿಚಾರದಲ್ಲಿ ಹೆಚ್ಚು ಆಸಕ್ತವಾಗಿ ಇರುವುದಿಲ್ಲ: ಜನರ ಹಕ್ಕುಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಪರಿಹರಿಸುವುದು, ಕೇಂದ್ರ ಸರ್ಕಾರ ಮತ್ತು ರಾಜ್ಯಗಳ ಹಕ್ಕುಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಪರಿಹರಿಸುವುದರಲ್ಲಿಯೇ ಸುಪ್ರೀಂ ಕೋರ್ಟ್‌ ಹೆಚ್ಚು ಆಸಕ್ತವಾಗಿ ಇರುತ್ತದೆ... ನ್ಯಾಯಾಂಗದ ಮೇಲೆ ಸರ್ಕಾರವು ಪ್ರಭಾವ ಬೀರುವ ಅವಕಾಶಗಳು ಬಹಳ ಕಡಿಮೆ. ಹಾಗಾಗಿಯೇ, ಇತರ ಹುದ್ದೆಗಳನ್ನು ಹೊಂದುವುದರಿಂದ ಇವರನ್ನು ಅನರ್ಹಗೊಳಿಸುವುದು ಸ್ಪಷ್ಟವಾಗಿ ಸೈದ್ಧಾಂತಿಕ ಕಾರಣವಷ್ಟೇ ಆಗುತ್ತದೆ ಮತ್ತು ಹಾಗೆ ಮಾಡುವುದು ಅತಿರೇಕ ಎಂದು ನನಗೆ ಅನಿಸುತ್ತದೆ’ ಎಂದು ಅಂಬೇಡ್ಕರ್‌ ಹೇಳಿದ್ದಾರೆ. 

ಬಹರುಲ್‌ ಇಸ್ಲಾಂ:

ಇವರು ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯರಾಗಿದ್ದರು ಜೊತೆಯಲ್ಲಿ ವಕೀಲಿಕೆಯನ್ನೂ ಮಾಡುತ್ತಿದ್ದರು. ನಂತರ, 1972ರಲ್ಲಿ ಗುವಾಹಟಿಯ ನ್ಯಾಯಮೂರ್ತಿ ಆಗುವ ಸಲುವಾಗಿ ರಾಜ್ಯಸಭೆಗೆ ರಾಜೀನಾಮೆ ನೀಡಿದರು. ನಂತರ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದರು. 1983ರಲ್ಲಿ ನಿವೃತ್ತರಾಗಬೇಕಿತ್ತು. ಅದಕ್ಕೂ ಮುನ್ನವೇ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ರಾಜ್ಯಸಭೆಗೆ ಎರಡನೇ ಬಾರಿಗೆ ಆಯ್ಕೆ ಆಗುತ್ತಾರೆ.

ಕೆ. ಸುಬ್ಬರಾವ್‌ ಮತ್ತು ಮೊಹಮ್ಮದ್‌ ಹಿದಾಯತುಲ್ಲಾ:

ಸುಬ್ಬರಾವ್‌ ಅವರು ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಸ್ಥಾನಕ್ಕೆ 1967ರಲ್ಲಿ ರಾಜೀನಾಮೆ ನೀಡಿದ್ದರು. ಬಳಿಕ, ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಜಾಕಿರ್‌ ಹುಸೇನ್‌ ಖಾನ್‌ ಅವರ ವಿರುದ್ಧ ಸೋತರು. ಜಾಕಿರ್‌ ಹುಸೇನ್‌ ಖಾನ್‌ ಅವರು 1969ರಲ್ಲಿ ಮೃತಪಟ್ಟಾಗ ತುಸು ಅವಧಿಗೆ ಮೊಹಮ್ಮದ್‌ ಹಿದಾಯತುಲ್ಲಾ ಅವರು ಹಂಗಾಮಿ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುತ್ತಾರೆ. ಈ ವೇಳೆ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ನಂತರ, 1979ರಲ್ಲಿ ಪೂರ್ಣ ಅವಧಿಗೆ ಉಪರಾಷ್ಟ್ರಪತಿಯಾಗುತ್ತಾರೆ.

ಕೆ.ಎಸ್‌. ಹೆಗ್ಡೆ:

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದರು. 1973ರಲ್ಲಿ ರಾಜೀನಾಮೆ ನೀಡುತ್ತಾರೆ. ನಂತರ, 1977ರಲ್ಲಿ ಜನತಾ ಪಕ್ಷದಿಂದ ಗೆದ್ದು ಲೋಕಸಭೆಯ ಸ್ಪೀಕರ್‌ ಆಗುತ್ತಾರೆ.

ರಂಜನ್‌ ಗೊಗೊಯಿ:

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್‌ ಗೊಗೊಯಿ ಅವರು 2019ರಲ್ಲಿ ನಿವೃತ್ತರಾಗುತ್ತಾರೆ. ನಾಲ್ಕೇ ತಿಂಗಳ ಬಳಿಕ, 2020ರಲ್ಲಿ ಅವರನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯಸಭಾ ಸದಸ್ಯತ್ವಕ್ಕೆ ಶಿಫಾರಸು ಮಾಡುತ್ತದೆ

ಅಬ್ದುಲ್‌ ನಜೀರ್‌:

ನಜೀರ್‌ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದರು. 2023ರಲ್ಲಿ ಅವರು ನಿವೃತ್ತರಾಗುತ್ತಾರೆ. ಒಂದೇ ತಿಂಗಳ ಬಳಿಕ ಅವರನ್ನು ಆಂಧ್ರ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗುತ್ತದೆ.

ಪಿ.ಸದಾಶಿವಂ:

2013ರಿಂದ 2014ರ ಅಲ್ಪಾವಧಿಗೆ ಸದಾಶಿವಂ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ತಮ್ಮ ನಿವೃತ್ತಿಯ ತಕ್ಷಣವೇ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸಲಾಗುತ್ತದೆ.

ಎಂ. ರಾಮಾ ಜೋಯಿಸ್‌:

1992ರಲ್ಲಿ ಪಂಜಾಬ್‌–ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದರು. ಅದೇ ವರ್ಷ ರಾಜೀನಾಮೆ ನೀಡಿದರು. 2002–2003ರವರೆಗೆ ಜಾರ್ಖಂಡ್‌ನ ಹಾಗೂ 2003–2004ರವರೆಗೆ ಬಿಹಾರದ ರಾಜ್ಯಪಾಲರಾಗಿದ್ದರು. 2008ರಿಂದ 2014ರವರೆಗೆ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.