ADVERTISEMENT

ಆಳ–ಅಗಲ: ಎಲ್‌ಪಿಜಿ ಸಬ್ಸಿಡಿಗೆ ಕೊಕ್‌?

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 19:30 IST
Last Updated 5 ಫೆಬ್ರುವರಿ 2021, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಭಾರತದಲ್ಲಿ ಈಗ ಇರುವ ಎಲ್‌ಪಿಜಿ ಸಂಪರ್ಕಗಳ ಸಂಖ್ಯೆ 27.7 ಕೋಟಿ. 10 ವರ್ಷಗಳ ಹಿಂದೆ ಎಲ್‌ಪಿಜಿ ಸಂಪರ್ಕಗಳ ಸಂಖ್ಯೆ 12.6 ಕೋಟಿಯಷ್ಟು ಇತ್ತು. 10 ವರ್ಷಗಳಲ್ಲಿ ಎಲ್‌ಪಿಜಿ ಬಳಕೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಎಲ್‌ಪಿಜಿ ಉತ್ಪಾದನೆಯೂ ಏರಿಕೆಯಾಗಿದೆ. 10 ವರ್ಷಗಳ ಹಿಂದೆ ಎಲ್‌ಪಿಜಿ ಸಹಾಯಧನಕ್ಕೆ ಕೇಂದ್ರ ಸರ್ಕಾರವು ಭಾರಿ ಮೊತ್ತದ ಅನುದಾನವನ್ನು ಮೀಸಲಿರಿಸುತ್ತಿತ್ತು. ಆ ಸ್ಥಿತಿಗೆ ಹೋಲಿಸಿದರೆ ಈಗ ಎಲ್‌ಪಿಜಿ ಸಿಲಿಂಡರ್‌ನ ದರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಎಲ್‌ಪಿಜಿ ಸಿಲಿಂಡರ್‌ಗೆ ಸರ್ಕಾರ ಒದಗಿಸುತ್ತಿದ್ದ ಸಹಾಯಧನವೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

2009-10ರಲ್ಲಿ ಮನೆಬಳಕೆಯ ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ ಕೇಂದ್ರ ಸರ್ಕಾರವು ಸರಾಸರಿ ₹460 ಸಹಾಯಧನವನ್ನು ನೀಡುತ್ತಿತ್ತು. ಆಗ ಪ್ರತಿ ಸಿಲಿಂಡರ್‌ನ ಬೆಲೆ ₹990 ಇತ್ತು ಮತ್ತು ಸಹಾಯಧನದ ಮೊತ್ತ ಕಡಿತವಾದ ನಂತರದ ಮೊತ್ತವನ್ನಷ್ಟೇ ಗ್ರಾಹಕ ಪಾವತಿಸಬೇಕಿತ್ತು. ಹೀಗಾಗಿ ಸಿಲಿಂಡರ್ ಖರೀದಿಯು ಗ್ರಾಹಕನಿಗೆ ಹೊರೆಯಾಗುತ್ತಿರಲಿಲ್ಲ. 2014-15ನೇ ಸಾಲಿನಲ್ಲಿ ಸಹಾಯಧನ ನೀಡಿಕೆ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಯಿತು. ಗ್ರಾಹಕ ಪೂರ್ಣ ಮೊತ್ತವನ್ನು ಪಾವತಿಸಬೇಕು. ನಂತರ ಆತನ ಬ್ಯಾಂಕ್‌ ಖಾತೆಗೆ ಸಹಾಯಧನದ ಮೊತ್ತ ಜಮೆಯಾಗುತ್ತಿತ್ತು. ಈಗಲೂ ಇದೇ ವ್ಯವಸ್ಥೆ ಜಾರಿಯಲ್ಲಿದೆ. ಆದರೆ, ನಂತರದ ವರ್ಷಗಳಲ್ಲಿ ಈ ಸಹಾಯಧನದ ಮೊತ್ತ ಕಡಿಮೆಯಾಗುತ್ತಲೇ ಬಂದಿದೆ.

2021ರ ಜನವರಿಯಲ್ಲಿ ಮನೆ ಬಳಕೆಯ ಪ್ರತಿ ಸಿಲಿಂಡರ್ ಬೆಲೆ ₹725 ಇತ್ತು. ಇಷ್ಟೂ ಹಣವನ್ನು ಗ್ರಾಹಕ ಪಾವತಿ ಮಾಡಬೇಕು. ಹೀಗೆ ಪಾವತಿ ಮಾಡಿದವರ ಬ್ಯಾಂಕ್ ಖಾತೆಗಳಿಗೆ ₹22 ಸಹಾಯಧನದ ಮೊತ್ತ ಪಾವತಿಯಾಗಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಸಹಾಯಧನವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿರುವುದರಿಂದಲೇ ಸಿಲಿಂಡರ್ ಖರೀದಿ ವೇಳೆ ಗ್ರಾಹಕರಿಗೆ ಹೊರೆಯಾಗುತ್ತಿದೆ.

ADVERTISEMENT

2020ರಲ್ಲಿ ಕೋವಿಡ್‌ ಲಾಕ್‌ಡೌನ್‌ನ ಅವಧಿಯಲ್ಲಿ ಕೇಂದ್ರ ಸರ್ಕಾರವು ಉಜ್ವಲ ಯೋಜನೆ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಿತು. ಆದರೆ ಸಹಾಯಧನವನ್ನು ಸಂಪೂರ್ಣವಾಗಿ ತೆಗೆದುಹಾಕಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ದರ ಕುಸಿದ ಕಾರಣ ಭಾರತದಲ್ಲೂ ಎಲ್‌ಪಿಜಿ ಸಿಲಿಂಡರ್‌ನ ದರ ಕಡಿಮೆಯಾಗಿತ್ತು. ಸಿಲಿಂಡರ್‌ನ ಮಾರುಕಟ್ಟೆ ದರವೇ ಕಡಿಮೆಯಾದ ಕಾರಣ ಸರ್ಕಾರವು ಸಹಾಯಧನವನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು. ಆದರೆ ನಂತರದ ದಿನಗಳಲ್ಲಿ ಮಾರುಕಟ್ಟೆ ದರ ಏರಿಕೆಯಾಯಿತು. ಈ ಅವಧಿಯಲ್ಲಿ ಸಿಲಿಂಡರ್ ದರ ₹580ರಿಂದ 725ಕ್ಕೆ ಏರಿಕೆಯಾಗಿದೆ. ಆದರೆ ಸಹಾಯಧನ ಅದೇ ಪ್ರಮಾಣದಲ್ಲಿ ಏರಿಕೆಯಾಗದ ಕಾರಣ ಗ್ರಾಹಕ ಪ್ರತಿ ಸಿಲಿಂಡರ್‌ಗೆ ₹700ಕ್ಕೂ ಹೆಚ್ಚು ಹಣವನ್ನು ಪಾವತಿ ಮಾಡಬೇಕಿದೆ.

ದರ ಏರಿಕೆಯ ಬಿಸಿ: ಕೇಂದ್ರ ಸರ್ಕಾರವು ಉಜ್ವಲ ಯೋಜನೆಯನ್ನು ಆರಂಭಿಸಿದಾಗ ಸಿಲಿಂಡರ್‌ನ ದರ ಕಡಿಮೆ ಇತ್ತು. ಉಜ್ವಲ ಯೋಜನೆಯಲ್ಲಿ ಗ್ರಾಹಕರಿಗೆ ಸಾಲ ನೀಡಿ, ಎಲ್‌ಪಿಜಿ ಸಂಪರ್ಕ ನೀಡಲಾಗುತ್ತದೆ. ಗ್ರಾಹಕರು ಮಾರುಕಟ್ಟೆ ದರವನ್ನು ಪಾವತಿಸಿ ಸಿಲಿಂಡರ್ ಖರೀದಿಸಬೇಕಿತ್ತು. ನಂತರ ಅವರ ಖಾತೆಗೆ ಬರುವ ಸಹಾಯಧನವು ಸಾಲಮರುಪಾವತಿಗೆ ಕಡಿತವಾಗುತ್ತಿತ್ತು. ನಂತರದ ವರ್ಷಗಳಲ್ಲಿ ಸಿಲಿಂಡರ್ ದರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ಸಹಾಯಧನ ರಹಿತ ಸಿಲಿಂಡರ್‌ಗೆ ಪಾವತಿಸುವಷ್ಟೇ ಹಣವನ್ನು ಉಜ್ವಲ ಯೋಜನೆಯ ಫಲಾನುಭವಿಗಳೂ ಪಾವತಿ ಮಾಡಬೇಕಿತ್ತು. ಸಿಲಿಂಡರ್ ದರ ಅಧಿಕವಾಗಿರುವ ಕಾರಣ ಈ ಯೋಜನೆಯ ಫಲಾನುಭವಿಗಳು ಸಿಲಿಂಡರ್ ಖರೀದಿಯನ್ನೇ ಬಿಟ್ಟಿದ್ದಾರೆ ಎಂದು ಸಿಎಜಿ ತನ್ನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿತ್ತು.

9 ವರ್ಷದಲ್ಲಿ ಶೇ 74ರಷ್ಟು ಕಡಿತ

2021-22ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ವಿವಿಧ ಸಹಾಯಧನಗಳನ್ನು ಭಾರಿ ಪ್ರಮಾಣದಲ್ಲಿ ಕಡಿತ ಮಾಡಿದೆ. 2020-21ನೇ ಸಾಲಿನ ಬಜೆಟ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ಸಹಾಯಧನ ₹ 35,605 ಕೋಟಿ ಅನುದಾನವನ್ನು ತೆಗೆದಿರಿಸಿತ್ತು. ಇದು 2019-20ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 16ರಷ್ಟು ಏರಿಕೆಯಾಗಿತ್ತು. ಆದರೆ 2020-21ರ ಪರಿಷ್ಕೃತ ಅಂದಾಜಿನಲ್ಲಿ ಎಲ್‌ಪಿಜಿ ಸಹಾಯಧನಕ್ಕೆ ಮೀಸಲಿರಿಸಿದ್ದ ಅನುದಾನವನ್ನು ₹ 25,521 ಕೋಟಿಗೆ ಇಳಿಸಲಾಗಿತ್ತು. ಬಜೆಟ್ ಅಂದಾಜಿನಲ್ಲಿ ಮೀಸಲಿರಿಸಿದ್ದ ಅನುದಾನಕ್ಕೆ ಹೋಲಿಸಿದರೆ ಇದು ಶೇ 29.9ರಷ್ಟು ಇಳಿಕೆ.

2021-22ನೇ ಸಾಲಿನ ಬಜೆಟ್‌ ಅಂದಾಜಿನಲ್ಲಿ ಎಲ್‌ಪಿಜಿ ಸಹಾಯಧನಕ್ಕೆ ₹ 12,480 ಕೋಟಿಯನ್ನು ಮೀಸಲಿರಿಸಲಾಗಿದೆ. 2020-21ನೇ ಸಾಲಿನ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ, ಮುಂದಿನ ಆರ್ಥಿಕ ವರ್ಷದಲ್ಲಿ ಇದಕ್ಕಾಗಿ ತೆಗೆದಿರಿಸಿದ ಅನುದಾನದಲ್ಲಿ ಶೇ 51ಕ್ಕಿಂತಲೂ ಹೆಚ್ಚು ಕಡಿತ ಮಾಡಲಾಗಿದೆ. ಒಟ್ಟಾರೆ ಹಿಂದಿನ 9 ವರ್ಷಕ್ಕೆ ಹೋಲಿಸಿದರೆ (2013-14), 2021-22ನೇ ಸಾಲಿನಲ್ಲಿ ಎಲ್‌ಪಿಜಿ ಅನುದಾನಕ್ಕೆ ಮೀಸಲಿರಿಸಿದ ಅನುದಾನದಲ್ಲಿ ಶೇ 74.3ರಷ್ಟು ಕಡಿತ ಮಾಡಲಾಗಿದೆ.

ಸಬ್ಸಿಡಿ ಗೊಂದಲ

ಸಬ್ಸಿಡಿಯ ಪ್ರಮಾಣವನ್ನು ಯಾವ ರೀತಿಯಲ್ಲಿ ನಿರ್ಧರಿಸಲಾಗುತ್ತಿದೆ ಎಂಬುದರ ಬಗ್ಗೆ ಗೊಂದಲ ಇದೆ. ಸಬ್ಸಿಡಿ ನಿರ್ಧಾರದ ಹಿಂದಿನ ತರ್ಕ ಏನು ಎಂಬುದಕ್ಕೆಸರಿಯಾದ ಉತ್ತರ ಎಲ್ಲೂ ಲಭಿಸುತ್ತಿಲ್ಲ. ‘ಸಬ್ಸಿಡಿ ಮೊತ್ತವನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ನಿರ್ಧರಿಸುತ್ತದೆ, ಅಲ್ಲಿಂದ ಬಂದ ನಿರ್ದೇಶನಗಳನ್ನು ನಾವು ಪಾಲಿಸುತ್ತೇವೆ ಅಷ್ಟೇ’ ಎಂದು ವಿತರಣಾ ಕಂಪನಿಯ ಮೂಲಗಳು ಹೇಳುತ್ತವೆ. ‘ಎಲ್‌ಪಿಜಿ ದರವು ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ಹೆಚ್ಚುಕಮ್ಮಿ ಆಗುತ್ತಲೇ ಇರುತ್ತದೆ’ ಎಂದು ಸಚಿವಾಲಯವು ಹಿಂದಿನಿಂದಲೂ ಹೇಳುತ್ತಿದೆ. ಒಟ್ಟಿನಲ್ಲಿ ಸಬ್ಸಿಡಿ ಪ್ರಮಾಣ ನಿಗದಿಯಲ್ಲಿ ಪಾರದರ್ಶಕತೆ ಇಲ್ಲ ಎಂದು ಗ್ರಾಹಕರು ಆರೋಪಿಸುತ್ತಾರೆ.

ಬಡವರಿಗೆ ಸೌಲಭ್ಯ?

ಕಳೆದ ಕೆಲವು ವರ್ಷಗಳಿಂದ ಸಬ್ಸಿಡಿ ಪ್ರಮಾಣವನ್ನು ಸರ್ಕಾರ ಇಳಿಕೆ ಮಾಡುತ್ತಲೇ ಇದೆ. ಸಬ್ಸಿಡಿ ಇಳಿಕೆಗೆ ಸ್ಪಷ್ಟ ಕಾರಣವನ್ನು ಹೇಳಿಲ್ಲವಾದರೂ, ಉಳ್ಳವರಿಗೆ ನೀಡುವ ಸೌಲಭ್ಯವನ್ನು ಕಡಿತಗೊಳಿಸಿ ಬಡವರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಯೋಜನೆ ರೂಪಿಸುತ್ತಿದೆ ಎಂದು ಪ್ರತಿಪಾದಿಸಲಾಗುತ್ತಿದೆ.

ಬಡತನ ರೇಖೆಗಿಂತ ಕೆಳಗಿರುವವರಿಗೆ ಶುದ್ಧ ಇಂಧನವನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು ಆರಂಭಿಸಿದ್ದ ‘ಪಿಎಂ–ಉಜ್ವಲ’ ಯೋಜನೆಗೆ ಒತ್ತು ನೀಡುವುದು ಸರ್ಕಾರದ ಉದ್ದೇಶ ಎನ್ನಲಾಗಿದೆ. ಇದು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು. ‘ಈ ಯೋಜನೆಯಡಿ 2021–22ನೇ ಸಾಲಿನಲ್ಲಿ ಇನ್ನೂ 10 ಲಕ್ಷ ಬಡವರಿಗೆ ಅಡುಗೆ ಅನಿಲ ಸಂಪರ್ಕ ಒದಗಿಸುವ ಮೂಲಕ, ಫಲಾನುಭವಿಗಳ ಸಂಖ್ಯೆಯನ್ನು ಒಂದು ಕೋಟಿಗೆ ಹೆಚ್ಚಿಸಲಾಗುವುದು’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ. ಎಲ್‌ಪಿಜಿ ಸಬ್ಸಿಡಿಗೆ ಹಂಚಿಕೆ ಮಾಡಿರುವ ಅನುದಾನ ಕಡಿಮೆ ಮಾಡಿರುವುದು ಒಂದುಕಡೆ, ಇನ್ನಷ್ಟು ಬಡವರನ್ನು ಉಜ್ವಲ ಯೋಜನೆಗೆ ಸೇರ್ಪಡೆ ಮಾಡುವ ಘೋಷಣೆ ಇನ್ನೊಂದು ಕಡೆ ಆಗಿರುವುದರಿಂದ, ಅಡುಗೆ ಅನಿಲದ ಸಿಲಿಂಡರ್‌ ದರವನ್ನು ಹೆಚ್ಚಿಸಿ, ಕೊರತೆಯನ್ನು ಸರಿದೂಗಿಸುವ ಸಾಧ್ಯತೆ ಇದೆ ಎಂದು ವಾದಿಸಲಾಗುತ್ತಿದೆ.

ಆಧಾರ: ಕೇಂದ್ರ ಬಜೆಟ್‌ಗಳು (2013-14ರಿಂದ 2021-22), ಉಜ್ವಲ ಯೋಜನೆಯ ಸಿಎಜಿ ವರದಿ, ಪೆಟ್ರೋಲಿಯಂ ಯೋಜನಾ ಮತ್ತು ವಿಶ್ಲೇಷಣಾ ಘಟಕದ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.