ADVERTISEMENT

ಅನುಭವ ಮಂಟಪ | ಮೀಸಲು: ಮಹಿಳೆಗೂ ಬೇಕಿದೆ ಸಮಪಾಲು

ಸಮುದಾಯದಲ್ಲೇ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಹಿಳೆಯರು

ಪ್ರಜಾವಾಣಿ ವಿಶೇಷ
Published 13 ಅಕ್ಟೋಬರ್ 2024, 23:37 IST
Last Updated 13 ಅಕ್ಟೋಬರ್ 2024, 23:37 IST
   
ಮನೆಯ ಹೊರಗೆ ಸಾಮಾಜಿಕ ತಾರತಮ್ಯದ ಅಡೆತಡೆಗಳು ಮತ್ತು ಮನೆಯ ಒಳಗೆ ಪಿತೃ ಪ್ರಧಾನ ವ್ಯವಸ್ಥೆಯ ರೂಢಿಗಳು ದಲಿತ ಮಹಿಳೆಯರು ಸಾರ್ವಜನಿಕ ರಂಗದಲ್ಲಿ ಮತ್ತು ಸರ್ಕಾರಿ ವಲಯದಲ್ಲಿ ಮುಂದುವರಿಯಲು ಅಡ್ಡಿಯಾಗಿವೆ. ಇವು ಪರಿಶಿಷ್ಟ ಜಾತಿಯ ವರ್ಗದಲ್ಲಿ ಹೆಚ್ಚು ಹಿಂದುಳಿದಿರುವ ಮಹಿಳೆಯರ ಸಬಲೀಕರಣದ ಮೇಲೆ ಪರಿಣಾಮ ಬೀರುತ್ತಿವೆ. ದಲಿತ ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳನ್ನು ಪ್ರವೇಶಿಸಲು ಮತ್ತು ಸಾರ್ವಜನಿಕ ಸ್ಥಾನಗಳನ್ನು ಗಳಿಸಲು ಇವು ದೊಡ್ಡ ಅಡಚಣೆಗಳಾಗಿವೆ. ಈ ವ್ಯವಸ್ಥೆ ಬದಲಾಗುವವರೆಗೂ ಶಿಕ್ಷಣ, ಸಂಘಟನೆ ಮತ್ತು ಹೋರಾಟ... ಈ ಮೂರು ಸೂತ್ರಗಳನ್ನು ನಾವು ಅನುಸರಿಸುತ್ತಲೇ ಇರಬೇಕು 

ಭಾರತದ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠವು ನೀಡಿರುವ ತೀರ್ಪಿನ ಪ್ರಕಾರ, ಪರಿಶಿಷ್ಟ ಜಾತಿ ಎನ್ನುವುದು ಸಾಮಾಜಿಕವಾಗಿ ಭಿನ್ನ ಜಾತಿಗಳ ಮಿಶ್ರಣವಾಗಿದ್ದು ಅವುಗಳಲ್ಲಿ ಉಪವರ್ಗೀಕರಣ ಸಾಧ್ಯವಿದೆ. ಹೀಗಾಗಿ, ರಾಜ್ಯವು ಸಂವಿಧಾನದ ಪರಿಚ್ಛೇದ 15(4) ಮತ್ತು 16(4)ರ ಅಡಿಯಲ್ಲಿ ಹಿಂದುಳಿದವರಲ್ಲಿ ಹಿಂದುಳಿದವರಿಗೆ ಪ್ರಾತಿನಿಧ್ಯ ಒದಗಿಸಲು ಪರಿಶಿಷ್ಟ ಜಾತಿಗಳನ್ನು ಮತ್ತಷ್ಟು ವರ್ಗೀಕರಿಸಬಹುದು.

ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸ್ವಾಗತಿಸುತ್ತಾ, ಎಲ್ಲರಿಗೂ ಸಮಾನತೆಯನ್ನು ಖಚಿತಪಡಿಸಲು, ಪರಿಶಿಷ್ಟ ಜಾತಿಗಳನ್ನು ಅವರ ಶ್ರೇಣೀಕೃತ ಹಿಂದುಳಿದಿರುವಿಕೆ ಪ್ರಕಾರ ಉಪವರ್ಗೀಕರಿಸುವ ಅವಶ್ಯಕತೆಯಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಮುಖ್ಯ ನ್ಯಾಯಮೂರ್ತಿಯವರು ತೀರ್ಪಿನಲ್ಲಿ ಪರಿಶಿಷ್ಟ ಜಾತಿಗಳ ಉಪ ವರ್ಗೀಕರಣದ ಎರಡು ಮಾದರಿಗಳನ್ನು ಸಹ ಸೂಚಿಸಿದ್ದಾರೆ. ಆದರೆ, ತೀರ್ಪಿನ ಅನುಷ್ಠಾನದಲ್ಲಿ ನಡೆಯಬಹುದಾದ ರಾಜಕೀಯದ ಬಗ್ಗೆ ಹಲವರಲ್ಲಿ ಆತಂಕವಿದೆ. ಪರಿಶಿಷ್ಟ ಜಾತಿಗಳ ವಿವಿಧ ಗುಂಪುಗಳಿಗೆ ಸೇರಿದ ಮಹಿಳೆಯರ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆಯೂ ಆತಂಕವಿದೆ. ಸರ್ಕಾರವು ಅಳವಡಿಸಿಕೊಂಡ ಉಪ-ವರ್ಗೀಕರಣದ ವಿಧಾನಗಳು ದಲಿತ ಮಹಿಳೆಯರ ನಡುವಿನ ವಿಭಾಗೀಕರಣ ಮತ್ತು ಅಂತರ-ಸಮಾನತೆ ಮತ್ತು ನ್ಯಾಯೋಚಿತತೆಯನ್ನು ಗಣನೆಗೆ ತೆಗೆದುಕೊಳ್ಳುತ್ತವೆಯೇ ಎನ್ನುವ ಪ್ರಶ್ನೆಯೂ ಮೂಡುತ್ತದೆ.

ಜಾತಿ, ಧರ್ಮ, ಜನಾಂಗ ಅಥವಾ ಲಿಂಗ ಇತ್ಯಾದಿಗಳನ್ನು ಒಂದೇ ರೇಖೆಯ ಗುರುತಿನ ಮೇಲೆ ಕೇಂದ್ರೀಕರಿಸುವ ಮೂಲಕ ನಮ್ಮ ಸಮಾಜದಲ್ಲಿರುವ ತಾರತಮ್ಯ ಮತ್ತು ಅಸಮಾನತೆಗಳನ್ನು ಅರ್ಥ ಮಾಡಿಕೊಳ್ಳಲು ಅಥವಾ ಎದುರಿಸಲು ಸಾಧ್ಯವಿಲ್ಲ. ವ್ಯವಸ್ಥೆಯ ಭಾಗವಾಗಿ ಬಂದಿರುವ ಈ ತಾರತಮ್ಯ ಮತ್ತು ಅಸಮಾನತೆಯನ್ನು ವಿಭಾಗೀಕರಣದ (intersectional) ಮಾನದಂಡದ ಮೂಲಕ ಪರೀಕ್ಷೆಗೆ ಒಳಪಡಿಸಬೇಕು. ಇದು, ವ್ಯಕ್ತಿಗಳು ಮತ್ತು ಸಮುದಾಯಗಳ ಹಲವು ಗುರುತುಗಳು ಮತ್ತು ಸ್ಥಾನಮಾನಗಳನ್ನು ಗಣನೆಗೆ ತೆಗೆದುಕೊಳ್ಳಲು ನಮಗೆ ಅವಕಾಶ ನೀಡುತ್ತದೆ.  

ADVERTISEMENT

ಜಾತಿ ಮತ್ತು ಲಿಂಗವನ್ನು ಅಲಕ್ಷಿತ ಸಾಮ್ಯತೆಯ ರೇಖೆಯಲ್ಲಿ ಬಂದು ಸೇರುವ ಅಭೇದ್ಯವಾದ ಪರಿಕಲ್ಪನೆ ಎಂದು ಪರಿಗಣಿಸುವುದಾದರೆ ಮಹಿಳೆಯರು ಮತ್ತು ದಲಿತರು ಅಥವಾ ಅಲಕ್ಷಿತ ಸಮುದಾಯಗಳಿಗೆ ನಿರ್ದಿಷ್ಟವಾದ ಅನುಭವ ನೀಡುವ ಈ ವ್ಯವಸ್ಥೆ, ದಲಿತ ಮಹಿಳೆಯರನ್ನು ಮತ್ತಷ್ಟು ನಿರ್ಲಕ್ಷ್ಯಕ್ಕೆ ಗುರಿಪಡಿಸುತ್ತದೆ. ಇದನ್ನು ದಲಿತ ಮಹಿಳೆಯರ ಬದುಕಿನ ‘ಎರಡು ಬಗೆಯ ದೌರ್ಬಲ್ಯ’ ಎಂದು ಸಮಾಜ ಶಾಸ್ತ್ರಜ್ಞೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಗೇಲ್ ಓಂವೆಟ್ ಕರೆದಿದ್ದಾರೆ. ದಲಿತ ಮಹಿಳೆಯರ ಜೀವನಾನುಭವ ಹೊರಗಿನ ಮತ್ತು ಮನೆಯೊಳಗಿನ ಬಹುಸ್ತರದ ಹಿಂಸೆ ಮತ್ತು ದೌರ್ಜನ್ಯವನ್ನು ಒಳಗೊಂಡಿರುತ್ತದೆ. ಅಂಚಿನಲ್ಲಿರುವ ಸಮುದಾಯಗಳು ಎದುರಿಸುವ ದೌರ್ಜನ್ಯ ತೀವ್ರತರವಾದುದು. ದುರದೃಷ್ಟವಶಾತ್, ಅಲಕ್ಷಿತ ಸಮುದಾಯಗಳನ್ನು ಸರ್ಕಾರ, ನೀತಿ ನಿರೂಪಣೆಗಳು, ಸಾಮಾಜಿಕ ಚಳವಳಿಗಳು ಕೂಡ ನಿರ್ಲಕ್ಷಿಸುತ್ತಾ ಬಂದಿವೆ.

ಉಪವರ್ಗೀಕರಣದ ತೀರ್ಪು ದಲಿತ ಮಹಿಳೆಯರ ಮೇಲೆ ಬೀರಬಹುದಾದ ಸಕಾರಾತ್ಮಕ ಪರಿಣಾಮಗಳ ಬಗ್ಗೆ ನಾನು ಹೆಚ್ಚು ಭರವಸೆ ಹೊಂದಿಲ್ಲ. ಏಕೆಂದರೆ, ಪರಿಶಿಷ್ಟ ಜಾತಿಯ ಮಹಿಳೆಯರಿಗೆ ಸರ್ಕಾರಿ ಸೇವೆ ಮತ್ತು ಶಿಕ್ಷಣ ಸಂಸ್ಥೆಗಳ ಉದ್ಯೋಗಗಳಲ್ಲಿ ಸೂಕ್ತ ಪ್ರಾತಿನಿಧ್ಯ ಇದುವರೆಗೂ ಸಿಕ್ಕಿಲ್ಲ. ಒಂದು ವೇಳೆ, ಇಷ್ಟೊತ್ತಿಗೆ ಪರಿಶಿಷ್ಟ ಜಾತಿಯ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿದ್ದರೆ, ಆಗ ಅವರ ಪೈಕಿ ಅತ್ಯಂತ ಹಿಂದುಳಿದವರಿಗೆ ಪ್ರಾತಿನಿಧ್ಯಕ್ಕಾಗಿ ನಾವು ಒತ್ತಾಯಿಸಬಹುದಿತ್ತು. ಅಂಥ ಸಂದರ್ಭ ಇನ್ನೂ ಬಂದಿಲ್ಲ. 

ಇಂದು ಮಹಿಳೆಯರಿಗೆ ಸಾಂಸ್ಥಿಕ/ಶಾಸನಬದ್ಧ ಸಮತಲ ಮೀಸಲಾತಿಗೆ ಅವಕಾಶವಿಲ್ಲದೇ ಇದ್ದರೆ, ಸರ್ಕಾರಿ ಸೇವೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗಗಳ ಮಹಿಳೆಯರಿಗೆ ಪರಿಣಾಮಕಾರಿ ಪ್ರಾತಿನಿಧ್ಯ ಕನಸಿನ ಮಾತು. ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಅಡಿಯಲ್ಲಿ ಸರ್ಕಾರಿ ಸೇವೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಎಷ್ಟು ಮಹಿಳೆಯರು ವಿವಿಧ ಹುದ್ದೆಗಳನ್ನು ಹೊಂದಿದ್ದಾರೆ ಎಂಬ ದತ್ತಾಂಶದ ಅನುಪಸ್ಥಿತಿ ಮತ್ತು ಅದರ ಬಗೆಗಿನ ನಿರಾಸಕ್ತಿಯು ಗಂಭೀರ ಸಮಸ್ಯೆಯಾಗಿದೆ. ಪರಿಣಾಮಕಾರಿ ಪ್ರಾತಿನಿಧ್ಯ ಬಿಡಿ, ಸಾರ್ವಜನಿಕ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯವೇ ಇಲ್ಲದಂತಾಗಿದೆ. ಜೊತೆಗೆ, ಹಿಂಸಾಚಾರ ಮತ್ತು ದಬ್ಬಾಳಿಕೆಗೆ ಬಲಿಯಾದ ಎಲ್ಲಾ ದಲಿತ ಮಹಿಳೆಯರನ್ನೂ ಒಂದೇ ಗುಂಪನ್ನಾಗಿ ನೋಡುವ ಅಪಾಯವೂ ಇದೆ.

ಉಪವರ್ಗೀಕರಣದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಪರಿಶಿಷ್ಟ ಜಾತಿಯಲ್ಲಿ ಅತಿ ಹೆಚ್ಚು ಹಿಂದುಳಿದಿರುವ ಮಹಿಳೆಯರಿಗೆ ಅಂಕಿ–ಅಂಶಗಳ ಆಧಾರದಲ್ಲಿ ಹೊಸ ಭರವಸೆಯೊಂದು ಗೋಚರಿಸಬಹುದು; ಸಾರ್ವಜನಿಕ ವಲಯದಲ್ಲಿ ತಮ್ಮ ಅವಕಾಶಗಳನ್ನು ಪಡೆದುಕೊಳ್ಳುವ ಬಗ್ಗೆಯೂ ಅವರು ಸಂಭ್ರಮಿಸಬಹುದು. ಆದಾಗ್ಯೂ, ಮನೆಯ ಹೊರಗೆ ಸಾಮಾಜಿಕ ತಾರತಮ್ಯದ ಅಡೆತಡೆಗಳು ಮತ್ತು ಮನೆಯ ಒಳಗೆ ಪಿತೃ ಪ್ರಧಾನ ವ್ಯವಸ್ಥೆಯ ರೂಢಿಗಳು ದಲಿತ ಮಹಿಳೆಯರು ಸಾರ್ವಜನಿಕ ರಂಗದಲ್ಲಿ ಮತ್ತು ಸರ್ಕಾರಿ ವಲಯದಲ್ಲಿ ಮುಂದುವರಿಯಲು ಅಡ್ಡಿಯಾಗಿ ಇದ್ದೇ ಇರುತ್ತವೆ. ಇವು ಪರಿಶಿಷ್ಟ ಜಾತಿಯ ವರ್ಗದಲ್ಲಿ ಹೆಚ್ಚು ಹಿಂದುಳಿದಿರುವ ಮಹಿಳೆಯರ ಸಬಲೀಕರಣದ ಮೇಲೆ ಪರಿಣಾಮ ಬೀರುತ್ತಿವೆ. ದಲಿತ ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳನ್ನು ಪ್ರವೇಶಿಸಲು ಮತ್ತು ಸಾರ್ವಜನಿಕ ಸ್ಥಾನಗಳನ್ನು ಗಳಿಸಲು ಇವು ದೊಡ್ಡ ಅಡಚಣೆಗಳಾಗಿವೆ.

ಈ ವ್ಯವಸ್ಥೆ ಬದಲಾದಾಗ ಮಾತ್ರ ದಲಿತ ಮಹಿಳೆಯರು ನಿರ್ಭೀತಿಯಿಂದ ತಮ್ಮದೇ ಆದ ಗುಂಪುಗಳನ್ನು ರಚಿಸಿಕೊಳ್ಳಲು, ಸಾರ್ವಜನಿಕ ರಂಗದಲ್ಲಿ ಒಟ್ಟಾಗಿ ಮುನ್ನುಗ್ಗಲು, ತಮ್ಮ ಸಮಸ್ಯೆಗಳನ್ನು ವ್ಯಕ್ತಪಡಿಸಲು ಮತ್ತು ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅಲ್ಲಿಯವರೆಗೂ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂರು ಸೂತ್ರಗಳನ್ನು ನಾವು ಅನುಸರಿಸುತ್ತಲೇ ಇರಬೇಕು. 

‘ಮಹಿಳೆಯರಿಗೆ ಅರ್ಧದಷ್ಟು ಸಿಗಲಿ’

‍ಪರಿಶಿಷ್ಟ ಜಾತಿಗಳಲ್ಲಿರುವ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ವೈಜ್ಞಾನಿಕವಾಗಿ ಸವಲತ್ತುಗಳು ಸಿಗಬೇಕೆಂದರೆ ಒಳಮೀಸಲಾತಿ ಜಾರಿ ಆಗಬೇಕು. ತಾತ್ವಿಕವಾಗಿ ಒಳಮೀಸಲಾತಿಯನ್ನು ಒಪ್ಪಿಕೊಂಡಿರುವ ರಾಜ್ಯ ಸರ್ಕಾರ ಈ ಕೂಡಲೇ ಸುಗ್ರೀವಾಜ್ಞೆ ಮೂಲಕ ಅದನ್ನು ಅನುಷ್ಠಾನಗೊಳಿಸಬೇಕು.

ಭಾರತದಂತಹ ಮನುವಾದಿ ಗಂಡಾಳ್ವಿಕೆಯುಳ್ಳ ಸಮಾಜದಲ್ಲಿ ಮೀಸಲಾತಿ ಸೇರಿದಂತೆ ಇತರ ಯಾವುದೇ ಪ್ರಗತಿಶೀಲ ಸೌಕರ್ಯಗಳು ಗಂಡಸರಿಗೇ ಮೊದಲು ದಕ್ಕುತ್ತವೆ. ಇದಕ್ಕೆ ಬಹುದೊಡ್ಡ ಉದಾಹರಣೆ, ರಾಜಕೀಯದಲ್ಲಿ ಇಂದಿಗೂ ಮಹಿಳೆಯರಿಗೆ ಮೀಸಲಾತಿ ಇಲ್ಲದಿರುವುದು. ಹಾಗಾಗಿ ಒಳಮೀಸಲಾತಿಯ ಜಾರಿಯಲ್ಲಿ ಮಹಿಳೆಯರಿಗೂ ಪುರುಷರಷ್ಟೇ ಸಮಪಾಲು ಸಿಗುವಂತಾಗಬೇಕು.

ಪ್ರಸ್ತುತ ಒಕ್ಕೂಟ ಸರ್ಕಾರ ಹಾಗೂ ಹಲವು ರಾಜ್ಯ ಸರ್ಕಾರಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಹಿಳೆಯರಿಗೆ ಶೇ 30ರಿಂದ ಶೇ 33ರಷ್ಟು ಮೀಸಲಾತಿ ಮಾತ್ರ ನೀಡುತ್ತಿವೆ. ಭಾರತದ ಜನಸಂಖ್ಯಾ ಪ್ರಮಾಣದಲ್ಲಿ ಪುರುಷರಷ್ಟೇ ಇರುವ ಮಹಿಳೆಯರಿಗೆ ಶೇ 50ರ ಬದಲು ಶೇ 33ರಷ್ಟು ಮೀಸಲಾತಿ ನೀಡುತ್ತಿರುವುದು ಅನ್ಯಾಯದ ಪರಮಾವಧಿ. ಕೆಲವು ರಾಜ್ಯಗಳಲ್ಲಿ ‘ಗೆಜೆಟೆಡ್‌ ಅಲ್ಲದ’ ಹುದ್ದೆಗಳಿಗೆ ಮಹಿಳಾ ಮೀಸಲಾತಿ ಇದ್ದು, ‘ಗೆಜೆಟೆಡ್‌’ ಹುದ್ದೆಗಳಿಗೆ ಇಲ್ಲ. ಮತ್ತೂ ಕೆಲವೆಡೆ ಗ್ರೂಪ್‌ ‘ಸಿ’ ಮತ್ತು ‘ಡಿ’ ಹುದ್ದೆಗಳಿಗೆ ಮಹಿಳಾ ಮೀಸಲಾತಿ ಇದ್ದು, ಗ್ರೂಪ್‌ ‘ಎ’ ಮತ್ತು ‘ಬಿ’ ಹುದ್ದೆಗಳಿಗಿಲ್ಲ. ಹಲವು ರಾಜ್ಯಗಳಲ್ಲಿ ಬಡ್ತಿಯಲ್ಲಿ ಮಹಿಳೆಯರನ್ನು ಮೀಸಲಾತಿಗೆ ಪರಿಗಣಿಸುವುದಿಲ್ಲ. ಮಹಿಳೆಯರು ಸೇನೆ, ಪೊಲೀಸ್‌ ಸೇವೆಗಳಲ್ಲಿ ಸಮರ್ಥವಾಗಿ ದುಡಿಯುತ್ತಿರುವ ಈ ಸಂದರ್ಭದಲ್ಲಿ ಸಾಮಾಜಿಕ-ಆರ್ಥಿಕವಾಗಿ ಜನಸಂಖ್ಯಾವಾರು ಮೀಸಲಾತಿ ನೀಡದಿರುವುದು ವಿಪರ್ಯಾಸ.

ಇದೀಗ ದಲಿತರಿಗೆ ಒಳಮೀಸಲಾತಿಯನ್ನು ಜಾರಿಗೊಳಿಸಲೇ ಬೇಕಾಗಿದ್ದು, ಎಲ್ಲಾ ಮೀಸಲು ಹುದ್ದೆಗಳಲ್ಲಿ ಶೇ 50ರಷ್ಟು ಮಹಿಳಾ ಮೀಸಲಾತಿ ನೀಡುವ ಮೂಲಕ ಇಡೀ ದೇಶಕ್ಕೆ ಕರ್ನಾಟಕ ಮಾದರಿಯಾಗಬೇಕಿದೆ. ದಲಿತರೊಳಗೆ ಅತಿ ದಲಿತರಾದ ದಲಿತ ಮಹಿಳೆಯರಿಗೆ ಸಮವಾಗಿ ಅರ್ಧ ಮೀಸಲಾತಿ ಕಲ್ಪಿಸಿ ಕ್ರಾಂತಿಕಾರಿ
ಬದಲಾವಣೆಗೆ ರಾಜ್ಯ ಸರ್ಕಾರ ಮುನ್ನುಡಿ ಬರೆಯಬೇಕಿದೆ.

– ಕೆಸ್ತಾರ ವಿ.ಮೌರ್ಯ, ಲೇಖಕಿ

‘ಕರುಳ ಕುಡಿಯನ್ನೇ ದೂರ ಮಾಡಿದಂತೆ’

ಬಾಬಾ ಸಾಹೇಬರು ರಚಿಸಿರುವ ಸಂವಿಧಾನ ಜಾರಿಯ ನಂತರವೂ ಮೀಸಲಾತಿ ಎಂಬ ನ್ಯಾಯಯುತ ಸವಲತ್ತಿನ ಕನಿಷ್ಠ ಸೌಲಭ್ಯಗಳನ್ನು ಪಡೆಯಲೂ ಸಾಧ್ಯವಾಗದ ಪರಿಶಿಷ್ಠ ಜಾತಿಗಳಲ್ಲಿನ ಕೆಲವು ಜಾತಿಗಳು ಇಂದಿಗೂ ಸಮಾಜದಲ್ಲಿ ಮುನ್ನೆಲೆಗೆ ಬರಲಾಗದೆ ಒದ್ದಾಡುತ್ತಿವೆ.  ಸುಪ್ರೀಂ ಕೋರ್ಟ್‌ ತೀರ್ಪಿನ ನಂತರವೂ ಒಳಮೀಸಲಾತಿ ಜಾರಿಯಾಗದ ಕಾರಣ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳು ಕಂಡು ಬರುತ್ತಿವೆ. ಇದು ದಲಿತರ ಐಕ್ಯತೆಗೆ ಬಹುದೊಡ್ಡ ಸಮಸ್ಯೆಯಾಗುತ್ತದೆ.

ಇಂದಿಗೂ ಕುಟುಂಬದ ಮತ್ತು ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿರುವ ಮಹಿಳೆಯನ್ನು ಕೇಂದ್ರೀಕರಿಸಿ ಯಾವ ಚರ್ಚೆಯೂ ನಡೆಯುತ್ತಿಲ್ಲ. ಜನಸಂಖ್ಯೆಯ ಅರ್ಧದಷ್ಟು ಇರುವ ಇವರ ಕೊಡುಗೆ ದೇಶಕ್ಕೆ ಬೇಡವೇ? ಇಡೀ ಒಳ ಮೀಸಲಾತಿಯನ್ನು ಹೆಣ್ಣಿನ ದೃಷ್ಟಿಕೋನದಿಂದ, ತಾಯಿ ಕರುಳಿನಿಂದ ನೋಡಿದರೆ ಮಾತ್ರ ಪರಿಹಾರ ದೊರೆಯಲು ಸಾಧ್ಯ. ದಲಿತ ಮಹಿಳೆಯರ ಸ್ಥಿತಿಗತಿ-ಅಭಿವೃದ್ಧಿ, ಜಾತಿ ತಾರತಮ್ಯಗಳು ಖಾಸಗಿ ವಲಯದಲ್ಲಿ ಮೀಸಲಾತಿ ಸೇರಿದಂತೆ ಪರಿಶಿಷ್ಟ ಜಾತಿಗಳ ಮತ್ತಷ್ಟು ಜಟಿಲ ಸಮಸ್ಯೆಗಳತ್ತ ಒಂದು ಮುಷ್ಟಿಯಾಗಿ ಹೋರಾಟಕ್ಕೆ ಮುಂದಾಗಬೇಕಿದೆ.

ಕುಟುಂಬದ ಒಂದು ಮಗು ಪೌಷ್ಟಿಕಾಂಶಗಳು ಸಿಗದೆ ಉಳಿದ ಮಕ್ಕಳಿಗಿಂತ ಸೊರಗಿ ಹೋಗಿದ್ದರೆ ತಾಯಿಯಾದವಳು ಯಾರ ಅನುಮತಿಗೂ ಕಾಯದೇ, ಆ ಮಗುವಿಗೆ ಹೆಚ್ಚಿನ ಒತ್ತು ಕೊಟ್ಟು, ಕಾಳಜಿ ಮಾಡಿ ಸೊರಗಿದ ಮಗುವಿನ ಉತ್ತಮ ಬೆಳವಣಿಗೆಗೆ ದುಡಿಯುತ್ತಾಳೆ. ಇದೇ ತಾಯಿ ಕರುಳು. ತನ್ನ ತಂಗಿಗೋ ತಮ್ಮನಿಗೋ ತನ್ನ ತಾಯಿ ವಿಶೇಷ ಕಾಳಜಿ ವಹಿಸುತ್ತಿದ್ದಾಳೆಂದು ಮತ್ತೊಂದು ಮಗು ನೊಂದುಕೊಳ್ಳುವುದಿಲ್ಲ. ಬದಲಿಗೆ ತನ್ನ ಒಡಹುಟ್ಟಿದ ತಂಗಿ ತಮ್ಮ ತನ್ನಂತೆಯೇ ಬೆಳವಣಿಗೆ ಆಗಲಿ ಎಂದು ಬಯಸುತ್ತಾರೆ. ಇದೇ ರೀತಿಯ ತಾಯಿ ಕರುಳನ್ನು ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಿಸಬೇಕಿದೆ. ಪರಿಶಿಷ್ಟ ಜಾತಿಯ ಉಳಿದ ಜಾತಿಗಳ ಮುಖಂಡರೂ ಒತ್ತಾಯಿಸಬೇಕಿದೆ.

30 ವರ್ಷಗಳ ಬೀದಿ ಹೋರಾಟ, ಕಾನೂನು ಹೋರಾಟ ನಡೆಸಿ, ಎಲ್ಲರನ್ನೂ ಗೆದ್ದುಕೊಂಡಂತಹ ಹೋರಾಟಕ್ಕೆ ಗೌರವ ನೀಡಿ ತಾಯಿ ಕರುಳಿನಂತೆ ಒಳಮೀಸಲಾತಿ ಜಾರಿ ಮಾಡುವುದು ಬಿಟ್ಟು ವಿಳಂಬ ನೀತಿ ಅನುಸರಿಸುತ್ತಿರುವುದು ಮತ್ತು ಅವರ ಮೇಲೆ ಇವರ ಮೇಲೆ ಬೆಟ್ಟು ತೋರಿಸುವುದು ತನ್ನ ಕರುಳ ಕುಡಿಯನ್ನೇ ದೂರ ಮಾಡಿದಂತೆಯೇ ಸರಿ. ಒಳಮೀಸಲಾತಿ ಜಾರಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ನಿರ್ಧಾರ ಕೈಗೊಳ್ಳಬೇಕು.

– ಸಿರಿಗೌರಿ, ಕರ್ನಾಟಕ ಜನಶಕ್ತಿ ಸಂಘಟನೆ

ಲೇಖಕಿ: ವಕೀಲರು ಮತ್ತು ಧ್ವನಿ ಲೀಗಲ್ ಟ್ರಸ್ಟ್ ಸಂಸ್ಥಾಪಕಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.