ಹುಟ್ಟಿದ ಪ್ರತಿ ಜೀವಿಗೂ ಬದುಕಲು, ಬೆಳೆಯಲು ಆಹಾರ ಬೇಕು. ಆದರೆ, ಜಗತ್ತಿನಲ್ಲಿ ಸಂಪತ್ತು, ಸವಲತ್ತುಗಳು ಹೆಚ್ಚಾದಂತೆಲ್ಲ ಹಸಿವು ಕೂಡ ಹೆಚ್ಚುತ್ತಿದೆ. ವಿಶ್ವಸಂಸ್ಥೆಯಂತಹ ಜಾಗತಿಕ ಸಂಘ ಸಂಸ್ಥೆಗಳು ಹಸಿವು ಮುಕ್ತ ಸಮಾಜ ನಿರ್ಮಾಣದ ಗುರಿ ಸಾಧನೆಗಾಗಿ ಶ್ರಮಿಸುತ್ತಿವೆ. ಅದರ ನಡುವೆಯೂ ಹಸಿವೆಯೆಂಬ ಹೆಬ್ಬಾವು ಮನುಷ್ಯ ಕುಲವನ್ನು ಕಾಡುತ್ತಿದೆ. ಜಾಗತಿಕ ಕಾರ್ಪೊರೇಟ್ ಮಾರುಕಟ್ಟೆ ವ್ಯವಸ್ಥೆಗೂ ಹೆಚ್ಚುತ್ತಿರುವ ಹಸಿವಿನ ಬಿಕ್ಕಟ್ಟಿಗೂ ಇರುವ ಸಂಬಂಧವನ್ನು ಅಧ್ಯಯನ ತೆರೆದಿಟ್ಟಿದೆ. ಭಾರತದ ನವಜಾತ ಶಿಶುಗಳಿಂದ ಹಿಡಿದು ಗಾಜಾದಲ್ಲಿ ಹಿಡಿ ಅನ್ನಕ್ಕಾಗಿ ಹಪಾಹಪಿಸುತ್ತಿರುವ ಜನರವರೆಗೆ, ಹಸಿದ ಹೊಟ್ಟೆಗಳ ನಾನಾ ಮುಖ ಇಲ್ಲಿದೆ...
‘ಸುಸ್ಧಿರ ಆಹಾರ ಪದ್ಧತಿಗಳ ಅಂತರರಾಷ್ಟ್ರೀಯ ತಜ್ಞರ ತಂಡ’ (ಐಪಿಇಎಸ್–ಫುಡ್) ಜುಲೈ 2ರಂದು ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಜಾಗತಿಕ ಮಟ್ಟದಲ್ಲಿ ಹಸಿವಿನ ಬಿಕ್ಕಟ್ಟು ಹೆಚ್ಚುತ್ತಿದೆ. ಜಗತ್ತಿನ ಜನಸಂಖ್ಯೆಯ ಪೈಕಿ ಸುಮಾರು ಶೇ 30ರಷ್ಟು ಮಂದಿ ಆಹಾರದ ಅಭದ್ರತೆಯನ್ನು ಎದುರಿಸುತ್ತಿದ್ದರೆ, ಶೇ 42ರಷ್ಟು ಮಂದಿ ಆರೋಗ್ಯಕರ ಆಹಾರವನ್ನು ಪಡೆಯಲು ಅಸಮರ್ಥರಾಗಿದ್ದಾರೆ.
ಈ ವರದಿ ಬಿಡುಗಡೆಗೆ ಒಂದು ಹಿನ್ನೆಲೆ ಇದೆ. ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು 2015ರಲ್ಲಿ ರೂಪಿಸಿದ್ದ 2030ರ ಕಾರ್ಯಸೂಚಿ ಭಾಗವಾಗಿ ಒಟ್ಟು 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿ) ನಿಗದಿಪಡಿಸಿತ್ತು. ಎಸ್‌ಡಿಜಿ 2 ಪ್ರಕಾರ, 2030ರ ಹೊತ್ತಿಗೆ ಹಸಿವನ್ನು ಪೂರ್ಣವಾಗಿ ನಿವಾರಿಸುವ ಗುರಿ ಹೊಂದಲಾಗಿತ್ತು. ಅಂದರೆ, ಹಸಿವಿನಿಂದ ಯಾರೂ ಬಳಲಬಾರದು. ಎಲ್ಲರಿಗೂ ಆಹಾರ ಭದ್ರತೆ ಇರಬೇಕು. ಪೌಷ್ಟಿಕಾಂಶಯುಕ್ತ ಆಹಾರ ದೊರೆಯಬೇಕು. ಸುಸ್ಥಿರ ಕೃಷಿ ನೀತಿಗೆ ಉತ್ತೇಜನ ನೀಡಬೇಕು.
‘ಐಪಿಇಎಸ್–ಫುಡ್’ ತಂಡದ ‘ಫುಡ್ ಫ್ರಮ್ ಸಮ್‌ವೇರ್’ ವರದಿಯ ಪ್ರಕಾರ, 2030ರ ಹೊತ್ತಿಗೆ ಹಸಿವು ನಿವಾರಣೆ ಬದಲಿಗೆ 60 ಕೋಟಿ ಮಂದಿ ಹಸಿವಿನಿಂದ ಬಳಲಲಿದ್ದಾರೆ. ಇದರಿಂದಾಗಿ ‘ಶೂನ್ಯ ಹಸಿವು’ ಗುರಿ ಸಾಧನೆಯು ಮತ್ತಷ್ಟು ದೂರವಾದಂತಾಗಿದೆ.
ವಿಶ್ವಸಂಸ್ಥೆಯು ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ಉನ್ನತ ಮಟ್ಟದ ರಾಜಕೀಯ ಸಭೆಯು (ಎಚ್‌ಎಲ್‌ಪಿಎಫ್) ಜುಲೈ 8ರಿಂದ ಜುಲೈ 17ರವರೆಗೆ ನಡೆಯಲಿದೆ. ಅಲ್ಲಿ ಆಹಾರ ಬಿಕ್ಕಟ್ಟಿನ ಬಗ್ಗೆ ಚರ್ಚೆ ಮಾಡಲಾಗುವುದು.
ಕಾರ್ಪೊರೇಟ್ ಆಹಾರ ಉದ್ಯಮ ಕಂಪನಿಗಳ ಅವಲಂಬನೆ ಎಂಥ ಪರಿಣಾಮಗಳಿಗೆ ಎಡೆ ಮಾಡಿಕೊಡಬಲ್ಲದು ಎನ್ನುವುದು ಕೋವಿಡ್ ನಂತರ ಸಾಬೀತಾಗಿದೆ. ಕಾರ್ಪೊರೇಟ್ ಹಿಡಿತದಲ್ಲಿರುವ ಆಹಾರ ಪೂರೈಕೆ ಉದ್ಯಮಗಳು ಕಳೆದ ಮೂರು ವರ್ಷದಲ್ಲಿ ಮಾರುಕಟ್ಟೆಯ ಏರಿಳಿತಗಳಿಗೆ ಹೆಚ್ಚು ಗುರಿಯಾಗಿವೆ. ಅವುಗಳನ್ನೇ ನಂಬಿಕೊಂಡಿದ್ದ ಸಣ್ಣ ಉತ್ಪಾದಕರು, ರೈತರು ಮತ್ತಿತರರ ಜೀವನೋಪಾಯಕ್ಕೆ ಇದರಿಂದ ಪೆಟ್ಟು ಬಿದ್ದಿದೆ. ಆದರೆ, ಅದಕ್ಕೆ ವ್ಯತಿರಿಕ್ತವಾಗಿ, ಸ್ಥಳೀಯ ಆಹಾರ ಪೂರೈಕೆ ವ್ಯವಸ್ಥೆಗಳು ಹೆಚ್ಚು ಚೇತರಿಕೆಯ ಗುಣಗಳನ್ನು ಹೊಂದಿವೆ. ಸ್ಥಳೀಯ ಆಹಾರ ವೆಬ್‌ಸೈಟ್‌ಗಳು, ಸಾರ್ವಜನಿಕ ಮಾರುಕಟ್ಟೆಗಳು, ಬೀದಿ ವ್ಯಾಪಾರಿಗಳು, ಸಹಕಾರ ಸಂಘಗಳು, ನಗರ ವ್ಯವಸಾಯ ಮತ್ತು ಆನ್‌ಲೈನ್ ನೇರ ಮಾರಾಟ ವ್ಯವಸ್ಥೆಯು ಹೆಚ್ಚಾಗಿ ಸಣ್ಣ ಆಹಾರ ಉತ್ಪಾದಕರನ್ನು ಅವಲಂಬಿಸಿವೆ.
ಸಣ್ಣ ಪೂರೈಕೆದಾರರ ಮಹತ್ವ
ಆಹಾರ ಬಿಕ್ಕಟಿಗೆ ಅನೇಕ ಕಾರಣಗಳು. ದಿನನಿತ್ಯ ನಾವು ಅವುಗಳನ್ನು ಅನುಭವಿಸುತ್ತಿದ್ದರೂ ಅದರ ಬಗ್ಗೆ ಯೋಚಿಸಿರುವುದಿಲ್ಲ. ಜಗತ್ತಿನ ಶೇ 70ಕ್ಕೂ ಹೆಚ್ಚು ಮಂದಿಗೆ ಆಹಾರ ಪೂರೈಕೆ ಮಾಡುತ್ತಿರುವುದು ಸಣ್ಣ ಉತ್ಪಾದಕರು (ರೈತರು) ಮತ್ತು ಮನೆಗೆ ಹತ್ತಿರವಿರುವ ಆಹಾರ ಪೂರೈಕೆ ವ್ಯವಸ್ಥೆಗಳು. ಜಗತ್ತಿನ ಶೇ 80ರಷ್ಟು ನಗರಗಳ ಆಹಾರದ ಅಗತ್ಯಗಳು 500 ಕಿ.ಮೀ ವ್ಯಾಪ್ತಿಯಲ್ಲಿಯೇ ಪೂರೈಕೆಯಾಗುತ್ತಿವೆ ಆದರೆ, ಅವರ ಬಳಿ ಇರುವ ಭೂಮಿ ಕಡಿಮೆ. ಜಗತ್ತಿನ ಕೇವಲ ಮೂರನೇ ಒಂದರಷ್ಟು ಕೃಷಿ ಭೂಮಿ ಮೇಲೆ ಮಾತ್ರ ಅವರು ಹತೋಟಿ ಹೊಂದಿದ್ದಾರೆ. ಅದಕ್ಕೆ ವ್ಯತಿರಿಕ್ತವಾಗಿ, ಕಾರ್ಪೊರೇಟ್ ಸರಕು ಉದ್ಯಮಗಳು ಹೆಚ್ಚು ಕೃಷಿ ಭೂಮಿ ಮೇಲೆ ಹಿಡಿತ ಸಾಧಿಸಿವೆ. ದೊಡ್ಡ ಉದ್ಯಮಗಳಲ್ಲಿ (ಉದಾಹರಣೆಗೆ, ಮಾಲ್‌ಗಳಲ್ಲಿ) ಬೆಲೆಯೂ ಹೆಚ್ಚು. ಹೆಚ್ಚಿನ ಪ್ರಮಾಣದಲ್ಲಿಯೇ ಕೊಳ್ಳಬೇಕು. ಹಣದ ಕೊರತೆಯಿಂದ ಬಡವರಿಗೆ ಅವು ಲಭ್ಯವಿಲ್ಲದೇ ಆಹಾರದ ಅಭದ್ರತೆ ಉಂಟಾಗುತ್ತಿದೆ.
ಮನೆಗಳ ಹತ್ತಿರದ ಸಂತೆ, ಅಂಗಡಿ, ಮಾರುಕಟ್ಟೆಗಳು ಕಡಿಮೆ ಆದಾಯದ ಜನವರ್ಗಗಳಿಗೆ ಕೈಗೆಟಕುವ ಬೆಲೆಯಲ್ಲಿ ಆಹಾರ ಪದಾರ್ಥಗಳನ್ನು ಪೂರೈಸುತ್ತಿವೆ. ಜಾಗತಿಕ ಬೆಲೆ ಏರಿಕೆ/ಬದಲಾವಣೆಯ ವರ್ತುಲದಿಂದ ಜನರಿಗೆ ರಕ್ಷಣೆ ನೀಡುತ್ತಿರುವುದು ಇದೇ ಪ್ರಾದೇಶಿಕ ಮಾರುಕಟ್ಟೆ. ಇದು ಸುತ್ತಲಿನ ಜನರಿಗೆ ಕಡಿಮೆ ಬೆಲೆಯಲ್ಲಿ ಪದಾರ್ಥಗಳನ್ನು ಒದಗಿಸುವುದಷ್ಟೇ ಅಲ್ಲದೇ, ಎಷ್ಟು ಬೇಕು ಅಷ್ಟು (ಕಡಿಮೆ ಪ್ರಮಾಣ ಅಗತ್ಯವಿದ್ದರೂ ಸಹ) ಲಭ್ಯವಾಗುವಂತೆ ಮಾಡುತ್ತದೆ. ಬಾಂಗ್ಲಾ ದೇಶದ ಢಾಕಾ ನಗರದ ನಿದರ್ಶನವನ್ನೇ ತೆಗೆದುಕೊಳ್ಳುವುದಾದರೆ, ನಗರದ ಶೇ 95ರಷ್ಟು ಬಡವರು ಕೇವಲ 400 ಸಾರ್ವಜನಿಕ ಮಾರುಕಟ್ಟೆಗಳಿಂದ ತಮಗೆ ಅಗತ್ಯವಾದ ಆಹಾರ ಪದಾರ್ಥಗಳನ್ನು ಕೊಳ್ಳುತ್ತಾರೆ.
ಪ್ರಾದೇಶಿಕ ಮಾರುಕಟ್ಟೆಗಳಿಂದ ಜನರಿಗೆ ವೈವಿಧ್ಯಮಯ ಹಾಗೂ ಆರೋಗ್ಯಕರ ಆಹಾರ ಪದಾರ್ಥಗಳು ದೊರೆಯುತ್ತಿವೆ. ಆದರೆ, ಕಾರ್ಪೊರೇಟ್ ಆಹಾರ ಪೂರೈಕೆ ಉದ್ಯಮಗಳಿಂದ ಸ್ಥಳೀಯ ಅಂಗಡಿ, ಸಂತೆ, ಮಾರುಕಟ್ಟೆ ವ್ಯವಸ್ಥೆಗೆ ಧಕ್ಕೆ ಉಂಟಾಗಿದೆ. ಅದರಿಂದಾಗಿ ಆಹಾರ ಉದ್ಯಮದಲ್ಲಿ ಕಾರ್ಪೊರೇಟ್ ಹಿಡಿತ ಬಲವಾಗುತ್ತಿದೆ. ಪದಾರ್ಥಗಳ ಬೆಲೆಗಳಲ್ಲಿ ಹೆಚ್ಚಳವಾಗುತ್ತಿದ್ದು, ಆಹಾರ ಅಭದ್ರತೆ ಉಂಟಾಗುತ್ತಿದೆ.
ಆಹಾರ ಬಿಕ್ಕಟ್ಟಿಗೆ ಕಾರಣಗಳು
ಕೋವಿಡ್ ಸಾಂಕ್ರಾಮಿಕ
ರಷ್ಯಾ–ಉಕ್ರೇನ್ ಯುದ್ಧ
ತೀವ್ರಗೊಳ್ಳುತ್ತಿರುವ ಹವಾಮಾನ ವೈಪರೀತ್ಯ
ಭಾರತದಲ್ಲಿ 67 ಲಕ್ಷ ಶಿಶುಗಳಿಗೆ ಆಹಾರವಿಲ್ಲ
ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಯ ದೇಶ ಎಂದೇ ಹೆಸರಾಗಿರುವ ಭಾರತದ ಮಟ್ಟಿಗೆ ಜೆಎಎಂಎ ನೆಟ್‌ವರ್ಕ್ ಓಪನ್ ಜರ್ನಲ್‌ನಲ್ಲಿ ಇದೇ ವರ್ಷದ ಆರಂಭದಲ್ಲಿ ಪ್ರಕಟವಾಗಿದ್ದ ವರದಿಯೊಂದು ಆಘಾತಕಾರಿಯಾಗಿತ್ತು. ಕೇಂದ್ರ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ದತ್ತಾಂಶಗಳನ್ನು ಬಳಸಿಕೊಂಡು ನಡೆಸಲಾದ ಅಧ್ಯಯನವು, ದೇಶದ 67 ಲಕ್ಷ ಶಿಶುಗಳಿಗೆ ಆಹಾರ ಇಲ್ಲ ಎಂದು ತಿಳಿಸಿತ್ತು.
ಅಂದರೆ, ದೇಶದ 6ರಿಂದ 24 ತಿಂಗಳ ವಯಸ್ಸಿನ 67 ಲಕ್ಷ ಶಿಶುಗಳು 24 ಗಂಟೆಗಳಲ್ಲಿ ಯಾವುದೇ ಹಾಲು ಅಥವಾ ಘನ ಆಹಾರ ಅಥವಾ ಅರೆಘನ ಆಹಾರವನ್ನು ಸೇವಿಸಿರಲಿಲ್ಲ. ಕಡಿಮೆ ಆದಾಯ ಮತ್ತು ಮಧ್ಯಮ ಆದಾಯದ 92 ದೇಶಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಭಾರತವು, ಪಶ್ಚಿಮ ಆಫ್ರಿಕಾ ದೇಶಗಳ ನಂತರದ ಸ್ಥಾನ ಪಡೆದಿದೆ.
ಈ ಅವಧಿಯಲ್ಲಿ ಮಕ್ಕಳು ತಾಯಿಯ ಹಾಲು ಕುಡಿದಿರಬಹುದು. ಆದರೆ, ಪೌಷ್ಟಿಕಾಂಶ ತಜ್ಞರ ಪ್ರಕಾರ, ಮಗು ಹುಟ್ಟಿದ ಆರು ತಿಂಗಳ ನಂತರ ಅದಕ್ಕೆ ತಾಯಿಯ ಹಾಲೊಂದೇ ಸಾಕಾಗುವುದಿಲ್ಲ. ಎದೆ ಹಾಲಿನ ಜತೆಗೆ ಇತರ ಪೌಷ್ಟಿಕ ಆಹಾರಗಳ ಅಗತ್ಯವಿದ್ದು, ಅದು ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿಯೇ ಈ ಹಂತದಲ್ಲಿ ಮಕ್ಕಳಿಗೆ ಘನ ಅಥವಾ ಅರೆಘನ ಆಹಾರ ಪದಾರ್ಥಗಳನ್ನು ನೀಡಬೇಕು.
ಇಂಥ ಶಿಶುಗಳ ಸಂಖ್ಯೆ ದಕ್ಷಿಣ ಏಷ್ಯಾ (ಶೇ 15.7), ಪಶ್ಚಿಮ ಮತ್ತು ಕೇಂದ್ರ ಆಫ್ರಿಕಾದಲ್ಲಿ (ಶೇ 10.5) ಹೆಚ್ಚು ಎಂದು ಅಧ್ಯಯನ ತಿಳಿಸಿದೆ. ಲ್ಯಾಟಿನ್ ಅಮೆರಿಕದಲ್ಲಿ (ಶೇ 1.9) ಶೂನ್ಯ ಹಸಿವಿನ ಶಿಶುಗಳ ಸಂಖ್ಯೆ ಅತಿ ಕಡಿಮೆ ಇದೆ. ಅದರ ನಂತರದ ಸ್ಥಾನಗಳಲ್ಲಿ ಪೂರ್ವ ಏಷ್ಯಾ ಮತ್ತು ಪೆಸಿಫಿಕ್ (ಶೇ 2.9) ಇವೆ.
6ರಿಂದ 23ನೇ ತಿಂಗಳವರೆಗೆ ಶಿಶುಗಳಿಗೆ ಉತ್ತಮ ಆಹಾರ ಲಭ್ಯವಾದರೆ, ಅವುಗಳ ಅಪೌಷ್ಟಿಕತೆ, ಕಡಿಮೆ ತೂಕ, ಕಡಿಮೆ ಪೌಷ್ಟಿಕತೆಯಂಥ ಸಮಸ್ಯೆಗಳು ಪರಿಹಾರವಾಗುತ್ತವೆ. ಜತೆಗೆ ಮಕ್ಕಳ ಮರಣ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಭವಿಷ್ಯದಲ್ಲಿ ಅವುಗಳ ಮಿದುಳಿನ ಬೆಳವಣಿಗೆಗೂ, ಶಿಶು ಹಂತದಲ್ಲಿ ಅವು ಸೇವಿಸುವ ಆಹಾರಕ್ಕೂ ನಂಟಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಆಹಾರ ಬಿಕ್ಕಟ್ಟನ್ನು ಎದುರಿಸಲು ಐಪಿಇಎಸ್–ಫುಡ್ ನೀಡಿರುವ ಸಲಹೆಗಳು
ಸಣ್ಣ ಉತ್ಪಾದಕರನ್ನು ಬೆಂಬಲಿಸಲು ಸಾರ್ವಜನಿಕ ಸಂಗ್ರಹ ವ್ಯವಸ್ಥೆಯನ್ನು ಬಲಪಡಿಸುವುದು
ಪ್ರಾದೇಶಿಕ ಮಾರುಕಟ್ಟೆ ವ್ಯವಸ್ಥೆಯನ್ನು ಉತ್ತಮಪಡಿಸಲು ಮೂಲಸೌಕರ್ಯ ವೃದ್ಧಿಗೆ ಸಬ್ಸಿಡಿ ಒದಗಿಸುವುದು
ಕಾರ್ಪೊರೇಟ್ ಕಂಪನಿಗಳ ವಶವಾಗದಂತೆ ಸ್ಥಳೀಯ ಮಾರುಕಟ್ಟೆಗಳನ್ನು ರಕ್ಷಣೆ ಮಾಡುವುದು
ಸುಸ್ಥಿರ ಹಾಗೂ ಜೀವವೈವಿಧ್ಯತೆಯ ಕೃಷಿಗೆ ಉತ್ತೇಜನ ನೀಡುವುದು
ಇವಕ್ಕೆ ಪೂರಕವಾದ ನೀತಿಗಳನ್ನು ರೂಪಿಸುವುದು
ಗಾಜಾ: ಹಸಿವಿನ ವಿರುದ್ಧದ ಯುದ್ಧ
ಗಾಜಾ ಪಟ್ಟಿ ಮನುಷ್ಯ ನಿರ್ಮಿತ ದುರಂತವೊಂದರ ಸಾಕ್ಷಿಯಂತಿದೆ. ಇಲ್ಲಿ ಜನ ಆಹಾರಕ್ಕಾಗಿ, ಆಹಾರ ಪದಾರ್ಥಗಳಿಗಾಗಿ ತೀವ್ರವಾಗಿ ಪರದಾಡುತ್ತಿದ್ದಾರೆ. ಊಟ ಸಿಗದೇ ಸತ್ತ ಮಕ್ಕಳು, ಮಹಿಳೆಯರ ಸಂಖ್ಯೆ ಲೆಕ್ಕಕ್ಕಿಲ್ಲ.
‘ಒಂದು ಟ್ರಕ್ ಆಹಾರ ಪದಾರ್ಥ ಗಾಜಾಕ್ಕೆ ತಲುಪಿಸಬೇಕಾದರೆ ಈಗ ₹11.50 ಲಕ್ಷಕ್ಕೂ ಅಧಿಕ ಖರ್ಚಾಗುತ್ತದೆ. ಸಾಗಾಟದ ವೆಚ್ಚ ಹೆಚ್ಚಳವಾಗಿದೆಯಲ್ಲದೆ, ದಲ್ಲಾಳಿಗಳಿಗೆ ಲಂಚ ನೀಡಬೇಕು, ಲೂಟಿ ತಡೆಯಲೂ ಹಣ ಖರ್ಚು ಮಾಡಬೇಕಿದೆ..‘ ಇಸ್ರೇಲ್ ಮತ್ತು ಹಮಾಸ್ ನಡುವಣ ಯುದ್ಧದಿಂದ ಜರ್ಜರಿತವಾಗಿರುವ ಗಾಜಾ ಪಟ್ಟಿಯ ಕೆಲವು ಪ್ರದೇಶಗಳಿಗೆ ಮಾರಾಟಕ್ಕಾಗಿ ಆಹಾರ ಪದಾರ್ಥ ತಲುಪಿಸಲು ಎದುರಾಗುವ ಸವಾಲುಗಳನ್ನು ಗಾಜಾದ ವ್ಯಾಪಾರಿ ಮೊಹಮ್ಮದ್ ಅವರು ವಿವರಿಸಿದ್ದು ಹೀಗೆ.
ಇದೆಲ್ಲ ಮಾಡದಿದ್ದರೆ ಅಲ್ಲಿನ ಜನ ಹಸಿವಿನಿಂದ ಸಾಯಬೇಕಾಗುತ್ತದೆ. ಇದರಿಂದಾಗಿ ಕೆಲವು ಆಹಾರ ಪದಾರ್ಥಗಳ ಬೆಲೆ ಹೆಚ್ಚಿಸಲಾಗಿದೆ. ಹಸಿವು, ಬಡತನದಿಂದ ಬಳಲುತ್ತಿರುವ ಗಾಜಾದ ಹಲವು ಮಂದಿಗೆ ಅಷ್ಟು ದುಡ್ಡು ಕೊಟ್ಟು ಆಹಾರ ಖರೀದಿಸಲು ಸಾಧ್ಯವಿಲ್ಲ.
ಆಹಾರ ಪದಾರ್ಥ ತುಂಬಿಸಿಕೊಂಡು ಇಸ್ರೇಲ್‌ನಿಂದ ಗಾಜಾ ಕಡೆಗೆ ಪ್ರಯಾಣಿಸುವ ಟ್ರಕ್‌ಗಳ ಮೇಲೆ ಇಸ್ರೇಲ್‌ನ ಪ್ರತಿಭಟನಕಾರರು ದಾಳಿ ನಡೆಸುವುದು ಈಗಲೂ ಮುಂದುವರಿದಿದೆ. ಆದ್ದರಿಂದ ಇಸ್ರೇಲ್‌ನ ಟ್ರಕ್ ಚಾಲಕರು ಎಂದಿಗಿಂತ ಮೂರು ಪಟ್ಟು ಅಧಿಕ ಶುಲ್ಕ ವಸೂಲಿ ಮಾಡುತ್ತಾರೆ ಎಂದು ವ್ಯಾಪಾರಿಗಳು ಹೇಳುವರು. ‘ಗಾಜಾ ಪ್ರವೇಶಿಸಿದ ಬಳಿಕ, ಸರಕುಗಳನ್ನು ಲೂಟಿಕೋರರಿಂದ ರಕ್ಷಿಸುವುದೇ ದೊಡ್ಡ ಸವಾಲು ಎನಿಸಿದೆ. ವಾಹನಗಳ ಜತೆ ಗನ್‌ಮ್ಯಾನ್‌ಗಳನ್ನೂ ಕಳುಹಿಸಬೇಕಾಗುತ್ತದೆ. ಒಂದು ವಾಹನಕ್ಕೆ 3 ರಿಂದ 5 ಗನ್‌ಮ್ಯಾನ್‌ಗಳು ಬೇಕು. ಇದಕ್ಕಾಗಿ ₹16 ಸಾವಿರದಿಂದ ₹60 ಸಾವಿರದವರೆಗೂ ಖರ್ಚಾಗುತ್ತದೆ’ ಎಂದು ಇನ್ನೊಬ್ಬ ವ್ಯಾಪಾರಿ ಹಮುದಾ ಹೇಳಿದರು.
ಉತ್ತರ ಗಾಜಾಕ್ಕೆ ಪ್ರವೇಶವಿಲ್ಲ: ವ್ಯಾಪಾರಿಗಳು ಆಹಾರ ಪದಾರ್ಥಗಳನ್ನು ಮಾರಾಟಕ್ಕಾಗಿ ಉತ್ತರ ಗಾಜಾಕ್ಕೆ ಕೊಂಡೊಯ್ಯುವುದಕ್ಕೆ ಇಸ್ರೇಲ್ ನಿರ್ಬಂಧ ವಿಧಿಸಿದೆ. ಉತ್ತರ ಗಾಜಾದಲ್ಲಿರುವ ಜನರು ಮಾನವೀಯ ನೆರವಿನ ರೂಪದಲ್ಲಿ ದೊರೆಯುವ ಆಹಾರವನ್ನಷ್ಟೇ ಅವಲಂಬಿಸಿದ್ದಾರೆ. ಅಲ್ಲಿ ಸಾವಿರಾರು ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಪರಿಹಾರ ಕಾರ್ಯದಲ್ಲಿ ನಿರತವಾಗಿರುವ ಸಂಸ್ಥೆಗಳು ಹೇಳಿವೆ.
ಗಾಜಾ ಪಟ್ಟಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಟ್ರಕ್ ಚಾಲಕರು ಆಗಿಂದಾಗ್ಗೆ ಬೆದರಿಕೆ ಅಥವಾ ಆಕ್ರಮಣಕ್ಕೆ ಗುರಿಯಾಗುತ್ತಿದ್ದಾರೆ.–ಫಿಲಿಪ್ ಲಾಝಾರಿನಿ, ಯುಎನ್‌ಆರ್‌ಡಬ್ಲ್ಯುಎ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.