ಕನ್ನಡ ಮತ್ತು ಕನ್ನಡಿಗರು ಈಗ ಅಪ್ಪಿಕೊಳ್ಳಬೇಕಾದದ್ದು ಒಳಗೊಳ್ಳುವಿಕೆಯ ಮೂಲಕವೇ ಹೊರತು ಹೊರಗಿಡುವಿಕೆಯ ಮೂಲಕ ಅಲ್ಲ. ಕುವೆಂಪು ಅವರು ಹೇಳಿದ ‘ಸರ್ವ ಜನಾಂಗದ ಶಾಂತಿಯ ತೋಟ’ದಲ್ಲಿ ಬಣ್ಣ ಬಣ್ಣದ ಕನ್ನಡ ಹೂಗಳು ಅರಳಲು ನಾವು ಒಂದೊಂದು ಕನ್ನಡ ಗಿಡಗಳನ್ನು ನೀರೆರೆದು ಸಾಕಿ ಸಲಹಬೇಕು
ಕನ್ನಡದ ಮೊತ್ತಮೊದಲನೆಯ (ಕ್ರಿ.ಶ. 850) ಲಕ್ಷಣಗ್ರಂಥ ‘ಕವಿರಾಜಮಾರ್ಗ’ದಲ್ಲಿ ಕನ್ನಡ ನಾಡು ಮತ್ತು ನುಡಿಯ ಬಗ್ಗೆ ಉಲ್ಲೇಖಗಳು ದೊರೆಯುತ್ತವೆ. ‘ಕಾವೇರಿಯಿಂದಮ್ ಆ ಗೋದಾವರಿವರಮ್ ಇರ್ಪ ನಾಡು ಅದು ಆ ಕನ್ನಡದೊಳ್ ಭಾವಿಸಿದ ಜನಪದಮ್’. ಇದು ಕನ್ನಡನಾಡಿನ ವಿಸ್ತಾರ. ಅದರ ಒಳಗೆ ‘ಕನ್ನಡದ ತಿರುಳ್’ ಆಗಿರುವ ಪ್ರದೇಶದ ಬಗ್ಗೆ ಮಾರ್ಗಕಾರನ ನುಡಿ: ‘ಅದರ ಒಳಗಮ್ ಕಿಸುವೊಳಲಾ ವಿದಿತ ಮಹಾ ಕೊಪಣ ನಗರದಾ ಪುಲಿಗೆರೆಯಾ ಸತ್ ಅಭಿಸ್ತುತಮಪ್ಪ ಒಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್’. ಮಾರ್ಗಕಾರನ ದೃಷ್ಟಿಯಲ್ಲಿ ಈಗಿನ ಪಟ್ಟದಕಲ್ಲು, ಕೊಪ್ಪಳ, ಲಕ್ಷ್ಮೇಶ್ವರ, ಒಕ್ಕುಂದಗಳ ನಡುವಣ ನಾಡಿನ ಒಳಗಿನ ನುಡಿ ‘ಕನ್ನಡದ ತಿರುಳು’. ಆದಿಕವಿ ಪಂಪನ ‘ವಿಕ್ರಮಾರ್ಜುನ ವಿಜಯ’ದಲ್ಲಿ (10ನೇ ಶತಮಾನ) ಆತ ತನ್ನ ಕವಿತೆ ‘ಸಾಜದ ಪುಲಿಗೆರೆಯ ತಿರುಳ ಕನ್ನಡದೊಳ್ ಪುದಿದ’ ಎಂದು ಹೇಳಿಕೊಂಡಿದ್ದಾನೆ. ಪಂಪನಿಗೆ ಕೂಡಾ ‘ಕನ್ನಡದ ತಿರುಳು’ ಎನ್ನಿಸುವ ಪ್ರದೇಶ ‘ಪುಲಿಗೆರೆ’ (ಲಕ್ಷ್ಮೇಶ್ವರ). ತಾವು ನೆಲೆವೂರಿದ್ದ ಮತ್ತು ಪರಿಚಿತವಾಗಿದ್ದ ಪ್ರದೇಶದ ಕನ್ನಡನುಡಿಯನ್ನು ಮಾರ್ಗಕಾರ ಮತ್ತು ಪಂಪ ‘ಕನ್ನಡದ ತಿರುಳ್’ ಎಂದು ಪರಿಭಾವಿಸುವಾಗ ಕನ್ನಡನುಡಿಯನ್ನು ಒಂದು ಪ್ರದೇಶಕ್ಕೆ ಸೀಮಿತಗೊಳಿಸಿ ಪ್ರಮಾಣೀಕರಿಸುವ ಮನೋಧರ್ಮವನ್ನು ಕಾಣಬಹುದು.
ಈ ನಿಲುವಿಗೆ ಪೂರಕವಾಗಿ ಕವಿರಾಜಮಾರ್ಗಕಾರನ ಒಂದು ಜನಪ್ರಿಯ ಹೇಳಿಕೆಯನ್ನು ಗಮನಿಸಬಹುದು: ‘ದೋಸಮ್ ಇನಿತು ಎಂದು ಉದ್ಭಾಸಿಸಿ ತರಿಸಂದು ಕನ್ನಡಂಗಳೊಳ್ ಎಂದುಮ್ ವಾಸುಗಿಯುಮ್ ಅರಿಯಲಾರದೆ ಬೇಸರುಗುಮ್ ದೇಸಿ ಬೇರೆ ಬೇರೆ ಅಪ್ಪುದರಿಂ’ (ಕನ್ನಡಗಳಲ್ಲಿ ದೇಸಿ ಬೇರೆಬೇರೆ ಆಗಿರುವುದರಿಂದ ಆದಿಶೇಷನು ಕೂಡ ದೋಷ ಈ ರೀತಿಯದೆಂದು ಸ್ಪಷ್ಟವಾಗಿ ಹೇಳಲಾಗದೆ ಬೇಸರಗೊಳ್ಳುತ್ತಾನೆ).
ಕವಿರಾಜಮಾರ್ಗಕಾರನು ‘ಕನ್ನಡಂಗಳ್’ ಎಂದು ಕನ್ನಡ ನುಡಿಯ ಬಹುತ್ವವನ್ನು ಗುರುತಿಸಿ ಅದರ ದೇಸಿ ರೂಪಗಳ ವೈವಿಧ್ಯವನ್ನು ಗಮನಿಸಿ, ಅವನ್ನು ‘ದೋಷ’ ಎಂದು ಕರೆಯುತ್ತಾನೆ. ಆದರೆ, ವೈರುಧ್ಯವೆಂದರೆ ಅದೇ ಪದ್ಯದಲ್ಲಿ ಅವನು ಆದಿಪ್ರಾಸದ ಸಮರೂಪತೆಗಾಗಿ ‘ದೋಷ’ ಎಂಬ ಶಿಷ್ಟ ಪದದ ಬದಲು ‘ದೋಸ’ ಎಂಬ ದೇಸಿಪದವನ್ನು ಬಳಸುತ್ತಾನೆ. ಆದರೆ ಇನ್ನೊಂದು ಕಡೆ ಅವನೇ, ‘ತಂತಮ್ಮ ನುಡಿಯೊಳ್ ಎಲ್ಲರ್ ಜಾಣರ್’ ಎನ್ನುವ ಮೆಚ್ಚುಗೆಯ ಮಾತನ್ನೂ ಆಡುತ್ತಾನೆ.
ಕನ್ನಡ ನುಡಿಯಲ್ಲಿ ‘ಬರಹದ ನುಡಿ’ (ಮಾರ್ಗ) ಮತ್ತು ‘ಆಡುನುಡಿ’ (ದೇಸಿ) ಇವು ಕನ್ನಡನಾಡಿನ ಇತಿಹಾಸದ ಉದ್ದಕ್ಕೂ ಬಹುಮಟ್ಟಿಗೆ ಸಮಾನಾಂತರವಾಗಿ ಚಲಿಸಿವೆ. ಅನೇಕ ಬಾರಿ ಇವುಗಳ ನಡುವೆ ಕೊಡುಕೊಳೆ ನಡೆದಿವೆ. ಕವಿರಾಜಮಾರ್ಗ ಮತ್ತು ಪಂಪನ ಕಾವ್ಯಗಳ ಕಾಲದಲ್ಲಿ ನಡೆದ ಮಾರ್ಗ ದೇಸಿಗಳ ಸಂಘರ್ಷ ಮತ್ತು ಸಮನ್ವಯದ ಚರ್ಚೆಯಲ್ಲಿ ಅಂತಹ ಸೂಚನೆಗಳು ದೊರೆಯುತ್ತವೆ. ‘ಆಡುನುಡಿಗಳು’ ಸಾಹಿತ್ಯದ ರೂಪದಲ್ಲಿ ‘ಗ್ರಾಂಥಿಕ ಭಾಷೆಗಳು’ ಆಗುವ ಪ್ರಕ್ರಿಯೆ ಇಂದಿನವರೆಗೂ ನಡೆದಿದೆ.
ಭಾಷಾವಿಜ್ಞಾನಿಗಳು ಒಂದು ಭಾಷೆಯ ಒಳಗೆ ಕಾಣಿಸುವ ಭಿನ್ನತೆಗಳನ್ನು ಸ್ಥೂಲವಾಗಿ ‘ಪ್ರಾದೇಶಿಕ ಉಪಭಾಷೆ’ ಮತ್ತು ‘ಸಾಮಾಜಿಕ ಉಪಭಾಷೆ’ ಎಂದು ವರ್ಗೀಕರಣ ಮಾಡಿದರು. ಮುಂದೆ ಇದಕ್ಕೆ ‘ವ್ಯಕ್ತಿ ಭಾಷೆ’ಯನ್ನು ಸೇರಿಸಿದರು. ಬಳಿಕ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮನೋವೈಜ್ಞಾನಿಕ ಆಯಾಮಗಳಲ್ಲಿ ಚರ್ಚಿಸಿದರು. ಒಂದು ಭಾಷೆಯಲ್ಲಿ ಪ್ರಾದೇಶಿಕ ಭಿನ್ನತೆಗಳು ಕಾಣಿಸಿಕೊಳ್ಳಲು ಐತಿಹಾಸಿಕವಾಗಿ ಮೂರು ಅಂಶಗಳು ಕಾರಣವಾದುವು. ಇವು ಕನ್ನಡ ಭಾಷೆಗೂ ಅನ್ವಯ ಆಗುತ್ತವೆ. 1. ನೈಸರ್ಗಿಕ ಗಡಿರೇಖೆಗಳಾದ ಪರ್ವತ, ಬೆಟ್ಟ, ನದಿಗಳು ಸರೋವರಗಳು, ಅರಣ್ಯ ಮುಂತಾದವು. 2. ಸ್ಥಳೀಯ ರಾಜರು, ಸಾಮಂತರು, ಪಾಳೆಯಗಾರರು - ಇವರ ಆಳ್ವಿಕೆಯ ರಾಜಕೀಯ ಗಡಿರೇಖೆಗಳು. 3. ಕನ್ನಡ ನಾಡಿನ ಗಡಿಪ್ರದೇಶಗಳಲ್ಲಿ ಇರುವ ಕನ್ನಡೇತರ ಭಾಷೆಗಳ ಸಂಪರ್ಕದಿಂದ ರೂಪಿತವಾಗುವ ದ್ವಿಭಾಷಾ/ಬಹುಭಾಷಾ ಪ್ರಾದೇಶಿಕ ವಲಯಗಳು.
ಕನ್ನಡ ಭಾಷಾಶಾಸ್ತ್ರಜ್ಞರು ಆರಂಭದಲ್ಲಿ ನಾಲ್ಕು ಪ್ರಾದೇಶಿಕ ಉಪಭಾಷೆಗಳನ್ನು ಗುರುತಿಸಿದರು. ಮೈಸೂರು ಕನ್ನಡ, ಧಾರವಾಡ ಕನ್ನಡ, ಮಂಗಳೂರು ಕನ್ನಡ ಮತ್ತು ಗುಲ್ಬರ್ಗ (ಕಲಬುರಗಿ) ಕನ್ನಡ. ಇದು ಸ್ಥೂಲವಾದ ವರ್ಗೀಕರಣವೇ ಹೊರತು ಸೂಕ್ಷ್ಮವಾದ ಕ್ಷೇತ್ರಾಧ್ಯಯನದ ವಿಭಜನೆ ಆಗಿರಲಿಲ್ಲ. ಮುಂದೆ ಇದಕ್ಕೆ ಬೆಳಗಾವಿ, ರಾಯಚೂರು, ಬಳ್ಳಾರಿ, ಬೀದರ್, ತುಮಕೂರು, ಚಿಕ್ಕಮಗಳೂರು, ಚಾಮರಾಜನಗರ, ಕೋಲಾರ- ಈ ಜಿಲ್ಲೆಗಳ ಕನ್ನಡದ ಭಾಷೆಗಳನ್ನು ಸೇರಿಸಲಾಯಿತು. ಮಂಗಳೂರು ಕನ್ನಡವನ್ನು ಕರಾವಳಿ ಕನ್ನಡ ಎಂದು ಕರೆಯಲಾಯಿತು. ಇನ್ನಷ್ಟು ಕ್ಷೇತ್ರಕಾರ್ಯಗಳ ಫಲವಾಗಿ ಕರ್ನಾಟಕದ ಜಿಲ್ಲೆಗಳ ಒಳಗಡೆಯೇ ಸುಮಾರು ಹದಿನೈದು ಇಪ್ಪತ್ತು ಮೈಲಿಗಳ ಅಂತರದಲ್ಲಿ ಹಳ್ಳಿಗೊಂದರಂತೆ ಕನ್ನಡ ಆಡುನುಡಿ ಭಿನ್ನವಾಗುವುದು ಕಿವಿಗಳಿಗೆ ಬಿದ್ದಿತು. ‘ಕನ್ನಡ ನುಡಿ’ಯ ಮೂಲಧಾತು ಇರುವುದು ಕಿವಿಗಳ ಗ್ರಹಿಕೆಯಲ್ಲೇ ಹೊರತು ಕಣ್ಣುಗಳ ನೋಟದಲ್ಲಿ ಅಲ್ಲ. ಕನ್ನಡನಾಡಿನ ಒಳಗಡೆಯೇ ಕೆಲವು ವಿಶಿಷ್ಟ ಪ್ರದೇಶಗಳಲ್ಲಿ ಅನನ್ಯವಾದ ಕನ್ನಡದ ಆಡುನುಡಿಗಳು ಇಂದಿಗೂ ಕ್ರಿಯಾಶೀಲ ಆಗಿವೆ. ಕರಾವಳಿಯ ‘ಕುಂದಾಪ್ರ ಕನ್ನಡ’ (ಕುಂದ ಕನ್ನಡ) ಅಂತಹ ಒಂದು ಮಾದರಿ. ನಂಜನಗೂಡು ಕನ್ನಡದ ಹಾಗೆಯೇ ಅನೇಕ ಕನ್ನಡಗಳು ಕರ್ನಾಟಕದ ಒಳಗಡೆ ಇವೆ.
ಸಾಮಾಜಿಕ ಉಪಭಾಷೆ ಎನ್ನುವುದು ಪ್ರಾದೇಶಿಕ ಭಾಷೆಯ ಒಳಗಿನ ಆಡುನುಡಿ. ಜನಾಂಗ, ಜಾತಿ, ಬುಡಕಟ್ಟು, ಸಮುದಾಯದ ಒಳಗೆ ಮಾತಾಡಿಕೊಳ್ಳುವ ಒಳ್ನುಡಿ. ಹವ್ಯಕ ಕನ್ನಡ, ಕೋಟ ಕನ್ನಡ, ಕೋಟೆಯವರ ಕನ್ನಡ, ಗೌಡ ಕನ್ನಡ (ಅರೆಭಾಷೆ) ಇವು ಕರಾವಳಿ ಕರ್ನಾಟಕದ ಒಳಗೆಯೇ ಇರುವ ಆಡುನುಡಿಗಳು. ಅರೆಭಾಷೆ ಕೊಡಗಿಗೂ ಹಬ್ಬಿದೆ. ಹಾಲಕ್ಕಿ ಕನ್ನಡ, ದೀವರ ಕನ್ನಡ, ನಾಡವರ ಕನ್ನಡ - ಇವು ಉತ್ತರ ಕನ್ನಡದ ಒಳಗಿನ ಸಮುದಾಯಗಳ ನುಡಿಗಳು.
ಕರ್ನಾಟಕದ ದಲಿತರ ಕನ್ನಡದ ಆಡುನುಡಿ ಸ್ವತಂತ್ರವಾಗಿ ಮತ್ತು ಪ್ರಾದೇಶಿಕವಾಗಿ ಅನನ್ಯವಾಗಿದೆ. ಸಿದ್ದಲಿಂಗಯ್ಯನವರ ‘ಹೊಲೆಮಾದಿಗರ ಹಾಡು’, ದೇವನೂರ ಮಹಾದೇವರ ‘ಕುಸುಮಬಾಲೆ’, ಅರವಿಂದ ಮಾಲಗತ್ತಿ ಅವರ ‘ಕಾರ್ಯ’, ಚೆನ್ನಣ್ಣ ವಾಲೀಕಾರರ ‘ಕರಿತೆಲಿ ಮಾನವನ ಜೀಪದ’ – ಇವುಗಳ ನುಡಿ ಮತ್ತು ನುಡಿಗಟ್ಟುಗಳು ಬೇರೆ ಬೇರೆ. ಕನ್ನಡ ಕೇವಲ ಒಂದು ಸಂವಹನ ಮಾಧ್ಯಮ ಅಲ್ಲ, ಅದು ಬದುಕನ್ನು ಕಟ್ಟಿಕೊಡುವ ಜೀವಸೆಲೆ.
ಕರ್ನಾಟಕದ ಒಳಗೆಯೇ ತಮ್ಮ ಇರುವಿಕೆಯಿಂದ ಅನನ್ಯರಾಗಿ ತಮ್ಮ ತಾಯ್ನುಡಿಯ ಜೊತೆಗೆ ಕನ್ನಡವನ್ನು ಎರಡನೆಯ ನುಡಿಯಾಗಿ ಬೆಳೆಸಿದ ಬೇರೆ ಬೇರೆ ಸಮುದಾಯದವರದ್ದೇ ಆದ ಕನ್ನಡತನವಿದೆ. ತುಳು, ಕೊಡವ, ಕೊಂಕಣಿ, ಲಂಬಾಣಿ (ಬಂಜಾರ), ದಖ್ಖನಿ (ಉರ್ದು), ಬ್ಯಾರಿ ಭಾಷೆಗಳನ್ನು ಆಡುವವರ ಹಾಗೆಯೇ ಮರಾಠಿ, ಚಿತ್ಪಾವನಿ, ಸಂಕೇತಿ ಭಾಷೆಗಳನ್ನು ತಾಯ್ನುಡಿಯಾಗಿ ಉಳ್ಳ ಕನ್ನಡಿಗರ ‘ಕನ್ನಡಗಳು’ ವಿಶಿಷ್ಟವಾಗಿವೆ. ತಮ್ಮ ತಾಯ್ನುಡಿಯ ಧಾಟಿಯಲ್ಲಿ ಮತ್ತು ವ್ಯಾಕರಣದ ಪ್ರಕ್ರಿಯೆಯಲ್ಲಿ ಇವರು ಕನ್ನಡವನ್ನು ಮಾತಾಡುವ ಕಾರಣ ಕನ್ನಡ ನುಡಿಗೆ ವೈವಿಧ್ಯ ದೊರೆಕೊಂಡಿದೆ. ಆಡುನುಡಿಯಲ್ಲಿ ಸರಿತಪ್ಪುಗಳಿಗೆ ಅವಕಾಶ ಇಲ್ಲ. ಬರಹಕ್ಕೆ ಬಂದಾಗಲೂ ಸಾಹಿತ್ಯದ ಭಾಷೆಗೆ ಕನ್ನಡೇತರರ ತಾಯ್ನುಡಿಯು ಸೊಗಸನ್ನು ಕೊಟ್ಟ ನಿದರ್ಶನಗಳು ಹಲವು ಇವೆ.
ಬುಡಕಟ್ಟು ಮತ್ತು ಅಲೆಮಾರಿ/ ಅರೆ ಅಲೆಮಾರಿ ಸಮುದಾಯದವರು ತಮ್ಮ ತಾಯ್ನುಡಿಯ ಜೊತೆಗೆ ನಿಧಾನವಾಗಿ ಶಾಲೆಗಳಿಗೆ ಹೋಗಲು ಶುರು ಮಾಡಿದ ಫಲವಾಗಿ ಕನ್ನಡ ನುಡಿಯು ಅವರ ಕಲಿಕೆಯ ಅಂಗವಾಗಿದೆ. ಕೊರಗ, ಇರುಳ, ಸೋಲಿಗ, ಯೆರವ, ಕುಡಿಯ/ಮಲೆಕುಡಿಯ, ಜೇನು/ ಬೆಟ್ಟ ಕುರುಬ, ಸಿದ್ದಿ, ಗೌಳಿ, ಕೊರಚ, ಹಕ್ಕಿ ಪಕ್ಕಿ- ಇಂತಹ ಅನೇಕ ಬುಡಕಟ್ಟು ಮತ್ತು ಅಲೆಮಾರಿ- ಅರೆಅಲೆಮಾರಿ ಸಮುದಾಯದವರ ಕನ್ನಡ ನುಡಿ ಅವರ ಸಾಂಸ್ಕೃತಿಕ ಹಿನ್ನೆಲೆಯಿಂದ ಶ್ರೀಮಂತವಾಗುತ್ತದೆ.
ಬೇರೆ ಬೇರೆ ಸಮುದಾಯದವರು ಮಾತನಾಡುವ ನುಡಿಗಳು ಬೇರೆ ಆಗಿದ್ದಾಗ ಅವರು ಕನ್ನಡವನ್ನು ಆಲಿಸುವ ನುಡಿಯಾಗಿ, ಓದುವ ಭಾಷೆಯಾಗಿ ಕಲಿಯುವ ಪ್ರಕ್ರಿಯೆ ತ್ರಾಸದಾಯಕವಾದುದು. ಹಾಗಾಗಿ ಅವರ ಕನ್ನಡದಲ್ಲಿ ದೋಷವನ್ನು ಹುಡುಕಬಾರದು. ಅದು ನಿಜವಾದ ‘ಕನ್ನಡಗಳ ಕೂಡುವಿಕೆ’. ಬೇರೆ ಬೇರೆ ತಾಯ್ನುಡಿಯವರು ಕನ್ನಡಗಳನ್ನು ಬಳಸಿದಾಗ ಅವರ ಲೋಕಗ್ರಹಿಕೆಯ ಸ್ವತಂತ್ರ ಚಿಂತನೆಗಳು ಕನ್ನಡಕ್ಕೆ ಬರುತ್ತವೆ. ಇದರಿಂದ ಕನ್ನಡ ಶ್ರೀಮಂತ ಆಗುತ್ತದೆ.
ಈಗಿನ ವಿಶಾಲ ಕರ್ನಾಟಕದ ಸುತ್ತಲೂ ಮಲಯಾಳ, ತಮಿಳು, ತೆಲುಗು, ಮರಾಠಿ ಮತ್ತು ಕೊಂಕಣಿ ಮಾತನಾಡುವ ರಾಜ್ಯಗಳು ಇವೆ. ಕರ್ನಾಟಕದ ಗಡಿಪ್ರದೇಶಗಳಲ್ಲಿ ಎರಡು ಭಾಷೆಗಳನ್ನು ಸಹಜವಾಗಿ ಮಾತನಾಡುವ ಜನರಿದ್ದಾರೆ. ಇವರಲ್ಲಿ ಕನ್ನಡ ಮನೆಮಾತಿನವರು ಇರುವ ಹಾಗೆಯೇ ಕನ್ನಡವನ್ನು ಎರಡನೆಯ ಭಾಷೆಯಾಗಿ ಬಳಸುವವರೂ ಇದ್ದಾರೆ. ಇವರ ‘ಕನ್ನಡಗಳು’ ಗಡಿಗಳ ಎಲ್ಲೆಯನ್ನು ಮೀರಿದವುಗಳು. ನುಡಿ ಬೆಳೆಯುವುದೇ ಮನುಷ್ಯರು ಕಟ್ಟಿಕೊಂಡ ಗಡಿಗಳನ್ನು ಮೀರುವ ಮೂಲಕ.
ಕರ್ನಾಟಕದ ಒಳಗಿನ ಪ್ರದೇಶಗಳಲ್ಲಿಯೇ ತಮಿಳು, ತೆಲುಗು, ಮರಾಠಿ, ಮಲೆಯಾಳ ಮುಂತಾದ ಭಾಷೆಗಳನ್ನು ತಾಯ್ನುಡಿಯಾಗಿ ಉಳ್ಳವರು ಅನೇಕ ತಲೆಮಾರುಗಳಿಂದ ನೆಲಸಿದ್ದಾರೆ. ಅವರೆಲ್ಲಾ ಈ ನೆಲದಲ್ಲೇ ಹುಟ್ಟಿ ಕನ್ನಡನಾಡಿನ ಅವಿಭಾಜ್ಯ ಅಂಗವಾಗಿ ಇರುವವರು. ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆಯ ಬಗ್ಗೆ ಮಾತಾಡುವಾಗ ಕೆಲವೊಮ್ಮೆ ಇವರ ತಾಯ್ನಡಿಯ ಪ್ರಸ್ತಾವ ಬರುತ್ತದೆ. ಅವರಂತೆ ಕರ್ನಾಟಕದ ಸೊಗಸಿಗೆ ಅನ್ಯಾನ್ಯ ಕ್ಷೇತ್ರಗಳಲ್ಲಿ ತಮ್ಮನ್ನು ತೆತ್ತುಕೊಂಡ ಅನೇಕರ ಕನ್ನಡ ಪ್ರೀತಿ ಅಸದಳವಾದದ್ದು.
ಕನ್ನಡ ನುಡಿಯ ಬಹುರೂಪತೆಯ ನೆಲೆಯಿಂದ ನೋಡಿದರೆ ಹನ್ನೆರಡನೆಯ ಶತಮಾನದ ಶಿವಶರಣರ ಅನುಭವ ಮಂಟಪ, ಬಸವಣ್ಣನವರ ಕಲ್ಯಾಣದ ಕ್ರಾಂತಿ ಒಂದು ಮಹೋಪಮೆ. ಬೇರೆ ಬೇರೆ ಪ್ರದೇಶಗಳ, ಸಾಮಾಜಿಕ ಸಮುದಾಯಗಳ, ವರ್ಗಗಳ, ವರ್ಣಗಳ ಗಂಡಸರು ಹೆಂಗಸರು ಒಟ್ಟುಸೇರಿ ಅಲ್ಲಿ ವಚನ ರಚನೆ ಮಾಡಿದರು. ಬೇರೆ ಬೇರೆ ಕಸುಬಿನವರು ಕನ್ನಡದಲ್ಲಿ ವಚನ ರಚನೆ ಮಾಡಲು ಅವಕಾಶ ದೊರೆತ ಕಾರಣ ಕನ್ನಡಕ್ಕೆ ಸಾಮಾಜಿಕ ಬಹುತ್ವ ಪ್ರಾಪ್ತವಾಯಿತು. ಹೆಣ್ಣು ಮಕ್ಕಳ ಕನ್ನಡಕ್ಕೆ ಸಮಾನ ಸ್ಥಾನ ದೊರೆಯಿತು. ಕಾಯಕಗಳ ಮೂಲಕ ಕನ್ನಡಗಳನ್ನು ಒಟ್ಟಿಗೆ ಸೇರಿಸುವ ಮಹತ್ವದ ಕ್ರಾಂತಿ ನಡೆಯಿತು. ಅವರು ತಮ್ಮ ಕಸುಬುಗಳನ್ನು ಬದುಕಿನ ರೂಪಕವಾಗಿ ವಚನಗಳಲ್ಲಿ ನೇಯ್ದ ಕಾರಣ ತಳಸಮುದಾಯಗಳನ್ನು ಬೆಸೆಯುವ ತಿಳಿವಳಿಕೆ ಕನ್ನಡ ನಾಡಿಗೆ ದತ್ತವಾಯಿತು. ಕನ್ನಡ ವಚನಗಳಲ್ಲಿ ಭಾಷಿಕ, ಆರ್ಥಿಕ ಮತ್ತು ಸಾಮಾಜಿಕ ಬಹುರೂಪಿ ಚಹರೆಗಳು ಕಾಣಿಸಿಕೊಂಡವು.
ಕನ್ನಡ ಮತ್ತು ಕನ್ನಡಿಗರು ಈಗ ಅಪ್ಪಿಕೊಳ್ಳಬೇಕಾದದ್ದು ಒಳಗೊಳ್ಳುವಿಕೆಯ ಮೂಲಕವೇ ಹೊರತು ಹೊರಗಿಡುವಿಕೆಯ ಮೂಲಕ ಅಲ್ಲ. ಕುವೆಂಪು ಅವರು ಹೇಳಿದ ‘ಸರ್ವ ಜನಾಂಗದ ಶಾಂತಿಯ ತೋಟ’ದಲ್ಲಿ ಬಣ್ಣ ಬಣ್ಣದ ಕನ್ನಡ ಹೂಗಳು ಅರಳಲು ನಾವು ಒಂದೊಂದು ಕನ್ನಡ ಗಿಡಗಳನ್ನು ನೀರೆರೆದು ಸಾಕಿ ಸಲಹಬೇಕು. ಬ್ರೆಕ್ಟ್ ತನ್ನ ‘ನೀರು ಚಿಮುಕಿಸು ತೋಟಕ್ಕೆ’ ಕವನವನ್ನು ಹೀಗೆ ಕೊನೆಮಾಡುತ್ತಾನೆ: ‘ನೀರು ಕೇವಲ ಹಸುರುಹುಲ್ಲಿಗೆ ಬಾಡಿದವುಗಳಿಗೆ ಮಾತ್ರ ಅಲ್ಲ, ಕುಡಿಸು ನೀರನು ಬಂಜರು ಭೂಮಿಗೆ ಕೂಡಾ, ತಣ್ಣಗಾಗಲಿ ಅದರ ಹೊಟ್ಟೆಯೂ ನೋಡಾ.’
ಲೇಖಕ: ಕನ್ನಡ ಸಂಶೋಧಕ, ವಿಶ್ರಾಂತ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.