ADVERTISEMENT

ಆಳ-ಅಗಲ | World Rabies Day: ರೇಬಿಸ್‌ ನಿರ್ಮೂಲನೆಗೆ ಬೇಕು ಇಚ್ಛಾಶಕ್ತಿ

ಸುಕೃತ ಎಸ್.
Published 28 ಸೆಪ್ಟೆಂಬರ್ 2023, 0:30 IST
Last Updated 28 ಸೆಪ್ಟೆಂಬರ್ 2023, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರೇಬಿಸ್‌ ರೋಗಕ್ಕೆ ಲಸಿಕೆ ಅಭಿವೃದ್ಧಿಪಡಿಸಿದ ಲೂಯಿಸ್ ಪಾಶ್ಚರ್‌ ಅವರ ಸ್ಮರಣೆಯ ದಿನವಾದ ಸೆಪ್ಟೆಂಬರ್ 28ನ್ನು, 2007ರಿಂದ ‘ವಿಶ್ವ ರೇಬಿಸ್‌ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ರೇಬಿಸ್‌ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ರೇಬಿಸ್‌ ನಿರ್ಮೂಲನೆಯಲ್ಲಿ ಈವರೆಗಿನ ಸಾಧನೆಯನ್ನು ಗುರುತಿಸಿವುದು ಈ ಆಚರಣೆಯ ಉದ್ದೇಶ.

‘ರೇಬಿಸ್‌ ಎಂಬುದು ಬಡವರ ರೋಗ. ಅದಕ್ಕಾಗಿಯೇ ಈ ರೋಗವನ್ನು ನಿಯಂತ್ರಿಸಲು, ನಿವಾರಿಸಲು ಸರ್ಕಾರಗಳಿಗೆ ಇಚ್ಛಾಶಕ್ತಿ ಇರುವುದಿಲ್ಲ’ ಎಂದು ‘ಭಾರತದಲ್ಲಿ ರೇಬಿಸ್‌ ನಿಯಂತ್ರಣ ಮತ್ತು ತಡೆ ಸಂಸ್ಥೆ’ಯ ಸ್ಥಾಪಕ ಡಾ. ಎಂ.ಕೆ. ಸುದರ್ಶನ್‌ ಅವರು ಅಭಿಪ್ರಾಯಪಟ್ಟಿದ್ದರು. 2020ರಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ ರೇಬಿಸ್‌ ಜಾಗೃತಿ ಸಭೆಯಲ್ಲಿ ಅವರು ಈ ರೀತಿ ಹೇಳಿದ್ದರು. ‘ಬಡವರಿಗೆ, ಸಮಾಜದಲ್ಲಿ ಮೂಲೆಗುಂಪು ಮಾಡಲಾಗದ ಸಮುದಾಯದವರಿಗೆ ಮಾತ್ರವೇ ಈ ರೋಗವು ಹೆಚ್ಚಿನ ಪ್ರಮಾಣದಲ್ಲಿ ಬಾಧಿಸುತ್ತದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ. ಜೊತೆಗೆ, ರೇಬಿಸ್‌ವೊಂದು ನಿರ್ಲಕ್ಷಿಸಲಾದ ರೋಗ ಎಂದೂ ಅದು ಹೇಳಿದೆ.

ADVERTISEMENT

ಭಾರತದ ಮಟ್ಟಿಗೆ ಈ ಎರಡೂ ಅಭಿಪ್ರಾಯಗಳು ಹೊಂದಾಣಿಕೆಯಾಗುತ್ತವೆ. ಜಗತ್ತಿನಾದ್ಯಂತ ಪ್ರತಿವರ್ಷ ಸುಮಾರು 59 ಸಾವಿರ ಜನರು ರೇಬಿಸ್‌ನಿಂದ ಮೃತಪಡುತ್ತಿದ್ದರೆ, ಭಾರತದಲ್ಲಿ ಈ ಸಂಖ್ಯೆ 18 ಸಾವಿರದಿಂದ 20 ಸಾವಿರ ಇದೆ. ಅಂದರೆ, ಭಾರತವೊಂದರಿಂದಲೇ ಶೇ 36ರಷ್ಟು ಜನರು ರೇಬಿಸ್‌ನಿಂದ ಸಾಯುತ್ತಿದ್ದಾರೆ. 2030ರ ಹೊತ್ತಿಗೆ ಜಗತ್ತು ರೇಬಿಸ್‌ ಮುಕ್ತವಾಗಬೇಕು ಎಂಬ ಗುರಿಯನ್ನು ವಿಶ್ವಸಂಸ್ಥೆ 2015ರಲ್ಲಿ ಹಾಕಿಕೊಂಡಿದೆ. ಆದರೆ, ಭಾರತದಲ್ಲಿನ ಸಾವಿನ ಪ್ರಮಾಣ ಈ ಗುರಿ ತಲುಪುವುದನ್ನು ಅಸಾಧ್ಯವಾಗಿಸುತ್ತದೆಯೇ ಎಂಬ ಅನುಮಾನವನ್ನು ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

ರೇಬಿಸ್‌ ರೋಗ ಪತ್ತೆ, ಇದಕ್ಕೆ ಲಸಿಕೆಯ ಸಂಶೋಧನೆಯಿಂದ ಹಿಡಿದು ಸೂಕ್ತವಾದಂತಹ ಕಾರ್ಯಯೋಜನೆ ಸಿದ್ಧಪಡಿಸುವವರೆಗೂ ಭಾರತವು ನಿಧಾನಗತಿಯನ್ನೇ ಪ್ರದರ್ಶನ ಮಾಡಿದೆ. 11ನೇ ಪಂಚವಾರ್ಷಿಕ ಯೋಜನೆಯಲ್ಲಿ (2007–2012) ಮೊದಲ ಬಾರಿಗೆ ರೇಬಿಸ್‌ ನಿಯಂತ್ರಣಕ್ಕೆ ಸರ್ಕಾರವು ಕ್ರಮ ತೆಗೆದುಕೊಂಡಿತ್ತು. ಇದಕ್ಕಾಗಿ ₹8.65 ಕೋಟಿ ಅನುದಾನವನ್ನು ಮೀಸಲಿಟ್ಟಿತ್ತು. ಭಾರತೀಯ ಪಶು ಕಲ್ಯಾಣ ಮಂಡಳಿಗೆ ಈ ಎಲ್ಲ ನಿರ್ವಹಣೆಯ ಜವಾಬ್ದಾರಿಯನ್ನು ನೀಡಲಾಯಿತು. ದೆಹಲಿ, ಅಹಮದಾಬಾದ್‌, ಪುಣೆ, ಬೆಂಗಳೂರು ಹಾಗೂ ಮದುರೈ ನಗರಗಳನ್ನು ಆಯ್ಕೆ ಮಾಡಿಕೊಂಡು ಇಲ್ಲಿ ‘ಮಾನವನಲ್ಲಿ ರೇಬಿಸ್‌ ನಿಯಂತ್ರಣಕ್ಕೆ ಪ್ರಾಯೋಗಿಕ ಯೋಜನೆ’ಯನ್ನು ಜಾರಿ ಮಾಡಲಾಯಿತು. ಈ ಪ್ರಾಯೋಗಿಕ ಯೋಜನೆಯ ಫಲಿತಾಂಶವನ್ನೇ ಇಟ್ಟುಕೊಂಡು, 12ನೇ ಪಂಚ ವಾರ್ಷಿಕ ಯೋಜನೆಯಲ್ಲಿ ರಾಷ್ಟ್ರೀಯ ರೇಬಿಸ್‌ ನಿಯಂತ್ರಣ ಯೋಜನೆ (ಎನ್‌ಆರ್‌ಸಿಪಿ) ಸ್ಥಾಪನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು. 2030ರ ಹೊತ್ತಿಗೆ ರೇಬಿಸ್‌ ನಿರ್ಮೂಲನೆ ಮಾಡಬೇಕು ಎಂದು 2015ರಲ್ಲಿ ವಿಶ್ವಸಂಸ್ಥೆ ಗುರಿ ಹಾಕಿದ ನಂತರವಷ್ಟೇ ಭಾರತದಲ್ಲಿ ರೇಬಿಸ್‌ ನಿಯಂತ್ರಣಕ್ಕೆ ಗತಿ ದೊರೆಯಿತು. ಇನ್ನೂ ಮುಖ್ಯವಾಗಿ ರೇಬಿಸ್‌ ರೋಗವನ್ನು ‘ನೋಟೆಬಲ್‌ ರೋಗ’ ಎಂದು ಭಾರತ ಪರಿಗಣಿಸಿದ್ದೇ 2021ರಲ್ಲಿ.

ರೇಬಿಸ್‌ ರೋಗ ಉಲ್ಬಣಗೊಳ್ಳಲು ಸರಣಿ ಕಾರಣಗಳಿವೆ ಮತ್ತು ಇವುಗಳು ಒಂದಕ್ಕೊಂದು ಹೆಣೆದುಕೊಂಡಿವೆ. ದೇಶದಲ್ಲಿ ಬೀದಿ ನಾಯಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಪ್ರಮುಖ ಸಮಸ್ಯೆಗಳಲ್ಲಿ ಬೀದಿನಾಯಿಗಳ ಹಾವಳಿಯೂ ಒಂದು. ‌ಇವುಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಬೇಕು ಎಂಬ ನೀತಿಯನ್ನು ಮಾಡಿಕೊಂಡಿದ್ದೇವೆಯಾದರೂ ನೀತಿ ಜಾರಿಯಲ್ಲಿ ಸೋತಿದ್ದೇವೆ. ವೃದ್ಧರು, ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಮೃತಪಡುತ್ತಿದ್ದಾರೆ. ದೆಹಲಿ, ಹೈದರಾಬಾದ್‌ ಸೇರಿದಂತೆ ಮಹಾನಗರಗಳಲ್ಲಿ ಪುಟ್ಟ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತಿರುವ ವಿಡಿಯೊಗಳು, ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇವೆ. ಆದರೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು ವಹಿಸಬೇಕಾದ ಇಚ್ಛಾಶಕ್ತಿಯನ್ನು ವಹಿಸುತ್ತಲೇ ಇಲ್ಲ.

ರೇಬಿಸ್‌ ನಿಯಂತ್ರಣಕ್ಕಾಗಿ ಹಲವು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ನಿಜ. ಆದರೆ, ಈ ಕಾರ್ಯಕ್ರಮ ನಿರ್ವಹಣೆಯು ಯಾವುದೇ ಒಂದು ಇಲಾಖೆಯ ಅಡಿಯಲ್ಲಿ ಬರುವುದಿಲ್ಲ. ಇದೂ ಕೂಡ ರೋಗ ನಿಯಂತ್ರಣಕ್ಕೆ ಇರುವ ಬಹು ದೊಡ್ಡ ಅಡ್ಡಿ. ಕೇಂದ್ರ ಸರ್ಕಾರದ ಹಲವು ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ಅಧಿಕಾರಿಗಳು ಹೀಗೆ ಹಲವು ವಿಭಾಗಗಳು ಕೆಲಸ ಮಾಡಬೇಕಾಗುತ್ತದೆ. ಇವುಗಳ ಪ್ರಥಮ ಆದ್ಯತೆ ಬೇರೆ ಬೇರೆ ಇರುತ್ತದೆ. ಈ ಕಾರಣದಿಂದ ರೇಬಿಸ್‌ ನಿಯಂತ್ರಣ ಕೆಲಸಗಳು ಹಿಂದೆ ಬೀಳುತ್ತಿವೆ.

ರೇಬಿಸ್‌ ಮುಕ್ತ ಗೋವಾ

ಹಾಗಾದರೆ ರೇಬಿಸ್‌ನಿಂದ ಮುಕ್ತಿ ಸಿಗುವುದೇ ಇಲ್ಲವೇ ಎಂದರೆ ಖಂಡಿತ ಮುಕ್ತಿ ಇದೆ ಎನ್ನುವುದನ್ನು ಗೋವಾ ತೋರಿಸಿಕೊಟ್ಟಿದೆ. 2017ರಿಂದ ಇಲ್ಲಿಯವರೆ‌ಗೆ ಗೋವಾದಲ್ಲಿ ರೇಬಿಸ್‌ನಿಂದ ಒಂದೇ ಒಂದು ಸಾವು ಸಂಭವಿಸಿಲ್ಲ. ಇದಕ್ಕೆ ಮುಖ್ಯ ಕಾರಣ ಸರ್ಕಾರದ ಇಚ್ಛಾಶಕ್ತಿ. ಜೊತೆಗೆ ಈ ಯಶಸ್ಸಿನ ಹಿಂದಿರುವುದು ‘ಮಿಷನ್‌ ರೇಬಿಸ್‌’ ಎನ್ನುವ ಅಂತರರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ. 2013ರಲ್ಲಿ ಈ ಸಂಸ್ಥೆಯು ಗೋವಾವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಳ್ಳುತ್ತದೆ. ಬೀದಿ ನಾಯಿಗಳಿ ಸಾಮೂಹಿಕ ಲಸಿಕೆ ಕಾರ್ಯಕ್ರಮ ರೇಬಿಸ್‌ ಕುರಿತು ಸಮುದಾಯ ಜಾಗೃತಿ ಕಾರ್ಯಕ್ರಮ ಹಾಗೂ ರೇಬಿಸ್‌ ರೋಗ ತಡೆ ಕುರಿತು ನಿಗಾವಣೆ ಮಾಡುವುದು– ಈ ಮೂರು ಅಂಶಗಳನ್ನು ಪ್ರಮುಖವಾಗಿ ಇಟ್ಟುಕೊಂಡು ಗೋವಾದಲ್ಲಿ ರೇಬಿಸ್‌ ರೋಗ ತಡೆಯನ್ನು ಸಾಧಿಸಲಾಗಿದೆ. 2013ರಿಂದ ಇಲ್ಲಿಯವರೆಗೆ 4 ಲಕ್ಷ ಬೀದಿ ನಾಯಿಗಳಿಗೆ ಮಿಷನ್‌ ರೇಬಿಸ್‌ ಸಂಸ್ಥೆ ಲಸಿಕೆ ಹಾಕಿದೆ. 

ಗೋವಾದ ಕುಗ್ರಾಮಗಳನ್ನೂ ಬಿಡದೆ ಈ ಸಂಸ್ಥೆ ಬೀದಿನಾಯಿಗಳು ಪತ್ತೆಮಾಡಿ ಲಸಿಕೆ ನೀಡಿದೆ. ಬಲೆಗಳ ಮೂಲಕ ಬೀದಿನಾಯಿಗಳನ್ನು ಹಿಡಿಯುವುದು ನಂತರ ಅವುಗಳಿಗೆ ಲಸಿಕೆ ನೀಡಿವುದು. ಲಸಿಕೆ ನೀಡಿದ ನಾಯಿಗೆ ವಿಷಯಕಾರಿ ಅಲ್ಲದ ಹಸಿರು ಬಣ್ಣವನ್ನು ಅದಕ್ಕೆ ಬಳಿಯುವುದು. ನಂತರ ಅವುಗಳನ್ನು ಮತ್ತೆ ಬೀದಿಗೆ ಬಿಡುವುದು. ಎಲ್ಲೆಲ್ಲಿ ಬೀದಿನಾತಿಗಳು ಇದ್ದಾವೆ ಎಷ್ಟು ಪ್ರದೇಶವನ್ನು ಇಲ್ಲಿಯವರೆಗೆ ಸುತ್ತಾಡಲಾಗಿದೆ ಎಷ್ಟು ನಾಯಿಗಳಿಗೆ ಲಸಿಕೆ ನೀಡಲಾಗಿದೆ ಎಂಬ ಮಾಹಿತಿಯನ್ನು ಆ್ಯಪ್‌ವೊಂದರಲ್ಲಿ ದಾಖಲು ಮಾಡುವುದು. ಈ ಕ್ರಮವನ್ನು ಈ ಸಂಸ್ಥೆಯು ಇಲ್ಲಿಯವರೆಗೂ ಮುಂದುವರೆಸಿಕೊಂಡು ಬಂದಿದೆ. ಇದೇ ಕಾರಣದಿಂದ ಗೋವಾದಲ್ಲಿ ರೇಬಿಸ್‌ ಅನ್ನು ತಡೆಗಟ್ಟಲಾಗಿದೆ. ಈಗ ಬೀದಿ ನಾಯಿಗಳ ಉಪಟಳದಿಂದ ಕಂಗೆಟ್ಟಿರುವ ಕೇರಳ ಕೂಡ ಇದೇ ಸಂಸ್ಥೆ ಜೊತೆಯಲ್ಲಿ ಕೆಲಸ ಮಾಡಲು ಮುಂದಾಗಿದೆ.

ನಾಯಿಗಳೇ ಮೂಲ...

* ನಾಯಿಗಳಲ್ಲಿ ರೇಬಿಸ್‌ ವೈರಾಣು ಇರುತ್ತದೆ. ಅವುಗಳಲ್ಲಿ ರೇಬಿಸ್‌ ವೈರಾಣು ಸಾಂದ್ರತೆ ಹೆಚ್ಚಾದಾಗ ಅವುಗಳಿಗೆ ರೇಬಿಸ್‌ ರೋಗ ಬರುತ್ತದೆ. ಅಂತಹ ನಾಯಿ–ಬೆಕ್ಕುಗಳ ಕಡಿತಕ್ಕೆ ಒಳಗಾದ ಮತ್ತು ಅವುಗಳ ಜೊಲ್ಲಿನ ಸಂಪರ್ಕಕ್ಕೆ ಬಂದ ಮನುಷ್ಯರಿಗೆ ರೇಬಿಸ್‌ ರೋಗ ಬರುವ ಅಪಾಯವಿರುತ್ತದೆ. ನಾಯಿ ಬೆಕ್ಕುಗಳು ಮಾತ್ರವಲ್ಲದೆ ಕುದುರೆ ಮುಂಗುಸಿ ಮತ್ತು ಬಾವಲಿಗಳಲ್ಲೂ ಈ ವೈರಾಣು ಇರುತ್ತದೆ. ಆದರೆ ನಾಯಿಗಳಿಂದಲೇ ಮನುಷ್ಯನಿಗೆ ರೇಬಿಸ್‌ ತಗಲುವ ಸಾಧ್ಯತೆ ಹೆಚ್ಚು

99% - ವಿಶ್ವದಲ್ಲಿ ಸಂಭವಿಸುವ ರೇಬಿಸ್‌ ಸಾವುಗಳಲ್ಲಿ ನಾಯಿಕಡಿತದಿಂದ ರೇಬಿಸ್‌ ಬಂದ ಪ್ರಕರಣಗಳ ಪ್ರಮಾಣ

ಭಾರತದಲ್ಲೇ ಹೆಚ್ಚು

50ಕ್ಕೂ ಹೆಚ್ಚು ದೇಶಗಳಿಂದ ನಾಯಿಕಡಿತದ ರೇಬಿಸ್‌ ಸಾವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ

59000 ಭಾರತವೂ ಸೇರಿ ವಿಶ್ವದ 151 ದೇಶಗಳಲ್ಲಿ ಪ್ರತಿ ವರ್ಷ ನಾಯಿಕಡಿತದ ರೇಬಿಸ್‌ನಿಂದ ಮೃತಪಡುವವರ ಸಂಖ್ಯೆ 

38000–39000 ಭಾರತವನ್ನು ಬಿಟ್ಟು ವಿಶ್ವದ 150 ದೇಶಗಳಲ್ಲಿ ಪ್ರತಿ ವರ್ಷ ನಾಯಿಕಡಿತದ ರೇಬಿಸ್‌ನಿಂದ ಮೃತಪಡುವವರ ಸಂಖ್ಯೆ 

64 % 150 ದೇಶಗಳಲ್ಲಿನ ನಾಯಿಕಡಿತದ ರೇಬಿಸ್‌ನ ಸಾವಿನ ಪ್ರಮಾಣ

36 % ಭಾರತದಲ್ಲಿನ ನಾಯಿಕಡಿತದ ರೇಬಿಸ್‌ನ ಸಾವಿನ ಪ್ರಮಾಣ

20000–21000 ಭಾರತದಲ್ಲಿ ಪ್ರತಿ ವರ್ಷ ನಾಯಿಕಡಿತದ ರೇಬಿಸ್‌ನಿಂದ ಮೃತಪಡುವವರ ಸಂಖ್ಯೆ.

ಆದರೆ ಭಾರತದಲ್ಲಿನ ರೇಬಿಸ್‌ ಸಾವುಗಳು ದಾಖಲಾಗದೇ ಹೋಗುತ್ತದೆ. ಈ ಕಾರಣದಿಂದ ಸರ್ಕಾರಿ ದಾಖಲೆಗಳಲ್ಲಿ ಉಲ್ಲೇಖಿಸಿರುವ ರೇಬಿಸ್‌ ಸಾವುಗಳ ಸಂಖ್ಯೆ ತೀರಾ ಕಡಿಮೆ ಇದೆ. (ಭಾರತ ಸರ್ಕಾರದ ಲೆಕ್ಕಾಚಾರದ ಪ್ರಕಾರ 2012ರಿಂದ 2020ರ ಮಧ್ಯೆ ದೇಶದಾದ್ಯಂತ ಸಂಭವಿಸಿದ ನಾಯಿಕಡಿತ ರೇಬಿಸ್‌ ಸಾವುಗಳ ಸಂಖ್ಯೆ 6644 ಮಾತ್ರ)

70 % ನಾಯಿಗಳಿಗೆ ರೇಬಿಸ್‌ ಲಸಿಕೆ ಹಾಕುವುದರಿಂದ ಯಾವುದೇ ಪ್ರದೇಶದಲ್ಲಿ ನಾಯಿಕಡಿತದ ರೇಬಿಸ್‌ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು. ಒಂದು ಪ್ರದೇಶದಲ್ಲಿನ ಒಟ್ಟು ನಾಯಿಗಳಲ್ಲಿ ಕನಿಷ್ಠ ಶೇ 70ರಷ್ಟು ನಾಯಿಗಳು ಸದಾ ರೇಬಿಸ್‌ ಲಸಿಕೆಗೆ ಒಳಗಾಗಿರುವಂತೆ ನೋಡಿಕೊಳ್ಳಬೇಕು

ರೇಬಿಸ್‌ ತಡೆಯಲು...

*ನಾಯಿ ಕಚ್ಚಿದಾಗ ನಾಯಿ ಕಚ್ಚಿದ ಜಾಗವನ್ನು ತಕ್ಷಣವೇ ನೀರು–ಸೋಪು ಮತ್ತು ಸೋಂಕುನಿವಾರಕ ದ್ರಾವಣ ಬಳಸಿ ತೊಳೆಯಬೇಕು

*ಮನೆಮದ್ದು ಎಂದು ಎಣ್ಣೆ ಕಾರದ ಪುಡಿ ಗಿಡಮೂಲಿಕೆ ಪುಡಿಗಳನ್ನು ಹಚ್ಚಬಾರದು

*ನಾಯಿಕಚ್ಚಿ ಆದ ಜಾಗಕ್ಕೆ ಬಟ್ಟೆ ಅಥವಾ ಬ್ಯಾಂಡೇಜ್‌ ಹಾಕಬಾರದು

*ವಿಳಂಬ ಮಾಡದೇ ವೈದ್ಯರನ್ನು ಕಾಣಬೇಕು. ಚಿಕಿತ್ಸೆ ಪಡೆಯಬೇಕು

*ವೈದ್ಯರು ಸೂಚಿಸುವ ಔಷಧಗಳನ್ನು ಪೂರ್ಣ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಲಸಿಕೆ ಮತ್ತು ಚುಚ್ಚುಮದ್ದಿನ ಎಲ್ಲಾ ಡೋಸ್‌ಗಳನ್ನು ತಪ್ಪದೇ ತೆಗೆದುಕೊಳ್ಳಬೇಕು

*ಕಚ್ಚಿದ ನಾಯಿಯ ಗುರುತನ್ನು ಇಟ್ಟುಕೊಳ್ಳಬೇಕು. ಅದರ ವರ್ತನೆಯ ಮೇಲೆ ನಿಗಾ ಇರಿಸಬೇಕು. ಅದು ಬೀದಿನಾಯಿಯಾಗಿದ್ದು ಸಾಧ್ಯವಿದ್ದರೆ ರೇಬಿಸ್‌ ಲಸಿಕೆ ಹಾಕಿಸಬೇಕು. ಸಾಕುನಾಯಿಗಳಿದ್ದರೆ ಅವಕ್ಕೆ ಪ್ರತಿ ವರ್ಷ ರೇಬಿಸ್‌ ಲಸಿಕೆ ಹಾಕಿಸಬೇಕು. ಆಗ ರೇಬಿಸ್ ಹರಡುವುದನ್ನು ತಡೆಗಟ್ಟಬಹುದು

ಮೂಢನಂಬಿಕೆ ಸಲ್ಲ: ಶ್ರೀಕೃಷ್ಣ ಇಸಳೂರ

ತೀರಾ ಇತ್ತೀಚೆಗೆ ವ್ಯಕ್ತೊಯೊಬ್ಬರು ನನ್ನ ಬಳಿ ಬಂದು ಮಗನನ್ನು ಉಳಿಸಿಕೊಂಡುವಂತೆ ಅಂಗಲಾಚಿದರು. ಆದರೆ ಕಾಲಮಿಂಚಿತ್ತು ಬಾಲಕನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಾಲಕನಿಗೆ ನಾಯಿ ಕಚ್ಚಿತ್ತು. ತಕ್ಷಣವೇ ಬಾಲಕನನ್ನು ತಂದೆ ನಾಟಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದರು. ತೋಳಿನ ಭಾಗಕ್ಕೆ ಬಳ್ಳಿಯೊಂದನ್ನು ಕಟ್ಟಿದರೆ ರೇಬಿಸ್‌ ಗುಣವಾಗುತ್ತದೆ ಎಂಬ ನಂಬಿಕೆ. ಎರಡು ತಿಂಗಳ ನಂತರ ಬಾಲಕನಲ್ಲಿ ರೇಬಿಸ್‌ ರೋಗಲಕ್ಷಣಗಳು ಕಾಣಿಸಿಕೊಂಡವು. ಕೆಲವೇ ದಿನಗಳಲ್ಲಿ ಆತ ಮೃತಪಟ್ಟ. ದೊಡ್ಡಬಳ್ಳಾಪುರದ ಬಳಿ ಗ್ರಾಮವೊಂದಲ್ಲಿ 12 ಹಸುಗಳು ಕೆಲವೇ ದಿನಗಳಲ್ಲಿ ಒಂದಾದ ಮೇಲೊಂದು ಮೃತಪಟ್ಟವು. ಗ್ರಾಮಕ್ಕೆ ಗಂಡಾಂತರ ಒದಗಿದೆ ಎಂದು ತಿಳಿದ ಗ್ರಾಮಸ್ಥರು ದೊಡ್ಡ ಹೋಮವೊಂದನ್ನು ಆಯೋಜಸಿದ್ದರು. ರೇಬಿಸ್‌ನಿಂದ ಹಸು ಸತ್ತಿರುವ ಬಗ್ಗೆ ಅವರಲ್ಲಿ ಅರಿವೇ ಇರಲಿಲ್ಲ. ಹೀಗೆ ರೇಬಿಸ್‌ ಸುತ್ತಲೂ ಹಲವು ಮೂಢನಂಬಿಕೆಗಳಿವೆ. ಜೊತೆಗೆ ಜಾಗೃತಿಯ ಕೊರತೆಯೂ ಇದೆ. ಒಮ್ಮೆ ರೇಬಿಸ್‌ ಬಂದರೆ ಜನರನ್ನು ಸಾವಿನಿಂದ ಬಚಾವು ಮಾಡಲು ಸಾಧ್ಯವಿಲ್ಲ. ಸಾವು ಸಂಭವಿಸಲೇ ಬೇಕು. ಆದರೆ ನಾಯಿ ಕಚ್ಚಿದ ಕೂಡಲೇ ಮುಂಜಾಗ್ರತಾ ಕ್ರಮ ವಹಿಸಿದರೆ ಸಾವನ್ನು ತಡೆಯಬಹುದು. ಹಸುಗಳ ನಿರಂತರ ತಪಾಸಣೆಯನ್ನು ಕೂಡ ಮಾಡಿಸಬೇಕಾಗುತ್ತದೆ. ನಾಯಿ ಕಚ್ಚಿದ ಕೂಡಲೇ ಬಟ್ಟೆ ಸೋಪಿನಿಂದ 15 ನಿಮಿಷಗಳವರೆಗೆ ಗಾಯವನ್ನು ಸ್ವಚ್ಛ ಮಾಡಬೇಕು. ನಂತರ ತಕ್ಷಣದಲ್ಲಿಯೇ ವೈದ್ಯರ ಬಳಿ ಹೋಗಬೇಕು. ನಮ್ಮ ಜನರಗಳಲ್ಲಿ ಇರುವ ಮತ್ತೊಂದು ಸಮಸ್ಯೆ ಎಂದರೆ ಲಸಿಕೆ ಪಡೆದುಕೊಳ್ಳುವುದಕ್ಕೆ ಬರದೇ ಇರುವುದು. ಎರಡು ಬಾರಿ ಬಂದವರು ನಂತರ ಲಸಿಕೆ ಪಡೆದುಕೊಳ್ಳುವುದಕ್ಕೆ ಬರುವುದೇ ಇಲ್ಲ. ಈ ನಿರ್ಲಕ್ಷ್ಯವನ್ನು ಜನರು ಬಿಡಬೇಕು.

-ಶ್ರೀಕೃಷ್ಣ ಇಸಳೂರ, ರೇಬಿಸ್‌ ತಜ್ಞ

ಕೃಷ್ಣ ಇಸಳೂರು

ಆಧಾರ: ರೇಬಿಸ್‌ ತಡೆಗಟ್ಟಲು ರಾಷ್ಟ್ರೀಯ ಕಾರ್ಯಯೋಜನೆ ವರದಿ 2023, ವಿಶ್ವ ಆರೋಗ್ಯ ಸಂಸ್ಥೆ ವರದಿಗಳು, ದಿ ಗಾರ್ಡಿಯನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.