ADVERTISEMENT

ಅಂದಿನ ಹಾಡಿನ ಪಟ್ಟಿಯೂ ಈಗಿನ ಸ್ಮಾರ್ಟ್‌ಫೋನೂ

ಮನು ಎಚ್‌.ಎಸ್‌.ಹೆಗ್ಗೋಡು
Published 23 ಮಾರ್ಚ್ 2015, 19:30 IST
Last Updated 23 ಮಾರ್ಚ್ 2015, 19:30 IST

ಮಲೆನಾಡು ಭಾಗದ ವಿಶಿಷ್ಟ ಜನಪದ ಹಸೆ ಹಾಡುಗಳನ್ನು  ಲಿಖಿತರೂಪದಲ್ಲಿ ಸಂಗ್ರಹಿಸಿ ಬರೆದಿಟ್ಟುಕೊಳ್ಳುತ್ತಿದ್ದ  ಡೈರಿಯ ಹೆಸರೇ ‘ಹಾಡಿನ ಪಟ್ಟಿ’. ಈಗಿನ ಮೊಬೈಲ್‌ ಫೋನ್‌ಗಳಂತೆ ಈ ಪಟ್ಟಿಯೂ ಸದಾ ಮಹಿಳೆಯರ ಕೈಯಲ್ಲಿ ಇರಲೇಬೇಕು. ಈಗ ಸ್ಮಾರ್ಟ್‌ಫೋನ್‌ ಲಗ್ಗೆ ಇಟ್ಟಿದ್ದರೂ, ‘ಹಾಡಿನ ಪಟ್ಟಿ’ಯ ಮುಂದೆ ಅವು ಲೆಕ್ಕಕ್ಕೇ ಇಲ್ಲ.

ಇದು ಮಲೆನಾಡಿನ ಗ್ರಾಮೀಣ ಪ್ರದೇಶದ ಬಹುತೇಕ ಮಹಿಳೆಯರ ಅಚ್ಚುಮೆಚ್ಚಿನ ಪಟ್ಟಿ. ಈ ಪಟ್ಟಿಯನ್ನು ಯಾವ ಗಂಡಸಿಗೂ ಮುಟ್ಟೋ ಅಧಿಕಾರ ಇಲ್ಲ! ಹಾಗೊಂದು ವೇಳೆ ಗಂಡಸರು ಪಟ್ಟಿ ತೆರೆದು ಓದಿದರೂ ಅರ್ಥವಾಗದೇ ಮುಚ್ಚಿಡದೆ ಬೇರೆ ದಾರಿನೂ ಇಲ್ಲ!

ಇದಕ್ಕೆ ಹೆಣ್ಮಕ್ಕಳು ಇಟ್ಟಿರೋ ಹೆಸರು ‘ಹಾಡಿನ ಪಟ್ಟಿ’. ವಿಶೇಷ ಸಂದರ್ಭಗಳಲ್ಲಿ ಜನರ ಬಾಯಿಂದ ಬಾಯಿಗೆ ಹಾಡಾಗಿ ಹರಿದ ಜನಪದ ಹಾಡುಗಳು ಲಿಖಿತರೂಪದಲ್ಲಿ ತಮ್ಮ ತಮ್ಮ ಪಟ್ಟಿಯಲ್ಲಿ ಮಹಿಳೆಯರು ಬರೆದುಕೊಳ್ಳುವುದು ಇದರ ವಿಶೇಷ.

ಪಟ್ಟಿಯೂ... ಮೊಬೈಲೂ...
ಮೊಬೈಲ್ ಫೋನುಗಳನ್ನು ಆರಂಭದ ದಿನಗಳಲ್ಲಿ ಮಾತನಾಡುವುದಕ್ಕೆ ಮಾತ್ರವಲ್ಲದೇ ಬೇರೆ ರೀತಿಯಲ್ಲಿ ಉಪಯೋಗಿಸಿದ್ದು ಎಂಪಿ-ತ್ರಿ ಹಾಡು ಸಂಗ್ರಹಿಸಿ ಕೇಳಲು ಮಾತ್ರ. ಬರಬರುತ್ತಾ ಸ್ಮಾರ್ಟ್‌ಫೋನ್ ಯುಗ ಆರಂಭವಾಯಿತು. ಇದರಲ್ಲಿ ಏನುಂಟು ಏನಿಲ್ಲ ಎಂಬ ಮಟ್ಟಕ್ಕೆ ಬಂದುನಿಂತಿದೆ. ಆದರೆ ಇಂಥ ಅದ್ಭುತ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿರುವವರು ಮಾತ್ರ ನೂರಕ್ಕೆ ಒಬ್ಬರು ಎನ್ನಬಹುದೇನೋ. ಅಂದರೆ ಅಕೌಂಟ್‌ಗಳನ್ನು, ಬ್ಯಾಂಕ್ ವಿಷಯಗಳನ್ನು, ವ್ಯಾವಹಾರಿಕ ಅಂಕಿ ಅಂಶಗಳನ್ನೂ, ಸಂದರ್ಭಕ್ಕೆ ಬೇಕಾಗುವ ಫೋಟೊ ಇಲ್ಲಾ ಹಾಡು ಮುಂತಾದುವನ್ನು ಒಪ್ಪ ಓರಣವಾಗಿ ಇಟ್ಟುಕೊಳ್ಳುವವರು ತುಂಬಾ ಕಮ್ಮಿ. ಆದರೆ ಈ ನಮ್ಮ ಮಲೆನಾಡಿನ ಹೆಂಗಸರ ಹಾಡಿನ ಪಟ್ಟಿ ಅಂದಿನ ಕಾಲದಲ್ಲೇ ಇಂದಿನ ಸ್ಮಾರ್ಟ್‌ಫೋನ್‌ ಗಳಿಗಿಂತಲೂ ಹೆಚ್ಚೂ ನಾಜೂಕಾಗಿ ಹಾಗೂ ಗುಣಾತ್ಮಕವಾಗಿ ಬಳಸಲಾಗುತ್ತಿದ್ದವು ಅನ್ನೋದು ಸೋಜಿಗ.

ಆ ಹಾಡಿನ ಪಟ್ಟಿಯೇ ಅವರ ವ್ಯಕ್ತಿತ್ವವನ್ನೂ ತೋರಿಸುವ ಮಟ್ಟಕ್ಕೆ ಇರುತ್ತಿತ್ತು. ಹೆಣ್ಣು ಮಕ್ಕಳು ಹೈಸ್ಕೂಲಿಗೆ ಕಾಲಿಡುತ್ತಲೇ ತಮ್ಮ ಸ್ವಂತ ಹಾಡಿನ ಪಟ್ಟಿಯನ್ನು ನೋಟ್‌ಬುಕ್‌ನಲ್ಲಿ  ಬರೆಯಲು ಆರಂಭಿಸುತ್ತಾರೆ. ಮೊದಲನೇ ಪುಟ ಏನಿದ್ದರೂ ‘ಶ್ರೀ ಗಣೇಶಾಯ ನಮಃ’ಕ್ಕೆ ಮೀಸಲು. ಅದರ ಕೆಳಗೆ ಕಲಾತ್ಮಕವಾಗಿ ತಮ್ಮ ಹೆಸರು, ವಿಳಾಸ ಬರೆದುಕೊಂಡರೆ, ಚಿತ್ರ ಬರೆಯುವ ಅಭ್ಯಾಸವಿದ್ದರೆ ಹೂವಿನ ಇಲ್ಲವೇ ದೇವರ ಚಿತ್ರ ಬಿಡಿಸಿಕೊಳ್ಳುತ್ತಾರೆ.

ಬರಿಯ ಹಾಡಲ್ಲ...
ಈ ಹಾಡಿನ ಪಟ್ಟಿಯಲ್ಲಿ ಬರೀ ಹಾಡೇ ಇರುತ್ತದೆ ಎಂದೇನೂ ಅಲ್ಲ. ಹಾಡಿಗೆ ಅಲ್ಲಿ ಆದ್ಯತೆ ಇದ್ದರೂ ಅಲ್ಲಿ ಇಲ್ಲದ ವಿಷಯಗಳೇ ಇಲ್ಲಾ! ಒಂದು ಅರ್ಥದಲ್ಲಿ ಇದು ‘ಪರ್ಸನಲ್ ಡೈರಿ’ ಎನಿಸಿದರೂ ಹಾಗೆ ಹೇಳುವುದೂ ಉಚಿತವಲ್ಲ.

ಇದರಲ್ಲಿ ಹಾಡುಗಳ ಜೊತೆ ಸ್ವರಚಿತ ಕವನ, ರಂಗೋಲಿ, ವೈವಿಧ್ಯಮಯ ಚಿತ್ರ, ಅವುಗಳ ವಿವರ, ಮನೆಮದ್ದು, ಮನೆ ವಿಳಾಸ... ಎಲ್ಲವೂ ಸ್ಥಾನ ಪಡೆದಿರುತ್ತವೆ. ಆ ಪಟ್ಟಿಯ ಯಾವುದೋ ಒಂದು ಮೂಲೆಯಲ್ಲಿ ಗುಟ್ಟಾಗಿ ಯಾರಿಗೂ ಅರ್ಥವಾಗದ ರೀತಿಯಲ್ಲಿ ಮುಟ್ಟಿನ ದಿನಾಂಕವೂ ನಮೂದಾಗಿರುವುದೂ ಉಂಟು!

ಹೀಗೆ ಆರಂಭವಾಗುವ ಹಾಡಿನ ಪಟ್ಟಿಯನ್ನು ಶಾರ್ಟ್ ಆಗಿ ‘ಪಟ್ಟಿ’ ಅಂತ ಕರಿಯುವುದೇ ಜಾಸ್ತಿ. ವರ್ಷದಿಂದ ವರ್ಷಕ್ಕೆ ತುಂಬುತ್ತಾ ಹೋಗಿ ಈ ಪಟ್ಟಿಯಲ್ಲಿ ಕೊನೆ ಕೊನೆಗೆ ಒಂದು ಇಂಚೂ ಜಾಗದ ಸಿಗದಂತೆ ಎಲ್ಲಾ ಕಡೆ ಏನೇನೋ ಮಾಹಿತಿಗಳಿಂದ ತುಂಬಿ ಹೋಗುತ್ತವೆ. ಹೊಸ ಪಟ್ಟಿ ಬಂದರೆ ಇಲ್ಲಿರುವ ಮುಖ್ಯ ವಿಷಯಗಳು ಮಾತ್ರ ವರ್ಗಾವಣೆಗೊಳ್ಳುತ್ತವೆ (ಹೊಸ ಫೋನ್‌ ತೆಗೆದುಕೊಂಡಾಗ ಹಳೆಯ ಫೋನಿನ ಮೆಮೊರಿ ಕಾರ್ಡ್‌ನಿಂದ ಮಹತ್ವದ ವಿಷಯ, ದೂರವಾಣಿ ಸಂಖ್ಯೆಗಳನ್ನು ವರ್ಗಾವಣೆ ಮಾಡಿಕೊಂಡಂತೆ!) ಕೆಲವರು ಒಂದೇ ಪಟ್ಟಿಯನ್ನು ಜೀವನ ಪರ್ಯಂತ ಬಳಸಿದರೆ ಇನ್ನು ಕೆಲವರು ಬ್ಯಾಂಕ್ ಪಾಸ್‌ಬುಕ್‌ನ ಹಾಗೆ ಆಗಾಗ ಹೊಸ ಹೊಸ ಪುಸ್ತಕಕ್ಕೆ ದಾಟುತ್ತಾ ಸಾಗುತ್ತಾರೆ.

ಎಲ್ಲಿ ಹೊಗುವುದಿದ್ದರೂ ಹೆಂಗಸರ ಬ್ಯಾಗ್‌ನಲ್ಲಿ ಈ ಪಟ್ಟಿ ಇದ್ದೇ ಇರುತ್ತದೆ. ಮದುವೆ, ಮುಂಜಿ ಮನೆಗಳಲ್ಲೋ, ಇನ್ನೆಲ್ಲೋ ಹೋದಾಗ ತಮಗೆ ಬೇಕಾದ ಮಾಹಿತಿಗಳು ಇವರ ಪಟ್ಟಿಯಿಂದ ಅವರ ಪಟ್ಟಿಗೆ, ಅವರಿಂದ ಇವರಿಗೆ ವರ್ಗಾವಣೆಗೊಂಡು ಪಟ್ಟಿ ಅಪ್‌ಡೇಟ್‌ ಆಗುತ್ತಲೇ ಇರುತ್ತದೆ (ಬ್ಲೂಟೂಥ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳುವ ಹಾಗೆ). ಕೆಲವರ ಪಟ್ಟಿಗಳು ಸಾರ್ವಜನಿಕವಾಗಿದ್ದು, ಯಾರು ಬೇಕಾದರೂ ತೆಗೆದು ಓದಿ ಡೌನ್‌ಲೋಡ್‌ ಮಾಡಿಕೊಂಡರೆ ಇನ್ನು ಕೆಲವರು ಅಷ್ಟು ಸುಲಭಕ್ಕೆ  ಬೇರೆಯ ವರ ಬಳಿ ಗುಟ್ಟುಬಿಟ್ಟು ಕೊಡಲಾರರು. ಅಕ್ಷರ ಕಲಿಯದವರಾದರೆ ತಮಗೆ ಬೇಕಿರುವ ಮಾಹಿತಿಯನ್ನು ಬೇರೆಯವರ ಸಹಾಯದಿಂದ ಬರೆಸಿ ಅಥವಾ ಓದಿಸಿ ಕೊಳ್ಳುತ್ತಾರೆ.

ಇದರಲ್ಲಿ ತಮ್ಮ ಮಕ್ಕಳ ಹುಟ್ಟಿದ ದಿನ, ನಕ್ಷತ್ರ ಇತ್ಯಾದಿ ವಿವರವುಳ್ಳ ಜಾತಕವಷ್ಟೇ ಅಲ್ಲದೇ  ಹೊರ ಊರುಗಳಲ್ಲಿ ಇರುವ ಮಕ್ಕಳ, ಮೊಮ್ಮಕ್ಕಳ, ಕೆಲವು ಸಂಬಂಧಿಗಳ ಜಾತಕ, ಅವರ ವಿಳಾಸ... ಹೀಗೆ ಇನ್ನೂ ಲೆಕ್ಕವಿಲ್ಲದಷ್ಟು ಮಾಹಿತಿ ಇರುತ್ತವೆ. ಇದೇ ಕಾರಣಕ್ಕೆ ಪರ ಊರಿಗೆ ಹೋದಾಗ ಅಲ್ಲೇ ಮದುವೆ ಪ್ರಸ್ತಾವ ಮಾಡಿದ ಸಂದರ್ಭಗಳೂ ಉಂಟು! ಮನೆಯ ಯಜಮಾನ ಅಥವಾ ಇತರ ಗಂಡಸರು ಕೆಲವೊಮ್ಮೆ ಅಧಿಕೃತ ಮಾಹಿತಿಗಾಗಿ ಹೆಂಗಸರ ಈ ಪಟ್ಟಿಯನ್ನು ಅವಲಂಬಿಸುವುದೂ ಇದೆ. ಅದಕ್ಕಾಗಿ ಗೃಹಿಣಿಯರು ಇದನ್ನೂ ತಮ್ಮ ಕರ್ತವ್ಯ ಎಂಬಂತೆ, ಹುಟ್ಟಿದ್ದು ಸತ್ತಿದ್ದು... ಹೀಗೆ ತಮ್ಮ ಗಮನಕ್ಕೆ ಬಂದ ಎಲ್ಲವನ್ನೂ  ನಮೂದಿಸುತ್ತಾರೆ. ಯಾವ ವಿವರ ಯಾವಾಗ ಯಾರಿಗೆ ಬೇಕಾಗಬಹುದೋ ಯಾರಿಗೆ ಗೊತ್ತು?

ಇಷ್ಟಾದರೂ ಹಿಂದಿನ ಕಾಲದಲ್ಲಿ ಈ ಹಾಡಿನ ಪಟ್ಟಿಯನ್ನು ಕೈಯಲ್ಲಿ ಹಿಡಿದು ಹಾಡು ಹೇಳುವುದು ನಾಚಿಕೆ ವಿಷಯವಾಗಿತ್ತಂತೆ. ಬಾಯಿಪಾಠ ಇಲ್ಲದವರು ಮಾತ್ರ ಹಾಗೆ ಮಾಡುತ್ತಾರೆ ಎನ್ನುವ ಕಾರಣ. ಆದರೆ ಇಂದು ಪಟ್ಟಿ ಹಿಡಿದುಕೊಂಡಾದರೂ ಹಾಡು ಹೇಳುವವರು ಇದ್ದಾರೆ ಅನ್ನೋದೇ ಸಮಾಧಾನದ ವಿಷಯ.

ಇದೇನೇ ಇದ್ದರೂ, ಇಂದಿಗೂ ಹಾಡಿನ ಪಟ್ಟಿ ತನ್ನ ಅಸ್ತಿತ್ವ ಕಳೆದುಕೊಂಡಿಲ್ಲ. ಆದರೆ ಸರಳವಾಗಿದೆ ಹಾಗೂ ಇಂದಿನ ಜಾಯಮಾನಕ್ಕೆ ತಕ್ಕಂತೆ ವಿಳಾಸದ ಬದಲು ಫೋನ್ ನಂಬರ್‌ಗಳು, ಮನೆಮದ್ದಿನ ಜಾಗದಲ್ಲಿ ಇಂಗ್ಲಿಷ್‌ ಔಷಧಿಯ ಟಾನಿಕ್ ಮಾತ್ರೆಗಳ ಹೆಸರುಗಳು ನಮೂದಾಗುತ್ತಿವೆ. ಅಳಿದು ಹೋದ ಅಮ್ಮ ಅಜ್ಜಿಯರ ಪಟ್ಟಿಯಂತೂ ಇಂದು ಅಮೂಲ್ಯ ಆಸ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT