ಧಾರವಾಡದ ಕ್ರೀಡಾಪಟುಗಳಿಗಾಗಿ ಸಿಂಥೆಟಿಕ್ ಟ್ರ್ಯಾಕ್ ಬೇಕು ಎನ್ನುವುದು ಬಹುದಿನಗಳ ಬೇಡಿಕೆ. ಸದ್ಯ ಅದಕ್ಕೆ ಸರ್ಕಾರದ ಮಟ್ಟದಲ್ಲಿ ಮನ್ನಣೆ ದೊರೆತು ಟ್ರ್ಯಾಕ್ ನಿರ್ಮಾಣ ಕಾರ್ಯ ಆರಂಭಗೊಂಡಿದೆಯಾದರೂ ಕಾಮಗಾರಿ ಕುಂಟುತ್ತಾ ಸಾಗಿದೆ. ಇನ್ನೂ ಆರು ತಿಂಗಳ ಕಾಲ ಕಾಮಗಾರಿ ಮುಕ್ತಾಯಗೊಳ್ಳುವುದು ಅಸಾಧ್ಯ ಎನ್ನುತ್ತಾರೆ ಅಧಿಕಾರಿಗಳು.
ಉತ್ತರ ಕರ್ನಾಟಕದ ಕ್ರೀಡಾಕೇಂದ್ರವಾದ ಧಾರವಾಡದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತಿ ಕೇಂದ್ರದ ಜೊತೆಗೆ ಮೂರು ವಿಶ್ವವಿದ್ಯಾಲಯಗಳು, ಪ್ರತಿಷ್ಠಿತ ಕಾಲೇಜುಗಳೂ ಇವೆ. ಹೀಗಾಗಿ ಒಂದಲ್ಲ ಒಂದು ಕ್ರೀಡಾಕೂಟಗಳು ಇಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ಈವರೆಗೂ ಇಲ್ಲಿ ಗುಣಮಟ್ಟದ ಟ್ರ್ಯಾಕ್ ಇದ್ದಿಲ್ಲ. ಬೆಂಗಳೂರು, ಮೈಸೂರು, ಶಿವಮೊಗ್ಗ ಮೊದಲಾದ ಜಿಲ್ಲೆಗಳಲ್ಲಿ ಈಗಾಗಲೇ ಸಿಂಥೆಟಿಕ್ ಟ್ರ್ಯಾಕ್ ಇದೆ. ದಶಕದ ಹಿಂದೆ ಧಾರವಾಡದ ಒಂದು ಭಾಗವೇ ಆಗಿದ್ದ ಗದಗದಲ್ಲಿ ಟ್ರ್ಯಾಕ್ ನಿರ್ಮಾಣವಾಗಿ ಮೂರ್ನಾಲ್ಕು ವರ್ಷಗಳೇ ಕಳೆದಿವೆ. ನೆರೆಯ ಬೆಳಗಾವಿಯೂ ಸಿಂಥೆಟಿಕ್ ಹೊದಿಕೆ ಹೊದ್ದು ಕುಳಿತಿದೆ. ಆದಾಗ್ಯೂ ಇಲ್ಲಿ ಟ್ರ್ಯಾಕ್ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ.
ವಿಘ್ನಗಳ ಸರಮಾಲೆ: ಒಟ್ಟು 400 ಮೀಟರ್ ಉದ್ದದ 8 ಲೇನ್‌ಗಳುಳ್ಳ ಟ್ರ್ಯಾಕ್‌ನ ಜೊತೆಗೆ ಅಥ್ಲೆಟಿಕ್ ಸ್ಪರ್ಧೆಗಳಿಗೆ ಅಗತ್ಯವಾದ ಸೌಲಭ್ಯಗಳ ನಿರ್ಮಾಣವನ್ನು ಈ ಯೋಜನೆ ಒಳಗೊಂಡಿದೆ. ದೆಹಲಿ ಮೂಲದ ಸಿಮ್‌ಕಾಟ್ ಸಂಸ್ಥೆ ಇದರ ನಿರ್ಮಾಣದ ಗುತ್ತಿಗೆ ಪಡೆದಿದೆ. ಇದಕ್ಕಾಗಿ ಒಟ್ಟು ₨3.69 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ.
ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ 2007ರಿಂದಲೂ ಪ್ರಸ್ತಾವ ಸಲ್ಲಿಸುತ್ತಾ ಬಂದಿದೆ. ಗೂಳಿಹಟ್ಟಿ ಶೇಖರ್ ರಾಜ್ಯದ ಕ್ರೀಡಾ ಸಚಿವರಾಗಿದ್ದ ಸಂದರ್ಭದಲ್ಲಿ ಯೋಜನೆಗೆ ತಾತ್ವಿಕ ಒಪ್ಪಿಗೆ ಸಿಕ್ಕಿತ್ತು. ಆದರೆ ಕಾಮಗಾರಿ ಆರಂಭಗೊಳ್ಳಲಿಲ್ಲ. 2010–11ರಲ್ಲಿ ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಲಾಯಿತು. ಈ ಯೋಜನೆಗೆ ಒಪ್ಪಿಗೆ ಸಿಕ್ಕಿದ್ದು ಮಾತ್ರ 2013ರ ಜನವರಿಯಲ್ಲಿ. ಕಳೆದ ಮಾರ್ಚ್‌ನಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶಿಲಾನ್ಯಾಸ ನೆರವೇರಿಸಿದ್ದರು. ಆರು ತಿಂಗಳ ಒಳಗೆ ಮುಗಿಯಬೇಕಿದ್ದ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಒಂದಲ್ಲ ಒಂದು ಕಾರಣದಿಂದ ಆಗಾಗ್ಗೆ ನಿಂತು ಮುಂದುವರಿಯುತ್ತಿದೆ.
ಕ್ರೀಡಾ ಫೆಡರೇಶನ್‌ನ ನಿಯಮಗಳಿಗೆ ಅನುಗುಣವಾಗಿ ಟ್ರ್ಯಾಕ್ ನಿರ್ಮಿಸಲು ಈಗ ಕ್ರೀಡಾಂಗಣದಲ್ಲಿರುವ ಕೆಲವು ಮೆಟ್ಟಿಲುಗಳನ್ನು ತೆಗೆಯುವುದು ಅವಶ್ಯವಾಗಿತ್ತು. ಆದರೆ ಕ್ರೀಡಾಂಗಣ ಸಮಿತಿಯ ಸದಸ್ಯರು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಮಗಾರಿ ಕೆಲವು ಕಾಲ ವಿಳಂಬವಾಯಿತು. ನಂತರ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿ ಒಪ್ಪಿಗೆ ಪಡೆಯಲಾಯಿತು. ಆದರೆ, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳು ಇದೇ ಮೈದಾನದಲ್ಲಿ ನಡೆಯುವ ಕಾರಣ ಆಗಸ್ಟ್‌ನಲ್ಲಿ ಮತ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ನಂತರ ಮಳೆಯ ನೆಪವೊಡ್ಡಿ ಕೆಲಸವನ್ನು ಮುಂದೂಡಲಾಯಿತು.
ಇದೀಗ ಡ್ರೈನ್ ನಿರ್ಮಾಣ ಹಾಗೂ ಟ್ರ್ಯಾಕ್‌ನ ಅಗತ್ಯಕ್ಕೆ ತಕ್ಕ ಎತ್ತರಕ್ಕೆ ಮೈದಾನವನ್ನು ಸಮತಟ್ಟಾಗಿಸುವ ಕಾರ್ಯ ನಡೆದಿದೆ. ಈ ಕಾಮಗಾರಿ ಮುಕ್ತಾಯಗೊಂಡ ಬಳಿಕವಷ್ಟೇ ಸಿಂಥೆಟಿಕ್ ಹೊದಿಕೆ ಹೊದಿಸುವ ಕಾರ್ಯ ಆರಂಭಗೊಳ್ಳಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳುತ್ತಾರೆ. ಮುಂದಿನ ವರ್ಷದ ಕೊನೆಯ ಒಳಗಾದರೂ ಈ ಕಾಮಗಾರಿ ಮುಗಿಯಬಹುದೇ ಎಂಬುದು ಧಾರವಾಡ ಪರಿಸರದ ಅಸಂಖ್ಯ ಕ್ರೀಡಾಪಟುಗಳ ಆಶಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.