ಖಾಸಗಿ ಹೊಟೆಲ್‌ನಲ್ಲಿ ತಂಗಿದ್ದ ಎನ್‌ಸಿಪಿ ಶಾಸಕರು ವಿಧಾನ ಭವನದತ್ತ ಹೊರಟಿದ್ದಾರೆ. ನಾನು ಈ ಹಿಂದೆಯೂ ಎನ್‌ಸಿಪಿಯಲ್ಲಿದ್ದೆ, ಈಗಲೂ ಎನ್‌ಸಿಪಿಯಲ್ಲಿದ್ದೇನೆ, ಮುಂದೆಯೂ ಎನ್‌ಸಿಪಿಯಲ್ಲಿಯೇ ಇರುತ್ತೇನೆ ಎಂದು ಅಜಿತ್ ಪವಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದು, 5 ವರ್ಷಗಳ ಕಾಲವೂ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ. ಕಾಂಗ್ರೆಸ್-ಎನ್‌ಸಿಪಿ-ಶಿವಸೇನಾ ಮಹಾ ಅಘಾಡಿಯಲ್ಲಿ ಮುಖ್ಯಮಂತ್ರಿ ಪದವಿಗೆ ಯಾವುದೇ ರೊಟೇಶನ್ ಇಲ್ಲ ಎಂದು ಶಿವಸೇನಾ ಮುಖಂಡ ಸಂಜಯ್ ರಾವುತ್ ಘೋಷಿಸಿದರು.
ಮಹಾರಾಷ್ಟ್ರದಲ್ಲಿ ನಮ್ಮ ಮಿತ್ರಪಕ್ಷದೊಂದಿಗೆ ಸರ್ಕಾರ ರಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆವು. ಅದು ಸಾಧ್ಯವಾಗದಿದ್ದಾಗ ಮಹಾರಾಷ್ಟ್ರಕ್ಕೆ ಒಂದು ಸರ್ಕಾರ ರಚಿಸುವ ಪ್ರಯತ್ನವನ್ನು ನಾವು ಮಾಡಿದೆವು.
ಶಿವಸೇನಾದೊಂದಿಗೆ ಮಾತುಕತೆಗೆ ಅಥವಾ ಅಧಿಕಾರ ಹಂಚಿಕೆಗೆ ನಾವು ಬಾಗಿಲು ಬಂದ್ ಮಾಡಲಿಲ್ಲ. ಅವರೇ ಬಾಗಿಲು ಹಾಕಿಕೊಂಡಿದ್ದರು. ಈಗ ಅವರು ಕಾಂಗ್ರೆಸ್, ಎನ್‌ಸಿಪಿ ಜೊತೆಗೆ ಇದ್ದಾರೆ. ನಮ್ಮ ಜೊತೆಗೆ ಇಲ್ಲ. –ಪಡಣವೀಸ್
ಜನರ ಆಶೋತ್ತರಗಳು ಮತ್ತು ನಿರೀಕ್ಷೆಗಳನ್ನು ಹೊತ್ತು ನಾವು ಮುಂದೆ ಸಾಗುತ್ತೇವೆ. ಎಂದಿಗೂ ಅದರಿಂದ ಹಿಂದೆ ಸರಿಯುವುದಿಲ್ಲ. –ಫಡಣವೀಸ್
ಕಳೆದ ಐದು ವರ್ಷಗಳಿಂದ ಮಹಾರಾಷ್ಟ್ರದ ಜನತೆ ನಮ್ಮ ಮೇಲೆ ಹರಿಸಿರುವ ಪ್ರೀತಿಯ ಧಾರೆಯಿಂದ ನಾನು ಪುಳಕಿತನಾಗಿದ್ದೇನೆ. ಕಳೆದ ಐದು ವರ್ಷಗಳಲ್ಲಿ ಜನರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಪೂರ್ಣ ಪರಿಶ್ರಮದೊಂದಿಗೆ ಅನುಷ್ಠಾನಕ್ಕೆ ತಂದೆವು. ಈ ಎಲ್ಲ ಹಂತಗಳಲ್ಲಿ ನನಗೆ ಮಹಾರಾಷ್ಟ್ರದ ಜನತೆ ಬೆಂಬಲ ಕೊಟ್ಟರು. ಅವರಿಗೆ ನಾನು ಅಭಾರಿ.
ಮಹಾರಾಷ್ಟ್ರದ ಇತಿಹಾಸದಲ್ಲಿಯೇ ಅತಿ ಹೆಚ್ಚು ಪ್ರಮಾಣದ ಕೇಂದ್ರ ಸರ್ಕಾರದ ಯೋಜನೆ ಮತ್ತು ಅನುದಾನ ಕಳೆದ ಐದು ವರ್ಷಗಳಲ್ಲಿ ಹರಿದುಬಂತು. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. –ಫಡಣವೀಸ್
ಶಿವಸೇನೆ ತನ್ನನ್ನು ತಾನು ಹಿಂದುತ್ವಕ್ಕೆ ಬದ್ಧ ಎಂದು ಹೇಳಿಕೊಳ್ಳುತ್ತೆ. ಆದರೆ ಈಗ ಅದರ ಸಿದ್ಧಾಂತ ಸೋನಿಯಾ ಪದತಲಕ್ಕೆ ಸಮರ್ಪಣೆಯಾಗಿದೆ.
ನಾಳೆ ವಿಶ್ವಾಸಮತ ಯಾಚನೆ ನಡೆಯಲಿದೆ. ನಮ್ಮ ಬಳಿ ಅಷ್ಟು ಸದಸ್ಯ ಬಲ ಇಲ್ಲ ಎಂದು ಅಜಿತ್ ಪವಾರ್ ನನ್ನನ್ನು ಭೇಟಿಯಾಗಿ ಹೇಳಿದರು. ಹೀಗಾಗಿ ನಾನು ರಾಜೀನಾಮೆ ಕೊಡಲು ನಿರ್ಧರಿಸಿದೆ.
ಕುದುರೆ ವ್ಯಾಪಾರವನ್ನು ನಾವು ಒಪ್ಪುವುದೂ ಇಲ್ಲ, ಬೆಂಬಲಿಸುವುದೂ ಇಲ್ಲ. ಹೀಗಾಗಿ ರಾಜೀನಾಮೆ ಕೊಡ್ತೀನಿ. –ಫಡಣವೀಸ್.
ಶಿವಸೇನಾಗೆ ಮುಖ್ಯಮಂತ್ರಿ ಸ್ಥಾನ ಕೊಡ್ತೀವಿ ಅಂತ ನಾವೆಂದೂ ಮಾತು ಕೊಟ್ಟಿರಲಿಲ್ಲ. ಆದರೆ ಫಲಿತಾಂಶ ಪ್ರಕಟವಾದ ದಿನದಿಂದ ಶಿವಸೇನಾ ಇದೇ ಮಾತು ಆಡುತ್ತಾ ಬಂತು. ಶಿವಸೇನಾ ನಾಯಕರ ‘ಮಾತೋಶ್ರೀ’ ಬಾಗಿಲು ಬಿಜೆಪಿಗೆ ಎಂದೂ ತೆರೆಯಲಿಲ್ಲ. ನಮ್ಮೊಡನೆ ಅವರು ಸರಿಯಾಗಿ ಮಾತನ್ನೂ ಆಡಲಿಲ್ಲ. ಆದರೆ ಕಾಂಗ್ರೆಸ್ ಮತ್ತು ಎನ್‌ಸಿಪಿ ನಾಯಕರ ಜೊತೆಗೆ ತಾವಾಗಿಯೇ ಹೊರಗೆ ಹೋಗಿ ಮಾತನಾಡಿದರು. –ಫಡಣವೀಸ್
ಬಿಜೆಪಿ–ಶಿವಸೇನಾ ಮೈತ್ರಿಯ ‘ಮಹಾಯುತಿ’ಗೆ ಮಹಾರಾಷ್ಟ್ರದ ಜನರು ಬಹುಮತ ಕೊಟ್ಟಿದ್ದರು. ನಮ್ಮ ಹಿಂದಿನ ಆಡಳಿತ ಮೆಚ್ಚಿ ಜನರು ನಮಗೆ ಜನಾದೇಶ ಕೊಟ್ಟಿದ್ದರು. ಅದಕ್ಕಾಗಿ ಅವರಿಗೆ ನಾವು ಅಭಾರಿಗಳು. ಬಿಜೆಪಿ ಸ್ಪರ್ಧಿಸಿದ್ದ ಶೇ 70 ಸ್ಥಾನಗಳಲ್ಲಿ ಜಯಗಳಿಸಿದೆ. ಆದರೆ ದುರ್ದೈವದಿಂದ ನಂಬರ್ ಗೇಂನಲ್ಲಿ ನಮಗೆ ಅಧಿಕಾರ ತಪ್ಪಿತು. ಮುಖ್ಯಮಂತ್ರಿ ಸ್ಥಾನಕ್ಕೆ ಆಸೆಪಟ್ಟು ಶಿವಸೇನಾ ಬೇರೆ ಪಕ್ಷದೊಂದಿಗೆ ಈಗ ಮೈತ್ರಿ ಮಾಡಿಕೊಂಡಿದೆ. –ಫಡಣವೀಸ್
ಕಳೆದ ಐದು ವರ್ಷಗಳಲ್ಲಿ ನನ್ನ ಆಡಳಿತ ನನಗೆ ತೃಪ್ತಿ ಕೊಟ್ಟಿದೆ. ರೈತರು, ಗ್ರಾಮೀಣಾಭಿವೃದ್ಧಿ, ನೀರಾವರಿ, ಮುಂಬೈ ಮಹಾನಗರ ಅಭಿವೃದ್ಧಿಯ ವಿಚಾರದಲ್ಲಿ ನಾನು ಮಾಡಿದ ಕೆಲಸ ನನಗೆ ತೃಪ್ತಿ ಕೊಟ್ಟಿದೆ. ನನಗೆ ಅವಕಾಶ ಕೊಟ್ಟಿದ್ದಕ್ಕೆ ಮಹಾರಾಷ್ಟ್ರದ ಜನರಿಗೆ ನಾನು ಅಭಾರಿಯಾಗಿದ್ದೇನೆ. –ಫಡಣವೀಸ್
ನಾವೆಂದೂ ಕುದುರೆ ವ್ಯಾಪಾರವನ್ನು ಉತ್ತೇಜಿಸಿಲ್ಲ, ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ನಾನು ಅಧಿಕಾರದಿಂದ ಪಕ್ಕಕ್ಕೆ ಸರಿಯುತ್ತಿದ್ದೇನೆ. ನಾವು ಸರ್ಕಾರ ರಚಿಸುವುದಿಲ್ಲ. ಬೇರೆ ಯಾರು ಬೇಕಾದರೂ ಸರ್ಕಾರ ರಚಿಸಲಿ. ನಾನು ಶುಭ ಕೋರುತ್ತೇನೆ. ಅವರಿಗೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಷ್ಟೇ ಮುಖ್ಯ. ಆದರೆ ನಾವು ಜನರ ಧ್ವನಿಯಾಗಿ ಕೆಲಸ ಮಾಡ್ತೀವಿ. –ಫಡಣವೀಸ್.
ಅಜಿತ್ ಪವಾರ್ ರಾಜೀನಾಮೆ ಕೊಟ್ಟ ನಂತರ ನಮಗೆ ಬೇರೆ ಮಾರ್ಗವಿಲ್ಲ. ಹೀಗಾಗಿ ನಾನೂ ರಾಜೀನಾಮೆ ಕೊಡುತ್ತಿದ್ದೇನೆ. ಈಗಲೇ ರಾಜ್ಯಪಾಲರ ಬಳಿಗೆ ಹೋಗಿ ರಾಜೀನಾಮೆ ಕೊಡ್ತೀನಿ.
ರಾಜ್ಯಪಾಲರು ಮೊದಲು ನಮಗೆ ಸರ್ಕಾರ ರಚಿಸಲು ಆಹ್ವಾನಿಸಿದರು. ನಂತರ ಶಿವಸೇನಾ, ಎನ್‌ಸಿಪಿಗೆ ಆಹ್ವಾನ ಕೊಟ್ಟರು. ವಿಫಲವಾದ ನಂತರ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದರು.
ಆ ಮೂರೂ ಪಕ್ಷಗಳು ಪ್ರತ್ಯೇಕ ಸಿದ್ಧಾಂತ ಹೊಂದಿವೆ. ಈಗ ಅವರು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಹೆಸರಿನಲ್ಲಿ ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ.
ಇದು ಕನಿಷ್ಠ ಕಾರ್ಯಕ್ರಮವೂ ಅಲ್ಲ, ಗರಿಷ್ಠ ಕಾರ್ಯಕ್ರಮವೂ ಅಲ್ಲ. ಈ ಮೂರು ಪಕ್ಷಗಳು ಒಟ್ಟಿಗೆ ಇರಲು ಸಾಧ್ಯವೂ ಇಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಷ್ಟೇ ಅವರ ಉದ್ದೇಶ.
ನಾವು ಶಿವಸೇನಾಗೆ ಎಂದಿಗೂ ಮುಖ್ಯಮಂತ್ರಿ ಸ್ಥಾನದ ಭರವಸೆ ಕೊಟ್ಟಿರಲಿಲ್ಲ. ನಾವು ಅತಿದೊಡ್ಡ ಪಕ್ಷವಾಗಿದ್ದೆವು. ನಾವು ಶಿವಸೇನಾ ಜೊತೆಗೆ ಮಾತನಾಡಲು ಯತ್ನಿಸಿದೆವು. ಆದರೆ ಅವರು ನಮ್ಮ ಜೊತೆಗೆ ಮಾತನಾಡುತ್ತಿರಲಿಲ್ಲ. ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೆ ಮಾತನಾಡುತ್ತಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾಕ್ಕೆ ಮಹಾರಾಷ್ಟ್ರದ ಜನತೆ ಬಹುಮತ ಕೊಟ್ಟಿದ್ದರು. ಜನರ ಆದೇಶದಂತೆ ಸರ್ಕಾರ ರಚಿಸಲು ನಾವು ಪ್ರಯತ್ನಿಸಿದೆವು. ನಾವು ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ನಮ್ಮ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿತ್ತು. ಶಿವಸೇನಾ ಅಧಿಕಾರಕ್ಕಾಗಿ ಚೌಕಾಸಿ ಆರಂಭಿಸಿತು.
ಫಡಣವೀಸ್ ಸುದ್ದಿಗೋಷ್ಠಿ ಆರಂಭ
ಕಿಕ್ಕಿರಿದು ತುಂಬಿದ ಮಾಧ್ಯಮ ಪ್ರತಿನಿಧಿಗಳು. ಪ್ರಮುಖ ಬಿಜೆಪಿ ನಾಯಕರ ಉಪಸ್ಥಿತಿ. ದೇವೇಂದ್ರ ಫಡಣವೀಸ್ ಆಗಮನಕ್ಕೆ ಕ್ಷಣಗಣನೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮಧ್ಯಾಹ್ನ 3.30ಕ್ಕೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ನಾಳೆಯೇ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ ನಂತರ ಫಡಣವೀಸ್ ಬಿಜೆಪಿಯ ಹಿರಿಯ ನಾಯಕರು ಮತ್ತು ಅಜಿತ್ ಪವಾರ್ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಎನ್‌ಸಿಪಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಮುಂದಿನ 5 ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆ. ಮುಖ್ಯಮಂತ್ರಿ ಸ್ಥಾನದ ಹಂಚಿಕೆ ಕುರಿತು ಯಾವುದೇ ಚರ್ಚೆಯಾಗಿಲ್ಲ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ರಾಜಭವನ, ವಿಧಾನಭವನ ಮತ್ತು ಸಚಿವಾಲಯಗಳ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಸಂಜೆ 5ರವರೆಗೆ ಹಂಗಾಮಿ ಸ್ಪೀಕರ್ ಶಾಸಕರಿಗೆ ಪ್ರಮಾಣ ವಚನ ಬೋಧಿಸಲಿ. ನಂತರ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ನಾಳೆ (ನ.27) ಸಂಜೆ 5 ಗಂಟೆಯ ಒಳಗೆ ವಿಶ್ವಾಸಮತ ಯಾಚಿಸಬೇಕು. ಬಹುಮತ ಯಾಚನೆ ಪ್ರಕ್ರಿಯೆ ಸಂಪೂರ್ಣವಾಗಿ ವಿಡಿಯೊ ಚಿತ್ರಣವಾಗಬೇಕು, ನೇರ ಪ್ರಸಾರವಾಗಬೇಕು. ಗುಪ್ತ ಮತದಾನವಾಗಬಾರದು ಎಂದು ನ್ಯಾಯಪೀಠ ಸೂಚನೆ.
ಬಿಹಾರ ಮತ್ತು ಉತ್ತರಾಖಂಡ ತೀರ್ಪು ಉಲ್ಲೇಖಿಸಿದ ನ್ಯಾಯಮೂರ್ತಿ.
ಮಹಾರಾಷ್ಟ್ರ ಸರ್ಕಾರ ರಚನೆ ಸಂಬಂಧ ತೀರ್ಪು ಓದಲು ಆರಂಭಿಸಿದ ನ್ಯಾಯಮೂರ್ತಿ ಎನ್.ವಿ. ರಮಣ. ‘ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು’ ಎಂಬುದು ತೀರ್ಪಿನ ಮೊದಲ ವಾಕ್ಯ.
ಮಹಾರಾಷ್ಟ್ರ ರಾಜ್ಯಪಾಲರ ಕಾರ್ಯದರ್ಶಿ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೇವೇಂದ್ರ ಫಡಣವೀಸ್ ಪರವಾಗಿ ವಕೀಲ ಮುಕುಲ್ ರೋಹಟಗಿ, ಅಜಿತ್ ಪವಾರ್ ಪರವಾಗಿ ವಕೀಲ ಮಣಿಂದರ್ ಸಿಂಗ್, ಕಾಂಗ್ರೆಸ್ ಪರವಾಗಿ ಕಪಿಲ್ ಸಿಬಲ್ ವಾದ ಮಂಡಿಸಿದ್ದರು.
ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಅಶೋಕ್ ಭೂಷಣ್ ಮತ್ತು ಸಜೀವ್ ಖನ್ನಾ ಅವರನ್ನು ಒಳಗೊಂಡ ನ್ಯಾಯಪೀಠವು ಮಹಾರಾಷ್ಟ್ರ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನಾ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿತು.
ನೀರಾವರಿ ಇಲಾಖೆಯ 9 ಹಗರಣಗಳಲ್ಲಿ ಅಜಿತ್ ಪವಾರ್ ಅವರ ಹೆಸರು ಕೈಬಿಟ್ಟ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ನಿರ್ಧರಿಸಿವೆ.
ಈ ಎಲ್ಲ 9 ಹಗರಣಗಳಲ್ಲಿ ಒಟ್ಟು ₹ 70 ಸಾವಿರ ಅಕ್ರಮ ಎಸಗಿದ ಆರೋಪ ಅಜಿತ್ ಪವಾರ್ ಅವರ ಮೇಲಿತ್ತು.
ತನಿಖೆ ಪೂರ್ಣಗೊಂಡಿರುವ 9 ಪ್ರಕರಣಗಳಿಗೂ ಅಜಿತ್ ಪವಾರ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಭ್ರಷ್ಟಾಚಾರ ತಡೆ ಘಟಕ (ಎಸಿಬಿ) ಸ್ಪಷ್ಟಪಡಿಸಿತ್ತು.
ದೇವೇಂದ್ರ ಫಡಣವೀಸ್ ನೇತೃತ್ವದ ಸರ್ಕಾರ ಇನ್ನೂ ಬಹುಮತ ಸಾಬೀತುಪಡಿಸಿಲ್ಲ. ಹೀಗಾಗಿ ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದು ಮೂರೂ ವಿರೋಧ ಪಕ್ಷಗಳು ಆಕ್ಷೇಪಿಸಿವೆ.
ಎಸಿಬಿ ಕ್ರಮಕ್ಕೆ ತಡೆ ಕೋರುವುದರ ಜೊತೆಗೆ ಫಡಣವೀಸ್ ನೇತೃತ್ವದ ಸರ್ಕಾರಕ್ಕೆ ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳದಂತೆ ನಿರ್ಬಂಧ ವಿಧಿಸಬೇಕು ಎಂದು ವಿರೋಧಪಕ್ಷಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ವಿನಂತಿಸಿವೆ.
ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಜಯಂತ್ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನುವ ಪತ್ರವನ್ನು ವಿಧಾನಸಭೆ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಸ್ವೀಕರಿಸಿದ್ದಾರೆ. ಆದರೆ ಸೂಕ್ತ ನಿರ್ಧಾರವನ್ನು ಸ್ಪೀಕರ್ ತೆಗೆದುಕೊಳ್ಳಬೇಕಿದೆ. ಈವರೆಗೆ ಈ ವಿಚಾರ ಅಂತಿಮಗೊಂಡಿಲ್ಲ ಎಂದು ಭಾಗವತ್ ಹೇಳಿದ್ದಾರೆ.
ಸರ್ಕಾರ ರಚನೆಗೆ ಹಕ್ಕು ಮಂಡಿಸಿ ಮಹಾರಾಷ್ಟ್ರ ರಾಜ್ಯಪಾಲರ ಕಚೇರಿಗೆ ಪತ್ರ ಕೊಟ್ಟ ಶಿವಸೇನಾ, ಕಾಂಗ್ರೆಸ್ ಮತ್ತು ಎನ್‌ಸಿಪಿ.
ನ.26ರ (ಮಂಗಳವಾರ) ಬೆಳಿಗ್ಗೆ 10.30ಕ್ಕೆ ಆದೇಶ ಹೊರಡಿಸುವಾಗಿ ನ್ಯಾಯಪೀಠ ಹೇಳಿದೆ.
ಇನ್ನಷ್ಟು ಸಮಯಾವಕಾಶ ಬೇಕು ಎಂದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ. ‘ನನ್ನ ಬಳಿ ಇನ್ನಷ್ಟು ದಾಖಲೆಗಳಿವೆ. ಅವೆಲ್ಲವನ್ನೂ ಮಂಡಿಸಲು ಸಮಯ ಬೇಕು’ ಎಂದು ವಿನಂತಿಸಿದ ಮೆಹ್ತಾ.
ಕಪಿಲ್ ಸಿಬಲ್: ಸ್ಪೀಕರ್‌ಗೆ ಸದನದಲ್ಲಿರುವ ಎಲ್ಲರ ವಿಶ್ವಾಸ ಸಿಗಬೇಕು ಎನ್ನುವ ಕಾರಣಕ್ಕೇ ತಮ್ಮ ವಿವೇಚನಾಧಿಕಾರವಾದ ‘ಎ 142’ರ ಅನ್ವಯ ಆದೇಶ ಹೊರಡಿಸಬೇಕು ಎಂದು ಕೋರುವೆ.
ಸಿಂಘ್ವಿ: ರೆಗ್ಯುಲರ್ ಸ್ಪೀಕರ್ ಬೇಕೆಂದು ರೋಹಟಗಿ ಏಕೆ ಒತ್ತಾಯಿಸುತ್ತಿದ್ದಾರೆ ಎಂದು ಪ್ರಶ್ನಿಸಬೇಕಿದೆ?
ರೋಹಟಗಿ: ಯಾಕಂದ್ರೆ ಸಂವಿಧಾನದಲ್ಲಿ ಅದಕ್ಕೆ ಅವಕಾಶವಿದೆ.
ಕಪಿಲ್ ಸಿಬಲ್: ಸದನದ ವಿಶ್ವಾಸವನ್ನು ಸ್ಪೀಕರ್ ಒಮ್ಮೆ ಗಳಿಸಿದ ಮೇಲೆ ಶಾಸಕಾಂಗ ಪ್ರಕ್ರಿಯೆಗಳು ಆರಂಭವಾಗುತ್ತವೆ. ಅನಂತರವಷ್ಟೇ ಸಂವಿಧಾನದ 212ನೇ ವಿಧಿ ಊರ್ಜಿತವಾಗುತ್ತದೆ.
ರೋಹಟಗಿ: ಶಿಷ್ಟಾಚಾರಗಳ ಪಾಲನೆ ಸರಿಯಾಗಿ ಆಗಬೇಕು. ಹೀಗಾಗಿ ವಿಶ್ವಾಸಮತ ಯಾಚನೆಯು ಸ್ಪೀಕರ್ ಆಯ್ಕೆಯ ನಂತರವೇ ನಡೆಯಬೇಕು. ಇದು ನಾಳೆ ಆಥವಾ ನಾಡಿದ್ದು ನಡೆಯಲು ಸಾಧ್ಯವಿಲ್ಲ. ಸರಿಯಾದ ಕ್ರಮವನ್ನೇ ಜರುಗಿಸಬೇಕಿದೆ.
ಮುಕುಲ್ ರೋಹಟಗಿ: ಈಗ ಆಗಬೇಕಿರುವ ಮುಖ್ಯ ಕೆಲಸಗಳು.
1) ಹಂಗಾಮಿ ಸ್ಪೀಕರ್ ನೇಮಕ
2) ಪ್ರತಿಜ್ಞಾ ವಿಧಿ
3) ಸ್ಪೀಕರ್ ಚುನಾವಣೆ
4) ಅಜೆಂಡಾ
ರೋಹಟಗಿ: ರಾಜ್ಯಪಾಲರು ವಿಶ್ವಾಸಮತ ಯಾಚನೆಗೆ 14 ದಿನಗಳ ಅವಕಾಶ ನೀಡಿದ್ದಾರೆ. ಯಾವುದೇ ಅಕ್ರಮಗಳು ನಡೆಯದಿದ್ದಾಗ, ಅದನ್ನು ನ್ಯಾಯಾಲಯವು ಮೂರ್ನಾಲ್ಕು ದಿನಗಳಿಗೆ ಇಳಿಸಲು ಸಾಧ್ಯವೇ? ಸಂವಿಧಾನದ 212ನೇ ವಿಧಿಗೆ ಇದು ವಿರುದ್ಧವಲ್ಲವೇ? (ಸಂವಿಧಾನದ 212ನೇ ವಿಧಿಯ ಪ್ರಕಾರ ನ್ಯಾಯಾಲಯಗಳು ಶಾಸಕಾಂಗದ ಕಲಾಪಗಳ ವಿಚಾರಣೆ ನಡೆಸುವಂತಿಲ್ಲ).
ರೋಹಟಗಿ ಪೂರಕ ವಾದ ಮಂಡನೆ ಆರಂಭ. ವಿಧಾನಸಭೆಯ ನಿಯಮಗಳನ್ನು ಸಂವಿಧಾನವೇ ರೂಪಿಸಿದೆ.
ಪ್ರಜಾಪ್ರಭುತ್ವದ ಪಾವಿತ್ರ್ಯವನ್ನು ಕಾಪಾಡುವ ಉದ್ದೇಶದಿಂದ ನ್ಯಾಯಾಲಯವು ಈ ಹಿಂದೆ ಹಲವು ತೀರ್ಪುಗಳನ್ನು ನೀಡಿದೆ. ಅದರಂತೆ ವಿಶ್ವಾಸಮತ ಯಾಚನೆಯು 24 ಗಂಟೆಗಳ ಒಳಗೆ ನಡೆಬೇಕು. –ಸಿಂಘ್ವಿ.
ಹೇಗೆ ಸದನದಲ್ಲಿ ಬಹುಮತ ಪರೀಕ್ಷೆ ನಡೆಯಲಿದೆ ಎನ್ನುವುದು ಈಗ ಬಹಳ ಮುಖ್ಯವಾಗುತ್ತೆ. ಯಾವ ಪಕ್ಷ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳದೇ, ಸದನದ ಅತಿ ಹಿರಿಯ ಸದಸ್ಯರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಬೇಕು. ಅದಾದ ನಂತರ ತಕ್ಷಣ ವಿಶ್ವಾಸಮತ ಯಾಚನೆ ಕಲಾಪ ನಡೆಯಬೇಕು. ‘ತಕ್ಷಣ’ ಎನ್ನುವುದು ಬಹುಮುಖ್ಯ. –ಅಭಿಷೇಕ್ ಮನು ಸಿಂಘ್ವಿ
ಎನ್‌ಸಿಪಿ ಪರ ವಾದ ಮಂಡನೆ ಆರಂಭಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ.
ಎನ್‌ಸಿಪಿಯ 54 ಶಾಸಕರ ಸಹಿಯ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಆದರೆ ಏತಕ್ಕೆ ಸಹಿ ಮಾಡುತ್ತಿದ್ದೇವೆ ಎನ್ನುವ ವಿಚಾರವನ್ನು ಶಾಸಕರಿಂದ ಮುಚ್ಚಿಟ್ಟಿರಬಹುದು. ಇದು ಪ್ರಜಾಪ್ರಭುತ್ವದ ಕಗ್ಗೊಲೆ.
ಬಿಜೆಪಿ ಮತ್ತು ಶಿವಸೇನಾ ನಡುವಣ ಚುನಾವಣಾ ಪೂರ್ವ ಮೈತ್ರಿ ಮುರಿದ ನಂತರವೇ ನಾವು ಸರ್ಕಾರ ರಚನೆಗೆ ಪರ್ಯಾಯ ಪ್ರಯತ್ನ ಆರಂಭಿಸಿದ್ದು. ಇಂದು ಅಜಿತ್ ಪವಾರ್ ತಮಗೆ 54 ಎನ್‌ಸಿಪಿ ಶಾಸಕರ ಬೆಂಬಲ ಇದೆ ಎಂದು ಹೇಳುತ್ತಿದ್ದಾರೆ. ಆದರೆ ಅವರನ್ನು ಆ ಸ್ಥಾನದಿಂದ ತೆಗೆದುಹಾಕಲಾಗಿದೆ. ಅವರಿಗೆ ಬಹುಮತವಿದ್ದರೆ ಅದನ್ನು ಸದನದಲ್ಲಿ ಸಾಬೀತುಪಡಿಸಲಿ. –ಕಪಿಲ್ ಸಿಬಲ್
ಪರಸ್ಪರ ವಿಶ್ವಾಸ ಮತ್ತು ಭರವಸೆಗಳು ಉಳಿಯದ ಕಾರಣ ಬಿಜೆಪಿ–ಶಿವಸೇನಾ ಮೈತ್ರಿ ಮುರಿಯಿತು. ಅದಕ್ಕೂ ಎನ್‌ಸಿಪಿ ಅಥವಾ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ. –ಕಪಿಲ್ ಸಿಬಲ್.
ಶುಕ್ರವಾರ ರಾತ್ರಿ 7ರಿಂದ ಶನಿವಾರ ನಸುಕಿನ 5 ಗಂಟೆಯ ನಡುವೆ ಎಲ್ಲವೂ ನಡೆದುಹೋಯಿತು. ಮೂರು ಪಕ್ಷಗಳ ಮೈತ್ರಿಕೂಟ (ಎನ್‌ಸಿಪಿ, ಕಾಂಗ್ರೆಸ್, ಶಿವಸೇನಾ) ಅಧಿಕಾರಕ್ಕೆ ಬರುವುದನ್ನು ತಡೆಯಲೆಂದು ಇಷ್ಟೆಲ್ಲಾ ಆಯಿತು. –ಕಪಿಲ್ ಸಿಬಲ್.
ಅಷ್ಟೊಂದು ಕಾದಿದ್ದ ರಾಜ್ಯಪಾಲರಿಗೆ ಶನಿವಾರ ಮುಂಜಾನೆ 5.47ಕ್ಕೆ ರಾಷ್ಟ್ರಪತಿ ಆಡಳಿತ ತೆಗೆದುಹಾಕಲು ಆತುರವೇನಿತ್ತು. ಅಷ್ಟೆಲ್ಲಾ ತರಾತುರಿಯಿಂದ ಹೊಸ ಸರ್ಕಾರಕ್ಕೆ ಅಧಿಕಾರ ಏಕೆ ಕೊಡಬೇಕಿತ್ತು? –ಕಪಿಲ್ ಸಿಬಲ್.
ಶುಕ್ರವಾರ ಮತ್ತು ಶನಿವಾರ ನಡೆದ ಘಟನಾವಳಿಗಳನ್ನು ವಿವರಿಸಿದ ಅಘಾಡಿ ಪರ ವಕೀಲ ಕಪಿಲ್ ಸಿಬಲ್. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಘೋಷಣೆ ಮತ್ತು ಪ್ರಮಾಣ ವಚನದ ವಿಚಾರವನ್ನೂ ಪ್ರಸ್ತಾಪಿಸಿದ ಕಪಿಲ್ ಸಿಬಲ್.
‘ನ್ಯಾಯಾಲಯವು ರಾಜ್ಯಪಾಲರಿಗೆ ನಿರ್ದೇಶನ ನೀಡಬಹುದೇ?’ ಮುಕುಲ್ ರೋಹಟಗಿ ಪ್ರಶ್ನೆ.
ಸಮರ್ಪಕ ದಾಖಲೆಗಳನ್ನು ಸಲ್ಲಿಸಿದ ನಂತರವೂ (54 ಎನ್‌ಸಿಪಿ ಶಾಸಕರ ಸಹಿ) ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆಯೇ? ಈ ದಾಖಲೆಗಳನ್ನು ಪ್ರಶ್ನಿಸುವ ಯಾವುದೇ ದಾಖಲೆಗಳು ಸಲ್ಲಿಕೆಯಾಗಿಲ್ಲ. –ಮಣಿಂದರ್ ಸಿಂಗ್ (ಅಜಿತ್ ಪವಾರ್)
ನಾನು (ಅಜಿತ್ ಪವಾರ್) ಎನ್‌ಸಿಪಿ ನಾಯಕನಾಗಿ ನನ್ನ ಕರ್ತವ್ಯ ನಿರ್ವಹಿಸಿದೆ. ನ.22ರಂದು ನಾನು ಎನ್‌ಸಿಪಿ ನಾಯಕನಾಗಿರಲಿಲ್ಲ ಎಂದು ಹೇಳಲು ಯಾವುದೇ ದಾಖಲೆಗಳಿಲ್ಲ. –ಮಣಿಂದರ್ ಸಿಂಗ್
ಅಜಿತ್ ಪವಾರ್ ಪರವಾಗಿ ವಕೀಲ ಮಣಿಂದರ್ ಸಿಂಗ್ ವಾದ ಮಂಡನೆ.
‘ನಾವೂ ಹೇಗೋ ಬಹುಮತ ಒಟ್ಟು ಮಾಡಿಬಿಟ್ಟಿದ್ದೇವೆ, 24 ಗಂಟೆಗಳ ಒಳಗೆ ಬಹುಮತ ಸಾಬೀತುಪಡಿಸದಿದ್ದರೆ ಅವರೆಲ್ಲಾ ದೂರಾಗುತ್ತಾರೆ ಎಂದು ಯಾರಾದರೂ ಹೇಳಲು ಸಾಧ್ಯವೇ?’ –ತುಷಾರ್ ಮೆಹ್ತಾ ವಾದ.
ಬಹುಮತ ಸಾಬೀತಿಗೆ ಮೊದಲು ಹಂಗಾಮಿ ಸ್ಪೀಕರ್ ಆಯ್ಕೆಯಾಗಬೇಕು. ಅವರು ಶಾಸಕರಿಗೆ ಪ್ರತಿಜ್ಞಾ ವಿಧಿ ಬೋಧಿಸಬೇಕು. ನಂತರ ಸ್ಪೀಕರ್ ಚುನಾವಣೆ ನಡೆಯಬೇಕು. ಅವರು ಬಹುಮತ ಸಾಬೀತು ಪಡಿಸಲು ದಿನಾಂಕ ನಿಗದಿಪಡಿಸಬೇಕು. –ರೋಹಟಗಿ
ಬೆಂಬಲ ನೀಡಿರುವ ಶಾಸಕರ ಪತ್ರದೊಂದಿಗೆ ಫಡಣವೀಸ್ ರಾಜ್ಯಪಾಲರನ್ನು ಭೇಟಿಯಾಗಿದ್ದರು. ತಮ್ಮ ಎದುರು ಇದ್ದ ದಾಖಲೆಯನ್ನು ಆಧರಿಸಿ ರಾಜ್ಯಪಾಲರು ತೀರ್ಮಾನ ತೆಗೆದುಕೊಂಡಿದ್ದಾರೆ. ನಿನ್ನೆ ಇಲ್ಲಿ ‘ರಾಜ್ಯಪಾಲರು ಹೀಗೆ ಹೇಗೆ ನಡೆದುಕೊಳ್ಳಲು ಸಾಧ್ಯ’ ಎಂಬ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಈಗ ಉತ್ತರ ಸಿಕ್ಕಿರಬಹುದು. –ಮುಕುಲ್ ರೋಹಟಗಿ
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಪರ ವಕೀಲ ಮುಕುಲ್ ರೋಹಟಗಿ ವಾದ ಮಂಡನೆ ಅರಂಭ.
ಮಹಾರಾಷ್ಟ್ರ ರಾಜ್ಯಪಾಲರು ಬಿಜೆಪಿ ಸರ್ಕಾರ ರಚಿಸಲು ಅವಕಾಶ ಕೊಟ್ಟು, ಬಹುಮತ ಸಾಬೀತಿಗೆ ನವೆಂಬರ್ 30ರವರೆಗೆ ಗಡುವು ನೀಡಿದ್ದಾರೆ. ಆದರೆ ಈಗ ಕೇವಲ 24 ಗಂಟೆಗಳಲ್ಲಿ ಬಹುಮತ ಯಾಚಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. –ತುಷಾರ್ ಮೆಹ್ತಾ
ಸರ್ಕಾರ ರಚನೆಗೆ ಹಕ್ಕು ಮಂಡಿಸಿ ದೇವೇಂದ್ರ ಫಡಣವೀಸ್ ರಾಜ್ಯಪಾಲರಿಗೆ ನೀಡಿದ ಪತ್ರವನ್ನು ನ್ಯಾಯಾಲಯದಲ್ಲಿ ಓದಿದ ತುಷಾರ್ ಮೆಹ್ತಾ. ಬಿಜೆಪಿಗೆ ಬೆಂಬಲ ಘೋಷಿಸಿದ ಎನ್‌ಸಿಪಿಯ 54 ಶಾಸಕರ ಉಲ್ಲೇಖವೂ ಪತ್ರದಲ್ಲಿದೆ.
ಅಜಿತ್ ಪವಾರ್‌ರನ್ನು ಎನ್‌ಸಿಪಿ ನಾಯಕರಾಗಿ ಆಯ್ಕೆ ಮಾಡಿದ ಎನ್‌ಸಿಪಿಯ 54 ಚುನಾಯಿತ ಶಾಸಕರ ಹೆಸರಿರುವ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ತುಷಾರ್ ಮೆಹ್ತಾ. ಬಿಜೆಪಿಗೆ ಎನ್‌ಸಿಪಿ ಬೆಂಬಲ ಘೋಷಿಸಿದೆ ಎಂದು ವಾದ ಮಂಡನೆ.
‘ಮಹಾರಾಷ್ಟ್ರ ರಾಜ್ಯಪಾಲರ ಕಾರ್ಯದರ್ಶಿ ಪರವಾಗಿ ನಾನು ವಾದ ಮಂಡಿಸುತ್ತಿದ್ದೇನೆ’ –ತುಷಾರ್ ಮೆಹ್ತಾ
ನವೆಂಬರ್ 22ರಂದು ಅಜಿತ್ ಪವಾರ್ ಬಿಜೆಪಿ ಬೆಂಬಲಿಸಿ ಪತ್ರ ನೀಡಿದ್ದಾರೆ. ಈ ಪತ್ರದಲ್ಲಿ ಚುನಾಯಿತ ಎನ್‌ಸಿಪಿ ಶಾಸಕರು ನನ್ನನ್ನು ಎನ್‌ಸಿಪಿ ಮುಖ್ಯಸ್ಥನನ್ನಾಗಿ ಆರಿಸಿದ್ದಾರೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡನೆ ಆರಂಭ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೂ ಮುನ್ನ ನಡೆದ ಘಟನಾವಳಿಗಳ ವಿವರಣೆ.
ಕಾಂಗ್ರೆಸ್, ಶಿವಸೇನಾ ಮತ್ತು ಎನ್‌ಸಿಪಿ ರಚಿಸಿಕೊಂಡಿರುವ ಮಹಾ ಅಘಾಡಿ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನುಸಿಂಘ್ವಿ ವಾದ ಮಂಡನೆ. ಬಿಜೆಪಿ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ಉಪಸ್ಥಿತಿ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಉಪಸ್ಥಿತಿ.
ನ್ಯಾಯಮೂರ್ತಿ ಎನ್.ವಿ.ರಮಣ, ಅಶೋಕ್ ಭೂಷಣ್ ಮತ್ತು ಸಂಜೀವ್ ಖನ್ನಾ ಅವರಿದ್ದ ನ್ಯಾಯಪೀಠ ವಿಚಾರಣೆ ಅರಂಭಿಸಿದೆ. ನ್ಯಾಯಮೂರ್ತಿ ಎನ್.ವಿ.ರಮಣ ಪೀಠದ ಮುಖ್ಯಸ್ಥರಾಗಿದ್ದಾರೆ.
ನ್ಯಾಯಾಲಯಕ್ಕೆ ನ್ಯಾಯಮೂರ್ತಿಗಳು ಮತ್ತು ವಕೀಲರ ಆಗಮನ. ಕಲಾಪ ಆರಂಭ.
ಸರ್ಕಾರ ರಚಿಸಲು ಬೇಕಾದಷ್ಟು ಶಾಸಕರ ಬೆಂಬಲ ಇದೆ ಎಂದು ಫಡಣವೀಸ್ ಅವರು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಸಲ್ಲಿಸಿದ್ದ ಪತ್ರ ಮತ್ತು ಸರ್ಕಾರ ರಚನೆಗೆ ಫಡಣವೀಸ್ ಅವರಿಗೆ ರಾಜ್ಯಪಾಲರು ನೀಡಿದ್ದ ಅಹ್ವಾನಪತ್ರಗಳನ್ನು ಸೋಮವಾರ ಬೆಳಿಗ್ಗೆ 10.30ರೊಳಗೆ ಸಲ್ಲಿಸುವಂತೆ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠವು ಭಾನುವಾರ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.