ಇಂದು ರಾತ್ರಿ 12 ಗಂಟೆಯಿಂದ ಮೂರು ವಾರಗಳ ಅವಧಿಗೆ ದೇಶವ್ಯಾಪಿ ಲಾಕ್‌ಡೌನ್ ಘೋಷಿಸುತ್ತಿದ್ದೇನೆ.
ನಾವು ಮುನ್ನೆಚ್ಚರಿಕೆ ವಹಿಸದಿದ್ದರೆ ಏನಾಗುತ್ತೆ ಎಂಬುದನ್ನು ಊಹಿಸಲೂ ಆಗುವುದಿಲ್ಲ. ಕಳೆದ ಎರಡು ದಿನಗಳಿಂದ ದೇಶದ ಹಲವು ಭಾಗಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ರಾಜ್ಯ ಸರ್ಕಾರಗಳ ಈ ಘೋಷಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ದೇಶ ಇಂದು ಮಹತ್ವಪೂರ್ಣ ನಿರ್ಣಯ ತೆಗೆದುಕೊಂಡಿದೆ.
ದೇಶದ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿತ್ತು. ನಾವು ಈ 21 ದಿನಗಳನ್ನು ಸರಿಯಾಗಿ ಸಂಭಾಳಿಸದಿದ್ದರೆ ಇಡೀ ದೇಶ ಹಿಂದಕ್ಕೆ ಹೋಗುತ್ತದೆ.
ಕೊರೊನಾದಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಉಪಾಯ ಅಂದ್ರೆ ಮನೆಯಲ್ಲಿಯೇ ಉಳಿಯುವುದು. ಅಮೆರಿಕ, ಇಟಲಿ ಸೇರಿದಂತೆ ಜಗತ್ತಿನ ಹಲವು ದೇಶಗಳ ಜನರಿಗೆ ಈಗ ಈ ವಿಷಯ ಅರ್ಥವಾಗಿದೆ. ಅವರು ಸರ್ಕಾರದ ಆದೇಶ ಒಪ್ಪಿಕೊಂಡಿದ್ದಾರೆ.
ನನ್ನ ಭಾರತೀಯ ಸೋದರರು ಈ ವಿಷಮ ಪರಿಸ್ಥಿತಿಯಲ್ಲಿ ಸರ್ಕಾರದ ಜೊತೆಗೆ ನಿಲ್ಲುತ್ತಾರೆ ಎಂಬ ಭರವಸೆಯಿದೆ. ದಯವಿಟ್ಟು ಮನೆಬಿಟ್ಟು ಹೊರಗೆ ಬರಬೇಡಿ. ಜೀವ ಇದ್ದರೆ ಜಗತ್ತು ಇರುತ್ತೆ (ಜಾನ್ ಹೇ ತೋ ಜಹಾನ್ ಹೇ) ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.
ಏನು ಬೇಕಾದರೂ ಆಗಲಿ ನೀವು ಮನೆಯಲ್ಲಿಯೇ ಇರಬೇಕು. ಪ್ರಧಾನಿಯಿಂದ ಹಳ್ಳಿಯ ಸಣ್ಣ ನಾಗರೀಕನವರೆಗೆ ಎಲ್ಲರಿಗೂ ಸಾಮಾಜಿಕ ಅಂತರ ಅನಿವಾರ್ಯ. ಮನೆಯ ಲಕ್ಷ್ಮಣ ರೇಖೆಯನ್ನು ಉಲ್ಲಂಘಿಸಬೇಡಿ.
ಈ ಕಠಿಣ ಪರಿಸ್ಥಿತಿಯಲ್ಲಿಯೂ ಸಫಾಯಿ ಕರ್ಮಚಾರಿಗಳು ಇನ್ನೊಬ್ಬರ ಬದುಕು ಉಳಿಸಲು ಕೆಲಸ ಮಾಡುತ್ತಿದ್ದಾರೆ. ದೇಶವನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿದ್ದಾರೆ. ಅಂಥವರನ್ನು ಗೌರವಿಸಿ.
ಜಾನ್ ಹೇ ತೋ ಜಹಾನ್ ಹೇ. ನಾನು ನಿಮ್ಮನ್ನು ಕೈಜೋಡಿಸಿ ಪ್ರಾರ್ಥಿಸುತ್ತೇನೆ. ನೀವು ಮನೆಯಲ್ಲಿರಿ. ಈ ಸಂಕಷ್ಟ ಪರಿಸ್ಥಿತಿಯಲ್ಲಿಯೂ ನಿಮಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ನರ್ಸ್, ಪ್ಯಾರಾ ಮೆಡಿಕಲ್ ಸ್ಟಾಫ್, ಪ್ಯಾಥಲಜಿಸ್ಟ್‌ಗಳ ಪರಿಶ್ರಮವನ್ನು ಅಭಿನಂದಿಸಿ, ಗೌರವಿಸಿ.
ಎಲ್ಲ ರಾಜ್ಯ ಸರ್ಕಾಗಳಿಗೂ ಈಗ ಆರೋಗ್ಯವೇ ಮುಖ್ಯವಾಗಬೇಕು. ದೇಶದ ಖಾಸಗಿ ಆಸ್ಪತ್ರೆ, ಪ್ರಯೋಗಾಲಯಗಳೂ ಸರ್ಕಾರಗಳ ಜೊತೆಗೆ ಕೈಜೋಡಿಸಿವೆ. ಇದು ಶ್ಲಾಘನೀಯ ಸಂಗತಿ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನಗಳನ್ನು ಪೂರ್ಣವಾಗಿ ಪಾಲಿಸಿ. ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿ ತೆಗೆದುಕೊಳ್ಳಬೇಡಿ. ನೀವು ತೆಗೆದುಕೊಳ್ಳುವ ತಪ್ಪು ಔಷಧಿ ನಿಮ್ಮ ಜೀವಕ್ಕೆ ಆಪತ್ತು ತರಬಬಹುದು.
ದೇಶದ ಎಲ್ಲ ಭಾರತೀಯರು ಸರ್ಕಾರ, ಸ್ಥಳೀಯ ಆಡಳಿತಗಳ ಜೊತೆಗೆ ಸ್ಪಂದಿಸಬೇಕು. ಈ 21 ದಿನದ ಲಾಕ್‌ಡೌನ್ ನಿಮ್ಮ ಜೀವ ಸಂರಕ್ಷಣೆಗೆ ಅತ್ಯಗತ್ಯ. ದೇಶದ ಎಲ್ಲ ಜನರೂ ಈ ಸಂಕಟವನ್ನು ಆತ್ವವಿಶ್ವಾಶದಿಂದ ಎದುರಿಸಿ, ಗೆದ್ದು ಬರುತ್ತಾರೆ ಎಂಬ ವಿಶ್ವಾಸ ಅತ್ಯಗತ್ಯ.
ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 15 ಸಾವಿರ ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಘೋಷಿಸುತ್ತಿದೆ. ಈ ಹಣದಿಂದ ಎಲ್ಲ ಅಗತ್ಯ ಸಾಧನಗಳನ್ನು ಖರೀದಿಸಲಾಗುವುದು. ಜೊತೆಜೊತೆಗೆ ಮೆಡಿಕಲ್ ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗುವುದು.
ಅವಶ್ಯ ವಸ್ತುಗಳ ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಬಡವರ ಸಂಕಷ್ಟ ಕಡಿಮೆ ಮಾಡಲು ಸಂಘಸಂಸ್ಥೆಗಳ ಜೊತೆಗೆ ಸರ್ಕಾರಗಳು ಕೆಲಸ ಮಾಡುತ್ತಿವೆ. ಜೀವನವನ್ನು ಬದುಕಲು ಅಗತ್ಯವಿರುವುದನ್ನು ಎಲ್ಲ ರೀತಿಯ ಪ್ರಯತ್ನದಿಂದ ನಾವು ಮಾಡಬೇಕು. ಜೀವ ಉಳಿಸಲು ಅಗತ್ಯವಿರುವುದಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಕೊಡಲೇ ಬೇಕು.
ಮಾಧ್ಯಮ ಪ್ರತಿನಿಧಿಗಳ ಬಗ್ಗೆಯೂ ಯೋಚಿಸಿ. ಅವರು ಸಂಕಷ್ಟ ಪರಿಸ್ಥಿತಿಯಲ್ಲಿಯೂ ಆಸ್ಪತ್ರೆಗಳಿಗೆ ಹೋಗ್ತಿದ್ದಾರೆ. ಪೊಲೀಸರು ತಮ್ಮ ಕುಟುಂಬಗಳನ್ನು ಮರೆತು ಹಗಲಿರುಳು ಶ್ರಮಿಸುತ್ತಿದ್ದಾರೆ. ಕೆಲವೊಮ್ಮೆ ಅವರು ಹೊಡೆಯಬಹುದು. ಆದರೆ ಅವರ ಉದ್ದೇಶ ಅರ್ಥ ಮಾಡಿಕೊಳ್ಳಿ.
ಕೊರೊನಾ ಕೊಂಡಿಯನ್ನು ತುಂಡರಿಸಬೇಕಿದೆ. ಭಾರತದಲ್ಲಿ ಈಗ ಕೊರೊನಾ ಪ್ರಭಾವ ಎಷ್ಟು ಸಾಧ್ಯವೋ ಅಷ್ಟೂ ಕಡಿಮೆ ಮಾಡಬೇಕಿದೆ. ಈ ಸಮಯದಲ್ಲಿ ನಾವು ಪ್ರತಿ ಹೆಜ್ಜೆಯಲ್ಲಿಯೂ ಸಂಯಮ ಪಾಲಿಸಬೇಕಿದೆ.
ಕೊರೊನಾ ಹರಡುವುದನ್ನು ತಡೆಯುವುದು ಅನಿವಾರ್ಯ. ಇಟಲಿ ಅಥವಾ ಅಮೆರಿಕದ ಅತ್ಯಾಧುನಿಕ ಆಸ್ಪತ್ರೆಗಳು ವಿಶ್ವದಲ್ಲಿಯೇ ಅತ್ಯುತ್ತಮವಾಗಿವೆ. ಅದರೂ ಅವಕ್ಕೆ ಕೊರೊನಾದ ಪ್ರಭಾವ ಕಡಿಮೆ ಮಾಡಲು ಆಗಲಿಲ್ಲ.
ಜಗತ್ತಿನಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ 1 ಲಕ್ಷ ಮುಟ್ಟಲು 66 ದಿನ ಬೇಕಾಯಿತು. ಇದಾದ 11 ದಿನಗಳಲ್ಲಿ ಇನ್ನೂ 2 ಲಕ್ಷ ಜನರಿಗೆ ಸೋಂಕು ತಗುಲಿತು. 4 ದಿನಗಳಲ್ಲಿ 4 ಲಕ್ಷ ಜನರಿಗೆ ಸೋಂಕು ಹರಡಿತು.
ಕೊರೊನಾ ತಡೆಗೆ ಒಂದೇ ಮಂತ್ರ. ಬ್ಯಾನರ್ ಪ್ರದರ್ಶಿಸಿದ ಮೋದಿ. ಕೊರೊನಾ ಎಂದರೆ ಯಾರೂ ರೋಡ್ ಮೇಲೆ ಬರುವಂತಿಲ್ಲ ಎಂದು ಅರ್ಥ. (ಕೊರೊನಾ: ಕೋಯಿ ರೋಡ್ ಪರ್ ನ ನಿಕ್ಲೆ)
ಮನೆ ಮುಂದೆ ಲಕ್ಷ್ಮಣ ರೇಖೆ ಹಾಕಿಕೊಳ್ಳಿ. ಅದನ್ನು ದಾಟಬೇಡಿ. ಕೊರೊನಾ ಸೋಂಕಿತ ವ್ಯಕ್ತಿ ಬೀದಿಗೆ ಬರಬಹುದು. ಆತ ಸೋಂಕಿತ ಎಂಬುದು ತಕ್ಷಣಕ್ಕೆ ತಿಳಿಯುವುದಿಲ್ಲ. ಹೀಗಾಗಿ ಮನೆಯಲ್ಲಿಯೇ ಕ್ಷೇಮವಾಗಿರಿ.
ದೇಶದಲ್ಲಿ ನೀವು ಎಲ್ಲಿಯೇ ಇದ್ದರೂ ಅಲ್ಲಿಯೇ ಇರಿ. ಈ ಲಾಕ್‌ಡೌನ್ 21 ದಿನ ಇರುತ್ತೆ. ನೀವು ಹೊರಗೆ ಹೋಗುವುದನ್ನು ಮರೆತುಬಿಡಿ.
ದೇಶ ಇಂದು ಮಹತ್ವಪೂರ್ಣ ನಿರ್ಣಯ ತೆಗೆದುಕೊಂಡಿದೆ. ಇಂದು ರಾತ್ರಿ 12 ಗಂಟೆಯಿಂದ ಪೂರ್ತಿ ದೇಶದಲ್ಲಿ ಲಾಕ್‌ಡೌನ್ ಘೋಷಿಸುತ್ತಿದ್ದೇನೆ. ಇದು ಕರ್ಫ್ಯೂ ಥರವೇ ಇರುತ್ತೆ. ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡ್ತೀವಿ.
ಸೋಷಿಯಲ್ ಡಿಸ್ಟೆನ್ಸಿಂಗ್ ಕೇವಲ ಕಾಯಿಲೆಯಿರುವವರಿಗೆ ಬೇಕು ಎಂದು ಯೋಚಿಸುವುದು ತಪ್ಪು. ಸಾಮಾಜಿಕ ಅಂತರವನ್ನು ಎಲ್ಲ ನಾಗರಿಕರು ಪಾಲಿಸಬೇಕು. ಅದು ಪ್ರಧಾನಿಯೂ ಸೇರಿದಂತೆ ಎಲ್ಲ ದೇಶವಾಸಿಗಳಿಗೂ ಅನ್ವಯವಾಗುತ್ತೆ.
ಕೊರೊನಾ ವೈರಸ್ ಹರಡುವುದನ್ನು ತಡೆಯಲು ಒಂದೇ ದಾರಿಯಿದೆ. ಅದು ಸಾಮಾಜಿಕ ಅಂತರ (ಸೋಷಿಯಲ್ ಡಿಸ್ಟೆನ್ಸಿಂಗ್). ಅಂದರೆ ಒಬ್ಬರು ಇನ್ನೊಬ್ಬರಿಂದ ಅಂತರ ಕಾಯ್ದುಕೊಳ್ಳುವುದು. ಮನೆಯಲ್ಲಿಯೇ ಉಳಿದುಕೊಳ್ಳುವುದು. ಕೊರೊನಾದಿಂದ ಉಳಿದುಕೊಳ್ಳಲು ಇದು ಬಿಟ್ಟು ಬೇರೆ ದಾರಿಯಿಲ್ಲ.
ಜನತಾ ಕರ್ಫ್ಯೂ ಮೂಲಕ ದೇಶಕ್ಕೆ ಸಂಕಟ ಒದಗಿದಾಗ ನಾವೆಲ್ಲರೂ ಒಂದಾಗಿ ನಿಲ್ಲಬಲ್ಲೆವು ಎಂಬುದನ್ನು ಸಾಧಿಸಿ ತೋರಿಸಿದಿರಿ.
ಈ ಹಿಂದೆ ಒಮ್ಮೆ ನಿಮ್ಮೆದುರು ನಾನು ಮಾತನಾಡಿದ್ದೆ. ನನ್ನ ಮಾತಿಗೆ ಬೆಲೆ ಕೊಟ್ಟು ಮಾರ್ಚ್ 22ರಂದು ನೀವು ಸ್ವಯಂಪ್ರೇರಿತ ಕರ್ಫ್ಯೂ ಆಚರಿಸಿ ಸಹಕರಿಸಿದಿರಿ.
ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಆರಂಭ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.