ADVERTISEMENT

ಮಾದಕ ಬಾಹುಗಳ ಆಕ್ಟೋಪಸ್: ಕೊಳೆಗೇರಿಯಿಂದ ತಾರಾಲೋಕದವರೆಗೂ ಆವರಿಸಿರುವ ಡ್ರಗ್ಸ್‌

ಗುಡಿಸಲಿನಿಂದ ತಾರಾಲೋಕದವರೆಗೂ ಆವರಿಸಿರುವ ಡ್ರಗ್ಸ್‌

ಗಿರೀಶದೊಡ್ಡಮನಿ
Published 12 ಸೆಪ್ಟೆಂಬರ್ 2020, 19:24 IST
Last Updated 12 ಸೆಪ್ಟೆಂಬರ್ 2020, 19:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ರಾಜಸ್ಥಾನದ ಬುಡಕಟ್ಟು ಜನಾಂಗದ ಆತ ಹದಿನೈದನೇ ವಯಸ್ಸಿನಲ್ಲಿಯೇ ಸಿಗರೇಟ್ ಮತ್ತು ಸಾರಾಯಿಯ ರುಚಿ ನೋಡಿದ. ಮುಂದೆ ಏಳೆಂಟು ವರ್ಷಗಳಲ್ಲಿ ಅಲ್ಕೋಹಾಲ್ ಮತ್ತು ನಿಕೋಟಿನ್ ವ್ಯಸನಿಯಾದ. ಆದರೆ ಆತನಿಗೆ ಮತ್ತಷ್ಟು ‘ಕಿಕ್‌’ ಬೇಕೆನಿಸತೊಡಗಿತು. ಅಫೀಮು, ಗಾಂಜಾ ಎಲ್ಲದರ ಚಟವೂ ಆರಂಭವಾಯಿತು. ಅದೂ ಸಾಲದಾಯಿತು. ಕಡೆಗೆ ಆತ ಮೊರೆ ಹೋಗಿದ್ದು ಹಾವಿನ ಕಡಿತಕ್ಕೆ!

ಹೌದು; ಹಾವು ಕಡಿತದಿಂದ ಮತ್ತೇರಿಸಿಕೊಳ್ಳುವ ಚಟಕ್ಕೆ ದಾಸನಾದ. ಮೊದಲ ಬಾರಿ ಕಡಿಸಿಕೊಂಡ ಎರಡು–ಮೂರು ವಾರ ಆತನಿಗೆ ಬೇರಾವುದೇ ಡ್ರಗ್ಸ್‌ನ ಅವಶ್ಯಕತೆಯೇ ಇರಲಿಲ್ಲ. ಮತ್ತೆ ಬೇಕೆನಿಸಿದಾಗಲೆಲ್ಲ ಹಾವು ಕಡಿಸಿಕೊಳ್ಳುತ್ತಿದ್ದ. ಆದರೆ ಈಗ ಅದೂ ಆತನಿಗೆ ಸಾಕಾಗುತ್ತಿಲ್ಲ. ಪುನಶ್ಚೇತನ ಶಿಬಿರದಲ್ಲಿ ಒದ್ದಾಡುತ್ತ ಮಲಗಿದ್ದಾನೆ. 2018ರಲ್ಲಿ ಇಂಡಿಯನ್ ಜರ್ನಲ್ ಆಫ್ ಸೈಕಾಲಜಿಕಲ್ ಮೆಡಿಸಿನ್ ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನಾ ಈ ಪ್ರಕರಣ ಉಲ್ಲೇಖವಾಗಿದೆ. ಹಾವಿನ ವಿಷ ಜೀವಕ್ಕೆ ಹಾನಿಯಾಗದಂತೆ ಕಡಿಸುವ ಕಲೆಗಾರಿಕೆ ಅಲ್ಲಿಯ ಹಾವಾಡಿಗರಲ್ಲಿದೆಯಂತೆ.

ಸದ್ಯ ದೇಶದ ತುಂಬ ಸದ್ದು–ಸುದ್ದಿ ಮಾಡುತ್ತಿರುವ ಬಾಲಿವುಡ್–ಸ್ಯಾಂಡಲ್‌ವುಡ್ ಡ್ರಗ್ಸ್‌ ವಿವಾದಗಳಿಂದಾಚೆ ನೋಡಿದರೆ ಮಾದಕ ಲೋಕದ ‘ಆಕ್ಟೋಪಸ್‌’ ಗೋಚರಿಸುತ್ತದೆ. ಅಷ್ಟಬಾಹುಗಳಿಂದ ಎದುರಾಳಿಯ ಜೀವ ತೆಗೆಯುವ ಈ ಕಡಲಜೀವಿಯಂತೆಯೇ ಡ್ರಗ್ಸ್‌ನ ಅಟಾಟೋಪವೂ ನಡೆಯುತ್ತಿದೆ. ತಂಬಾಕಿನಿಂದ ಆರಂಭವಾಗಿ ಸ್ನೇಕ್ ವೆನಮ್ ವ್ಯಸನದವರೆಗೂ ಇದರ ವ್ಯಾಪ್ತಿಯಿದೆ. ಮೇಲು–ಕೀಳುಗಳ ತಾರತಮ್ಯ ತೋರದೇ ಎಲ್ಲರನ್ನೂ ಸಮಾನವಾಗಿ ‘ಸರ್ವನಾಶ’ ಮಾಡುವ ಶಕ್ತಿ ಈ ನಶೆಗೆ ಇದೆ. ರೈಲ್ವೆ ಸ್ಟೇಷನ್‌ಗಳ ಕೊಳಕು ಮೂಲೆಗಳಲ್ಲಿ ಉಸಿರಾಡುವ, ಕಾಲೇಜು ಹಾಸ್ಟೆಲ್‌ಗಳಲ್ಲಿ ತೂರಾಡುವ, ಕ್ರೀಡಾಪಟುಗಳ ಸೊಕ್ಕೇರಿಸುವ, ಜಗಮಗಿಸುವ ಪಾರ್ಟಿಗಳಲ್ಲಿ ಮತ್ತೇರಿಸಲು ವಿಧವಿಧ ರೂಪ ತಳೆಯುವ ತಾಕತ್ತು ಈ ಮಾದಕ ವಸ್ತುಗಳಿಗೆ ಇದೆ.

ADVERTISEMENT

ಮಕ್ಕಳ ಪಾಲಿನ ಬಿಳಿಭೂತ

ಕಾಗದದ ಮೇಲೆ ಬರೆದ ಅಥವಾ ಮುದ್ರಿಸಿದ ಪದಗಳು ತಪ್ಪಾದಾಗ ತೊಡೆದುಹಾಕಿ ತಿದ್ದುಪಡಿ ಮಾಡಲು ಬಳಸುವ ವೈಟ್ನರ್‌ ಇರೇಸರ್ ಮಕ್ಕಳ ಪಾಲಿಗೆ ಬಿಳಿದೆವ್ವವಿದ್ದಂತೆ. ಇದರಲ್ಲಿರುವ ಟೈಟಾನಿಯಂ ಡೈಆಕ್ಸೈಡ್ ರಾಸಾಯನಿಕಗಳ ವಾಸನೆಯು ಮಿದುಳನ್ನು ಪ್ರಚೋದಿಸುತ್ತದೆ. ಕೆಲಕ್ಷಣಗಳವರೆಗೆ ನರನಾಡಿಗಳಲ್ಲಿ ರಕ್ತಸಂಚಾರ ವೇಗವಾಗಿ ನಡೆದು ಹೊಸ ಚೈತನ್ಯ ಪ್ರವಹಿಸಿದಂತಾಗುತ್ತದೆ. ಆದರೆ ಇದು ಬಹಳ ಹೊತ್ತು ಇರುವುದಿಲ್ಲ. ಆದರೆ ಇದು ಕೊಡುವ ಸುಖಾನುಭವವು ವ್ಯಸನಿಗಳಾಗಲು ಕಾರಣವಾಗುತ್ತದೆ. ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ ಎನ್ನುತ್ತ ದೂರದವರೆಗೆ ಎಳೆದ್ಯೊಯ್ಯುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ ಈ ಚಟದಿಂದಾಗಿ ಮಕ್ಕಳ ಮಿದುಳಿನ ಸ್ಮರಣಶಕ್ತಿಯು ನಷ್ಟವಾಗುತ್ತದೆ. ಅಲ್ಲದೇ ಶ್ವಾಸಕೋಶದ ಸಾಮರ್ಥ್ಯವೂ ಕುಗ್ಗುವುದರಿಂದ ಆಮ್ಲಜನಕದ ಸರಬರಾಜಿಗೆ ವ್ಯತ್ಯಯವಾಗಿ ಬೇರೆಲ್ಲ ಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ.

2014ರಲ್ಲಿ ಕೇರಳದ ನಾರ್ಕೊಟಿಕ್ ಸೆಲ್ ಈ ವೈಟ್ನರ್‌ ನಿಷೇಧಿಸಬೇಕೆಂದು ಎರ್ನಾಕುಲಂ ಮ್ಯಾಜಿಸ್ಟ್ರೇಟ್‌ಗೆ ಮನವಿ ಸಲ್ಲಿಸಿತ್ತು. ಶೇ30ರಷ್ಟು ಮಕ್ಕಳು ಈ ವೈಟ್ನರ್‌ ಅಘ್ರಾಣಿಸುವ ವ್ಯಸನಿಗಳಾಗಿದ್ದಾರೆ. ಅವರ ಆರೋಗ್ಯಕ್ಕೆ ಮಾರಕವಾಗುತ್ತಿದೆ ಎಂದು ಅಂಕಿ ಅಂಶ ನೀಡಿತ್ತು. ಇದೀಗ ಮಾರುಕಟ್ಟೆಯಲ್ಲಿ ವೈಟ್ನರ್‌ ಪೆನ್‌ಗಳು ಬರುತ್ತಿವೆ. ಆದರಲ್ಲಿರುವ ಬಿಳಿ ಶಾಯಿಯನ್ನು ಕರವಸ್ತ್ರದ ಮೇಲೆ ಹಾಕಿ ಮೂಸಿನೋಡುವ ಚಟ ಬೆಳೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಕಸ ಆರಿಸುವ, ಕೂಲಿ ಮಾಡುವ ಹದಿಹರೆಯದವರಲ್ಲಿ ವ್ಯಾಪಕವಾಗಿದೆ. ಅಲ್ಲದೇ ವ್ಯಾಸಲೀನ್, ಝಂಡೂ ಬಾಮ್ ಮತ್ತಿತರ ನೋವು ನಿವಾರಕಗಳನ್ನೂ ನಶೆಗಾಗಿ ಬಳಸುತ್ತಾರೆ. ಪೇಂಟ್‌ಗಳಿಗೆ ಬಳಸುವ ಥಿನ್ನರ್, ಪ್ರೆಟ್ರೋಲ್ ವಾಸನೆಯಿಂದಲೇ ಮತ್ತೇರಿಸಿಕೊಳ್ಳುವ ಚಟವೂ ಕೆಲವರಿಗೆ ಇದೆ.

ಕೆಮ್ಮು ನಿವಾರಕ ಔಷಧಿಗಳಲ್ಲೂ ಮಾದಕತೆ ಕಂಡುಕೊಂಡವರಿದ್ದಾರೆ. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಈ ಚಟಕ್ಕೆ ದಾಸರು. ಅಲ್ಕೋಹಾಲ್ ಮತ್ತು ಕೋಡೈನ್ ಫಾಸ್ಪೆಟ್‌ ಇರುವ ಔಷಧಿಗಳನ್ನು ವೈದ್ಯರ ಅನುಮತಿ ಪತ್ರವಿಲ್ಲದೇ ಮಾರುವಂತಿಲ್ಲ. ಆದರೆ, ಕೆಲವು ಅಂಗಡಿಗಳಲ್ಲಿ ಈ ಔಷಧಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತದೆ. ಒತ್ತಡ ನಿವಾರಣೆ, ಸುಖನಿದ್ದೆಗಾಗಿ ವಿದ್ಯಾರ್ಥಿಗಳು ಇಂತಹ ಔಷಧಿಗಳ ಮೊರೆ ಹೋಗುತ್ತಾರೆ. ಆರಂಭದಲ್ಲಿ 50 ಅಥವಾ 100 ಮಿಲಿಲೀಟರ್‌ನಷ್ಟು ಔಷಧಿಯನ್ನು ಒಂದೇ ಬಾರಿಗೆ ಕುಡಿಯುತ್ತಾರೆ. ದಿನಕಳೆದಂತೆ ಹೆಚ್ಚುಹೆಚ್ಚು ಮಾಡಿಕೊಳ್ಳುತ್ತಾ ಸಾಗುತ್ತಾರೆ. ಪರಿಣಾಮ ದೃಷ್ಟಿಹೀನತೆ, ಶ್ವಾಸಕೋಶ ವೈಫಲ್ಯ, ಕರಳುಬೇನೆ ಆರಂಭವಾಗುತ್ತವೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ ಪ್ರಾಣಕ್ಕೂ ಎರವಾಗುತ್ತದೆ.

ಎಂಡಿಎಂಎ ಮೃತ್ಯುಪಾಶ

ಚೆಂಡು ಹೂವಿನ ಗಿಡಗಳ ಮರೆಯಲ್ಲಿ ಕದ್ದುಮುಚ್ಚಿ ಬೆಳೆಯುವ ಗಾಂಜಾ ಕೆಲವು ದೇವಾಲಯಗಳಲ್ಲಿ ಪ್ರಸಾದವಾಗಿಯೂ ವಿತರಣೆಯಾದ ಉದಾಹರಣೆಗಳಿವೆ. ಇದಕ್ಕೆ ತಂಬಾಕು ಮತ್ತು ಅಲ್ಕೋಹಾಲ್‌ನಷ್ಟೇ ದೀರ್ಘ ಇತಿಹಾಸವಿದೆ. ಆದರೆ, ತಂಬಾಕು ಮತ್ತು ಮದ್ಯಸಾರಯುಕ್ತ ಸಾರಾಯಿ ಮಾರಾಟಕ್ಕೆ ಪರವಾನಿಗೆ ಇದೆ. ಗಾಂಜಾಕ್ಕೆ ಇಲ್ಲ. ಈಗ ಇವೆಲ್ಲವನ್ನೂ ಮೀರಿಸಿದ ಎಂಡಿಎಂಎ ಎಲ್ಲೆಡೆ ತಾಂಡವವಾಡುತ್ತಿದೆ. ಮೆಥೈಲೆಂಡಿಯಾಕ್ಸಿ–ಮೆಠಾಮೆತಾಮೈನ್ (ಎಂಡಿಎಂಎ) ಸಣ್ಣ ಸಣ್ಣ ಗುಳಿಗೆಗಳ ರೂಪದಲ್ಲಿ ಯುವಜನರ ಕೈ ಸೇರುತ್ತಿದೆ. ಆಫ್ರಿಕಾ, ಯುರೋಪಿನ ಕೆಲವು ದೇಶಗಳಲ್ಲಿ ಇದರ ಉತ್ಪಾದನೆಯಾಗುತ್ತದೆ. ಮದುವೆಯ ಕರೆಯೋಲೆಗಳಲ್ಲಿಯೂ ಮುಚ್ಚಿಟ್ಟು ಸಾಗಿಸಬಹುದಾದಷ್ಟು ಕುಖ್ಯಾತಿ ಇದರದ್ದು. ಅದರಿಂದಾಗಿಯೇ ಭದ್ರತಾಪಡೆಗಳ ಕಣ್ಣುತಪ್ಪಿಸಿ ಸಿನಿತಾರೆಗಳ, ಶ್ರೀಮಂತರ ಬಂಗ್ಲೆಗಳ, ಪಂಚತಾರಾ ಹೋಟೆಲ್‌ಗಳ ಪಾರ್ಟಿಗಳಲ್ಲಿ ಯುವಜನತೆಯ ಕೈಸೇರುತ್ತಿದೆ. ಇಂತಹ ಚಟಗಳನ್ನು ಮಾಡಲು ಮಧ್ಯಮವರ್ಗದ ಕುಟುಂಬದ ಹುಡುಗ–ಹುಡುಗಿಯರು ಅಪರಾಧದ ಹಾದಿಯನ್ನು ತುಳಿದ ಕಥೆಗಳು ಪೊಲೀಸ್‌ ಕಡತಗಳಲ್ಲಿವೆ. ಸರಗಳ್ಳತನ, ಬೈಕ್‌ ಕಳವು ಮತ್ತಿತರ ಅಪರಾಧಗಳಿಗೆ ಮೂಲಕಾರಣ ಈ ಚಟಗಳ ಶೋಕಿಯೇ ಎನ್ನಲಾಗುತ್ತದೆ.

ಆದರೆ, ಮೊದಲು ಮನಸ್ಸಿನ ಆನಂದ ಮತ್ತು ಮತ್ತಿನ ಲೋಕದಲ್ಲಿ ವಿಹರಿಸುವ ಹಪಾಹಪಿಯೇ ಈ ಚಟ ಅಂಟಿಸಿಕೊಳ್ಳಲು ಕಾರಣ ಎನ್ನುತ್ತಾರೆ ಮಾನಸಿಕ ತಜ್ಞರು. ಮನಸ್ಸಿನ ಮೇಲೆ ಹಿಡಿತ, ಕುಟುಂಬದಲ್ಲಿ ಹಿರಿಯರು ಮತ್ತು ಕಿರಿಯರ ನಡುವೆ ಪ್ರೀತಿಯ ಬಾಂಧವ್ಯದ ಕೊರತೆ ಇದ್ದಾಗ ಇಂತಹ ಚಟಕ್ಕೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ. ಈ ಡಿಜಿಟಲ್ ಯುಗದಲ್ಲಿ ಅಂಗೈಯಲ್ಲಿಯೇ ಮಾರುಕಟ್ಟೆ ಲಭ್ಯವಾಗುತ್ತಿದೆ. ದುಡ್ಡು ಹೊಂದಿಸಿಕೊಂಡರೆ ಮನೆಬಾಗಿಲಿಗೆ ‘ಸರಕು’ ಬಂದು ಬೀಳುತ್ತದೆ. ಎಚ್ಚರ ತಪ್ಪಿದರೆ ಮನೆ–ಮನಗಳು ಮುರಿದುಬೀಳುತ್ತವೆ.

ಕ್ರೀಡಾಪಟುಗಳ ಜೀವ ತೆಗೆಯುವ ಉದ್ದೀಪನ ಮದ್ದು

ಯಶಸ್ಸು ಗಳಿಸುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಹಣ ಮತ್ತು ಖ್ಯಾತಿಗಾಗಿ ಅಡ್ಡಹಾದಿ ಹಿಡಿಯುವವರೂ ಇದ್ದಾರೆ. ಕ್ರೀಡಾಲೋಕದಲ್ಲಿಯೂ ಡ್ರಗ್ಸ್‌ನ ಸದ್ದು ಜೋರಾಗಿಯೇ ಇದೆ. ಹಲವು ವರ್ಷಗಳಿಂದ ಆ್ಯನಾಬೊಲಿಕ್ ಸ್ಟೆರಾಯ್ಡ್‌, ಹಾರ್ಮೋನುಗಳನ್ನು ತೆಗೆದುಕೊಂಡು ಪದಕ ಗೆದ್ದು ನಂತರ ಸಿಕ್ಕಿಬಿದ್ದವರ ಹಲವಾರು ಉದಾಹರಣೆಗಳಿವೆ.

‘ಡ್ರಗ್ಸ್‌ ಎಂದರೆ ಒಟ್ಟಾರೆ ಅರ್ಥದಲ್ಲಿ ಔಷಧಿ. ಅದನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸಬಹುದು. ಮೊದಲನೆಯದ್ದು ಚಿಕಿತ್ಸೆಗಾಗಿ ಬಳಸುವ ಔಷಧಿಗಳು, ಎರಡನೇಯದ್ದು ದೇಹದಲ್ಲಿ ಕೊರತೆಯಿರುವ ವಿಟಮಿನ್, ಪ್ರೊಟೀನ್, ಕಬ್ಬಿಣಾಂಶಗಳನ್ನು ಸಮತೋಲನ ಮಾಡಲು ಔಷಧಿಗಳು, ಮೂರನೇಯದ್ದು ಮನರಂಜನೆಗಾಗಿ ಬಳಸುವುದು ಮತ್ತು ನಾಲ್ಕನೇಯದ್ದು ಸಾಮರ್ಥ್ಯಾಭಿವೃದ್ಧಿ ಡ್ರಗ್ಸ್‌. ಗಾಂಜಾ, ಕೊಕೇನ್, ಹಶೀಶ್‌ ಇತ್ಯಾದಿಗಳು ಮೂರನೇ ವಿಭಾಗದಲ್ಲಿ ಬರುತ್ತವೆ. ನಾಲ್ಕನೇಯದ್ದು ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಾಧನೆ ಮಾಡಲು ಬಳಸುತ್ತಾರೆ. ಅದರಲ್ಲಿ ನಿಷೇಧಿತ ಮದ್ದುಗಳನ್ನು ಬಳಸುವುದರಿಂದ ಹಾನಿಯಾಗುತ್ತದೆ. ಕೆಲವು ಕ್ರೀಡಾಪಟುಗಳು ಆಟದಾಚೆಯೂ ಮಾದಕ ದ್ರವ್ಯ ವ್ಯಸನಕ್ಕೊಳಗಾದ ಉದಾಹರಣೆಗಳಿವೆ. ಫುಟ್‌ಬಾಲ್ ದಂತಕಥೆ ಡಿಗೊ ಮರಡೋನಾ ಉದಾಹರಣೆ ನಮ್ಮ ಮುಂದಿದೆ’ ಎಂದು ಕ್ರೀಡಾ ವೈದ್ಯ ಡಾ. ಕಿರಣ ಕುಲಕರ್ಣಿ ವಿವರಿಸುತ್ತಾರೆ.

ಕಡಿಮೆ ವಯಸ್ಸಿನವರು ಹೆಚ್ಚುತ್ತಿದ್ದಾರೆ

ಒಂದು ಸಂಶೋಧನೆಯ ಪ್ರಕಾರ; ಡ್ರಗ್ಸ್‌ಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಣ್ಣ ವಯಸ್ಸಿನವರಲ್ಲಿ ಬಳಕೆ ಹೆಚ್ಚುತ್ತಿದೆ. ಕಿಶೋರಾವಸ್ಥೆಯಲ್ಲಿಯೇ ಈ ಚಟಕ್ಕೆ ದಾಸರಾಗುತ್ತಿದ್ದಾರೆ. ಎಳೆಯ ವಯಸ್ಸಿನಲ್ಲಿ ಆರಂಭಿಸಿರುವುದರಿಂದ ಅವರು ಬೆಳೆದಂತೆ ಡ್ರಗ್ಸ್‌ ಸಹನಾಶಕ್ತಿ ಬೆಳೆಯುತ್ತದೆ. ಅದರಿಂದಾಗಿ ಹಂತಹಂತವಾಗಿ ಮದ್ದು ತೆಗೆದುಕೊಳ್ಳುವ ಪ್ರಮಾಣ ಹೆಚ್ಚಾಗುತ್ತ ಹೋಗುತ್ತದೆ. ಇದರಿಂದ ತಮ್ಮ ಖಿನ್ನತೆ, ಚಿಂತೆ, ಒಂಟಿತನ ಮತ್ತಿತರರ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದು ಸಾಧ್ಯವೆಂಬ ಭ್ರಮೆಯಲ್ಲಿರುತ್ತಾರೆ. ಆದರೆ, ಈ ಸಮಸ್ಯೆಗಳು ಪರಿಹಾರವಾಗುವುದಿರಲಿ. ಮತ್ತಷ್ಟು ಸಮಸ್ಯೆಗಳೂ ಅದರೊಂದಿಗೆ ಸೇರಿಕೊಳ್ಳುತ್ತವೆ. ಆದ್ದರಿಂದ ಮನೆಯಲ್ಲಿ ಮಕ್ಕಳಿಗೆ ಅರಿವು ಮೂಡಿಸಬೇಕು. ಪಾಲಕರು, ಬಂಧುಗಳು ಪ್ರೀತಿ, ವಿಶ್ವಾಸದಿಂದ ಮಕ್ಕಳಿಗೆ ತಿಳಿವಳಿಕೆ ನೀಡಬೇಕು.

ಮಕ್ಕಳ ಸ್ನೇಹಿತರ ವಲಯವನ್ನು ಗಮನಿಸಬೇಕು. ಊಟ, ಆಟ, ಆಹಾರ, ವಿಹಾರ ವಿಷಯಗಳ ಮೇಲೆ ನಿಗಾ ಇಡಬೇಕು. ಇವುಗಳಲ್ಲಿ ವ್ಯತ್ಯಾಸ ಅಥವಾ ಅನುಮಾನಾಸ್ಪದ ಅಂಶಗಳು ಕಂಡಾಗ ತಕ್ಷಣ ಎಚ್ಚೆತ್ತುಕೊಂಡು ತಿಳಿವಳಿಕೆ ಹೇಳುವ ಕೆಲಸ ಮಾಡಬೇಕು. ಚಟಕ್ಕೆ ದಾಸರಾದ ನಂತರ ಬಿಡಿಸುವುದು ತುಸು ಕಷ್ಟದ ಕೆಲಸ. ಆದರೆ, ಅಸಾಧ್ಯವಲ್ಲ. ಚಟಗಳಿಗೆ ಬೀಳದಂತೆ ಇರುವುದೇ ಜಾಣತನ. ಅದನ್ನು ನಾವು ಹಸಿರು ವಲಯ ಎನ್ನುತ್ತೇವೆ. ಅದು ಸುರಕ್ಷತಾ ವಲಯ. ಶಾಲೆ, ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಮನೆಯಲ್ಲಿ ಪಾಲಕರು ಈ ಕುರಿತು ಜಾಗೃತಿ ಮೂಡಿಸಬೇಕು.

–ಪ್ರೊ. ಪ್ರತಿಮಾ ಮೂರ್ತಿ,ಪ್ರಾಧ್ಯಾಪಕರು, ವ್ಯಸನಮುಕ್ತ ಸೇವೆಗಳ ವಿಭಾಗದ ಮುಖ್ಯಸ್ಥರು, ನಿಮ್ಹಾನ್ಸ್, ಬೆಂಗಳೂರು

ವ್ಯಸನಮುಕ್ತರಾಗಲು ಸಾಧ್ಯವಿದೆ

ನಮ್ಮ ಗೆಳೆತನ ಬೇಕಾದರೆ ಸಿಗರೇಟ್ ಸೇದು, ತಂಬಾಕು ತಿನ್ನು, ಸಾರಾಯಿ ಕುಡಿ, ಡ್ರಗ್ಸ್‌ ತಗೊ ಎನ್ನುವ ಒತ್ತಾಯಗಳು ಸ್ನೇಹಿತರ ವಲಯದಲ್ಲಿ ಕೇಳಿಬರುತ್ತವೆ. ಆಗ ಬಹಳಷ್ಟು ಜನರು ತಮ್ಮ ಗೆಳೆಯರ ಆಸೆ ಈಡೇರಿಸಲು ಚಟ ಆರಂಭಿಸುತ್ತಾರೆ. ಇನ್ನೂ ಕೆಲವರು ತಮ್ಮ ನೆಚ್ಚಿನ ಸಿನಿತಾರೆಗಳ ಸಿಗರೇಟ್ ಸೇದುವ ಶೈಲಿಯನ್ನು ಅನುಕರಿಸಲು ಆರಂಭಿಸುತ್ತಾರೆ. ಮತ್ತಷ್ಟು ಜನರಿಗೆ ಇದು ಅನುವಂಶಿಕವಾಗಿ ಅಂಟಿಕೊಳ್ಳುತ್ತದೆ. ಕಾರಣಗಳು ಏನೇ ಇರಲಿ. ಮನದ ಕ್ಷೋಭೆಗಳೇ ಈ ವ್ಯಸನಗಳಿಗೆ ಮೂಲವಾಗುತ್ತದೆ. ಖಿನ್ನತೆ, ಹೊಟ್ಟೆಕಿಚ್ಚು, ಆಸೆಬುರುಕುತನ, ಒಂಟಿತನ, ಆತ್ಮವಿಶ್ವಾಸದ ಕೊರತೆ, ಅತಿಯಾದ ಮಹತ್ವಾಕಾಂಕ್ಷೆಗಳು ಇದಕ್ಕೆ ಕಾರಣವಾಗುತ್ತವೆ. ಒಮ್ಮೆ ಈ ಚಟಗಳಿಗೆ ಅಂಟಿಕೊಂಡರೆ ಹೊರಬರುವುದಿಲ್ಲವೆಂಬ ತಪ್ಪುಕಲ್ಪನೆ ಇದೆ. ಸರಿಯಾದ ಚಿಕಿತ್ಸೆ, ಆಪ್ತ ಸಮಾಲೋಚನೆ ಮತ್ತು ಔಷಧೋಪಚಾರಗಳಿಂದ ಖಂಡಿತವಾಗಿಯೂ ಪರಿಹಾರ ಸಾಧ್ಯವಿದೆ.

ಡಾ. ರಾಜಶೇಖರ್ ಹಿರೇಮಠ,ಮಾನಸಿಕ ತಜ್ಞರು ಮತ್ತು ನಿರ್ದೇಶಕರು, ಕಡಬಮ್ಸ್‌ ಸಂಸ್ಥೆ, ಬೆಂಗಳೂರು

ತಂಬಾಕು ಎಲ್ಲ ಚಟಗಳ ಮೂಲ

ಪ್ರತಿವರ್ಷ ಜಗತ್ತಿನಲ್ಲಿ ಸುಮಾರು 70 ಲಕ್ಷ ಜನರು ತಂಬಾಕಿನ ಬೇರೆ ಬೇರೆ ಉತ್ಪನ್ನಗಳ ವ್ಯಸನದಿಂದಾಗಿ ಸಾವನ್ನಪುತ್ತಿದ್ದಾರೆ. ಭಾರತದಲ್ಲಿಯೇ ಸುಮಾರು 12 ಲಕ್ಷ ಮಂದಿ ಬಲಿಯಾಗುತ್ತಿದ್ದಾರೆ. ಆದರೂ ಅದನ್ನು ವ್ಯಸನ ಎಂದು ಬಹಳ ಜನರು ಅಂದುಕೊಳ್ಳುವುದಿಲ್ಲ. ಅದನ್ನೊಂದು ಉದ್ಯಮ ಮತ್ತು ಜೀವನಶೈಲಿಯ ಭಾಗವೆಂದು ಬಿಂಬಿಸಲಾಗುತ್ತಿದೆ. ತಂಬಾಕು ಬೆಳೆದು ಉತ್ಪನ್ನಗಳ ತಯಾರಿಕೆಯ ಹಂತದಲ್ಲಿ ಆಗುವ ಪರಿಸರ ನಾಶ ಒಂದೆಡೆಯಾದರೆ, ಸಮಾಜದ ಎಲ್ಲ ವರ್ಗಗಳಲ್ಲಿಯೂ ತಂಬಾಕಿನ ಬಳಕೆ ಇದೆ. ಜರ್ದಾ, ಗುಟ್ಕಾ, ಸಿಗರೇಟ್, ಬೀಡಿ ಇತ್ಯಾದಿಗಳ ರೂಪದಲ್ಲಿ ಬಳಕೆಯಾಗುತ್ತಿದೆ. ಅದರಿಂದಾಗಿ ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ ಮತ್ತಿತರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸಿಗರೇಟ್ ಚಟವು ಗಾಂಜಾ, ಬ್ರೌನ್‌ಶುಗರ್ ಮತ್ತಿತರ ಮಾದಕದ್ರವ್ಯಗಳ ಬಳಕೆಗೆ ಪ್ರವೇಶ ದ್ವಾರವಾಗುತ್ತದೆ. ತಂಬಾಕು ನಿಷೇಧದಿಂದ ಒಂದಿಷ್ಟು ಕೋಟಿಗಳ ಆರ್ಥಿಕ ನಷ್ಟವಾಗಬಹುದು. ಗ್ರಾಮೀಣ ಪ್ರದೇಶಗಳಲ್ಲಿ, ಕೊಳೆಗೇರಿಗಳಲ್ಲಿ ಅನಕ್ಷರಸ್ಥರು ಇದಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಆದರೆ ವಿದ್ಯಾವಂತರ ಸಂಖ್ಯೆಯೇನೂ ಕಮ್ಮಿಯಿಲ್ಲ. ಇಬ್ಬರಿಗೂ ಅರಿವು ಮೂಡಿಸುವ ಕೆಲಸ ವೇಗ ಪಡೆಯಬೇಕು.

–ರವೀಂದ್ರ ಹೊಂಬಳ,ಟ್ರಸ್ಟಿ, ಗ್ರಾಮಶಿಕ್ಷಣ ಚಾರಿಟಿ ಫೌಂಡೇಷನ್, ಹುಬ್ಬಳ್ಳಿ

ಅಂಕಿ ಅಂಶಗಳು

33 ಲಕ್ಷ:ವಿಶ್ವದಲ್ಲಿ ಪ್ರತಿವರ್ಷ ಅಲ್ಕೋಹಾಲ್ ಸೇವನೆಯಿಂದ ಸಾವಿಗೀಡಾಗುವವರು

6.2 ಲೀಟರ್‌:ವಿಶ್ವದಲ್ಲಿ 15 ವರ್ಷ ದಾಟಿದ ಮದ್ಯಪಾನಿಗಳು ಪ್ರತಿವರ್ಷ ಸರಾಸರಿ ಸೇವಿಸುವ ಪ್ರಮಾಣ

3 ಕೋಟಿ:ವಿಶ್ವದಲ್ಲಿ ಪ್ರತಿವರ್ಷ ಡ್ರಗ್ಸ್‌ ಸೇವನೆಯ ದುಷ್ಪರಿಣಾಮಗಳಿಂದ ಬಳಲುತ್ತಿರುವವರು

27ಕೋಟಿಗೂ ಹೆಚ್ಚು ಮಂದಿ:ವಿಶ್ವದಲ್ಲಿ ಅಫೀಮು, ಕೊಕೇನ್, ಆಪ್ತಾಮೈನ್ಸ್‌ ಇತ್ಯಾದಿ ಡ್ರಗ್ಸ್‌ ಅನ್ನು ಬಳಸುತ್ತಾರೆ

l ವಿಶ್ವದ ಜನಸಂಖ್ಯೆಯಲ್ಲಿ ಮದ್ಯ ಸೇವಿಸುವ ಜನರ ಪ್ರಮಾಣ (ಶೇ 38.3)

l ವಿಶ್ವದಲ್ಲಿ ವಾರ್ಷಿಕವಾಗಿ ಒಂದು ಕೋಟಿ ಜನರು ಇಂಜೆಕ್ಷನ್ ಮೂಲಕ ಡ್ರಗ್ಸ್‌ ತೆಗೆದುಕೊಳ್ಳುತ್ತಾರೆ. ಅದರಲ್ಲಿ 13 ಲಕ್ಷ ಜನರು ಎಚ್‌ಐವಿ, 50ಲಕ್ಷ ಮಂದಿ ಹೆಪಟೈಟಿಸ್ ಸಿ, 10 ಲಕ್ಷ ಜನರು ಎಚ್‌ಐವಿ ಮತ್ತು ಹೆಪೆಟೈಟಿಸ್ ಸಿ ಸೋಂಕಿಗೆ ತುತ್ತಾಗುತ್ತಿದ್ದಾರೆ

l ವಿಶ್ವದಲ್ಲಿ ಸುಮಾರು 7 ಲಕ್ಷ ಮಹಿಳಾ ಅಪರಾಧಿಗಳ ಪೈಕಿ ಶೇ 38ರಷ್ಟು ಮಂದಿ ಡ್ರಗ್ಸ್‌ ನಶೆಯಲ್ಲಿ ಕುಕೃತ್ಯ ಎಸಗಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.