ಭಾರತ–ಪಾಕಿಸ್ತಾನದ ಸಂಬಂಧ ಯಾವಾಗ, ಯಾವ ರೂಪ ತಳೆಯುತ್ತದೆ ಎಂದು ಊಹಿಸುವುದೇ ಕಷ್ಟ. ಇನ್ನೇನು ಪರಿಸ್ಥಿತಿ ಸುಧಾರಿಸಿತು ಎನ್ನುವಷ್ಟರಲ್ಲಿ ನಡೆಯುವ ಒಂದು ಘಟನೆ, ಆವರೆಗಿನ ಎಲ್ಲಾ ಬೆಳವಣಿಗೆಗಳನ್ನು ಮಣ್ಣುಪಾಲು ಮಾಡುತ್ತದೆ.
ಒಂದೇ ಇತಿಹಾಸ, ಸಂಸ್ಕೃತಿ, ಭಾಷೆಗಳನ್ನು ಹಂಚಿಕೊಂಡು ಬೆಳೆದಿರುವ ಈ ರಾಷ್ಟ್ರಗಳ ನಡುವೆ, ಶಾಂತಿ ಸ್ಥಾಪನೆಯ ಪ್ರಯತ್ನಗಳೆಲ್ಲವೂ ವಿವಿಧ ಕಾರಣಗಳಿಂದ ವಿಫಲವಾಗಿವೆ. ಕೆಲವೊಮ್ಮೆ ಪಾಕಿಸ್ತಾನದ ಸೇನೆಯ ಮುಖ್ಯಸ್ಥರು, ಇನ್ನೂ ಕೆಲವೊಮ್ಮೆ ಭಯೋತ್ಪಾದಕ ಸಂಘಟನೆಗಳು ಮತ್ತೆ ಕೆಲವೊಮ್ಮೆ ಇನ್ಯಾವುದೋ ರಾಷ್ಟ್ರ ಮಧ್ಯಪ್ರವೇಶ ಮಾಡಿ ಶಾಂತಿ ಸ್ಥಾಪನೆಯ ಪ್ರಯತ್ನಗಳನ್ನು ಹಾಳುಗೆಡವುತ್ತಾ ಬಂದಿವೆ. ಆದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ, ಆರ್ಥಿಕ ಬದಲಾವಣೆಗಳಾದಾಗಲೆಲ್ಲಾ ಭಾರತ– ಪಾಕಿಸ್ತಾನ ಶಾಂತಿ ಸ್ಥಾಪನೆಯ ಪ್ರಯತ್ನಗಳನ್ನು ಮಾಡಿವೆ ಎಂಬುದು ಇತಿಹಾಸ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತ–ಪಾಕ್ ಸಂಬಂಧ ಸಂಪೂರ್ಣ ಹದಗೆಟ್ಟಿತ್ತು. ಬಾಲಾಕೋಟ್ ದಾಳಿಯ ನಂತರ ಈ ಅಣ್ವಸ್ತ್ರ ರಾಷ್ಟ್ರಗಳ ನಡುವೆ ಪೂರ್ಣಪ್ರಮಾಣದ ಯುದ್ಧವೇ ನಡೆಯುವುದೇನೋ ಎಂಬಂಥ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಕೊರೊನಾ ಸಂಕಷ್ಟದಿಂದ ಇಡೀ ಜಗತ್ತಿನ ಆರ್ಥಿಕತೆ ಏರುಪೇರಾಗಿದೆ. ಇಂಥ ಸ್ಥಿತಿಯಲ್ಲಿ ಮತ್ತೆ ಭಾರತ–ಪಾಕಿಸ್ತಾನ ಶಾಂತಿಸ್ಥಾಪನೆಯ ಪ್ರಸ್ತಾವವನ್ನು ಮುಂದಿಟ್ಟಿವೆ. ಅಷ್ಟೇ ಅಲ್ಲ ಎರಡೂ ರಾಷ್ಟ್ರಗಳು ಆ ದಿಸೆಯಲ್ಲಿ ಒಂದೊಂದು ಹೆಜ್ಜೆಗಳನ್ನೂ ಮುಂದಿಟ್ಟಿವೆ.
ಸಂಬಂಧದಲ್ಲಿ ಆಗಿರುವ ಈ ಬದಲಾವಣೆಗೆ ಕೊರೊನಾ ಅಥವಾ ಆರ್ಥಿಕತೆ ಒಂದೇ ಕಾರಣ ಎಂಬುದನ್ನು ವಿಶ್ಲೇಷಕರು ಒಪ್ಪುವುದಿಲ್ಲ. ಭಾರತ–ಚೀನಾ ಸಂಘರ್ಷ, ಅಮೆರಿಕದಲ್ಲಿ ಆಗಿರುವ ರಾಜಕೀಯ ಬದಲಾವಣೆಗಳು, ಏಷ್ಯಾವನ್ನು ಕುರಿತ ಬೈಡನ್ ನೀತಿ, ಚೀನಾದ ವಿಸ್ತರಣಾವಾದವನ್ನು ತಡೆಯುವ ಸಂಘಟಿತ ಯೋಜನೆ, ಅಫ್ಗಾನಿಸ್ತಾನದ ಹಿತಾಸಕ್ತಿ... ಹೀಗೆ ಹಲವು ವಿಚಾರಗಳ ಪರಿಣಾಮವಾಗಿ ಈ ಬೆಳವಣಿಗೆಗಳು ನಡೆದಿವೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಏನೇ ಇದ್ದರೂ, ಭಾರತದ ಜತೆಗಿನ ಸಂಬಂಧ ಸುಧಾರಣೆಯ ವಿಚಾರವಾಗಿ ಪಾಕಿಸ್ತಾನದ ಪ್ರಧಾನಿ ಹಾಗೂ ಸೇನಾ ಮುಖ್ಯಸ್ಥರು ಒಂದೇ ಧ್ವನಿಯಲ್ಲಿ ಮಾತನಾಡಿರುವುದು ಈ ಬಾರಿಯ ವಿಶೇಷವಾಗಿದೆ. ‘ಶಾಂತಿ ಸ್ಥಾಪನೆಗೆ ಬದ್ಧ’ ಎಂದು ಇಬ್ಬರೂ ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಕದನ ವಿರಾಮವನ್ನು ಕುರಿತು ಉಭಯ ರಾಷ್ಟ್ರಗಳ ನಡುವೆ 2003ರಲ್ಲಿ ಏರ್ಪಟ್ಟಿದ್ದ ಒಪ್ಪಂದಕ್ಕೆ ಬದ್ಧವಾಗಿರಲು ಎರಡೂ ರಾಷ್ಟ್ರಗಳು ಕಳೆದ ತಿಂಗಳು ಒಪ್ಪಿವೆ. ಅಷ್ಟೇ ಅಲ್ಲ ಈ ಮಾತುಕತೆಯ ನಂತರ ಗುಂಡಿನ ಚಕಮಕಿಯೂ ಗಣನೀಯವಾಗಿ ಕಡಿಮೆಯಾಗಿದೆ.
ನದಿ ನೀರು ಹಂಚಿಕೆ, ಭಾರತವು ಕೈಗೊಳ್ಳಲು ಉದ್ದೇಶಿಸಿರುವ ಜಲವಿದ್ಯುತ್ ಯೋಜನೆಗಳು ಮುಂತಾದ ವಿಚಾರಗಳ ಬಗ್ಗೆ ಉಭಯ ರಾಷ್ಟ್ರಗಳ ನಡುವೆ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಮಾತುಕತೆ ಮತ್ತೆ ಆರಂಭವಾಗಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕೋವಿಡ್ ಇದೆ ಎಂಬ ಸುದ್ದಿ ಕಳೆದ ವಾರ ಬರುತ್ತಿದ್ದಂತೆಯೇ, ‘ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂಬ ಸಂದೇಶವನ್ನು ಮೋದಿ ಅವರು ಟ್ವೀಟ್ ಮೂಲಕ ನೀಡಿದ್ದರು.
ಪಾಕ್ ಜನರಿಗೆ ಶುಭಾಶಯ: ಮಾರ್ಚ್ 23 ಅನ್ನು ‘ಪಾಕಿಸ್ತಾನ ದಿನ’ವಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಮ್ರಾನ್ ಖಾನ್ ಅವರಿಗೆ ಪತ್ರ ಬರೆದು ಶುಭಾಶಯ ಕೋರಿದ್ದಾರೆ.
ಈ ಪತ್ರವೂ ಎರಡು ರಾಷ್ಟ್ರಗಳ ನಡುವೆ ಸಂಬಂಧ ಸುಧಾರಿಸುತ್ತಿರುವುದರ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ‘ಇದು ಪ್ರತಿ ವರ್ಷ ನಡೆಯುವ ಸಾಮಾನ್ಯ ಪ್ರಕ್ರಿಯೆ’ ಎಂದು ಸರ್ಕಾರ ಹೇಳಿದೆ.
‘ಭಾರತವು ಪಾಕಿಸ್ತಾನದ ಜತೆಗೆ ಸೌಹಾರ್ದ ಸಂಬಂಧವನ್ನು ಬಯಸುತ್ತದೆ. ಆದರೆ ಅದಕ್ಕೆ ಭಯೋತ್ಪಾದನೆ, ಹಗೆತನಗಳಿಂದ ಮುಕ್ತವಾಗಿರುವ ವಾತಾವರಣ ಇರುವುದು ಅಗತ್ಯ’ ಎಂದು ಮೋದಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಬದಲಾವಣೆ ಹಠಾತ್ ಆಗಿರುವುದಲ್ಲ. ಎರಡೂ ರಾಷ್ಟ್ರಗಳನ್ನು ಹತ್ತಿರ ತರುವುದರ ಹಿಂದೆ ಅರಬ್ ಸಂಯುಕ್ತ ಸಂಸ್ಥಾನದ (ಯುಎಇ) ಮಧ್ಯಸ್ಥಿಕೆಇದೆ ಎಂದು ವರದಿಯಾಗಿದೆ. ಆದರೆ, ಆ ಬಗ್ಗೆ ಯುಎಇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ತೆರೆಮರೆ ಕಸರತ್ತು
ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಬಂಧವನ್ನು ಸುಧಾರಿಸಲು ಹಲವು ರಾಷ್ಟ್ರಗಳು ನೇಪಥ್ಯದಲ್ಲಿ ಯತ್ನಿಸುತ್ತಿವೆ. ಅಂತಹ ರಾಷ್ಟ್ರಗಳಲ್ಲಿ ಯುಎಇ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಜೋ ಬೈಡನ್ ಮುಂದಾಳತ್ವದ ಅಮೆರಿಕವೂ ಇಂತಹ ಯತ್ನಗಳನ್ನು ನಡೆಸುತ್ತಿದೆ. ಆದರೆ ಯುಎಇ ಮತ್ತು ಅಮೆರಿಕದ ಉದ್ದೇಶಗಳು ಬೇರೆ ಬೇರೆ ಇದ್ದಂತಿವೆ.
ಏಷ್ಯಾದ ರಾಜಕಾರಣದಿಂದ ಮಧ್ಯ ಪ್ರಾಚ್ಯದ ದೇಶಗಳು ದೂರವೇ ಇದ್ದವು. ಆದರೆ ಈಚಿನ ವರ್ಷಗಳಲ್ಲಿ ಇಲ್ಲಿನ ಆಗುಹೋಗುಗಳಲ್ಲಿ ಮಧ್ಯಪ್ರವೇಶ ಮಾಡುತ್ತಿವೆ. ಯುಎಇ ಹೀಗೆ ಮಧ್ಯಪ್ರವೇಶ ಮಾಡಿದ್ದು ಭಾರತ-ಪಾಕಿಸ್ತಾನದ ವಿಚಾರದಲ್ಲಿಯೇ. 2019ರ ಫೆಬ್ರುವರಿಯಲ್ಲಿ ಬಾಲಾಕೋಟ್ ದಾಳಿಯ ನಂತರದ ಸೇನಾ ಕಾರ್ಯಾಚರಣೆಯಲ್ಲಿ ಭಾರತದ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನದ ಸೇನೆ ಸೆರೆಹಿಡಿದಿತ್ತು. ಆದರೆ ಕೆಲವೇ ದಿನಗಳಲ್ಲಿ ಅಭಿನಂದನ್ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿತು. ಅಭಿನಂದನ್ ಅವರನ್ನು ಬಿಡುಗಡೆ ಮಾಡುವಲ್ಲಿ ಸೌದಿ ಅರೇಬಿಯಾ ಮತ್ತು ಯುಎಇ ಮಹತ್ವದ ಪಾತ್ರವಹಿಸಿದ್ದವು ಎಂದು ಹಲವು ಮಾಧ್ಯಮಗಳು ಆಗ ವರದಿ ಮಾಡಿದ್ದವು. ಆನಂತರದಲ್ಲಿ ಪಾಕಿಸ್ತಾನ ಮತ್ತು ಭಾರತದ ಸಂಬಂಧ ಮತ್ತಷ್ಟು ಬಿಗಡಾಯಿಸಿತ್ತು. ಎರಡೂ ದೇಶಗಳು ತಮ್ಮ-ತಮ್ಮ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿದ್ದವು. ಆದರೆ ಈಚೆಗೆ ಈ ಪರಿಸ್ಥಿತಿ ಸುಧಾರಿಸುತ್ತಿದೆ.
ಭಾರತ ಮತ್ತು ಪಾಕಿಸ್ತಾನವು 2003ರ ಕದನ ವಿರಾಮವನ್ನು ಮುಂದುವರಿಸಲು ಒಪ್ಪಂದ ಮಾಡಿಕೊಂಡಿವೆ. ಇದನ್ನು ಮೊದಲು ಸ್ವಾಗತಿಸಿದ್ದು ಯುಎಇ. ಕದನ ವಿರಾಮ ಮುಂದುವರಿಕೆ ಒಪ್ಪಂದ ಮಾಡಿಕೊಂಡ ವಿಷಯ ಬಹಿರಂಗವಾದ ಮರುದಿನವೇ ಯುಎಇ ವಿದೇಶಾಂಗ ಸಚಿವ ಶೇಕ್ ಅಬ್ದುಲ್ಲಾ ಬಿನ್ ಝಾಯೆದ್ ಅವರು ಭಾರತಕ್ಕೆ ಒಂದು ದಿನದ ಭೇಟಿ ನೀಡಿದ್ದರು. ‘ಈ ಭೇಟಿಯಲ್ಲಿ ಸಮಾನ ಹಿತಾಸಕ್ತಿಯ ವಿಚಾರಗಳು ಮತ್ತು ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದೆವು’ ಎಂದು ಯುಎಇ ಹೇಳಿಕೆ ಬಿಡುಗಡೆ ಮಾಡಿತ್ತು.
ಭಾರತ ಮತ್ತು ಪಾಕಿಸ್ತಾನವು ಈ ಒಪ್ಪಂದಕ್ಕೆ ಬರಲು ತೆರೆಮರೆಯಲ್ಲಿ ಯುಎಇ ಸಭೆ ನಡೆಸಿದೆ. ಈ ಪ್ರಯತ್ನ ಹಲವು ತಿಂಗಳಿನಿಂದ ನಡೆಯುತ್ತಿದೆ ಎಂದು ಈ ವಿಚಾರದಲ್ಲಿ ಭಾಗಿಯಾಗಿದ್ದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
ನಾಲ್ಕು ಗುರಿಗಳ ನೀಲನಕ್ಷೆ
ಭಾರತ–ಪಾಕಿಸ್ತಾನ ನಡುವಣ ಬಿಕ್ಕಟ್ಟು ಪರಿಹಾರಕ್ಕೆ ಯುಎಇ ಒಂದು ನೀಲನಕ್ಷೆಯನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಈ ನೀಲನಕ್ಷೆಯಲ್ಲಿ ನಾಲ್ಕು ಪ್ರಮುಖ ಗುರಿಗಳಿವೆ. ಇದಕ್ಕೆ ಅನುಗುಣವಾಗಿಯೇ ಕೆಲಸ ನಡೆಯುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ.
1. ಕದನವಿರಾಮ ಪಾಲನೆ: 2003ರ ಕದನ ವಿರಾಮ ಒಪ್ಪಂದ ಪಾಲಿಸುವುದು ಮೊದಲ ಗುರಿ. ಈ ಪ್ರಕಾರ ಈಗ ಒಮ್ಮತಕ್ಕೆ ಬರಲಾಗಿದೆ. ಇದರ ಮಧ್ಯೆಯೇ, ಇಮ್ರಾನ್ ಖಾನ್ ಅವರ ವಿಮಾನವು ಭಾರತದ ವಾಯುಗಡಿಯ ಮೇಲೆ ಹಾದುಹೋಗಲು ಭಾರತ ಸರ್ಕಾರವು ಅನುಮತಿ ನೀಡಿತ್ತು. ಇದನ್ನು ಒಂದು ಸ್ವಾಗತಾರ್ಹ ಬೆಳವಣಿಗೆ ಎಂದು ಹಲವು ನಾಯಕರು ಹೇಳಿದ್ದರು.
2. ರಾಜತಾಂತ್ರಿಕರ ನೇಮಕ: ಎರಡೂ ದೇಶಗಳು ರಾಜತಾಂತ್ರಿಕ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂಬುದು ಈ ನೀಲನಕ್ಷೆಯ ಎರಡನೇ ಪ್ರಮುಖ ಗುರಿ. ಈ ಸಂಬಂಧ ತೆರೆಮರೆಯಲ್ಲಿ ಮಾತುಕತೆಗಳು ನಡೆಯುತ್ತಿವೆ. ರಾಜತಾಂತ್ರಿಕ ಅಧಿಕಾರಿಗಳ ನೇಮಕ ನಡೆದರೆ, ಎರಡೂ ದೇಶಗಳ ಮಧ್ಯೆ ರಾಜತಾಂತ್ರಿಕ ಚಟುವಟಿಕೆಗಳು ಆರಂಭವಾಗುತ್ತವೆ.
3. ವಾಣಿಜ್ಯ ಸಂಬಂಧ: ಭಾರತ-ಪಾಕಿಸ್ತಾನ ನಡುವಣ ವಾಣಿಜ್ಯ ಸಂಬಂಧವನ್ನು ಮತ್ತೆ ಆರಂಭಿಸುವುದು ಈ ನೀಲನಕ್ಷೆಯ ಮೂರನೆಯ ಗುರಿಯಾಗಿದೆ. ಇದು ಈ ನೀಲನಕ್ಷೆಯ ಅತ್ಯಂತ ಮಹತ್ವದ ಗುರಿ ಎನ್ನಲಾಗಿದೆ. ಈ ಗುರಿಯನ್ನು ಸಾಧಿಸಲು ಮೊದಲ ಎರಡು ಗುರಿಗಳು ಪೂರಕ ಅಂಶಗಳು ಮಾತ್ರ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಭಾರತ-ಪಾಕಿಸ್ತಾನದ ಹಲವು ದಶಕಗಳಿಂದ ನಡೆಯುತ್ತಿದ್ದ ವ್ಯಾಪಾರ ಸಂಬಂಧವು ಈಗ ನಿಂತುಹೋಗಿದೆ. ವ್ಯಾಪಾರ ಸಂಬಂಧ ಸ್ಥಗಿತವಾಗಿರುವ ಕಾರಣ, ಎರಡೂ ದೇಶಗಳ ಮಧ್ಯೆ ಸರಕು ಸಾಗಣೆ ಇಲ್ಲವಾಗಿದೆ. ಇದರಿಂದ ಭಾರತ-ಇರಾನ್, ಭಾರತ-ಅಫ್ಗಾನಿಸ್ತಾನ ಮತ್ತು ಭಾರತ-ಮಧ್ಯಪ್ರಾಚ್ಯ ದೇಶಗಳ ನಡುವಣ ವಾಣಿಜ್ಯ-ಸರಕು ಸಾಗಣೆಗೆ ಅಡಚಣೆಯಾಗಿದೆ. ಇದಕ್ಕಾಗಿ ಈಗ ಸಮುದ್ರಮಾರ್ಗವನ್ನೇ ಅವಲಂಬಿಸಲಾಗಿದೆ.
4. ಜಮ್ಮು-ಕಾಶ್ಮೀರ: ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಈ ನೀಲನಕ್ಷೆಯ ಅಂತಿಮ ಗುರಿಯಾಗಿದೆ. ಲಡಾಖ್‌ನಲ್ಲಿ ಭಾರತ-ಚೀನಾ ನಡುವಣ ಗಡಿ ಸಂಘರ್ಷಕ್ಕೆ ಈಗ ತಾತ್ಕಾಲಿಕ ತಡೆ ಬಿದ್ದಿದೆ. ಪಾಕಿಸ್ತಾನ-ಭಾರತ ನಡುವಣ ಗಡಿ ಸಮಸ್ಯೆಯೂ ಪರಿಹಾರವಾದರೆ, ಈ ಪ್ರದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂಬುದು ಈ ಗುರಿಯ ಹಿಂದಿನ ದೂರದ ಆಲೋಚನೆ. ಮಾತುಕತೆಯ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಯುಎಇ ಮತ್ತು ಅಮೆರಿಕ ಇಂಗಿತ ವ್ಯಕ್ತಪಡಿಸಿವೆ. ಈ ರಾಷ್ಟ್ರಗಳು ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಲು ಭಾರತ ಅವಕಾಶ ನೀಡುತ್ತದೆಯೇ ಎಂಬುದೇ ದೊಡ್ಡ ಪ್ರಶ್ನೆ.
ಈ ಬಿಕ್ಕಟ್ಟಿನ ಮಧ್ಯಸ್ಥಿಕೆ ವಹಿಸುವುದರಿಂದ ಅಮೆರಿಕಕ್ಕೆ ಲಾಭವಿದೆ. ಏಷ್ಯಾ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯಕ್ಕೆ ಈ ಮೂಲಕ ಅಮೆರಿಕವು ಪೆಟ್ಟು ನೀಡಿದಂತಾಗುತ್ತದೆ. ತಾಲಿಬಾನ್ ಉಗ್ರರ ಉಪಟಳದಿಂದ ತತ್ತರಿಸಿರುವ ಅಫ್ಗಾನಿಸ್ತಾನದ ವಿವಿಧ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಲು ಭಾರತ-ಪಾಕಿಸ್ತಾನ ಪೈಪೋಟಿ ನಡೆಸುತ್ತಿವೆ. ಅಲ್ಲಿ, ಮೂಲಸೌಕರ್ಯ ಅಭಿವೃದ್ಧಿಪಡಿಸಲು ಭಾರತವು ದೊಡ್ಡಮಟ್ಟದ ಹಣ ವಿನಿಯೋಗಿಸಿದೆ. ಪಾಕಿಸ್ತಾನವೂ ನೆರವಾಗಿದೆ. ‘ಅಫ್ಗಾನಿಸ್ತಾನದಲ್ಲಿ ಶಾಂತಿ ನೆಲೆಸಲು ವಹಿಸುತ್ತಿರುವಷ್ಟೇ ಆಸ್ಥೆಯನ್ನು, ಪಾಕಿಸ್ತಾನವು ತನ್ನ ಇತರ ಗಡಿಯತ್ತಲೂ ವಹಿಸಬೇಕು’ ಎಂದು ಅಮೆರಿಕವು ಈಚೆಗಷ್ಟೇ ಹೇಳಿತ್ತು. ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ ಇಲ್ಲವಾಗಿದ್ದ ನೆರವು, ಜೋ ಬೈಡನ್ ಅವಧಿಯಲ್ಲಿ ಮರಳುವ ಸಾಧ್ಯತೆ ಇರುವ ಕಾರಣ ಪಾಕಿಸ್ತಾನವೂ ಅಮೆರಿಕದ ಸಲಹೆಗೆ ತಲೆಬಾಗುವ ಸಾಧ್ಯತೆಗಳು ಅತ್ಯಧಿಕವಾಗಿವೆ.
ಆಧಾರ: ರಾಯಿಟರ್ಸ್, ಬ್ಲೂಮ್‌ಬರ್ಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.