ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ (ಇ.ವಿ.) ಬಳಕೆ ಇನ್ನೂ ಆರಂಭಿಕ ಹಂತದಲ್ಲಿದೆ. ಇ.ವಿ.ಗಳ ಬಳಕೆಯನ್ನು ಉತ್ತೇಜಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇ.ವಿ.ಗಳ ಖರೀದಿಗೆ ಸಾಲ ನೀಡಿಕೆ, ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ನೀತಿ ಆಯೋಗವು ‘ಭಾರತದಲ್ಲಿ ಇ.ವಿ.ಗಳ ಬ್ಯಾಂಕಿಂಗ್’ ಎಂಬ ವರದಿಯಲ್ಲಿ ಹೇಳಿದೆ.
ಇ.ವಿ.ಗಳನ್ನು ಆದ್ಯತಾ ವಲಯವಾಗಿ ಪರಿಗಣಿಸಬೇಕು ಎಂದು ನೀತಿ ಆಯೋಗವು ತನ್ನ ವರದಿಯಲ್ಲಿ ಹೇಳಿದೆ. ಇ.ವಿ.ಗಳ ಮಾರಾಟ ಮತ್ತು ಖರೀದಿಯಲ್ಲಿ ಇರುವ ತೊಡಕುಗಳು, ಅವುಗಳ ನಿರ್ವಹಣೆಯಲ್ಲಿರುವ ಸವಾಲುಗಳು ಮತ್ತು ಇ.ವಿ.ಗಳಿಂದಾಗುವ ಲಾಭಗಳ ಬಗ್ಗೆ ನೀತಿ ಆಯೋಗವು ತನ್ನ ವರದಿಯಲ್ಲಿ ವಿವರಿಸಿದೆ. ಈ ಮೂಲಕ, ಈ ವಲಯವನ್ನು ಆದ್ಯತಾ ವಲಯವನ್ನಾಗಿ ಏಕೆ ಪರಿಗಣಿಸಬೇಕು ಎಂಬುದನ್ನು ವಿವರಿಸಿದೆ.
ಸ್ವಂತ ಬಳಕೆಗಾಗಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳು, ವಾಣಿಜ್ಯ ಬಳಕೆಗಾಗಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಬಳಕೆಯ ಅಗತ್ಯ ಮತ್ತು ಲಾಭಗಳನ್ನು ವರದಿಯಲ್ಲಿ ವಿವರಿಸಲಾಗಿದೆ. ವಿದ್ಯುತ್ ಚಾಲಿತ ಸರಕು ಸಾಗಣೆ ಆಟೊ, ವಿದ್ಯುತ್ ಚಾಲಿತ ಟ್ಯಾಕ್ಸಿಗಳ ಬಳಕೆಯಿಂದ ಒಟ್ಟು ನಿರ್ವಹಣೆಯ ವೆಚ್ಚ ಕಡಿಮೆಯಾಗುತ್ತದೆ. ದೀರ್ಘಾವಧಿಯಲ್ಲಿ ಇದರಿಂದ ಮಾಲೀಕರಿಗೆ ಲಾಭ ಹೆಚ್ಚಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮುಂದಿನ ದಿನಗಳಲ್ಲಿ ಇ.ವಿ. ವಲಯವನ್ನು ದೇಶದ ಮೂಲಸೌಕರ್ಯ ವಲಯದಲ್ಲಿ ಒಂದು ಪ್ರಮುಖ ಉಪವಲಯವನ್ನಾಗಿ ಪರಿಗಣಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಇ.ವಿ. ಮತ್ತು ಚಾರ್ಜಿಂಗ್ ಮೂಲಸೌಕರ್ಯದಲ್ಲಿ ಹೂಡಿಕೆ
ದೇಶದಲ್ಲಿ ಇ.ವಿ.ಗಳ ತಯಾರಿಕೆ ಮತ್ತು ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಖಾಸಗಿ ಕಂಪನಿಗಳು ಗರಿಷ್ಠ ಪ್ರಮಾಣದಲ್ಲಿ ಹೂಡಿಕೆ ಮಾಡಿವೆ. ಇದರಲ್ಲಿ ಸರ್ಕಾರ ನೇರವಾಗಿ ಮತ್ತು ಸರ್ಕಾರಿ ಸಂಸ್ಥೆಗಳ ಮೂಲಕ ಹೂಡಿಕೆ ಮಾಡಬೇಕು ಎಂದು ಆಯೋಗವು ಹೇಳಿದೆ.
ಇ.ವಿ. ವಲಯದ ಮೂಲಸೌಕರ್ಯ ಅಭಿವೃದ್ಧಿಗಾಗಿ 2025ರ ವೇಳೆಗೆ ಒಟ್ಟು ₹40,000 ಕೋಟಿ ಹೂಡಿಕೆಯ ಅವಶ್ಯಕತೆ ಇದೆ. 2030ರ ವೇಳೆಗೆ ₹3.7 ಲಕ್ಷ ಕೋಟಿ ಹೂಡಿಕೆಯ ಅವಶ್ಯಕತೆ ಇದೆ. ಇದು ಕ್ಷಿಪ್ರವಾಗಿ ಬೆಳೆಯುತ್ತಿರುವ ವಲಯವಾದ ಕಾರಣ, ಬ್ಯಾಂಕಿಂಗ್ ವಲಯವು ಇದನ್ನೂ ಆದ್ಯತಾ ವಲಯವಾಗಿ ಪರಿಗಣಿಸಬೇಕು. ಈ ವಲಯದಲ್ಲಿ ಹೂಡಿಕೆಗೆ ಅಗತ್ಯವಿರುವ ಹಣಕಾಸು ನೆರವನ್ನು ಬ್ಯಾಂಕಿಂಗ್ ವಲಯವು ಒದಗಿಸಬೇಕು. ಇದು ಎರಡೂ ವಲಯಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಖರೀದಿ ವೆಚ್ಚ ಹೆಚ್ಚು, ನಿರ್ವಹಣೆ ವೆಚ್ಚ ಕಡಿಮೆ
ಈಗಿನ ಪರಿಸ್ಥಿತಿಯಲ್ಲಿ ಪೆಟ್ರೋಲ್/ಡೀಸೆಲ್ ಎಂಜಿನ್ ವಾಹನಗಳಿಗಿಂತ ಇ.ವಿ.ಗಳು ದುಬಾರಿ. ಹೀಗಾಗಿ ಇ.ವಿ. ಖರೀದಿಯಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಬೇಕಾಗುತ್ತದೆ. ಪೆಟ್ರೋಲ್/ಡೀಸೆಲ್ ಎಂಜಿನ್ ವಾಹನಗಳು ಮತ್ತು ಇ.ವಿ.ಗಳ ಬೆಲೆಯಲ್ಲಿ ಭಾರಿ ಅಂತರವಿದೆ. ದ್ವಿಚಕ್ರ ವಾಹನಗಳ ವಿಚಾರದಲ್ಲಿ ಈ ಅಂತರದ ಪ್ರಮಾಣ ಹೆಚ್ಚು. ಆಟೊಗಳು ಮತ್ತು ವಾಣಿಜ್ಯ ಬಳಕೆಯ ಕಾರುಗಳಲ್ಲೂ ಈ ಅಂತರ ದೊಡ್ಡದೇ ಇದೆ.
ಆದರೆ, ದೀರ್ಘಾವಧಿಯಲ್ಲಿ ಇ.ವಿ.ಗಳ ಒಟ್ಟು ನಿರ್ವಹಣಾ ವೆಚ್ಚ ಕಡಿಮೆ ಇದೆ. ಪೆಟ್ರೋಲ್/ಡೀಸೆಲ್ ಎಂಜಿನ್ ವಾಹನಗಳು ಮತ್ತು ಇ.ವಿ.ಗಳ ಒಟ್ಟು ನಿರ್ವಹಣಾ ವೆಚ್ಚದ ನಡುವೆ ಭಾರಿ ಅಂತರವಿದೆ. ಹೀಗಾಗಿ ಖರೀದಿ ವೇಳೆ ಹೆಚ್ಚು ಹಣ ಹೂಡಿಕೆ ಮಾಡಬೇಕಿದ್ದರೂ, ದೀರ್ಘಾವಧಿಯಲ್ಲಿ ಇ.ವಿ.ಗಳು ಹೆಚ್ಚು ಲಾಭ ತಂದುಕೊಡಲಿವೆ ಎಂದು ನೀತಿ ಆಯೋಗವು ತನ್ನ ವರದಿಯಲ್ಲಿ ಹೇಳಿದೆ.
ಹೀಗಾಗಿಯೇ ವಾಣಿಜ್ಯ ಬಳಕೆಯ ಮಟ್ಟದಲ್ಲಿ ಇ.ವಿ.ಗಳ ಬಳಕೆಯನ್ನು ಉತ್ತೇಜಿಸಬೇಕು ಎಂದು ಆಯೋಗವು ಹೇಳಿದೆ.
ಆಟೋ ರಿಕ್ಷಾ
ಖರೀದಿ ವೆಚ್ಚ
ವಿವರ;ಖರೀದಿ ವೆಚ್ಚ
ಪೆಟ್ರೋಲ್/ಡೀಸೆಲ್ ಎಂಜಿನ್;₹3.02 ಲಕ್ಷ
ಇ.ವಿ. (ಸಬ್ಸಿಡಿ ರಹಿತ);₹5.71 ಲಕ್ಷ
ಇ.ವಿ. (ಸಬ್ಸಿಡಿ ಸಹಿತ);₹4.02 ಲಕ್ಷ
ಒಟ್ಟು ನಿರ್ವಹಣಾವೆಚ್ಚ
ವಿವರ;ಪ್ರತಿ ಕಿ.ಮೀ. ಚಾಲನೆಯಲ್ಲಿ ಒಟ್ಟು ನಿರ್ವಹಣಾ ವೆಚ್ಚ
ಪೆಟ್ರೋಲ್/ಡೀಸೆಲ್ ಎಂಜಿನ್;₹6.20
ಇ.ವಿ. (ಸಬ್ಸಿಡಿ ರಹಿತ);₹2.40
ಇ.ವಿ. (ಸಬ್ಸಿಡಿ ಸಹಿತ);₹1.90
* ಡೀಸೆಲ್ ಅಥವಾ ಪೆಟ್ರೋಲ್ ಎಂಜಿನ್ ಇರುವ ಸರಕು ಸಾಗಣೆ ಆಟೊ ಖರೀದಿಗೆ ಅಂದಾಜು ₹3 ಲಕ್ಷ ವೆಚ್ಚ ಮಾಡಬೇಕಾಗುತ್ತದೆ. ಆದರೆ ಅದೇ ಸಾಮರ್ಥ್ಯದ ವಿದ್ಯುತ್ ಚಾಲಿತ ಸರಕು ಸಾಗಣೆ ಆಟೊ ಖರೀದಿಸಲು ₹5.71 ಲಕ್ಷ ವೆಚ್ಚ ಮಾಡಬೇಕಾಗುತ್ತದೆ. ಸರ್ಕಾರದ ಸಹಾಯಧನ ದೊರೆತರೆ ಖರೀದಿ ವೆಚ್ಚ ₹4 ಲಕ್ಷಕ್ಕೆ ಇಳಿಯುತ್ತದೆ.
*ಡೀಸೆಲ್ ಅಥವಾ ಪೆಟ್ರೋಲ್ ಎಂಜಿನ್ ಇರುವ ಸರಕು ಸಾಗಣೆ ಆಟೊ ಬೆಲೆಗೆ ಹೋಲಿಸಿದರೆ, ಸಹಾಯಧನದೊಂದಿಗೆ ಇ.ವಿ. ಖರೀದಿಗೆ ₹1 ಲಕ್ಷವನ್ನು ಹೆಚ್ಚುವರಿಯಾಗಿ ಹೂಡಿಕೆ ಮಾಡಬೇಕಾಗುತ್ತದೆ.
* ಡೀಸೆಲ್ ಅಥವಾ ಪೆಟ್ರೋಲ್ ಎಂಜಿನ್ ಇರುವ ಸರಕು ಸಾಗಣೆ ಆಟೊವನ್ನು ಒಂದು ಕಿ.ಮೀ. ಚಲಾಯಿಸಲು ₹6.20 ವೆಚ್ಚ ಮಾಡಬೇಕಾಗುತ್ತದೆ. ಆದರೆ ಇ.ವಿ.ಯನ್ನು ಒಂದು ಕಿ.ಮೀ. ಚಾಲನೆ ಮಾಡಲು ₹1.90 ವೆಚ್ಚವಾಗುತ್ತದೆ. ಇಲ್ಲಿ ಮಾಲೀಕನಿಗೆ ಅಂದಾಜು ₹4 ಉಳಿತಾಯವಾಗುತ್ತದೆ. ದೀರ್ಘಾವಧಿಯಲ್ಲಿ ಇದರಿಂದ ಲಾಭದ ಪ್ರಮಾಣ ಹೆಚ್ಚಾಗಲಿದೆ.
ವಾಣಿಜ್ಯ ಬಳಕೆಯ ಪ್ರಯಾಣಿಕರ ಕಾರು
ಖರೀದಿ ವೆಚ್ಚ
ವಿವರ;ಖರೀದಿ ವೆಚ್ಚ (ಮಾರುಕಟ್ಟೆ ಸರಾಸರಿ ಬೆಲೆ)
ಪೆಟ್ರೋಲ್ ಎಂಜಿನ್;₹9.15 ಲಕ್ಷ
ಡೀಸೆಲ್ ಎಂಜಿನ್;₹12.04 ಲಕ್ಷ
ಸಿಎನ್‌ಜಿ ಎಂಜಿನ್;₹15.22 ಲಕ್ಷ
ಇ.ವಿ. (ಸಬ್ಸಿಡಿ ರಹಿತ);₹21.14 ಲಕ್ಷ
ಇ.ವಿ. (ಸಬ್ಸಿಡಿ ಸಹಿತ);₹15.75 ಲಕ್ಷ
ಒಟ್ಟು ನಿರ್ವಹಣಾ ವೆಚ್ಚ
ವಿವರ;ಪ್ರತಿ ಕಿ.ಮೀ. ಚಾಲನೆಯಲ್ಲಿ ಒಟ್ಟು ನಿರ್ವಹಣಾ ವೆಚ್ಚ
ಪೆಟ್ರೋಲ್ ಎಂಜಿನ್;₹11.60
ಡೀಸೆಲ್ ಎಂಜಿನ್;₹10.30
ಸಿಎನ್‌ಜಿ ಎಂಜಿನ್;₹7.80
ಇ.ವಿ. (ಸಬ್ಸಿಡಿ ರಹಿತ);₹8.70
ಇ.ವಿ. (ಸಬ್ಸಿಡಿ ಸಹಿತ);₹6.10
*ವಾಣಿಜ್ಯ ಬಳಕೆಗೆ, ಡೀಸೆಲ್ ಅಥವಾ ಪೆಟ್ರೋಲ್ ಎಂಜಿನ್ ಇರುವ ಪ್ರಯಾಣಿಕರ ಕಾರು ಖರೀದಿಸಲು ಅಂದಾಜು ₹9ರಿಂದ ₹12 ಲಕ್ಷ ವೆಚ್ಚ ಮಾಡಬೇಕಾಗುತ್ತದೆ.ಆದರೆ ಅದೇ ಸಾಮರ್ಥ್ಯದ ವಿದ್ಯುತ್ ಚಾಲಿತ ಕಾರನ್ನು ಖರೀದಿಸಲು ₹ 21 ಲಕ್ಷ ವೆಚ್ಚವಾಗುತ್ತದೆ. ಸರ್ಕಾರದ ಸಹಾಯಧನ ದೊರೆತರೆ ಅದೇ ಕಾರು ಅಂದಾಜು ₹ 15.75 ಲಕ್ಷಕ್ಕೆ ದೊರೆಯುತ್ತದೆ.
*ಡೀಸೆಲ್ ಅಥವಾ ಪೆಟ್ರೋಲ್ ಎಂಜಿನ್ ಕಾರಿನ ಬೆಲೆಗೆ ಹೋಲಿಸಿದರೆ, ಸಹಾಯಧನದೊಂದಿಗೆ ಇ.ವಿ. ಖರೀದಿಗೆ ಅಂದಾಜು ₹3–6 ಲಕ್ಷವನ್ನು ಹೆಚ್ಚುವರಿಯಾಗಿ ಹೂಡಿಕೆ ಮಾಡಬೇಕಾಗುತ್ತದೆ.
* ವಾಣಿಜ್ಯ ಬಳಕೆಯ, ಡೀಸೆಲ್ ಅಥವಾ ಪೆಟ್ರೋಲ್ ಎಂಜಿನ್ ಇರುವ ಪ್ರಯಾಣಿಕರ ಕಾರನ್ನು ಒಂದು ಕಿ.ಮೀ. ಚಲಾಯಿಸಲು ಅಂದಾಜು ₹10ರಿಂದ ₹12 ವೆಚ್ಚ ಮಾಡಬೇಕಾಗುತ್ತದೆ. ಆದರೆ ಇ.ವಿ.ಯನ್ನು ಒಂದು ಕಿ.ಮೀ. ಚಾಲನೆ ಮಾಡಲು ₹6 ವೆಚ್ಚವಾಗುತ್ತದೆ. ಇಲ್ಲಿ ಮಾಲೀಕನಿಗೆ ಅಂದಾಜು ₹4ರಿಂದ ₹6 ಉಳಿತಾಯವಾಗುತ್ತದೆ. ದೀರ್ಘಾವಧಿಯಲ್ಲಿ ಇದರಿಂದ ಲಾಭದ ಪ್ರಮಾಣ ಹೆಚ್ಚಾಗಲಿದೆ.
ಹಲವು ಲಾಭಗಳು
ಇ.ವಿ.ಗಳ ಬಳಕೆಯಿಂದ ಆರ್ಥಿಕ ಲಾಭವಷ್ಟೇ ಆಗುವುದಿಲ್ಲ. ಬದಲಿಗೆ ಇಂಗಾಲದ ಡೈ ಆಕ್ಸೈಡ್‌ನ ಮಾಲಿನ್ಯದ ಪ್ರಮಾಣವೂ ಇಳಿಕೆಯಾಗುತ್ತದೆ. ಇದರಿಂದ ಜಾಗತಿಕ ತಾಪಮಾನ ನಿಯಂತ್ರಣ ಸಾಧ್ಯವಾಗುತ್ತದೆ. ಹೀಗೆ ಇ.ವಿ.ಗಳ ಬಳಕೆಯಿಂದ ಏಕಕಾಲದಲ್ಲಿ ಎರಡು ರೀತಿಯ ಅನುಕೂಲಗಳು ಇವೆ.
159 ಟನ್
ದೆಹಲಿಯಲ್ಲಿ 5 ಲಕ್ಷದಷ್ಟು ಇ.ವಿ.ಗಳು ಬಳಕೆಗೆ ಬಂದರೆ, ಪಿ.ಎಂ.2.5 ಗಾತ್ರದ ಮಾಲಿನ್ಯಕಾರಕ ಕಣಗಳ ಮಾಲಿನ್ಯದಲ್ಲಿ ಆಗುವ ಇಳಿಕೆ ಪ್ರಮಾಣ.
74 ಲಕ್ಷ ಟನ್
ಕೇಂದ್ರ ಸರ್ಕಾರದ ಫೇಮ್–2 ಸಹಾಯಧನ ಯೋಜನೆ ಅಡಿ ರಸ್ತೆಗೆ ಇಳಿಯುವ ಎಲ್ಲಾ ವಾಹನಗಳ ಬಳಕೆಯಿಂದ, ಅವುಗಳ ಜೀವಿತಾವಧಿಯಲ್ಲಿ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯಲ್ಲಿ ಆಗುವ ಇಳಿಕೆ.
₹17,000 ಕೋಟಿ
ಕೇಂದ್ರ ಸರ್ಕಾರದ ಫೇಮ್–2 ಸಹಾಯಧನ ಯೋಜನೆ ಅಡಿ ರಸ್ತೆಗೆ ಇಳಿಯುವ ಎಲ್ಲಾ ವಾಹನಗಳ ಬಳಕೆಯಿಂದ, ಅವುಗಳ ಜೀವಿತಾವಧಿಯಲ್ಲಿ ದೇಶದ ಕಚ್ಚಾತೈಲ ಆಮದು ವೆಚ್ಚದಲ್ಲಿ ಆಗುವ ಇಳಿಕೆ.
ಆಧಾರ : ನೀತಿ ಆಯೋಗದ ‘ಭಾರತದಲ್ಲಿ ಇ.ವಿ.ಗಳ ಬ್ಯಾಂಕಿಂಗ್’ ವರದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.