ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ₹12,950 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮಂಗಳವಾರ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ 70 ವರ್ಷ ಮೇಲಿನ ಹಿರಿಯ ನಾಗರಿಕರಿಗೆ ಆರೋಗ್ಯ ವಿಮಾ ಸೌಲಭ್ಯ ನೀಡುವ ಆಯುಷ್ಮಾನ್ ಭಾರತ್ ಯೋಜನೆಗೂ ಹಸಿರು ನಿಶಾನೆ ತೋರಿದರು.
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (AB PM-JAY) ಕುರಿತು ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಆದಾಯ ಮಿತಿ ಇಲ್ಲದೆ 70 ವರ್ಷ ದಾಟಿದ ಪ್ರತಿ ಹಿರಿಯರಿಗೂ ₹5 ಲಕ್ಷ ವರೆಗಿನ ಆರೋಗ್ಯ ವಿಮಾ ಯೋಜನೆ ಇದಾಗಿದೆ.
ಈ ಯೋಜನೆಯ ಲಾಭ 4.5 ಕೋಟಿ ಕುಟುಂಬಗಳಿಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ. 6 ಕೋಟಿ ಹಿರಿಯ ನಾಗರಿಕರಿಗೆ ಈ ಯೋಜನಯಡಿಯಲ್ಲಿ ತಲಾ ₹5 ಲಕ್ಷ ಸಿಗಲಿದೆ.
ಪಿಎಂ–ಜನ ಆರೋಗ್ಯ ಯೋಜನೆಗೆ ಈಗಾಗಲೇ ನೋಂದಾಯಿಸಿದ ಹಿರಿಯರಿಗೆ ಈ ನೂತನ ವಿಮಾ ಯೋಜನೆಯ ಮೂಲಕ ಹೆಚ್ಚುವರಿ ಅನುದಾನ ಸಿಗಲಿದೆ. ಅಂದರೆ ಪ್ರತಿ ವರ್ಷ ₹5 ಲಕ್ಷವರೆಗೆ ಪ್ರತ್ಯೇಕ ಆರೋಗ್ಯ ವಿಮೆ ಸಿಗಲಿದೆ. ಈ ಮೊತ್ತವನ್ನು ತಮ್ಮ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುವ ಅಗತ್ಯ ಇರುವುದಿಲ್ಲ.
70 ವರ್ಷ ದಾಟಿದ ವ್ಯಕ್ತಿಯು ಈಗಾಗಲೇ ಸರ್ಕಾರದ ಇತರ ಯೋಜನೆಗಳ ಮೂಲಕ ಆರೋಗ್ಯ ವಿಮೆ ಪಡೆದಿದ್ದರೆ ಅಂಥವರು ಇರುವ ಯೋಜನೆ ಅಥವಾ AB PM-JAY ಯೋಜನೆಯ ಪ್ರಯೋಜನ ಪಡೆಯಬಹುದು. ಅಂದರೆ, ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆ (CGHS), ಮಾಜಿ ಸೈನಿಕರ ಆರೋಗ್ಯ ಯೋಜನೆ (ECHS) ಹಾಗೂ ಆಯುಷ್ಮಾನ್ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಯೋಜನೆ ಇದ್ದಲ್ಲಿ ಅದನ್ನು ಪಡೆಯಬಹುದು ಅಥವಾ AB PM-JAY ಯೋಜನೆಯನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು
ಖಾಸಗಿ ಕಂಪನಿಗಳ ಆರೋಗ್ಯ ವಿಮೆ ಅಥವಾ ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ವಿಮಾ ಯೋಜನೆ ಹೊಂದಿದ್ದರೂ AB PM-JAY ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಹರು.
ಈ ಯೋಜನೆಯಲ್ಲಿ ವೈದ್ಯಕೀಯ ತಪಾಸಣೆ, ಸಮಾಲೋಚನೆ ಹಾಗೂ ಚಿಕಿತ್ಸೆ ಲಭ್ಯ
ಆಸ್ಪತ್ರೆ ದಾಖಲಾಗುವ ಪೂರ್ವ
ಔಷಧ ಹಾಗೂ ಇತರ ಯಾವುದೇ ವೈದ್ಯಕೀಯ ಪೂರಕ ಸಪ್ಲಿಮೆಂಟ್ಸ್
ತೀವ್ರವಲ್ಲದ ಹಾಗೂ ತೀವ್ರ ನಿಗಾ ಘಟಕ
ಡಯಾಗ್ನಾಸ್ಟಿಕ್ ಹಾಗೂ ಪ್ರಯೋಗಾಲಯ ತಪಾಸಣೆ
ಅಗತ್ಯವಿದ್ದಲ್ಲಿ ವೈದ್ಯಕೀಯ ಅಳವಡಿಕೆ ಸೇವೆಗಳು
ಆಸ್ಪತ್ರೆ ದಾಖಲಾತಿ
ಆಹಾರ ಸೌಲಭ್ಯ
ಚಿಕಿತ್ಸೆ ಸಂದರ್ಭದಲ್ಲಿ ಎದುರಾಗುವ ಕೆಲ ಸಮಸ್ಯೆಗಳು
ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ 15 ದಿನಗಳವರೆಗೆ ಆರೈಕೆ
ಹಂತ–1: pmjay.gov.in ಅಂತರ್ಜಾಲಪುಟ ಪ್ರವೇಶಿಸಬೇಕು
ಹಂತ–2: ಅಲ್ಲಿ ಪುಟದ ಬಲಭಾಗದಲ್ಲಿರುವ Am I Eligible ಎಂಬ ಟ್ಯಾಬ್ ಕ್ಲಿಕ್ಕಿಸಬೇಕು.
ಹಂತ– 3: ಮೊಬೈಲ್ ಸಂಖ್ಯೆ ನಮೂದಿಸಬೇಕು. ಕ್ಯಾಪ್ಚಾ ಕೋಡ್ ನಮೂದಿಸಬೇಕು ನಂತರ ತಮ್ಮ ಮೊಬೈಲ್‌ಗೆ ಬರುವ ಒಟಿಪಿ ದಾಖಲಿಸಬೇಕು
ಹಂತ– 4: ತಾವು ಇರುವ ರಾಜ್ಯದ ಹೆಸರು, ರೇಷನ್ ಕಾರ್ಡ್ ಸಂಖ್ಯೆ, ಮನೆ ವಿಳಾಸ ಅಥವಾ ಮೊಬೈಲ್ ಸಂಖ್ಯೆ ನಮೂದಿಸಬೇಕು
ಆಯುಷ್ಮಾನ್ ಭಾರತ್ ಯೋಜನೆಗೆ ಈಗಾಗಲೇ ಕುಟುಂಬ ನೋಂದಾಯಿಸಿದ್ದರೆ ಅಲ್ಲಿ ಹೆಸರು ಕಾಣಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.