ADVERTISEMENT

EXPLAINER | ಅಮೆರಿಕ ಅಧ್ಯಕ್ಷೀಯ ಚುನಾವಣೆ: ಗೆದ್ದವರ‍್ಯಾರು ಗೊತ್ತಾಗುವುದೆಂದು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ನವೆಂಬರ್ 2024, 15:00 IST
Last Updated 5 ನವೆಂಬರ್ 2024, 15:00 IST
<div class="paragraphs"><p>ಡೊನಾಲ್ಡ್ ಟ್ರಂಪ್ ಹಾಗೂ ಕಮಲಾ ಹ್ಯಾರಿಸ್</p></div>

ಡೊನಾಲ್ಡ್ ಟ್ರಂಪ್ ಹಾಗೂ ಕಮಲಾ ಹ್ಯಾರಿಸ್

   

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಂತಿಮ ಚರಣ ತಲುಪಿದ್ದು, ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ಸಂಜೆ 4ಕ್ಕೆ ಕೊನೆಯ ಹಂತದ ಮತದಾನ ಆರಂಭಗೊಂಡಿದೆ. ಇದು ಬುಧವಾರ ಬೆಳಿಗ್ಗೆ 4.30ಕ್ಕೆ ಕೊನೆಗೊಳ್ಳಲಿದೆ. ಬುಧವಾರ 11.30ಕ್ಕೆ ಕೊನೆಯ ಹಂತದ ಮತದಾನ ಪೂರ್ಣಗೊಳ್ಳಲಿದೆ.

ಈ ಹಿಂದೆ ನಡೆದಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ನಡೆದ ದಿನ ರಾತ್ರಿ ಅಥವಾ ಮರುದಿನ ಬೆಳಿಗ್ಗೆ ವಿಜೇತ ಅಭ್ಯರ್ಥಿಯ ಹೆಸರು ಘೋಷಣೆಯಾಗಿತ್ತು. ಆದರೆ ಈ ಬಾರಿ ಅಮೆರಿಕದ ಹಲವು ಪ್ರಾಂತ್ಯಗಳಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ ನಡುವೆ ತೀವ್ರ ಪೈಪೋಟಿ ನಡೆದಿರುವ ಕಾರಣ, ಮತ ಎಣಿಕೆ ಪ್ರಕ್ರಿಯೆ ತುಸು ದೀರ್ಘವಾಗುವ ಹಾಗೂ ಗೆಲುವಿನ ಅಂತರ ತೀರಾ ಕಡಿಮೆಯಾದಲ್ಲಿ ಮರು ಎಣಿಕೆಯ ಸಾಧ್ಯತೆಯೂ ಇದೆ ಎಂದು ಬಿಬಿಸಿ ವರದಿ ಮಾಡಿದೆ.

ADVERTISEMENT

ಉದಾಹರಣೆಗೆ 2020ರಲ್ಲಿ ಪೆನ್ಸಿಲ್ವೇನಿಯಾದಲ್ಲಿ ಇಬ್ಬರು ಸ್ಪರ್ಧಿಗಳ ನಡುವಿನ ಮತಗಳ ಅಂತರ ಶೇ 1.1ರಷ್ಟಿತ್ತು. ಒಂದೊಮ್ಮೆ ಈ ಬಾರಿ ಈ ಅಂತರ ಶೇ 0.5ಕ್ಕಿಂತ ಕಡಿಮೆಯಾದಲ್ಲಿ ಮರು ಎಣಿಕೆ ನಡೆಸಬೇಕಾಗಬಹುದು. ಕಾನೂನು ಸಂಘರ್ಷವೂ ಎದುರಾಗಬಹುದು. ರಿಪಬ್ಲಿಕನ್ ಪಕ್ಷವು ಚುನಾವಣಾ ಪೂರ್ವ ವ್ಯಾಜ್ಯವಾಗಿ 100ಕ್ಕೂ ಹೆಚ್ಚು ದಾವೆಗಳನ್ನು ಈಗಾಗಲೇ ಹೂಡಿದೆ. ಮತದಾರರ ಅರ್ಹತೆ ಹಾಗೂ ಮತದಾರರ ಪಟ್ಟಿ ನಿರ್ವಹಣೆಯಂತ ಪ್ರಕರಣಗಳೂ ಇವೆ. 

ಮತ್ತೊಂದೆಡೆ, ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮಿಚಿಗನ್‌ ಪ್ರಾಂತ್ಯದಲ್ಲಿ ಮತ ಎಣಿಕೆ ವೇಗ ಪಡೆದುಕೊಂಡಿದೆ. ಇಲ್ಲಿ ಕೋವಿಡ್‌ ಸಾಂಕ್ರಾಮಿಕ ಸಂದರ್ಭಕ್ಕಿಂತಲೂ ಈ ಬಾರಿ ಅತಿ ಕಡಿಮೆ ಅಂಚೆ ಮತಗಳು ಚಲಾವಣೆಯಾಗಿವೆ ಎಂದು ವರದಿಯಾಗಿದೆ. 

ಈ ಹಿಂದಿನ ಚುಣಾವಣೆಗಳಲ್ಲಿ ಫಲಿತಾಂಶ ಘೋಷಣೆ ಎಂದಾಗಿತ್ತು?

2020ರ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್‌ ವಿಜೇತ ಎಂದು ಘೋಷಿಸಲು ನಾಲ್ಕು ದಿನ ತೆಗೆದುಕೊಳ್ಳಲಾಗಿತ್ತು. ಪೆನ್ಸಿಲ್ವೇನಿಯಾದ ಫಲಿತಾಂಶ ಅಂತಿಮಗೊಂಡ ನಂತರವಷ್ಟೇ ಅಂತಿಮ ಫಲಿತಾಂಶ ಘೋಷಣೆಯಾಗಿತ್ತು.

2016ರಲ್ಲಿ ಮತದಾನ ಪೂರ್ಣಗೊಂಡ ನಂತರ ಮಧ್ಯಾಹ್ನ 1.30 ರೊಳಗಾಗಿ (ಭಾರತೀಯ ಕಾಲಮಾನ) ವಿಜೇತ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೆಸರು ಘೋಷಣೆಯಾಗಿತ್ತು.

2012ರಲ್ಲಿ ಬರಾಕ್ ಒಬಾಮಾ ಅವರು ಎರಡನೇ ಬಾರಿಗೆ ಅಧ್ಯಕ್ಷರಾದ ಸಂದರ್ಭದಲ್ಲಿ ಚುನಾವಣೆ ನಡೆದ ದಿನ ಮಧ್ಯರಾತ್ರಿ ಘೋಷಣೆಯಾಗಿತ್ತು.

2000 ಇಸವಿಯ ಚುನಾವಣೆಯಲ್ಲಿ ಜಾರ್ಜ್ ಡಬ್ಲೂ. ಬುಷ್ ಹಾಗೂ ಅಲ್ ಗೋರ್‌ ಅವರ ನಡುವಿನ ಸ್ಪರ್ಧೆ ತೀರಾ ಭಿನ್ನವಾಗಿತ್ತು. ಈ ಚುನಾವಣೆಯಲ್ಲಿ ಗೆದ್ದವರು ಯಾರು ಎಂಬುದು ಘೋಷಣೆಯಾಗಿದ್ದು ಐದು ವಾರಗಳ ನಂತರ. ಫ್ಲೊರಿಡಾದಲ್ಲಿ ಮತ ಮರು ಎಣಿಕೆಯನ್ನು ಸ್ಥಗಿತಗೊಳಿಸುವಂತೆ ಅಮೆರಿಕದ ಸುಪ್ರೀಂ ಕೋರ್ಟ್ ಹಕ್ಕು ಚಲಾಯಿಸಿದ ನಂತರವಷ್ಟೇ ಬುಷ್‌ ಫಲಿತಾಂಶ ಪ್ರಕಟವಾಗಿತ್ತು. ಶ್ವೇತ ಭವನವನ್ನು ಬುಷ್‌ ಕೈಗೆ ಒಪ್ಪಿಸಲಾಗಿತ್ತು.

ಯಾವ ರಾಜ್ಯಗಳು ನಿರ್ಣಾಯಕ..? ಫಲಿತಾಂಶ ಪ್ರಕಟವಾಗುವುದು ಎಂದು? 

ಜಾರ್ಜಿಯಾ: ಭಾರತೀಯ ಕಾಲಮಾನ ಪ್ರಕಾರ ಬುಧವಾರ ನಸುಕಿನ 5.30ಕ್ಕೆ ಇಲ್ಲಿ ಮತದಾನ ಕೊನೆಗೊಳ್ಳಲಿದೆ. ಚುನಾವಣಾಧಿಕಾರಿ ಪ್ರಕಾರ ಶೇ 75ರಷ್ಟು ಮತಗಳು ಮೊದಲ 2 ಗಂಟೆಯೊಳಗೆ ಎಣಿಕೆಯಾಗಲಿದೆ ಎಂದು ಅಂದಾಜಿಸಿದ್ದಾರೆ.

ನಾರ್ಥ್ ಕ್ಯಾರೊಲಿನಾ: ಜಾರ್ಜಿಯಾದಲ್ಲಿನ ಮತದಾನ ಕೊನೆಗೊಂಡ 30 ನಿಮಿಷ ನಂತರ ಇಲ್ಲಿ ಮತದಾನ ಕೊನೆಗೊಳ್ಳಲಿದೆ. ಬುಧವಾರ ರಾತ್ರಿಯೊಳಗೆ ಇಲ್ಲಿ ಮತ ಎಣಿಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಪೆನ್ಸಿಲ್ವೇನಿಯಾ: ಬುಧವಾರ ಬೆಳಿಗ್ಗೆ 6.30ಕ್ಕೆ ಇಲ್ಲಿ ಮತದಾನ ಕೊನೆಗೊಳ್ಳಲಿದೆ. ಆದರೆ, ಇಲ್ಲಿ ಮತ ಎಣಿಕೆಗೆ ಕನಿಷ್ಠ 24 ಗಂಟೆಗಳ ಅಗತ್ಯವಿದೆ ಎಂದೆನ್ನಲಾಗಿದೆ.

ಮಿಚಿಗನ್‌: ಬುಧವಾರ ಬೆಳಿಗ್ಗೆ 7.30ಕ್ಕೆ ಮತದಾನ ಕೊನೆಗೊಳ್ಳಲಿದೆ. ಗುರುವಾರವರೆಗೂ ಇಲ್ಲಿನ ಫಲಿತಾಂಶ ಪ್ರಕಟ ಅಸಾಧ್ಯ ಎಂದೆನ್ನಲಾಗಿದೆ.

ವಿಸ್ಕಾನ್ಸಿನ್‌: ಬುಧವಾರ ಬೆಳಿಗ್ಗೆ 7.30ಕ್ಕೆ ಮತದಾನ ಕೊನೆಗೊಂಡ ಕೆಲವೇ ಗಂಟೆಗಳಲ್ಲಿ ಇಲ್ಲಿನ ಫಲಿತಾಂಶ ಪ್ರಕಟ ಸಾಧ್ಯ. ಆದರೆ ಕೆಲ ತಜ್ಞರ ಅಂದಾಜಿನ ಪ್ರಕಾರ ಗುರುವಾರದವರೆಗೂ ಫಲಿತಾಂಶ ಪ್ರಕಟ ಅಸಾಧ್ಯ ಎಂದೆನ್ನಲಾಗಿದೆ.

ಆರಿಜೋನಾ: ಇಲ್ಲಿ ನಡೆದಿರುವ ಮತದಾನ ಪ್ರಕಾರ ಬುಧವಾರ ಬೆಳಿಗ್ಗೆ 8.30ಕ್ಕೆ ಆರಂಭಿಕ ಫಲಿತಾಂಶ ನಿರೀಕ್ಷಿಸಬಹುದು. ಆದರೆ ಚುನಾವಣಾ ದಿನ ನಡೆಸಬೇಕಾದ ಅಂಚೆ ಮತಗಳ ಎಣಿಕೆ ಪೂರ್ಣಗೊಳ್ಳದ ಕಾರಣ ಇದು ಗುರುವಾರದವರೆಗೂ ಎಳೆಯಬಹುದು.

ನೆವಾಡಾ: ಇಲ್ಲಿನ ಮತ ಎಣಿಕೆಗೆ ಹಲವು ದಿನಗಳೇ ಬೇಕಾಗಬಹುದು ಎಂದೆನ್ನಲಾಗಿದೆ. ಮತದಾನದ ದಿನದವರೆಗೂ ಅಂಚೆ ಮತಗಳನ್ನು ಕಳುಹಿಸಲು ಈ ರಾಜ್ಯದಲ್ಲಿ ಅನುಮತಿಸಿರುವ ಕಾರಣ, ನ. 9ರವರೆಗೂ ಮತ ಎಣಿಕೆ ನಡೆಯುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.

ಮತ ಎಣಿಕೆ ಹೇಗೆ ನಡೆಯಲಿದೆ?

ಅಮೆರಿಕದ ಚುನಾವಣೆಯಲ್ಲಿ ಮತದಾನದ ಅಂತಿಮ ದಿನ ನಡೆಯುವ ಮತಗಳ ಎಣಿಕೆ ಮೊದಲು ನಡೆಯುತ್ತದೆ. ನಂತರ ಆರಂಭದ ದಿನದಲ್ಲಿ ನಡೆದ ಮತಗಳ ಎಣಿಕೆ, ಅಂಚೆ ಮತಗಳು, ಪ್ರಶ್ನಿಸಲಾದ ಮತಗಳು, ಸಾಗರೋತ್ತರ ಹಾಗೂ ಸೇನಾ ಮತಗಳ ಎಣಿಕೆ ನಡೆಯುತ್ತದೆ.

ಕ್ಯಾನ್ವಾಸಿಂಗ್ ಎಂದು ಕರೆಯಲಾಗುವ ಮತ ಎಣಿಕೆಯಲ್ಲಿ ಕೆಲವೊಮ್ಮೆ ನೇಮಕಗೊಳ್ಳುವ ಅಥವಾ ಆಯ್ಕೆಯಾಗುವ ಸ್ಥಳೀಯ ಚುನಾವಣಾಧಿಕಾರಿ ಪ್ರತಿಯೊಂದು ಮತಗಳನ್ನು ಪರಿಶೀಲಿಸಿ ಅದನ್ನು ದಾಖಲಿಸುತ್ತಾರೆ.

ಮತದಾರರ ಪಟ್ಟಿಯಲ್ಲಿರುವ ಸಂಖ್ಯೆಗೂ ಚಲಾವಣೆಗೊಂಡ ಮತಗಳನ್ನೂ ಪರಿಶೀಲಿಸಿ, ಅವುಗಳಲ್ಲಿ ತಿರಸ್ಕೃತ, ಕಲೆ ಹತ್ತಿದ ಹಾಗೂ ಹರಿದ ಮತಪತ್ರಗಳು ಅಥವಾ ಇನ್ಯಾವುದೇ ರೀತಿಯಲ್ಲಿ ಹಾನಿಗೀಡಾದ ಮತಪತ್ರಗಳನ್ನು ಪ್ರತ್ಯೇಕಗೊಳಿಸಲಾಗುತ್ತದೆ. ಅಸಹಜ ಮತಪತ್ರಗಳ ಕುರಿತು ತನಿಖೆ ನಡೆಸುವುದು ಹಾಗೂ ಅದನ್ನು ದಾಖಲಿಸುವ ಕೆಲಸವೂ ಇವರದ್ದೇ.

ಮತ ಎಣಿಕೆಯಲ್ಲಿ ಪ್ರತಿಯೊಂದ ಮತಪತ್ರವನ್ನು ಸ್ಕ್ಯಾನರ್‌ಗೆ ಹಾಕಿಯೇ ದಾಖಲಿಸಲಾಗುತ್ತದೆ. ಕೆಲವೊಮ್ಮೆ ಮ್ಯಾನುಯಲ್ ಆಗಿ ಮತಗಳನ್ನು ಎಣಿಸಲಾಗುತ್ತದೆ. ಮರು ಪರಿಶೀಲನೆಯೂ ನಡೆಯಲಿದೆ.

ಅಮೆರಿಕದ ಪ್ರತಿ ರಾಜ್ಯದಲ್ಲೂ ಕ್ಯಾನ್ವಾಸ್‌ನಲ್ಲಿ ಭಾಗಿಯಾಗುವವರ ನೇಮಕಕ್ಕೆ ಕಠಿಣ ನಿಯಮಗಳಿವೆ. ಜತೆಗೆ ಪಕ್ಷಗಳ ಪ್ರತಿನಿಧಿಗಳು ಈ ಮತ ಎಣಿಕೆಯ ಮೇಲ್ವಿಚಾರಣೆಯಲ್ಲಿ ಹೇಗೆ ಭಾಗವಹಿಸಬಹುದು ಹಾಗೂ ಮಧ್ಯಪ್ರವೇಶಿಸುವ ಕುರಿತ ಕಾನೂನುಗಳೂ ಇವೆ.

ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದಲ್ಲಿ ಅಭ್ಯರ್ಥಿಗಳು ಸಮಬಲ ಸಾಧಿಸಿದರೆ ಏನಾಗಲಿದೆ?

ಒಮ್ಮೆ ಪ್ರತಿಯೊಂದು ಅರ್ಹ ಮತಗಳ ಎಣಿಕೆ ಪೂರ್ಣಗೊಂಡ ನಂತರವೇ ಎಲೆಕ್ಟ್ರಾಲ್ ಕಾಲೇಜು ಅಸ್ತಿತ್ವಕ್ಕೆ ಬರಲಿದೆ. ಇದು ಅಧ್ಯಕ್ಷರ ಆಯ್ಕೆಯನ್ನು ನಿರ್ಣಯಿಸಲಿದೆ.

ಒಂದೊಮ್ಮೆ ಇಬ್ಬರು ಅಭ್ಯರ್ಥಿಗಳು ತಲಾ 269 ಎಲೆಕ್ಟ್ರಾಲ್ ಕಾಲೇಜು ಮತಗಳನ್ನು ಪಡೆದಲ್ಲಿ ಅದನ್ನು ಟೈ ಎಂದು ನಿರ್ಧರಿಸಲಾಗುತ್ತದೆ. ಆದರೆ ಈ ಚುನಾವಣೆಯ ಸೋಲು ಹಾಗೂ ಗೆಲುವು ಅಂತಿಮವಾಗಿ ನಿರ್ಧಾರವಾಗುವುದು ಡಿ. 17ರಂದು ನಡೆಯಲಿರುವ ಸಭೆಯ ನಂತರವಷ್ಟೇ. ಮುಂದೆ ಹೊಸ ಸಂಸದರು 2025ರ ಜ. 6ರಂದು ಸಭೆ ಸೇರಿ, ಅಂತಿಮಗೊಂಡ ಎಲೆಕ್ಟ್ರಾಲ್ ಕಾಲೇಜು ಮತಗಳನ್ನು ಎಣಿಸಿ, ಹೊಸ ಅಧ್ಯಕ್ಷರ ಹೆಸರನ್ನು ಅಂತಿಮಗೊಳಿಸಲಿದ್ದಾರೆ.

ಒಂದೊಮ್ಮೆ ಟೈ ಆದ ಸಂದರ್ಭದಲ್ಲಿ ಅಮೆರಿಕದ ಕೆಳಮನೆ ಕಾಂಗ್ರೆಸ್‌ನ ಹೌಸ್ ಆಫ್ ರೆಪ್ರಸೆಂಟೇಟಿವ್‌ಗಳು ಮತ ಚಲಾವಣೆ ಹಕ್ಕು ಪಡೆದುಕೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಮೇಲ್ಮನೆಯ ಸೆನೆಟರ್‌ಗಳು ಉಪಾಧ್ಯಕ್ಷರ ಆಯ್ಕೆ ನಡೆಸಲಿದ್ದಾರೆ. ಆದರೆ ಅಮೆರಿಕದ 200 ವರ್ಷಗಳ ಇತಿಹಾಸದಲ್ಲಿ ನಡೆದಿರುವ 60 ಚುನಾವಣೆಯಲ್ಲಿ ಇಂಥ ಪರಿಸ್ಥಿತಿ ಒಮ್ಮೆಯೂ ಎದುರಾಗಿಲ್ಲ.

ಆಯ್ಕೆಗೊಂಡ ಅಧ್ಯಕ್ಷರು ಎಂದು ಅಧಿಕಾರ ಸ್ವೀಕರಿಸಲಿದ್ದಾರೆ?

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಯು 2025ರ ಜ. 20ರಂದು ಶ್ವೇತ ಭವನದ ಅಧಿಕಾರ ಪಡೆಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.