2023ರಲ್ಲಿ ಸುಮಾರು 16 ಲಕ್ಷ ಮಕ್ಕಳಿಗೆ ಡಿಪಿಟಿ (Diphtheria – ಗಂಟಲು ಮಾರಿ, Pertussis – ನಾಯಿಕೆಮ್ಮು, Tetanus – ಧನುರ್ವಾಯು) ಹಾಗೂ ದಡಾರ ಲಸಿಕೆಗಳನ್ನು ಹಾಕಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಯುನಿಸೆಫ್ ಸೋಮವಾರ ವರದಿ ಮಾಡಿವೆ. ಇದಕ್ಕೆ ಪ್ರತಿಕ್ರಿಯಿಸಿರುವುದಾಗಿ ಆರೋಗ್ಯ ಸಚಿವಾಲಯ ಹೇಳಿದೆ.
ನವದೆಹಲಿ: ಇಡೀ ಜಗತ್ತಿನಲ್ಲೇ ಲಸಿಕೆ ಪಡೆಯದ ಅತಿ ಹೆಚ್ಚು ಮಕ್ಕಳು ಇರುವ ಎರಡನೇ ರಾಷ್ಟ್ರ ಭಾರತ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವಸಂಸ್ಥೆ ಮಕ್ಕಳ ನಿಧಿಯ ಜಂಟಿ ವರದಿಯಲ್ಲಿ ಹೇಳಲಾಗಿದೆ.
ಆಫ್ರಿಕಾ ಖಂಡದ ನೈಜೀರಿಯಾ ನಂತರದ ಸ್ಥಾನದಲ್ಲಿ ಭಾರತ ನಿಂತಿದೆ. ನೈಜೀರಿಯಾದಲ್ಲಿ ಶೂನ್ಯ ಲಸಿಕೆ ಪಡೆದ ಒಟ್ಟು ಮಕ್ಕಳ ಸಂಖ್ಯೆ 21 ಲಕ್ಷ. ಭಾರತದ ನಂತರದ ಸ್ಥಾನದಲ್ಲಿ ಇಥಿಯೋಪಿಯಾ, ಕಾಂಗೊ, ಸುಡಾನ್ ಹಾಗೂ ಇಂಡೊನೇಷ್ಯಾ ಇವೆ.
ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವಸಂಸ್ಥೆ ಮಕ್ಕಳ ನಿಧಿಯು ಜಂಟಿಯಾಗಿ ಪ್ರಕಟಿಸಿರುವ ಈ ಬೃಹತ್ ದಾಖಲೆಯಲ್ಲಿ, ಮಕ್ಕಳಿಗೆ ನೀಡಲೇಬೇಕಾದ ಕೆಲವೊಂದು ನಿರ್ದಿಷ್ಟ ರೋಗನಿರೋಧಕ ಲಸಿಕೆಗಳ ಮಾಹಿತಿಯನ್ನು ಒಳಗೊಂಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಶೂನ್ಯ ಲಸಿಕೆ ಮಕ್ಕಳು ಎಂದರೆ, ಯಾರಿಗೆ ಲಸಿಕೆ ಪಡೆಯಲು ಸಾಧ್ಯವಾಗುತ್ತಿಲ್ಲವೋ ಅಥವಾ ಕಾಲಕಾಲಕ್ಕೆ ನೀಡಲೇಬೇಕಾದ ಲಸಿಕೆಯಿಂದ ವಂಚಿತರಾಗಿದ್ದಾರೋ ಅಂಥ ಮಕ್ಕಳು ಲಸಿಕೆ ಪಡೆಯದ ಅಥವಾ ಶೂನ್ಯ ಲಸಿಕೆ ಮಕ್ಕಳು ಎಂದು ಕರೆಯಲಾಗಿದೆ. ಇಂಥ ಮಕ್ಕಳನ್ನು ತಲುಪಲು ಭಾರತ ತೀವ್ರ ಪ್ರಯತ್ನ ನಡೆಸಿದೆ ಎಂದು ಆರೋಗ್ಯ ಇಲಾಖೆ ತನ್ನ ಉತ್ತರದಲ್ಲಿ ಹೇಳಿದೆ.
ಡಬ್ಲೂಎಚ್‌ಒ ಹಾಗೂ ಯೂನಿಸೆಫ್ ತಮ್ಮ ವರದಿಯನ್ನು ಸಿದ್ಧಪಡಿಸುವಾಗ ಭಾರತದ ಒಟ್ಟು ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಕೆಲವೊಮ್ಮೆ ಇದು ಜಗತ್ತಿನ ಇತರ ರಾಷ್ಟ್ರಗಳಿಗಿಂತ ಹಲವು ಪಟ್ಟು ಹೆಚ್ಚಳ. ಇತರ 19 ರಾಷ್ಟ್ರಗಳ ದಾಖಲೆಯೊಂದಿಗೆ ಹೋಲಿಕೆ ಮಾಡುವಾಗ ಭಾರತದ ಒಟ್ಟು ಜನಸಂಖ್ಯೆಯನ್ನೂ ಪರಿಗಣಿಸಬೇಕಿತ್ತು ಎನ್ನುವುದು ಭಾರತದ ವಾದ.
ಅಗತ್ಯ ಲಸಿಕೆ ಪಡೆದ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಸದ್ಯ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವಸಂಸ್ಥೆ ಮಕ್ಕಳ ನಿಧಿ ಬಿಡುಗಡೆ ಮಾಡಿರುವ ದಾಖಲೆಯಲ್ಲಿ ಭಾರತ ಜಗತ್ತಿನ 2ನೇ ಸ್ಥಾನದಲ್ಲಿದೆ. ಆದರೆ ಈ ಸಂಖ್ಯೆಯು ದೇಶದ ಒಟ್ಟು ಜನಸಂಖ್ಯೆಯ ಶೇ 0.11ರಷ್ಟು. ಆದರೆ ಈ ಸಮೀಕ್ಷೆಯ ವರದಿ ಪ್ರಕಟಿಸುವ ಸಂದರ್ಭದಲ್ಲಿ ಇದನ್ನು ಪರಿಗಣಿಸಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.
ವೈರಾಣುಗಳ ಸೋಂಕಿಗೆ ನೀಡಲಾಗುವ ಪ್ರತಿಕಾಯ ವಿಭಾಗದಲ್ಲಿ ಭಾರತವು 2023ರಲ್ಲಿ ಜಗತ್ತಿನ ಸರಾಸರಿಗಿಂತ ಮುಂದಿದೆ ಎಂದು ಮೂಲಗಳು ತಿಳಿಸಿವೆ.
ಡಿಪಿಟಿ–1 (ಗಂಟಲು ಮಾರಿ, ನಾಯಿಕೆಮ್ಮು, ಧನುರ್ವಾಯು) ಲಸಿಕೆಯು ಶೂನ್ಯ ಲಸಿಕೆಗೆ ಪರ್ಯಾಯವಾಗಿದೆ. ಸುಮಾರು ಶೇ 93ರಷ್ಟು ಮಕ್ಕಳಿಗೆ ಈ ಲಸಿಕೆ ನೀಡಲಾಗಿದೆ. ಆದರೆ ಈ ಲಸಿಕೆ ಪಡೆದ ಮಕ್ಕಳ ಜಗತ್ತಿನ ಸರಾಸರಿ ಸಂಖ್ಯೆ ಶೇ 89 ಇದೆ. ಹೀಗಾಗಿ ಈ ವಿಭಾಗದಲ್ಲಿ ಇಡೀ ಜಗತ್ತಿನ ಸರಾಸರಿಗಿಂತ ಭಾರತ ಶೇ 4ರಷ್ಟು ಮುಂದಿದೆ.
ಡಿಪಿಟಿ3 ಲಸಿಕೆಯಲ್ಲಿ ಭಾರತ ಶೇ 91ರಷ್ಟು ಪ್ರಗತಿ ಸಾಧಿಸಿದೆ. ಜಾಗತಿಕ ಮಟ್ಟದ ಸರಾಸರಿ ಶೇ 84ರಷ್ಟಿದೆ. ದಡಾರ ಚುಚ್ಚುಮದ್ದು ವಿಭಾಗದಲ್ಲಿ ಭಾರತ ಶೇ 92ರಷ್ಟು ಪ್ರಗತಿ ಸಾಧಿಸಿದರೆ, ಜಾಗತಿಕ ಸರಾಸರಿ ಶೇ 83ರಷ್ಟಿದೆ.
ವರದಿ ಪ್ರಕಾರ ಭಾರತದ ನಂತರದ ಸ್ಥಾನದಲ್ಲಿ ಇಥಿಯೋಪಿಯಾ, ಕಾಂಗೊ, ಸುಡಾನ್, ಇಂಡೊನೇಷಿಯಾ, ಯೆಮನ್, ಆಫ್ಗಾನಿಸ್ತಾನ, ಅಮಗೋಲಾ, ಪಾಕಿಸ್ತಾನ, ಸೊಮಾಲಿಯಾ, ವಿಯಟ್ನಾಂ, ಮಡ್ಗಾಸ್ಕರ್, ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ಮಾಲಿ, ಡಿಪಿಆರ್‌ಕೆ, ಚೀನಾ ಮತ್ತು ಮ್ಯಾನ್ಮಾರ್ ಸೇರಿವೆ. ಇದರಲ್ಲಿ ಚೀನಾ 18ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 10ನೇ ಸ್ಥಾನದಲ್ಲಿದೆ.
2030ರ ಒಳಗಾಗಿ ತೀರಾ ಅಗತ್ಯ ಇರುವ 20 ದೇಶಗಳನ್ನು ಗುರುತಿಸಿರುವ ಈ ವರದಿಯು, 5 ಕೊಟಿ ಮಕ್ಕಳನ್ನು ಉಳಿಸುವ ಗುರಿ ಹೊಂದಿದೆ.
ಮಕ್ಕಳಿಗೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯು ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಹೇಳಿದೆ. ಬಾಲ್ಯದಲ್ಲಿ ಅತ್ಯಗತ್ಯವಾಗಿ ನೀಡಲೇಬೇಕಾದ ಲಸಿಕೆಯನ್ನು ಮಕ್ಕಳಿಗೆ ಕೊಡಿಸುವ ಮೂಲಕ ಗಂಭೀರ ಸ್ವರೂಪದ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸಬಹುದು. ಆ ಮೂಲಕ ಅವರನ್ನು ರಕ್ಷಿಸುವ ಹೊಣೆ ನಮ್ಮದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ ಏಷ್ಯಾ ವಿಭಾಗದ ಪ್ರಾದೇಶಕಿ ನಿರ್ದೇಶಿ ಸೈಮಾ ವಜೀದ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.