ಮಾನವರಹಿತ ಯುದ್ಧವಿಮಾನದ (ಡ್ರೋನ್ ಮಾದರಿ) ಮೊದಲ ಪರೀಕ್ಷೆಯನ್ನು ಚಿತ್ರದುರ್ಗದ ವಿಮಾನ ಪರೀಕ್ಷಾ ಕೇಂದ್ರದಲ್ಲಿ ನಡೆಸಲಾಗಿದೆ. ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಈ ಯುದ್ಧವಿಮಾನದ ಪರೀಕ್ಷೆ ಯಶಸ್ವಿಯಾಗಿದೆ ಮತ್ತು ಅತ್ಯಂತ ನಿಖರವಾಗಿ ನಡೆದಿದೆ. ರೇಡಾರ್ ಕಣ್ಣಿಗೆ ಕಾಣಿಸದ, ಅತ್ಯಂತ ದಕ್ಷವಾಗಿ ಕಾರ್ಯನಿರ್ವಹಿಸಬಲ್ಲ ಮಾನವರಹಿತ ಯುದ್ಧವಿಮಾನ ತುಕಡಿ ರಚನೆಗೆ ಕಾಲ ಸನ್ನಿಹಿತವಾಗಿದೆ ಎಂಬುದನ್ನು ಮೊದಲ ಪರೀಕ್ಷೆಯು ಸಾರಿ ಹೇಳಿದೆ.
ಮಾನವರಹಿತ ಯುದ್ಧವಿಮಾನಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ಒಂದು ಹೆಜ್ಜೆ ಮುಂದಿಡಲಾಗಿದೆ. ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನೇತೃತ್ವದಲ್ಲಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನವನ್ನುಜುಲೈ 1ರಂದು ಚಿತ್ರದುರ್ಗದ ಸಮೀಪದ ಡಿಆರ್‌ಡಿಒ ಕೇಂದ್ರದಲ್ಲಿಪರೀಕ್ಷೆಗೆ ಒಳಪಡಿಸಲಾಗಿದೆ. ಪೈಲಟ್‌ಗಳ ನೆರವಿಲ್ಲದೇ ಸ್ವತಂತ್ರವಾಗಿ ಹಾರಾಟ ನಡೆಸುವ ಸಾಮರ್ಥ್ಯದ ಈ ತಂತ್ರಜ್ಞಾನವನ್ನು ಮೊದಲ ಬಾರಿಗೆ ಭಾರತ ಪ್ರಯೋಗಿಸಿದೆ.
ಈ ಪ್ರಾಯೋಗಿಕ ಪರೀಕ್ಷೆಗೆ ಬಳಕೆಯಾದ ತಂತ್ರಜ್ಞಾನ ಸಂಪೂರ್ಣ ದೇಶೀಯವಾದದ್ದು ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಈ ಯುದ್ಧವಿಮಾನದಲ್ಲಿ ಬಳಸಲಾಗಿರುವ ತಂತ್ರಜ್ಞಾನವನ್ನು ಸ್ಟೆಲ್ತ್ ವಿಂಗ್ ಫ್ಲೈಯಿಂಗ್ ಟೆಸ್ಟ್‌ಬೆಡ್ ಅಥವಾ ‘ಸ್ವಿಫ್ಟ್’ ಎಂದು ಕರೆಯಲಾಗಿದೆ. ಟೇಕ್‌ಆಫ್, ಹಾರಾಟ, ಗೊತ್ತುಪಡಿಸಿದ ಗುರಿಯತ್ತ ಪ್ರಯಾಣ,ಲ್ಯಾಂಡಿಂಗ್ ಕಾರ್ಯಗಳನ್ನು ಈ ವಿಮಾನ ಸ್ವತಂತ್ರವಾಗಿ ನಿರ್ವಹಿಸುತ್ತದೆ. ರೇಡಾರ್‌ಗಳ ಕಣ್ತಪ್ಪಿಸಿ ಹಾರಾಟ ನಡೆಸುವ ಸಾಮರ್ಥ್ಯ ಹಾಗೂ ಅತಿವೇಗವಾಗಿ ಲ್ಯಾಂಡಿಂಗ್ ಈ ತಂತ್ರಜ್ಞಾನದ ಮುಖ್ಯ ಲಕ್ಷಣ. ಇವುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗಿದೆ. ಸ್ವಿಫ್ಟ್ ತಂತ್ರಜ್ಞಾನ ಬಳಸಿ ಮಾನವರಹಿತ ಬಾಂಬರ್ ಯುದ್ಧವಿಮಾನ ‘ಘಾತಕ್’ ಅನ್ನು ಅಭಿವೃದ್ದಿಪಡಿಸಲಾಗುವುದು. ಮೊದಲನೇ ಪರೀಕ್ಷೆ ಯಶಸ್ವಿಯಾಗಿದೆ. ಇಂತಹ ಇನ್ನೂ ಹತ್ತು ಪ್ರಯೋಗಗಳ ಬಳಿಕ ಸ್ವಿಫ್ಟ್ ತಂತ್ರಜ್ಞಾನದ ಸಾಮರ್ಥ್ಯ ಖಚಿತಪಡಲಿದೆ. ಇಲ್ಲಿನ ಫಲಿತಾಂಶಗಳನ್ನು ಆಧರಿಸಿ ಘಾತಕ್‌ಗೆ ಸ್ಪಷ್ಟ ರೂಪ ನೀಡಲಾಗುವುದು.
ಔರಾದಿಂದ ಘಾತಕ್‌ಗೆ..
ರೇಡಾರ್‌ಗೆ ಕಾಣಿಸದ (ಸ್ಟೆಲ್ತ್), ಮಾನವರಹಿತ ಯುದ್ಧವಿಮಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮಕ್ಕೆ 2009ರಲ್ಲೇ ಬುನಾದಿ ಹಾಕಲಾಗಿತ್ತು. ಇದಕ್ಕಾಗಿ ರಕ್ಷಣಾ ಸಚಿವಾಲಯವು ‘ಅಟೊನಾಮಸ್ ಅನ್‌ಮ್ಯಾನ್ಡ್ ರಿಸರ್ಚ್ ವೆಹಿಕಲ್–ಔರಾ’ ಎಂಬ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿತ್ತು. ರೇಡಾರ್‌ಗಳ ಕಣ್ತಪ್ಪಿಸಿ, ಶತ್ರುಪಾಳಯಕ್ಕೆ ನುಗ್ಗಿ ದಾಳಿ ನಡೆಸಿ ವಾಪಸಾಗುವ ಸಾಮರ್ಥ್ಯವಿರುವ ಮಾನವರಹಿತ ಯುದ್ಧವಿಮಾನಗಳನ್ನು ತಯಾರಿಸುವುದು ಈ ಕಾರ್ಯಕ್ರಮದ ಗುರಿಯಾಗಿತ್ತು.
ರೇಡಾರ್‌ಗಳ ಕಣ್ಣಿಗೆ ಬೀಳದೇ ಇರಲು ಇಂತಹ ಯುದ್ಧವಿಮಾನಗಳಿಗೆ ಭಾರಿ ವೇಗದಲ್ಲಿ ಹಾರಾಟ ನಡೆಸುವ ಸಾಮರ್ಥ್ಯವಿರಬೇಕಿತ್ತು. ಅಲ್ಲದೆ, ಹಾರಾಟದ ವೇಳೆ ತರಂಗಗಳನ್ನು ಉತ್ಪಾದಿಸದೇ ಇರುವಂತಹ ವಿನ್ಯಾಸ ಈ ವಿಮಾನಗಳಿಗೆ ಇರಬೇಕಿತ್ತು. ಜತೆಗೆ ರೇಡಾರ್‌ಗಳು ಹೊರಡಿಸುವ ತರಂಗಗಳನ್ನು ಪ್ರತಿಫಲಿಸದೇ ಇರುವಂತಹ ವಸ್ತುವಿನಲ್ಲಿ ಅದರ ದೇಹವನ್ನು ರೂಪಿಸಬೇಕಿತ್ತು. ಇವೆಲ್ಲವುಗಳ ಒಟ್ಟಿಗೆ, ಸಂಪೂರ್ಣ ಮಾನವರಹಿತವಾಗಿ ಕಾರ್ಯನಿರ್ವಹಿಸುವ ತಂತ್ರಜ್ಞಾನದ ಅವಶ್ಯಕತೆ ಇತ್ತು. ಇವೆಲ್ಲವನ್ನೂ ದೇಶೀಯವಾಗಿ ಅಭಿವೃದ್ಧಿಪಡಿಸುವ ಗುರಿ ಹಾಕಿಕೊಂಡಿದ್ದರಿಂದ, 2023ರ ವೇಳೆಗೆ ಮೊದಲ ಔರಾ ಹಾರಾಟ ನಡೆಸಲಿದೆ ಎಂದು ಅಂದಾಜಿಸಲಾಗಿತ್ತು.
2015–16ರಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯ ಹೆಸರನ್ನು ಬದಲಿಸಿತು. ಔರಾವನ್ನು ‘ಘಾತಕ್’ ಎಂದು ಮರುನಾಮಕರಣ ಮಾಡಲಾಯಿತು. ಈ ಯೋಜನೆಯನ್ನು ಕಾರ್ಯಗತಗೊಳಿಸಲು ದೇಶದ ರಕ್ಷಣಾ ವಲಯದ ಹಲವು ಸಂಸ್ಥೆಗಳು ಮತ್ತು ಐಐಟಿ ಕಾನ್ಪುರ ಜಂಟಿಯಾಗಿ ಕೆಲಸ ಮಾಡುತ್ತಿವೆ. ಐಐಟಿ–ಕಾನ್ಪುರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಅಧೀನ ಸಂಸ್ಥೆಗಳಾದ ಏರೊನಾಟಿಕಲ್ ಡೆವಲಪ್‌ಮೆಂಟಲ್ ಎಸ್ಟಾಬ್ಲಿಷ್‌ಮೆಂಟ್ ಮತ್ತು ಡೆಹ್ರಾಡೂನಿನ ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ಲ್ಯಾಬೊರೇಟರಿ ಈ ಕಾರ್ಯಕ್ರಮಕ್ಕಾಗಿ ದುಡಿಯುತ್ತಿವೆ.
ಶತ್ರುವಿನ ಗಡಿಯೊಳಗೆ ನುಗ್ಗಿ, ನಿರ್ದಿಷ್ಟ ದಾಳಿಯಂತಹ ಕಾರ್ಯಾಚರಣೆಗಳನ್ನು ನಡೆಸಲು ಇಂತಹ ಮಾನವರಹಿತ ಯುದ್ಧವಿಮಾನಗಳು ನೆರವಾಗುತ್ತವೆ. ಇವು ಸೈನಿಕರ ಜೀವಹಾನಿಯನ್ನು ತಪ್ಪಿಸುತ್ತವೆ. ಇದು ಈ ವಿಮಾನಗಳಿಂದ ಆಗುವ ಅತ್ಯಂತ ಮಹತ್ವದ ಅನುಕೂಲ. ಜತೆಗೆ, ಇಂತಹ ಕಾರ್ಯಾಚರಣೆಯ ನಿಖರತೆ ಮತ್ತು ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಹೀಗಾಗಿ ಇದು ದೇಶದ ರಕ್ಷಣಾ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದು ವಿಶ್ಲೇಷಿಸಲಾಗಿದೆ.
ರೇಡಾರ್‌ನ ಕಣ್ತಪ್ಪಿಸುವ ವಿನ್ಯಾಸ
ರೇಡಾರ್‌ನ ಕಣ್ತಪ್ಪಿಸಿ ಹಾರಾಟ ನಡೆಸಲು ದೇಹದ ವಿನ್ಯಾಸ ಅತ್ಯಂತ ಮಹತ್ವದ ಅಂಶವಾಗಿದೆ. ಇಂತಹ ವಿಮಾನಗಳಲ್ಲಿ ರೋಟರಿ ಬ್ಲೇಡ್ ಎಂಜಿನ್, ಟರ್ಬೊಪ್ರಾಪ್ ಎಂಜಿನ್, ಬಾಹ್ಯ ಜೆಟ್ ಎಂಜಿನ್ ಅನ್ನು ಅಳವಡಿಸಿದರೆ, ಹಾರಾಟದ ಸಂದರ್ಭದಲ್ಲಿ ಈ ಎಂಜಿನ್‌ಗಳು ಹೊರಡಿಸುವ ತರಂಗಗಳನ್ನು ರೇಡಾರ್‌ಗಳು ಸುಲಭವಾಗಿ ಪತ್ತೆಹಚ್ಚಿಬಿಡುತ್ತವೆ. ಹೀಗಾಗಿ ವಿಮಾನದ ದೇಹದೊಳಗೇ ಅಂತರ್ಗತವಾಗುವಂತೆ ಎಂಜಿನ್ ಅನ್ನು ಕೂರಿಸಬೇಕು. ಈ ವಿಮಾನಕ್ಕಾಗಿ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳು ಮತ್ತು ವಿನ್ಯಾಸಗಳ ವಿವರ ಹೀಗಿದೆ
* ಕಾರ್ಬನ್ ಫೈಬರ್ ದೇಹ: ರೇಡಾರ್‌ಗಳು ಹೊರಡಿಸುವ ತರಂಗಗಳನ್ನು ಪ್ರತಿಫಲಿಸದೇ ಇರುವಂತಹ ವಸ್ತುವಿನಿಂದ ದೇಹವನ್ನು ನಿರ್ಮಿಸಬೇಕಿತ್ತು. ಯುದ್ಧವಿಮಾನದ ದೇಹವನ್ನು ಕಾರ್ಬನ್‌ಫೈಬರ್ ಫಲಕಗಳು ಮತ್ತು ಎಪೋಕ್ಸಿ ರೆಸಿನ್ ಬಳಸಿ ನಿರ್ಮಿಸಲಾಗಿದೆ. ಇದು ರೇಡಾರ್ ತರಂಗಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರ ತೂಕ ಕಡಿಮೆ ಕಾರಣ, ವಿಮಾನದ ವೇಗ ಮತ್ತು ಇಂಧನ ದಕ್ಷತೆ ಹೆಚ್ಚುತ್ತದೆ
* ಅಟೊನಾಮಸ್ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನ: ಈ ವಿಮಾನವು ಸಂಪೂರ್ಣ ಸ್ವತಂತ್ರವಾಗಿ ಟೇಕ್‌ಆಫ್ ಆಗುವ ಮತ್ತು ಲ್ಯಾಂಡ್ ಆಗುವ ಸಾಮರ್ಥ್ಯವಿರುವ ಏವಿಯಾನಿಕ್ಸ್ ತಂತ್ರಜ್ಞಾನವನ್ನು ಹೊಂದಿದೆ. ಆಗಸದಲ್ಲಿರುವ ಗುರಿ ಮತ್ತು ನೆಲದ ಮೇಲಿರುವ ಗುರಿಯನ್ನು ನಿಗದಿ ಮಾಡಿಕೊಂಡು ದಾಳಿ ನಡೆಸುವ ಸಾಮರ್ಥ್ಯವೂ ಇದಕ್ಕಿದೆ. ಜತೆಗೆ, ತನ್ನ ಮೇಲಾಗುವ ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯವೂ ಇದಕ್ಕಿದೆ. ಅಗತ್ಯ ಸಂದರ್ಭದಲ್ಲಿ ನಿಯಂತ್ರಣ ಕೊಠಡಿಯಲ್ಲಿರುವ ನಿರ್ವಾಹಕರು ವಿಮಾನವನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸವಲತ್ತೂ ಈ ತಂತ್ರಜ್ಞಾನದಲ್ಲಿದೆ
* ದೇಹದ ವಿನ್ಯಾಸ ಬಹುತೇಕ ಚಪ್ಪಟೆಯಾಗಿದೆ. ದೇಹ ಮತ್ತು ರೆಕ್ಕೆಗಳು ಕೂಡುವಲ್ಲಿ ಯಾವುದೇ ಉಬ್ಬು ಇರದಂತೆ ನೋಡಿಕೊಳ್ಳಲಾಗಿದೆ. ಹಾರಾಟದ ವೇಳೆ ವೇಗವನ್ನು ಹೆಚ್ಚಿಸಲು ಮತ್ತು ತರಂಗಗಳನ್ನು ಸೃಷ್ಟಿಸದೇ ಇರಲು ಈ ವಿನ್ಯಾಸವು ನೆರವಾಗುತ್ತದೆ. ಈ ಸ್ವರೂಪದ ರೆಕ್ಕೆಗಳಲ್ಲಿ ಹೆಚ್ಚು ಇಂಧನವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಇದರಿಂದ ಈ ವಿಮಾನಗಳ ಕಾರ್ಯಾಚರಣೆಯ ವ್ಯಾಪ್ತಿ ಹೆಚ್ಚುತ್ತದೆ
* ವಿಮಾನದ ಹಿಂಬದಿಯಲ್ಲಿ ಯಾವುದೇ ಲಂಬ ರೆಕ್ಕೆಗಳು (ಸ್ಟೆಬಿಲೈಜರ್‌ಗಳು) ಇಲ್ಲ. ಇಂತಹ ವಿನ್ಯಾಸವು, ರೇಡಾರ್‌ಗೆ ಕಾಣಿಸದೇ ಹಾರಾಟ ನಡೆಸುವಲ್ಲಿ ನೆರವಾಗುತ್ತದೆ
15,000 ಕೆ.ಜಿ. ಯುದ್ಧವಿಮಾನದ ಒಟ್ಟು ತೂಕ
2,000 ಕೆ.ಜಿ. ತೂಕದಷ್ಟು ಬಾಂಬ್ ಅಥವಾ ಕ್ಷಿಪಣಿಯನ್ನು ಹೊತ್ತೊಯ್ಯುವ ಸಾಮರ್ಥ್ಯ
30,000 ಅಡಿ ಎತ್ತರದವರೆಗೂ ಹಾರಾಟ ನಡೆಸುವ ಸಾಮರ್ಥ್ಯ
300 ಕಿ.ಮೀ. ವಿಮಾನದ ಕಾರ್ಯಾಚರಣೆಯ ಗರಿಷ್ಠ ವ್ಯಾಪ್ತಿ
ಅಮೆರಿಕ, ಚೀನಾದಲ್ಲಿವೆ ಸ್ಟೆಲ್ತ್ ಯುದ್ಧವಿಮಾನ
ಭಾರತ ಅಭಿವೃದ್ಧಿಪಡಿಸುತ್ತಿರುವ ಘಾತಕ್ ಮಾದರಿಯ ರೇಡಾರ್ ಕಣ್ತಪ್ಪಿಸಿ ಸಾಗುವ ಮಾನವ ರಹಿತ ಯುದ್ಧವಿಮಾನಗಳನ್ನು ಅಮೆರಿಕ, ಚೀನಾ ಮೊದಲಾದ ದೇಶಗಳು ಈಗಾಗಲೇ ಹೊಂದಿವೆ. ಚೀನಾ ಬಳಿ ಸಿಎಚ್–7 ಹಾಗೂ ಜಿಜೆ–11 ಹೆಸರಿನ ಯುದ್ಧವಿಮಾನಗಳಿವೆ. ಅಮೆರಿಕದ ಬಳಿ ಲಾಕ್‌ಹೀಡ್ ಮಾರ್ಟಿನ್ ಕಂಪನಿ ಅಭಿವೃದ್ಧಿಪಡಿಸಿದ ಆರ್‌ಕ್ಯೂ–170, ಆರ್‌ಕ್ಯೂ–180 ವಿಮಾನಗಳಿವೆ. ರಷ್ಯಾ ಬಳಿ ಇದೇ ಸಾಮರ್ಥ್ಯದ ಎಸ್‌ಯು–70 ಒಖೊಟನಿಕ್ ಬಿ ಯುದ್ಧವಿಮಾನವಿದೆ. ಚೀನಾ ಅಭಿವೃದ್ದಿಪಡಿಸಿರುವ ಎಚ್‌ಕ್ಯೂ–9/ಪಿ ವಾಯುರಕ್ಷಣಾ ವ್ಯವಸ್ಥೆಯ ಕಣ್ತಪ್ಪಿಸಿ ಸಾಗುವ ಸಾಮರ್ಥ್ಯ ಘಾತಕ್ ಹಾಗೂ ಈ ಸ್ವರೂಪದ ಮಾನವರಹಿತ ಯುದ್ಧವಿಮಾನಗಳಿಗೆ ಇದೆ.
(ಆಧಾರ: ಡಿಆರ್‌ಡಿಒ, ರಕ್ಷಣಾ ಸಚಿವಾಲಯ, ಪಿಐಬಿ, ಪಿಟಿಐ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.