ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೋಮವಾರ ದೇಶದ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಉದ್ಘಾಟಿಸಿದ್ದು, ಈ ಘಟಕ ಕಾರ್ಯತಂತ್ರದ ಮಹತ್ವ ಹೊಂದಿರುವ, 230 ಕಿಲೋಮೀಟರ್ ವೇಗದಲ್ಲಿ ಸಾಗಬಲ್ಲ, ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಎಲ್‌ಯುಎಚ್) ಅನ್ನು ಉತ್ಪಾದಿಸಲಿದೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್ಎಎಲ್) ಈ ನೂತನ ಹೆಲಿಕಾಪ್ಟರ್ ಕಾರ್ಖಾನೆ 615 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಇದು ಆರಂಭದಲ್ಲಿ ಎಲ್‌ಯುಎಚ್ ಉತ್ಪಾದಿಸಲಿದೆ. ಬಳಿಕ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (ಎಲ್‌ಸಿಎಚ್) ಗಳನ್ನು ಉತ್ಪಾದಿಸಲಿದೆ. ಈ ಘಟಕದ ಸ್ಥಾಪನೆಗೆ ಪ್ರಧಾನಿ ಮೋದಿಯವರು 2016ರಲ್ಲಿ ಶಂಕುಸ್ಥಾಪನೆ ನಡೆಸಿದ್ದರು.
ಎಚ್ಎಎಲ್ ಮುಂದಿನ 20 ವರ್ಷಗಳ ಅವಧಿಯಲ್ಲಿ 3-15 ಟನ್ ವ್ಯಾಪ್ತಿಯ 1,000ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳ ನಿರ್ಮಾಣದ ಗುರಿ ಹೊಂದಿದ್ದು, 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ವ್ಯವಹಾರ ನಡೆಸುವ ಉದ್ದೇಶ ಹೊಂದಿದೆ.
ಮುಂದಿನ ದಿನಗಳಲ್ಲಿ ಈ ಕಾರ್ಖಾನೆಯಲ್ಲಿ ಎಲ್‌ಸಿಎಚ್, ಐಎಂಆರ್‌ಎಚ್‌ನಂತಹ ಹೆಲಿಕಾಪ್ಟರ್‌ಗಳ ಉತ್ಪಾದನೆ ನಡೆಯಲಿದೆ.
ಐಎಂಆರ್‌ಎಚ್ ಸಹ ತುಮಕೂರು ಕಾರ್ಖಾನೆಯಲ್ಲಿ ಉತ್ಪಾದನೆಯಾಗಲಿದ್ದು, ಇದು ಭಾರತೀಯ ಮತ್ತು ವಿದೇಶೀ ಮಾರುಕಟ್ಟೆಗಳಲ್ಲಿ ರಷ್ಯಾದ ಎಂಐ-17 ಹೆಲಿಕಾಪ್ಟರ್‌ಗಳೊಡನೆ ಸ್ಪರ್ಧಿಸಲಿದೆ.
ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಆರಂಭದ ಆವೃತ್ತಿಯ ಒಟ್ಟು 12 ಲೈಟ್ ಯುಟಿಲಿಟಿ ಹೆಲಿಕಾಪ್ಟರ್‌ಗಳ ಖರೀದಿಗೆ (ಭೂಸೇನೆ ಮತ್ತು ವಾಯುಪಡೆಗೆ ತಲಾ ಆರರಂತೆ) ಆಗಸ್ಟ್ 2022ರಲ್ಲಿ ಅನುಮತಿ ನೀಡಿತ್ತು.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್ಎಎಲ್) ಲೈಟ್ ಯುಟಿಲಿಟಿ ಹೆಲಿಕಾಪ್ಟರ್
ಎಚ್ಎಎಲ್‌ನ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಎಲ್‌ಯುಎಚ್) ಒಂದು ಹೊಸ ತಲೆಮಾರಿನ ಹೆಲಿಕಾಪ್ಟರ್ ಆಗಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳಾದ ಗಾಜಿನ ಕಾಕ್‌ಪಿಟ್ ಹಾಗೂ ಬಹು ಕಾರ್ಯಗಳ ಡಿಸ್‌ಪ್ಲೇ ಗಳನ್ನು ಹೊಂದಿದೆ.
ಮೂರು ಟನ್ ತೂಕದ ವರ್ಗಕ್ಕೆ ಸೇರುವ ಈ ಹೆಲಿಕಾಪ್ಟರ್ ಹಿಮಾಲಯ ಶ್ರೇಣಿಯಂತಹ ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯ ಹೊಂದಿದೆ. ಇದು 6,500 ಮೀಟರ್‌ಗಳಷ್ಟು ಗರಿಷ್ಠ ಎತ್ತರದಲ್ಲಿ ಕಾರ್ಯಾಚರಿಸಬಲ್ಲದು. ಇದರ ಇಂಜಿನ್ ಒದಗಿಸುವ ಸಾಕಷ್ಟು ಪ್ರಮಾಣದ ಶಕ್ತಿಯ ಕಾರಣದಿಂದ ಇದು ಅತ್ಯಂತ ಕುಶಲವಾಗಿ ಚಲಿಸಬಲ್ಲದು. ಈ ಹೆಲಿಕಾಪ್ಟರ್ 500ಕೆಜಿಯ ತನಕ ಭಾರವನ್ನು ಹೊತ್ತೊಯ್ಯಬಲ್ಲದು.
ಭಾರತೀಯ ಸೇನಾಪಡೆಗಳಿಗೆ 20,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಕಾರ್ಯಾಚರಣೆ ನಡೆಸಬಲ್ಲ ಹೆಲಿಕಾಪ್ಟರ್‌ನ ಅಗತ್ಯವಿದೆ. ಇಷ್ಟೊಂದು ಎತ್ತರದ ಪ್ರದೇಶದಲ್ಲಿ ಗಾಳಿಯ ಸಾಂದ್ರತೆ ಅತ್ಯಂತ ಕಡಿಮೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಕೆಲವು ಹೆಲಿಕಾಪ್ಟರ್‌ಗಳು ಮಾತ್ರವೇ ಕಾರ್ಯಾಚರಿಸಬಲ್ಲವು. ಅಂತಹಾ ಹೆಲಿಕಾಪ್ಟರ್‌ಗಳಲ್ಲಿ ಎಲ್‌ಯುಎಚ್ ಸಹ ಒಂದಾಗಿದೆ.
ಎಲ್‌ಯುಎಚ್‌ಗೆ ಸಫ್ರಾನ್ ಸಂಸ್ಥೆ ವಿನ್ಯಾಸಗೊಳಿಸಿರುವ ಅರ್ದಿಡೆನ್ 1ಯು (ಶಕ್ತಿ) ಇಂಜಿನ್ ಬಲ ನೀಡುತ್ತದೆ. ಈ ಎರಡು ಹಂತಗಳ ಟರ್ಬೈನ್ ಇಂಜಿನ್ 1,058 ಕಿಲೋ ವ್ಯಾಟಿನ ಅತ್ಯಧಿಕ ಶಕ್ತಿಯನ್ನು ಉತ್ಪಾದಿಸುತ್ತದೆ. ಅದರ ಪರಿಣಾಮವಾಗಿ ಎಲ್‌ಯುಎಚ್ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲು ಸಾಧ್ಯವಾಗುತ್ತದೆ. ಈ ಇಂಜಿನ್ನಿನ ಸತತ ಗರಿಷ್ಠ ಸಾಮರ್ಥ್ಯ 912 ಕಿಲೋವ್ಯಾಟ್ ಆಗಿದೆ.
ಎಲ್‌ಯುಎಚ್ 127 ನಾಟ್ಸ್ (ಪ್ರತಿ ಗಂಟೆಗೆ 235 ಕಿಲೋಮೀಟರ್ ಅಥವಾ 146 ಮೈಲಿ) ವೇಗದಲ್ಲಿ ಚಲಿಸಬಲ್ಲದಾಗಿದ್ದು, 350 ಕಿಲೋಮೀಟರ್ (217 ಮೈಲಿ) ಗರಿಷ್ಠ ವ್ಯಾಪ್ತಿ ಹೊಂದಿದೆ.
ಇದು 500 ಕೆಜಿ (1,102) ಪೌಂಡ್‌ಗಳಷ್ಟು ಗರಿಷ್ಠ ಭಾರ ಹೊತ್ತು ಚಲಿಸಬಲ್ಲದು.
ಎಲ್‌ಯುಎಚ್ ಈಗಾಗಲೇ ಹಳೆಯದಾಗಿರುವ, ಭಾರತೀಯ ಸೇನೆಯಲ್ಲಿ ಕಾರ್ಯಾಚರಿಸುತ್ತಿರುವ ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್‌ಗಳ ಬದಲಿಗೆ ಸೇರ್ಪಡೆಗೊಳಿಸಲು ಅಭಿವೃದ್ಧಿ ಪಡಿಸಲಾಗಿದೆ.
ಎಲ್‌ಯುಎಚ್ ಅನ್ನು ವಿವಿಧ ರೀತಿಯ ಕಾರ್ಯಾಚರಣೆಗಳನ್ನು ನಡೆಸುವ ಉದ್ದೇಶದಿಂದ ಅಭಿವೃದ್ಧಿ ಪಡಿಸಲಾಗಿದೆ. ಅದರಲ್ಲಿ ವಿಚಕ್ಷಣೆ, ನಾಗರಿಕ ಪ್ರಯಾಣ ಮತ್ತು ವಸ್ತುಗಳ ಸಾಗಾಟ, ಹಾಗೂ ರಕ್ಷಣಾ ಕಾರ್ಯಾಚರಣೆಗಳೂ ಸೇರಿವೆ. ಈ ಹೆಲಿಕಾಪ್ಟರ್‌ನಲ್ಲಿ ತುರ್ತು ಪರಿಸ್ಥಿತಿಯಲ್ಲಿ ತೇಲುವಿಕೆಯ ವ್ಯವಸ್ಥೆಯೂ ಇದ್ದು, ನೀರಿನ ಮೇಲೆ ತುರ್ತು ಭೂಸ್ಪರ್ಶ ಮಾಡುವ ಪರಿಸ್ಥಿತಿ ಬಂದರೂ ಸುರಕ್ಷಿತವಾಗಿ ತೇಲಲು ಸಾಧ್ಯವಾಗುತ್ತದೆ.
ಒಂದು ಅಂದಾಜಿನ ಪ್ರಕಾರ ಎಚ್ಎಎಲ್‌ಗೆ ಒಟ್ಟು 187 ಎಲ್‌ಯುಎಚ್ ಖರೀದಿ ಆದೇಶ ಬರುವ ಸಾಧ್ಯತೆಗಳಿದ್ದು, ಅವುಗಳಲ್ಲಿ 126 ಭೂಸೇನೆಗೆ ಸೇವೆ ಸಲ್ಲಿಸಿದರೆ, 61 ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿವೆ.
ಲೈಟ್ ಯುಟಿಲಿಟಿ ಹೆಲಿಕಾಪ್ಟರ್‌ಗಳು ಪೈಲಟ್ ಮತ್ತು ಸಹ ಪೈಲಟ್ ಸೇರಿದಂತೆ ಇಬ್ಬರು ಸಿಬ್ಬಂದಿಗಳನ್ನು ಒಯ್ಯಬಲ್ಲದು. ಅವರೊಡನೆ ಹೆಲಿಕಾಪ್ಟರ್‌ನಲ್ಲಿ ಆರು ಜನ ಪ್ರಯಾಣಿಕರು ಪ್ರಯಾಣಿಸಬಹುದು. ಹೆಲಿಕಾಪ್ಟರ್ ಮೇಲೇರುವಾಗ ಅದರ ಗರಿಷ್ಠ ತೂಕ 3,150 ಕೆಜಿ ಆಗಿರಬಹುದು.
ಎಚ್ಎಎಲ್ ಎಲ್‌ಯುಎಚ್‌ನ ಪ್ರಥಮ ಮಾದರಿಯ ಪರೀಕ್ಷಾ ಹಾರಾಟವನ್ನು ಸೆಪ್ಟೆಂಬರ್ 2016ರಲ್ಲಿ ಕೈಗೊಂಡಿತು.
ಭಾರತೀಯ ಸೇನಾ ಯೋಧರ ಪತ್ನಿಯರ ಸಂಘದ ಸದಸ್ಯೆಯರು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಹಳೆಯದಾಗಿರುವ ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್‌ಗಳ ಬಳಕೆಯ ಮೂಲಕ ಸೇನೆ ತನ್ನ ಯೋಧರನ್ನು ಬಲಿ ಕೊಡುತ್ತಿದೆ ಎಂದಿದ್ದರು.
ತಾವು ಬರೆದ ಪತ್ರದಲ್ಲಿ ಇಂಡಿಯನ್ ಆರ್ಮಿ ವೈವ್ಸ್ ಅಜಿಟೇಷನ್ ಗ್ರೂಪ್ ಸದಸ್ಯೆಯರು 31 ಮಿಲಿಟರಿ ಪೈಲಟ್‌ಗಳು 2017ರ ಬಳಿಕ ಪ್ರಾಣಾರ್ಪಣೆ ಮಾಡಿದ್ದಾರೆ. ದುರದೃಷ್ಟವಶಾತ್ ಇವರು ಯಾರೂ ಶತ್ರುಗಳ ದಾಳಿಯಿಂದ ಬಲಿಯಾಗಿಲ್ಲ. ಬದಲಿಗೆ ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್‌ಗಳ ಬಳಕೆಯ ವೇಳೆ ನಡೆದ ಅಪಘಾತದಲ್ಲಿ ಬಲಿಯಾಗಿದ್ದಾರೆ ಎಂದಿದ್ದಾರೆ.
ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್‌ಗಳು 1960ರ ಕಾಲದ ವಿನ್ಯಾಸ ಹೊಂದಿದ್ದು, ಅದೇ ವಿನ್ಯಾಸದ ಆಧಾರದಲ್ಲಿ ನಿರ್ಮಾಣಗೊಳ್ಳುತ್ತಿವೆ. ಇಂದಿನ ಪರಿಸ್ಥಿತಿಗೆ ಹಳತಾಗಿರುವ ಈ ಮಾದರಿಯ 400 ಹೆಲಿಕಾಪ್ಟರ್‌ಗಳು ಭಾರತದಲ್ಲಿ ಕಾರ್ಯಾಚರಿಸುತ್ತಿವೆ. ಅವುಗಳ ಬದಲಿಗೆ ಸೇನೆ ನೂತನ ಎಲ್‌ಯುಎಚ್ ಗಳನ್ನು ಪಡೆದುಕೊಳ್ಳಲಿದೆ.
-ಲೇಖಕರು,
ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.