ಎರಡನೇ ವಿಶ್ವಯುದ್ಧದಲ್ಲಿ ಬಹುಕಾಲ ಆಹಾರ ಕೆಡದಂತೆ ಇಡಲು ನೆರವಾಗಿದ್ದ ಪ್ಲಾಸ್ಟಿಕ್ ಡಬ್ಬಗಳ ಉತ್ಪಾದಕ ಕಂಪನಿ ‘ಟಪ್ಪರ್‌ವೇರ್’, ನಂತರ ‘ಟಪ್ಪರ್‌ವೇರ್ ಪಾರ್ಟಿ’ಗಳ ಮೂಲಕ ಸುಮಾರು 100ಕ್ಕೂ ಹೆಚ್ಚು ದೇಶಗಳಲ್ಲಿ ಮನೆಮಾತಾಯಿತು. 78 ವರ್ಷದ ಈ ಕಂಪನಿಯು ಆಧುನಿಕ ಕಾಲಘಟ್ಟದ ಸವಾಲು ಎದುರಿಸಲು ಸಾಧ್ಯವಾಗದೆ ತೀವ್ರ ಆರ್ಥಿಕ ನಷ್ಟ ಎದುರಿಸುತ್ತಿದೆ. ಇದರ ಭಾಗವಾಗಿ ದಿವಾಳಿಯಿಂದ ರಕ್ಷಿಸುವಂತೆ ನ್ಯಾಯಾಲಯದ ಮೊರೆ ಹೋಗಿದೆ.
ವಾಷಿಂಗ್ಟನ್: ಆಹಾರ ಪದಾರ್ಥಗಳಿಗೆ ಗಾಳಿ ಸೇರದಂತೆ ಸುರಕ್ಷಿತವಾಗಿಡಲು ಬಳಸಲಾಗುತ್ತಿದ್ದ ಟಪ್ಪರ್‌ವೇರ್ ದಿವಾಳಿಯಾಗುವುದರಿಂದ ರಕ್ಷಣೆ ಕೋರಿ ಡೆಲವೇರ್‌ನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಒಂದು ಕಾಲದಲ್ಲಿ ಟಪ್ಪರ್‌ವೇರ್ ಉತ್ಪನ್ನಗಳನ್ನು ಹೊಂದುವುದೇ ಪ್ರತಿಷ್ಠೆ ಎಂದೇ ಪರಿಗಣಿಸಲಾಗುತ್ತಿದ್ದ ಬ್ರಾಂಡ್ ಏಕಾಏಕಿ ದಿವಾಳಿ ಹಂತಕ್ಕೆ ತಲುಪಿದ್ದು ಉದ್ಯಮ ಹಾಗೂ ಗ್ರಾಹಕ ವಲಯದಲ್ಲಿ ಅಚ್ಚರಿ ಮೂಡಿಸಿದೆ.
1946ರಲ್ಲಿ ರಸಾಯನವಿಜ್ಞಾನಿ ಎರ್ಲ್ ಟಪ್ಪರ್ ಎಂಬುವವರು ಟಪ್ಪರ್‌ವೇರ್ ಎಂಬ ಉತ್ಪನ್ನವನ್ನು ಪರಿಚಯಿಸಿದರು. ಪ್ಲಾಸ್ಟಿಕ್ ಫ್ಯಾಕ್ಟರಿಯೊಂದರಲ್ಲಿ ಅಚ್ಚು ತಯಾರಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಹೊಳೆದ ಒಂದು ಆಲೋಚನೆಯೇ ಟಪ್ಪರ್ ಅವರಿಗೆ ಇಂಥದ್ದೊಂದು ಜನಪ್ರಿಯ ಉತ್ಪನ್ನ ತಯಾರಿಕೆ ಆರಂಭಿಸಲು ಪ್ರೇರಣೆಯಾಯಿತು ಎಂದು ಕಂಪನಿ ತನ್ನ ಅಂತರ್ಜಾಲತಾಣದಲ್ಲಿ ಬರೆದುಕೊಂಡಿದೆ.
ರೆಫ್ರಿಜರೇಟರ್ ಎಂಬ ಸಾಧನವು ವಿರಳವಾಗಿದ್ದ ಹಾಗೂ ಶ್ರೀಮಂತರ ಸ್ವತ್ತಾಗಿದ್ದ ಕಾಲದಲ್ಲಿ ಆಹಾರವನ್ನು ದೀರ್ಘಕಾಲದವರೆಗೆ ತಾಜಾತನದಿಂದ ಉಳಿಯುವಂತೆ ಮಾಡುವ ಈ ಪ್ಲಾಸ್ಟಿಕ್ ಬಾಕ್ಸ್‌ಗಳನ್ನು ಟಪ್ಪರ್‌ವೇರ್ ಅಭಿವೃದ್ಧಿಪಡಿಸಿದ್ದು ಭಾರೀ ಬೇಡಿಕೆ ಪಡೆದುಕೊಂಡಿತ್ತು. 2ನೇ ವಿಶ್ವಯುದ್ಧದಲ್ಲಿ ಇದರ ಬಳಕೆ ವ್ಯಾಪಕವಾಗಿತ್ತು. ನಂತರದಲ್ಲೂ ಬಹಳಷ್ಟು ಮಹಿಳೆಯರು ಟಪ್ಪರ್‌ವೇರ್ ಮಾರಾಟದ ಮೂಲಕ ತಮ್ಮದೇ ಆದಾಯ ಮೂಲವನ್ನು ಕಂಡುಕೊಂಡಿದ್ದರು.
ಇದಕ್ಕೆ ಕಾರಣರಾದವರು ಅಮೆರಿಕದ ಬ್ರೌನಿ ವೈಸ್ ಎಂಬ ಮಾರಾಟ ಪ್ರತಿನಿಧಿ. ಮಹಿಳೆಯರನ್ನೇ ಸೇರಿಸಿ ಅವರು ಆಯೋಜಿಸುತ್ತಿದ್ದ ‘ಟಪ್ಪರ್‌ವೇರ್ ಪಾರ್ಟಿ’ಯಿಂದಾಗಿ ಕಂಪನಿಯ ಉತ್ಪನ್ನ ಮಾರಾಟ ವೃದ್ಧಿ ಕಂಡಿತ್ತು. ಹೀಗಾಗಿ ಇದು ಅಮೆರಿಕ ಮಾತ್ರವಲ್ಲದೆ, ಭಾರತವನ್ನೂ ಒಳಗೊಂಡು ಜಗತ್ತಿನ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಇದು ಜನಪ್ರಿಯತೆ ಪಡೆಯಿತು. ನಂತರ ನಗರ ಪ್ರದೇಶಗಳಲ್ಲಿ ಟಪ್ಪರ್‌ವೇರ್ ಅನಿವಾರ್ಯ ಎಂಬ ವಾತಾವರಣವೇ ಸೃಷ್ಟಿಯಾಗಿದೆ.
ಪರಿಸರ ಸ್ನೇಹಿ ವಸ್ತುಗಳು ಗ್ರಾಹಕರ ಆಯ್ಕೆಯಾಗಿರುವ ಈ ಕಾಲದಲ್ಲಿ ಟಪ್ಪರ್‌ವೇರ್ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಯಸುವ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಯಿತು. ಉತ್ಪನ್ನಗಳ ವಿನ್ಯಾಸ ಹಾಗೂ ತಂತ್ರಜ್ಞಾನದಲ್ಲಿ ಬದಲಾವಣೆ ಇಲ್ಲದಿರುವುದು ಪ್ರಮುಖ ಕಾರಣ ಎಂದೆನ್ನಲಾಗಿದೆ.
ಈ ಎಲ್ಲಾ ಕಾರಣಗಳಿಂದ ವಹಿವಾಟು ಇಳಿಮುಖವಾಗಿದ್ದನ್ನು ಗಮನಿಸಿದ ಕಂಪನಿಯು ಕಳೆದ ವರ್ಷ ತನ್ನ ಪರಿಸ್ಥಿತಿ ಕುರಿತು ಬಹಿರಂಗ ಹೇಳಿಕೆ ನೀಡಿತ್ತು. ಕೋವಿಡ್ ಸಂದರ್ಭದಲ್ಲಿ ಟಪ್ಪರ್‌ವೇರ್ ಒಂದಷ್ಟು ಚೇತರಿಕೆ ಕಂಡಿದ್ದರೂ, ನಂತರ ಮತ್ತೆ ಕುಸಿಯಿತು. ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ವೆಚ್ಚವನ್ನು ಸರಿದೂಗಿಸಲಾಗದ 78 ವರ್ಷದ ಟಪ್ಪರ್‌ವೇರ್‌ಗೆ ದುಬಾರಿ ಸರಕು ಸಾಗಣೆ ವೆಚ್ಚ ಹಾಗೂ ನೌಕರರ ವೇತನದ ಹೊರೆ ಹೆಚ್ಚಾಯಿತು. ಜತೆಗೆ ಅಗ್ಗದ ಬೆಲೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಲಾಸ್ಟಿಕ್ ವಸ್ತುಗಳ ಎದುರು ಸ್ಪರ್ಧಿಸಲೂ ಟಪ್ಪರ್‌ವೇರ್‌ಗೆ ಸಾಧ್ಯವಾಗಲಿಲ್ಲ ಎಂದು ಫಸ್ಟ್ ಪೋಸ್ಟ್ ವರದಿ ಮಾಡಿದೆ.
ಯುವ ಗ್ರಾಹಕರನ್ನು ಸೆಳೆಯಲು ಅಮೆಜಾನ್‌ನಂತ ಇ–ಕಾಮರ್ಸ್ ತಾಣಗಳಿಗೆ ಟಪ್ಪರ್‌ವೇರ್ ಪ್ರವೇಶಿಸಿದರೂ, ಅದು ತೀರಾ ತಡವಾಗಿತ್ತು. ಇವೆಲ್ಲದರ ಪರಿಣಾಮವಾಗಿ ಕಳೆದ ಜೂನ್‌ನಲ್ಲಿ ಕಂಪನಿಯು 148 ಜನರನ್ನು ಕೆಲಸದಿಂದ ವಜಾಗೊಳಿಸಿತು. ಒರ್ಲಾಂಡೊದಲ್ಲಿದ್ದ ಕಂಪನಿಯ ತಯಾರಿಕಾ ಘಕಟವನ್ನು ಮೆಕ್ಸಿಕೊಗೆ ಸ್ಥಳಾಂತರಿಸಿತು.
ನಷ್ಟವನ್ನು ಸರಿದೂಗಿಸಲು ಸಾಧ್ಯವಾಗದ ಟಪ್ಪರ್‌ವೇರ್ ಗುರುವಾರ (ಸೆ. 19)ರಂದು ದಿವಾಳಿಯಿಂದ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದೆ. ಸಮಗ್ರ ಆರ್ಥಿಕ ಪರಿಸರದಲ್ಲಿ ಕಳೆದ ಕೆಲ ವರ್ಷಗಳಿಂದ ಕಂಪನಿಯು ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದೆ ಎಂದು ಕಂಪನಿಯ ಅಧ್ಯಕ್ಷ ಹಾಗೂ ಸಿಇಒ ಲ್ಯೂರಿ ಆ್ಯನ್ ಗೋಲ್ಡ್‌ಮನ್ ಅವರು ಹೇಳಿದ್ದಾರೆ.
ತನ್ನ ಬ್ರಾಂಡ್ ಉಳಿಸಿಕೊಳ್ಳಲು ಡಿಜಿಟಲ್ ಮೊದಲು ಎಂಬ ತಂತ್ರಜ್ಞಾನ ಆಧಾರಿತ ಕಂಪನಿಯನ್ನಾಗಿ ರೂಪಿಸಲು ಅನುಕೂಲ ಮಾಡಿಕೊಡಬೇಕು ಎಂದು ಕಂಪನಿ ನ್ಯಾಯಾಲಯವನ್ನು ಕೋರಿದೆ. ಕಂಪನಿಯು ಸುಮಾರು ₹4 ಸಾವಿರ ಕೋಟಿಯಿಂದ ₹10 ಸಾವಿರ ಕೋಟಿ ಮೌಲ್ಯದ ಆಸ್ತಿ ಹೊಂದಿದೆ. ಆದರೆ ಸಾಲವು ₹10 ಸಾವಿರ ಕೋಟಿಯಿಂದ ₹1 ಲಕ್ಷ ಕೊಟಿಯಷ್ಟಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಈ ನಡುವೆ ಕಂಪನಿಯ ಷೇರು ಮೌಲ್ಯವು ಶೇ 50ರಷ್ಟು ಕುಸಿದಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.