ದಕ್ಷಿಣ ಕೊರಿಯಾದಲ್ಲಿ ಡೀಪ್‌ಫೇಕ್ ಆಧಾರಿತ ಲೈಂಗಿಕ ಅಪರಾಧಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುಗತಿಯಾಗಿದೆ. 2021ರಲ್ಲಿ ಇವುಗಳ ಸಂಖ್ಯೆ 156 ಇತ್ತು. 2024ರ ಈವರೆಗೂ 297 ಲೈಂಗಿಕ ಅಪರಾಧ ಪ್ರಕರಣಗಳು ದಾಖಲಾಗಿವೆ. ಹೆಚ್ಚಾಗಿ ಇವುಗಳು 19 ವರ್ಷದೊಳಗಿನ ಯುವತಿಯರನ್ನೇ ಗುರಿಯಾಗಿಸಿವೆ. ಇದರ ನಿಯಂತ್ರಣಕ್ಕೆ ಅಲ್ಲಿನ ಸರ್ಕಾರ ಯುದ್ಧೋಪಾದಿಯಲ್ಲಿ ಹೆಜ್ಜೆ ಇಟ್ಟಿದೆ.
ಸೋಲ್: ಭಾರತದ ಸಿನಿಮಾ ರಂಗದ ನಟಿಯರನ್ನು ಕಾಡಿದ ಡೀಪ್‌ಫೇಕ್ ಚಿತ್ರ ಹಾಗೂ ವಿಡಿಯೊಗಳು ತಂತ್ರಜ್ಞಾನ ಶ್ರೀಮಂತ ದಕ್ಷಿಣ ಕೊರಿಯಾ ರಾಷ್ಟ್ರದಲ್ಲೂ ವ್ಯಾಪಕವಾಗಿದೆ. ಇದನ್ನು ನಿಯಂತ್ರಿಸಲು ಸಾಮಾಜಿಕ ಮಾಧ್ಯಮಗಳು ಸಹಕಾರ ನೀಡುವಂತೆ ಅಲ್ಲಿನ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ಬಹಳಷ್ಟು ಮಹಿಳೆಯರ ಡೀಪ್‌ಫೇಕ್ ಇಮೇಜ್ ಹಾಗೂ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇವುಗಳಲ್ಲಿ ಬಹುತೇಕವು ಟೆಲಿಗ್ರಾಂ ಚಾಟ್‌ರೂಮ್‌ನಲ್ಲಿ ಸಿಗುತ್ತಿರುವುದೇ ಹೆಚ್ಚು. ಹೀಗೆ ಡೀಪ್‌ಫೇಕ್‌ಗೆ ಒಳಗಾಗುತ್ತಿರುವ ಮಹಿಳೆಯರ ಚಿತ್ರಗಳು ಹೆಚ್ಚಾಗಿ, ಅಶ್ಲೀಲ ಚಿತ್ರಗಳಿಗೆ ಬಳಕೆಯಾಗುತ್ತಿರುವ ಕುರಿತು ಅಲ್ಲಿನ ಆಡಳಿತ ಕಳವಳ ವ್ಯಕ್ತಪಡಿಸಿದೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ಕೊರಿಯಾದ ಸ್ತ್ರಿವಾದಿ ಗುಂಪುಗಳು ಹಾಗೂ ಅಂತರರಾಷ್ಟ್ರೀಯ ಕೆ–ಪಾಪ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ವ್ಯಾಪಕ ಅಭಿಯಾನ ಆರಂಭಿಸಿದ್ದಾರೆ. ಇಂಥ ಡೀಪ್‌ಫೇಕ್ ಬಳಸಿದ ಚಾಟ್‌ರೂಮ್‌ಗಳನ್ನು ಬಯಲಿಗೆಳೆಯಬೇಕು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸೋಲ್ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ಚಿತ್ರವನ್ನು ಡೀಪ್‌ಫೇಕ್ ಮೂಲಕ ಅಶ್ಲೀಲ ಚಿತ್ರಗಳಿಗೆ ಬಳಕೆ ಮಾಡಿದ ಆರೋಪದಡಿ ಬಂಧಿಸಲಾಗಿರುವ ವ್ಯಕ್ತಿಯೊಬ್ಬನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕೂಗು ಹೆಚ್ಚಾಗಿದೆ. ಜತೆಗೆ ಲಿಂಗ ಸೂಕ್ಷ್ಮತೆ ವಿಷಯವೂ ದಕ್ಷಿಣ ಕೊರಿಯಾದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
ದಕ್ಷಿಣ ಕೊರಿಯಾದ ನಟಿಯರು, ಗಾಯಕಿಯರು ಡೀಪ್‌ಫೇಕ್ ಒಳಗೊಂಡ ಅಶ್ಲೀಲ ಚಲನಚಿತ್ರಗಳಿಗೆ ಗುರಿಯಾಗುತ್ತಿದ್ದಾರೆ. ಇವುಗಳ ಒಟ್ಟು ಸಂಖ್ಯೆ ಶೇ 53ರಷ್ಟು. ಇಂಥ ಡೀಪ್‌ಫೇಕ್‌ಗಳನ್ನು ಪತ್ತೆ ಮಾಡುವುದು ಹಾಗೂ ಅವುಗಳ ಕುರಿತು ಎಚ್ಚರಿಕೆ ನೀಡುವ ಕೆಲಸವನ್ನು ಅಮೆರಿಕ ಮೂಲದ ಸ್ಟಾರ್ಟ್‌ಅಪ್ ಕಂಪನಿ ಸೆಕ್ಯುರಿಟಿ ಹೀರೊ ಮಾಡುತ್ತಿದ್ದು, ಆ ಕುರಿತ ವರದಿಯನ್ನು ಅದು ಬಿಡುಗಡೆ ಮಾಡಿದೆ.
ಡೀಪ್‌ಫೇಕ್ ಆಧಾರಿತ 297 ಲೈಂಗಿಕ ಅಪರಾಧ ಪ್ರಕರಣಗಳು ಪ್ರಸಕ್ತ ಸಾಲಿನಲ್ಲಿ ದಾಖಲಾಗಿವೆ. 2021ರಲ್ಲಿ ಇವುಗಳ ಸಂಖ್ಯೆ 156 ಇತ್ತು. ಹೆಚ್ಚಾಗಿ ಇವುಗಳು 19 ವರ್ಷದೊಳಗಿನ ಯುವತಿಯರನ್ನೇ ಗುರಿಯಾಗಿಸಿವೆ ಎಂದು ಹೇಳಲಾಗಿದೆ.
ಇದರೊಂದಿಗೆ ಡಿಜಿಟಲ್ ಲೈಂಗಿಕ ಅಪರಾಧಗಳ ಪ್ರಕರಣಗಳ ಸಂಖ್ಯೆ ದಕ್ಷಿಣ ಕೊರಿಯಾದಲ್ಲಿ ಏರುಗತಿಯಲ್ಲಿದೆ. ಇದರಲ್ಲಿ ಆನ್‌ಲೈನ್ ಲೈಂಗಿಕ ಬ್ಲಾಕ್‌ಮೇಲ್ ಪ್ರಕರಣಗಳಿಂದ ಹಿಡಿದು ಸ್ಪೈಕ್ಯಾಮೆರಾ ಬಳಸಿ ಅಶ್ಲೀಲ ಚಿತ್ರ ಸೆರೆಹಿಡಿಯುವ ಪ್ರಕರಣಗಳವರೆಗೂ ಅಪರಾಧಗಳ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗಿದೆ.
ಕಾಕತಾಳೀಯ ಎಂಬಂತೆ ದಕ್ಷಿಣ ಕೊರಿಯಾದಲ್ಲಿ ಡೀಪ್‌ಫೇಕ್ ಪ್ರಕರಣಗಳು ವ್ಯಾಪಕವಾಗಿರುವ ಸಂದರ್ಭದಲ್ಲೇ ಸಾಮಾಜಿಕ ಮಾಧ್ಯಮ ಟೆಲಿಗ್ರಾಂ ಸಿಇಒ ಪಾವೆಲ್ ಡುರೊವ್ ಅವರ ಬಂಧನವೂ ಆಗಿದೆ. ರಷ್ಯಾ ಮೂಲಕ ಪಾವೆಲ್ ಅವರನ್ನು ಕಳೆದ ವಾರ ಫ್ರಾನ್ಸ್‌ನಲ್ಲಿ ಅಧಿಕಾರಿಗಳು ಬಂಧಿಸಿದ್ದರು. ಟೆಲಿಗ್ರಾಂ ಮೂಲಕ ಸಂಘಟಿತ ಅಪರಾಧ ಪ್ರಕರಣಗಳು ವ್ಯಾಪಕವಾಗಿರುವ ಆರೋಪ ಅವರ ಮೇಲಿದೆ.
ಇನ್ನೊಬ್ಬರ ಮಾನಹಾನಿಗೆ ಕಾರಣವಾಗುವ ಡೀಪ್‌ಫೇಕ್ ಚಿತ್ರ ಹಾಗೂ ವಿಡಿಯೊಗಳು ಹರಿದಾಡುವುದನ್ನು ನಿಯಂತ್ರಿಸಲು ಸಾಮಾಜಿಕ ಮಾಧ್ಯಮಗಳ ಸಹಕಾರವನ್ನು ದಕ್ಷಿಣ ಕೊರಿಯಾ ಆಡಳಿತ ಕೋರಿದೆ. ಟೆಲಿಗ್ರಾಂ ಸಿಇಒ ಬಂಧನ ಹಾಗೂ ತನಿಖೆಗೆ ಸಂಬಂಧಿಸಿದಂತೆ ತನ್ನನ್ನು ನೇರವಾಗಿ ಸಂಪರ್ಕಿಸುವಂತೆ ಹಾಗೂ ಮಾಹಿತಿ ನೀಡುವಂತೆ ದಕ್ಷಿಣ ಕೊರಿಯಾದ ಮಾಧ್ಯಮ ನಿಯಂತ್ರಣ ಇಲಾಖೆಯು ಫ್ರಾನ್ಸ್ ಸರ್ಕಾರವನ್ನು ಕೋರಿದೆ.
ಲೈಂಗಿಕ ಶೋಷಣೆಯ ಡೀಪ್‌ಫೇಕ್ ವಿಡಿಯೊಗಳ ವೀಕ್ಷಣೆಯನ್ನೂ ಕ್ರಿಮಿನಲ್ ಅಪರಾಧಗಳ ವ್ಯಾಪ್ತಿಗೆ ತರುವ ಮೂಲಕ ಕಠಿಣ ಕಾನೂನು ರೂಪಿಸಲಾಗುವುದು ಎಂದು ಅಲ್ಲಿನ ಸರ್ಕಾರ ಹೇಳಿದೆ. ಡಿಜಿಟಲ್ ಸ್ವರೂಪದ ಲೈಂಗಿಕ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಲು ಏಳು ತಿಂಗಳ ಯೋಜನೆಯನ್ನು ದಕ್ಷಿಣ ಕೊರಿಯಾ ಪೊಲೀಸರು ಹೊಂದಿದ್ದಾರೆ. ಇವುಗಳನ್ನು ನಿಯಂತ್ರಿಸಲು ಸಿಬ್ಬಂದಿ ಸಂಖ್ಯೆ ಹೆಚ್ಚಿಸುವುದು ಹಾಗೂ ಸಂತ್ರಸ್ತರಿಗೆ 24X7 ಸಹಾಯವಾಣಿ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
‘ತನ್ನ ವೇದಿಕೆ ಮೂಲಕ ಅಕ್ರಮವಾಗಿ ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳುವ ಅಪಾಯವನ್ನು ಒಂದು ಹಂತಕ್ಕೆ ನಿಯಂತ್ರಿಸಲಾಗುತ್ತಿದೆ’ ಎಂದು ಟೆಲಿಗ್ರಾಂ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಡೀಪ್‌ಫೇಕ್ ಸಂಬಂಧಿಸಿದ ಹಾಗೂ ಮಹಿಳೆಯರನ್ನು ಅವಹೇಳನ ಮಾಡಿದ ಒಂದು ವಿಡಿಯೊ ಹಂಚಿಕೊಂಡ ಹತ್ತು ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದ ದಕ್ಷಿಣ ಕೊರಿಯಾದ ಬಲಪಂಥೀಯ ಯುಟ್ಯೂಬರ್‌ನ ಖಾತೆಯನ್ನು ಗೂಗಲ್ ಸ್ಥಗಿತಗೊಳಿಸಿದೆ. ಲೈಂಗಿಕ ಅಪರಾಧಗಳನ್ನು ತನ್ನ ವೇದಿಕೆ ಮೂಲಕ ಪ್ರಸಾರವಾಗದಂತೆ ತಡೆಯುವ ಉದ್ದೇಶಕ್ಕೆ ಸಂಸ್ಥೆ ಬದ್ಧವಾಗಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.