ADVERTISEMENT

ಆಳ–ಅಗಲ: ರೈತರ ಬೆವರಿಗೆ ಸಂಘದ ಬಲ

ರೈತರ ಬೆವರಿಗೆ ಸಂಘದ ಬಲ

ಪ್ರಜಾವಾಣಿ ವಿಶೇಷ
Published 19 ಮಾರ್ಚ್ 2021, 22:27 IST
Last Updated 19 ಮಾರ್ಚ್ 2021, 22:27 IST
ಹಾಸನದ ಚನ್ನಾಂಬಿಕಾ ತೋಟಗಾರಿಕಾ ರೈತ ಉತ್ಪಾದಕ ಸಂಸ್ಥೆಯಲ್ಲಿ ರಸಗೊಬ್ಬರ ಅನ್‌ಲೋಡ್‌ ಮಾಡುತ್ತಿರುವುದು.
ಹಾಸನದ ಚನ್ನಾಂಬಿಕಾ ತೋಟಗಾರಿಕಾ ರೈತ ಉತ್ಪಾದಕ ಸಂಸ್ಥೆಯಲ್ಲಿ ರಸಗೊಬ್ಬರ ಅನ್‌ಲೋಡ್‌ ಮಾಡುತ್ತಿರುವುದು.   

ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವುದು, ವಿವಿಧ ಇಲಾಖೆಗಳಿಂದ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಅಡೆತಡೆ ಇಲ್ಲದೆ, ನೇರವಾಗಿ ಮತ್ತು ಸಕಾಲದಲ್ಲಿ ತಲುಪಿಸುವ ಉದ್ದೇಶದಿಂದ ರೈತರನ್ನೇ ಒಳಗೊಂಡ ಸಂಘಗಳನ್ನು ರಚಿಸುವ ಯೋಜನೆ ಹಲವು ವರ್ಷಗಳಿಂದ ಜಾರಿಯಲ್ಲಿದೆ. ಕೆಲವು ಜಿಲ್ಲೆಗಳಲ್ಲಿ ರೈತರು ಸಂಘಟನೆಗಳನ್ನು ಕಟ್ಟಿಕೊಂಡು ತಾವು ಬಲಗೊಳ್ಳುವುದರ ಜತೆಗೆ ಸಂಘವನ್ನೂ ಬಲಪಡಿಸಿದ್ದಾರೆ. ಇನ್ನೂ ಕೆಲವೆಡೆ ಸಂಘಗಳ ರಚನೆ, ವ್ಯವಹಾರಗಳು ಕುಂಟುತ್ತಾ ಸಾಗಿವೆ. ಈ ಕುರಿತ ಒಂದು ನೋಟ...

ಕೀರೆ ಮಡಿ ಮಹಿಳಾ ಕೂಟ

ಸೊಪ್ಪು ಹಾಗೂ ತರಕಾರಿಯನ್ನು ಸಾವಯವ ಮಾದರಿಯಲ್ಲಿ ಬೆಳೆಯುವ ಉದ್ದೇಶದಿಂದ, ಮಂಡ್ಯ ಸಾವಯವ ಕೃಷಿ ಸಹಕಾರ ಸಂಘವು ‘ಕೀರೆ ಮಡಿ ಮಹಿಳಾ ಕೂಟ’ ರಚಿಸಿದ್ದು, ಮಹಿಳೆಯರ ಕೈತೋಟ ನಿರ್ವಹಿಸುವ ಪ್ರವೃತ್ತಿಗೆ ಪ್ರೋತ್ಸಾಹ ನೀಡುತ್ತಿದೆ.

ADVERTISEMENT

ಮಂಡ್ಯ, ಮದ್ದೂರು, ಪಾಂಡವಪುರ ತಾಲ್ಲೂಕಿನ ಹಳ್ಳಿಗಳಲ್ಲಿ 180 ಮಹಿಳಾ ಸಂಘಗಳಿವೆ. ಮನೆ ಹಿಂದಿನ ಕೈತೋಟ, ತಮ್ಮ ಜಮೀನಿನಲ್ಲಿ ಮನೆಗೊಬ್ಬರ ಬಳಸಿ ಸೊಪ್ಪು, ತರಕಾರಿ ಬೆಳೆಯುತ್ತಿದ್ದಾರೆ. ಹೀಗೆ ಬೆಳೆದ ಸೊಪ್ಪುತರಕಾರಿಯನ್ನು ನಗರದಲ್ಲಿ ನಡೆಯುವ ಸಾವಯವ ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ‘ಸಾವಯವ ರೈತರ ಕೂಟ’ವನ್ನೂ ರಚಿಸಲಾಗಿದ್ದು, ವಿವಿಧ ಹಳ್ಳಿಗಳಲ್ಲಿ 160 ಸಂಘಗಳಿವೆ. ಸಾವಯವ ರೀತಿಯಲ್ಲಿ ಕೃಷಿ ಮಾಡಲು ವಿವಿಧ ತರಬೇತಿ, ಕಾರ್ಯಾಗಾರಗಳನ್ನೂ ಆಯೋಜಿಸಲಾಗುತ್ತಿದೆ.

ಲಾಭದತ್ತ ರೈತ ಸಂಸ್ಥೆಗಳು: ಹಾಸನ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ, ನಬಾರ್ಡ್‌, ಗ್ರೀನ್‌ ಇನೋವೇಷನ್‌ ಸೆಂಟರ್‌ ಅಧೀನದಲ್ಲಿ 9 ರೈತ ಉತ್ಪಾದಕ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ವಿವಿಧ ಇಲಾಖೆಗಳಿಂದ ದೊರೆಯುವ ಸಬ್ಸಿಡಿ ಸೌಲಭ್ಯ ಬಳಸಿಕೊಂಡು ಲಾಭದತ್ತ ಸಾಗಿವೆ.

ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಚನ್ನಾಂಬಿಕಾ ತೋಟಗಾರಿಕಾ ರೈತ ಉತ್ಪಾದಕ ಕಂಪನಿಯು ಸಾವಿರ ಸದಸ್ಯರನ್ನು ಹೊಂದಿದ್ದು, ಗೊಬ್ಬರ, ಔಷಧ, ಬಿತ್ತನೆ ಬೀಜ ಮಾರಾಟಮಾಡುತ್ತಿದೆ. ‘ಮೂರು ವರ್ಷದ ಹಿಂದೆ ಆರಂಭಿಸಿದ ಸಂಸ್ಥೆಯು ಲಾಭದಲ್ಲಿ ನಡೆಯುತ್ತಿದೆ. ಈವರೆಗೆ ಖರ್ಚು ಕಳೆದು ₹25 ಲಕ್ಷ ಆದಾಯ ಬಂದಿದೆ’ ಎಂದು ಸಂಸ್ಥೆ ಸಿಇಒ ಕುಮಾರ್ ತಿಳಿಸಿದರು.

ಗ್ರೀನ್‌ ಇನ್ನೋವೆಷನ್‌ ಸೆಂಟರ್ ನಡೆಸುತ್ತಿರುವ ‘ಪ್ರಕೃತಿ’ ರೈತ ಉತ್ಪಾದಕರ ಸಂಸ್ಥೆ ಮತ್ತು ‘ಹೊಯ್ಸಳ’ ರೈತ ಉತ್ಪಾದಕರ ಸಂಸ್ಥೆಯಲ್ಲಿ ರೈತರಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ, ಆಲೂಗಡ್ಡೆ ಬಿತ್ತನೆ ಬಗ್ಗೆ ತಾಂತ್ರಿಕ ಮಾಹಿತಿ ನೀಡಲಾಗುತ್ತಿದೆ.

‘ಕೃಷಿ ಸಲಕರಣೆ ಹಾಗೂಬೆಳೆಗಳ ಮಾರಾಟದ ಜತೆಗೆ ಕೀಟಬಾಧೆ, ಬಿತ್ತನೆ ಬೀಜ ಕುರಿತು ಮಾಹಿತಿನೀಡಲಾಗುತ್ತಿದೆ. ರೈತರನ್ನು ಪಂಜಾಬ್‌ಗೆ ಕರೆದೊಯ್ದು, ದೃಢೀಕೃತ ಆಲೂಗಡ್ಡೆ ಬಿತ್ತನೆಬೀಜ, ಆಲೂ ಬೇಸಾಯ ಕುರಿತು ಮಾಹಿತಿ ನೀಡಲಾಗಿದೆ’ ಎಂದು ಸಂಸ್ಥೆ ಯೋಜನಾ ಸಂಚಾಲಕ ಸುಹಾಸ್‌ ವಿವರಿಸಿದರು.

ಹಂಪಾಪುರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ

ಮಾಹಿತಿ ಮತ್ತು ತರಬೇತಿ: ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ 10 ರೈತ ಉತ್ಪಾದಕ ಕಂಪನಿಗಳು ಕಾರ್ಯಾರಂಭಿಸಿದ್ದು, ಆಯಾ ಭಾಗದ ಕೃಷಿಕರಿಗೆ ವರವಾಗಿವೆ. ತೋಟಗಾರಿಕೆ ಬೆಳೆಗಾರರಿಗೆ ಅವಶ್ಯವಿರುವ ಬೀಜ, ಗೊಬ್ಬರ ಮತ್ತಿತರ ಪರಿಕರಗಳನ್ನು, ಕಡಿಮೆ ದರಕ್ಕೆ ಸಕಾಲಕ್ಕೆ ಮಾರಾಟ ಮಾಡುತ್ತಿದ್ದು, ಬೆಳೆಗಾರರಿಗೆ ಸಹಕಾರಿಯಾಗಿವೆ.

ತೋಟಗಾರಿಕೆ ಇಲಾಖೆಯಲ್ಲಿನ ವಿವಿಧ ಯೋಜನೆ ಬಗ್ಗೆ ಬೆಳೆಗಾರರಿಗೆ ಮಾಹಿತಿ ನೀಡುವುದರ ಜೊತೆಗೆ ತರಬೇತಿಯನ್ನೂ ನೀಡುತ್ತಿವೆ.

‘ಒಂದೊಂದು ಸಂಘದಲ್ಲೂ ತಲಾ 1 ಸಾವಿರ ಸದಸ್ಯರಿದ್ದಾರೆ. ಇಲಾಖೆ, ಸರ್ಕಾರದ ಸಹಾಯಧನದೊಂದಿಗೆ ಸದಸ್ಯರಿಂದಲೂ ಷೇರು ಬಂಡವಾಳ ಸಂಗ್ರಹಿಸಲಾಗಿದೆ. ಪ್ರಸ್ತುತ ಪ್ರಾಥಮಿಕ ಚಟುವಟಿಕೆಗಳನ್ನಷ್ಟೇ ನಡೆಸುತ್ತಿವೆ. ಇನ್ಮುಂದೆ ತನ್ನ ಸದಸ್ಯರ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸುವ ಕೆಲಸವನ್ನು ಮಾಡಲಿವೆ’ ಎಂದು ಸಂಘದ ಪದಾಧಿಕಾರಿಯೊಬ್ಬರು ಹೇಳಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು ಏಳು ರೈತ ಉತ್ಪಾದಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ರೈತರೇ ಸೇರಿ ಸ್ಥಾಪಿಸಿರುವ ಈ ಕಂಪನಿಗಳು ತಕ್ಕಮಟ್ಟಿಗೆ ನಷ್ಟವಿಲ್ಲದೇ ನಡೆಯುತ್ತಿವೆ.

ಜೇನು ಸೊಸೈಟಿ

ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಮಡಿಕೇರಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಜೇನು ಕೃಷಿಯನ್ನು ರೈತರು ಉಪ ಕಸುಬಾಗಿ ಅವಲಂಬಿಸಿದ್ದು, ಅಲ್ಪ ಆದಾಯ ಗಳಿಸುತ್ತಿದ್ದಾರೆ.

ಜಿಲ್ಲೆಯ ನಾನಾ ಕಡೆ ‘ಕೊಡಗಿನ ಜೇನು’ ಬ್ರ್ಯಾಂಡ್‌ನ ಜೇನು ಲಭಿಸುತ್ತದೆ. ಜಿಲ್ಲೆಯಲ್ಲಿ ಜೇನು ಉತ್ಪಾದನೆ ಹೆಚ್ಚಳಕ್ಕೆ ಜೇನು ಕೃಷಿಕರ ಸೊಸೈಟಿಗಳ ಕೊಡುಗೆ ಅಪಾರ. ಇವು ರೈತರಿಗೆ ಸೇತುವೆಯಾಗಿ ಕೆಲಸ ಮಾಡುತ್ತಿವೆ. ರೈತರಿಂದ ಜೇನು ಖರೀದಿಸಿ, ತಮ್ಮದೇ ಬ್ರ್ಯಾಂಡ್‌ನಡಿ ಮಾರುಕಟ್ಟೆಗೆ ಪರಿಚಯಿಸುತ್ತಿವೆ ಎಂದು ಶಾಂತಳ್ಳಿಯ ಪ್ರಗತಿಪರ ಕೃಷಿಕ ಪ್ರವೀಣ್‌ ಹೇಳುತ್ತಾರೆ.

ಪರಿಶುದ್ಧ ಎಣ್ಣೆಗೆ ‘ಕಲ್ಪತರು’ ಹೋರಾಟ

ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ತೆಂಗು ಬೆಳೆಗಾರರು ತೆಂಗು ಅಭಿವೃದ್ಧಿ ಮಂಡಳಿಯ ನೆರವಿನಿಂದ ಎಂಟು ವರ್ಷಗಳ ಹಿಂದೆ ‘ಕಲ್ಪತರು ಕೋಕೋನಟ್‌ ಪ್ರೊಡ್ಯೂಸರ್ಸ್‌ ಕಂಪನಿ’ ಆರಂಭಿಸಿದ್ದರು. ಈ ಸಂಸ್ಥೆ ಲಾಭದತ್ತ ಹೊರಳಲು ಇನ್ನೂ ಶ್ರಮಿಸುತ್ತಿದೆ. ಸರ್ಕಾರದ ಭರವಸೆ ಕಾಗದದಲ್ಲೇ ಉಳಿದ ಪರಿಣಾಮ ಕಂಪನಿ ನಡೆಸಲು ನಿರ್ದೇಶಕರು ಹೆಣಗಾಡುತ್ತಿದ್ದಾರೆ.

ಸಾವಿರ ಬೆಳೆಗಾರರು ಕಂಪನಿಯಲ್ಲಿದ್ದಾರೆ. ಶುದ್ಧ ತೆಂಗಿನ ಎಣ್ಣೆ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಮಾರುಕಟ್ಟೆಯಲ್ಲಿ ಎದುರಾದ ತೊಡಕುಗಳನ್ನು ನಿವಾರಿಸಲು ಸರ್ಕಾರ ಆಸಕ್ತಿ ತೋರದಿರುವುದು ಸಮಸ್ಯೆಯಾಗಿದೆ.

ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಕೆಲವೇ ಸೌಲಭ್ಯಗಳು ಕಂಪನಿಗೆ ಸಿಗುತ್ತಿವೆ. ಸಬ್ಸಿಡಿ ದರದಲ್ಲಿ ಷೇರುದಾರರಿಗೆ ಗೊಬ್ಬರ ಒದಗಿಸಲಾಗುತ್ತಿದೆ. ನಿರ್ದೇಶಕರು ಹಾಗೂ ಷೇರುದಾರರ ಕಾಳಜಿಯಿಂದ ಅಸ್ತಿತ್ವ ಉಳಿಸಿಕೊಂಡಿದೆ. ಕೊಬ್ಬರಿ ಎಣ್ಣೆ ಮಾರುಕಟ್ಟೆಯನ್ನು ಬೆಂಗಳೂರಿಗೆ ವಿಸ್ತರಿಸಲು ಪ್ರಯತ್ನಿಸುತ್ತಿದೆ.

ಶುದ್ಧ ಕೊಬ್ಬರಿ ಎಣ್ಣೆಯನ್ನು ಅಡುಗೆಗೆ ಬಳಸುವಂತೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಬೆಳೆಗಾರರು ಕೊಬ್ಬರಿ ಎಣ್ಣೆಯನ್ನು ಅಡುಗೆಗೆ ಬಳಸುತ್ತಿದ್ದಾರೆ. ಮಾಸಿಕ ಸುಮಾರು 400 ಲೀಟರ್‌ ಕೊಬ್ಬರಿ ಎಣ್ಣೆಯನ್ನು ಮಾರಾಟ ಮಾಡುತ್ತಿದೆ.

ರೈತ ಸಂತೆಗೆ ಜನಪ್ರೀತಿ

ಕೊಪ್ಪಳದ ‘ಮಣ್ಣಿನೊಂದಿಗೆ ಮಾತುಕತೆ’ ತಂಡ ನಡೆಸುತ್ತಿರುವ ವಾರದ ರೈತ ಸಂತೆಯು ಜನಪ್ರೀತಿ ಗಳಿಸಿಕೊಂಡಿದೆ. ಜಿಲ್ಲೆಯ 20 ಪ್ರಗತಿಪರ ಮತ್ತು ಸಾವಯವ ರೈತರು ಇಲ್ಲಿ ಮಳಿಗೆಗೆಗಳನ್ನು ತೆರೆದು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.

ಈ ಮಳಿಗೆಗಳಲ್ಲಿ ತರಕಾರಿ, ಹಣ್ಣು, ಸಿರಿಧಾನ್ಯ, 10 ಸ್ವದೇಶಿ ತಳಿಯ ವಿವಿಧ ರುಚಿ, ಬಣ್ಣದ ಅಕ್ಕಿ, ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. 20 ಮಳಿಗೆಗಳಲ್ಲಿ 30ಕ್ಕೂ ಹೆಚ್ಚು ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗ್ರಾಹಕರು ನೇರವಾಗಿ ರೈತರ ಹೊಲಗಳಿಗೆ ತೆರಳಿ ಸಹ ಖರೀದಿ ಮಾಡುತ್ತಿದ್ದಾರೆ.

ಸಂತೆಯ ಯಶಸ್ಸನ್ನು ಕಂಡು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ರೈತರನ್ನು ಭೇಟಿ ಮಾಡಿ ಗಂಗಾವತಿಯಲ್ಲಿ ಸಂತೆ ನಡೆಸುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಬೇಕಾದ ಸ್ಥಳ, ಎಲ್ಲ ಮೂಲಸೌಕರ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಸ್ವಾಸ್ಥ್ಯ ರೈತರ ಉತ್ಪಾದಕ ಕಂಪನಿ ನಿಯಮಿತವು 2019ರಲ್ಲಿ ಸ್ಥಾಪನೆಯಾಗಿದೆ. ನಬಾರ್ಡ್‌ ಸಹಕಾರದೊಂದಿಗೆ ಐದು ರೈತರು ಆರಂಭಿಸಿದ್ದ ಕಂಪನಿಯಲ್ಲಿ ಸದ್ಯಕ್ಕೆ 1,100 ಸದಸ್ಯರಿದ್ದಾರೆ.

ರಾಯಚೂರು ಸೇರಿದಂತೆ ಭತ್ತ ಬೆಳೆಯುವ ವಿವಿಧ ಜಿಲ್ಲೆಗಳಲ್ಲಿ ಬಿಗ್‌ ಬಾಸ್ಕೆಟ್‌, ಬಿಗ್‌ ಬಜಾರ್‌, ರಿಲಯನ್ಸ್‌ ಕಂಪನಿಗಳು ರೈತ ಉತ್ಪಾದಕ ಕಂಪನಿಗಳಿಂದ ಭತ್ತ ಖರೀದಿಸುತ್ತಿವೆ. ಸಿಂಧನೂರಿನಲ್ಲಿ ರಿಲಯನ್ಸ್‌ ಭತ್ತ ಖರೀದಿಸಿದ್ದು ಮಾತ್ರ ಸುದ್ದಿಯಾಗಿತ್ತು.

‘ಸ್ವಾಸ್ಥ್ಯ ರೈತರ ಉತ್ಪಾದಕ ಕಂಪನಿಯಿಂದ ಗುಜರಾತ್‌ನ ರಾಯಲ್‌ ಕಂಪನಿಯು ಭತ್ತ ಖರೀದಿಗೆ ಈಚೆಗೆ ಒಲವು ತೋರಿಸಿದೆ. ಅಕ್ಕಿ ರಫ್ತು ಮಾಡುವ ಕಂಪನಿ ಅದಾಗಿದೆ’ ಎಂದು ಕಂಪನಿ ವ್ಯವಸ್ಥಾಪಕ ಮಲ್ಲಿಕಾರ್ಜುನ ವಲ್ಕಂದಿನ್ನಿ ತಿಳಿಸಿದರು. ರಿಲಯನ್ಸ್‌ ಕಂಪನಿಗೆ 10 ಸಾವಿರ ಕ್ವಿಂಟಲ್‌ ಭತ್ತ ಪೂರೈಸುವುದಕ್ಕೆ ಕಂಪನಿ ಒಪ್ಪಂದ ಮಾಡಿಕೊಂಡಿದೆ.

ಎಂಟಿಆರ್‌ಗೆ ಬ್ಯಾಡಗಿ ಮೆಣಸಿನಕಾಯಿ: ಧಾರವಾಡದಲ್ಲಿ ತೋಟಗಾರಿಕೆ ಇಲಾಖೆ ಅಡಿಯಲ್ಲಿ ಮೂರು ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಹುಬ್ಬಳ್ಳಿಯ ಸಂಘವು ಬ್ಯಾಡಗಿ ಮೆಣಸಿನಕಾಯಿ ಖರೀದಿಸಿ ಅದನ್ನು ಎಂಟಿಆರ್‌ ಸಂಸ್ಥೆಗೆ ಮಾರಾಟ ಮಾಡುತ್ತಿವೆ. ಉಳಿದವು ರಿಯಾಯಿತಿ ದರದಲ್ಲಿ ಬೀಜ, ಗೊಬ್ಬರ ಮಾರಾಟ ಮಾಡುತ್ತಿವೆ.

ರೈತರಿಗೆ ವರ: ಶಿರಸಿ ತಾಲ್ಲೂಕು ಅಂಗಡಿಯ ಮಧುಕೇಶ್ವರ ತೋಟಗಾರಿಕಾ ರೈತ ಉತ್ಪಾದಕ ಸಂಸ್ಥೆ, ತಾರಗೋಡಿನ ಮಧುಮಿತ್ರ ಜೇನುಕೃಷಿ ಉತ್ಪಾದಕರ ಸಂಸ್ಥೆ, ದೊಡ್ನಳ್ಳಿಯ ಶಂಭುಲಿಂಗೇಶ್ವರ ರೈತ ಉತ್ಪಾದಕ ಸಂಸ್ಥೆ ಮತ್ತು ಮಾಳಂಜಿಯ ಭತ್ತ ಬೆಳೆಗಾರರ ಸಂಸ್ಥೆಗಳು ರೈತರಿಗೆ ನೆರವಾಗುತ್ತಿವೆ.

10 ಸಂಘಗಳ ಸ್ಥಾಪನೆಗೆ ಪ್ರಸ್ತಾವ: ವಿಜಯಪುರ ಜಿಲ್ಲೆಯಲ್ಲಿ ತೋಟಗಾರಿಕಾ ವಿಭಾಗದಲ್ಲಿ ನಾಲ್ಕು ರೈತ ಉತ್ಪಾದಕ ಸಂಘಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಮುಖವಾಗಿ ದ್ರಾಕ್ಷಿ, ದಾಳಿಂಬೆ, ಈರುಳ್ಳಿ ಮತ್ತು ಕಲ್ಲಂಗಡಿ ಹಣ್ಣುಗಳನ್ನು ಕೇಂದ್ರೀಕರಿಸಿಕೊಂಡು ಕಾರ್ಯನಿರ್ವಹಿಸುತ್ತಿವೆ. ಬೇರೆ ಬೇರೆ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು, ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ.

ಕೋಟ್ಯಂತರ ವಹಿವಾಟು: ‘ಗದಗ ಜಿಲ್ಲೆಯಲ್ಲಿ 11 ರೈತ ಉತ್ಪಾದಕ ಸಂಘಗಳು ಸಕ್ರಿಯವಾಗಿದ್ದು, ಅದರಲ್ಲಿ ಎರಡು ಕಂಪನಿಗಳು ಪ್ರತಿವರ್ಷ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿವೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ತಿಳಿಸಿದ್ದಾರೆ.

ಗದುಗಿನಲ್ಲಿರುವ ಶ್ರಮಜೀವಿ ರೈತ ಉತ್ಪಾದಕರ ಕಂಪನಿ (ಎಫ್‌ಪಿಸಿ) ನಿಯಮಿತವು ತುಂಬಾ ಕ್ರಿಯಾಶೀಲವಾಗಿದೆ.

‘ಗದಗ ಸುತ್ತಮುತ್ತಲಿನ 10 ಹಳ್ಳಿಯಿಂದ ಒಟ್ಟು 1,150 ರೈತರು ಶ್ರಮಜೀವಿ ರೈತ ಉತ್ಪಾದಕರ ಕಂಪನಿಗೆ ಸದಸ್ಯರಾಗಿದ್ದಾರೆ’ ಎನ್ನುತ್ತಾರೆ ಕಂಪನಿಯ ಸಲಹೆಗಾರ ಗೋವಿಂದಯ್ಯ ಬಿ.

ಗಲಗಲಿಯಲ್ಲಿ ರವಾ ಮಿಲ್: ಈ ಮೊದಲು ಕೃಷ್ಣಾ ತೀರದಲ್ಲಿ ಬೆಳೆದ ಜವೆ ಗೋಧಿ ದೂರದ ಗುಜರಾತ್‌ನ ಅಹಮದಾಬಾದ್‌ಗೆ ಹೋಗಿ ಅಲ್ಲಿ ರವೆಯಾಗಿ ಮಾರ್ಪಟ್ಟು ಪ್ಯಾಕ್ ಆಗಿ ಮತ್ತೆ ಬಾಗಲಕೋಟೆ ಜಿಲ್ಲೆಯ ಮಾರುಕಟ್ಟೆಗೆ ಬರುತ್ತಿತ್ತು.

ಅದನ್ನು ಮನಗಂಡ ಬೀಳಗಿ ತಾಲ್ಲೂಕಿನ ಗಲಗಲಿಯ ನೇಗಿಲ ಮಿಡಿತ ರೈತ ಉತ್ಪಾದಕ ಸಂಘದ ಗೆಳೆಯರು ತಮ್ಮ ಸಂಘದಿಂದ ₹13 ಲಕ್ಷ ಬಂಡವಾಳ ಹೂಡಿಕೆ ಮಾಡಿ ಗಲಗಲಿ ಬಳಿ ರವಾ ಮಿಲ್ ಆರಂಭಿಸಿದ್ದಾರೆ. ಅದಕ್ಕೆ ₹35 ಲಕ್ಷ ವೆಚ್ಚದಲ್ಲಿ ಕಚ್ಚಾ ವಸ್ತು ಸಂಗ್ರಹಿಸಲು ಮುಂದಾಗಿದ್ದಾರೆ. ಶೀಘ್ರ ಮಿಲ್ ಕಾರ್ಯಾರಂಭಗೊಳ್ಳಲಿದೆ.

ಮಾವು ಕಂಪನಿಯಲ್ಲಿ ಸಾವಿರ ಸದಸ್ಯರು

ರಾಮನಗರ ಜಿಲ್ಲೆಯಲ್ಲಿ ಸದ್ಯ ಹತ್ತಕ್ಕೂ ಹೆಚ್ಚು ರೈತ ಉತ್ಪಾದನೆ ಕಂಪನಿಗಳು ಚಟುವಟಿಕೆ ನಡೆಸುತ್ತಿವೆ. ಕೆಲವೆಡೆ ಕೃಷಿ ಉಪ ಉತ್ಪನ್ನ ತಯಾರಿಕೆ ಮತ್ತು ಮಾರಾಟವೂ ನಡೆದಿದೆ. ಮಾವು ಮತ್ತು ತೆಂಗು ಬೆಳೆಗಾರರನ್ನು ಒಗ್ಗೂಡಿಸಿ ‘ರಾಮನಗರ ಜಿಲ್ಲಾ ಮಾವು ಮತ್ತು ತೆಂಗು ಬೆಳೆ ಉತ್ಪಾದಕರ ಕಂಪನಿ’ ರಚನೆ ಆಗಿದ್ದು, ಒಂದು ಸಾವಿರ ಸದಸ್ಯರನ್ನು ಹೊಂದಿದೆ.

ರೋಸ್‌ ಆನಿಯನ್‌ಗೆ ಮೀಸಲು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೋಟಗಾರಿಕಾ ಇಲಾಖೆಯಿಂದ ಮೂರು ರೈತ ಉತ್ಪಾದಕ ಸಂಘಗಳನ್ನು ರಚಿಸಲಾಗಿದೆ. ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವೆಲ್ಲವೂ ರೋಸ್ ಆನಿಯನ್‌ ಮಾರಾಟಕ್ಕೆ ಸೀಮಿತಗೊಂಡಿವೆ.

ಪ್ರಜಾವಾಣಿ ಬ್ಯೂರೊ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.