ADVERTISEMENT

ಆಳ– ಅಗಲ: ಅದಾನಿ ಸಂಪತ್ತು 15 ಪಟ್ಟು ಏರಿಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 20:15 IST
Last Updated 21 ಸೆಪ್ಟೆಂಬರ್ 2022, 20:15 IST
   

ಅದಾನಿ ಸಮೂಹದ ಉದ್ದಿಮೆಗಳ ಕುರಿತು ಮಾತನಾಡುವಾಗ ‘ಇಂಧನದಿಂದ ಬಂದರಿನವರೆಗೆ’ ಎಂದು ಹೇಳಲಾಗುತ್ತದೆ. ಅದಾನಿ ಸಮೂಹದ ಉದ್ಯಮಗಳ ವ್ಯಾಪ್ತಿಯನ್ನು ಈ ಮಾತು ಸೂಚಿಸುತ್ತದೆ. ದೇಶದ ಆರ್ಥಿಕತೆಯಲ್ಲಿ ಅದಾನಿ ಸಮೂಹದ ಕಂಪನಿಗಳು ಪ್ರಮುಖವಾಗಿ ಆರು ವಲಯಗಳಲ್ಲಿ ವಹಿವಾಟು ನಡೆಸುತ್ತಿವೆ. ಈ ಆರೂ ವಲಯಗಳಲ್ಲಿ ಅದಾನಿ ಅವರ ಕಂಪನಿಗಳು ಒಟ್ಟು 20 ಸ್ವರೂಪದ ಉದ್ಯಮಗಳನ್ನು ನಡೆಸುತ್ತಿವೆ. ಕೆಲವು ಸ್ವರೂಪದ ಉದ್ಯಮಗಳಲ್ಲಿ ದೇಶದ ಬೇರೆ ಸಮೂಹಗಳು ಮತ್ತು ಸರ್ಕಾರಿ ಸಂಸ್ಥೆಗಳಿಗಿಂತ ಅದಾನಿ ಸಮೂಹವು ಹೆಚ್ಚು ಮಾರುಕಟ್ಟೆ ಪಾಲು ಹೊಂದಿದೆ. ಇನ್ನು ಕೆಲವು ಸ್ವರೂಪದ ಉದ್ದಿಮೆಗಳಲ್ಲಿ ಅದಾನಿ ಸಮೂಹವು ಏಕಸ್ವಾಮ್ಯ ಸಾಧಿಸಿದೆ

***

ಉದ್ಯಮಿ ಗೌತಮ್ ಅದಾನಿ ಅವರ ಸಂಪತ್ತು ಐದು ವರ್ಷಗಳಲ್ಲಿ 15 ಪಟ್ಟು ಹೆಚ್ಚಾಗಿದೆ ಎನ್ನುತ್ತದೆ‘ಐಐಎಫ್‌ಎಲ್‌ ವೆಲ್ತ್‌ ಹುರೂನ್‌ ಇಂಡಿಯಾ ರಿಚ್‌ ಲಿಸ್ಟ್‌ 2022’ ವರದಿ. 2018ರಲ್ಲಿ ₹71,000 ಕೋಟಿಯಷ್ಟಿದ್ದ ಅದಾನಿಯ ಸಂಪತ್ತು 2022ರಲ್ಲಿ ₹10.94 ಲಕ್ಷಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ದೇಶದ ಯಾವ ಉದ್ಯಮಿಯ ಸಂಪತ್ತೂ ಈ ಮಟ್ಟದಲ್ಲಿ ಏರಿಕೆಯಾಗಿಲ್ಲ. ಕೋವಿಡ್ ಅವಧಿಯಲ್ಲಿ ದೇಶದ ಬಹುತೇಕ ಉದ್ಯಮಿಗಳ ಸಂಪತ್ತು ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗಿಲ್ಲ. ಆದರೆ, ಅದಾನಿ ಅವರ ಸಂಪತ್ತು ಮಾತ್ರ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಕೇಂದ್ರ ಸರ್ಕಾರವು ಅದಾನಿ ಸಮೂಹಕ್ಕೆ ಅನುಕೂಲವಾಗುವಂತೆ ನೀತಿಗಳನ್ನು ರಚಿಸುತ್ತಿದೆ ಎಂದು ವಿರೋಧ ಪಕ್ಷಗಳು ಪದೇ–ಪದೇ ಆರೋಪ ಮಾಡಿವೆ. ಈಗ ರದ್ದಾಗಿರುವ, ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನು ಅದಾನಿಗೆ ಅನುಕೂಲವಾಗಲಿ ಎಂದೇ ರೂ‍ಪಿಸಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಈ ಬಗ್ಗೆ ಅದಾನಿ ಸಮೂಹವೂ ಸ್ಪಷ್ಟನೆ ನೀಡಿದ್ದು, ಈ ಆರೋಪಗಳನ್ನು ನಿರಾಕರಿಸಿದೆ.

ADVERTISEMENT

20ಕ್ಕೂ ಹೆಚ್ಚು ಸ್ವರೂಪದ ಉದ್ದಿಮೆಗಳನ್ನು ಅದಾನಿ ಸಮೂಹವು ನಡೆಸುತ್ತಿದೆ. ಆದರೆ, ಇವುಗಳಲ್ಲಿ ಬಹುತೇಕ ಉದ್ದಿಮೆಗಳು ಕೇಂದ್ರ ಸರ್ಕಾರದ ನೂತನ ನೀತಿಗಳಿಗೆ ಪೂರಕವಾಗಿ ಆರಂಭವಾಗಿವೆ ಅಥವಾ ಉದ್ದಿಮೆಯನ್ನು ವಿಸ್ತರಿಸಿವೆ. ಸೌರ ವಿದ್ಯುತ್ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಕೇಂದ್ರ ಸರ್ಕಾರವು ಈಚಿನ ವರ್ಷಗಳಲ್ಲಿ ಆದ್ಯತೆ ನೀಡಿದೆ. ಇದರ ಭಾಗವಾಗಿ ಪಾವಗಡ ಸೌರವಿದ್ಯುತ್ ಪಾರ್ಕ್‌ ಅನ್ನು ಸ್ಥಾಪಿಸಲಾಯಿತು. ಅದನ್ನು ಅದಾನಿ ಸಮೂಹವು ಸ್ಥಾಪಿಸಿದೆ. ದೇಶದ 12 ರಾಜ್ಯಗಳಲ್ಲಿ ಇಂತಹ ಪಾರ್ಕ್‌ ಮತ್ತು ಸೌರವಿದ್ಯುತ್ ಉತ್ಪಾದನಾ ಘಟಕಗಳನ್ನು ಅದಾನಿ ಸಮೂಹ ಹೊಂದಿದೆ. ದೇಶದ ಅತ್ಯಂತ ದೊಡ್ಡ ಸೌರವಿದ್ಯುತ್ ಉತ್ಪಾದನಾ ಕಂಪನಿ ಎನಿಸಿದೆ.

₹1.88 ಲಕ್ಷ ಕೋಟಿ ಸಾಲ:2022ರ ಮಾರ್ಚ್‌ ವೇಳೆಗೆ ಅದಾನಿ ಸಮೂಹದ ಒಟ್ಟು ಸಾಲವು ₹ 1.88 ಲಕ್ಷ ಕೋಟಿ ಆಗಿತ್ತು, ನಿವ್ವಳ ಸಾಲವು ₹ 1.61 ಲಕ್ಷ ಕೋಟಿ ಎಂದು ಸಮೂಹವೇ ಹೇಳಿಕೊಂಡಿದೆ.

ಅದಾನಿ ಅವರ ಅಣ್ಣ ವಿನೋದ್ ಶಾಂತಿಲಾಲ್ ಅದಾನಿ ಅವರು ಟೆಕ್ಸ್‌ಟೈಲ್ಸ್ ಮೂಲಕ ಉದ್ಯಮ ಆರಂಭಿಸಿದ್ದರು. ಅನಿವಾಸಿ ಭಾರತೀಯ (ಎನ್‌ಆರ್‌ಐ) ಶ್ರೀಮಂತರ ಪೈಕಿ ಈಗ ಅವರು ಅಗ್ರ ಸ್ಥಾನದಲ್ಲಿದ್ದಾರೆ. 2018ರಲ್ಲಿ ಇವರ ಸಂಪತ್ತು ₹17,800 ಕೋಟಿಯಿತ್ತು. ಈಗ ಅದು ₹1.69 ಲಕ್ಷ ಕೋಟಿಗೆ ತಲುಪಿದ್ದು, ಸರಿಸುಮಾರು 10 ಪಟ್ಟು ಜಿಗಿದಿದೆ.

* ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮುಕೇಶ್ ಅಂಬಾನಿ ಅವರು ಐದು ವರ್ಷಗಳ ಹಿಂದೆ ₹3.71 ಲಕ್ಷ ಕೋಟಿ ಆಸ್ತಿಯ ಮಾಲೀಕರಾಗಿದ್ದರು. ಈಗ ಅವರ ಸಂಪತ್ತಿನ ಮೌಲ್ಯ ದ್ವಿಗುಣಗೊಂಡಿದೆ (₹7.94 ಲಕ್ಷ ಕೋಟಿ)

* ಕೋವಿಡ್ ತಡೆ ಲಸಿಕೆಗಳನ್ನು ಪೂರೈಸಿದ್ದ ಸೀರಂ ಇನ್‌ಸ್ಟಿಟ್ಯೂಟ್‌ನ ಸೈರಸ್ ಪೂನಾವಾಲಾ ಅವರ ಕುಟುಂಬದ ಆಸ್ತಿಯು ಐದು ವರ್ಷಗಳಲ್ಲಿ 3 ಪಟ್ಟು ಹೆಚ್ಚಳವಾಗಿದೆ. ಅಂದರೆ, 73 ಸಾವಿರ ಕೋಟಿ ರೂಪಾಯಿಯಿಂದ ₹2 ಲಕ್ಷ ಕೋಟಿಗೆ ಹೆಚ್ಚಿದೆ

* ಸಾಫ್ಟ್‌ವೇರ್ ಉದ್ಯಮಿ ಶಿವ ನಾಡಾರ್ ಅವರು ಈಗ ₹1.85 ಲಕ್ಷ ಕೋಟಿ ಸಂಪತ್ತಿನ ವಾರಸುದಾರರಾಗಿದ್ದಾರೆ. ಐದು ವರ್ಷಗಳಲ್ಲಿ ಒಟ್ಟಾರೆ 5 ಪಟ್ಟು ಆಸ್ತಿಯನ್ನು ಅವರು ಹೆಚ್ಚಿಸಿಕೊಂಡಿದ್ದಾರೆ

* ಡಿಮಾರ್ಟ್ ಮಳಿಗೆಯ ಸಂಸ್ಥಾಪಕ ರಾಧಾಕೃಷ್ಣ ದಮಾನಿ ಅವರ ಸಂಪತ್ತು ಸರಿಸುಮಾರು 4 ಪಟ್ಟು ಏರಿಕೆಯಾಗಿದೆ (₹46 ಸಾವಿರ ಕೋಟಿಯಿಂದ ₹1.75 ಲಕ್ಷ ಕೋಟಿಗೆ ಏರಿಕೆ)

* ಐದು ವರ್ಷಗಳಲ್ಲಿ, ಉಕ್ಕು ಉದ್ಯಮಿ ಮಿತ್ತಲ್ ಅವರ ಆಸ್ತಿಯ ಮೌಲ್ಯ ₹37 ಸಾವಿರ ಕೋಟಿ, ದಿಲೀಪ್ ಸಂಘವಿ ಅವರ ಆಸ್ತಿ ಮೌಲ್ಯ ₹43 ಸಾವಿರ ಕೋಟಿ,ಉದಯ್ ಕೋಟಕ್ ಅವರ ಆಸ್ತಿ ಮೌಲ್ಯ ₹40 ಸಾವಿರ ಕೋಟಿಯಷ್ಟು ಹೆಚ್ಚಳವಾಗಿದೆ

* ಮಾಹಿತಿ ತಂತ್ರಜ್ಞಾನ, ಆರೋಗ್ಯ ವಲಯ ಸೇರಿದಂತೆ ಹತ್ತು ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಎಸ್.ಪಿ ಹಿಂದೂಜಾ ಕುಟುಂಬದ ಆಸ್ತಿ ಮೌಲ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ₹7 ಸಾವಿರ ಕೋಟಿಯಷ್ಟೇ ಏರಿಕೆಯಾಗಿದೆ. ಅಗ್ರ 10 ಶ್ರೀಮಂತರ ಪೈಕಿ ಅತಿಕಡಿಮೆ ಏರಿಕೆ ದಾಖಲಿಸಿರುವುದು ಇವರೊಬ್ಬರು ಮಾತ್ರ

ಅಗ್ರ ಹತ್ತು ಶ್ರೀಮಂತರಲ್ಲಿ ಅದಾನಿಯದ್ದೇ ಸಿಂಹಪಾಲು

ಹುರೂನ್ ಇಂಡಿಯಾ ಪ್ರಕಟಿಸಿರುವ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಹಾಗೂ ಮುಕೇಶ್ ಅಂಬಾನಿ ಅವರು ಮೊದಲ ಎರಡು ಸ್ಥಾನಗಳನ್ನು ಪಡೆದಿದ್ದಾರೆ. ಮೊದಲ 10 ಶ್ರೀಮಂತರ ಒಟ್ಟಾರೆ ಸಂಪತ್ತಿನ ಮೌಲ್ಯ₹31.94 ಲಕ್ಷ ಕೋಟಿ. ಈ 10 ಜನರ ಒಟ್ಟಾರೆ ಸಂಪತ್ತಿನ ಪೈಕಿ ಗೌತಮ್ ಅದಾನಿಯವರು ಶೇ34.26ರಷ್ಟು ಪಾಲು ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅಂಬಾನಿ ಅವರು ಶೇ24.88ರಷ್ಟು ಪಾಲು ಹೊಂದಿದ್ದಾರೆ. ಹತ್ತು ಸಿರಿವಂತರ ಒಟ್ಟಾರೆ ಸಂಪತ್ತಿನ ಪೈಕಿ ಶೇ 60ರಷ್ಟು ಸಂಪತ್ತು ಈ ಇಬ್ಬರು ಶ್ರೀಮಂತರಲ್ಲೇ ಕ್ರೂಡೀಕೃತವಾಗಿದೆ. ಅದಾನಿ ಹಾಗೂ ಅಂಬಾನಿ ಹೊರತುಪಡಿಸಿ, ಉಳಿದ ಎಲ್ಲ ಎಂಟು ಶ್ರೀಮಂತರು ₹13,05,000 ಲಕ್ಷ ಕೋಟಿ ಆಸ್ತಿಯ ಒಡೆಯರಾಗಿದ್ದು, ಶೇ 40ರಷ್ಟು ಪಾಲು ಹಂಚಿಕೊಂಡಿದ್ದಾರೆ.

ಇಂಧನದಿಂದ ಬಂದರಿನವರೆಗೆ ಅದಾನಿ

ಅದಾನಿ ಸಮೂಹದ ಉದ್ದಿಮೆಗಳ ಕುರಿತು ಮಾತನಾಡುವಾಗ ‘ಇಂಧನದಿಂದ ಬಂದರಿನವರೆಗೆ’ ಎಂದು ಹೇಳಲಾಗುತ್ತದೆ. ಅದಾನಿ ಸಮೂಹದ ಉದ್ಯಮಗಳ ವ್ಯಾಪ್ತಿಯನ್ನು ಈ ಮಾತು ಸೂಚಿಸುತ್ತದೆ.ದೇಶದ ಆರ್ಥಿಕತೆಯಲ್ಲಿ ಅದಾನಿ ಸಮೂಹದ ಕಂಪನಿಗಳು ಪ್ರಮುಖವಾಗಿ ಆರು ವಲಯಗಳಲ್ಲಿ ವಹಿವಾಟು ನಡೆಸುತ್ತಿವೆ. ಈ ಆರೂ ವಲಯಗಳಲ್ಲಿ ಅದಾನಿ ಅವರ ಕಂಪನಿಗಳು ಒಟ್ಟು 20 ಸ್ವರೂಪದ ಉದ್ಯಮಗಳನ್ನು ನಡೆಸುತ್ತಿವೆ. ಕೆಲವು ಸ್ವರೂಪದ ಉದ್ಯಮಗಳಲ್ಲಿ ದೇಶದ ಬೇರೆ ಸಮೂಹಗಳು ಮತ್ತು ಸರ್ಕಾರಿ ಸಂಸ್ಥೆಗಳಿಗಿಂತ ಅದಾನಿ ಸಮೂಹವು ಹೆಚ್ಚು ಮಾರುಕಟ್ಟೆ ಪಾಲು ಹೊಂದಿದೆ. ಇನ್ನು ಕೆಲವು ಸ್ವರೂಪದ ಉದ್ದಿಮೆಗಳಲ್ಲಿ ಅದಾನಿ ಸಮೂಹವು ಏಕಸ್ವಾಮ್ಯ ಸಾಧಿಸಿದೆ.

1. ಇಂಧನ

lನವೀಕರಿಸಬಹುದಾದ ಇಂಧನ: ಅದಾನಿ ಸಮೂಹವು ದೇಶದ ಹಲವೆಡೆ ಸೌರಪಾರ್ಕ್‌ಗಳನ್ನು ಹೊಂದಿದೆ. ಅದಾನಿ ಸಮೂಹದ ಒಡೆತನದ ಸೌರಪಾರ್ಕ್‌ಗಳು ಮತ್ತು ಪವನ ವಿದ್ಯುತ್ ಘಟಕಗಳು ದೇಶದ 12 ರಾಜ್ಯಗಳಲ್ಲಿ ಹರಡಿವೆ

lಅದಾನಿ ಸಮೂಹವು ಸೌರಶಕ್ತಿ ಫಲಕಗಳ ತಯಾರಿಕಾ ಘಟಕಗಳನ್ನೂ ಹೊಂದಿದೆ. ಈ ಘಟಕಗಳಲ್ಲಿ ತಯಾರಾಗುವ ಸೌರಫಲಕಗಳನ್ನು ತನ್ನದೇ ಸೌರಪಾರ್ಕ್‌ಗಳಿಗೆ ಅದಾನಿ ಸಮೂಹದ ಕಂಪನಿ ಪೂರೈಸುತ್ತದೆ. ಸ್ವಲ್ಪ ಪ್ರಮಾಣದ ಸೌರಫಲಕಗಳನ್ನು ರಫ್ತು ಮಾಡಲಾಗುತ್ತದೆ. ದೇಶೀಯವಾಗಿ ತಯಾರಿಸಲಾಗುವ ಸೌರಫಲಕಗಳಿಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಆಮದು ಸೌರ ಫಲಕಗಳ ಮೇಲಿನ ಆಮದು ಸುಂಕವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿತ್ತು

lವಿದ್ಯುತ್ ಸರಬರಾಜು: ಗ್ರಿಡ್‌ನಿಂದ ಗ್ರಿಡ್‌ ವಿದ್ಯುತ್ ಸರಬರಾಜು ಕ್ಷೇತ್ರದಲ್ಲೂ ಅದಾನಿ ಸಮೂಹದ ಪಾಲು ದೊಡ್ಡದಿದೆ. ಭಾರತದ ನೆರೆಯ ದೇಶಗಳಿಗೂ ಭಾರತದಿಂದ ವಿದ್ಯುತ್ ಪೂರೈಸುವ ಗ್ರಿಡ್‌ ಜಾಲವನ್ನು ಅದಾನಿ ಸಮೂಹವು ಹೊಂದಿದೆ. 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್‌ನ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಸೌರವಿದ್ಯುತ್ ಗ್ರಿಡ್‌ ಜಾಲ ಯೋಜನೆಗೆ ಚಾಲನೆ ನೀಡಿದ್ದರು

lಎಲ್‌ಪಿಜಿ ವಿತರಣೆ: ಟೋಟಲ್‌ ಗ್ಯಾಸ್‌ ಲಿಮಿಟೆಡ್‌ ಅದಾನಿ ಸಮೂಹದ ದೊಡ್ಡ ಕಂಪನಿಗಳಲ್ಲಿ ಒಂದು. ದೇಶದ ಗೃಹ ಬಳಕೆ ಎಲ್‌ಪಿಜಿ, ವಾಣಿಜ್ಯ ಬಳಕೆ ಮತ್ತು ಆಟೊ ಎಲ್‌ಪಿಜಿ ಕ್ಷೇತ್ರದಲ್ಲಿ ಈ ಕಂಪನಿಯು ದೊಡ್ಡ ಪಾಲು ಹೊಂದಿದೆ

lಉಷ್ಣ ವಿದ್ಯುತ್ ಸ್ಥಾವರ: ಕಲ್ಲಿದ್ದಲು ಆಧರಿತ ಉಷ್ಣ ವಿದ್ಯುತ್ ಉತ್ಪಾದನಾ ಘಟಕಗಳನ್ನೂ ಅದಾನಿ ಸಮೂಹ ಹೊಂದಿದೆ. ಇಂತಹ ಏಳು ಘಟಕಗಳನ್ನು ಅದಾನಿ ಸಮೂಹ ಹೊಂದಿದ್ದು, ಇವು ಒಟ್ಟು 12,500 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ದೇಶದ ಏಕೈಕ ಕಂಪನಿ ಇದಾಗಿದೆ

lಗಣಿ: ಕಲ್ಲಿದ್ದಲು ಗಣಿಗಳನ್ನೂ ಅದಾನಿ ಸಮೂಹ ಹೊಂದಿದೆ. ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಕಲ್ಲಿದ್ದಲಿನಲ್ಲಿ ಅದಾನಿ ಸಮೂಹದ ಉತ್ಪಾದನೆಯ ಪಾಲುಶೇ 12ಕ್ಕಿಂತಲೂ ಹೆಚ್ಚು

2. ಸಾರಿಗೆ ಮತ್ತು ಗೋದಾಮು

lಬಂದರುಗಳು: ಅದಾನಿ ಸಮೂಹದ ಅದಾನಿ ಲಾಜಿಸ್ಟಿಕ್ಸ್‌ ಕಂಪನಿಯು ದೇಶದಾದ್ಯಂತ ಒಟ್ಟು 11 ಬಂದರುಗಳನ್ನು ನಿರ್ವಹಿಸುತ್ತಿದೆ. ದೇಶದಲ್ಲಿ 13 ದೊಡ್ಡ ಬಂದರುಗಳು ಮತ್ತು 187 ಕಿರು ಬಂದರುಗಳು ಇವೆ. 13 ದೊಡ್ಡ ಬಂದರುಗಳಲ್ಲಿ ಅದಾನಿ ಸಮೂಹದ ಮುಂದ್ರಾ ಬಂದರು ಸಹ ಒಂದು

lರಸ್ತೆ ಸಾರಿಗೆ: ಬಂದರು ಮತ್ತು ಕೈಗಾರಿಕಾ ಪ್ರದೇಶಗಳ ಮಧ್ಯೆ ಸರಕುಸಾಗಣೆಗಾಗಿ ಅದಾನಿ ಸಮೂಹವು ಟ್ರಕ್‌ಗಳ ಅತ್ಯಂತ ದೊಡ್ಡ ಜಾಲವನ್ನು ಹೊಂದಿದೆ

lರೈಲು ಸಾರಿಗೆ: ಬಂದರಿನಿಂದ ಕೈಗಾರಿಕಾ ಪ್ರದೇಶಗಳು ಮತ್ತು ವಿಶೇಷ ಆರ್ಥಿಕ ವಲಯಗಳಿಗೆ ರೈಲು ಸಂಪರ್ಕ ಕಲ್ಪಿಸುವ ಉದ್ಯಮವನ್ನೂ ಅದಾನಿಸ್‌ ಲಾಜಿಸ್ಟಿಕ್ಸ್‌ ಮಾಡುತ್ತಿದೆ. ಈ ಕಂಪನಿಯು 300 ಕಿ.ಮೀ. ಉದ್ದದ ಖಾಸಗಿ ರೈಲುಮಾರ್ಗವನ್ನು ಹೊಂದಿದೆ

lವಿಶೇಷ ಆರ್ಥಿಕ ವಲಯ: ಗುಜರಾತ್‌ನಲ್ಲಿ ಅದಾನಿ ಸಮೂಹವು ವಿಶೇಷ ಆರ್ಥಿಕ ವಲಯವನ್ನು ಹೊಂದಿದೆ. 15,000 ಹೆಕ್ಟೇರ್‌ ವಿಸ್ತೀರ್ಣದಷ್ಟಿದೆ

lಕೃಷಿ ಉತ್ಪನ್ನ ಗೋದಾಮುಗಳು: ಉಕ್ಕಿನ ಸಿಲೊ (ಸಂಗ್ರಹಾಗಾರ) ಇರುವ ಗೋದಾಮುಗಳನ್ನು ಅದಾನಿ ಲಾಜಿಸ್ಟಿಕ್ಸ್‌ ಸಮೂಹವು ನಿರ್ವಹಿಸುತ್ತಿದೆ. ದೇಶದಲ್ಲಿ ಇಂತಹ ಗೋದಾಮುಗಳು ಇರಲಿಲ್ಲ. ಕೇಂದ್ರ ಸರ್ಕಾರವು ಈಚೆಗಷ್ಟೇ ಇಂತಹ ಗೋದಾಮುಗಳನ್ನು ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸುವ ಯೋಜನೆಯನ್ನು ಆರಂಭಿಸಿತು. ಈ ಯೋಜನೆ ಅಡಿ ಈಗ ಸ್ಥಾಪಿಸಲಾಗಿರುವ ಎಲ್ಲ ಗೋದಾಮುಗಳೂ ಅದಾನಿ ಸಮೂಹಕ್ಕೆ ಸೇರಿದ್ದಾಗಿವೆ.

3. ಮೂಲಸೌಕರ್ಯ ಮತ್ತು ತಂತ್ರಜ್ಞಾನ

lರಕ್ಷಣೆ ಮತ್ತು ವಿಮಾನಯಾನ: ಡ್ರೋನ್‌, ವಿಮಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲೂ ಅದಾನಿ ಸಮೂಹವು ನೇರವಾಗಿ ಹೂಡಿಕೆ ಮಾಡಿದೆ

lವಿಮಾನ ನಿಲ್ದಾಣಗಳು: ದೇಶದ ಆರು ಪ್ರಮುಖ ವಿಮಾನ ನಿಲ್ದಾಣಗಳ ನಿರ್ವಹಣೆಯ ಹೊಣೆಯನ್ನು ಅದಾನಿ ಸಮೂಹ ಹೊತ್ತಿದೆ. ವಿಮಾನ ನಿಲ್ದಾಣಗಳನ್ನು ಖಾಸಗಿ ನಿರ್ವಹಣೆಗೆ ನೀಡುವ ನೀತಿಯನ್ನು ಕೇಂದ್ರ ಸರ್ಕಾರವು ರೂಪಿಸಿದ್ದು ಇದೇ ಮೊದಲ ಬಾರಿ. ಹೀಗೆ ಖಾಸಗಿ ಕಂಪನಿಗೆ ಬಿಟ್ಟುಕೊಡಲಾದ ಎಲ್ಲಾ ವಿಮಾನ ನಿಲ್ದಾಣಗಳೂ ಈಗ ಅದಾನಿ ಸಮೂಹದ ತೆಕ್ಕೆಯಲ್ಲಿವೆ

lನೀರು ಶುದ್ಧೀಕರಣ: ನದಿಗಳ ದಂಡೆಯಲ್ಲಿರುವ ನಗರಗಳ ಕೊಳಚೆ ನೀರನ್ನು ಸಂಸ್ಕರಿಸಿ, ಶುದ್ಧನೀರನ್ನು ನದಿಗೆ ಬಿಡುವ ಹಲವು ಘಟಕಗಳನ್ನು ಅದಾನಿ ಸಮೂಹ ನಡೆಸುತ್ತಿದೆ. ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲೂ ಅದಾನಿ ಸಮೂಹವು ಇಂತಹ ಹಲವು ಘಟಕಗಳನ್ನು ನಿರ್ವಹಿಸುತ್ತಿದೆ

lಹೆದ್ದಾರಿ–ಮೆಟ್ರೊ ನಿರ್ಮಾಣ: ಹೆದ್ದಾರಿ ಮತ್ಯು ಮೆಟ್ರೊ ರೈಲು ಮಾರ್ಗಗಳ ನಿರ್ಮಾಣದಲ್ಲೂ ಅದಾನಿ ಸಮೂಹವು ತೊಡಗಿಕೊಂಡಿದೆ

lಡೇಟಾ ಸೆಂಟರ್‌ಗಳು: ಅದಾನಿ ಸಮೂಹದ ‘ಅದಾನಿ ಕನೆಕ್ಸ್‌’ ಕಂಪನಿಯು ದೇಶದ ಹಲವೆಡೆ ದತ್ತಾಂಶ ಕೇಂದ್ರಗಳನ್ನು ನಡೆಸುತ್ತಿದೆ

lರಿಯಲ್‌ ಎಸ್ಟೇಟ್‌: ರಿಯಲ್‌ ಎಸ್ಟೇಟ್ ಕ್ಷೇತ್ರದಲ್ಲೂ ಅದಾನಿ ಸಮೂಹ ಹೂಡಿಕೆ ಮಾಡಿದೆ

4. ಸಿಮೆಂಟ್‌: ಸಿಮೆಂಟ್ ತಯಾರಿಕೆ ಕ್ಷೇತ್ರದಲ್ಲೂ ಅದಾನಿ ಸಮೂಹ ಹೂಡಿಕೆ ಮಾಡಿದೆ. ಅಂಬುಜಾ ಸಿಮೆಂಟ್‌ ಮತ್ತು ಅಸೋಸಿಯೇಟೆಡ್‌ ಸಿಮೆಂಟ್ ಕಂಪನಿಗಳಲ್ಲಿ (ಎಸಿಸಿ) ಅದಾನಿ ಸಮೂಹವು ಗರಿಷ್ಠ ಪ್ರಮಾಣದ ಷೇರುಗಳನ್ನು ಹೊಂದಿದೆ

5. ಖಾದ್ಯತೈಲ: ಅದಾನಿ ವಿಲ್ಮಾರ್‌ ಕಂಪನಿಯು ದೇಶದ ಅತ್ಯಂತ ದೊಡ್ಡ ಖಾದ್ಯತೈಲ ಕಂಪನಿಗಳಲ್ಲಿ ಒಂದು. ಫಾರ್ಚೂನ್ ಬ್ರ್ಯಾಂಡ್‌ನ ವಿವಿಧ ಅಡುಗೆ ಎಣ್ಣೆಗಳನ್ನು ಈ ಕಂಪನಿ ಉತ್ಪಾದಿಸುತ್ತದೆ. ಹಲವು ವರ್ಷಗಳ ಅವಧಿಯಲ್ಲಿ ದೇಶದ ಸಣ್ಣ–ಪುಟ್ಟ ಬ್ರ್ಯಾಂಡ್‌ಗಳನ್ನು ಅದಾನಿ ವಿಲ್ಮಾರ್ ಖರೀದಿಸಿದೆ. ದೇಶದ ಅಡುಗೆ ಎಣ್ಣೆ ಮಾರುಕಟ್ಟೆಯಲ್ಲಿ ಅದಾನಿ ವಿಲ್ಮಾರ್ ಕಂಪನಿಯ ಪಾಲು ಶೇ 18.8ರಷ್ಟಿದೆ.

6. ಫೈನಾನ್ಸ್‌: ಅದಾನಿ ಸಮೂಹದ ‘ಅದಾನಿ ಕ್ಯಾಪಿಟಲ್‌’ ಕಂಪನಿಯು ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿದೆ. ಈ ಕಂಪನಿಯು ದೊಡ್ಡ ಉದ್ದಿಮೆಗಳು, ಎಂಎಸ್‌ಎಂಇಗಳಿಗೆ ಸಾಲ ಕೊಡುವ ಸೇವೆಯನ್ನು ನೀಡುತ್ತದೆ. ಅದಾನಿ ಹೌಸಿಂಗ್ ಫೈನಾನ್ಸ್‌ ಲಿಮಿಟೆಡ್ ಗೃಹ ಸಾಲ ಸೇವೆಯನ್ನು ನೀಡುತ್ತದೆ

ಗೌತಮ್ ಅದಾನಿ ಮತ್ತು ಇನ್ನೂ ಒಂಬತ್ತು ಶ್ರೀಮಂತರ ಸಂಪತ್ತಿನಲ್ಲಿ ಆದ ಏರಿಕೆಯನ್ನು ತೋರಿಸುವ ಗ್ರಾಫಿಕ್‌ –ಪ್ರಜಾವಾಣಿ ಗ್ರಾಫಿಕ್‌

ಆಧಾರ: ಐಐಎಫ್‌ಎಲ್‌ ವೆಲ್ತ್‌ ಹುರೂನ್‌ ಇಂಡಿಯಾ ರಿಚ್‌ ಲಿಸ್ಟ್‌ 2022 ವರದಿ, ಅದಾನಿ ಸಮೂಹ ಸಂಸ್ಥೆಗಳ ಜಾಲತಾಣ, ಪಿಟಿಐ, ರಾಯಿಟರ್ಸ್‌, ಕೇಂದ್ರ ಇಂಧನ ಸಚಿವಾಲಯ ಮತ್ತು ಕೇಂದ್ರ ಕೃಷಿ ಸಚಿವಾಲಯದ ಪ್ರಕಟಣೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.