ಹೊಸ ಸಂಸತ್ ಭವನ ನಿರ್ಮಾಣಕ್ಕೆ ಕೆಲವು ರಾಜಕೀಯ ಪಕ್ಷಗಳು, ಇತಿಹಾಸಕಾರರು, ತಜ್ಞರು, ವಾಸ್ತುಶಿಲ್ಪಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಸ್‌ನಿಂದ ದೇಶವು ಸಂಕಷ್ಟದ ಸ್ಥಿತಿಯಲ್ಲಿರುವಾಗ ಹೊಸ ಕಟ್ಟಡ ನಿರ್ಮಾಣ ಅಗತ್ಯವಿರಲಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಸೆಂಟ್ರಲ್ ವಿಸ್ತಾ ಯೋಜನೆಯಡಿ ಪುನರಭಿವೃದ್ಧಿ ಕಾರ್ಯಕ್ರಮ ದೊಡ್ಡ ಹಗರಣವಾಗಲಿದೆ ಎಂದು ಪ್ರತಿಪಕ್ಷದ ಟಿಕೆಂದರ್ ಸಿಂಗ್ ಪಲ್ವಾರ್ ಆರೋಪಿಸಿದ್ದಾರೆ.
ಲೋಕಸಭಾ ಕ್ಷೇತ್ರಗಳ ಮರುವಿಂಗಡನೆ
ಲೋಕಸಭಾ ಕ್ಷೇತ್ರಗಳ ಮರುವಿಂಗಡನೆಯೂ ನೂತನ ಸಂಸತ್ ಭವನ ನಿರ್ಮಾಣದ ಹಿಂದಿನ ಉದ್ದೇಶಗಳಲ್ಲಿ ಒಂದು ಎಂದು ಮೂಲಗಳು ಹೇಳಿವೆ. ಈಗಿನ ಸಂಸತ್ ಭವನದಲ್ಲಿ ಆಸನಗಳ ಸಾಮರ್ಥ್ಯ ಭರ್ತಿಯಾಗಿದೆ. ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಿದರೆ, ಹೆಚ್ಚುವರಿ ಸಂಸದರಿಗೆ ಈಗಿನ ಸಂಸತ್ ಭವನದಲ್ಲಿ ಆಸನದ ವ್ಯವಸ್ಥೆ ಮಾಡಲು ಕಷ್ಟಸಾಧ್ಯ. ಹೀಗಾಗಿ ನೂತನ ಸಂಸತ್ ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ.ಮುಂದಿನ ಚುನಾವಣೆ ವೇಳೆಗೆ ಲೋಕಸಭಾ ಕ್ಷೇತ್ರಗಳನ್ನು ಮರುವಿಂಗಡನೆ ಮಾಡಲಾಗುತ್ತದೆ. ಜತೆಗೆ ರಾಜ್ಯಸಭಾ ಸ್ಥಾನಗಳ ಸಂಖ್ಯೆಯೂ ಹೆಚ್ಚಲಿದೆ ಎಂದು ಮೂಲಗಳು ಹೇಳಿವೆ.
ಕಾಗದರಹಿತ ಕಟ್ಟಡ
ನೂತನ ಸಂಸತ್ ಭವನವು ಶೇ 100ರಷ್ಟು ಕಾಗದ ರಹಿತ ಕಟ್ಟಡವಾಗಿರಲಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ. ಸಂಸದರಿಗೆ, ಕಚೇರಿ ಸಿಬ್ಬಂದಿಗೆ ಅತ್ಯಾಧುನಿಕ ಸವಲತ್ತುಗಳನ್ನು ನೀಡಲಾಗುತ್ತದೆ. ದಾಖಲೆ ಪತ್ರಗಳೆಲ್ಲವನ್ನೂ ವಿದ್ಯುನ್ಮಾನ ರೂಪದಲ್ಲಿ ನಿರ್ವಹಣೆ ಮಾಡಲಾಗುತ್ತದೆ.ಪ್ರತಿ ಸಂಸದರ ಖುರ್ಚಿಯಲ್ಲೂ ಸ್ಮಾರ್ಟ್ ಪರದೆಯ ವ್ಯವಸ್ಥೆ ಇರಲಿದೆ. ಕಲಾಪಗಳ ಎಲ್ಲಾ ದಾಖಲೆಗಳನ್ನು ಡಿಜಿಟಲ್ ರೂಪದಲ್ಲೇ ನಿರ್ವಹಣೆ ಮಾಡಲಾಗುತ್ತದೆ. ಸಂಸತ್ ಭವನದಲ್ಲಿ ಪ್ರತಿ ಸಂಸದರಿಗೂ ಪ್ರತ್ಯೇಕ ಕಚೇರಿ ಇರಲಿದೆ. ಪ್ರತಿ ಕಚೇರಿಯಲ್ಲೂ ಡಿಜಿಟಲ್ ಇಂಟರ್‌ಫೇಸ್ ಇರಲಿದೆ.
‘ಸಂಕಟದಲ್ಲೇಕೆ ಹೊಸ ಕಟ್ಟಡ’
ಹೊಸ ಸಂಸತ್ ಭವನ ನಿರ್ಮಾಣಕ್ಕೆ ಕೆಲವು ರಾಜಕೀಯ ಪಕ್ಷಗಳು, ಇತಿಹಾಸಕಾರರು, ತಜ್ಞರು, ವಾಸ್ತುಶಿಲ್ಪಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಸ್‌ನಿಂದ ದೇಶವು ಸಂಕಷ್ಟದ ಸ್ಥಿತಿಯಲ್ಲಿರುವಾಗ ಹೊಸ ಕಟ್ಟಡ ನಿರ್ಮಾಣ ಅಗತ್ಯವಿರಲಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಸೆಂಟ್ರಲ್ ವಿಸ್ತಾ ಯೋಜನೆಯಡಿ ಪುನರಭಿವೃದ್ಧಿ ಕಾರ್ಯಕ್ರಮ ದೊಡ್ಡ ಹಗರಣವಾಗಲಿದೆ ಎಂದು ಪ್ರತಿಪಕ್ಷದ ಟಿಕೆಂದರ್ ಸಿಂಗ್ ಪಲ್ವಾರ್ ಆರೋಪಿಸಿದ್ದಾರೆ.
‘ಈ ಹಣವನ್ನು ಆರ್ಥಿಕತೆಗೆ ಚಿಕಿತ್ಸೆ ನೀಡಲು, ಉದ್ಯೋಗಗಳನ್ನು ಸೃಷ್ಟಿಸಲು ಖರ್ಚು ಮಾಡಬಹುದಿತ್ತು. ಅದರ ಬದಲು ಹೊಸ ಭಾರತ ಹೇಗಿರಬೇಕು ಎಂಬ ಒಬ್ಬ ವ್ಯಕ್ತಿಯ ಕನಸುಗಳನ್ನು ಈಡೇರಿಸಲು ಖರ್ಚು ಮಾಡಲಾಗುತ್ತಿದೆ’ ಎಂದು ರಾಜಕೀಯ ವಿಶ್ಲೇಷಕಿ ಆರತಿ ಜೇರತ್ ಟೀಕಿಸಿದ್ದಾರೆ.
‘ಸೆಂಟ್ರಲ್ ವಿಸ್ತಾ ಯೋಜನೆಯ ಸಂಪೂರ್ಣ ಪರಾಮರ್ಶೆ ಅಗತ್ಯವಿದೆ’ ಎಂದು ಲೆ.ಕ. ಅನುಜ್ ಶ್ರೀವಾಸ್ತವ ಅವರು ಹೇಳಿದ್ದಾರೆ. ಯೋಜನೆ ವಿರುದ್ಧ ಶ್ರೀವಾಸ್ತವ ಅವರು ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಹೊಸ ಸಂಸತ್ತಿನ ವಾಸ್ತುಶಿಲ್ಪಿ ಗುಜರಾತಿನ ಬಿಮಲ್ ಪಟೇಲ್ ಅವರು ಮೋದಿಯವರ ಆಪ್ತ ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಆರೋಪವೂ ಇದೆ.
ಕಾನೂನಿನ ಅಡೆತಡೆ
ಹೊಸ ಸಂಸತ್ ಭವನಕ್ಕೆ ಶಿಲಾನ್ಯಾಸವೇನೋ ನಡೆದಿದೆ. ಆದರೆ ನಿರ್ಮಾಣ ಕಾಮಗಾರಿ ಶುರು ಮಾಡಲು ಸುಪ್ರೀಂ ಕೋರ್ಟ್‌ನ ಅನುಮತಿಗೆ ಕಾಯಬೇಕಿದೆ.
‘ಭೂಮಿಪೂಜೆ ಹಾಗೂ ಒಡಂಬಡಿಕೆಯಂತಹ ಕೆಲಸಗಳನ್ನು ಮಾಡಿಕೊಳ್ಳಬಹುದು. ಆದರೆ ಯಾವುದೇ ನಿರ್ಮಾಣ ಚಟುವಟಿಕೆ ಕೈಗೆತ್ತಿಕೊಳ್ಳುವುದು, ಮರ ಕಡಿಯುವುದು, ಹಳೆ ಕಟ್ಟಡ ನೆಲಸಮ ಮಾಡುವ ಕ್ರಮಗಳಿಗೆ ಅನುಮತಿ ಇಲ್ಲ’ ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯಪೀಠ ಸೂಚಿಸಿದೆ.
ಸೆಂಟ್ರಲ್ ವಿಸ್ತಾ ಯೋಜನೆಯಿಂದ ಐತಿಹಾಸಿಕ ಪರಂಪರೆಗೆ ಧಕ್ಕೆಯಾಗುತ್ತದೆ ಎಂದು ಆರೋಪಿಸಿ 10 ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿವೆ.
ಈಗಿನ ಸಂಸತ್ ಭವನ
ಈಗಿರುವ ಸಂಸತ್ ಭವನವು ರಾಷ್ಟ್ರಪತಿ ಭವನದಿಂದ 750 ಮೀಟರ್ ದೂರದಲ್ಲಿದೆ. ಇದು ಮಧ್ಯಪ್ರದೇಶದ ಚೌಸತ್ ಯೋಗಿನಿ ದೇವಸ್ಥಾನದ ಮಾದರಿಯಲ್ಲಿ ಬ್ರಿಟಿಷರ ಅವಧಿಯಲ್ಲಿ ನಿರ್ಮಾಣವಾಗಿದೆ. ಬ್ರಿಟಿಷರು ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ನಡೆಸುವ ಸಲುವಾಗಿ 1927ರಲ್ಲಿ ಭವ್ಯ ಕಟ್ಟಡ ನಿರ್ಮಿಸಿದರು. ಬ್ರಿಟಿಷ್ ಆಡಳಿತ ಅಂತ್ಯಗೊಂಡ ಬಳಿಕ ಇದು ಭಾರತದ ಸಂವಿಧಾನ ರಚನಾ ಸಭೆಯ ಸುಪರ್ದಿಗೆ ಬಂದಿತು.
1912–13ರಲ್ಲಿ ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್ ಲ್ಯೂಟೆನ್ಸ್ ಹಾಗೂ ಸರ್ ಹರ್ಬರ್ಟ್ ಬೇಕರ್ ಅವರು ಕಟ್ಟಡ ವಿನ್ಯಾಸಗೊಳಿಸಿದರು. 1921ರಲ್ಲಿ ಶುರುವಾದ ಕಾಮಗಾರಿ, 1927ರಲ್ಲಿ ಪೂರ್ಣಗೊಂಡಿತು. ಭಾರತದ ವೈಸ್‌ರಾಯ್ ಲಾರ್ಡ್ ಇರ್ವಿನ್ ಅವರು ಜನವರಿ 18ರಂದು ಕಟ್ಟಡ ಉದ್ಘಾಟಿಸಿದರು. ಕೇಂದ್ರ ಶಾಸನಸಭೆಯ ಮೂರನೇ ಅಧಿವೇಶನವು ಜ.19ರಿಂದ ಈ ಕಟ್ಟಡದಲ್ಲಿ ಆರಂಭವಾಯಿತು.
ಕಟ್ಟಡದ ಹೊರಭಾಗದಲ್ಲಿ 144 ಕಂಬಗಳಿವೆ. ಮಧ್ಯಭಾಗದಲ್ಲಿ ವೃತ್ತಾಕಾರದ ಸೆಂಟ್ರಲ್ ಚೇಂಬರ್ ಇದೆ. ಸುತ್ತಲೂ ಮೂರು ಅರ್ಧವೃತ್ತಾಕಾರದ ಸಭಾಂಗಣಗಳಿವೆ. ಮೊದಲನೆಯದ್ದು ಪ್ರಿನ್ಸಸ್ ಚೇಂಬರ್. ಇದು ಗ್ರಂಥಾಲಯವಾಗಿ ಬಳಕೆಯಾಗುತ್ತಿದೆ. ಎರಡನೆಯದ್ದು ಕೌನ್ಸಿಲ್. ಇದು ರಾಜ್ಯಸಭೆ ಕಲಾಪಕ್ಕೆ ಬಳಕೆಯಾಗುತ್ತಿದೆ. ಮೂರನೆಯದ್ದು ಕೇಂದ್ರೀಯ ಶಾಸನಸಭೆ. ಇಲ್ಲಿ ಲೋಕಸಭೆ ಕಲಾಪ ಜರುಗುತ್ತಿದೆ.
ಆಧಾರ: ಪಿಟಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.