ADVERTISEMENT

ಆಳ–ಅಗಲ: ವಿದೇಶದಲ್ಲಿ ಮದ್ದು ಮಾರಾಟ ಹಕ್ಕಿಪಿಕ್ಕಿ ಜನರ ಬದುಕಿಗೆ ಪರದಾಟ

ಕೆ.ಎಸ್.ಸುನಿಲ್
Published 20 ಸೆಪ್ಟೆಂಬರ್ 2020, 19:36 IST
Last Updated 20 ಸೆಪ್ಟೆಂಬರ್ 2020, 19:36 IST
ಗೊಂಬೆ ತಯಾರಿಕೆಯಲ್ಲಿ ನಿರತರಾಗಿರುವ ಕೆಂಗೇರಿ ಉಪನಗರ ಹಕ್ಕಿಪಿಕ್ಕಿ ಕಾಲೊನಿಯ ಮಹಿಳೆ -ಪ್ರಜಾವಾಣಿ ಚಿತ್ರ: ಅನೂಪ್ ಆರ್. ತಿಪ್ಪೇಸ್ವಾಮಿ
ಗೊಂಬೆ ತಯಾರಿಕೆಯಲ್ಲಿ ನಿರತರಾಗಿರುವ ಕೆಂಗೇರಿ ಉಪನಗರ ಹಕ್ಕಿಪಿಕ್ಕಿ ಕಾಲೊನಿಯ ಮಹಿಳೆ -ಪ್ರಜಾವಾಣಿ ಚಿತ್ರ: ಅನೂಪ್ ಆರ್. ತಿಪ್ಪೇಸ್ವಾಮಿ   
""
""
""

ಹಾಸನ: ಔಷಧ ಗಿಡ ಮೂಲಿಕೆಗಳ ಮಾರಾಟ, ಬಾಡಿ ಮಸಾಜ್‌ ಕಾಯಕದ ಮೂಲಕ ಬೇಲೂರು ತಾಲ್ಲೂಕಿನ ಅಂಗಡಿಹಳ್ಳಿ ಗ್ರಾಮದ ಹಕ್ಕಿಪಿಕ್ಕಿ ಸಮುದಾಯದ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಸಮುದಾಯದ 300ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, 30 ಮಂದಿ ಪಾಸ್‌ಪೋರ್ಟ್‌ ಹೊಂದಿದ್ದಾರೆ.

ವರ್ಷದಲ್ಲಿ ಎರಡು ಬಾರಿ ಏಜೆನ್ಸಿ ಮೂಲಕ ಕುಟುಂಬದ ಒಬ್ಬರು ಅಥವಾ ಇಬ್ಬರು 4–5 ತಿಂಗಳಿಗೆ ವೀಸಾ ಪಡೆದು ಸಿಂಗಪುರ, ಮಲೇಷ್ಯಾ, ದುಬೈ, ಕುವೈತ್, ಉಗಾಂಡ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ರಷ್ಯಾ ಹಾಗೂ ಇತರೆ ದೇಶಗಳಿಗೆ ತೆರಳಿ, ತಾವೇ ಸಿದ್ಧಪಡಿಸಿದ ಗಿಡಮೂಲಿಕೆಗಳ ಔಷಧದಿಂದ ಮಸಾಜ್‌ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾರೆ.

ಉಳಿದವರು ಸ್ಥಳೀಯ ಮಟ್ಟದಲ್ಲಿ ಔಷಧ ಸಾಮಗ್ರಿ ಮಾರಾಟ ಮಾಡಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಪಾಸ್‌ಪೋರ್ಟ್‌ ಹೊಂದಿದ್ದರೂ ಆರ್ಥಿಕ ಸಮಸ್ಯೆಯಿಂದ ಹಲವರ ವಿದೇಶ ಪ್ರಯಾಣದ ಕನಸು ಇನ್ನೂ ನನಸಾಗಿಲ್ಲ.

ADVERTISEMENT

ಹಕ್ಕಿಪಿಕ್ಕಿ ಸಮುದಾಯದಲ್ಲಿ 46 ಒಳಪಂಗಡಗಳಿದ್ದು, ಮಾತೃಭಾಷೆಯನ್ನು ವಾಗರಿ ಎಂದು ಕರೆಯುತ್ತಾರೆ. ಕನ್ನಡ, ತಮಿಳು, ತೆಲಗು, ಮಲಯಾಳಂ, ತುಳು ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಾರೆ. ಅಲ್ಪಸ್ವಲ್ಪ ಇಂಗ್ಲಿಷ್‌ ಸಹ ಮಾತನಾಡುತ್ತಾರೆ.

ಗ್ರಾಮದಲ್ಲಿ ಸುತ್ತು ಹಾಕಿದರೆ, ಹದಗೆಟ್ಟ ರಸ್ತೆ, ರಸ್ತೆ ಮೇಲೆ ಹರಿಯುವ ಚರಂಡಿ ನೀರು, ಬಯಲು ಬಹಿರ್ದೆಸೆ, ಮನೆ ಮುಂದೆಯೇ ಮಕ್ಕಳಿಗೆ ಸ್ನಾನ ಮಾಡಿಸುವುದು, ಬಟ್ಟೆ, ಪಾತ್ರೆ ತೊಳೆಯುವುದು, ಹೆಂಚು ಹಾಗೂ ಶೀಟ್‌ ಮನೆಗಳು, ಗುಡಿಸಲುಗಳ ದರ್ಶನವಾಗುತ್ತದೆ. ಅವ್ಯವಸ್ಥೆ ನಡುವೆಯೂ ಇಪ್ಪತ್ತಕ್ಕೂ ಹೆಚ್ಚು ಬಹುಮಹಡಿ ಮನೆಗಳು, ಹೊಂಡಾ ಎಕ್ಸ್‌ಯುವಿ, ಡಸ್ಟರ್‌ ಕಾರುಗಳು, ರಸ್ತೆ ಬದಿಯ ಸೂಪರ್‌ ಮಾರುಕಟ್ಟೆ ಆಕರ್ಷಿಸುತ್ತದೆ.

ಗ್ರಾಮದಲ್ಲಿ ಶಿಳ್ಳೆಕ್ಯಾತ, ಈಡಿಗ ಸಮುದಾಯದವರೂ ಇದ್ದು, ಅವರಿಂದ ಅಂತರ ಕಾಪಾಡಿಕೊಂಡಿದ್ದಾರೆ.

‘ನಮ್ಮವರು ಶುಚಿತ್ವ ಕಾಪಾಡುವುದಿಲ್ಲ ಅಂತ ಬೇರೆ ಸಮುದಾಯದವರು ದೂರ ನಿಂತು ಮಾತನಾಡಿಸುತ್ತಾರೆ. ವಿದೇಶಕ್ಕೆ ಹೋಗಿ ಬಂದವರು ಅಂತಾರೆ. ಆದರೆ, ಗ್ರಾಮದಲ್ಲಿ ಸಾಕಷ್ಟು ಸಮಸ್ಯೆ ಇದೆ. ಅನಾರೋಗ್ಯಕ್ಕೆ ತುತ್ತಾದರೆ ಹಗರೆಗೆ ಹೋಗಬೇಕು. ಶೀಟ್‌ ಮನೆ, ಗುಡಿಸಲಿನಲ್ಲಿಯೇ ವಾಸ ಮಾಡುವವರು ಎಷ್ಟೋ ಮಂದಿ ಇದ್ದಾರೆ. ಸತ್ತವರನ್ನು ಮಣ್ಣು ಮಾಡಲೂ ಜಾಗವಿಲ್ಲ. ಕೃಷಿ ಮಾಡಲೂ ಜಮೀನು ಇಲ್ಲ’ ಎಂದು ಉದಯ ಕುಮಾರ್‌ ಅಳಲು ತೋಡಿಕೊಂಡರು.

ವಿದೇಶ ಪಯಣ ಮಾಡಿದವರು, ವಿದೇಶ ಪಯಣದ ಕನಸು ಕಾಣುತ್ತಿರುವ ಯುವಕರು, ಮಹಿಳೆಯರು ಹಾಗೂ ವೃದ್ಧರು ಮೊಬೈಲ್‌ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿವರೆಗೆ ಓದಿದವರಿದ್ದಾರೆ. ಆದರೆ, ಆ ಪೈಕಿ ಫೇಲಾದವರೇ ಹೆಚ್ಚು. ಬೆರಳಣಿಕೆಯಷ್ಟು ಪದವೀಧರರು ಇದ್ದಾರೆ. ಒಬ್ಬರಿಗೂ ಸರ್ಕಾರಿ ಉದ್ಯೋಗ ದೊರೆತಿಲ್ಲ ಎಂಬ ಕೊರಗು ಈ ಸಮುದಾಯವನ್ನು ಕಾಡುತ್ತಿದೆ.

‘ಸರ್ಕಾರಿ ಉದ್ಯೋಗ ಸಿಗುವುದಿಲ್ಲ ಎಂಬ ಕಾರಣಕ್ಕೆ ಮಕ್ಕಳ ವಿದ್ಯಾಭ್ಯಾಸ ಅರ್ಧಕ್ಕೇ ಮೊಟಕುಗೊಳಿಸಿ ಪೋಷಕರ ಜತೆ ಕೆಲಸದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಜತೆಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಮಸ್ಯೆಯೂ ಕಾರಣ’ ಎನ್ನುತ್ತಾರೆ ಗ್ರಾಮದ ಹಿರಿಯರು.

ಮೈಸೂರಿನ ಜಿಲ್ಲೆಯ ಹುಣಸೂರು, ಎಚ್‌.ಡಿ.ಕೋಟೆ, ಕೇರಳದ ಪಾಲಕ್ಕಾಡ್, ಅಟ್ಟಪಾಡಿಯಿಂದ ಗಿಡಮೂಲಿಕೆಗಳನ್ನು ತರಲಾಗುತ್ತದೆ.‌ ಮಧುಮೇಹ, ರಕ್ತದೊತ್ತಡ, ಗ್ಯಾಸ್ಟ್ರಿಕ್‌, ತಲೆನೋವು, ಮೈಕೈ ನೋವು, ಕೂದಲು ಉದುರುವುದು ಸೇರಿದಂತೆ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಹಾಗೂ ಬಾಡಿ ಮಸಾಜ್‌ಗೆ ಬೇಕಾದ ಎಣ್ಣೆ ಪೂರೈಕೆ ಮಾಡುತ್ತಾರೆ.

ಹಕ್ಕಿ ಪಿಕ್ಕಿ ನೃತ್ಯ

‘ಸಿಕ್ಕಿದ್ರೆ ಶಿಕಾರಿ, ಬಿಟ್ಟರೆ ಬಿಕಾರಿ’ ಅಂತ ಹಿರಿಯರು ಯಾವಾಗಾಲೂ ಹೇಳುತ್ತಿರುತ್ತಾರೆ. ಓದಿರುವುದು ಏಳನೇ ತರಗತಿಯಾದರೂ ಹತ್ತು ದೇಶ ಸುತ್ತಾಡಿದ್ದೇನೆ. ವಿದೇಶಗಳಲ್ಲಿ ದುಡಿದರೂ ಖರ್ಚೆಲ್ಲಾ ಕಳೆದು ವರ್ಷಕ್ಕೆ ₹1 ರಿಂದ ₹2 ಲಕ್ಷ ಉಳಿತಾಯವಾಗಬಹುದು. ಒಂದೊಂದು ದೇಶದಲ್ಲೂ ಬೇರೆ ಬೇರೆ ರೂಪಾಯಿ ಮೌಲ್ಯ ಇರುವುದರಿಂದ ನಿರ್ದಿಷ್ಟ ಆದಾಯ ನಿರೀಕ್ಷೆ ಮಾಡಲು ಸಾಧ್ಯವಿಲ್ಲ’ ಎನ್ನುತ್ತಾರೆ ಅಂಗಡಿಹಳ್ಳಿ ನಿವಾಸಿ ಖುನಿಷಾ.

**
ಹಕ್ಕಿಪಿಕ್ಕಿಗಳ ಔಷಧಿಯ ಫಾರಿನ್ ಟೂರು!
ದಾವಣಗೆರೆ:
ಭಾರತೀಯ ಆಯುರ್ವೇದ ಔಷಧಗಳಿಗೆ ವಿದೇಶಗಳಲ್ಲಿ ಬೇಡಿಕೆ ಇದ್ದು, ರಾಜ್ಯದ ವಿವಿಧೆಡೆಯ 5 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಕಂಡುಕೊಂಡಿದ್ದಾರೆ. ಬೇರುಗಳ ಎಣ್ಣೆ, ಗಿಡಮೂಲಿಕೆ ಔಷಧಗಳ ಮಾರಾಟಕ್ಕೆ ತೆರಳಿ, 6 ತಿಂಗಳು-ವರ್ಷದವರೆಗೆ ಇದ್ದು, ಲಕ್ಷಾಂತರ ರೂಪಾಯಿ ಸಂಪಾದಿಸಿಕೊಂಡು ರಾಜ್ಯಕ್ಕೆ ವಾಪಸ್ ಆಗುತ್ತಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಗೋಪನಾಳ್, ನಲ್ಲೂರು ಬಳಿಯ ಅಸ್ತಾಫನಹಳ್ಳಿ, ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಪಕ್ಷಿರಾಜಪುರ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಚಿಕ್ಕಮರಡಿ, ಸದಾಶಿವಪುರ, ಹಾಸನ ಜಿಲ್ಲೆಯ ಹಗರಿ ಗ್ರಾಮಗಳಿಂದ 5 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಕಂಡುಕೊಂಡಿದ್ದಾರೆ. ಇವರೆಲ್ಲಾ ಹಕ್ಕಿಪಿಕ್ಕಿ ಜನಾಂಗದವರು.

ಗೋಪನಹಳ್ಳಿಯಲ್ಲಿ 44, ಅಸ್ತಾಫನಹಳ್ಳಿಯಲ್ಲಿ 500 ಕುಟುಂಬಗಳು ಇದ್ದು, ಅವರಲ್ಲಿ ಕೆಲವರು ಇಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ವಿದೇಶಕ್ಕೆ ಹೋದಾಗ ಹೆಚ್ಚಿನ ಸಂಪಾದನೆಯಾದರೆ 6 ತಿಂಗಳಿಗೆ ವೀಸಾದ ಅವಧಿಯನ್ನು ವಿಸ್ತರಿಸಿಕೊಳ್ಳುತ್ತಾರೆ. ನಷ್ಟವಾದರೆ ದೇಶಕ್ಕೆ ವಾಪಸ್‌ ಆಗುತ್ತಾರೆ. ಔಷಧಕ್ಕೆ ಬೇಡಿಕೆ ಬಂದ ತಕ್ಷಣ ಅಲ್ಲಿಗೆ ತೆರಳುತ್ತಾರೆ.

‘ದಿವಸಕ್ಕೆ ₹5 ಸಾವಿರದಿಂದ ₹15 ಸಾವಿರದವರೆಗೂ ದುಡಿಯುತ್ತೇವೆ. ಹಣದ ಕೊರತೆಯಾದರೆ ಶೇ 5ರಿಂದ 10ರಷ್ಟು ಬಡ್ಡಿದರದಲ್ಲಿ ಸಾಲ ಪಡೆದು ವ್ಯಾಪಾರಕ್ಕೆ ತೆರಳುತ್ತೇವೆ. ವ್ಯಾಪಾರ ಭರ್ಜರಿಯಾದರೆ ಮಾಡಿದ ಸಾಲ ತೀರಿಸುವುದರ ಜೊತೆಗೆ ಒಂದು ಬಾರಿಗೆ ₹1 ಲಕ್ಷದಿಂದ ₹2 ಲಕ್ಷದವರೆಗೂ ಉಳಿಯುತ್ತದೆ. ಬಾಡಿಗೆ ಮನೆ ಸಿಕ್ಕರೆ ಆಯಿತು, ಇಲ್ಲವೇ ಹೋಟೆಲ್‌ಗಳಲ್ಲಿ ಆ ದೇಶಗಳ ಹಳ್ಳಿಗಾಡಿನಲ್ಲಿ ಯಾವುದಾದರೂ ಶೆಡ್‌ನಲ್ಲಿ ಉಳಿದುಕೊಳ್ಳುತ್ತೇವೆ’ ಎನ್ನುತ್ತಾರೆ ಚನ್ನಗಿರಿ ತಾಲ್ಲೂಕಿನ ಗೋಪನಾಳ್ ಗ್ರಾಮದ ಸಂದೀಪ್.

ಕೇಶ ತೈಲ ಸಿದ್ಧಪಡಿಸುವಲ್ಲಿ ನಿರತ ಹಕ್ಕಿಪಿಕ್ಕಿ ಮಹಿಳೆ

ಎಲ್ಲೆಲ್ಲಿ ಬೇಡಿಕೆ
ಭಾರತೀಯ ಔಷಧಗಳಿಗೆ ಆಫ್ರಿಕಾದ ಎಲ್ಲಾ ದೇಶಗಳಲ್ಲೂ ಬೇಡಿಕೆ ಇದೆ. ಮಡಗಾಸ್ಕರ್‌, ಸೆನೆಗಲ್, ಜಾಂಬಿಯಾ, ಲೈಬೀರಿಯಾ (ವೆಸ್ಟ್ ಆಫ್ರಿಕಾ) ಐವರಿ ಕೋಸ್ಟ್, ನೈಜೀರಿಯಾ, ಗಬುನ್ (ಸೆಂಟ್ರಲ್ ಆಫ್ರಿಕಾ), ಕ್ಯಾಮರೂನ್, ಡಿ.ಆರ್. ಕಾಂಗೊ, ಮೊಜಾಂಬಿಕ್, ಜಾಂಬಿಯಾ, ದಕ್ಷಿಣ ಆಫ್ರಿಕಾ, ಮಾಲವಿ ಸೇರಿ ಅನೇಕ ದೇಶಗಳಲ್ಲಿ ಬೇಡಿಕೆ ಇದೆ.

ಏಕೆ ಬೇಡಿಕೆ: ‘ಗಿಡಮೂಲಿಕೆ, ಆಯುರ್ವೇದ ಔಷಧಗಳು ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂಬ ಕಲ್ಪನೆಪಾಶ್ಚಾತ್ಯರಲ್ಲಿದೆ. ಅಲ್ಲದೇ ಇಂಗ್ಲಿಷ್ ಔಷಧಕ್ಕಿಂತ ಕಡಿಮೆ ಬೆಲೆಗೆ ಆಯುರ್ವೇದ ಔಷಧ ಲಭ್ಯವಿದೆ. ಯಾವುದೇ ಮಾತ್ರೆಗಳು ನಮ್ಮಲ್ಲಿರುವಂತೆ, ಚಿಲ್ಲರೆಯಾಗಿ ಒಂದೆರಡು ದೊರೆಯುವುದಿಲ್ಲ. ಇಡೀ ಪ್ಯಾಕ್ ಇಲ್ಲವೇ ಡಬ್ಬವನ್ನೇ ಕೊಂಡುಕೊಳ್ಳಬೇಕು. ಆ ಔಷಧವನ್ನು ಬಳಸಲಿ, ಬಿಡಲಿ ಪೂರ್ತಿ ಹಣ ತೆರಬೇಕಾಗುತ್ತದೆ. ಹಾಗಾಗಿ, ಕಡಿಮೆ ಬೆಲೆಗೆ ಸಿಗುವ ಗುಣಮಟ್ಟದ, ಅಡ್ಡ ಪರಿಣಾಮಗಳು ಇಲ್ಲದ ನಮ್ಮ ದೇಶದ ಔಷಧಗಳಿಗೆ ಬೇಡಿಕೆ ಬಂದಿದೆ’ ಎನ್ನುತ್ತಾರೆ ಸಂದೀಪ್.

**
ಭೂಮಿ ಇದ್ದರೂ ಕೃಷಿ ಕಷ್ಟ
ಹುಣಸೂರು:
ತಾಲ್ಲೂಕಿನ ಗುರುಪುರ ಪಂಚಾಯಿತಿಗೆ ಸೇರಿದ ಪಕ್ಷಿರಾಜಪುರ ಹಕ್ಕಿಪಿಕ್ಕಿ ಕಾಲೊನಿಯಲ್ಲಿ 500 ಕುಟುಂಬಗಳಿದ್ದು, ಈ ಪೈಕಿ 50ರಿಂದ 60 ಕುಟುಂಬಗಳು ತೈಲ ಮಾರಾಟ ಮತ್ತು ಮಸಾಜ್ ಮಾಡುವ ವೃತ್ತಿಯಲ್ಲಿ ತೊಡಗಿವೆ.

ಉಳಿದವರು, ದೇವರಾಜ ಅರಸು ಅವಧಿಯಲ್ಲಿ ನೀಡಿದ್ದ 3 ಎಕರೆ ಕೃಷಿ ಭೂಮಿಯಲ್ಲಿ ಬೇಸಾಯ ಮಾಡುತ್ತ, ಅದರ ಜೊತೆಗೆ ಪ್ಲಾಸ್ಟಿಕ್ ಹೂವು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತಾರೆ.

ಇತ್ತೀಚಿನ ದಿನದಲ್ಲಿ ಮಕ್ಕಳನ್ನು ಓದಿಸಬೇಕು ಎಂಬ ಇಚ್ಛೆ ಹೊಸ ಪೀಳಿಗೆಯಲ್ಲಿ ಬಂದಿದೆ. ಕೆಲವರು ಹುಣಸೂರು, ಮೈಸೂರು ನಗರದಲ್ಲಿ ಮನೆ ಅಥವಾ ಹಾಸ್ಟೆಲ್‌ನಲ್ಲಿ ಮಕ್ಕಳನ್ನು ಬಿಟ್ಟು ಓದಿಸುತ್ತಿದ್ದಾರೆ.ವಿದೇಶಕ್ಕೆ ಪ್ರಯಾಣಿಸುವವರ ಪೈಕಿ, ಕೆಲವರು ಮನೆಯ ಹಿರಿಯರೊಂದಿಗೆ ಮಕ್ಕಳನ್ನು ಬಿಟ್ಟು ತೆರಳುತ್ತಾರೆ. ಆರ್ಥಿಕವಾಗಿ ಸದೃಢ ಇಲ್ಲದವರು ಸರ್ಕಾರಿ ಆಶ್ರಮ ಶಾಲೆಗೆ ದಾಖಲಿಸಿ, ವರ್ಷದಲ್ಲಿ 3ರಿಂದ 5 ತಿಂಗಳು ಹೊರ ದೇಶಗಳಿಗೆ ಹೋಗಿ ಸಂಪಾದಿಸಿಕೊಂಡು ಬರುತ್ತಾರೆ ಎನ್ನುತ್ತಾರೆ ಹುಣಸೂರು ಹಕ್ಕಿಪಿಕ್ಕಿ ಕಾಲೊನಿ ಮುಖಂಡ ಪಿ.ಎಸ್‌.ನಂಜುಂಡಸ್ವಾಮಿ.

ಗಿಡಮೂಲಿಕೆ ಎಣ್ಣೆ ಸಿದ್ಧಪಡಿಸುವ ಸುಗುಲಾಲ್,‘ನಮ್ಮ ಕುಟುಂಬದವರುದೇಶ–ವಿದೇಶಗಳಲ್ಲಿ ಸಂಚರಿಸಿ, ಮನೆಯಲ್ಲಿ ಸಿದ್ಧಪಡಿಸಿದ ತೈಲ ಮಾರಾಟ ಮಾಡುತ್ತೇವೆ. ಈ ತೈಲಕ್ಕೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ. ಒಂದು ಲೀಟರ್ ತೈಲ ತಯಾರಿಸಲು ₹3 ಸಾವಿರ ವೆಚ್ಚವಾಗುತ್ತದೆ’ ಎನ್ನುತ್ತಾರೆ.

‘ಈ ಸಮುದಾಯವು ಕೃಷಿಯನ್ನು ಮೈಗೂಡಿಸಿಕೊಳ್ಳುವುದು ಕಷ್ಟ. ಬೇಟೆ ಆಡುವುದು ಅವರಿಗೆ ಬಂದ ಕಲೆ. ಈಗ ಬೇಟೆ ಅಪರಾಧವಾಗಿರುವುದರಿಂದ ಅನಿವಾರ್ಯವಾಗಿ ಕೃಷಿಗೆ ಹೊರಳುತ್ತಿದ್ದಾರೆ. ಕೆಲವರು ಅರಿಶಿಣ, ಬಾಳೆ, ರಾಗಿ, ಮುಸುಕಿನ ಜೋಳ ಬೆಳೆಯುತ್ತಿದ್ದಾರೆ. ಆದರೂ ಕೃಷಿಯಿಂದ ಬರುವ ಲಾಭ ಕಡಿಮೆ’ ಎನ್ನುತ್ತಾರೆ ಸ್ಥಳೀಯರು.

ಮಾಹಿತಿ:ಎಚ್‌.ಎಸ್‌. ಸಚ್ಚಿತ್‌

**
ಹತ್ತು ವರ್ಷಗಳ ಹಿಂದೆ ದುಬೈ, ಕತಾರ್, ಕುವೈತ್‌ ದೇಶಗಳಿಗೆ ಭೇಟಿ ನೀಡಿ ಔಷಧ ಮಾರಾಟ, ಮಸಾಜ್‌ನಿಂದ ಹಣ ಸಂಪಾದಿಸುತ್ತಿದ್ದೆ. ಈಗ ವಿದೇಶಕ್ಕೆ ಹೋಗಲು ಹಣವಿಲ್ಲ. ಮನೆ, ಮಕ್ಕಳ ಮದುವೆಗೆ ಮಾಡಿದ ಸಾಲ ಇನ್ನೂ ತೀರಿಸಲು ಆಗಿಲ್ಲ.
-ಅಮಾವಾಸೆ, ಅಂಗಡಿಹಳ್ಳಿ ನಿವಾಸಿ

*
ಪ್ರತಿ ಕುಟುಂಬಕ್ಕೆ ಇಂತಿಷ್ಟು ಜಮೀನು ನೀಡಿದರೆ ಅಲ್ಲಿಯೇ ಗಿಡಮೂಲಿಕೆ ಬೆಳೆದು ವ್ಯಾಪಾರ ವೃದ್ಧಿಸಿಕೊಳ್ಳಬಹುದು. ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಗಮನ ಹರಿಸುತ್ತಿಲ್ಲ.
-ಉದಯ್ ಕುಮಾರ್‌, ಅಂಗಡಿಹಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.