ಸಂಪತ್ತು ಮತ್ತು ಆದಾಯವು ದೇಶದ ಜನರಲ್ಲಿ ಅಸಮಾನಾವಾಗಿ ಹಂಚಿಕೆಯಾಗಿದೆ. ದೇಶದ ಶೇ 10ರಷ್ಟು ಜನರು, ದೇಶದ ಒಟ್ಟು ಸಂಪತ್ತಿನ ಶೇ 64.6ರಷ್ಟನ್ನು ಹೊಂದಿದ್ದಾರೆ. ದೇಶದ ಶೇ 50ರಷ್ಟಿರುವ ಬಡವರು, ದೇಶದ ಒಟ್ಟು ಸಂಪತ್ತಿನ ಶೇ 5.9ರಷ್ಟನ್ನು ಮಾತ್ರ ಹೊಂದಿದ್ದಾರೆ. ದೇಶದ ಶೇ 10ರಷ್ಟು ಮಂದಿ ಆದಾಯದಲ್ಲಿ ಶೇ 57.1ರಷ್ಟು ಪಾಲು ಹೊಂದಿದ್ದಾರೆ.ಶೇ 50ರಷ್ಟಿರುವ ಬಡವರು, ಒಟ್ಟು ರಾಷ್ಟ್ರೀಯ ಆದಾಯದ ಶೇ 13.1ರಷ್ಟು ಪಾಲನ್ನು ಮಾತ್ರ ಹೊಂದಿದ್ದಾರೆ. ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯಾನಂತರದ ದಿನಗಳಲ್ಲೂ ಈ ಎರಡೂ ವರ್ಗಗಳ ನಡುವಣ ಸಂಪತ್ತಿನ ಹಂಚಿಕೆ ಅಸಮಾನವಾಗಿಯೇ ಇತ್ತು. ಈಚಿನ ವರ್ಷಗಳಲ್ಲಿ ಈ ಅಂತರವು ಮತ್ತಷ್ಟು ಹೆಚ್ಚಿದೆ. ಈಚಿನ ಮೂರು ವರ್ಷಗಳಲ್ಲಿ ಭಾರತ ಸರ್ಕಾರವು ಬಿಡುಗಡೆ ಮಾಡಿರುವ ವರದಿಗಳಲ್ಲಿ ಸಂಪತ್ತಿನ ಹಂಚಿಕೆಯನ್ನು ನಿಖರವಾಗಿ ಸೂಚಿಸುವ ಮಾಹಿತಿ ಇಲ್ಲ ಎಂದು ‘ವರ್ಲ್ಡ್ ಇನ್‌ಇಕ್ವಾಲಿಟಿ ರಿಪೋರ್ಟ್–2022’ ಹೇಳಿದೆ.
ಶ್ರೀಮಂತರ ಆದಾಯ ಏರಿಕೆ
ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಒಟ್ಟು ಜನಸಂಖ್ಯೆಯ ಶೇ 10ರಷ್ಟು ಜನರು, ದೇಶದ ಶೇ 50ರಷ್ಟು ಆದಾಯವನ್ನು ಹೊಂದಿದ್ದರು. ಆದರೆ ಸ್ವಾಂತಂತ್ರ್ಯಾನಂತರದ ದಿನಗಳಲ್ಲಿ ಸರ್ಕಾರವು ಸಮಾಜವಾದಿ ನೀತಿಗಳನ್ನು ಅಳವಡಿಸಿಕೊಂಡಿದ್ದರಿಂದ ಶ್ರೀಮಂತರ ಆದಾಯದ ಪ್ರಮಾಣ ಕಡಿಮೆಯಾಗಿತ್ತು. ಆದರೆ 90ರ ದಶಕದ ನಂತರ ಉದಾರೀಕರಣ ಮತ್ತು ಖಾಸಗೀಕರಣ ಜಾರಿಗೆ ತಂದ್ದದರ ಪರಿಣಾಮವಾಗಿ ಶ್ರೀಮಂತ ವರ್ಗದ ಆದಾಯದ ಪ್ರಮಾಣವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2010ರ ನಂತರ ಏರಿಕೆಯ ಪ್ರಮಾಣವು ಹೆಚ್ಚಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ/
– 1858–1947ರ ಅವಧಿಯಲ್ಲಿ ದೇಶದ ಒಟ್ಟು ವಾರ್ಷಿಕ ಆದಾಯದಲ್ಲಿ, ದೇಶದ ಒಟ್ಟು ಜನಸಂಖ್ಯೆಯ ಶೇ 10ರಷ್ಟಿರುವ ಶ್ರೀಮಂತರ ಪಾಲು
–1960–80ರ ಅವಧಿಯಲ್ಲಿ ದೇಶದ ಒಟ್ಟು ವಾರ್ಷಿಕ ಆದಾಯದಲ್ಲಿ, ದೇಶದಒಟ್ಟು ಜನಸಂಖ್ಯೆಯ ಶೇ 10ರಷ್ಟಿರುವ ಶ್ರೀಮಂತರ ಪಾಲು
– 1980–90ರಅವಧಿಯಲ್ಲಿ ದೇಶದ ಒಟ್ಟು ವಾರ್ಷಿಕ ಆದಾಯದಲ್ಲಿ, ದೇಶದ ಒಟ್ಟು ಜನಸಂಖ್ಯೆಯ ಶೇ 10ರಷ್ಟಿರುವ ಶ್ರೀಮಂತರ ಪಾಲು
– 2010–21ರಅವಧಿಯಲ್ಲಿ ದೇಶದ ಒಟ್ಟು ವಾರ್ಷಿಕ ಆದಾಯದಲ್ಲಿ, ದೇಶದ ಒಟ್ಟು ಜನಸಂಖ್ಯೆಯ ಶೇ 10ರಷ್ಟಿರುವ ಶ್ರೀಮಂತರ ಪಾಲು
ಸಂಪತ್ತಿನ ಅಸಮಾನ ಹಂಚಿಕೆ
ಜಗತ್ತಿನಲ್ಲಿ ಸಂಪತ್ತಿನ ಹಂಚಿಕೆಯಲ್ಲಿ ತೀವ್ರ ತರದ ಅಸಮಾನತೆ ಕಂಡುಬಂದಿದೆ. ಜಗತ್ತಿನ ಶೇ 50ರಷ್ಟು ಜನರ ಬಳಿ ಇರುವುದು ಶೇ 2ರಷ್ಟು ಸಂಪತ್ತು ಮಾತ್ರ. ಅಂದರೆ ಜಗತ್ತಿನ ಅರ್ಧದಷ್ಟು ಜನರು ಬಹುತೇಕ ಖಾಲಿ ಕೈಯಲ್ಲಿದ್ದಾರೆ. ಆದರೆ, ಜಗತ್ತಿನ ಶೇ 10ರಷ್ಟು ಶ್ರೀಮಂತರು ಶೇ 76ರಷ್ಟು ಸಂಪತ್ತಿನ ಒಡೆಯರಾಗಿದ್ದಾರೆ. ಅಂದರೆ ಹತ್ತು ಪ್ರತಿಶತದಷ್ಟು ಜನರುಜಗತ್ತಿನ ಮುಕ್ಕಾಲು ಪಾಲು ಸಂಪತ್ತನ್ನು ಅನುಭವಿಸುತ್ತಿದ್ದಾರೆ.
ಆದಾಯದಲ್ಲೂ ಈ ಅಸಮಾನತೆ ಕಾಣಿಸಿದೆ. ಜಗತ್ತಿನ ಶೇ 10ರಷ್ಟು ಜನರು ಜಗತ್ತಿನ ಶೇ 52ರಷ್ಟು ಆದಾಯವನ್ನು ಗಳಿಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಶೇ 50ರಷ್ಟು ಜನರು ಕೇವಲ ಶೇ 8.5ರಷ್ಟು ಆದಾಯವನ್ನು ಹಂಚಿಕೊಳ್ಳುತ್ತಿದ್ದಾರೆ.ಆದಾಯಕ್ಕೆ ಹೋಲಿಸಿದರೆ, ಸಂಪತ್ತಿನ ಅಸಮಾನತೆ ಭಾರಿ ಪ್ರಮಾಣದಲ್ಲಿ ಗೋಚರಿಸುತ್ತದೆ.
ಎಲ್ಲ ಕಡೆಯೂ ಅಸಮಾನ ಹಂಚಿಕೆ
ಜನರ ಆದಾಯವು ಜಗತ್ತಿನ ವಿವಿಧ ಪ್ರದೇಶಗಳಲ್ಲಿ ಅಸಮಾನವಾಗಿ ಹಂಚಿಕೆಯಾಗಿದೆ. ಯುರೋಪ್ ಖಂಡದಲ್ಲಿ ಶೇ 50ರಷ್ಟು ಜನಸಂಖ್ಯೆಯು ಶೇ 19ರಷ್ಟು ಆದಾಯವನ್ನು ಹಂಚಿಕೊಂಡಿದೆ. ಈ ಪ್ರಮಾಣ ಮಧ್ಯಪ್ರಾಚ್ಯ ಹಾಗೂ ಆಫ್ರಿಕಾ ಖಂಡದ ದೇಶಗಳಲ್ಲಿ ಕೇವಲ ಶೇ 9ರಷ್ಟಿದೆ. ಆದರೆ ಈ ದೇಶಗಳಲ್ಲಿರುವ ಶ್ರೀಮಂತರು ಶೇ 50ಕ್ಕಿಂತಲೂ ಹೆಚ್ಚು ಪ್ರಮಾಣದ ಆದಾಯವನ್ನು ಹಂಚಿಕೊಂಡಿದ್ದಾರೆ.
ಸಂಪತ್ತು ಹಂಚಿಕೆಯಲ್ಲಿಯೂ ಭಾರಿ ತಾರತಮ್ಯ ಕಂಡುಬಂದಿದೆ. ಲ್ಯಾಟಿನ್ ಅಮೆರಿಕ ವಲಯದಲ್ಲಿ ಶೇ 50ರಷ್ಟು ಜನಸಂಖ್ಯೆಯ ಬಳಿಯಿರುವುದುಶೇ 1ರಷ್ಟು ಸಂಪತ್ತು ಮಾತ್ರ. ಯುರೋಪ್ ಮತ್ತು ಪೂರ್ವ ಏಷ್ಯಾಗಳಲ್ಲಿ ಈ ಪ್ರಮಾಣ ಶೇ 5ರಷ್ಟಿದೆ. ಮಧ್ಯಪ್ರಾಚ್ಯ, ಆಫ್ರಿಕಾ, ಲ್ಯಾಟಿನ್ ಅಮೆರಿಕ, ಉತ್ತರ ಅಮೆರಿಕ ಮತ್ತು ಮಧ್ಯ ಏಷ್ಯಾದಲ್ಲಿ ಶೇ 70ಕ್ಕಿಂತಲೂ ಹೆಚ್ಚಿನ ಸಂಪತ್ತು ಶ್ರೀಮಂತರಲ್ಲಿ ಕ್ರೋಡೀಕೃತವಾಗಿದೆ.
ಆಧಾರ:ವರ್ಲ್ಡ್ ಇನ್‌ಇಕ್ವಾಲಿಟಿ ಲ್ಯಾಬ್‌ನ, ‘ವರ್ಲ್ಡ್ ಇನ್‌ಇಕ್ವಾಲಿಟಿ ರಿಪೋರ್ಟ್–2022’ ವರದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.