ADVERTISEMENT

ಆಳ– ಅಗಲ | ಆಸ್ಕರ್: ಅಕಾಡೆಮಿ ಅವಾರ್ಡ್ಸ್‌ಗೆ ಆಯ್ಕೆ ಹೇಗೆ?

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 19:31 IST
Last Updated 11 ಜನವರಿ 2023, 19:31 IST
   

ಭಾರತದ ಹಲವು ಸಿನಿಮಾ ಮತ್ತು ಸಾಕ್ಷ್ಯಚಿತ್ರಗಳು ಆಸ್ಕರ್‌ ಪ್ರಶಸ್ತಿಯ ಮೊದಲ ಸುತ್ತಿಗೆ ಆಯ್ಕೆಯಾಗಿವೆ. ಆಸ್ಕರ್ ಪ್ರಶಸ್ತಿ ನೀಡುವ ಅಕಾಡೆಮಿ ಅವಾರ್ಡ್ಸ್‌ ಸಂಸ್ಥೆಯು ಈಗ ಪ್ರಕಟಿಸಿರುವ ಸಿನಿಮಾಗಳ ಪಟ್ಟಿಯ ಬಗ್ಗೆ ಗೊಂದಲಗಳೂ ಮೂಡಿವೆ. ಇದು ಆಸ್ಕರ್‌ ನಾಮನಿರ್ದೇಶನ ಪಟ್ಟಿ ಎಂದೂ, ಕೆಲವು ಚಿತ್ರಗಳು ಪ್ರಶಸ್ತಿಗೇ ಆಯ್ಕೆಯಾಗಿವೆ ಎಂದೂ ಹಲವು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆಸ್ಕರ್‌ ಪ್ರಶಸ್ತಿಗೆ ಸಿನಿಮಾಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ವಿವರ ಇಲ್ಲಿದೆ

***

ಆಸ್ಕರ್‌ ಪ್ರಶಸ್ತಿ ದೊರೆಯುವುದು ಇರಲಿ, ‍ಪ್ರಶಸ್ತಿಗೆ ನಾಮನಿರ್ದೇಶನವಾಗುವುದು ಯಾವುದೇ ಸಿನಿಮಾ ಮತ್ತು ಸಾಕ್ಷ್ಯಚಿತ್ರಕ್ಕೆ ಅತ್ಯಂತ ದೊಡ್ಡ ವಿಚಾರ. ಆದರೆ, ನಾಮನಿರ್ದೇಶನ ಸುತ್ತಿಗೆ ಆಯ್ಕೆಯಾಗುವುದೂ ಅಷ್ಟೇ ಕಷ್ಟದ ವಿಚಾರವಾಗಿದೆ. ಸಿನಿಮಾ ಮತ್ತು ಸಾಕ್ಷ್ಯಚಿತ್ರಗಳಿಗೆ ಜಾಗತಿಕ ಮಟ್ಟದಲ್ಲಿ ದೊರೆಯುವ ಅತ್ಯುನ್ನತ ಮನ್ನಣೆ ಎಂದು ಪರಿಗಣಿಸಲಾಗುವ ಆಸ್ಕರ್‌ ಪ್ರಶಸ್ತಿಯನ್ನು ‘ಅಕಾಡೆಮಿ ಆಫ್ ಮೋಷನ್‌ ಪಿಕ್ಚರ್ ಆರ್ಟ್ಸ್‌ ಅಂಡ್ ಸೈನ್ಸಸ್‌’ ನೀಡುತ್ತದೆ. ಈ ಸಂಸ್ಥೆಯು 1927ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, 1929ರಿಂದ ಪ್ರಶಸ್ತಿಯನ್ನು ನೀಡಲಾರಂಭಿಸಿತು. ಈಗ 95ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

ADVERTISEMENT

2022ನೇ ಸಾಲಿನ, ಅಂದರೆ 95ನೇ ಸುತ್ತಿನ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನವಾದ ಚಿತ್ರಗಳ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ವಾಸ್ತವದಲ್ಲಿ ನಾಮನಿರ್ದೇಶನಕ್ಕೆ ಚಿತ್ರಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇದೇ ಗುರುವಾರವಷ್ಟೇ (ಜನವರಿ 12) ಆರಂಭವಾಗಲಿದೆ. ಈಗ ಪ್ರಕಟವಾಗಿರುವುದು ಆಸ್ಕರ್‌ ರಿಮೈಂಡರ್‌ ಲಿಸ್ಟ್‌ ಮಾತ್ರ. ಇದನ್ನು ಮೊದಲ ಸುತ್ತಿನ ಪಟ್ಟಿ ಎನ್ನಬಹುದು.

ಪ್ರತೀ ವರ್ಷ ಜನವರಿ 1ರಿಂದ ಡಿಸೆಂಬರ್ ಅಂತ್ಯದವರೆಗೆ ಬಿಡುಗಡೆಯಾದ ಸಿನಿಮಾಗಳು, ಸಾಕ್ಷ್ಯಚಿತ್ರಗಳು ಮತ್ತು ಅನಿಮೇಟೆಡ್‌ ಚಿತ್ರಗಳನ್ನು ಆ ವರ್ಷದ ಆಸ್ಕರ್‌ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಚಿತ್ರದ ನಿರ್ಮಾಪಕರು, ನಿರ್ದೇಶಕರು, ನಟರು, ತಂತ್ರಜ್ಞರು ಮತ್ತು ಆಯಾ ದೇಶದ ಸರ್ಕಾರಿ ಸ್ವಾಮ್ಯದ ಸಿನಿಮಾ ಸಂಸ್ಥೆಗಳು ಆಸ್ಕರ್‌ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಆನಂತರದ ಹಲವು ಸುತ್ತಿನ ವೀಕ್ಷಣೆ ಮತ್ತು ಮತದಾನದ ನಂತರ ಚಿತ್ರಗಳನ್ನು ಮೊದಲ ಸುತ್ತಿನ ಪಟ್ಟಿಗೆ ಆಯ್ಕೆ ಮಾಡಲಾಗುತ್ತದೆ. ಆನಂತರ ಚಿತ್ರಗಳು ನಾಮನಿರ್ದೇಶನ ಪಟ್ಟಿಗೆ ಬರುತ್ತವೆ. ಈ ಚಿತ್ರಗಳು ಪ್ರಶಸ್ತಿಗೆ ಆಯ್ಕೆಯಾಗುವ ಅವಕಾಶ ಪಡೆಯುತ್ತವೆ.

ಆಯ್ಕೆ ಪ್ರಕ್ರಿಯೆ

ಅರ್ಜಿ ಸಲ್ಲಿಕೆ: 2022ರಲ್ಲಿ ಬಿಡುಗಡೆಯಾದ ಮತ್ತು ಸಿನಿಮಾ ಮಂದಿರಗಳಲ್ಲಿ ಪ್ರದರ್ಶನವಾದ ಸಿನಿಮಾಗಳನ್ನು ಆ ಸಾಲಿನ ಪ್ರಶಸ್ತಿಗೆ ಪರಿಗಣಿಸಿ ಎಂದು ಚಿತ್ರದ ನಿರ್ಮಾಪಕರು, ನಿರ್ದೇಶಕರು, ನಟರು, ತಂತ್ರಜ್ಞರು ಅರ್ಜಿ ಸಲ್ಲಿಸಬಹುದು. ಅಕಾಡೆಮಿ ಅವಾರ್ಡ್ಸ್‌ನ ಅಧಿಕೃತ ಜಾಲತಾಣದಲ್ಲಿ ಇರುವ ಲಿಂಕ್‌ಗಳಲ್ಲಿ ವಿವರಗಳನ್ನು ತುಂಬುವ ಮೂಲಕ ಇಂತಹ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯ ಜತೆಗೆ ಸಿನಿಮಾದ ಡಿಜಿಟಲ್ ಪ್ರತಿ ಅಥವಾ ಭೌತಿಕ ರೀಲ್‌ ಅನ್ನು ಸಲ್ಲಿಸಬೇಕಾಗುತ್ತದೆ. ಚಿತ್ರವನ್ನು ಯಾವ ಯಾವ ವಿಭಾಗದಲ್ಲಿ ಪ್ರಶಸ್ತಿಗೆ ಪರಿಗಣಿಸಬೇಕು ಮತ್ತು ಯಾವ ಕಲಾವಿದರನ್ನು ಪರಿಗಣಿಸಬೇಕು ಎಂಬುದನ್ನು ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.

ಪರಿಶೀಲನೆ ಮತ್ತು ರಿಮೈಂಡರ್ ಪಟ್ಟಿ: ಅಕಾಡೆಮಿಯ ಸದಸ್ಯರಲ್ಲಿ ಸಿನಿಮಾಕ್ಕೆ ಸಂಬಂಧಿಸಿದ ಎಲ್ಲಾ ಕ್ಷೇತ್ರಗಳ ಪರಿಣತರು ಇರುತ್ತಾರೆ. ಅಕಾಡೆಮಿಯ ಸದಸ್ಯರು ಚಿತ್ರವನ್ನು ವೀಕ್ಷಿಸುತ್ತಾರೆ. ನಾಮನಿರ್ದೇಶನ ಮಾಡಬಹುದು ಎಂದು ಸದಸ್ಯರು ಭಾವಿಸುವ ಚಿತ್ರವನ್ನು, ಅವರು ಅಕಾಡೆಮಿಗೆ ಶಿಫಾರಸು ಮಾಡುತ್ತಾರೆ. ಶಿಫಾರಸಿನ ಆಧಾರದಲ್ಲಿ ಅಕಾಡೆಮಿಯು ರಿಮೈಂಡರ್ ಪಟ್ಟಿಯನ್ನು ಸಿದ್ಧಪಡಿಸುತ್ತದೆ.

* 2022ನೇ ಸಾಲಿನ ಆಸ್ಕರ್ ರಿಮೈಂಡರ್ ಲಿಸ್ಟ್‌ ಈಚೆಗಷ್ಟೇ ಬಿಡುಗಡೆಯಾಗಿದೆ. ಇದರಲ್ಲಿ 301 ಚಿತ್ರಗಳಿದ್ದು ಕನ್ನಡದ ಕಾಂತಾರಾ, ವಿಕ್ರಾಂತ್ ರೋಣ, ಹಿಂದಿಯ ದಿ ಕಾಶ್ಮೀರ್‌ ಫೈಲ್ಸ್‌ ಸೇರಿ ಭಾರತದ ಹಲವು ಚಿತ್ರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

‘ಕಾಂತಾರ’ ಚಿತ್ರದ ಪೋಸ್ಟರ್

ನಾಮನಿರ್ದೇಶನ: ರಿಮೈಂಡರ್‌ ಲಿಸ್ಟ್‌ಗೆ ಆಯ್ಕೆಯಾದ ಚಿತ್ರಗಳನ್ನು ನಾಮನಿರ್ದೇಶನ ಮಾಡಲು ಪರಿಗಣಿಸಲಾಗುತ್ತದೆ. ಚಿತ್ರವನ್ನು ಯಾವ ವಿಭಾಗಕ್ಕೆ ಪರಿಗಣಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿರುತ್ತದೆಯೋ ಅಂತಹ ವಿಭಾಗದ ಪರಿಣತರ ಗುಂ‍ಪಿಗೆ ಚಿತ್ರದ ಅರ್ಜಿಯನ್ನು ನೀಡಲಾಗುತ್ತದೆ. ಆ ಪರಿಣತರು ಚಿತ್ರವನ್ನು ವೀಕ್ಷಿಸುತ್ತಾರೆ, ಮತ್ತು ಆಯಾ ವಿಭಾಗದಲ್ಲಿ ಇರುವ ಆದ್ಯತೆಯ ಚಿತ್ರಗಳಿಗೆ ಪರಿಣತರು ಮತ ನೀಡುತ್ತಾರೆ. ಹೆಚ್ಚು ಮತ ಪಡೆಯುವ ಚಿತ್ರವು ಆಯಾ ವಿಭಾಗದಲ್ಲಿ ನಾಮನಿರ್ದೇಶವಾಗುತ್ತದೆ. ಈ ಪ್ರಕ್ರಿಯೆ ಗುರುವಾರವಷ್ಟೇ ಆರಂಭವಾಗಲಿದೆ. ನಾಮನಿರ್ದೇಶನವಾದ ಚಿತ್ರಗಳ ಪಟ್ಟಿಯು ಇದೇ 24ಕ್ಕೆ ಬಿಡುಗಡೆಯಾಗಲಿದೆ.

ಪ್ರಶಸ್ತಿ ಸುತ್ತು: ನಾಮನಿರ್ದೇಶನ ಸುತ್ತಿಗೆ ಆಯ್ಕೆಯಾದ ಚಿತ್ರವನ್ನು ಪರಿಣತರ ಗುಂಪು ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸುತ್ತದೆ. ಇವುಗಳಲ್ಲಿ ಅತ್ಯುತ್ತಮವಾದ ಚಿತ್ರಗಳನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಮತದಾನವೆಲ್ಲವೂ ಗೋಪ್ಯವಾಗಿ ನಡೆಯುತ್ತದೆ. ಚಿತ್ರ ವೀಕ್ಷಣೆ ಮತ್ತು ಮತದಾನಕ್ಕೆ ಒಂದು ತಿಂಗಳಿಗೂ ಹೆಚ್ಚು ಕಾಲಾವಕಾಶ ಬೇಕಾಗುತ್ತದೆ. ಮತಗಳ ಪರಿಶೀಲನೆಯ ನಂತರ, ಫಲಿತಾಂಶವನ್ನು ಸಿದ್ಧಪಡಿಸಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದ ಚಿತ್ರಗಳ ಪಟ್ಟಿಯನ್ನು ಅಕಾಡೆಮಿಯ ಇಬ್ಬರು ಅಧಿಕಾರಿಗಳು ಸಿದ್ಧಪಡಿಸುತ್ತಾರೆ. ಫಲಿತಾಂಶವು ಆ ಇಬ್ಬರಿಗೆ ಮಾತ್ರವೇ ತಿಳಿದಿರುತ್ತದೆ. ಪ್ರಶಸ್ತಿ ಘೋಷಣಾ ಸಮಾರಂಭದಲ್ಲಿ ಮಾತ್ರ ಫಲಿತಾಂಶದ ಪಟ್ಟಿಯನ್ನು ತೆರೆಯಲಾಗುತ್ತದೆ.

* ಸಾಕ್ಷ್ಯಚಿತ್ರ, ಅನಿಮೇಟೆಡ್‌ ಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಪ್ರಕ್ರಿಯೆಯೂ ಬಹುತೇಕ ಇದೇ ರೀತಿ ಇರುತ್ತದೆ. ಆದರೆ ರಿಮೈಂಡರ್‌ ಪಟ್ಟಿ ಹಂತದ ಬದಲಿಗೆ, ಆಯ್ಕೆ ಪಟ್ಟಿ ಎಂಬ ಬೇರೊಂದು ಹಂತವನ್ನು ಇಲ್ಲಿ ಅನುಸರಿಸಲಾಗುತ್ತದೆ. ಸಾಕ್ಷ್ಯಚಿತ್ರ, ಅನಿಮೇಟೆಡ್‌ ಚಿತ್ರಗಳು, ಕಿರುಚಿತ್ರಗಳು, ಮೂಲ ಸಂಗೀತ, ಮೂಲ ಗೀತೆ, ಪ್ರಸಾದನ ಮತ್ತು ಕೇಶವಿನ್ಯಾಸ ಸೇರಿ 10 ವಿಭಾಗಗಳನ್ನು ಈ ಸ್ವರೂಪದ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ವಿಭಾಗದಲ್ಲಿ ಹಿಂದಿಯ ‘ಆಲ್‌ ದಟ್‌ ಬ್ರೀಥ್‌’, ತಮಿಳಿನ ‘ಎಲಿಫೆಂಟ್‌ ವಿಸ್ಪರರ್ಸ್‌’ ಸಾಕ್ಷ್ಯಚಿತ್ರಗಳು ಆಯ್ಕೆಯಾಗಿವೆ.

ಅರ್ಹತೆಗೆ ಹತ್ತಾರು ನಿಯಮ

24 ವಿಭಾಗಗಳಲ್ಲಿ (ಕೆಟಗರಿ) ಆಸ್ಕರ್‌ ಪ್ರಶಸ್ತಿಯನ್ನು ನೀಡಲಾಗುತ್ತದೆ. ಎಲ್ಲ ವಿಭಾಗಗಳಿಗೆ ಸಿನಿಮಾ, ಗೀತೆ, ಕಲಾವಿದರು ಮತ್ತು ತಂತ್ರಜ್ಞರನ್ನು ಪರಿಗಣಿಸಲು, ಪ್ರತ್ಯೇಕ ನಿಯಮಗಳನ್ನು ರೂಪಿಸಲಾಗಿದೆ.

ಅಕಾಡೆಮಿಯ ಸಕ್ರಿಯ ಮತ್ತು ಆಜೀವ ಸದಸ್ಯರು ಮತದಾನದ ಮೂಲಕ ತಮ್ಮ ಆಯ್ಕೆಯನ್ನು ತಿಳಿಸಬೇಕು ಎಂದು ನಿಯಮಗಳು ಹೇಳುತ್ತವೆ. ಪ್ರತಿಯೊಂದು ವಿಭಾಗಕ್ಕೂ ಆಯಾ ಕ್ಷೇತ್ರದಲ್ಲಿ ಅನುಭವಿ ಸದಸ್ಯರು ಮತದಾನ ಮಾಡುತ್ತಾರೆ. ಅತ್ಯುತ್ತಮ ಚಿತ್ರ ವಿಭಾಗಕ್ಕೆ ಎಲ್ಲ ಸದಸ್ಯರು ಮತ ಹಾಕುತ್ತಾರೆ.

ಚಿತ್ರವೊಂದರ ಗರಿಷ್ಠ 10 ನಟ ಅಥವಾ ಗರಿಷ್ಠ 10 ನಟಿಯರನ್ನು ಅತ್ಯುತ್ತಮ ನಟ/ನಟಿ ವಿಭಾಗಕ್ಕೆ ನಾಮನಿರ್ದೇಶನ ಮಾಡಲು ಸಮಿತಿ ಸದಸ್ಯರಿಗೆ ಅವಕಾಶವಿದೆ ಎಂದು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ನಾಯಕ ನಟ, ಪೋಷಕ ನಟ, ನಾಯಕಿ, ಪೋಷಕ ನಟಿ ವಿಭಾಗದಲ್ಲಿ ಸದಸ್ಯರು ಗರಿಷ್ಠ ಐದು ಆದ್ಯತೆಗಳನ್ನು ಸೂಚಿಸಲು ಅವಕಾಶವಿರುತ್ತದೆ. ಆಯ್ಕೆ ಸುತ್ತಿನ ಮತದಾನದ ವೇಳೆ ಈ ವಿಭಾಗಗಳಲ್ಲಿ ಗರಿಷ್ಠ ಮತ ಪಡೆಯುವ ಐವರು ಕಲಾವಿದರು ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗುತ್ತಾರೆ.

ಒಂದು ವೇಳೆ ನಟ ಅಥವಾ ನಟಿಯ ಪರವಾಗಿ ಅವರ ಧ್ವನಿಯನ್ನು ಬೇರೊಬ್ಬರು ಡಬ್ ಮಾಡಿದ್ದರೆ, ಆ ಕಲಾವಿದರನ್ನು ಅತ್ಯತ್ತಮ ನಟ/ನಟಿ/ಪೋಷಕ ಪಾತ್ರದ ಅಭಿನಯಕ್ಕಾಗಿ ನೀಡುವ ಪ್ರಶಸ್ತಿಗೆ ಪರಿಗಣಿಸುವುದಿಲ್ಲ.

ನಟ ಅಥವಾ ನಟಿಯೊಬ್ಬರು ಎರಡು ವಿಭಾಗಗಳಲ್ಲಿ ಅತಿಹೆಚ್ಚು ಮತಗಳನ್ನು ಪಡೆದಿದ್ದರೆ, ಆ ಎರಡೂ ವಿಭಾಗದ ಪ್ರಶಸ್ತಿಗೆ ಅವರನ್ನು ಪರಿಗಣಿಸಲಾಗುತ್ತದೆ. ಅಭಿನಯಕ್ಕೆ ಸಂಬಂಧಿಸಿದ ಪ್ರಶಸ್ತಿಗಳಿಗೆ ಮತದಾನ ಮಾಡುವ ಹಕ್ಕು ಸಮಿತಿಯ ಸಕ್ರಿಯ ಹಾಗೂ ಆಜೀವ ಸದಸ್ಯರಿಗೆ ಮಾತ್ರ ಇರುತ್ತದೆ.

ಸಿನಿಮಾವು, ಚಿತ್ರಮಂದಿರದಲ್ಲಿ ಪ್ರದರ್ಶನವಾಗುವ ಮುನ್ನ ಸಾರ್ವಜನಿವಾಗಿ, ಟಿ.ವಿ ವಾಹಿನಿಯಲ್ಲಿ ಅಥವಾ ಡಿವಿಡಿ/ಸಿಡಿ ಮೂಲಕ ವಿತರಣೆ ಆಗಿರಬಾರದು. ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಬಳಿಕವಷ್ಟೇ ಅದನ್ನು ಇತರೆ ಮಾಧ್ಯಮಗಳಿಗೆ ನೀಡಿದ್ದರೆ, ಆ ಚಿತ್ರವನ್ನು ಆಯ್ಕೆಸಮಿತಿ ಪರಿಗಣಿಸುತ್ತದೆ ಎಂದು ನಿಯಮಗಳು ಹೇಳುತ್ತವೆ.

ಚಿತ್ರಮಂದಿರದಲ್ಲಿ ಬಿಡುಗಡೆಯಾಗದೇ, ಕೇವಲ ಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದ್ದರೆ, ಅಂತಹ ಸಿನಿಮಾವನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. ಜನರು ಹಣ ಕೊಟ್ಟು ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿರಬೇಕು ಎಂದು ನಿಯಮಗಳಲ್ಲಿ ವಿವರಿಸಲಾಗಿದೆ.

ಅಮೆರಿಕದ ಮೆಟ್ರೊ ನಗರಗಳ ಯಾವುದೋ ಒಂದು ಚಿತ್ರಮಂದಿರದಲ್ಲಿ ಸತತ ಏಳು ದಿನ ಪ್ರದರ್ಶನವಾಗುವ ಚಿತ್ರಗಳು ಆಸ್ಕರ್‌ಗೆ ನಾಮನಿರ್ದೇಶನವಾಗುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಅಮೆರಿಕದಲ್ಲಿ ನಿರ್ಮಾಣವಾಗುವ ಸಿನಿಮಾಗಳಿಗೆ ಮಾತ್ರ ಈ ಷರತ್ತು ಅನ್ವಯವಾಗುತ್ತದೆ. ಅಮೆರಿಕ ಅಲ್ಲದೆ ಬೇರೆ ದೇಶ–ಭಾಷೆಗಳಲ್ಲಿ ನಿರ್ಮಾಣವಾದ ಸಿನಿಮಾಗಳನ್ನು ವಿದೇಶಿ ವಿಭಾಗ ಅಥವಾ ಅಂತರರಾಷ್ಟ್ರೀಯ ಸಿನಿಮಾ ವಿಭಾಗಕ್ಕೆ ಪರಿಗಣಿಸಲಾಗುತ್ತದೆ. ಅಂತಹ ಚಿತ್ರಗಳಿಗೆ ಈ ಷರತ್ತಿನಿಂದ ವಿನಾಯಿತಿ ನೀಡಲಾಗಿದೆ ಎಂದು ಅಕಾಡೆಮಿ ಅವಾರ್ಡ್ಸ್‌ನ ಷರತ್ತು ಮತ್ತು ನಿಯಮಗಳ ‘ರೂಲ್‌ ನಂಬರ್ ಥರ್ಟೀನ್‌’ನಲ್ಲಿ ವಿವರಿಸಲಾಗಿದೆ.

ಅಧಿಕೃತ ಪ್ರವೇಶದಲ್ಲಿ ಗುಜರಾತಿ ಸಿನಿಮಾ
ವಿಶ್ವದ ಎಲ್ಲಾ ದೇಶಗಳು ತಮ್ಮಲ್ಲಿ ನಿರ್ಮಾಣವಾದ ಅತ್ಯುತ್ತಮ ಚಿತ್ರವನ್ನು ಆಸ್ಕರ್‌ ಪ್ರಶಸ್ತಿಗೆ ಪರಿಗಣಿಸುವಂತೆ ಅರ್ಜಿ ಸಲ್ಲಿಸಬಹುದು. ಇದನ್ನು ಅಧಿಕೃತ ಪ್ರವೇಶ (ಅಫಿಷಿಯಲ್ ಎಂಟ್ರಿ) ಎಂದು ಪರಿಗಣಸಲಾಗುತ್ತದೆ. ಒಂದು ದೇಶ ಒಂದು ಚಿತ್ರವನ್ನಷ್ಟೇ ಈ ರೀತಿ ಪ್ರಶಸ್ತಿಗೆ ಸಲ್ಲಿಸಬಹುದು. ಯಾವುದೇ ದೇಶದ ಸರ್ಕಾರಿ ಸಿನಿಮಾ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಇಂತಹ ಅರ್ಜಿಯನ್ನು ಸಲ್ಲಿಸಬಹುದು. ಈ ಬಾರಿ ಗುಜರಾತಿ ಭಾಷೆಯ ‘ಛಲ್ಲೋ ಷೋ’ (ಇಂಗ್ಲಿಷ್‌ ಅವತರಣಿಕೆ: ಲಾಸ್ಟ್‌ ಫಿಲ್ಮ್‌ ಷೋ) ಸಿನಿಮಾವನ್ನು ಪ್ರಶಸ್ತಿಗೆ ಪರಿಗಣಿಸುವಂತೆ ಕೇಂದ್ರ ಸರ್ಕಾರವು ಅಧಿಕೃತವಾಗಿ ಅರ್ಜಿ ಸಲ್ಲಿಸಿದೆ.

‘ಎಲಿಫೆಂಟ್‌ ವಿಸ್ಪರರ್ಸ್‌’ ಸಾಕ್ಷ್ಯಚಿತ್ರದ ಪೋಸ್ಟರ್‌

ಆಸ್ಕರ್ ಅಂಗಳದಲ್ಲಿ ಭಾರತ
ಆಸ್ಕರ್‌ ಅಂಗಳ ತಲುಪಿದ ಭಾರತದ ಚಿತ್ರಗಳ ಸಂಖ್ಯೆ ಕಡಿಮೆ. ಮದರ್ ಇಂಡಿಯಾ, ಸಲಾಂ ಬಾಂಬೆ ಹಾಗೂ ಲಗಾನ್ ಸಿನಿಮಾಗಳು ಮಾತ್ರ ಆಸ್ಕರ್‌ನ ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗಿ ಗಮನ ಸೆಳೆದಿದ್ದವು. ಆದರೆ, ಭಾರತದ ಕೆಲವು ಚಿತ್ರಗಳಿಗೆ ಸಂಗೀತ, ಗೀತೆ, ವಸ್ತ್ರವಿನ್ಯಾಸ, ಧ್ವನಿಮಿಶ್ರಣ ವಿಭಾಗಗಳಲ್ಲಿ ಪ್ರಶಸ್ತಿ ಸಂದಿವೆ.

ಗಾಂಧಿ ಸಿನಿಮಾದ ವಸ್ತ್ರ ವಿನ್ಯಾಸಕ್ಕಾಗಿ ಭಾನು ಅಥಯ್ಯಾ, ಜೀವಮಾನ ಸಾಧನೆಗಾಗಿ ಸತ್ಯಜಿತ್ ರೇ, ಸ್ಲಂ ಡಾಗ್ ಮಿಲಿಯನೇರ್ ಚಿತ್ರದ ಧ್ವನಿ ಮಿಶ್ರಣಕ್ಕಾಗಿ ರಸೂಲ್ ಪೂಕುಟ್ಟಿ, ಅದೇ ಚಿತ್ರದ ಜೈ ಹೋ ಗೀತೆಗಾಗಿ ಗುಲ್ಜಾರ್ ಮತ್ತು ಅದೇ ಚಿತ್ರದ ಜೈ ಹೋ ಗೀತೆಯ ಸಂಗೀತಕ್ಕಾಗಿ ಎ.ಆರ್‌.ರೆಹಮಾನ್‌ ಅವರು ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ.

ಆಧಾರ: ‘ಅಕಾಡೆಮಿ ಆಫ್ ಮೋಷನ್‌ ಪಿಕ್ಚರ್ ಆರ್ಟ್ಸ್‌ ಅಂಡ್ ಸೈನ್ಸಸ್‌, ರಾಯಿಟರ್ಸ್‌, ಐಎಂಡಿಬಿ

ಅರ್ಹತಾ ನಿಯಮಗಳು
* 40 ನಿಮಿಷಕ್ಕೂ ಹೆಚ್ಚು ಕಾಲಾವಧಿ ಹೊಂದಿರಬೇಕು

* 35 ಎಂಎಂ ಅಥವಾ 70 ಎಂಎಂ ಚಿತ್ರವಾಗಿರಬೇಕು

* 2048 ಅಥವಾ 1080 ರೆಸಲ್ಯೂಷನ್‌ ಚಿತ್ರವಾಗಿರಬೇಕು

* ಧ್ವನಿಯು 5.1 ಚಾನೆಲ್ ಅಥವಾ 7.1 ಚಾನೆಲ್ ಹೊಂದಿರಬೇಕು

* ಇಂಗ್ಲಿಷ್ ಭಾಷೆಯ ಸಬ್‌ಟೈಟಲ್ ಹಾಕುವುದು ಕಡ್ಡಾಯ

ಪ್ರಶಸ್ತಿ: 24 ವಿಭಾಗಗಳು

ಅತ್ಯುತ್ತಮ ಚಿತ್ರ

ಅತ್ಯುತ್ತಮ ನಟ

ಅತ್ಯುತ್ತಮ ನಟಿ

ಅತ್ಯುತ್ತಮ ಪೋಷಕ ನಟ

ಅತ್ಯುತ್ತಮ ಪೋಷಕ ನಟಿ

ಅತ್ಯುತ್ತಮ ನಿರ್ದೇಶಕ

ಅತ್ಯುತ್ತಮ ಮೂಲ ಚಿತ್ರಕತೆ

ಅತ್ಯುತ್ತಮ ರೂಪಾಂತರ ಚಿತ್ರಕತೆ

ಅತ್ಯುತ್ತಮ ಛಾಯಾಗ್ರಹಣ

ಅತ್ಯುತ್ತಮ ನಿರ್ಮಾಣ ವಿನ್ಯಾಸ

ಅತ್ಯುತ್ತಮ ಸಂಕಲನ

ಅತ್ಯುತ್ತಮ ಸಂಗೀತ

ಅತ್ಯುತ್ತಮ ಗೀತೆ

ಅತ್ಯುತ್ತಮ ವಸ್ತ್ರ ವಿನ್ಯಾಸ

ಅತ್ಯುತ್ತಮ ಪ್ರಸಾದನ ಮತ್ತು ಕೇಶವಿನ್ಯಾಸ

ಅತ್ಯುತ್ತಮ ಧ್ವನಿಮಿಶ್ರಣ

ಅತ್ಯುತ್ತಮ ಧ್ವನಿ ಸಂಕಲನ

ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ಸ್

ಅತ್ಯುತ್ತಮ ವಿದೇಶಿ ಭಾಷೆಯ ಚಿತ್ರ

ಅತ್ಯುತ್ತಮ ಅನಿಮೇಟೆಡ್ ಚಿತ್ರ

ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ

ಅತ್ಯುತ್ತಮ ಲೈವ್ ಆ್ಯಕ್ಷನ್ ಶಾರ್ಟ್

ಅತ್ಯುತ್ತಮ ಸಾಕ್ಷ್ಯಚಿತ್ರ

ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.