ಕೋವಿಡ್ ಲಸಿಕೆ ಪೋಲಾಗುತ್ತಿದೆ ಎಂಬುದು ಈಗ ದೊಡ್ಡ ಚರ್ಚೆಯ ವಿಷಯ. ಹಲವು ರಾಜ್ಯಗಳಲ್ಲಿ ಲಸಿಕೆ ಹೆಚ್ಚು ಪೋಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದು ಕೆಲವು ರಾಜ್ಯಗಳಿಗೆ ಸಿಟ್ಟು ಕೂಡ ತರಿಸಿದೆ. ಆದರೆ, ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಲಸಿಕೆ ಬಳಕೆಯಲ್ಲಿ ಅಚ್ಚರಿಗೆ ಕಾರಣವಾಗಿವೆ. ನಿರ್ದಿಷ್ಟ ಡೋಸ್‌ಗಳಿಗಿಂತ ಹೆಚ್ಚು ಬಳಸುವ ಮೂಲಕ ದಕ್ಷತೆ ಮೆರೆದಿವೆ. ಕೇರಳದಲ್ಲಿ ಶೇ 6.37 ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ 5.48 ಡೋಸ್‌ಗಳಷ್ಟು ಹೆಚ್ಚುವರಿ ಬಳಕೆ ಸಾಧ್ಯವಾಗಿದೆ.ಎರಡೂ ರಾಜ್ಯಗಳು ಒಟ್ಟಾಗಿ 2.71 ಲಕ್ಷ ಡೋಸ್‌ಗಳನ್ನು ಉಳಿಸಿವೆ ಎಂದು ಸರ್ಕಾರ ಹೇಳಿದೆ.ಮೇ ತಿಂಗಳಲ್ಲಿ ದೇಶದಾದ್ಯಂತ ಕೋವಿಡ್ ಲಸಿಕೆ ಪೋಲಿನ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.ಆಯ್ದ ಕೆಲವು ರಾಜ್ಯಗಳ ಕೋವಿಡ್ ಲಸಿಕೆ ಪೋಲಿನ ಪ್ರಮಾಣದ ಮಾಹಿತಿಯನ್ನು ಕೇಂದ್ರ ಸರ್ಕಾರ ನೀಡಿದೆ.
ಲಸಿಕೆ ಗರಿಷ್ಠಬಳಕೆ ಹೇಗೆ...
ಯಾವುದೇ ಲಸಿಕೆ ಕಾರ್ಯಕ್ರಮದಲ್ಲಿ ಬಳಸುವ ಲಸಿಕೆ ವಯಲ್‌ನಲ್ಲಿ ಲಸಿಕೆ ಪೋಲಿನ ಪ್ರಮಾಣವನ್ನೂ ಲೆಕ್ಕಹಾಕಿ, ಡೋಸ್‌ಗಳನ್ನು ತುಂಬಲಾಗಿರುತ್ತದೆ. ಸಾಮಾನ್ಯವಾಗಿ 10 ಡೋಸ್ ಇರುವ ಸೀಸೆಯಲ್ಲಿ ಹೆಚ್ಚುವರಿಯಾಗಿ1 ಅಥವಾ 2 ಡೋಸ್ ತುಂಬಿಸಲಾಗಿರುತ್ತದೆ. ಲಸಿಕೆ ಪೋಲು ಆಗದೇ ಇದ್ದರೆ ಒಂದು ಬಾಟಲಿಯಲ್ಲಿ 11 ಅಥವಾ 12 ಜನರಿಗೆ (ತಲಾ 1 ಎಂ.ಎಲ್) ಲಸಿಕೆ ನೀಡಬಹುದು. ಭಾರತದಲ್ಲಿ ಯಾವ ರಾಜ್ಯದಲ್ಲೂ ಈ ಮಟ್ಟದ ಗರಿಷ್ಠ ಬಳಕೆಯಾಗಿಲ್ಲ. ಆದರೆ, ಲಸಿಕೆ ಪೋಲು ಆಗುವುದನ್ನು ಕೇರಳ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ತಡೆದಿವೆ. ಸೀಸೆಯಲ್ಲಿದ್ದ ಹೆಚ್ಚುವರಿ ಡೋಸ್‌ಗಳನ್ನೂ ಬಳಸಿಕೊಂಡಿವೆ.
ಯಶಸ್ವಿಯಾದ ಕೇರಳ ಕಾರ್ಯತಂತ್ರ
ಕೇರಳದಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ದಾದಿಯರ ಪರಿಣತಿ, ಲಸಿಕಾ ಕೇಂದ್ರದ ಮಟ್ಟದಲ್ಲಿನ ಯೋಜನೆ ಮತ್ತು ಸಹಕಾರದಿಂದ ಮಾತ್ರ ಕೋವಿಡ್ ಲಸಿಕೆಯ ಡೋಸ್‌ಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಲು ಸಾಧ್ಯವಾಗಿದೆ. ಈ ಕಾರಣದಿಂದಲೇ ಲಸಿಕೆ ಪೋಲಾಗುವುದನ್ನು ತಡೆಯಲು ಸಾಧ್ಯವಾಗಿದೆಯಲ್ಲದೆ, ಸೀಸೆಗಳಲ್ಲಿದ್ದ ಹೆಚ್ಚುವರಿ ಡೋಸ್‌ಗಳನ್ನೂ ಬಳಸಲು ಸಾಧ್ಯವಾಗಿದೆಎಂದು ತಜ್ಞರು ಹೇಳಿದ್ದಾರೆ
1.10 ಲಕ್ಷ ಮೇ ತಿಂಗಳಲ್ಲಿ ಗರಿಷ್ಠ ಬಳಕೆಯಿಂದ ದೊರೆತ ಹೆಚ್ಚುವರಿ ಡೋಸ್‌ಗಳು
lಕೋವಿಡ್ ಲಸಿಕೆಯ ಒಂದು ಸೀಸೆಯನ್ನು ತೆರೆದ ನಂತರ, ನಾಲ್ಕು ತಾಸುಗಳಲ್ಲಿ ಅದನ್ನು ಖಾಲಿ ಮಾಡಲೇಬೇಕು. ನಾಲ್ಕು ತಾಸಿನ ನಂತರ ಅದರಲ್ಲಿ ಉಳಿದ ಡೋಸ್‌ಗಳು ವ್ಯರ್ಥವಾಗುತ್ತವೆ. ಕೇರಳದ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಅಗತ್ಯ ಸಂಖ್ಯೆಯ ಜನರು ಬಂದಿದ್ದರಷ್ಟೇ ಸೀಸೆಯನ್ನು ತೆರೆಯಲಾಗುತ್ತದೆ. ಹೀಗಾಗಿ ತೆರೆದ ಸೀಸೆಯಲ್ಲಿ ಲಸಿಕೆಯ ಡೋಸ್‌ಗಳು ಉಳಿಯದಂತೆ ನೋಡಿಕೊಳ್ಳಲಾಗುತ್ತಿದೆ
lಲಸಿಕಾ ಕೇಂದ್ರಕ್ಕೆ ಜನರನ್ನು ಕರೆತರುವಲ್ಲಿ ಆಶಾ ಕಾರ್ಯಕರ್ತೆಯರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಒಂದುಸೀಸೆಯಲ್ಲಿ ಇರುವ ಎಲ್ಲಾ ಡೋಸ್‌ಗಳನ್ನು ಬಳಸಲು ಅಗತ್ಯವಾದಷ್ಟು ಜನರು ಹಾಜರಾಗದೇ ಇದ್ದರೆ, ಕೊರತೆಯಾದಷ್ಟು ಜನರನ್ನು ಆಶಾ ಕಾರ್ಯಕರ್ತೆಯರು ಕರೆತರುತ್ತಾರೆ. ಈ ವಿಚಾರದಲ್ಲಿ ಲಸಿಕಾ ಕೇಂದ್ರದ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರ ಮಧ್ಯೆ ಅತ್ಯುತ್ತಮ ಮಟ್ಟದ ಸಮನ್ವಯ ಇದೆ
lಪ್ರತಿ ಸೀಸೆಯಲ್ಲಿ ಹೆಚ್ಚುವರಿ ಡೋಸ್‌ಗಳು ಇರುತ್ತವೆ. ರಾಜ್ಯದಲ್ಲಿ ಲಸಿಕೆ ಪೋಲಿನ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಪ್ರತಿ ಸೀಸೆಯಲ್ಲಿ 10 ಜನರಿಗೆ ಲಸಿಕೆ ನೀಡಿದ ನಂತರ, ಹೆಚ್ಚುವರಿ ಡೋಸ್ ಉಳಿದಿರುತ್ತಿತ್ತು. ಆ ಹೆಚ್ಚುವರಿ ಡೋಸ್ ಅನ್ನೂ ಜನರಿಗೆ ನೀಡಲು ಬಳಸಲಾಗಿದೆ. ಹೀಗಾಗಿ ಲಸಿಕೆಯ ಹೆಚ್ಚುವರಿ ಬಳಕೆ ಸಾಧ್ಯವಾಗಿದೆ
lಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸುವ ದಾದಿಯರಿಗೆ ಗರಿಷ್ಠಮಟ್ಟದ ತರಬೇತಿ ನೀಡಲಾಗುತ್ತದೆ. ಬಹಳ ಹಿಂದಿನಿಂದಲೂ ಇದನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ನಮ್ಮ ದಾದಿಯರು ಲಸಿಕೆಯ ಹೆಚ್ಚುವರಿ ಡೋಸ್‌ಗಳನ್ನೂ ಬಳಸುವಲ್ಲಿ ಪರಿಣತಿ ಪಡೆದಿದ್ದಾರೆ. ಈ ಹಿಂದೆ ಕೇರಳರಾಜ್ಯವು ಎಚ್1ಎನ್1 ಲಸಿಕೆ ಕಾರ್ಯಕ್ರಮದಲ್ಲೂ ಶೇ 100ರಷ್ಟುಡೋಸ್‌ಗಳನ್ನು ಬಳಸಿತ್ತು
lಲಸಿಕೆ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಜನರ ಸಹಕಾರವೂ ಗರಿಷ್ಠಮಟ್ಟದಲ್ಲಿ ಕೆಲಸ ಮಾಡಿದೆ ಎಂದು ಕೇರಳ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ‘ಲಸಿಕಾ ಕೇಂದ್ರದಲ್ಲಿ ಅಗತ್ಯದಷ್ಟು ಜನರು ಇಲ್ಲದೇ ಇದ್ದಾಗ ಸೀಸೆ ತೆರೆದರೆ ಲಸಿಕೆ ವ್ಯರ್ಥವಾಗುತ್ತದೆ. ಹೀಗಾಗಿ ಅಗತ್ಯದಷ್ಟು ಜನರು ಬರುವವರೆಗೆ ಕಾಯಬೇಕು’ ಎಂದು ಜನರಿಗೆ ತಿಳಿಹೇಳಲಾಗಿದೆ. ಈ ಬಗ್ಗೆಅರಿವು ಮೂಡಿಸುವಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಲಸಿಕಾ ಕೇಂದ್ರದ ಸಿಬ್ಬಂದಿಯ ಪಾತ್ರ ಮಹತ್ವದ್ದು. ಜತೆಗೆ ದಿನದ ಅಂತ್ಯದಲ್ಲಿ ಕೆಲವೇ ಜನರು ಇದ್ದರೆ, ಅವರನ್ನು ಮರುದಿನ ಬರಲು ಮನವೊಲಿಸಲಾಗುತ್ತಿದೆ. ಜನರೂ ಇದಕ್ಕೆಸಹಕಾರ ನೀಡುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲೂ ಇದೇ ಕಾರ್ಯತಂತ್ರ
1.61 ಲಕ್ಷ ಮೇ ತಿಂಗಳಲ್ಲಿ ಹೆಚ್ಚುವರಿ ಬಳಕೆಯಿಂದ ದೊರೆತ ಹೆಚ್ಚುವರಿ ಡೋಸ್‌ಗಳು
ಕೇರಳದಲ್ಲಿ ಅನುಸರಿಸುತ್ತಿರುವಂತಹ ಲಸಿಕಾ ಕಾರ್ಯತಂತ್ರವನ್ನೇ ಪಶ್ಚಿಮ ಬಂಗಾಳದಲ್ಲಿಯೂ ಅನುಸರಿಸಲಾಗುತ್ತಿದೆ. ಅತ್ಯುತ್ತಮ ಮಟ್ಟದ ತರಬೇತಿ ಪಡೆದಿರುವ ದಾದಿಯರನ್ನು ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ನಿಯೋಜನೆ ಮಾಡಲಾಗಿದೆ. ಲಸಿಕೆ ಪೋಲನ್ನು ತಡೆಯುವ ಬಗ್ಗೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಜನರಲ್ಲಿ ಅರಿವು ಮೂಡಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆ ಹೇಳಿದೆ.
ಒಂದು ಸೀಸೆಯಲ್ಲಿರುವ ಡೋಸ್‌ಗಳನ್ನು ಪೂರ್ಣಪ್ರಮಾಣದಲ್ಲಿ ಬಳಸುವಷ್ಟು ಜನರು ಲಸಿಕಾ ಕೇಂದ್ರದಲ್ಲಿ ಇದ್ದರಷ್ಟೇ, ಸೀಸೆಯನ್ನು ತೆರೆಯಲಾಗುತ್ತಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳದೇ ಇರುವವರ ವಿವರವನ್ನು ಆಶಾ ಕಾರ್ಯಕರ್ತೆಯರು ಸಂಗ್ರಹಿಸಿದ್ದಾರೆ. ಲಸಿಕೆ ಕಾರ್ಯಕ್ರಮದ ಬಗ್ಗೆ ಮತ್ತು ಅಗತ್ಯವಿದ್ದಾಗ ಲಸಿಕಾ ಕೇಂದ್ರಕ್ಕೆ ಬರಬೇಕಾಗುತ್ತದೆ ಎಂಬುದರ ಬಗ್ಗೆ ಜನರಿಗೆ ಆಶಾ ಕಾರ್ಯಕರ್ತೆಯರು ಮಾಹಿತಿ ನೀಡಿರುತ್ತಾರೆ. ಲಸಿಕಾ ಕೇಂದ್ರದಲ್ಲಿ ಜನರು ಕೊರತೆಯಾದಾಗ, ಅಗತ್ಯವಿರುವವಷ್ಟು ಜನರನ್ನು ಕರೆದುಕೊಂಡು ಬರುತ್ತಾರೆ. ಹೀಗಾಗಿ ಲಸಿಕೆ ವ್ಯರ್ಥವಾಗುವುದನ್ನು ತಡೆಯಲು ಸಾಧ್ಯವಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಪೋಲು ತಡೆ ಕಾರ್ಯತಂತ್ರ
ಕೋವಿಡ್ ಲಸಿಕೆ ಸಾಧ್ಯವಾದಷ್ಟು ಕಡಿಮೆ ಪೋಲಾಗುವುದು ಹಾಗೂ ಹೆಚ್ಚು ಸದ್ಬಳಕೆಯಾಗುವುದನ್ನು ಖಾತರಿಪಡಿಸಿಕೊಳ್ಳಲು ವಿವಿಧ ದೇಶಗಳು ಕೆಲವೊಂದು ನೀತಿಗಳನ್ನು ಅಳವಡಿಸಿಕೊಂಡು ಮಾದರಿ ಎನಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯ ಕ್ರಾಸ್‌ಕಂಟ್ರಿ ಅನಾಲಿಸಿಸ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಇಸ್ರೇಲ್: ಸ್ಥಳೀಯ ಪರಿಸ್ಥಿತಿ ನೋಡಿಕೊಂಡು ಬದಲಾವಣೆ ಮಾಡಿಕೊಳ್ಳುವ ನೀತಿಯನ್ನು ಇಸ್ರೇಲ್ ಅನುಸರಿಸಿದೆ. ಲಸಿಕೆ ಅಭಿಯಾನ ಆರಂಭವಾದಾಗ ಇಲ್ಲಿಯೂ ಲಸಿಕೆ ಪೋಲಾಗುತ್ತಿತ್ತು. ಲಸಿಕೆ ಹಾಕಿಸಿಕೊಳ್ಳುವ ಆದ್ಯತೆ ಗುಂಪಿನ ಜನರು ಬರದಿದ್ದರೆ, ಅವರಿಗಾಗಿ ಮೀಸಲಿಟ್ಟ ಅಂದಿನ ಲಸಿಕೆಯು ತ್ಯಾಜ್ಯಕ್ಕೆ ಸೇರುತ್ತಿತ್ತು. ಇದಕ್ಕೆ ಪರಿಹಾರ ಕಂಡುಕೊಂಡ ಅಧಿಕಾರಿಗಳು, ಅಂದಿನ ದಿನ ಆದ್ಯತೆ ಪಡೆದ ಗುಂಪಿನ ಸದಸ್ಯರು ಲಸಿಕೆ ಪಡೆಯಲು ಬಾರದಿದ್ದಲ್ಲಿ ಅವರಿಗಾಗಿ ಕಾಯುವ ಪರಿಪಾಟ ನಿಲ್ಲಿಸಲಾಯಿತು. ಇದರ ಬದಲಾಗಿ, ಮುಂದಿನ ಹಂತದಲ್ಲಿ ಆದ್ಯತೆ ಪಡೆದಿರುವ ಗುಂಪಿನ ಸದಸ್ಯರಿಗೆ ಲಸಿಕೆ ನೀಡುವ ನಿರ್ಧಾರಕ್ಕೆ ಬರಲಾಯಿತು.
ಇಸ್ರೇಲ್ ಉತ್ತಮವಾದ ಲಸಿಕೆ ವಿತರಣಾ ಜಾಲವನ್ನು ಹೊಂದಿದೆ. ಹೀಗಾಗಿ ಆದ್ಯತೆಯ ಗುಂಪುಗಳಿಗೆ ಸಾಕಾಗಿ ಉಳಿಯುವಷ್ಟು ಲಸಿಕೆಯು ಕೇಂದ್ರಗಳಿಗೆ ಪೂರೈಕೆಯಾಗುತ್ತಿದೆ. ಕೇಂದ್ರಗಳಲ್ಲಿ ಲಸಿಕೆ ಉಳಿದಿದ್ದರೆ, ಅಥವಾ ಹೆಚ್ಚುವರಿ ಪೂರೈಕೆಯಾಗಿದ್ದರೆ, ಈ ಬಗ್ಗೆ ಸಾರ್ವಜನಿಕರಿಗೆ ವಾಟ್ಸ್‌ಆ್ಯಪ್ ಗ್ರೂಪ್ ಮೂಲಕ ಮಾಹಿತಿ ನೀಡಲಾಗುತ್ತದೆ. ಜನರು ಇಂತಹ ಲಸಿಕಾ ಕೇಂದ್ರಗಳ ಬಳಿ ಬಂದು ಸಾಲಾಗಿ ನಿಲ್ಲುತ್ತಾರೆ. ಈ ಸಾಲಿನಲ್ಲಿ ನಿಂತವರ ಪೈಕಿ ವಯಸ್ಸಿನ ಆಧಾರದಲ್ಲಿ ಲಸಿಕೆ ನೀಡಲಾಗುತ್ತದೆ.
ಯುವಜನತೆ ಲಸಿಕೆ ಪಡೆಯುವ ಉತ್ಸಾಹವನ್ನು ನೋಡಿ, ಲಸಿಕೆ ಬೇಡ ಎಂದು ದೂರವುಳಿದಿದ್ದ ಹಿರಿಯ ನಾಗರಿಕರಲ್ಲಿ ಬದಲಾವಣೆ ಕಂಡುಬಂದಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ. ಹೆಚ್ಚುವರಿ ಪೂರೈಕೆಯ ಕಾರಣ, ನಗರದ ಜನರು ಹೊರವಲಯದ ಲಸಿಕಾ ಕೇಂದ್ರಗಳಲ್ಲಿ ಬಾಕಿ ಉಳಿಯುವ ಲಸಿಕೆ ಪಡೆಯಲು ಹೋಗಿಬರುವ ಪ್ರವೃತ್ತಿ ಕಂಡುಬರುತ್ತಿದೆ. ಹೀಗಾಗಿ ಪೋಲು ತಪ್ಪಿದೆ.
ಇಂಗ್ಲೆಂಡ್: ಲಸಿಕೆ ಪಡೆಯುವವರು ಹಾಗೂ ಮುಂಚೂಣಿ ಕಾರ್ಯಕರ್ತರ ಮೀಸಲು ಪಟ್ಟಿಯನ್ನು ಲಸಿಕಾ ಕೇಂದ್ರಗಳು ಹೊಂದಿರಬೇಕು ಎಂದು ರಾಷ್ಟ್ರೀಯ ಆರೋಗ್ಯ ಸೇವಾ ಇಲಾಖೆ ನಿಯಮಾವಳಿ ರೂಪಿಸಿದೆ. ಲಸಿಕೆ ವ್ಯರ್ಥವಾಗುವ ಸನ್ನಿವೇಶ ಎದುರಾದಲ್ಲಿ, ಮೀಸಲು ಪಟ್ಟಿಯಲ್ಲಿರುವ ವ್ಯಕ್ತಿಗಳು ಸೂಚನೆ ನೀಡಿದ ಕೆಲ ಹೊತ್ತಿನಲ್ಲೇ ಲಸಿಕಾ ಕೇಂದ್ರಕ್ಕೆ ಬರಬೇಕು ಎಂಬ ನಿಯಮ ರೂಪಿಸಿದೆ. ಮೀಸಲು ಪಟ್ಟಿಯಲ್ಲಿರುವ ವ್ಯಕ್ತಿಗಳು ಲಸಿಕೆ ಸ್ವೀಕರಿಸಲು ಅರ್ಹರಾಗಿರುವ ಸಮೂಹದಲ್ಲಿರಬೇಕು. ಅರ್ಹ ಗುಂಪಿನಿಂದ ಹೊರಗಿರುವ ವ್ಯಕ್ತಿಗಳಿಗೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಲಸಿಕೆ ಹಾಕಲಾಗುತ್ತದೆ. ಡೋಸ್‌ವ್ಯರ್ಥವಾಗುವುದನ್ನು ತಪ್ಪಿಸಲು ಲಸಿಕಾ ಕೇಂದ್ರಗಳು ‘ಪರಸ್ಪರ ಸಹಾಯ’ ವ್ಯವಸ್ಥೆಯಡಿಯಲ್ಲಿ ಲಸಿಕೆಯನ್ನು ಇತರ ಕೇಂದ್ರಗಳಿಗೆ ವರ್ಗಾಯಿಸಬಹುದು.
ಅಮೆರಿಕ: ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದರಿಂದ, ಅಮೆರಿಕದಲ್ಲಿ ಲಸಿಕೆ ಪೋಲು ಪ್ರಮಾಣ ಕಡಿಮೆಯಿದೆ. ಸಿ.ಡಿ.ಸಿ ಪ್ರಕಾರ, ಶೇ 0.44ರಷ್ಟು ಮಾತ್ರ ಲಸಿಕೆ ವ್ಯರ್ಥವಾಗಿದೆ. ಆದರೆ ಈ ಪ್ರಮಾಣ ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು ಎನ್ನುತ್ತಾರೆ ಬ್ರೌನ್ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ವಿಭಾಗದ ಮುಖಸ್ಥ ಆಶಿಶ್ ಝಾ. ಬಡರಾಷ್ಟ್ರಗಳು ಲಸಿಕೆಗಾಗಿ ಪರದಾಡುತ್ತಿದ್ದರೆ, ಮುಂದುವರಿದ ದೇಶಗಳಲ್ಲಿ ಲಸಿಕೆ ತಯಾರಿ ಹಾಗೂ ಪೂರೈಕೆ ಪ್ರಮಾಣ ಕ್ರಮೇಣ ಹೆಚ್ಚಾಗುತ್ತಿದೆ. ಇದು ಲಸಿಕೆ ಪೋಲಾಗಲು ಕಾರಣವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಚಿಲಿ: ಇಲ್ಲಿ ರಷ್ಯಾ ಮತ್ತು ಚೀನಾದ ಲಸಿಕೆಗಳನ್ನು ಬಳಸಲಾಗುತ್ತಿದೆ. ಪ್ರತೀ ದಿನ ಬಾಕಿ ಉಳಿಯುವ ಲಸಿಕೆಗಳನ್ನು ಆದ್ಯತೆರಹಿತ ಗುಂಪುಗಳಿಗೆ ವಿತರಿಸಿ, ಪೋಲು ತಡೆಯಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.