ಕೃಷಿಭೂಮಿಯನ್ನೂ ಒಂದು ಆರ್ಥಿಕ ಸರಕು ಎಂದು ನಗರದ ಭಾಷೆಯಲ್ಲಿ ಅರ್ಥೈಸುವ ಮೂಲಕ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವು ತುಂಬಾ ಕ್ರೂರತನದ ತಪ್ಪನ್ನು ಮಾಡಿದೆ. ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ಈ ಸರ್ಕಾರ ಮಾಡಲು ಹೊರಟಿರುವ ತಿದ್ದುಪಡಿಗಳು ಪ್ರತಿ ಯೂನಿಟ್ ಭೂಮಿಯಿಂದ ಸಿಗುವ ಆದಾಯದ ಪ್ರಮಾಣವನ್ನೇನೋ ಹೆಚ್ಚಿಸುವಂತಿವೆ.
ತಿದ್ದುಪಡಿಯ ಪ್ರಸ್ತಾವದ ಪ್ರಕಾರ, ಐದು ಸದಸ್ಯರಿಗಿಂತ ಹೆಚ್ಚಿನ ಜನರಿರುವ ಪ್ರತೀ ಕುಟುಂಬವು 216 ಎಕರೆಯಷ್ಟು ನೀರಾವರಿಯೇತರ ಕೃಷಿಭೂಮಿಯನ್ನು ಖರೀದಿಸಲು ಅವಕಾಶವಾಗಲಿದೆ. ಇದರಿಂದ ಭಾರಿ ಪ್ರಮಾಣದ ಪ್ರಯೋಜನ ಆಗಲಿದೆ ಎಂದು ಸರ್ಕಾರ ಆಶಿಸಿದೆ. ಒಂದುವೇಳೆ ಹಾಲಿ ಕೃಷಿಕರಿಗೆ ಅಂತಹ ದೊಡ್ಡ ಪ್ರಮಾಣದ ಆಧುನಿಕ ಕೃಷಿಯನ್ನು ಮಾಡುವುದು ಅಸಾಧ್ಯವಾದರೆ, ಅಂಥವರು ತಮ್ಮ ಭೂಮಿಯನ್ನು ಕೃಷಿಕರಲ್ಲದ ಇತರರಿಗೆ ಮಾರಾಟ ಮಾಡಿದರೆ ಮುಗಿಯಿತು – ಇದೇ ಸರ್ಕಾರದ ಆಶಯ.
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ ತುಳಿದಿದ್ದ ಹಾದಿಯಲ್ಲೇ ಕರ್ನಾಟಕ ಸರ್ಕಾರವೂ ಈಗ ಹೆಜ್ಜೆ ಹಾಕಿದೆ. ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ (ನಿಯಾಸ್) ಸಂಶೋಧಕರು ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿ ನಡೆಸಿದ ಅಧ್ಯಯನವು ಒಂದು ಎಚ್ಚರಿಕೆಯ ಕಥೆಯನ್ನು ಹೇಳುತ್ತದೆ.
ಸರ್ಕಾರದ ಮಾಜಿ ಅಧಿಕಾರಿಯೊಬ್ಬ –ಆತ ಈ ಹಳ್ಳಿಗೆ ಸಂಬಂಧಪಟ್ಟವನೇ ಅಲ್ಲ– ಆರ್ಥಿಕವಾಗಿ ದಿವಾಳಿ ಎದ್ದ ಹಲವು ಸಣ್ಣ ಹಿಡುವಳಿದಾರರಿಂದ ಭೂಮಿ ಖರೀದಿಸಿ, 150 ಎಕರೆಯಷ್ಟು ವಿಶಾಲವಾದ ಕಿತ್ತಳೆ ತೋಟವನ್ನು ನಿರ್ಮಾಣ ಮಾಡಿದ. ಸಾಮಾನ್ಯ ಸರ್ಕಾರಿ ಅಧಿಕಾರಿಯೊಬ್ಬ ಇಷ್ಟೊಂದು ದೊಡ್ಡ ಮೊತ್ತವನ್ನು ಹೇಗೆ ಹೂಡಿಕೆ ಮಾಡಿದ ಎನ್ನುವುದು ಸ್ಪಷ್ಟವಿಲ್ಲ. ಆದರೆ, ಆ ಹಣ ಹೇಗೆ ಬಂದಿರಬಹುದೆಂದು ನಾವು ಊಹಿಸಬಹುದು. ತನ್ನ ತೋಟಕ್ಕೆ ನೀರುಣಿಸಲು ಬೃಹತ್ ಗಾತ್ರದ ಕೆರೆ ನಿರ್ಮಿಸಿದ ಆತ, ಆ ಕೆರೆಗೆ ನೀರು ತರಲು ಹತ್ತಿರದ ಡ್ಯಾಮ್‌ನ ಕಾಲುವೆಯ ದಿಕ್ಕನ್ನೇ ಬದಲಿಸಿದ.
ಅರ್ಥಶಾಸ್ತ್ರದ ಪರಿಭಾಷೆಯಲ್ಲಿ ಹೇಳುವುದಾ ದರೆ ಈ ಕೃಷಿ ತುಂಬಾ ಯಶಸ್ವಿಯಾಗಿದೆ ಮತ್ತು ಕಿತ್ತಳೆ ರಫ್ತು ಮಾಡುವುದರಿಂದ ಅದಕ್ಕೆ ಕಾರ್ಪೊರೇಟ್ ಸ್ವರೂಪವೂ ದಕ್ಕಿದೆ. ಆದರೆ, ಈ ರೂಪಾಂತರದ ಒಡಲಾಳದಲ್ಲಿ ಎಂತಹ ನೋವು ಅಡಗಿದೆ ಎಂಬುದನ್ನು ನೋಡಿ. ಅದೇ ಡ್ಯಾಮ್‌ನಿಂದ ನೀರು ಪಡೆಯಬೇಕಿದ್ದ ಬೇರೆ ಕೃಷಿಕರಿಗೆ ನೀರು ಪಡೆಯುವುದು ಸಾಧ್ಯವಾಗದೇ ಕೃಷಿ ಮಾಡುವುದೇ ಕಠಿಣವಾಯಿತು. ಸಣ್ಣ ಹಿಡುವಳಿದಾರರಂತೂ ಸಂಕಷ್ಟ ತಾಳಲಾರದೆ ಕೃಷಿ ಕಾರ್ಮಿಕರಾಗಬೇಕಾಯಿತು.
ಮಧ್ಯಮ ಗಾತ್ರದ ಕೃಷಿಕರು ಆರ್ಥಿಕ ಶ್ರೇಣಿಯಲ್ಲಿ ಮತ್ತಷ್ಟು ಕುಸಿತ ಕಂಡರು. ತಮ್ಮ ಜಮೀನುಗಳನ್ನು ಅಭಿವೃದ್ಧಿಪಡಿಸಲು ದೊಡ್ಡ ಪ್ರಮಾಣದ ಸಾಲ ಮಾಡಿದ ಅವರು, ಇನ್ನಷ್ಟು ತೊಂದರೆಯ ಸುಳಿಯೊಳಗೆ ಸಿಲುಕಿದರು. ಒಂದೆಡೆ ಜಮೀನಿಗೆ ಸುರಿದ ಹಣ ಹಿಂದಿರುಗದೆ, ಇನ್ನೊಂದೆಡೆ ಸಾಲದ ಹೊರೆಯೂ ಹೆಚ್ಚಾಗಿದ್ದರಿಂದ ಹಲವರು ಆತ್ಮಹತ್ಯೆಗೆ ಶರಣಾದರು. ಇದನ್ನು ಎಲ್ಲಿಯದೋ ಒಂದು ಸಣ್ಣ ಉದಾಹರಣೆಯೆಂದು ಲಘುವಾಗಿ ತೆಗೆದುಕೊಳ್ಳಬೇಡಿ. ದೇಶದಲ್ಲಿಯೇ ಅತ್ಯಧಿಕ ರೈತರ ಆತ್ಮಹತ್ಯೆಗಳನ್ನು ಕಂಡ ಮಹಾರಾಷ್ಟ್ರದ ಕೃಷಿಸ್ಥಿತಿಯ ಪ್ರತಿಬಿಂಬ ಇದು.
ರೈತರ ಆತ್ಮಹತ್ಯೆಗಳನ್ನು ಕಡೆಗಣಿಸಬಹುದು ಎಂದುಕರ್ನಾಟಕ ಸರ್ಕಾರವು ನಂಬಿರುವ ಸಾಧ್ಯತೆ ಇದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ಸದಸ್ಯರು ದೊಡ್ಡ ಸಂಖ್ಯೆಯ ಮತದಾರರಲ್ಲ. ಆದರೆ, ತಿದ್ದುಪಡಿಯ ಪರಿಣಾಮ ಹಳ್ಳಿಯ ವ್ಯಾಪ್ತಿಯನ್ನೂ ಮೀರಿದ್ದು. ಬದುಕಿನ ಮಾರ್ಗವನ್ನು ಹುಡುಕಿಕೊಂಡು ಕೃಷಿಯಿಂದಲೂ ಹಳ್ಳಿಯಿಂದಲೂ ಹೊರಬೀಳುವ ಕೃಷಿಕರು, ತಮ್ಮ ಭೂಮಿಯನ್ನು ಒಂದು ‘ಸುರಕ್ಷಾ ಜಾಲ’ವನ್ನಾಗಿ ಇಟ್ಟುಕೊಂಡಿರುತ್ತಾರೆ. ನಗರ ಪ್ರದೇಶಗಳಲ್ಲಿ ಅವರಿಗೆ ಕೆಲಸ ಸಿಕ್ಕರೂ ಆರ್ಥಿಕ ಅನಿಶ್ಚಿತತೆ, ಸಾಮಾಜಿಕ ಬಿಕ್ಕಟ್ಟು ಅಥವಾ ಸಾಂಕ್ರಾಮಿಕ ರೋಗಗಳಂತಹ ಭೀತಿಯನ್ನು ಎದುರಿಸುತ್ತಲೇ ಇರುತ್ತಾರೆ. ಅಂತಹ ಸಂದರ್ಭದಲ್ಲಿ ತಮ್ಮ ಕೃಷಿಭೂಮಿಗೆ ಮರಳುವ ಅವರು, ಅದರಿಂದ ಸಾಧ್ಯವಾದಷ್ಟು ಜೀವನದ ಭದ್ರತೆಯನ್ನು ಪಡೆಯುತ್ತಾರೆ.
ರೈತನ ಸಾಲದ ಹೊರೆ ವಿಪರೀತ ಎನಿಸುವಷ್ಟು ಹೆಚ್ಚಾದಾಗ ‘ಸುರಕ್ಷಾ ಜಾಲ’ವು ಹರಿದು ಹೋಗುತ್ತದೆ. ಸದ್ಯದ ಕೊರೊನಾ ಬಿಕ್ಕಟ್ಟು ಸಹ ಅಂತಹದ್ದೇ ಸನ್ನಿವೇಶವನ್ನು ಸೃಷ್ಟಿಸಿದೆ. ಲಾಕ್‌ಡೌನ್, ಕಾರ್ಮಿಕರ ಜೀವನೋಪಾಯವನ್ನು ಮಾತ್ರ ಕಿತ್ತುಕೊಂಡಿಲ್ಲ; ಸಾಲದ ಹೊರೆಯನ್ನೂ ಹೊರೆಸಿದೆ. ಸಾಲ ತೀರಿಸುವ ಒತ್ತಡ ಹೆಚ್ಚಾದಂತೆ ಕಾರ್ಮಿಕರು ತಮ್ಮ ಆಸ್ತಿಗಳನ್ನೇ ಮಾರಾಟ ಮಾಡುವಂತಹ ಇಕ್ಕಟ್ಟಿಗೆ ಸಿಲುಕುತ್ತಾರೆ. ಆರ್ಥಿಕ ಬಿಕ್ಕಟ್ಟಿನಿಂದ ನಲುಗಿರುವ ರೈತರು ಭೂಮಿ ಮಾರಾಟಕ್ಕೆ ಮುಂದಾಗಲಿದ್ದು, ಹೊರಗಿನವರು ಅದರ ಪ್ರಯೋಜನ ಪಡೆಯಲು ಭೂಸುಧಾರಣಾ ಕಾಯ್ದೆಯ ತಿದ್ದುಪಡಿಯು ನೆರವಾಗುತ್ತದೆ. ಒಂದೆಡೆ ಸಾಂಪ್ರದಾಯಿಕ ವೃತ್ತಿಗಳನ್ನು ಕಳೆದುಕೊಂಡಿರುವ ರೈತರು, ಇನ್ನೊಂದೆಡೆ ‘ಸುರಕ್ಷಾ ಜಾಲ’ವನ್ನೂ ಕಳೆದು ಕೊಳ್ಳುವುದರಿಂದ ಸಾಮಾಜಿಕ ವಿಪತ್ತಿಗೆ ದಾರಿಯಾಗಲಿದೆ.
ಕೃಷಿಭೂಮಿಯು ಕೇವಲ ಆರ್ಥಿಕ ಸರಕಲ್ಲ ಎಂದು ಗುರುತಿಸುವುದು ಸದ್ಯ ನಮ್ಮ ಮುಂದಿರುವ ಕಾರ್ಯಸಾಧ್ಯ ಆಯ್ಕೆ. ಕೃಷಿಭೂಮಿಯು ಕೇವಲ ಆರ್ಥಿಕ ಸುರಕ್ಷಾ ಜಾಲವಲ್ಲ; ಬದಲಾಗಿ ಮದುವೆಯಾಗಬೇಕಾದ ಹೆಣ್ಣುಮಕ್ಕಳಿರುವ ಕುಟುಂಬಗಳಿಗೆ ಸಾಮಾಜಿಕ ಸ್ಥಾನಮಾನವನ್ನೂ ಅದು ನೀಡುತ್ತದೆ. ಸ್ವಾಮಿತ್ವದ ವರ್ಗಾವಣೆಯನ್ನೇ ಮಾಡುವಂತಹ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಮಾಡುವುದಕ್ಕಿಂತ ಅರ್ಥವ್ಯವಸ್ಥೆಯ ಹರವು ಹಿಗ್ಗಿಸುವ ಬೇರೆ ದಾರಿಗಳ ಕುರಿತು ಆಲೋಚಿಸಬೇಕು. ಭೂಬಾಡಿಗೆ ನೀಡುವ ಇಲ್ಲವೆ ಕೃಷಿ ಉತ್ಪನ್ನಗಳನ್ನು ಪಾಲು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಳ್ಳುವ ಮೂಲಕ ಕೃಷಿ ಚಟುವಟಿಕೆಗಳನ್ನು ನಡೆಸುವ ಏಜೆನ್ಸಿಗಳಿವೆ. ಇಂತಹ ಏಜೆನ್ಸಿಗಳು ಹಲವು ಕೃಷಿಕರ ಭೂಮಿಯನ್ನು ಒಪ್ಪಂದದ ಆಧಾರದ ಮೇಲೆ ಪಡೆಯುವುದರಿಂದ ಅವರಿಗೂ ಲಾಭವಾಗಲಿದೆ. ಅದೇ ಕಾಲಕ್ಕೆ ಕೃಷಿಕ, ತನ್ನ ಭೂಮಿಯ ಒಡೆಯನಾಗಿ ಮುಂದುವರಿಯಲಿದ್ದಾನೆ.
ಕೃಷಿಯ ನಾನಾ ಆಯಾಮಗಳನ್ನು ಗುರುತಿಸು ವಂತಹ ವಿಧಾನ ಇದಾಗಿದೆ. ವಿಶ್ವ ವಾಣಿಜ್ಯ ಸಂಘಟನೆಯ ಸಭೆಗಳಲ್ಲಿ ಫ್ರಾನ್ಸ್ ಸಹ ಈ ವಾದವನ್ನು ಪ್ರಬಲವಾಗಿ ಮಂಡಿಸಿದೆ. ಕೃಷಿಯ ಬಹುಮುಖಿ ಆಯಾಮಗಳ ಸುತ್ತ ಅರ್ಥವ್ಯವಸ್ಥೆಯನ್ನು ಕಟ್ಟುವ ಪ್ರಯತ್ನವದು. ಕಡಿಮೆ ಕ್ರೌರ್ಯದ ಹಲವು ದಾರಿಗಳು ಯಡಿಯೂರಪ್ಪ ಅವರ ಸರ್ಕಾರದ ಮುಂದಿದ್ದವು. ಆದರೆ, ‘ತೋಳ’ಗಳ ಮುಂದೆ ರೈತರನ್ನು ಎಸೆಯುವ ಸರಳ ಹಾದಿಯನ್ನೇ ಅದು ಆರಿಸಿಕೊಂಡಿದೆ.
ಲೇಖಕ: ಬೆಂಗಳೂರಿನ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ
**
ಕಾನೂನಿನಲ್ಲಿ ಏನು ಬದಲಾಗಲಿದೆ?
ರಾಜ್ಯ ಸರ್ಕಾರವು ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಹಲವು ಸೆಕ್ಷನ್‌ಗಳನ್ನು ತೆಗೆದುಹಾಕಲು ನಿರ್ಧರಿಸಿದೆ. ಈ ಸೆಕ್ಷನ್‌ಗಳೆಲ್ಲ ಕೃಷಿಕರಲ್ಲದವರು ಭೂಮಿ ಖರೀದಿಗೆ ಆಸ್ಪದ ನೀಡುತ್ತಿರಲಿಲ್ಲ.
ಕಾಯ್ದೆಯಲ್ಲಿದ್ದ 79 ಎ, ಬಿ ಹಾಗೂ 80ನೇ ಸೆಕ್ಷನ್‌ಗಳು ಕೃಷಿ ಭೂಮಿ ಖರೀದಿಗೆ ಕೆಲವು ಷರತ್ತುಗಳನ್ನು ಒಡ್ಡಿದ್ದವು. 79 ಎ– ₹25 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ವರಮಾನ ಇರುವವರು ಕೃಷಿ ಭೂಮಿ ಖರೀದಿಸುವಂತಿರಲಿಲ್ಲ. 79 ಬಿ– ರೈತರಲ್ಲದವರು ಕೃಷಿ ಭೂಮಿ ಖರೀದಿಸಲು ನಿಷೇಧವಿತ್ತು. 79 ಸಿ– ಖರೀದಿಯನ್ನು ಘೋಷಿಸದೇ ಇದ್ದರೆ ದಂಡ ವಿಧಿಸಲು ಅವಕಾಶವಿತ್ತು. 80– ಕೃಷಿಕರಲ್ಲದವರಿಗೆ ಕೃಷಿ ಭೂಮಿಯನ್ನು ವರ್ಗಾವಣೆ ಮಾಡುವುದಕ್ಕೆ ನಿಷೇಧ ಹಾಗೂ 63– ಸೆಕ್ಷನ್‌ನಲ್ಲಿ ಭೂ ಒಡೆತನಕ್ಕೆ ಮಿತಿ ವಿಧಿಸಲಾಗಿತ್ತು. ಇವುಗಳನ್ನು ಉಲ್ಲಂಘಿಸಿದರೆ ಅಥವಾ ಮಿತಿ ಮೀರಿ ಭೂಮಿ ಖರೀದಿ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿತ್ತು. ಈ ಎಲ್ಲ ಸೆಕ್ಷನ್ ರದ್ದುಪಡಿಸಲು ನಿರ್ಧರಿಸಲಾಗಿದೆ.
ಯುನಿಟ್ ಲೆಕ್ಕಾಚಾರ ಹೇಗೆ
ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬಕ್ಕೆ ಜಮೀನಿನ ಗರಿಷ್ಠ ಮಿತಿ ವಿಸ್ತೀರ್ಣ 10 ಯುನಿಟ್‌ನಿಂದ 20 ಯುನಿಟ್‌ಗೆ ಹೆಚ್ಚಿಸಲು ಮತ್ತು 5ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ ಭೂಮಿಯ ಮಿತಿಯನ್ನು 20 ಯುನಿಟ್‌ನಿಂದ 40 ಯುನಿಟ್‌ಗೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ.
ಭೂಮಿಯ ಸಾರ ಆಧರಿಸಿ ಯುನಿಟ್ ಅನ್ನು ಬೇರೆ ಬೇರೆ ರೀತಿ ವರ್ಗೀಕರಿಸಲಾಗಿದೆ.
10 ಯುನಿಟ್ ಎಂದರೆ
* ಬಾಗಾಯ್ತು(ತೋಟ);10 ಎಕರೆಯಿಂದ 13 ಎಕರೆವರೆಗೆ
* ತರಿ(ಹೊಲ–ಗದ್ದೆ);12 ಎಕರೆಯಿಂದ 20 ಎಕರೆವರೆಗೆ
* ಖುಷ್ಕಿ(ಒಣಭೂಮಿ) 54 ಎಕರೆ
***
ವಿವಿಧ ರಾಜ್ಯಗಳಲ್ಲಿ ಹೇಗಿವೆ ಭೂಮಿ ಖರೀದಿ ಕಾಯ್ದೆಗಳು
ಭೂಸುಧಾರಣೆ ಕಾಯ್ದೆಗೆ ಬೇರೆ ರಾಜ್ಯಗಳಲ್ಲೂ ಬದಲಾವಣೆ ತರಲಾಗಿದೆಯೇ? ‘ಪ್ರಜಾವಾಣಿ’ ಈ ಪ್ರಶ್ನೆ ಮುಂದಿಟ್ಟುಕೊಂಡು ಕೆಲವು ರಾಜ್ಯಗಳ ಸ್ಥಿತಿಯನ್ನು ಪರಿಶೀಲಿಸಿತು. ಬಹುತೇಕ ರಾಜ್ಯಗಳು ಕಾಯ್ದೆಗೆ ತಿದ್ದುಪಡಿ ಮಾಡಿವೆ. ಕೆಲವು ರಾಜ್ಯಗಳು ಮಾಡಿರುವ ಬದಲಾವಣೆಯ ಸ್ವರೂಪ ಹೀಗಿದೆ....
ಕೇರಳ
ಭೂಮಾಲೀಕತ್ವದ ಬಗ್ಗೆ ಗಂಭೀರವಾಗಿ ಮತ್ತು ಪಾರದರ್ಶಕವಾಗಿ ಚಿಂತನೆ ನಡೆಸಿದ ಮೊದಲ ರಾಜ್ಯ ಕೇರಳ. ಚುನಾಯಿತ ಸರ್ಕಾರ ರಚನೆಯಾಗುವುದಕ್ಕೂ ಮೊದಲೇ ಕೇರಳದಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಸರ್ಕಾರ ರಚನೆಯಾದ ನಂತರ, 1959ರಲ್ಲಿ ಆ ಕಾಯ್ದೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಾಗಿತ್ತು. ‘ಜಮೀನ್ದಾರ’ ವ್ಯವಸ್ಥೆಯನ್ನು ನಿಯಂತ್ರಿಸುವ ಉದ್ದೇಶವನ್ನೂ ಈ ಕಾಯ್ದೆ ಹೊಂದಿತ್ತು.
ನಂತರದ ದಿನಗಳಲ್ಲಿ ತಿದ್ದುಪಡಿಗಳ ಮೂಲಕ ಕಾಯ್ದೆಯನ್ನು ಸ್ವಲ್ಪ ಸಡಿಲಗೊಳಿಸಲಾಯಿತು. ಎಂಟು ವರ್ಷಗಳ ಹಿಂದೆ ಮಾಡಿರುವ ತಿದ್ದುಪಡಿಯಿಂದಾಗಿ, ಈಗ ಕೇರಳದಲ್ಲಿ ಕೃಷಿಕರಲ್ಲದವರೂ ಕೃಷಿ ಭೂಮಿಯನ್ನು ಖರೀದಿಸಬಹುದಾಗಿದೆ. ಒಬ್ಬನೇ ವ್ಯಕ್ತಿ ಇರುವ ಕುಟುಂಬವು ನೀರಾವರಿಯಾದರೆ 6 ಎಕರೆ, ನೀರಾವರಿಯೇತರ ಭೂಮಿಯಾದರೆ 7.5 ಎಕರೆ, ಗರಿಷ್ಠ ಐದು ಜನರಿರುವ ಕುಟುಂಬವು ನೀರಾವರಿಯಾದರೆ 10 ಎಕರೆ, ನೀರಾವರಿಯೇತರ ಭೂಮಿಯಾದರೆ 15 ಎಕರೆ ಅಥವಾ ಐದಕ್ಕೂ ಹೆಚ್ಚು ಜನರಿರುವ ಕೂಡು ಕುಟುಂಬಗಳು ನೀರಾವರಿಯಾದರೆ 10 ಎಕರೆ ಮತ್ತು ನೀರಾವರಿಯೇತರ ಭೂಮಿಯಾದರೆ 20 ಎಕರೆಯನ್ನು ಖರೀದಿಸಬಹುದು.
**
ಬಿಹಾರ
ಕೃಷಿ ಭೂಮಿಯ ಮೇಲೆ ಹೂಡಿಕೆ ಮಾಡಲು ಬಯಸುವ ಯಾರು ಬೇಕಾದರೂ ಬಿಹಾರದಲ್ಲಿ ಭೂಮಿ ಖರೀದಿಸಬಹುದು. ನೀರಾವರಿ ಭೂಮಿಯಾದರೆ ಕುಟುಂಬವೊಂದು ಗರಿಷ್ಠ 15 ಎಕರೆ, ಇತರ ಭೂಮಿಯಾದರೆ ಗರಿಷ್ಠ 45 ಎಕರೆಯವರೆಗೂ ಖರೀದಿ ಮಾಡಬಹುದಾಗಿದೆ. ಭೂಮಿ ಮಾರಲು ಬಯಸುವವರು ಮೂರು ತಿಂಗಳು ಮುಂಚಿತವಾಗಿ ಪಕ್ಕದ ಭೂಮಾಲೀಕರಿಗೆ ಆ ಬಗ್ಗೆ ಮಾಹಿತಿ ನೀಡಬೇಕು. ಈ ಅವಧಿಯಲ್ಲಿ ಅವರು ಭೂಮಿಯನ್ನು ಖರೀದಿಸಲು ಮುಂದಾಗದಿದ್ದರೆ ಬೇರೆ ಯಾರಿಗೆ ಬೇಕಾದರೂ ಮಾರಾಟ ಮಾಡಬಹುದು.
**
ಮಹಾರಾಷ್ಟ್ರ
ಮಹಾರಾಷ್ಟ್ರ ಕೃಷಿ ಭೂಮಿಗಳ (ಹಿಡುವಳಿಯ ಮಿತಿ) ಕಾಯ್ದೆ 1961ಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರವು ಹಲವು ಬದಲಾವಣೆಗಳನ್ನು ತಂದಿದೆ. ದೇಶದ ಯಾವುದೇ ಭಾಗದಲ್ಲಿ ಕೃಷಿಕರಾದವರು ಅಲ್ಲಿ ಭೂಮಿಯನ್ನು ಖರೀದಿಸಲು ಅವಕಾಶವಿತ್ತು. ಆದರೆ, ಕೃಷಿಕರಲ್ಲದವರು ಭೂಮಿಯನ್ನು ಖರೀದಿಸಲು ಆಸ್ಪದವಿರಲಿಲ್ಲ. ಕಾಯ್ದೆಗೆ ತಂದ ತಿದ್ದುಪಡಿಯಿಂದಾಗಿ ಕೃಷಿಕರಲ್ಲದವರೂ ಅಲ್ಲೀಗ ಕೃಷಿಭೂಮಿಯನ್ನು ಖರೀದಿ ಮಾಡಬಹುದು. ಅಲ್ಲದೆ, ಕೃಷಿಭೂಮಿಯನ್ನು ಹೊಂದಲು ಈ ಹಿಂದಿದ್ದ ಗರಿಷ್ಠ 54 ಎಕರೆಯ ಮಿತಿಯನ್ನೂ ಈಗ ತೆಗೆದು ಹಾಕಲಾಗಿದೆ. ಕಾಯ್ದೆಗೆ ಮಾಡಲಾದ ಈ ತಿದ್ದುಪಡಿ ವಿರುದ್ಧ ಆ ರಾಜ್ಯದಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು.
**
ತಮಿಳುನಾಡು
ರೈತರೇ ಕೃಷಿ ಭೂಮಿಯನ್ನು ಖರೀದಿಸಬೇಕೆಂಬ ನಿಯಮ ತಮಿಳುನಾಡಿನಲ್ಲಿ ಈಗ ಇಲ್ಲ. ಆಸಕ್ತರು ಭೂಮಿ ಖರೀದಿಸಬಹುದು. ಆದರೆ ಯಾವ ಉದ್ದೇಶಕ್ಕೆ ಖರೀದಿಸಲಾಗುತ್ತಿದೆ ಎಂಬುದರ ಮೇಲೆ ನಿಬಂಧನೆಗಳನ್ನು ವಿಧಿಸಲಾಗುತ್ತದೆ. ಕೃಷಿ ಉದ್ದೇಶಕ್ಕಾಗಿಯೇ ಭೂಮಿಯನ್ನು ಖರೀದಿಸುವುದಾದರೆ, ಐದು ಮಂದಿ ಸದಸ್ಯರಿರುವ ಒಂದು ಕುಟುಂಬವು ಗರಿಷ್ಠ 15 ಎಕರೆ ಜಮೀನು ಖರೀದಿಸಬಹುದು. ಕುಟುಂಬದಲ್ಲಿ ಅದಕ್ಕೂ ಹೆಚ್ಚು ಸದಸ್ಯರಿದ್ದರೆ, ಪ್ರತಿ ಸದಸ್ಯನಿಗೆ ತಲಾ 5 ಎಕರೆಯಂತೆ ಹೆಚ್ಚುವರಿ ಭೂಮಿ ಖರೀದಿಗೆ ಅವಕಾಶವಿದೆ. ಆದರೆ ಕುಟುಂಬವೊಂದರ ಗರಿಷ್ಠ ಕೃಷಿ ಭೂಮಿಯ ಪ್ರಮಾಣ 30 ಎಕರೆ ಮೀರುವಂತಿಲ್ಲ.
**
ಆಂಧ್ರಪ್ರದೇಶ
ಆಂಧ್ರಪ್ರದೇಶದಲ್ಲಿ ಯಾರು ಬೇಕಾದರೂ ಕೃಷಿ ಜಮೀನು ಖರೀದಿಸಲು ಅವಕಾಶವಿದೆ. ಆದರೆ, ಪರಿಶಿಷ್ಟ ಪಂಗಡದ ಜನರು ಹೊಂದಿರುವ ಜಮೀನಿನ ಮಾಲೀಕತ್ವ ಇತರ ಸಮುದಾಯದವರಿಗೆ ವರ್ಗವಾಗುವುದಿಲ್ಲ. ಪರಿಶಿಷ್ಟ ಪಂಗಡದ ಜನರು ಹೊಂದಿರುವ ಜಮೀನನ್ನು ಅದೇ ಸಮುದಾಯದ ಸಹಕಾರ ಸೊಸೈಟಿಗಳು ಮತ್ತು ಅದರ ಸದಸ್ಯರು (ಅದೇ ಸಮುದಾಯದವರು ಆಗಿರಬೇಕು) ಖರೀದಿಸಬಹುದು. ಒಂದು ಕುಟುಂಬ ಹೊಂದಿರಬಹುದಾದ ಗರಿಷ್ಠ ಜಮೀನಿನ ಮೇಲೆ ಮಿತಿ ಇದೆ. ಗಂಡ–ಹೆಂಡತಿ ಮತ್ತು ಮೂವರು ಮಕ್ಕಳು ಇರುವ ಕುಟುಂಬವು, ನೀರಾವರಿಯಾದರೆ ಗರಿಷ್ಠ 10 ಎಕರೆ ಜಮೀನನ್ನು ಹೊಂದಬಹುದಾಗಿದೆ. ನೀರಾವರಿಯಲ್ಲದ ಭೂಮಿಯಾಗಿದ್ದರೆ ಗರಿಷ್ಠ 54 ಎಕರೆ ಹೊಂದಲು ಅವಕಾಶವಿದೆ. ರಾಜ್ಯ ಸರ್ಕಾರವು ಕೃಷಿ ಜಮೀನನ್ನು ಹಲವು ಕ್ಯಾಟಗೆರಿಗಳಾಗಿ ವಿಂಗಡಿಸಿದೆ. ಇದರಲ್ಲಿ 23 ಕ್ಯಾಟಗೆರಿಯ ಜಮೀನುಗಳನ್ನು ಹೊಂದಲು ಗರಿಷ್ಠ ಮಿತಿ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.