ADVERTISEMENT

Explainer: ಸ್ವಾತಂತ್ರ್ಯ ದಿನ ಮನೆಯಲ್ಲಿ ಹಾರಿಸಿದ ಧ್ವಜವನ್ನು ಮಡಚಿಡುವುದು ಹೇಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಆಗಸ್ಟ್ 2022, 10:27 IST
Last Updated 16 ಆಗಸ್ಟ್ 2022, 10:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮಕ್ಕೆ ತೆರೆ ಬಿದ್ದಿದೆ. ‘ಹರ್ ಘರ್ ತಿರಂಗಾ’ ಅಭಿಯಾನದಡಿ ಈ ವರ್ಷ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಆರೋಹಣ ಮಾಡಲಾಗಿದೆ. ಮನೆ–ಮನೆಗಳಲ್ಲಿ ಹಾರಿಸಿದ ರಾಷ್ಟ್ರಧ್ವಜವನ್ನು ಗೌರವಯುತವಾಗಿ ಮಡಚಿ ಸಂರಕ್ಷಿಸಿಡಬೇಕಾದದ್ದೂ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಮನೆಗಳಲ್ಲಿ ಮಾತ್ರವೆಂದಲ್ಲ, ವಿವಿಧ ಸಂಘಟನೆಗಳು, ಸರ್ಕಾರಿ ಕಚೇರಿಗಳು ಹಾಗೂ ಇತರೆಡೆಗಳಲ್ಲಿ ಬಳಸಿದ ರಾಷ್ಟ್ರ ಧ್ವಜವನ್ನೂ ಅವಮಾನವಾಗದಂತೆ ಸಂರಕ್ಷಿಸಿ ಇಡಬೇಕು.

ರಾಷ್ಟ್ರಧ್ವಜವನ್ನು ಜೋಪಾನವಾಗಿ ಮಡಚಿ ಇಟ್ಟುಕೊಳ್ಳುವುದು ಹೇಗೆ? ಭಾರತೀಯ ಧ್ವಜ ಸಂಹಿತೆ ಏನು ಹೇಳುತ್ತದೆ? ಇಲ್ಲಿದೆ ಮಾಹಿತಿ;

ಸರ್ಕಾರದ ಶಾಸನಬದ್ಧ ಸೂಚನೆಗಳ ಹೊರತಾಗಿ, ‘ಲಾಂಛನಗಳು ಮತ್ತು ಹೆಸರುಗಳ (ಅಸಮರ್ಪಕ ಬಳಕೆಯ ತಡೆಗಟ್ಟುವಿಕೆ) ಕಾಯ್ದೆ, 1950’, ‘ರಾಷ್ಟ್ರೀಯ ಗೌರವಕ್ಕೆ ಧಕ್ಕೆ ತಡೆ ಕಾಯ್ದೆ 1971’ ಅಡಿಯಲ್ಲಿ ರಾಷ್ಟ್ರಧ್ವಜವನ್ನು ನಿರ್ವಹಿಸಲಾಗುತ್ತಿತ್ತು. 2002ರ ಜನವರಿ 26ರಿಂದ ಭಾರತೀಯ ಧ್ವಜ ಸಂಹಿತೆ ಅಸ್ತಿತ್ವಕ್ಕೆ ಬಂದಿದೆ.

ರಾಷ್ಟ್ರಧ್ವಜವನ್ನು ಹೀಗೆ ಮಡಚಿ...:

ಚಿತ್ರ ಕೃಪೆ – ಕೇಂದ್ರ ಸಂಸ್ಕೃತಿ ಸಚಿವಾಲಯದ ಟ್ವೀಟ್

ರಾಷ್ಟ್ರಧ್ವಜವನ್ನು ಹೇಗೆ ಮಡಚಿ ಇಡಬೇಕು ಎಂಬ ಬಗ್ಗೆ ಕೇಂದ್ರ ಸಂಸ್ಕೃತಿ ಸಚಿವಾಲಯ ಈ ತಿಂಗಳ ಆರಂಭದಲ್ಲೇ ವಿವರವಾದ ಸೂಚನೆ ನೀಡಿದೆ.

* ಧ್ವಜವನ್ನು ಹಾರಿಜಾಂಟಲ್ ಅಥವಾ ಅಡ್ಡವಾಗಿ ಇಟ್ಟುಕೊಳ್ಳಬೇಕು.

* ಧ್ವಜದಲ್ಲಿರುವ ಕೇಸರಿ ಮತ್ತು ಹಸಿರು ಬಣ್ಣದ ಮೇಲ್ಭಾಗವನ್ನು (ಚಿತ್ರದಲ್ಲಿರುವಂತೆ) ಹಿಮ್ಮುಖವಾಗಿ ಮಡಚಿ ಬಿಳಿ ಬಣ್ಣದ ಭಾಗದ ಅಡಿಭಾಗದಲ್ಲಿ ಬರುವಂತೆ ನೋಡಿಕೊಳ್ಳಬೇಕು.

* ನಂತರ ಬಿಳಿ ಬಣ್ಣದ ಭಾಗದ ಎರಡೂ ಬದಿಯನ್ನು ಅಶೋಕ ಚಕ್ರ ಮಾತ್ರ ಕಾಣುವ ರೀತಿಯಲ್ಲಿ ಹಿಂದಕ್ಕೆ ಮಡಚಬೇಕು (ಚಿತ್ರದಲ್ಲಿರುವಂತೆ).

* ಹೀಗೆ ಮಡಚಿದ ಧ್ವಜವನ್ನು ಅಂಗೈಯಲ್ಲೇಒಯ್ಯಬೇಕು.

ತೆಗೆದಿಡುವ ವಿಧಾನ...

* ಧ್ವಜ ಸಂಹಿತೆಯ ಪ್ರಕಾರ, ಹಾನಿಯಾಗುವಂತೆ ಮತ್ತು ಮಣ್ಣು ಅಥವಾ ನೀರಿಗೆ ತಾಗುವಂತೆ ರಾಷ್ಟ್ರಧ್ವಜವನ್ನು ಇಡಬಾರದು.

* ಧ್ವಜಕ್ಕೆ ಏನಾದರೂ ಹಾನಿಯಾಗಿದ್ದಲ್ಲಿ ಅಥವಾ ಮಣ್ಣಾದ ಸ್ಥಿತಿಯಲ್ಲಿದ್ದರೆ, ಅದನ್ನು ಎಸೆಯಬಾರದು ಅಥವಾ ಅಗೌರವದಿಂದ ವಿಲೇವಾರಿ ಮಾಡಬಾರದು.

* ನಾಶಪಡಿಸಬೇಕಾದ ಅನಿವಾರ್ಯ ಸಂದರ್ಭ ಬಂದರೆ ಸಂಪೂರ್ಣ ಖಾಸಗಿಯಾಗಿಯೇ ಮಾಡಬೇಕು. ಖಾಸಗಿಯಾಗಿ ಸುಡುವುದು ಅಥವಾ ಬೇರೆ ಯಾವುದೇ ವಿಧಾನದ ಮೂಲಕ ಕಿಂಚಿತ್ ಕೂಡ ಅಗೌರವವಾಗದಂತೆ ನಾಶಗೊಳಿಸಬಹುದು.

* ರಾಷ್ಟ್ರಧ್ವಜವನ್ನು ಬೇರೆ ಯಾವುದೇ ಕೆಲಸಕ್ಕೂ ಉಪಯೋಗಿಸುವಂತಿಲ್ಲ. ಉದಾಹರಣೆಗೆ; ಟೇಬಲ್ ಅನ್ನು ಮುಚ್ಚಲು ಬಳಸುವುದು, ವಾಹನಗಳ ಅಥವಾ ಕಟ್ಟಡಗಳ ಮೇಲೆ ಹೊದಿಸುವುದನ್ನು ಮಾಡಲೇಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.