ADVERTISEMENT

74ನೇ ಸ್ವಾತಂತ್ರ್ಯೋತ್ಸವ: ಸಮರ ಸೇನಾನಿಗಳ ಮನದಾಳ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 3:50 IST
Last Updated 15 ಆಗಸ್ಟ್ 2020, 3:50 IST
   
""
""
""
""
""

ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಈಗ ಇಳಿವಯಸ್ಸಿನಲ್ಲಿದ್ದಾರೆ. ಆದರೆ, ಆ ಹೋರಾಟದ ಕಿಚ್ಚು ಇನ್ನೂ ಜೀವಂತವಾಗಿದೆ ಎಂಬ ಕಾರಣದಿಂದಲೇ ಇರಬಹುದು ಅವರೆಲ್ಲರೂ ಚೈತನ್ಯಯುತವಾಗಿಯೇ ಇದ್ದಾರೆ. ಸ್ವಾತಂತ್ರ್ಯ ಸಮರದ ಬಗ್ಗೆ, ಹೋರಾಟಕ್ಕೆ ನೇತೃತ್ವ ಕೊಟ್ಟಿದ್ದ ಗಾಂಧೀಜಿಯ ಬಗ್ಗೆ ಮಾತನಾಡುವಾಗ ಅವರ ಹುರುಪು ನೂರ್ಮಡಿಸುತ್ತದೆ. ಸ್ವತಂತ್ರ ಭಾರತದ ಬಗ್ಗೆ ಮಾತನಾಡುವಾಗ ಈ ದೇಶವು ತಮ್ಮ ನಿರೀಕ್ಷೆಯಂತೆ ಬೆಳೆದಿಲ್ಲ ಎಂಬ ನೋವು ಕೂಡ ಕಾಣಿಸಿಕೊಳ್ಳುತ್ತದೆ.

‘ಸ್ವಾತಂತ್ರ್ಯ ಹೋರಾಟದ ಕಿಚ್ಚು ಹತ್ತಿದ್ದ ಕಾಲವದು. ಬಾಣಾವರ ರೈಲು ನಿಲ್ದಾಣದಲ್ಲಿ ಹೋರಾಟಗಾರರೆಲ್ಲ ಕೊಬ್ಬರಿ ಚೀಲ ಸೇರಿಸಿ ಬೆಂಕಿ ಹಚ್ಚಿದೆವು. ನಾವು ಬರುವ ಸುದ್ದಿ ಕೇಳಿದ್ದ ಸ್ಟೇಷನ್‌ ಮಾಸ್ಟರ್ ಗುಡ್ಡ ಹತ್ತಿ ಕುಳಿತಿದ್ದ. ಅಂದಿನ ಹೋರಾಟ ನೆನಪಿಸಿಕೊಂಡರೆ ಈಗಲೂ ಮೈ ಜುಮ್ಮೆನ್ನುತ್ತದೆ...’ ಎಂದು ನೆನಪಿನ ಬುತ್ತಿ ಬಿಚ್ಚಿದವರು ದಾವಣಗೆರೆಯ 95ರ ಹರೆಯದ ಟಿ.ಸಿದ್ದರಾಮಪ್ಪ.

ADVERTISEMENT

‘ಹಲವು ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗಿಯಾಗಿದ್ದೆ. ಕ್ವಿಟ್‌ ಇಂಡಿಯಾ ಚಳವಳಿಯ ಸಮಯದಲ್ಲಿ ದಾವಣಗೆರೆಯಲ್ಲೂ ಉಗ್ರ ಹೋರಾಟ ಮಾಡಿದ್ದೆವು. ಕೊಡಗನೂರಿನ ಬಳಿ ಈಚಲುಮರ ಕಡಿದು ಪ್ರತಿಭಟಿಸಿದ್ದೆವು. ಆಲೂರಿನ ಹೋರಾಟದಲ್ಲೂ ಭಾಗಿಯಾಗಿದ್ದೆ’ ಎಂದು ನೆನಪಿಸಿಕೊಂಡರು.

‘ಕ್ವಿಟ್ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಹೋರಾಟ ನಡೆಸಿ ಜೈಲಿಗೆ ಹೋಗಿದ್ದೇವೆ. ಕಷ್ಟಪಟ್ಟು ಸ್ವಾತಂತ್ರ್ಯ ತಂದುಕೊಟ್ಟರೂ ದೇಶ ನಿರೀಕ್ಷಿತ ಅಭಿವೃದ್ಧಿ ಸಾಧಿಸಿಲ್ಲ. ಇದನ್ನು ಕಂಡರೆ ಬೇಸರವಾಗುತ್ತದೆ. ನಮ್ಮಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ಈಗ ಗುರುತಿಸುವವರೇ ಇಲ್ಲ’ ಎಂದು ನೊಂದು ನುಡಿದವರು 88 ವರ್ಷದ ಬಿ. ಮರುಳಸಿದ್ದಪ್ಪ.

ದೇಶವು ದಾಸ್ಯದ ಸಂಕೋಲೆಯಿಂದ ಹೊರಬರಬೇಕು ಎಂದು ಪ್ರಾಣವನ್ನು ಪಣಕ್ಕಿಟ್ಟು ಸಾವಿರಾರು ಮಂದಿ ಹೋರಾಡಿದ್ದೆವು, ಆದರೆ ಅಖಂಡ ಭಾರತದ ಕನಸು ನನಸಾಗಲಿಲ್ಲ ಎಂಬ ಬೇಸರ ತೋಡಿಕೊಂಡವರು ಬೆಳಗಾವಿಯ 94 ವರ್ಷದ ವಿಠ್ಠಲರಾವ್‌ ಯಾಳಗಿ.

‘ದೇಶ ನಿರೀಕ್ಷಿತ ಮಟ್ಟದಲ್ಲಿ ಪ್ರಭಾವಶಾಲಿಯಾಗಿ ಬೆಳೆದಿಲ್ಲ. ಅಸಮಾನತೆ, ಬಡತನದಂತಹ ಸಮಸ್ಯೆಗಳು ನಿವಾರಣೆ ಆಗಿಲ್ಲ. ಭ್ರಷ್ಟಾಚಾರ ದೊಡ್ಡ ಶಾಪವಾಗಿ ಪರಿಣಮಿಸಿದೆ. ಎಲ್ಲರಿಗೂ ಎಲ್ಲ ಸೌಲಭ್ಯ ಹಾಗೂ ಸಮಾನ ಅವಕಾಶಗಳು ಸುಲಭವಾಗಿ ಸಿಕ್ಕರೆ ನಮ್ಮಂತಹ ಹೋರಾಟಗಾರರಿಗೆ ನೆಮ್ಮದಿ ಸಿಕ್ಕೀತು’ ಎಂದು ಯಾಳಗಿಯವರು ಹೇಳುತ್ತಾರೆ. ಸದಾಶಿವ ರಾವ್‌ ಭೋಸಲೆ ಮನಸ್ಸಿನ ಮಾತೂ ಅದೇ ಆಗಿದೆ.‘ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದ ಗಾಂಧೀಜಿ ಬಯಸಿದ ಗ್ರಾಮ ಸ್ವರಾಜ್ಯದ ಕನಸು ನನಸಾಗಿಲ್ಲ’ ಎಂದು ಭೋಸಲೆ ವಿಷಾದದಿಂದ ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ರಾಘವೇಂದ್ರ ಕಲಘಟಗಿ ಅವರಿಗೆ ಈಗಿನ ದಿನಗಳನ್ನು ಕಂಡು ಹತಾಶೆಯಾಗಿದೆ. ‘ಸ್ವಾತಂತ್ರ್ಯಾನಂತರದ ಪೀಳಿಗೆಯವರಿಗೆ ದೇಶಾಭಿಮಾನ ಕಡಿಮೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಎಷ್ಟೋ ಚೆನ್ನಾಗಿತ್ತು’ ಎಂದು ನೋವಿನಿಂದ ಹೇಳುತ್ತಾರೆ.

ಯಾಳಗಿ, ಸಿದ್ದರಾಮಪ್ಪ, ನಾಮದೇವ ಶೆಣೈ, ಶಿವಣ್ಣ, ಬಿ. ಮರುಳಸಿದ್ದಪ್ಪ, ಸದಾಶಿವರಾವ್ ಭೋಸಲೆ

ಹೊಸ ಹೋರಾಟ ಬೇಕಿದೆ
‘ರಾಮರಾಜ್ಯ ಬರಬೇಕು ಎಂಬುದು ಗಾಂಧೀಜಿ ಹಾಗೂ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿತ್ತು. ಅದನ್ನು ಸಾಕಾರಗೊಳಿಸಲು ಯುವಜನರು ಹೊಸ ಹೋರಾಟ ಕಟ್ಟಬೇಕು.ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ಈ ನಾಲ್ಕು ಪ್ರಜಾಪ್ರಭುತ್ವದ ಮುಖ್ಯ ಸ್ತಂಭಗಳು. ಆದರೆ, ಇಂದು ಪ್ರಾಮಾಣಿಕತೆಯ ಕೊರತೆ ಅನುಭವಿಸುತ್ತಿವೆ. ಹೀಗಿರುವಾಗ ಶ್ರೀಸಾಮಾನ್ಯ ನ್ಯಾಯ ಕೇಳಿ ಯಾರ ಬಳಿಗೆ ಹೋಗಬೇಕು’ ಎಂದು ಈಗಿನ ಸ್ಥಿತಿಯನ್ನು ತರಾಟೆಗೆ ತೆಗೆದುಕೊಂಡವರು 97 ವರ್ಷ ವಯಸ್ಸಿನ ನಾಮದೇವ ಶೆಣೈ.

ಗಾಂಧೀಜಿಯವರ ಅಸಹಕಾರ ಚಳವಳಿಯ ಕರೆಗೆ ಓಗೊಟ್ಟು ಏಳನೇ ತರಗತಿಗೇ ಶಾಲೆ ಬಿಟ್ಟವರು ಕಾಸರಗೋಡು ಜಿಲ್ಲೆಯ ಬದಿಯಡ್ಕದ ನಾಮದೇವ ಶೆಣೈ. ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ ಅವರು ಪುತ್ತೂರು ಮತ್ತು ಬಳ್ಳಾರಿಯಲ್ಲಿ ಸೆರೆವಾಸ ಅನುಭವಿಸಿದ್ದಾರೆ.

ಸ್ವಾತಂತ್ರ್ಯಾನಂತರ ಆಚಾರ್ಯ ವಿನೋಬಾ ಭಾವೆ ಅವರ ಸರ್ವೋದಯ ಚಳವಳಿಯತ್ತ ಆಕರ್ಷಿತರಾದ ನಾಮದೇವ, ತಮ್ಮ ಇಡೀ ಬದುಕನ್ನು ಅದಕ್ಕಾಗಿಯೇ ಮುಡುಪಿಟ್ಟಿದ್ದಾರೆ. ಬದಿಯಡ್ಕದಲ್ಲಿಯೇ ವಿನೋಬಾ ಆಶ್ರಮ ತೆರೆದು ಅಲ್ಲಿ ಸರ್ವೋದಯ ತತ್ವ ಪ್ರಚಾರ ನಡೆಸಿದ್ದಾರೆ.ಇತ್ತೀಚಿನವರೆಗೆ ಮುಧೋಳದ ‘ವಾತ್ಸಲ್ಯಧಾಮ’ದಲ್ಲಿ ನೆಲೆಸಿದ್ದ ಅವರು ಈಗ ಧಾರವಾಡಕ್ಕೆ ವಾಸ್ತವ್ಯ ಬದಲಿಸಿದ್ದಾರೆ.

ಗಾಂಧೀಜಿ ನೋಡುವ ಭಾಗ್ಯ ಸಿಗಲಿಲ್ಲ
‘ಸ್ವಾತಂತ್ರ‍್ಯ ಪೂರ್ವ ಮತ್ತು ನಂತರದ ಭಾರತ ನೋಡಿದ್ದೇನೆ. ಹಿಂದೆ ದೇಶದ ಬಗ್ಗೆ ಜನರಿಗೆ ಅಭಿಮಾನ, ರಾಷ್ಟ್ರಭಕ್ತಿ ಇತ್ತು. ಆದರೆ, ಈಗ ಅನ್ಯೋನ್ಯತೆ ಇಲ್ಲ, ಜಾತೀಯತೆ, ಮತೀಯತೆ ತುಂಬಿ ಹೋಗಿದೆ’ ಎನ್ನುವ ನೋವು ಹಾಸನದ 89 ವರ್ಷದ ಎಚ್‌.ಎಂ. ಶಿವಣ್ಣ ಅವರಲ್ಲಿ ಮಡುಗಟ್ಟಿದೆ.

‘1931ರಲ್ಲಿ ಗಾಂಧೀಜಿ ಹಾಸನ ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದರು. ಬೆಂಗಳೂರಿನಿಂದ ರೈಲಿನಲ್ಲಿ ಅರಸೀಕೆರೆಗೆ ಭೇಟಿ ನೀಡಿ, ಹೊಳೆನರಸೀಪುರ ಮಾರ್ಗವಾಗಿ ಮೈಸೂರಿನ ಬದನವಾಳುವಿಗೆ ಹೋಗಿದ್ದರು. ಗಾಂಧೀಜಿ ಅವರನ್ನು ನೇರವಾಗಿ ನೋಡುವ ಭಾಗ್ಯ ಸಿಗಲಿಲ್ಲ’ ಎಂಬುದು ಶಿವಣ್ಣ ಅವರನ್ನು ಇಂದಿಗೂ ಕಾಡುವ ನೋವು.

ಸ್ಮಾರಕಗಳ ಕಥೆಗಳು

ಕರ್ನಾಟಕದ ಜಲಿಯನ್‌ ವಾಲಾಬಾಗ್‌


ಕರ್ನಾಟಕದ ಜಲಿಯನ್‌ ವಾಲಾಬಾಗ್‌
ಗೌರಿಬಿದನೂರು:
ವಿಧುರನಾರಾಯಣಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಬ್ರಿಟಿಷರ ವಿರುದ್ಧ 1938ರ ಏಪ್ರಿಲ್‌ 25ರಂದು ಸುತ್ತಲಿನ ಗ್ರಾಮಗಳ ಜನರು ಸೇರಿ ಧ್ವಜ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಅಹಿಂಸಾ ಹೋರಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್‌ಗೆ 32 ಮಂದಿ ಮೃತಪಟ್ಟರು. ನೂರಾರು ಮಂದಿ ಗಾಯಗೊಂಡರು. ಹಾಗಾಗಿಯೇ ಇದು ಕರ್ನಾಟಕದ ಜಲಿಯನ್‌ ವಾಲಾಬಾಗ್‌ ಎಂದು ಹೆಸರಾಗಿದೆ.

ಸ್ಮಾರಕದ ಸ್ಥಿತಿ:2006ರಲ್ಲಿ ಈ ಪ್ರದೇಶ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಯಿತು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದಂತೆ ಚಿತ್ರ ಗ್ಯಾಲರಿ ಒಳಗೊಂಡ ವೀರಸೌಧ ನಿರ್ಮಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಸ್ತೂಪ, ಉದ್ಯಾನ ಅಭಿವೃದ್ಧಿಪಡಿಸಲಾಗಿದೆ.

**

ಹಾವೇರಿ ವೀರಸೌಧ


ನೆತ್ತರ ಕತೆ ಹೇಳುವ ವೀರಸೌಧ
ಹಾವೇರಿ:
ಸ್ವಾತಂತ್ರ್ಯ ಸಂಗ್ರಾಮದಲ್ಲಿ 1943ರ ಏ.1ರಂದು ಹೊಸರಿತ್ತಿಯಲ್ಲಿ ಬ್ರಿಟಿಷರ ಗುಂಡೇಟಿಗೆ ಬಲಿಯಾದ ಮೈಲಾರ ಮಹಾದೇವಪ್ಪ ಹಾಗೂ ಸಹಚರರಾದ ಕೋಗನೂರಿನ ವೀರಯ್ಯ ಹಿರೇಮಠ ಮತ್ತು ತಿರಕಪ್ಪ ಮಡಿವಾಳರ ನೆತ್ತರ ಕಥೆಯನ್ನು ಸಾರಿ ಹೇಳುತ್ತಿದೆ ಹಾವೇರಿಯ ‘ವೀರಸೌಧ’.

ಈ ಮೂವರು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಹಾವೇರಿ ನಗರದ ಹೊರವಲಯದಲ್ಲಿರುವ ತೋಟದ ಯಲ್ಲಾಪುರ ಸಮೀಪ ‘ವೀರಸೌಧ’ವನ್ನು ನಿರ್ಮಿಸಿ, 2009ರಲ್ಲಿ ಉದ್ಘಾಟಿಸಲಾಗಿದೆ. ವೀರಸೌಧದ ಒಳಭಾಗ ಮೂವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಮೈಲಾರ ಮಹಾದೇವಪ್ಪನವರ ಧರ್ಮಪತ್ನಿ ಸಿದ್ದಮ್ಮ ಮೈಲಾರ ಅವರ ಸಮಾಧಿಗಳಿವೆ.

ಆದರೆ, ಈ ಸೌಧದ ನೆನಪು ಬರುವುದು ಅಧಿಕಾರಿಗಳಿಗೆ ಸ್ವಾತಂತ್ರ್ಯ ದಿನ ಮತ್ತು ಹುತಾತ್ಮರ ದಿನದಂದು ಮಾತ್ರ. ಜನಾಕರ್ಷಣೆಯ ಕೇಂದ್ರವಾಗಬೇಕಿದ್ದ ಇದು, ಪಾಳು ಕಟ್ಟಡದಂತೆ ಗೋಚರಿಸುತ್ತಿದೆ.

**
ಸ್ವತಂತ್ರ ಸಮರ ಸೌಧ
ಬಳ್ಳಾರಿ:
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಸೇರಿದಂತೆ ಹಲವಾರು ಹೋರಾಟಗಾರರನ್ನು ಬಂಧಿಸಿಟ್ಟ ಇಲ್ಲಿನ ವಿಮ್ಸ್‌ ಆವರಣದಲ್ಲಿರುವ ನವೀಕೃತ ಕಾರಾಗೃಹ ‘ಸ್ವತಂತ್ರ ಸಮರ ಸೌಧ’ ಎಂಟು ವರ್ಷದಿಂದ ನಿರ್ಲಕ್ಷ್ಯಕ್ಕೀಡಾಗಿ ನಿಂತಿದೆ. ಸೌಧವನ್ನು 2012ರ ಡಿಸೆಂಬರ್‌ನಲ್ಲಿ ನವೀಕರಿಸಲಾಗಿತ್ತು. ವಿಮ್ಸ್‌ ಆವರಣದಲ್ಲಿದ್ದರೂ ನಿರ್ವಹಣೆ ಯಾರದ್ದು ಎಂಬ ಕುರಿತು ಸ್ಪಷ್ಟತೆ ಇಲ್ಲ. ನಿಯಮಿತವಾಗಿ ಕಸ, ದೂಳು ತೆಗೆಯುವವರಿಲ್ಲ. ಭದ್ರತೆಯೂ ಇಲ್ಲ. ಹೀಗಾಗಿ ಬೀದಿ ನಾಯಿಗಳ ತಂಗುದಾಣವಾಗಿರುವ ಇಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮಾತ್ರ ಸ್ವಚ್ಛತಾ ಕಾರ್ಯ ನಡೆಯುತ್ತದೆ.

**
ನಿರ್ಲಕ್ಷ್ಯಕ್ಕೆ ಒಳಗಾದ ‘ಕರ್ನಾಟಕದ ಸಿಂಹ’
ಬೆಳಗಾವಿ:
‘ಕರ್ನಾಟಕದ ಸಿಂಹ’ ಎಂದೇ ಹೆಸರಾಗಿದ್ದ ಹುದಲಿಯ ಗಂಗಾಧರರಾವ್‌ ದೇಶಪಾಂಡೆ ಅವರ ಪುತ್ಥಳಿಯನ್ನು ಬೆಳಗಾವಿ ಪಾಲಿಕೆಯು ಟಿಳಕವಾಡಿ ಕಲಾಮಂದಿರದ ಅವರಣದಲ್ಲಿ ಸ್ಥಾಪಿಸಿತ್ತು. ನಿರ್ವಹಣೆ ಇರಲಿಲ್ಲ. ಕಲಾಮಂದಿರ ಮರು ನಿರ್ಮಾಣ ಕಾರಣ ಪುತ್ಥಳಿ ತೆರವುಗೊಳಿಸಲಾಗಿದೆ. ಅವರ ಸ್ಮಾರಕವನ್ನು ತಾಲ್ಲೂಕಿನ ಹುದಲಿಯಲ್ಲಿ ಮಾಡಬೇಕು ಎನ್ನುವ ಬೇಡಿಕೆ ಈಡೇರಿಲ್ಲ. ಬುಡಾದಿಂದ ರಾಮತೀರ್ಥ ನಗರದಲ್ಲಿ ಜಾಗ ಸಿಕ್ಕಿದೆ,ಸ್ಮಾರಕಮೈದಳೆದಿಲ್ಲ. ಚನ್ನಮ್ಮನ ಕಿತ್ತೂರು ತಾಲ್ಲೂಕು ಎಂ.ಕೆ. ಹುಬ್ಬಳ್ಳಿಯಲ್ಲಿರುವ ಗಾಂಧೀಜಿ ಚಿತಾಭಸ್ಮಸ್ಮಾರಕಸ್ಥಳ ನಿರ್ವಹಣೆ ಕೊರತೆಯಿಂದ ಸೊರಗಿದೆ.**

**

ಈಸೂರು ಸ್ಮಾರಕ


ಈಸೂರುಸ್ಮಾರಕಕಡೆಗಣನೆ
ಶಿವಮೊಗ್ಗ:
ಸ್ವಾತಂತ್ರ್ಯಕ್ಕಾಗಿ ಹೋರಾಡಿ 1942ರಲ್ಲೇ ಸ್ವತಂತ್ರ ಸರ್ಕಾರ ಘೊಷಿಸಿಕೊಂಡಿದ್ದಈಸೂರು ಸ್ಮಾರಕವನ್ನು ಮಂಡ್ಯ ಜಿಲ್ಲೆಯ ಶಿವಪುರದ ಸತ್ಯಾಗ್ರಹ ಸೌಧದ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕನಸು ಏಳು ದಶಕಗಳು ಕಳೆದರೂ ಈಡೇರಿಲ್ಲ.

‘ಏಸೂರು (ಎಷ್ಟು ಊರು) ಕೊಟ್ಟರೂ ಈಸೂರು ಬಿಡೆವು’ ಎಂದು ಘೋಷಣೆ ಕೂಗುತ್ತಾ ಈಸೂರು ಗ್ರಾಮದ ಜನರು 1942ರಲ್ಲಿ ಗಾಂಧೀಜಿ ಕರೆಕೊಟ್ಟ ಭಾರತ ಬಿಟ್ಟು ತೊಲಗಿ ಚಳವಳಿಗೆ ಧುಮುಕಿದ್ದರು. ಇಡೀ ಗ್ರಾಮವನ್ನೇ ಸ್ವತಂತ್ರ ಸರ್ಕಾರ ಎಂದು ಘೋಷಿಸಿಕೊಂಡು ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಆಳ್ವಿಕೆ ಆರಂಭಿಸಿದ್ದರು. ಹೋರಾಟಗಾರರು ಮತ್ತು ಪೊಲೀಸರ ನಡುವಣ ಸಂಘರ್ಷದ ಬಳಿಕ,ಬ್ರಿಟಷ್‌ ಸರ್ಕಾರ ಈಸೂರಿಗೆ ಸೈನ್ಯದ ತುಕಡಿ ನುಗ್ಗಿಸಿತ್ತು. 41 ಮಂದಿ ಸೆರೆ ಸಿಕ್ಕಿದ್ದರು. ಹಾಲಮ್ಮ, ಸಿದ್ದಮ್ಮ, ಪಾರ್ವತಮ್ಮ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಗಡಿಪಾರು ಮಾಡಲಾಗಿತ್ತು. ಅದೇ ವರ್ಷದ ಮಾರ್ಚ್ 8ರಂದು ಗುರಪ್ಪ ಮತ್ತು ಮಲ್ಲಪ್ಪ, 9ರಂದು ಸೂರ್ಯನಾರಾಯಣಾಚಾರಿ, ಹಾಲಪ್ಪ, 10ರಂದು ಶಂಕರಪ್ಪ ಅವರನ್ನು ಗಲ್ಲಿಗೇರಿಸಲಾಗಿತ್ತು.

ಗಲ್ಲಿಗೇರಿದವರ ಚಿತಾಭಸ್ಮವನ್ನು ಈಸೂರಿಗೆ ತಂದು ಒಂದೇ ಸ್ಥಳದಲ್ಲಿ ಇಟ್ಟು ಅದರ ಮೇಲೆಸ್ಮಾರಕನಿರ್ಮಿಸಲಾಗಿತ್ತು. ಇಲ್ಲಿಸ್ಮಾರಕಭವನ ನಿರ್ಮಿಸಲಾಗಿದೆ. ಆದರೆ ಅದಕ್ಕೆ ನಿರ್ವಹಣೆ ಇಲ್ಲ. ಭವನ ಬಿರುಕುಬಿಟ್ಟು ಸೋರುತ್ತಿದೆ.

**

ಗಾಂಧೀಜಿ ಮಂದಿರ


ಕಡೂರು ತಾಲ್ಲೂಕಿನ ನಿಡಘಟ್ಟ ಗ್ರಾಮದಲ್ಲಿ ರಾಷ್ಟ್ರಪಿತ ಗಾಂಧೀಜಿ ಮಂದಿರ ಇದೆ.

ದೇಶ ಸ್ವಾತಂತ್ರ್ಯ ಗಳಿಸಿದಾಗ ಗ್ರಾಮಸ್ಥರು ಆಂಜನೇಯನ ದೇಗುಲದ ಮುಂದೆ ಸಂಭ್ರಮಾಚರಣೆ ಮಾಡಿದ್ದರು. ಗಾಂಧೀಜಿ ಹಂತಕನ ಗುಂಡಿಗೆ ಬಲಿಯಾದಾಗ ತಮ್ಮದೇ ಮನೆ ಸದಸ್ಯ ನಿಧನರಾದಂತೆ ದುಃಖಿಸಿದ್ದರು. ಗ್ರಾಮದಲ್ಲಿ ಗಾಂಧೀಜಿ ನೆನಪು ಅಚ್ಚಳಿಯದೆ ಉಳಿಯಬೇಕು ಎಂದು ನಿರ್ಧರಿಸಿ ಗಾಂಧೀಜಿಗೊಂದು ಪುಟ್ಟ ಗುಡಿ ನಿರ್ಮಿಸಿದರು. ಪ್ರತಿದಿನ ಪೂಜೆ ವ್ಯವಸ್ಥೆಯಾಯಿತು.

ಈ ಪುಟ್ಟ ದೇಗುಲವನ್ನು ಗ್ರಾಮ ಪಂಚಾಯಿತಿ ಅನುದಾನದಿಂದ ಸುಂದರವಾಗಿರಿಸಲಾಗಿದೆ. ಮೊದಲು ನಿತ್ಯ ಪೂಜೆ ನಡೆಯುತ್ತಿತ್ತು. ಈಗ ನಿತ್ಯ ಪೂಜೆ ಇಲ್ಲ.

**

ದಾನದ ಜಾಗದಲ್ಲಿ ಸೆರೆಮನೆ
ಬೆಂಗಳೂರು
: ರಾಜಧಾನಿಯ ‘ಗಾಂಧಿನಗರ’ದ ಮಡಿಲಿನಲ್ಲಿರುವ ‘ಸ್ವಾತಂತ್ರ್ಯ ಉದ್ಯಾನ’ ಹಿಂದೆ ಸೆಂಟ್ರಲ್‌ ಜೈಲ್‌ ಆಗಿತ್ತು. ಸ್ವಾತಂತ್ರ್ಯ ಹೋರಾಟಗಾರರು ಯಾವ್ಯಾವುದೋ ಊರುಗಳ ಜೈಲುಗಳಲ್ಲಿ ಕಷ್ಟ ಅನುಭವಿಸುವುದನ್ನು ತಪ್ಪಿಸುವುದಕ್ಕಾಗಿ ಭಾಗ್ಯಮ್ಮ ಎಂಬ ಮಹಿಳೆ ದಾನವಾಗಿ ಕೊಟ್ಟ 22 ಎಕರೆಯಲ್ಲಿ ಈ ಸೆರೆಮನೆ ನಿರ್ಮಾಣ ಆಗಿತ್ತು.

‘1857ರಲ್ಲಿ ಸಿಪಾಯಿ ದಂಗೆ ಆರಂಭವಾದ ಬಳಿಕ ದೇಶದ ಉದ್ದಗಲದಲ್ಲೂ ಅಲ್ಲಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಲು ಆರಂಭವಾಗಿತ್ತು. ಈ ಹೋರಾಟದಲ್ಲಿ ಭಾಗವಹಿಸಿದವರನ್ನು ಬ್ರಿಟಿಷರು ಚೆನ್ನೈ ಮತ್ತಿತರ ಕಡೆಯ ಜೈಲುಗಳಲ್ಲಿ ಹಾಕುತ್ತಿದ್ದರು. ಆಗ ತಮ್ಮ ಪ್ರಾಂತ್ಯದ ಸ್ವಾತಂತ್ರ್ಯ ಹೋರಾಟಗಾರರು ಸಮಸ್ಯೆ ಎದುರಿಸುವುದನ್ನು ಕಂಡ ಭಾಗ್ಯಮ್ಮ ಜೈಲು ನಿರ್ಮಿಸಲು ಬೆಂಗಳೂರಿನಲ್ಲಿ ತಮ್ಮ 22 ಎಕರೆ ಜಾಗವನ್ನು ದಾನವಾಗಿ ನೀಡಿದ್ದರು. ಈ ಜಾಗದಲ್ಲಿ 1867ರಲ್ಲಿ ಜೈಲನ್ನು ನಿರ್ಮಿಸಲಾಗಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಸ್ವಾತಂತ್ರ್ಯ ಉದ್ಯಾನದ ಕ್ಯುರೇಟರ್‌ ಆಗಿದ್ದ ಎನ್‌.ಎಸ್‌.ಸೋಮಶೇಖರ್‌.

ಇಲ್ಲಿ ಹಳೆಯ ಜೈಲಿನ ಮೂರು ಬ್ಯಾರಕ್‌ಗಳನ್ನು ಐತಿಹಾಸಿಕ ಕುರುಹಾಗಿ ಉಳಿಸಿಕೊಳ್ಳಲಾಗಿದೆ. ವಾರ್ಡನ್‌ ಹಾಗೂ ಕೈದಿಗಳ ಶಿಲ್ಪಗಳು ಗತ ಕಾಲದಲ್ಲಿ ಇಲ್ಲಿದ್ದ ಜೈಲಿನ ಚಿತ್ರಣವನ್ನು ಕಟ್ಟಿಕೊಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.