ಕುಲಾಂತರಿ ಸಾಸಿವೆಯ ಬೀಜ ಉತ್ಪಾದಿಸಿ ಅದನ್ನು ತೆರೆದ ಪರಿಸರದಲ್ಲಿ ಬೆಳೆದು ಪರೀಕ್ಷಿಸಲು (ಎನ್ವಿರಾನ್ಮೆಂಟಲ್ ರಿಲೀಸ್ ಸ್ಟಡಿ) ಕೇಂದ್ರ ಸರ್ಕಾರವು 2022ರ ಅಕ್ಟೋಬರ್‌ನಲ್ಲಿ ಅನುಮತಿ ನೀಡಿತ್ತು. ಸರ್ಕಾರವೇ ಪ್ರಾಯೋಜಿಸಿ ಅಭಿವೃದ್ಧಿಪಡಿಸಿರುವ ಈ ಕುಲಾಂತರಿ ಸಾಸಿವೆಗೆ ಈ ಅನುಮತಿ ನೀಡುವಲ್ಲಿ ಭಾರಿ ತರಾತುರಿ ನಡೆದಿದೆ. ಕುಲಾಂತರಿ ಸಾಸಿವೆಯಿಂದ ಪರಿಸರ ಮತ್ತು ಜೀವವೈವಿಧ್ಯ, ಮುಖ್ಯವಾಗಿ ಜೇನುನೊಣಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ವಿಸ್ತೃತ ಅಧ್ಯಯನ ನಡೆಸಲು ವಿಜ್ಞಾನಿಗಳ ತಂಡ ನಿರ್ಲಕ್ಷ್ಯ ತೋರಿದೆ ಎಂದು ಹೇಳಲಾಗುತ್ತಿದೆ. ಹಲವು ಸೂಚನೆಗಳ ನಂತರವೂ ಅಧ್ಯಯನದ ಅವಶ್ಯಕತೆ ಇಲ್ಲ ಎಂದು ವಿಜ್ಞಾನಿಗಳ ತಂಡ ಹೇಳಿದೆ. ಹೀಗಿದ್ದೂ ಎನ್ವಿರಾನ್ಮೆಂಟಲ್ ರಿಲೀಸ್ ಸ್ಟಡಿಗೆ ಅನುಮತಿ ನೀಡಲಾಗಿತ್ತು, ಅದರ ಜತೆಯಲ್ಲೇ ಜೇನುನೊಣಗಳ ಮೇಲಾಗುವ ಪರಿಣಾಮಗಳನ್ನು ಪರಿಶೀಲಿಸುವಂತೆ ಮತ್ತೆ ಸೂಚಿಸಲಾಗಿತ್ತು. ಈ ಮಧ್ಯೆ, ಅನುಮತಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಹಲವು ವಿಜ್ಞಾನಿಗಳು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರವಷ್ಟೇ ಪತ್ರ ಬರೆದಿದ್ದಾರೆ.
***
ಕುಲಾಂತರಿ ತಳಿಗಳ ವಿಷಯ ಮತ್ತೆ ಸದ್ದು ಮಾಡುತ್ತಿದೆ. ಕೇಂದ್ರ ಸರ್ಕಾರದ್ದೇ ಸಂಸ್ಥೆ ಅಭಿವೃದ್ಧಿಪಡಿಸಿರುವ ಕುಲಾಂತರಿ ಸಾಸಿವೆಯನ್ನು ದೊಡ್ಡ ಮಟ್ಟದಲ್ಲಿ ಪರೀಕ್ಷೆಗೆ ಒಳಪಡಿಸಲು ಕೇಂದ್ರ ಪರಿಸರ ಸಚಿವಾಲಯ ಅನುಮತಿ ನೀಡಿದೆ. ಸರ್ಕಾರದ ಈ ನಿರ್ಧಾರಕ್ಕೆ ಹಲವು ರೈತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಸರ್ಕಾರದ ಈ ನಿರ್ಧಾರದಿಂದ ಸಾಸಿವೆಯ ದೇಸೀ ತಳಿಗಳು ನಾಶವಾಗುತ್ತವೆ ಎಂಬ ಆತಂಕ ವ್ಯಕ್ತವಾಗಿದೆ.
ಕುಲಾಂತರಿ ಸಾಸಿವೆ ತಳಿಯು ನಾಟಿ ತಳಿಗಿಂತ ಶೇ 29ರಷ್ಟು ಮತ್ತು ವರುಣಾ ತಳಿಗಿಂತ ಶೇ 19ರಷ್ಟು ಹೆಚ್ಚು ಇಳುವರಿ ನೀಡುತ್ತದೆ ಎಂಬುದು ಈವರೆಗಿನ ಅಧ್ಯಯನದಲ್ಲಿ ದೃಢಪಟ್ಟಿದೆ. ಇಳುವರಿ ಹೆಚ್ಚಾಗುವ ಕಾರಣದಿಂದ, ಸಾಸಿವೆ ಬೆಳಗಾರರಲ್ಲಿ ಹೆಚ್ಚಿನವರು ಕುಲಾಂತರಿ ಸಾಸಿವೆಗೇ ಮೊರೆ ಹೋಗುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ. ಅದರ ಪರಿಣಾಮವಾಗಿ ಸ್ಥಳೀಯ ತಳಿಗಳು ನಾಶವಾಗುತ್ತವೆ. ಕುಲಾಂತರಿ ಹತ್ತಿಯ ವಿಚಾರದಲ್ಲಿ ಇದು ದೃಢಪಟ್ಟಿದೆ. ಈಗ ಸಾಸಿವೆ ವಿಚಾರದಲ್ಲೂ ಇದೇ ಆತಂಕ ವ್ಯಕ್ತವಾಗಿದೆ.
ಕುಲಾಂತರಿ ತಳಿಗಳಿಗೆ ಅವನ್ನು ಅಭಿವೃದ್ಧಿಪಡಿಸಿದ ಸಂಸ್ಥೆಯೇ ನಿಗದಿಪಡಿಸಿದ ಔಷಧಗಳು ಮತ್ತು ಗೊಬ್ಬರಗಳನ್ನು ನೀಡಬೇಕಾಗುತ್ತದೆ. ಔಷಧ ಮತ್ತು ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಹೆಚ್ಚಾಗುತ್ತದೆ ಎಂಬುದು ಯಾವುದೇ ಕುಲಾಂತರಿ ತಳಿಯ ಬಗ್ಗೆ ಸಾಮಾನ್ಯವಾಗಿ ಇರುವ ಆತಂಕ. ಕುಲಾಂತರಿ ಸಾಸಿವೆಯೂ ಇದಕ್ಕೆ ಹೊರತಲ್ಲ. ಕುಲಾಂತರಿ ಸಾಸಿವೆಯನ್ನು ಪ್ರಾಯೋಗಿಕವಾಗಿ ಹೊಲಗಳಲ್ಲಿ ಬೆಳೆಸುವಾಗ, ಅವುಗಳಿಗೆ ಯಾವುದೇ ರೋಗಬಾಧೆ ಇರಲಿಲ್ಲ ಎಂದು ಅಧ್ಯಯನ ವರದಿಯಲ್ಲಿ ಮತ್ತು ಜಿಇಎಸಿಗೆ ಸಲ್ಲಿಸಿದ ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಬಿತ್ತನೆಯಾದ ಕೆಲವೇ ದಿನಗಳಲ್ಲಿ ಆ ಹೊಲಗಳಿಗೆ ಔಷಧಗಳನ್ನು ಸಿಂಪಡಿಸಲಾಗಿತ್ತು ಎಂದೂ ವರದಿಯಲ್ಲಿ ಹೇಳಲಾಗಿದೆ. ಯಾವ ಔಷಧಗಳನ್ನು ಎಷ್ಟು ಪ್ರಮಾಣದಲ್ಲಿ ಸಿಂಪಡಿಸಲಾಗಿತ್ತು ಎಂಬ ವಿವರ ಲಭ್ಯವಿಲ್ಲ. ಹೀಗಾಗಿ ಕುಲಾಂತರಿ ಸಾಸಿವೆಗೂ ಹೆಚ್ಚು ಔಷಧ ಮತ್ತು ರಸಗೊಬ್ಬರ ನೀಡಬೇಕಾಗುತ್ತದೆ ಎಂದು ಕೆಲವು ರೈತ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.
ಎನ್ವಿರಾನ್ಮೆಂಟಲ್ ರಿಲೀಸ್ ಎಂದರೆ...
ಯಾವುದೇ ಕುಲಾಂತರಿ ತಳಿಯ ಅಭಿವೃದ್ಧಿ ಸಂದರ್ಭದಲ್ಲಿ ಅವುಗಳನ್ನು ಮೊದಲು ಪ್ರಯೋಗಾಲಯದಲ್ಲಿ ಬೆಳೆದು ಪರಿಶೀಲನೆ ನಡೆಸಲಾಗುತ್ತದೆ. ಆನಂತರ ಅದೇ ಕುಲಾಂತರಿ ತಳಿಯನ್ನು ಪಾಲಿಹೌಸ್‌ಗಳಲ್ಲಿ ನಿಯಂತ್ರಿತ ವಾತಾವರಣದಲ್ಲಿ ಬೆಳೆಯಲಾಗುತ್ತದೆ. ಮೂರನೇ ಹಂತದಲ್ಲಿ ತೆರೆದ ಪರಿಸರದಲ್ಲಿ, ನಿಯಂತ್ರಿತ ವಾತಾವರಣದಲ್ಲಿ ಬೆಳೆದು ಅಧ್ಯಯನ ನಡೆಸಲಾಗುತ್ತದೆ. ಈ ಅಧ್ಯಯನಗಳಲ್ಲಿ ಲಭ್ಯವಾದ ದತ್ತಾಂಶಗಳು ಮತ್ತು ಫಲಿತಾಂಶಗಳನ್ನು ಪರಿಶೀಲಿಸಿ, ಆ ತಳಿಯನ್ನು ಸಂಪೂರ್ಣವಾಗಿ ತೆರೆದ ಪರಿಸರದಲ್ಲಿ ಬೆಳೆದು ಅಧ್ಯಯನ ನಡೆಸಲಾಗುತ್ತದೆ. ಇದನ್ನು ‘ಎನ್ವಿರಾನ್ಮೆಂಟಲ್ ರಿಲೀಸ್ ಸ್ಟಡಿ’ ಎಂದು ಕರೆಯಲಾಗುತ್ತದೆ. ದೆಹಲಿ ವಿಶ್ವವಿದ್ಯಾಲಯದ ಅಧೀನ ಸಂಸ್ಥೆಯಾದ ‘ಸೆಂಟರ್ ಫಾರ್ ಜೆನೆಟಿಕಲಿ ಮಾಡಿಫೈಡ್ ಕ್ರಾಪ್ ಪ್ಲಾಂಟ್ಸ್ –ಸಿಜಿಎಂಸಿಪಿ’ ಕುಲಾಂತರಿ ಸಾಸಿವೆ ತಳಿ ಡಿಎಂಎಚ್–11 ಅನ್ನು ಅಭಿವೃದ್ಧಿಪಡಿಸಿದೆ. ಈಗ ಡಿಎಂಎಚ್–11, ‘ಎನ್ವಿರಾನ್ಮೆಂಟಲ್ ರಿಲೀಸ್ ಸ್ಟಡಿ’ ಹಂತದ ಪರೀಕ್ಷೆಗೆ ಅನುಮತಿ ಪಡೆದಿದೆ.
ಜೇನುನೊಣಗಳ ನಿರ್ಲಕ್ಷ್ಯ
ಸಾಸಿವೆಯ ಡಿಎಂಎಚ್–11 ಕುಲಾಂತರಿ ತಳಿಯು ಜೇನುನೊಣಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು 2010–15ರ ನಡುವೆ ನಡೆಸಲಾದ ಮೂರು ಪ್ರತ್ಯೇಕ ಅಧ್ಯಯನಗಳಲ್ಲಿ ಪತ್ತೆಯಾಗಿದೆ. ಆದರೆ, ಈ ಪರಿಣಾಮ ನಗಣ್ಯವಾದುದು ಎಂದು ಈ ತಳಿಯನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡ ಪ್ರತಿಪಾದಿಸುತ್ತಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು ವಿಜ್ಞಾನಿಗಳ ತಂಡವು ಪದೇ ಪದೇ ನಿರಾಕರಿಸಿದೆ.
ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ (ಐಸಿಎಆರ್) ಮೇಲ್ವಿಚಾರಣೆಯಲ್ಲಿ ಡಿಎಂಎಚ್–11 ತಳಿಯ ಕ್ಷೇತ್ರ ಅಧ್ಯಯನಗಳನ್ನು ನಡೆಸಲಾಗಿತ್ತು. ಹೀಗೆ ನಡೆದ ಮೂರು ಅಧ್ಯಯನಗಳಲ್ಲಿ ಈ ತಳಿಯಿಂದ ಪರಿಸರದ ಮೇಲೆ, ಸೂಕ್ಷ್ಮಜೀವಿಗಳ ಮೇಲೆ, ಜೇನುನೊಣ ಮತ್ತು ಇತರ ಪರಾಗಸ್ಪರ್ಶಿ ಕೀಟಗಳ ಮೇಲೆ ಆಗುವ ಪರಿಣಾಮಗಳನ್ನು ಪರಿಶೀಲಿಸಲಾಗಿತ್ತು. 2010–11ರಲ್ಲಿ, 2011–12 ಮತ್ತು 2014–15ರಲ್ಲಿ ಭಿನ್ನ ಪರಿಸರದ ಹಲವು ಕ್ಷೇತ್ರಗಳಲ್ಲಿ ಅಧ್ಯಯನ ನಡೆಸಲಾಗಿತ್ತು. ಕುಲಾಂತರಿ ಸಾಸಿವೆಯ ಹೊಲಗಳಲ್ಲಿ ಮಕರಂದ ಹೀರಲು ಜೇನುನೊಣಗಳು ಹೆಚ್ಚು ಶ್ರಮ ಪಡಬೇಕು ಎಂಬುದು ಈ ಅಧ್ಯಯನಗಳಲ್ಲಿ ಪತ್ತೆಯಾಗಿತ್ತು.
ಸ್ಥಳೀಯ ತಳಿಗಳು ಮತ್ತು ಈಗಾಗಲೇ ಬಳಕೆಯಲ್ಲಿರುವ ವರುಣಾ ತಳಿಯ ಸಾಸಿವೆಯ ಹೊಲದಲ್ಲಿ ಸಂಗ್ರಹಿಸುತ್ತಿದ್ದ ಮಕರಂದದಷ್ಟೇ, ಮಕರಂದವನ್ನು ಕುಲಾಂತರಿ ಸಾಸಿವೆಯ ಹೊಲದಲ್ಲಿ ಸಂಗ್ರಹಿಸಲು ಶೇ 5ರಿಂದ ಶೇ 27ರಷ್ಟು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಸ್ಥಳದಿಂದ ಸ್ಥಳಕ್ಕೆ ಈ ಶ್ರಮದ ಏರಿಕೆಯಲ್ಲಿ ಭಾರಿ ವ್ಯತ್ಯಾಸವಿದೆ. ಮಧ್ಯಪ್ರದೇಶದ ನವಗಾಂವ್‌ನ ಕ್ಷೇತ್ರದಲ್ಲಿ ಜೇನುನೊಣಗಳು ಶೇ 27ರಷ್ಟು ಹೆಚ್ಚು ಶ್ರಮ ಹಾಕಿತ್ತು ಎಂಬುದು 2011–12ರಲ್ಲಿ ನಡೆದ ಅಧ್ಯಯನದಲ್ಲಿ ಪತ್ತೆಯಾಗಿತ್ತು. 2014–2015ರಲ್ಲಿ ಲುಧಿಯನಾದಲ್ಲಿ ನಡೆದ ಅಧ್ಯಯನದಲ್ಲಿ, ಕುಲಾಂತರಿ ಸಾಸಿವೆ ಹೊಲದಲ್ಲಿ ಜೇನುನೊಣಗಳ ಶ್ರಮವು ಶೇ 19.5ರಷ್ಟು ಹೆಚ್ಚಾಗಿತ್ತು. ಇದೇ ಅವಧಿಯಲ್ಲಿ ದೆಹಲಿಯಲ್ಲಿರುವ ಐಸಿಎಆರ್‌ನ ಕ್ಷೇತ್ರದಲ್ಲಿ ನಡೆಸಿದ ಅಧ್ಯಯನದಲ್ಲಿ ಜೇನುನೊಣಗಳು ಶೇ 5ರಷ್ಟು ಹೆಚ್ಚು ಶ್ರಮ ಹಾಕಿತ್ತು ಎಂಬುದು ಪತ್ತೆಯಾಗಿತ್ತು. ಆದರೆ, ಇದು ಗಣನೀಯ ಬದಲಾವಣೆ ಅಲ್ಲ ಎಂದು ವಿಜ್ಞಾನಿಗಳು ಸಿದ್ಧಪಡಿಸಿರುವ ವರದಿಯಲ್ಲಿ ಹೇಳಿದ್ದಾರೆ.
ಡಿಎಂಎಚ್–11ರ ಎನ್ವಿರಾನ್ಮೆಂಟಲ್ ರಿಲೀಸ್‌ಗೆ ಅನುಮತಿ ನೀಡಿ ಎಂದು ದೀಪಕ್ ಪೆಂಟಲ್ ಅವರ ನೇತೃತ್ವದ ವಿಜ್ಞಾನಿಗಳ ತಂಡವು ಜಿಇಎಸಿಗೆ 2017ರಲ್ಲೇ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ಪರಿಶೀಲಿಸಿದ್ದ ಜಿಇಎಸಿಯು 2018ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ತನ್ನ 136ನೇ ಸಭೆಯಲ್ಲಿ, ‘ಜೇನುನೊಣಗಳು ಮತ್ತು ಇತರ ಪರಾಗಸ್ಪರ್ಶಿ ಕೀಟಗಳ ಮೇಲೆ ಕುಲಾಂತರಿ ಸಾಸಿವೆಯಿಂದಾಗುವ ಪರಿಣಾಮದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿ. ಅಧ್ಯಯನಕ್ಕಾಗಿ ಈ ಸಾಸಿವೆಯನ್ನು ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ, 5 ಎಕರೆಯಷ್ಟು ವಿಸ್ತೀರ್ಣದ ಕ್ಷೇತ್ರಗಳಲ್ಲಿ ಬೆಳೆಯಬೇಕು’ ಎಂದು ಸೂಚನೆ ನೀಡಿತ್ತು. ಆದರೆ ವಿಜ್ಞಾನಿಗಳ ತಂಡವು ಇಂತಹ ಅಧ್ಯಯನವನ್ನು ನಡೆಸಲೇ ಇಲ್ಲ. ಬದಲಿಗೆ 2022ರ ಆಗಸ್ಟ್‌ನಲ್ಲಿ ಎನ್ವಿರಾನ್ಮೆಂಟಲ್ ರಿಲೀಸ್‌ಗೆ ಅನುಮತಿ ಕೋರಿ ಮತ್ತೆ ಅರ್ಜಿ ಸಲ್ಲಿಸಿತ್ತು. ಅರ್ಜಿಯಲ್ಲಿ, ‘ಕುಲಾಂತರಿ ಸಾಸಿವೆಯಿಂದ ಜೇನುನೊಣಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ಅಮೆರಿಕ, ಆಸ್ಟ್ರೇಲಿಯ ಸೇರಿ ಹಲವು ದೇಶಗಳಲ್ಲಿ ಈಗಾಗಲೇ ಅಧ್ಯಯನಗಳು ನಡೆದಿವೆ. ಅಲ್ಲದೆ, 2010–15ರ ಮಧ್ಯೆ ನಾವೇ ನಡೆಸಿದ ಅಧ್ಯಯನದಲ್ಲೂ ಜೇನುನೊಣಗಳ ಮೇಲೆ ಗಣನೀಯ ಪರಿಣಾಮ ಬೀರುವುದಿಲ್ಲ ಎಂಬುದು ಪತ್ತೆಯಾಗಿದೆ. ಹೀಗಾಗಿ ಮತ್ತೆ ಅಧ್ಯಯನದ ಅವಶ್ಯಕತೆ ಇಲ್ಲ’ ಎಂದು ಪ್ರತಿಪಾದಿಸಿತ್ತು. 2018ರಿಂದ 2022ರ ಮಧ್ಯೆ ಯಾವುದೇ ಅಧ್ಯಯನ ನಡೆಸದೆಯೇ ಮತ್ತೆ ಅರ್ಜಿ ಸಲ್ಲಿಸಲಾಗಿತ್ತು. ವಿಜ್ಞಾನಿಗಳ ಈ ಪ್ರತಿಪಾದನೆಯನ್ನು ಒಪ್ಪದ ಜಿಇಎಸಿ, ಈ ಪ್ರತಿಪಾದನೆಯ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಿತ್ತು.
ತಜ್ಞರ ಸಮಿತಿಯು ಜಿಇಎಸಿಗೆ ಸಲ್ಲಿಸಿದ ವರದಿಯಲ್ಲಿ, ‘ಬೇರೆ ದೇಶಗಳಲ್ಲಿ ನಡೆದ ಅಧ್ಯಯನಗಳನ್ನು ಪರಿಗಣಿಸಬಹುದಾದರೂ, ಭಾರತದ್ದೇ ಪರಿಸರದಲ್ಲಿ ಮತ್ತು ಸ್ಥಳೀಯ ಪರಿಸ್ಥಿತಿಗಳಲ್ಲಿ ಜೇನುನೊಣಗಳ ಮೇಲೆ ಅಧ್ಯಯನ ನಡೆಸಬಹುದು’ ಎಂದು ಅಭಿಪ್ರಾಯಪಟ್ಟಿದೆ. ಆದರೆ, ಅಧ್ಯಯನ ನಡೆಸಲೇಬೇಕು ಎಂದು ಹೇಳಿಲ್ಲ. ಬದಲಿಗೆ ಎನ್ವಿರಾನ್ಮೆಂಟಲ್ ರಿಲೀಸ್‌ಗೆ ಅನುಮತಿ ನೀಡಬಹುದು ಎಂದು ಶಿಫಾರಸು ಮಾಡಲಾಗಿದೆ. ಜೇನುನೊಣಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ವಿಸ್ತೃತ ಅಧ್ಯಯನದ ಕೊರತೆ ಇದ್ದರೂ, ಅದನ್ನು ನಿರ್ಲಕ್ಷಿಸಲಾಗಿದೆ.
2010–15ರ ಮಧ್ಯೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ಮೂರು ಅಧ್ಯಯನ ವರದಿಗಳ ಪ್ರಕಾರ, ಜೇನುನೊಣಗಳ ಮೇಲೆ ಆಗುವ ಪರಿಣಾಮವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬದಲಾಗುತ್ತದೆ. ಅಕ್ಕಪಕ್ಕದ ರಾಜ್ಯಗಳಲ್ಲೇ ದೊಡ್ಡ ಪ್ರಮಾಣದ ವ್ಯತ್ಯಾಸವಿದೆ. ಹೀಗಿದ್ದಾಗ ದೂರದ ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಅಧ್ಯಯನ ವರದಿಗಳನ್ನು ಸಾರಾಸಗಟಾಗಿ ಭಾರತದ ಪರಿಸರಕ್ಕೆ ಅನ್ವಯ ಮಾಡುವುದು ಅಪಾಯಕಾರಿ. ಈ ಅಪಾಯವನ್ನು ವಿಜ್ಞಾನಿಗಳ ತಂಡ, ತಜ್ಞರ ಸಮಿತಿ ಮತ್ತು ಜಿಇಎಸಿ ಸಹ ನಿರ್ಲಕ್ಷಿಸಿವೆ. ಎನ್ವಿರಾನ್ಮೆಂಟ್ ರಿಲೀಸ್ ಅಧ್ಯಯನ ಮತ್ತು ಜೇನುನೊಣಗಳ ಮೇಲೆ ಆಗುವ ಪರಿಣಾಮ ಕುರಿತ ಅಧ್ಯಯನವನ್ನು ಏಕಕಾಲದಲ್ಲಿ ನಡೆಸುವಂತೆ ವಿಜ್ಞಾನಿಗಳ ತಂಡಕ್ಕೆ ಜಿಇಎಸಿ ಮತ್ತೆ ಸೂಚಿಸಿದೆ.
ಸೂಕ್ಷ್ಮಾಣು ಜೀವಿಗಳಿಗೆ ಅಪಾಯ
ಹೆಚ್ಚು ಇಳುವರಿ ಇದ್ದರೂ, ಕುಲಾಂತರಿ ತಳಿಗಳಿಂದ ಪರಿಸರಕ್ಕೆ ಹಾನಿಯಾಗುತ್ತವೆ ಎಂಬುದು ಹಲವು ಬಾರಿ ದೃಢಪಟ್ಟಿದೆ. ಕುಲಾಂತರಿ ಸಾಸಿವೆ ಡಿಎಂಎಚ್–11ರ ವಿಚಾರದಲ್ಲೂ ಇದು ಸತ್ಯ ಎಂಬುದು ಅದನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ವರದಿಯೇ ಹೇಳುತ್ತದೆ.
ಕುಲಾಂತರಿ ಸಾಸಿವೆಯನ್ನು ಪ್ರಾಯೋಗಿಕವಾಗಿ ಬೆಳೆದ ಹೊಲಗಳಲ್ಲಿನ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಕಡಿಮೆಯಾಗಿತ್ತು ಎಂದು ವಿಜ್ಞಾನಿಗಳ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಸೂಕ್ಷ್ಮಾಣು ಜೀವಿಗಳ ಸಂಖ್ಯೆಯಲ್ಲಿ ಆಗುವ ಇಳಿಕೆಯ ಪ್ರಮಾಣ ಎಷ್ಟು ಎಂಬುದನ್ನು ಸ್ಪಷ್ಟವಾಗಿ ತೋರಿಸಿಲ್ಲ. ‘ಬದಲಿಗೆ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಕಡಿಮೆಯಾದರೂ, ಅದು ಗಣನೀಯ ಪ್ರಮಾಣದಲ್ಲಿ ಅಲ್ಲ. ಹೀಗಾಗಿ ಆತಂಕ ಪಡುವ ಅವಶ್ಯಕತೆ ಇಲ್ಲ’ ಎಂದು ವರದಿಯಲ್ಲಿ ಹೇಳಲಾಗಿದೆ.
ಅನುಮತಿ ರದ್ದುಪಡಿಸಲು ಆಗ್ರಹ
ಕುಲಾಂತರಿ ಸಾಸಿವೆಯ ‘ಎನ್ವಿರಾನ್ಮೆಂಟಲ್ ರಿಲೀಸ್’ಗೆ ಅನುಮತಿ ನೀಡುವಲ್ಲಿ ಹಲವು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ವಿಜ್ಞಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಜ್ಞಾನಿಗಳ ಪ್ರಮುಖ ಆಕ್ಷೇಪಗಳು:
* ಅನುಮತಿ ನೀಡುವ ಮುನ್ನ ಸರ್ಕಾರದ ಸಂಸ್ಥೆಗಳ ಹೊರತಾಗಿ, ಸ್ವತಂತ್ರ ಸಂಸ್ಥೆ ಮತ್ತು ಸಾರ್ವಜನಿಕರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡಿಲ್ಲ
* ಕೆಲವೇ ತಳಿಗಳ ಜತೆಗೆ ಹೋಲಿಸಿ ಕುಲಾಂತರಿ ಸಾಸಿವೆಯ ಇಳುವರಿ ಹೆಚ್ಚು ಎಂದು ಹೇಳಲಾಗಿದೆ. ಆದರೆ, ಅದಕ್ಕಿಂತಲೂ ಹೆಚ್ಚು ಇಳುವರಿ ನೀಡುವ ತಳಿಗಳನ್ನು ಭಾರತದಲ್ಲಿ ಬೆಳೆಯಲಾಗುತ್ತಿದೆ. ಅವುಗಳನ್ನು ಅಧ್ಯಯನಕ್ಕೆ ಪರಿಗಣಿಸಿಲ್ಲ
* ಈ ಸಾಸಿವೆಯಿಂದ ಪರಿಸರದ ಮೇಲೆ ಆಗುವ ಪರಿಣಾಮದ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿಲ್ಲ. ಜೇನುನೊಣಗಳ ಮೇಲೆ ಆಗುವ ಪರಿಣಾಮವನ್ನು ಕಡೆಗಣಿಸಲಾಗಿದೆ
ಸರ್ಕಾರದ ಸಮರ್ಥನೆ
* ಕುಲಾಂತರಿ ಸಾಸಿವೆಗೆ ಸಂಬಂಧಿಸಿದ ಅಧ್ಯಯನ ವರದಿಯನ್ನು 2016ರಲ್ಲೇ ಸಂಬಂಧಿತ ಸಂಸ್ಥೆ ಮತ್ತು ಪರಿಸರ ಸಚಿವಾಲಯದ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿತ್ತು. ಬಂದ ಅಭಿಪ್ರಾಯಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಕೆಲವು ವಿಜ್ಞಾನಿಗಳು ಮಾಡಿರುವ ಆರೋಪದಲ್ಲಿ ಹುರುಳಿಲ್ಲ
* ಕುಲಾಂತರಿ ಸಾಸಿವೆಯನ್ನು 30ಕ್ಕೂ ಹೆಚ್ಚು ದೇಶಗಳಲ್ಲಿ ಬೆಳೆಯಲಾಗುತ್ತಿದೆ. ಕುಲಾಂತರಿ ಸಾಸಿವೆಯು ಹೆಚ್ಚು ಇಳುವರಿ ನೀಡುತ್ತದೆ ಎಂಬುದು ಸಾಬೀತಾಗಿದೆ
* ಪರಿಸರದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಈಗಾಗಲೇ ವಿಸ್ತೃತ ಅಧ್ಯಯನ ನಡೆದಿದೆ. ಜೇನುನೊಣಗಳ ಮೇಲೆ ಆಗುವ ಪರಿಣಾಮದ ಬಗ್ಗೆ ಮತ್ತೆ ಅಧ್ಯಯನ ನಡೆಸಲು ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.