ADVERTISEMENT

EXPLAINER: ಸ್ವದೇಶಿ ಸೂಪರ್ ಕಂಪ್ಯೂಟರ್ ಯೋಜನೆ; ಸಾಧಿಸಿದ್ದಿಷ್ಟು, ಇದೆ ಇನ್ನಷ್ಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2024, 15:35 IST
Last Updated 3 ಅಕ್ಟೋಬರ್ 2024, 15:35 IST
<div class="paragraphs"><p>ಪರಮ್ ರುದ್ರಾ ಸೂಪರ್‌ಕಂಪ್ಯೂಟರ್</p></div>

ಪರಮ್ ರುದ್ರಾ ಸೂಪರ್‌ಕಂಪ್ಯೂಟರ್

   

ಎಕ್ಸ್ ಚಿತ್ರ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆ. 26ರಂದು ‘ಪರಮ್ ರುದ್ರಾ’ ಎಂಬ ₹130 ಕೋಟಿ ವೆಚ್ಚದ ಸೂಪರ್ ಕಂಪ್ಯೂಟರ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. 2015ರಲ್ಲಿ ಆರಂಭವಾದ ರಾಷ್ಟ್ರೀಯ ಸೂಪರ್ ಕಂಪ್ಯೂಟರ್ ಮಿಷನ್ ಯೋಜನೆಯಡಿ ಏಳು ವರ್ಷಗಳಲ್ಲಿ ಒಟ್ಟು ₹4,500 ಕೋಟಿ ವೆಚ್ಚದಲ್ಲಿ 70 ಸೂಪರ್ ಕಂಪ್ಯೂಟರ್‌ಗಳನ್ನು ಸಿದ್ಧಪಡಿಸಬೇಕಿತ್ತು. ಆದರೆ ಈವರೆಗೂ 20 ಸೂಪರ್ ಕಂಪ್ಯೂಟರ್‌ಗಳು ಮಾತ್ರ ರಾಷ್ಟ್ರಕ್ಕೆ ಸಮರ್ಪಣೆಯಾಗಿವೆ. 

ವೈಜ್ಞಾನಿಕ ಕ್ಷೇತ್ರಕ್ಕೆ ಪೂರಕವಾಗಿ ಅತ್ಯಾಧುನಿಕ ತಂತ್ರಜ್ಞಾನದ ನೆರವನ್ನು ನೀಡುವ ಉದ್ದೇಶದಿಂದ ಸೂಪರ್ ಕಂಪ್ಯೂಟರ್ ಅನ್ನು ಸ್ವದೇಶಿಯವಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯವು 2015ರಲ್ಲಿ ಕಾರ್ಯರೂಪಕ್ಕೆ ತಂದಿತು. ಭೌತವಿಜ್ಞಾನ, ಕಾಸ್ಮಾಲಜಿಯಿಂದ ಹಿಡಿದು ಭೂವಿಜ್ಞಾನದವರೆಗೂ ಬೃಹತ್ ಮಾಹಿತಿ ಸಂಗ್ರಹ ಹಾಗೂ ಕಂಪ್ಯೂಟಿಂಗ್‌ ಉದ್ದೇಶದೊಂದಿಗೆ ಹೊಸ ಮಾದರಿಯ ಸೂಪರ್ ಕಂಪ್ಯೂಟರ್‌ಗಳನ್ನು ಕೇಂದ್ರ ಅಭಿವೃದ್ಧಿಪಡಿಸುವ ಯೋಜನೆ ಹೊಂದಿತ್ತು.

ADVERTISEMENT

ಇತ್ತೀಚೆಗೆ ಪ್ರಧಾನಮಂತ್ರಿ ರಾಷ್ಟ್ರಕ್ಕೆ ಸಮರ್ಪಿಸಿದ ಮೂರು ಸೂಪರ್ ಕಂಪ್ಯೂಟರ್‌ಗಳನ್ನು ಪುಣೆ, ದೆಹಲಿ ಹಾಗೂ ಕೊಲ್ಕತ್ತದಲ್ಲಿ ಸ್ಥಾಪಿಸಲಾಗಿದೆ. ಇವುಗಳನ್ನು ಹವಾಮಾನ ಹಾಗೂ ವಾತಾವರಣಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ಬಳಸಲಾಗುವುದು ಎಂದಿದ್ದಾರೆ.

ಏನಿದು ಸೂಪರ್‌ಕಂಪ್ಯೂಟರ್‌ ಯೋಜನೆ?

ಉದ್ಯಮಗಳಲ್ಲಿನ ಕ್ಲಿಷ್ಟಕರ ಹಾಗೂ ವೈಜ್ಞಾನಿಕ ಸವಾಲುಗಳನ್ನು ಸುಲಭವಾಗಿ ಪರಿಹರಿಸಲು ಸೂಕ್ತವಾಗುವಂತೆ ಅಭಿವೃದ್ಧಿಪಡಿಸಿದ ಬೃಹತ್ ಕಂಪ್ಯೂಟಿಂಗ್ ವ್ಯವಸ್ಥೆಯೇ ಸೂಪರ್‌ಕಂಪ್ಯೂಟರ್‌. ಕ್ವಾಂಟಮ್ ಮೆಕ್ಯಾನಿಕ್ಸ್ ಆಗಿರಲಿ, ಶಸ್ತ್ರಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನೆ, ಹಾವಾಮಾನ ಹಾಗೂ ವಾತಾವರಣ ಸಂಶೋಧನೆ, ತೈಲ ಹಾಗೂ ಅನಿಲ ನಿಕ್ಷೇಪಗಳ ಪತ್ತೆ, ಆಣ್ವಿಕ ಡೈನಾಮಿಕ್ಸ್‌ ಅಥವಾ ಭೌತವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳ ರಚನೆ, ಡಾಟಾ ಅನಾಲಿಟಿಕ್ಸ್‌ ಹಾಗೂ ಬಿಗ್ ಡಾಟಾ... ಹೀಗೆ ಬೃಹತ್‌ ಲೆಕ್ಕಾಚಾರಕ್ಕೆ ಸೂಪರ್‌ ಕಂಪ್ಯೂಟರ್‌ಗಳನ್ನು ಬಳಸಲಾಗುತ್ತದೆ.

ಸಾಮಾನ್ಯ ಕಂಪ್ಯೂಟರ್‌ಗಳಂತೆ ಇವುಗಳನ್ನು ಮೇಜಿನ ಮೇಲಿಡಲಾಗದು. ಇದಕ್ಕೆ ಒಂದು ಬೃಹತ್ ಕೋಣೆಯೇ ಬೇಕು. ಹಲವು ಕಂಪ್ಯೂಟರ್‌ಗಳನ್ನು ಒಳಗೊಂಡ ರಚನೆ ಇದಾಗಿರುವುದರಿಂದ, ಹಲವು ಹಂತಗಳ ಕಪಾಟು ಮಾದರಿಯ ವ್ಯವಸ್ಥೆ ಇರಬೇಕು. ಇಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಹಲವು ಕಂಪ್ಯೂಟರ್‌ಗಳನ್ನು ಒಂದೆಡೆ ಸೇರಿಸುವ ಮೂಲಕ ಒಂದು ಸೂಪರ್ ಕಂಪ್ಯೂಟರ್ ಅನ್ನು ಸಿದ್ಧಪಡಿಸಲಾಗುತ್ತದೆ.

ಈವರೆಗಿನ ಅತಿ ದೊಡ್ಡ ಸೂಪರ್ ಕಂಪ್ಯೂಟರ್‌ ಅನ್ನು ಐಬಿಎಂ ಅಭಿವೃದ್ಧಿಪಡಿಸಿದ್ದು, ಅದಕ್ಕೆ ಬ್ಲೂ ಜೆನ್ ಪಿ ಸೂಪರ್ ಕಂಪ್ಯೂಟರ್‌ ಎಂದು ಹೆಸರಿಡಲಾಗಿದೆ. 

ಸಾಮಾನ್ಯವಾಗಿ ಸೂಪರ್ ಕಂಪ್ಯೂಟರ್‌ಗಳ ಕಾರ್ಯಕ್ಷಮತೆಯನ್ನು ಪ್ರತಿ ಸೆಕೆಂಡಿಗೆ ನಿರ್ವಹಿಸುವ ಕೆಲಸವನ್ನು ಆಧರಿಸಿ ಅಳೆಯಲಾಗುತ್ತದೆ. ಅದನ್ನು ಫ್ಲೋಪ್ಸ್‌ (Floating point operations per second) ಎಂದು ಕರೆಯಲಾಗುತ್ತದೆ. ಸೂಪರ್ ಕಂಪ್ಯೂಟರ್‌ಗಳು ಹಲವು ಫ್ಲೋಪ್‌ಗಳಷ್ಟು ಕೆಲಸ ಮಾಡುತ್ತವೆ. ಅಂದರೆ ಒಂದು ಸೆಕೆಂಡಿಗೆ 1 ಲಕ್ಷ ಕೋಟಿಯಷ್ಟು ಡಾಟಾವನ್ನು ಲೆಕ್ಕಹಾಕಿ ನಿರ್ವಹಿಸುವಷ್ಟು ಸಾಮರ್ಥ್ಯ ಹೊಂದಿರುತ್ತದೆ.

ರಾಷ್ಟ್ರೀಯ ಸೂಪರ್‌ಕಂಪ್ಯೂಟರ್ ಮಿಷನ್ ಯೋಜನೆ ರೂಪುಗೊಂಡಿದ್ದು ಹೇಗೆ?

2015ರಲ್ಲಿ ರಾಷ್ಟ್ರೀಯ ಸೂಪರ್ ಕಂಪ್ಯೂಟರ್ ಮಿಷನ್‌ ಯೋಜನೆಯಡಿಯಲ್ಲಿ 70 ಸೂಪರ್ ಕಂಪ್ಯೂಟರ್‌ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿತ್ತು. ರಾಷ್ಟ್ರೀಯ ಜ್ಞಾನ ಜಾಲ (NKN) ಯೋಜನೆಯಡಿ ರಾಷ್ಟ್ರೀಯ ಸೂಪರ್‌ ಕಂಪ್ಯೂಟರ್‌ ಗ್ರಿಡ್ ಸ್ಥಾಪಿಸುವ ಯೋಜನೆಯೊಂದಿಗೆ ಸಂಶೋಧನಾ ಕೇಂದ್ರಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಇಂಥ ಕೆಲಸಗಳಿಗೆ ಈ ಸೂಪರ್ ಕಂಪ್ಯೂಟರ್‌ಗಳನ್ನು ಬಳಸುವ ಯೋಜನೆ ಇದಾಗಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಜಂಟಿ ಯೋಜನೆಯಲ್ಲಿ ₹4,500 ಕೋಟಿ ವೆಚ್ಚದಲ್ಲಿ ಏಳು ವರ್ಷಗಳ 70 ಸೂಪರ್ ಕಂಪ್ಯೂಟರ್ ಅಭಿವೃದ್ಧಿಪಡಿಸುವ ಯೋಜನೆಯಾಗಿ ಜಾರಿಗೊಳಿಸಲಾಗಿತ್ತು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಸುಧಾರಿತ ಕಂಪ್ಯೂಟಿಂಗ್ ಅಭಿವೃದ್ಧಿ ಕೇಂದ್ರಗಳನ್ನು ಈ ಯೋಜನೆಯ ನೋಡಲ್ ಸಂಸ್ಥೆಗಳಾಗಿ ನೇಮಿಸಲಾಗಿದೆ. ಈವರೆಗೂ ಎರಡು ಹಂತಗಳು ಪೂರ್ಣಗೊಂಡಿವೆ. ಮೂರನೇ ಹಂತ ಪ್ರಗತಿಯಲ್ಲಿದೆ.

ಹವಾಮಾನಕ್ಕೆ ಸಂಬಂಧಿಸಿದ ಮಾದರಿಗಳು, ಹವಾಮಾನ ಮುನ್ಸೂಚನೆ, ಏರೋಸ್ಪೇಸ್ ಎಂಜಿನಿಯರಿಂಗ್, ಜೀವವಿಜ್ಞಾನದ ಕಂಪ್ಯೂಟೇಷನ್‌, ಆಣ್ವಿಕ ಡೈನಾಮಿಕ್ಸ್‌, ಪರಮಾಣು ಕ್ಷೇತ್ರದ ಸಂಶೋಧನೆಗಳು, ರಾಷ್ಟ್ರದ ಭದ್ರತೆ ಹಾಗೂ ರಕ್ಷಣಾ ಇಲಾಖೆ ಯೋಜನೆಗಳು, ಭೂಕಂಪನದ ವಿಶ್ಲೇಷಣೆಗಳು, ವಿಪತ್ತುಗಳ ಅಂದಾಜು ಮತ್ತು ನಿರ್ವಹಣೆ, ರಸಾಯನ ವಿಜ್ಞಾನ ಕ್ಷೇತ್ರದ ಯೋಜನೆಗಳು, ನ್ಯಾನೊ ತಂತ್ರಜ್ಞಾನ, ಖಗೋಳ ವಿಜ್ಞಾನ, ಸೈಬರ್‌ ವ್ಯವಸ್ಥೆ, ಬಿಗ್ ಡಾಟಾ ಅನಾಲಿಟಿಕ್ಸ್‌, ಹಣಕಾಸು ಹಾಗೂ ಮಾಹಿತಿ ಕೋಶಗಳಾಗಿ ಈ ಸೂಪರ್ ಕಂಪ್ಯೂಟರ್‌ಗಳನ್ನು ಬಳಸಲಾಗುತ್ತಿದೆ.

ಸೂಪರ್‌ಕಂಪ್ಯೂಟರ್ ಮಿಷನ್ ಯೋಜನೆ ಭಾರತಕ್ಕೆ ಮಹತ್ವವೇಕೆ?

1970ರಲ್ಲಿ ಭಾರತ ಕೈಗೊಂಡು ವಿಫಲವಾದ ಬಾಹ್ಯಾಕಾಶ ಯೋಜನೆ ಹಾಗೂ 1990ರಲ್ಲೇ ಸೂಪರ್ ಕಂಪ್ಯೂಟರ್ ಉತ್ಪಾದಿಸುವ ಭಾರತದ ಪ್ರಯತ್ನಕ್ಕೆ ಪಾಶ್ಚಾತ್ಯ ರಾಷ್ಟ್ರಗಳು ಅಡ್ಡಗಾಲು ಹಾಕಿದ ಘಟನೆಗಳು ಸೂಪರ್‌ಕಂಪ್ಯೂಟರ್ ಮಿಷನ್ ಯೋಜನೆಗೆ ಪ್ರೇರಕದಂತೆ ಕಲಸ ಮಾಡಿತು. ಇದರೊಂದಿಗೆ, ಭಾರತದಲ್ಲೇ ಉತ್ಪಾದಿಸುವ ಮೂಲಕ ಅಗ್ಗದ, ಸ್ವದೇಶಿ ತಂತ್ರಜ್ಞಾನ ಆಧಾರಿತ ಹಾಗೂ ನಿರ್ಮಿತ ಸಾಧನ ಸೂಪರ್‌ ಕಂಪ್ಯೂಟರ್‌ಗಳು ಸಿದ್ಧಗೊಂಡವು.

ಈವರೆಗಿನ ಸ್ವದೇಶಿ ಸೂಪರ್ ಕಂಪ್ಯೂಟರ್‌ಗಳು

2019ರಿಂದ 2023ರವರೆಗೆ ಒಟ್ಟು 24.83 ಪೆಟಾಫ್ಲೋಪ್ಸ್‌ ಸಾಮರ್ಥ್ಯದ ಸೂಪರ್ ಕಂಪ್ಯೂಟರ್‌ಗಳನ್ನು ಅನುಷ್ಠಾನಗೊಳಿಸಲಾಗಿದೆ.

  • ಈ ಸೂಪರ್ ಕಂಪ್ಯೂಟರ್‌ಗಳ ನಿರ್ವಹಣೆಗಾಗಿ 1.75 ಲಕ್ಷ ಸಿಬ್ಬಂದಿಯನ್ನು ತರಬೇತುಗೊಳಿಸಲಾಗಿದೆ

  • 100ಕ್ಕೂ ಹೆಚ್ಚು ಸಂಸ್ಥೆಗಳು ಈ ನೂತನ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ

  • 73.25 ಲಕ್ಷದಷ್ಟು ಅತ್ಯಧಿಕ ಸಾಮರ್ಥ್ಯ ಬೇಡುವ ಹೆಚ್ಚಿನ ಕಾರ್ಯಕ್ಷಮತೆಯ ಪ್ರಶ್ನೆಗಳಿಗೆ ಉತ್ತರ ಪಡೆಯಲಾಗಿದೆ

ಸೂಪರ್ ಕಂಪ್ಯೂಟರ್ಇನ್‌ಸ್ಟಿಟ್ಯೂಟ್ಸಾಮರ್ಥ್ಯ
ಪರಮ್ ಶಿವಾಯ್ಐಐಟಿ ಭುವನೇಶ್ವರ837 ಟೆರಾ ಫ್ಲೋಪ್ಸ್‌; 54.5 ಟಿಬಿ ಸ್ಮೃತಿಕೋಶ
ಪರಮ್ ಶಕ್ತಿಐಐಟಿ ಖರಗ್‌ಪುರ1.66 ಪೆಟಾ ಫ್ಲೋಪ್ಸ್‌; 103.125 ಟಿಬಿ ಸ್ಮೃತಿಕೋಶ
ಪರಮ್‌ ಬ್ರಹ್ಮಐಐಎಸ್‌ಸಿ (ಶಿಕ್ಷಣ ಮತ್ತು ಸಂಶೋಧನೆ), ಪುಣೆ1.75 ಪೆಟಾ ಫ್ಲೋಪ್ಸ್‌; 56.8 ಟಿಬಿ ಸ್ಮೃತಿಕೋಶ
ಪರಮ್‌ ಯುಕ್ತಿಜವಾಹರಲಾಲ್‌ ನೆಹ್ರೂ ಅತ್ಯಾಧುನಿಕ ವೈಜ್ಞಾನಿ ಸಂಶೋಧನಾ ಕೇಂದ್ರ, ಬೆಂಗಳೂರು1.8 ಪೆಟಾಫ್ಲೋಪ್ಸ್‌; 52.416 ಟಿ.ಬಿ.
ಪರಮ್ ಸಂಗನಕ್‌ಐಐಟಿ ಕಾನ್ಪುರ1.67 ಪೆಟಾಫ್ಲೋಪ್ಸ್‌ – 104.832 ಟಿ.ಬಿ.
ಪರಮ್‌ ಪ್ರವೇಗಾಐಐಎಸ್‌ಸಿ, ಬೆಂಗಳೂರು3.3 ಪೆಟಾಫ್ಲೋಪ್ಸ್‌; 245.945 ಟಿ.ಬಿ.
ಪರಮ್ ಸೇವಾಐಐಟಿ ಹೈದರಾಬಾದ್838 ಟೆರಾಫ್ಲೋಪ್ಸ್‌; 52.416 ಟಿ.ಬಿ.
ಪರಮ್‌ ಸ್ಮೃತಿರಾಷ್ಟ್ರೀಯ ಕೃಷಿ, ಆಹಾರ ಜೈವಿಕತಂತ್ರಜ್ಞಾನ ಸಂಸ್ಥೆ, ಮೊಹಾಲಿ838 ಟೆರಾಫ್ಲೋಪ್ಸ್‌
ಪರಮ್‌ ಉತ್ಕರ್ಷಸಿಡಾಕ್, ಬೆಂಗಳೂರು838 ಟೆರಾಫ್ಲೋಪ್ಸ್‌; 52,416 ಟಿ.ಬಿ
ಪರಮ್‌ ಗಂಗಾಐಐಟಿ ರೂರ್ಕಿ1.66 ಪೆಟಾಫ್ಲೋಪ್ಸ್‌; 104.832 ಟಿ.ಬಿ.
ಪರಮ್‌ ಅನಂತಐಐಟಿ ಗಾಂಧಿನಗರ838 ಟೆರಾಫ್ಲೋಪ್ಸ್‌; 52.416 ಟಿ.ಬಿ.
ಪರಮ್‌ ಪೊರುಲ್‌ಎನ್‌ಐಟಿ ತಿರುಚಿ838 ಟೆರಾಫ್ಲೋಪ್ಸ್
ಪರಮ್ ಹಿಮಾಲಯಐಐಟಿ ಮಂಡಿ838 ಟೆರಾಫ್ಲೋಪ್ಸ್‌; 52.416 ಟಿ.ಬಿ.
ಪರಮ್ ಕಮರೂಪಐಐಟಿ ಗುವಾಹಟಿ838 ಟೆರಾಫ್ಲೋಪ್ಸ್‌; 52.416 ಟಿ.ಬಿ.
ಪರಮ್ ಸಿದ್ಧಿಎಐ ಸಿಡಾಕ್, ಪುಣೆ5.2 ಪೆಟಾಫ್ಲೋಪ್ಸ್‌; 210 ಪೆಟಾಫ್ಲೋಪ್ಸ್
ಪರಮ್ ರುದ್ರಾಬೃಹತ್ ಮೆಟ್ರೆವೇವ್ ರೇಡಿಯೊ ಟೆಲಿಕಸ್ಟಕೋಪ್‌, ಪುಣೆ1 ಪೆಟಾಫ್ಲೋಪ್ಸ್
ಅಂತರ ವಿಶ್ವವಿದ್ಯಾಲಯ ಅಕ್ಸಲರೇಟರ್ ಸೆಂಟರ್, ದೆಹಲಿ838 ಟೆರಾಫ್ಲೋಪ್ಸ್
ಎಸ್‌ಎನ್ ಬೋಸ್ ಅಂತರರಾಷ್ಟ್ರೀಯ ಮೂಲ ವಿಜ್ಞಾನ ಕೇಂದ್ರ, ಕೋಲ್ಕತ್ತ838 ಟೆರಾಫ್ಲೋಪ್ಸ್

ಈ ಯೋಜನೆಗೆ ಮೀಸಲಿಡಲಾಗಿದ್ದ ₹ 4,500 ಕೋಟಿಯಲ್ಲಿ ಶೇ 16.67ರಷ್ಟು ಹಣವನ್ನು ಬಳಕೆ ಮಾಡಲಾಗಿದೆ. ಯೋಜನೆಯಂತೆ ಇನ್ನೂ 50 ಸೂಪರ್ ಕಂಪ್ಯೂಟರ್‌ಗಳ ಅಭಿವೃದ್ಧಿಯಾಗಬೇಕಿದೆ ಎಂದು ಅಂದಾಜಿಸಲಾಗಿದೆ.

ಜಾಗತಿಕ ಮಟ್ಟದಲ್ಲಿ ಚೀನಾ ಬಳಿ ಅತಿ ಹೆಚ್ಚು ಸೂಪರ್‌ ಕಂಪ್ಯೂಟರ್‌ಗಳಿವೆ. ನಂತರದ ಸ್ಥಾನದಲ್ಲಿ ಅಮೆರಿಕ, ಜಪಾನ್, ಫ್ರಾನ್ಸ್, ಜರ್ಮನಿ, ಹಾಲೆಂಡ್, ಐರ್ಲೆಂಡ್‌ ಹಾಗೂ ಬ್ರಿಟನ್‌ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.