ದೇಶದಲ್ಲಿ ಲಭ್ಯವಿರುವ ಕಾರ್ಮಿಕ ಬಲದಲ್ಲಿ ಒಂದು ಭಾಗದಷ್ಟು ಜನರಿಗಷ್ಟೇ ವೇತನ ದೊರೆಯುವ ಕೆಲಸವಿದೆ. ಹೀಗೆ ದುಡಿಮೆಯಲ್ಲಿ ತೊಡಗಿಕೊಂಡಿರುವ ಕಾರ್ಮಿಕರಲ್ಲಿ ವೇತನ ಹಂಚಿಕೆ ಅಸಮಾನವಾಗಿದೆ. ದುಡಿಮೆಯಲ್ಲಿ ತೊಡಗಿಕೊಂಡಿರುವ ಕಾರ್ಮಿಕರು 2019–20ನೇ ಸಾಲಿನಲ್ಲಿ ಒಟ್ಟು ₹1,869 ಕೋಟಿಯಷ್ಟು ವೇತನ ಪಡೆದಿದ್ದಾರೆ. ಇದರಲ್ಲಿ ಶೇ 1ರಷ್ಟು ಜನರು ಶೇ 6.48ರಷ್ಟು ವೇತನದ ಪಾಲು ಹೊಂದಿದ್ದಾರೆ. ಅತಿಹೆಚ್ಚು ವೇತನ ಪಡೆಯುವ ಮೊದಲ ಶೇ 10ರಷ್ಟು ಜನರು ಒಟ್ಟು ವೇತನದ ಶೇ 32ರಷ್ಟನ್ನು ಗಳಿಸುತ್ತಾರೆ. ಆದರೆ, ದುಡಿಯುವ ವರ್ಗದಲ್ಲಿ ಅತ್ಯಂತ ಕಡಿಮೆ ವೇತನ ಪಡೆಯುವ ಕೊನೆಯ ಶೇ 50ರಷ್ಟು ಮಂದಿಗೆ ದೊರೆಯುವ ವೇತನದ ಪ್ರಮಾಣ ಶೇ 22ರಷ್ಟು ಮಾತ್ರ. 2019–20ರ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಪಡೆಯಲಾದ ಒಟ್ಟು ವೇತನದಲ್ಲಿ ಮೊದಲ ಶೇ 50ರಷ್ಟು ಮಂದಿ 78ರಷ್ಟು ವೇತನವನ್ನು ಹಂಚಿಕೊಂಡಿದ್ದಾರೆ.
ಉಳಿದ ಶೇ 50ರಷ್ಟು ಮಂದಿಗೆ ದೊರೆತದ್ದು ಒಟ್ಟು ವೇತನದ ಶೇ 22ರಷ್ಟು ಮಾತ್ರ. 2016–17, 2017–18, 2018–19 ಮತ್ತು 2019–20ರ ಆರ್ಥಿಕ ವರ್ಷಗಳಲ್ಲಿ ಈ ವರ್ಗಕ್ಕೆ ದೊರೆಯುತ್ತಿರುವ ವೇತನದ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗೆ ವೇತನದ ಹಂಚಿಕೆಯಲ್ಲಿನ ಅಸಮಾನತೆ ಮುಂದುವರಿಯುತ್ತಲೇ ಇದೆ ಎಂದು ‘ಭಾರತದಲ್ಲಿ ಅಸಮಾನತೆಯ ಸ್ಥಿತಿಗತಿ’ ಕುರಿತ ವರದಿಯಲ್ಲಿ ಹೇಳಲಾಗಿದೆ. ಈ ವರದಿಯನ್ನು ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಪರಿಷತ್ ಸಿದ್ಧಪಡಿಸಿದೆ. ವರದಿಯನ್ನು ಇತ್ತೀಚೆಗೆ ಪ್ರಧಾನಿಗೆ ಸಲ್ಲಿಸಲಾಗಿದೆ.
ಕಡಿಮೆ ವೇತನ ವರ್ಗ: ಸ್ವಉದ್ಯೋಗಿಗಳ ಪ್ರಮಾಣ ಹೆಚ್ಚು
* ದೇಶದ ಕಾರ್ಮಿಕರನ್ನು ಏಳು ವೇತನ ವರ್ಗಗಳಾಗಿ ವರ್ಗೀಕರಿಸಲಾಗಿದೆ. ಈ ವರ್ಗಗಳಲ್ಲಿ ಕಾಯಂ ಉದ್ಯೋಗದಲ್ಲಿ ಇರುವವರು, ಕಾಯಂ ಅಲ್ಲದ ಉದ್ಯೋಗದಲ್ಲಿ ಇರುವವರು ಮತ್ತು ಸ್ವಉದ್ಯೋಗಿಗಳು ಎಂದು ಮರು ವರ್ಗೀಕರಣ ಮಾಡಲಾಗಿದೆ. ಅತ್ಯಂತ ಕಡಿಮೆ ವೇತನ ಪಡೆಯುತ್ತಿರುವವ ವರ್ಗದಲ್ಲಿ ಸ್ವ ಉದ್ಯೋಗಿಗಳ ಪ್ರಮಾಣ ಅತಿಹೆಚ್ಚು. ವೇತನದ ಮೊತ್ತ ಹೆಚ್ಚುತ್ತಾ ಹೋದಂತೆ ಸ್ವ ಉದ್ಯೋಗಿಗಳ ಪ್ರಮಾಣ ಕಡಿಮೆಯಾಗಿದೆ. ಅಂದರೆ, ಉತ್ತಮ ಗಳಿಕೆಯ ಸ್ವಉದ್ಯೋಗಿಗಳ ಸಂಖ್ಯೆ ಮತ್ತು ಪ್ರಮಾಣ ಕಡಿಮೆ ಎಂಬುದನ್ನು ಇದು ಸೂಚಿಸುತ್ತದೆ
* ಪ್ರತಿ ತಿಂಗಳು ₹5,000ಕ್ಕಿಂತ ಕಡಿಮೆ ವೇತನ/ಗಳಿಕೆ ಪಡೆಯುವ ಕಾರ್ಮಿಕರಲ್ಲಿ ಸ್ವಉದ್ಯೋಗಿಗಳ ಪ್ರಮಾಣ ಶೇ 76ಕ್ಕಿಂತ ಹೆಚ್ಚು. ಇಷ್ಟು ಕಡಿಮೆ ವೇತನ ಪಡೆಯುವ ವರ್ಗದಲ್ಲಿ ಸಣ್ಣ–ಪುಟ್ಟ ಸ್ವಉದ್ಯೋಗ ಮಾಡುವವರ ಪ್ರಮಾಣ ಹೆಚ್ಚು. ಅಂದರೆ, ಕನಿಷ್ಠ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಕಾಗುವಷ್ಟು ಗಳಿಕೆ ಕೊಡುವ ಸ್ವಉದ್ಯೋಗವೂ ಇವರಿಗೆ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ. ₹5,000ದಿಂದ ₹10,000ರದವರೆಗೆ ವೇತನ/ಗಳಿಕೆ ಪಡೆಯುವ ಕಾರ್ಮಿಕ ವರ್ಗದ ಸ್ಥಿತಿಯೂ ಇದಕ್ಕಿಂತ ಹೆಚ್ಚು ಭಿನ್ನವಾಗಿಲ್ಲ
* ಮಾಸಿಕ ₹5,000ಕ್ಕಿಂತ ಕಡಿಮೆ ವೇತನ ಪಡೆಯುವ ವರ್ಗದಲ್ಲಿ ಕಾಯಂ ಉದ್ಯೋಗದಲ್ಲಿ ಇರುವವರ ಪ್ರಮಾಣ ಶೇ 21.36ರಷ್ಟಿದೆ. ಅಂದರೆ, ಕಾಯಂ ಉದ್ಯೋಗದಲ್ಲಿ ಇದ್ದೂ, ಬಹಳ ಮಂದಿಗೆ ಕನಿಷ್ಠ ವೇತನ ದೊರೆಯುತ್ತಿಲ್ಲ. ಕನಿಷ್ಠ ವೇತನದ ನಿಯಮಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ ಎಂಬುದನ್ನು ಈ ದತ್ತಾಂಶ ತೋರಿಸುತ್ತದೆ
* ₹5,000ದಿಂದ ₹10,000ದವರೆಗೆ ವೇತನ ಪಡೆಯುವ ವರ್ಗದಲ್ಲಿ ಶೇ 14.33ರಷ್ಟು ಮಂದಿ ಕಾಯಂ ಉದ್ಯೋಗದಲ್ಲಿ ಇದ್ದಾರೆ. ಇವರಲ್ಲಿ ಬಹುಪಾಲು ಮಂದಿ, ಕನಿಷ್ಠ ವೇತನವನ್ನೂ ಪಡೆಯುತ್ತಿಲ್ಲ ಎಂಬುದನ್ನು ಈ ದತ್ತಾಂಶ ಸೂಚಿಸುತ್ತದೆ. ಕನಿಷ್ಠ ವೇತನದ ನಿಯಮಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ ಎಂಬುದರತ್ತ ಈ ದತ್ತಾಂಶ ಬೊಟ್ಟು ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.