ADVERTISEMENT

ಮಾನವೀಯತೆಗಾಗಿ ಯೋಗ: ಇದು ಈ ಬಾರಿಯ ಯೋಗ ದಿನಾಚರಣೆಯ ಘೋಷವಾಕ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜೂನ್ 2022, 11:38 IST
Last Updated 20 ಜೂನ್ 2022, 11:38 IST
ವಿಶ್ವ ಯೋಗ ದಿನಾಚರಣೆ 2022
ವಿಶ್ವ ಯೋಗ ದಿನಾಚರಣೆ 2022   

ಬೆಂಗಳೂರು: ಯೋಗದ ಮೂಲ ಭಾರತ. ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಸುಯೋಗ ನಮ್ಮದು. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯನ್ನು ಸುಲಭದಲ್ಲಿ ಯೋಗದ ಮೂಲಕ ಎಲ್ಲರೂ ಪಡೆಯಬಹುದಾಗಿದೆ.

ದೈಹಿಕ ಕ್ಷಮತೆ ಕಾಯ್ದುಕೊಳ್ಳುವುದು ಮತ್ತು ಮಾನಸಿಕ ಆರೋಗ್ಯ ಸುಧಾರಿಸುವಲ್ಲಿ ಯೋಗ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.

ಮನುಷ್ಯನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡರೆ, ಅದರಿಂದ ವಿವಿಧ ರೀತಿಯ ಪ್ರಯೋಜನಗಳಿವೆ ಎಂದು ಈಗಾಗಲೇ ದೃಢಪಟ್ಟಿದೆ. ಹೀಗಾಗಿಯೇ ಯೋಗದ ಮಹತ್ವವನ್ನು ಜಗತ್ತಿಗೆ ಸಾರಲು, ಜೂನ್ 21 ರಂದು ಪ್ರತಿವರ್ಷ ‘ವಿಶ್ವ ಯೋಗ ದಿನಾಚರಣೆ‘ ಮಾಡಲಾಗುತ್ತದೆ. ಬದಲಾಗುತ್ತಿರುವ ಜೀವನಶೈಲಿಯಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ನೆರವಾಗುತ್ತದೆ. ಹೀಗಾಗಿ, ಯೋಗವನ್ನು ಎಲ್ಲರೂ ಅಭ್ಯಸಿಸಿ, ಅದರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವುದು ಯೋಗ ದಿನಾಚರಣೆಯ ಆಶಯವಾಗಿದೆ.

ADVERTISEMENT

ಹಿನ್ನೆಲೆ
2014ರ ಡಿಸೆಂಬರ್ 11ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ವಿಶ್ವ ಯೋಗ ದಿನಾಚರಣೆ‘ ಮಾಡುವ ಕುರಿತ ಕರಡು ಪ್ರಸ್ತಾವನೆಗೆ ಅನುಮೋದನೆ ದೊರೆಯಿತು. ಅದಕ್ಕೂ ಮೊದಲು, ಪ್ರಧಾನಿ ನರೇಂದ್ರ ಮೋದಿ, ಯೋಗಕ್ಕೆ ಒಂದು ದಿನ ಸೀಮಿತವಾಗಿರಿಸಬೇಕು ಮತ್ತು ಜಾಗತಿಕವಾಗಿ ಆಚರಿಸಲು ಅನುವು ಮಾಡಿಕೊಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ, ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಅನುಮೋದನೆ ನೀಡಿತು. ಇದು ಭಾರತೀಯರಿಗೆ ಹೆಮ್ಮೆಯ ಕ್ಷಣವೆಂದು ಬಣ್ಣಿಸಲಾಗಿದೆ.

ಆಚರಣೆ
2015ರ ಜೂನ್ 21ರಂದು ಜಾಗತಿಕವಾಗಿ ಮೊದಲ, ವಿಶ್ವ ಯೋಗ ದಿನ ಆಚರಿಸಲಾಯಿತು. ಕೇಂದ್ರ ಸರ್ಕಾರ, ಆಯುಷ್ ಸಚಿವಾಲಯದ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ರಾಜಪಥದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು.

ಮಾನವೀಯತೆಗಾಗಿ ಯೋಗ
ಪ್ರತಿ ಬಾರಿಯ ಯೋಗ ದಿನಾಚರಣೆಗೆ ಪೂರಕವಾಗಿ ವಿಶ್ವಸಂಸ್ಥೆ ಘೋಷವಾಕ್ಯವೊಂದನ್ನು ನೀಡುತ್ತದೆ. ಅದರಂತೆ, ಈ ಬಾರಿ ‘ಮಾನವೀಯತೆಗಾಗಿ ಯೋಗ‘ ಎಂಬ ಥೀಮ್ ಅನ್ನು ನೀಡಲಾಗಿದೆ. ಇದು ಎಂಟನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಾಗಿದೆ. ಈ ಬಾರಿ ಮೈಸೂರಿನಲ್ಲಿ ಪ್ರಮುಖ ಕಾರ್ಯಕ್ರಮ ನಡೆಯಲಿದ್ದು, ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಜತೆಗೆ 15,000ಕ್ಕೂ ಅಧಿಕ ಮಂದಿ ಯೋಗ ಪ್ರದರ್ಶನ ನೀಡಲಿದ್ದಾರೆ.

ಅಲ್ಲದೆ, ಜಾಗತಿಕವಾಗಿ, ವಿವಿಧ ಸಂಘ ಸಂಸ್ಥೆಗಳು, ಸರ್ಕಾರಗಳು, ಎನ್‌ಜಿಒಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಜೂನ್ 21ರಂದು ಯೋಗ ದಿನಾಚರಣೆ ಮಾಡುವ ಮೂಲಕ, ಯೋಗದ ಮಹತ್ವವನ್ನು ಸಾರಲಾಗುತ್ತದೆ.

ಪ್ರತಿವರ್ಷ ಯೋಗ ಕಲಿಯಲೆಂದೇ, ಸಾವಿರಾರು ಮಂದಿ ಆಕಾಂಕ್ಷಿಗಳು ವಿದೇಶದಿಂದ ಭಾರತಕ್ಕೆ ಬರುತ್ತಾರೆ.

ಮಹತ್ವ
ಜೂನ್ 21 ಅನ್ನು ಸುದೀರ್ಘ ದಿನವೆಂದು ಪರಿಗಣಿಸಲಾಗುತ್ತದೆ. ಸೂರ್ಯೋದಯವು ಬೇಗನೆ ಉಂಟಾಗಿ, ಸೂರ್ಯಾಸ್ತವು ತಡವಾಗಿ ಆಗಲಿದೆ. ಹೀಗಾಗಿ ಹೆಚ್ಚಿನ ಅವಧಿ ಹಗಲು ಇದ್ದು, ಅದಕ್ಕಾಗಿಯೇ ಈ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಆಹಾರ ಪದ್ಧತಿ, ಜೀವನಶೈಲಿಯಿಂದ ಬರಬಹುದಾದ ವಿವಿಧ ಕಾಯಿಲೆಗಳಿಂದ ಮುಕ್ತಿ ಪಡೆಯುವುದು, ಮಾನಸಿಕ ಆರೋಗ್ಯ ವೃದ್ಧಿಸಿಕೊಳ್ಳುವುದು ಕೂಡ ಯೋಗದ ಮಹತ್ವಗಳಲ್ಲಿ ಒಂದು. ಮಕ್ಕಳಿಂದ ತೊಡಗಿ, ಹಿರಿಯರವರೆಗೆ, ಯೋಗದಲ್ಲಿ ವಿವಿಧ ಆಸನಗಳಿವೆ.

ಯೋಗವನ್ನು ನಿಯಮಿತವಾಗಿ ಮಾಡುವುದರಿಂದ, ರಕ್ತಪರಿಚಲನೆ, ಜೀರ್ಣಕ್ರಿಯೆ ಸರಾಗವಾಗಿ ಉಂಟಾಗಿ, ದೈಹಿಕ ಸ್ಥಿತಿಗತಿ ಉತ್ತಮವಾಗಿರುತ್ತದೆ. ಅಲ್ಲದೆ, ಒತ್ತಡದ ಜೀವನಶೈಲಿಯಿಂದ ಪಾರಾಗಿ, ಮಾನಸಿಕ ನೆಮ್ಮದಿ ಪಡೆಯಲು, ಉತ್ತಮ ನಿದ್ರೆಗಾಗಿ ಯೋಗವು ಸಹಕರಿಸುತ್ತದೆ.

ಮನೆಯಲ್ಲಿ, ಕೆಲಸದ ಸ್ಥಳದಲ್ಲಿ ಮತ್ತು ಪ್ರವಾಸದ ಸಂದರ್ಭದಲ್ಲಿ ಸರಳವಾಗಿ ಕೆಲವೊಂದು ಯೋಗ ಭಂಗಿಗಳನ್ನು ಮಾಡುವುದರಿಂದ, ಆರೋಗ್ಯ ಸುಸ್ಥಿರವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.