ADVERTISEMENT

ಆಳ–ಅಗಲ: ಕರಾವಳಿ ಮೇಲೆ ಬೇಡ್ತಿ–ವರದಾ ಜೋಡಣೆಯ ಕಾರ್ಮೋಡ

‘ಎರಡನೇ ಎತ್ತಿನ ಹೊಳೆ’ಯಾಗುವ ಅನುಮಾನ: ಶಿರಸಿಯಲ್ಲಿ ನಾಳೆ ವಿಶೇಷ ಕಾರ್ಯಾಗಾರ

ಸದಾಶಿವ ಎಂ.ಎಸ್‌.
Published 22 ಮಾರ್ಚ್ 2021, 20:30 IST
Last Updated 22 ಮಾರ್ಚ್ 2021, 20:30 IST
ಯಲ್ಲಾಪುರ ತಾಲ್ಲೂಕಿನಲ್ಲಿ ಹರಿಯುವ ಬೇಡ್ತಿ ನದಿಯ ಸ್ಥಿತಿ ಸದ್ಯ ಹೀಗಿದೆ
ಯಲ್ಲಾಪುರ ತಾಲ್ಲೂಕಿನಲ್ಲಿ ಹರಿಯುವ ಬೇಡ್ತಿ ನದಿಯ ಸ್ಥಿತಿ ಸದ್ಯ ಹೀಗಿದೆ   

ಕಾರವಾರ: ‘ಬೇಡ್ತಿ– ವರದಾ ನದಿ ಜೋಡಣೆ’ ಪ್ರಸ್ತಾವ ಈಗ ಉತ್ತರ ಕನ್ನಡದ ಮಲೆನಾಡು ಮತ್ತು ಕರಾವಳಿಯಲ್ಲಿ ಚರ್ಚೆಯ ವಿಷಯವಾಗಿದೆ. ‘ಬೇಸಿಗೆಯಲ್ಲಿ ಬತ್ತಿ ಹೋಗುವ ನದಿಗಳಿಂದ ನೀರೆತ್ತುವ ಯೋಜನೆ ಹೇಗೆ ಕಾರ್ಯ ಸಾಧು’ ಎಂಬ ಪ್ರಶ್ನೆ ಎರಡೂ ಭಾಗದ ಜನರದ್ದಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈಚೆಗೆ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಈ ಯೋಜನೆಯನ್ನು ಪ್ರಸ್ತಾಪಿಸಿದ್ದರು. ವಿಸ್ತೃತ ಯೋಜನಾ ವರದಿ (ಡಿ.ಪಿ.ಆರ್) ಸಿದ್ಧಪಡಿಸಲು ‘ರಾಷ್ಟ್ರೀಯ ಜಲಮೂಲ ಅಭಿವೃದ್ಧಿ ಏಜೆನ್ಸಿ’ಗೆ (ಎನ್.ಡಬ್ಲ್ಯು.ಡಿ.ಎ) ಮನವಿ ಮಾಡುವುದಾಗಿ ಹೇಳಿದ್ದರು.

ಯೋಜನೆಯ ಸಾಧಕ– ಬಾಧಕಗಳ ಬಗ್ಗೆ ಚರ್ಚಿಸಿಲು ಮಾರ್ಚ್ 24ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಶಿರಸಿಯಲ್ಲಿ ವಿಶೇಷ ಕಾರ್ಯಾಗಾರ ಮತ್ತು ಸಮಾವೇಶ ಆಯೋಜಿಸಲಾಗಿದೆ. ಸೋಂದಾ ಸ್ವರ್ಣವಲ್ಲೀ ಮಠ, ಬೇಡ್ತಿ ಮತ್ತು ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಲವು ಮಂದಿ ವಿಷಯ ತಜ್ಞರು ಭಾಗವಹಿಸಿ ವಿಚಾರ ಮಂಡಿಸಲಿದ್ದಾರೆ.

ADVERTISEMENT

ಏನಿದು ಯೋಜನೆ?

ಬೇಡ್ತಿ ಮತ್ತು ವರದಾ ನದಿಗಳಲ್ಲಿ ಹರಿದು ಸಮುದ್ರ ಸೇರುವ 22 ಟಿ.ಎಂ.ಸಿ. ಅಡಿಗಳಷ್ಟು ನೀರನ್ನು ಹಾವೇರಿ, ಗದಗ, ಕೊಪ್ಪಳ, ಸಿಂಧನೂರು, ರಾಯಚೂರು ಪ್ರದೇಶಗಳಿಗೆ ಕೊಂಡೊಯ್ಯುವುದು ಯೋಜನೆಯ ಉದ್ದೇಶವಾಗಿದೆ.

ಯೋಜನೆಯ ನಿಖರವಾದ ಸ್ವರೂಪದ ಬಗ್ಗೆ ವಿವರವಾದ ವರದಿ ಸಲ್ಲಿಕೆಯಾದ ಬಳಿಕ ಗೊತ್ತಾಗಲಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ನೀರನ್ನು ಸಂಗ್ರಹಿಸಿಡಲು ಮೂರು ಜಲಾಶಯಗಳು, ಆಳವಾದ ಬಾವಿಗಳನ್ನು (ಸುರಂಗ ಮಾದರಿ) ನಿರ್ಮಿಸಲಾಗುತ್ತದೆ.

ಶಿರಸಿ ತಾಲ್ಲೂಕಿನಲ್ಲಿ ಪಟ್ಟಣದ ಹೊಳೆ, ಶಾಲ್ಮಲಾ ನದಿ ಹಾಗೂ ಯಲ್ಲಾಪುರ ತಾಲ್ಲೂಕಿನಲ್ಲಿ ಬೇಡ್ತಿ ನದಿಗೆ ದೊಡ್ಡ ಜಲಾಶಯಗಳನ್ನು ನಿರ್ಮಿಸಲಾಗುತ್ತದೆ. ಅವುಗಳಿಂದ ಬೃಹತ್ ಪಂಪ್‌ಗಳ ಮೂಲಕ ನೀರನ್ನು ಮೇಲೆತ್ತಿ, ಭಾರಿ ಗಾತ್ರದ ಪೈಪ್‌ಲೈನ್‌ಗಳಲ್ಲಿ ಹರಿಸಲಾಗುತ್ತದೆ.

ಆತಂಕದ ಛಾಯೆ...

‘‍ಕುಡಿಯುವ ನೀರಿಗೆ ಪ್ರಾಮಾಣಿಕವಾಗಿ ಜಾರಿಯಾಗುವ ಯೋಜನೆಗಳಿಗೆ ಯಾರದ್ದೂ ತಕರಾರಿಲ್ಲ. ಆದರೆ, ಕಾಮಗಾರಿಯನ್ನು ಬೃಹತ್ ನೀರಾವರಿ ಇಲಾಖೆ ಜಾರಿ ಮಾಡುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕುಡಿಯುವ ನೀರಿನ ಯೋಜನೆಯ ನೆಪದಲ್ಲಿ ನೀರಾವರಿ ಯೋಜನೆ ಸಿದ್ಧವಾಗುತ್ತಿದೆ. ಈ ಮೂಲಕ ಇದು ಪಶ್ಚಿಮ ಘಟ್ಟದ ‘ಎರಡನೇ ಎತ್ತಿನಹೊಳೆ’ ಯೋಜನೆಯಾಗಲಿದೆ ಎಂಬುದು ಹಲವರ ಕಳವಳವಾಗಿದೆ.

ವಿರೋಧವೇಕೆ?

ಪಶ್ಚಿಮ ಘಟ್ಟದಿಂದ ಇಳಿದು ಅರಬ್ಬಿ ಸಮುದ್ರದತ್ತ ಹರಿಯುವ ನೀರು ‘ವ್ಯರ್ಥ’ವಾಗುತ್ತಿದೆ ಎಂದು ಮೇಲ್ನೋಟಕ್ಕೆ ಕಂಡರೂ ಪರಿಸರ ಸಮತೋಲನ ಕಾಯ್ದುಕೊಳ್ಳಲು ಅದರ ಅಗತ್ಯವಿದೆ ಎನ್ನುವುದು ತಜ್ಞರ ಪ್ರತಿಪಾದನೆಯಾಗಿದೆ.

ಉತ್ತರ ಕನ್ನಡದ ಕಾರವಾರದಿಂದ ಭಟ್ಕಳದವರೆಗೂ ಉಪ್ಪು ನೀರಿನ ಸಮಸ್ಯೆಯಿದೆ. ಕಡಲಕಿನಾರೆಯಿಂದ ಹತ್ತಾರು ಕಿಲೋಮೀಟರ್ ದೂರದವರೆಗೂ ನೀರು ಸವಳಾಗುತ್ತದೆ. ಬೇಸಿಗೆಯಲ್ಲಿ ಇಲ್ಲಿನ ಬಾವಿ, ನದಿ, ಕಾಲುವೆಗಳಲ್ಲಿ ಸಮುದ್ರದ ನೀರು ಸೇರಿಕೊಳ್ಳುತ್ತದೆ. ಇದರಿಂದಾಗಿ ಈ ಭಾಗದ ಜನರಿಗೆ ಕಣ್ಣೆದುರೇ ಜಲರಾಶಿ ಇದ್ದರೂ ಕುಡಿಯಲು ಸಾಧ್ಯವಾಗುವುದಿಲ್ಲ.

ಮಲೆನಾಡಿನ ಸೆರಗಿನಲ್ಲಿರುವ ಯಲ್ಲಾಪುರಕ್ಕೆ ಬೇಡ್ತಿ ಹೊಳೆಯಿಂದ ಕುಡಿಯುವ ನೀರು ಪೂರೈಸುವ ಸುಮಾರು ₹ 23 ಕೋಟಿ ವೆಚ್ಚದ ಕಾಮಗಾರಿಯನ್ನು 10 ವರ್ಷಗಳ ಹಿಂದೆ ಮಾಡಲಾಗಿತ್ತು. ಆದರೆ, ಅದು ವಿಫಲವಾಯಿತು. ಮಳೆಗಾಲದಲ್ಲಿ ಪ್ರವಾಹ ತರುವ ಬೇಡ್ತಿ, ಬೇಸಿಗೆಯಲ್ಲಿ ಸಂಪೂರ್ಣವಾಗಿ ಸೊರಗುತ್ತದೆ. ಮುಂಡಗೋಡ ಹಾಗೂ ಅಂಕೋಲಾ ತಾಲ್ಲೂಕುಗಳ ಹತ್ತಾರು ಗ್ರಾಮಗಳು ಮಾರ್ಚ್ ಕೊನೆಯ ನಂತರ ಹನಿ ನೀರಿಗೂ ಪರದಾಡುವಂತಾಗುತ್ತದೆ.

ಉತ್ತರ ಕನ್ನಡದಲ್ಲಿ ಯಾವುದೇ ನೀರಾವರಿ ಯೋಜನೆಗಳಿಲ್ಲ. ನದಿಗಳಲ್ಲಿ ಹರಿಯುವ ನೀರನ್ನೇ ಪಂಪ್‌ಸೆಟ್ ಮೂಲಕ ಜಮೀನಿಗೆ ಹಾಯಿಸಿ ಕೃಷಿ ಮಾಡುತ್ತ ಸಾವಿರಾರು ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರ ಇದಕ್ಕೇನೂ ಖರ್ಚು ಮಾಡುತ್ತಿಲ್ಲ. ಇಂತಹ ಬೃಹತ್ ಯೋಜನೆ ಜಾರಿಯಾದರೆ ನೀರಿನ ಕೊರತೆ ಉಂಟಾದರೆ ಈ ಭಾಗದ ಜನರೆಲ್ಲಿಗೆ ಹೋಗಬೇಕು ಎಂಬ ಪ್ರಶ್ನೆಗೂ ಸರ್ಕಾರ ಉತ್ತರಿಸಬೇಕಿದೆ.

ಎತ್ತಿನಹೊಳೆ ಯೋಜನೆಯ ವೆಚ್ಚ ಈಗ ₹ 24,982 ಕೋಟಿಗೇರಿದೆ. ನದಿ ಜೋಡಣೆ ಬಗ್ಗೆ2003– 04ರಲ್ಲಿ ಸಿವಿಲ್ ಎಂಜಿನಿಯರ್ ಎನ್.ಶಂಕರಪ್ಪ ತೋರಣಗಲ್ಲು ಅವರು ಸಮೀಕ್ಷೆ ನಡೆಸಿದ ಪ್ರಕಾರ ಬೇಡ್ತಿ– ವರದಾ ನದಿ ಜೋಡಣೆಗೆ ಆಗಿನ ಕಾಲದಲ್ಲೇ ₹ 622 ಕೋಟಿ ಬೇಕು ಎಂದು ಅಂದಾಜಿಸಲಾಗಿತ್ತು. ಈಗ ಈ ಮೊತ್ತ ಎರಡು, ಮೂರು ಪಟ್ಟು ಏರಿಕೆಯಾಗಿರಬಹುದು. ಈ ರೀತಿ ಕೋಟ್ಯಂತರ ರೂ‍ಪಾಯಿ ವ್ಯಯಿಸುವ ಬದಲು ಆ ಮೊತ್ತದಲ್ಲೇ ಪರ್ಯಾಯ ಯೋಜನೆಗಳನ್ನು ರೂಪಿಸಬಹುದು ಎಂಬುದು ಯೋಜನೆ ವಿರೋಧಿಸುತ್ತಿರುವವರ ಅಭಿಮತವಾಗಿದೆ.

‘ಅಧ್ಯಯನ ಮಾಡಿ ಪ್ರತಿಕ್ರಿಯಿಸುವೆ’

‘ಬೇಡ್ತಿ–ವರದಾ ನದಿ ಜೋಡಣೆ ಬಗ್ಗೆ ಡಿ.ಪಿ.ಆರ್ ಮಾಡಲು ಸರ್ಕಾರದ ಆದೇಶಿಸಿದೆ. ಯೋಜನೆಯ ಸಾಧಕ, ಬಾಧಕಗಳ ಬಗ್ಗೆ ನನಗೂ ಪರಿಕಲ್ಪನೆಯಿಲ್ಲ. ಈ ವಿಷಯದ ಬಗ್ಗೆ ಅಧ್ಯಯನ ಮಾಡಿ ನಂತರ ಪ್ರತಿಕ್ರಿಯಿಸುತ್ತೇನೆ. ಅಲ್ಲದೇ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಚರ್ಚಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

‘ಕಾಳಿ, ಬೇಡ್ತಿ, ವರದಾ, ಅಘನಾಶಿನಿ ಹಾಗೂ ಶರಾವತಿ ನದಿಗಳು ಉತ್ತರ ಕನ್ನಡದಲ್ಲಿ ಹರಿಯುತ್ತವೆ. ಈ ನದಿಗಳಿಂದ 400 ಟಿ.ಎಂ.ಸಿ ಅಡಿ ನೀರು ಸಮುದ್ರ ಪಾಲಾಗುತ್ತಿದೆ. ಮತ್ತೊಂದೆಡೆ 70 ಟ್ಯಾಂಕರ್‌ಗಳಲ್ಲಿ ನೀರು ಕೊಡ್ತಿದ್ದೇವೆ. ಇದು ವಿಪರ್ಯಾಸ. ಅವುಗಳ ನೀರಿನ ಸದುಪಯೋಗದ ಕಾಮಗಾರಿಯು ಇಚ್ಛಾಶಕ್ತಿಯ ಕೊರತೆಯಿಂದ ನಮ್ಮಲ್ಲಿ ಆಗಿಲ್ಲ. ಇದಕ್ಕಾಗಿ ಯಾರನ್ನೂ ನಾನು ದೂಷಿಸುವುದಿಲ್ಲ’ ಎಂದಿದ್ದಾರೆ.

‘ಕರಾವಳಿಗೆ ದೊಡ್ಡ ಹೊಡೆತ’

‘ಬೇಡ್ತಿ– ವರದಾ ನದಿಯ ಜೋಡಣೆಯಿಂದ ಜಿಲ್ಲೆಯ ಕರಾವಳಿಯ ಮೇಲೆ ಬಹುದೊಡ್ಡ ಪರಿಣಾಮ ಆಗಲಿದೆ. ಸಮುದ್ರದ ಉಪ್ಪು ನೀರು ನದಿಗೆ ನುಗ್ಗುವುದನ್ನು ತಡೆಯಲು ಸಿಹಿನೀರಿನ ಹರಿವು ಅತ್ಯಗತ್ಯ’ ಎನ್ನುತ್ತಾರೆ ಸಂರಕ್ಷಣಾ ಜೀವವಿಜ್ಞಾನಿ ಡಾ. ಕೇಶವ ಎಚ್. ಕೊರ್ಸೆ.

‘ಸಿಹಿನೀರು ಹರಿಯದಿದ್ದರೆ ಮತ್ಸ್ಯಕ್ಷಾಮ ಮತ್ತಷ್ಟು ಗಂಭೀರ ಸ್ಥಿತಿಗೆ ತಲುಪಲಿದೆ.ಮೀನಿನ ಸಂತಾನಾಭಿವೃದ್ಧಿಗೆ ಸಿಹಿನೀರು ಸಮುದ್ರಕ್ಕೆ ಸೇರುವುದು ಅತ್ಯಗತ್ಯ. ಮೀನಿನ ಕೊರತೆಯಿಂದ ಅದೆಷ್ಟೋ ದೋಣಿಗಳು ಸಮುದ್ರಕ್ಕಿಳಿಯದೇ ತಿಂಗಳಾದವು. ನದಿಯ ಸಹಜ ಹರಿವಿಗೆ ತಡೆ ಉಂಟಾದರೆ, ಮೀನುಗಾರರು ತಮ್ಮ ವೃತ್ತಿಯನ್ನೇ ಮರೆಯಬೇಕಾದೀತು’ ಎಂದು ಅವರು ಎಚ್ಚರಿಕೆ ನೀಡುತ್ತಾರೆ.

‘ಬೇಡ್ತಿ ನದಿಗೆ ಹುಬ್ಬಳ್ಳಿಯ ಕೊಳಚೆ ನೀರು ಹರಿಯುತ್ತದೆ. ಹಾಗಾಗಿ ನದಿಯ ನೀರು ಸೇವನೆಗೆ ಯೋಗ್ಯವಲ್ಲ ಎಂಬ ವೈಜ್ಞಾನಿಕ ವರದಿಗಳಿವೆ. ಹಾಗಾಗಿ ಅದನ್ನು ಕುಡಿಯಲು ಬಳಸುವುದು ಎಷ್ಟು ಸರಿ’ ಎಂದೂ ಪ್ರಶ್ನಿಸುತ್ತಾರೆ.

‘ಬೇಡ್ತಿ– ವರದಾ ಜೋಡಣೆಯು, ನದಿ ಜೋಡಣೆ ಯೋಜನೆಯಲ್ಲೇ ಇತ್ತು. ಈಗ ಡಿ.ಪಿ.ಆರ್ ಮಾಡಲು ಸೂಚಿಸಿರುವುದು ಅದರ ಮುಂದುವರಿದ ಭಾಗವಾಗಿದೆ. ಕುಡಿಯುವ ನೀರಿನ ಕಾಮಗಾರಿ ಎಂದು ಉಲ್ಲೇಖಿಸಿದ ಕಾರಣ ಯಾವುದೇ ಪರಿಸರ ಕಾನೂನುಗಳು ಅಡ್ಡಿಯಾಗುವುದಿಲ್ಲ. ಸರ್ಕಾರಗಳೇ ಈ ರೀತಿ ಕಾನೂನಿನ ಒಳ ನುಸುಳುವ ಕಾರ್ಯ ಮಾಡುತ್ತಿವೆ. ಎತ್ತಿನಹೊಳೆ ಯೋಜನೆ ಇಂಥದ್ದಕ್ಕೆ ಒಂದು ಮಾದರಿಯಾಯಿತು’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಕಾಳಿ ತಟದಲ್ಲೂ ಅನುಮಾನ

ದಾಂಡೇಲಿಯಲ್ಲಿ ಕಾಳಿ ನದಿಯಿಂದ ಅಳ್ನಾವರಕ್ಕೆ ನೀರು ಸಾಗಿಸುವ ಕಾಮಗಾರಿ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಅದನ್ನು ವಿರೋಧಿಸಿ ದಾಂಡೇಲಿ ಸಮಗ್ರ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು 40 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಕುಡಿಯುವ ನೀರಿನ ಯೋಜನೆಗೆ ಭಾರಿ ಗಾತ್ರದ ಪೈಪ್‌ಗಳನ್ನು ಅಳವಡಿಸಿದ್ದು ಯಾಕೆ ಎಂಬುದು ಅವರ ಪ್ರಶ್ನೆಯಾಗಿದೆ. ಸಾರ್ವಜನಿಕ ಅಹವಾಲು ಸಭೆ ನಡೆಸಬೇಕು ಎಂದೂ ಪಟ್ಟುಹಿಡಿದಿದ್ದಾರೆ.

ಈ ಬಗ್ಗೆ ಪ್ರಶ್ನಿಸಿದಾಗ ಸಚಿವ ಶಿವರಾಮ ಹೆಬ್ಬಾರ, ‘ದಾಂಡೇಲಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಮಾಡಿಸುತ್ತೇವೆ. ಈ ಹಿಂದೆ ಅಳ್ನಾವರಕ್ಕೆ ನೀರು ಹರಿಸುವ ಯೋಜನೆ ಜಾರಿ ಸಂದರ್ಭದಲ್ಲಿ ಆಗಿನ ಸಚಿವ ಆರ್.ವಿ. ದೇಶಪಾಂಡೆ ಯಾಕೆ ಬಿಟ್ಟರು ಎಂದು ಗೊತ್ತಿಲ್ಲ. ದಾಂಡೇಲಿಯವರು ಕುಡಿಯುವ ನೀರು ಕೇಳುತ್ತಿರುವ ಬೇಡಿಕೆ ನ್ಯಾಯಯುತವಾಗಿದೆ’ ಎಂದರು.

ನದಿಗಳ ಜೋಡಣೆ ಪ್ರಸ್ತಾವ ಸ್ವಾಗತಾರ್ಹ

ಎತ್ತಿನ ಹೊಳೆ ಮಾದರಿಯಲ್ಲಿ ಬೇಡ್ತಿ ಮತ್ತು ವರದಾ ನದಿ ಜೋಡಣೆಯ ಯೋಜನೆಯನ್ನು ಅನುಷ್ಠಾನಗೊಳಿಸಿದರೆ ಸದಾ ಬರಗಾಲದಿಂದ ತತ್ತರಿಸುತ್ತಿರುವ ಗದಗ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮಂಡಿಸಿರುವ ಪ್ರಸ್ತಾವ ಸ್ವಾಗತಾರ್ಹ.

ನದಿ ಜೋಡಣೆಯಿಂದ ಉತ್ತರ ಕರ್ನಾಟಕ ಮತ್ತು ಬಯಲು ಸೀಮೆಗಳ ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಲಿದೆ. ಇದನ್ನು ಅನವಶ್ಯಕವಾಗಿ ವಿರೋಧಿಸುವ ಬದಲಾಗಿ ವ್ಯರ್ಥವಾಗಿ ಹರಿಯುವ ನೀರನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ.

– ವೈ.ಎನ್.ಗೌಡರ, ಪರಿಸರವಾದಿ, ಮುಂಡರಗಿ

ಉತ್ತರ ಕನ್ನಡದ ಕರಾವಳಿಯಲ್ಲಿ ಉಪ್ಪು ನೀರಿನ ಸಮಸ್ಯೆ ನಿವಾರಣೆಗೆ ಬಜೆಟ್‌ನಲ್ಲಿ ₹ 300 ಕೋಟಿ ನೀಡಲಾಗಿದೆ. ಈ ಉದ್ದೇಶಕ್ಕೆ ಅನುದಾನ ಘೋಷಿಸಿದ್ದು ಇದೇ ಮೊದಲು.

ಶಿವರಾಮ ಹೆಬ್ಬಾರ, ಜಿಲ್ಲಾ ಉಸ್ತುವಾರಿ ಸಚಿವ

ಬೇಡ್ತಿ– ವರದಾ ನದಿಗಳ ಜೋಡಣೆಯ ಯೋಜನೆ ಅವೈಜ್ಞಾನಿಕ ಮತ್ತು ಸುಸ್ಥಿರವಲ್ಲದ್ದು. ಹಾಗಾಗಿ ಯೋಜನೆ ಸಂಬಂಧ ಡಿ.ಪಿ.ಆರ್.ಗೆ ಸಮೀಕ್ಷೆ ಮಾಡುವುದೇ ಬೇಡ

– ಡಾ.ಕೇಶವ ಎಚ್.ಕೊರ್ಸೆ, ಸಂರಕ್ಷಣಾ ಜೀವವಿಜ್ಞಾನಿ

ಕರಾವಳಿಯಲ್ಲಿ ಉಪ್ಪು ನೀರಿನ ಸಮಸ್ಯೆಯಿದೆ. ಅಘನಾಶಿನಿಯ ನೀರನ್ನು ಬೇರೆ ಜಿಲ್ಲೆಗೆ ಸಾಗಿಸಲು ಮುಂದಾದರೆ ಖಂಡಿತ ವಿರೋಧಿಸಲಾಗುವುದು. ಯಾವುದೇ ತ್ಯಾಗಕ್ಕೂ ಸಿದ್ಧವಿದ್ದೇನೆ

– ದಿನಕರ ಶೆಟ್ಟಿ, ಶಾಸಕ

ಬೃಹತ್ ಯೋಜನೆಗಳಿಂದ ಪಶ್ಚಿಮ ಘಟ್ಟದ ಸಮತೋಲನ ಬದಲಾಗಬಹುದು. ಯೋಜನೆಯನ್ನು ಮರು ಪರಿಶೀಲಿಸಲು ಮನವಿ ಮಾಡುತ್ತೇನೆ.

–ಅನಂತ ಹೆಗಡೆ ಅಶೀಸರ, ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.